ವಿಶ್ವಾಸದೇವ ಬ್ರಾಹ್ಮರಲ್ಲಿ ದಾನಧರ್ಮ ಮಾಡ್ವ
ಕೃಷಿವುದ್ದುಮೆಯ ಮಾಡ್ವನು
ಆಶೆಯಿಂದ ಲಾಭಲಾಭ ಪಡೆವನಿವನು ಬ್ರಾಹ್ಮಣ
ವೈಶ್ಯನು ಎಂದು ಎನಿಪನು  ೭೬

ಗುದ್ದಲಿಯ ಮಿಣಿಯ ಹೊತ್ತು ಬಾರಕೋಲ ಹೆಗಲಿಗ್ಹಾಕಿ
ಶುದ್ಧವಾಗಿ ಮಾಡ್ವ ಭೂಮಿಯ
ಇದ್ದು ಸ್ನಾನಸಂಧ್ಯನಿಲ್ಲ ಕೃಷಿಯ ಮಾಡ್ವ ಬ್ರಾಹ್ಮಣ
ಶೂದ್ರನು ಎಂದು ಎನಿಪನು  ೭೭

ಅಡಿಗೆಯಾಗೆ ಮನಿಯೊಳುಣ್ಣ ಹುಡುಕುವನು ಔತನವ
ಬೇಡ್ವ ಒಬ್ಬಗೈವರೆನುತಲಿ
ಒಡಲಿಗೆಯು ಸ್ನಾನಸಂಧ್ಯಾನಿಲ್ಲದಲೆ ಇರವ
ಬಿಡಾಲ ಬ್ರಾಹ್ಮಣನು ಎನಿಪನು        ೭೮

ಅರಿಯೆ ಎಡಗೈಯ್ಯ ಬಲಗೈಯ್ಯ ಹಬ್ಬಕೆಯು ಧೋತ್ರ
ಒರಸಿ ಉಡುವ ನೀರಿಗಿಂದಲೀ
ಪುರೋಹಿತನು ನಾನುಯಂಬ ಸಂಧ್ಯಾನಿಲ್ಲ ಬ್ರಾಹ್ಮಣ
ಕುರುಬನು ಎಂದು ಎನಿಪನು೭೯

ಹಾದಿಬಟ್ಟಿಯನ್ನೆ ಸುಲಿವೆ ಬ್ರಹ್ಮೆತಿಗಳನೆ ಮಾಡ್ವ
ಓದುಸ್ನಾನಸಂಧ್ಯಾನೊರ್ಜವು
ಕ್ರೋಧದಲ್ಲಿ ಆವಗಿಹ ಇವನು ಈಗ ಬ್ರಾಹ್ಮಣ
ವ್ಯಾಧನು ಎಂದು ಎನಿಪನು  ೮೦

ವಾಸವಾಗಿ ಜಾರಿರಲ್ಲಿ ಶುಭ್ರವಸ್ತ್ರವನ್ನೆ ಉಟ್ಟು
ವೇಷ ಹಾಕಿ ಹಲ್ಲ ಕಿಸುವುತ
ಕಾಸುಗಳ ಸವುರಿಸೂತ ಇಂತು ಇರಲು ಬ್ರಾಹ್ಮಣ
ವೇಶಿಯು ಎಂದುಯನಿಪನು೮೧

ಹಟದಿ ಊರಿಗೆಯು ಗುತ್ತಿಗೆಯು ಕಟ್ಟಿ ಹಾಳಮಾಡಿ
ವಟಕೆ ನರರ ತೂಗ ಕಟ್ಟಸಿ
ಘಟಿತರದಿ ತಂದೆತಾಯಿ ಬಡಿಪನಿವನು ಬ್ರಾಹ್ಮಣ
ಕಟುಕನು ಎಂದುಯನಿಪನು  ೮೨

ರಂಡೆ ಈಗ ರಜಶ್ವಲಿಯು ರಜಕಿತಂದೆಯಿಟ್ಟಾಕೆಯ
ಚಾಂಡಲೆಯ ತೊತ್ತು ತಂಗಿಯಾ
ಭಂಡನೆನಿಸಿ ಅವರ ಕೂಡಿ ನರಕ ಬೀಳ್ವ ಬ್ರಾಹ್ಮಣ
ಚಾಂಡಲನು ಎಂದೆನಿಪನು    ೮೩

ಈ ತೆರದ ದಶವಿಧದ ಬ್ರಾಹ್ಮರಿಹರು ಬ್ರಾಹ್ಮಜಾತಿ
ಲಾತ ಮಾಡುತಿಹನಸಜಾತವ
ಮಾತಕೇಳಿ ನಾನಾ ಜಾತಿ ಇಹುದು ಬ್ರಹಮಜಾತಿಯಲಿ
ಪೂತನಾಗಿಯಿಹನು ಗುರುವರ          ೮೪

ಕಂತುಹರನ ಆದ ಯೋಗಿ ಬ್ರಹ್ಮವಾಗಿ ಚರಿಸೆ ಜ್ಞಾನ
ವಂತರವರು ನಿಂದ್ಯ ಮಾಡ್ವರೆ
ಎಂತು ನಡೆದರೆಯು ಜ್ಞಾನಿ ಅಂತು ಬ್ರಹ್ಮವೇಯಿಹನು
ಎಂತೆನುತ ಸ್ತೋತ್ರ ಮಾಡ್ವರು         ೮೫

ಚಪ್ಪಲಿಯ ಬೆದಕುವದು ನಾಯಿಗೆಯು ವ್ಯಾಪಾರ
ತಿಪ್ಪೆ ಹಂಡೆಹೇಲು ಹಂದಿಯೂ
ಒಪ್ಪಿತದಿ ಹುಡಕಿದಂತೆ ಮಹಾತ್ಮರುಗಳ ನಡೆಯಲಿ
ತಪ್ಪು ಹುಡುಕುತಿಹರು ದುಷ್ಟರು     ೮೬

ನರಿಯು ಏಡಿ ಗುದ್ದುಗಳ ಬೆದಕಿದಂತೆ ಕತ್ತೆ ಗುರಕ
ಚರಿಸಿ ಕಾಡೊಳಗೆ ಎಲುವನು
ಅರಸಿದಂತೆ ಬ್ರಷ್ಟರಿಗಳು ಸತ್ಪುರಷರ ನಡೆಯಲಿ
ಚರಿಯ ತಪ್ಪು ಹುಡುಕುತಿಹರು        ೮೭

ಚೇಳು ಕೊಂಡಿಲಿಹುದು ವಿಷವು ಹೇಳೆ ಸರ್ಪಕಿಹುದುದಂತ
ಕಿಳುಮಕ್ಷುಕೆಯು ಶಿರದಲಿ
ಖೂಳ ದುರ್ಜನರಾದವರಿಗೆ ಸರ್ವಾಗದಲ್ಲಿ ವಿಷವು
ಹೇಳೆ ತುಂಬಿಯಿರತಲಿಹುದು            ೮೮

ಸರಿಯು ನಾವು ಅವರು ಎಂದು ಬರುತದವರಿಗೆಯು ಶಾಸ್ತ್ರ
ಬರುತಲಿಹುದು ನಮಗೆ ಶಾಸ್ತ್ರವು
ಪರಮಯೋಗಿ ನೆಲಿಯರಿಯದೆ ವಾದಿಸಲು ಯಮನವರು
ಅರಿಯುವರರೆಗಲ್ಲೊಳರವರನು       ೮೯

ನರಿಯು ಎತ್ತ ಸಿಂಹ ಎತ್ತ ಕಾಕನೆತ್ತ ಹಂಸನೆತ್ತ
ಮರಕೆ ಹಾರ್ವ ಕೋತಿಯತ್ತಲು
ಉರುವ ಹನುಮಶೂರಯತ್ತ ಆಪರಿಯ ಯೋಗಿಗಳ
ಸರಿಯುಗಟ್ಟಿ ಕೆಟ್ಟು ಹೋಹರು       ೯೦

ಮತ್ತೆ ಯೋಗಿ ನಾವಹೆವು ಎಂದು ನಾನಾ ಪುಸ್ತಕಗಳ
ವಿಸ್ತರದಿ ಓದಿ ಯೋಗಿನೆ
ಎತ್ತಣದ ಯೋಗಿಯಹುದು ಉತ್ತಮಶ್ವಕುಣಿಯೆ ಕಂಡು
ಕತ್ತೆ ಕುಣಿಯೆ ಅಶ್ವವಾಗೋದೇ        ೯೧

ಹುಲಿಯಹೆನು ಎಂದು ನರಿಯು ಬಲುಹಿನಿಂದ ಸುಟ್ಟುಕೊಳ್ಳೆ
ಹುಲಿಯುಯಂತು ಕೀವು ಹುಳುಗಳು
ಹಲವು ಬಿದ್ದು ಸಾವಣವು ಅಲ್ಲದಲೆ ಯೋಗಿಯೆನಲು
ಕೊಳೆತು ಸಾಯ್ವ ನಿಶ್ಚಯದಲೀ       ೯೨

ಓದಿಹೆನು ಎಂಬ ಗರ್ವ ತಲೆಗೇರಿ ಮದವು ಹೆಚ್ಚಿ
ಸಾಧುಗಳು ಬರಲು ಏಳ್ದಿಹ
ವೇದತೀತರೀಗ ಬರಲು ಹಾದಿಯೊಳು ಕೋಣಕುರಿಯು
ಹಾದಿ ಬಿಡದಲ್ಹೇಳ್ದಲಿಹವಾತ್ಯೆರ    ೯೩

ಕಾಗಿ ಶಿವಾಲಯದ ಶಿಖರ ಕೊನಿಯನೀಗ ಏರಿಕೊಡ್ರೆ
ಕೋಗಿಲೆಗೆ ಸರಿಯು ಆಹುದೇ
ಈಗಳಾಪರಿಯು ಉಚ್ಚಸ್ಥಾನದಲ್ಲಿ ನೀಚನಿರಲು
ಯೋಗಿಗಳಿಗೆ ಸರಿಯು ಬಾಹನೆ          ೯೪

ಶಿಂಗಳೀಕ ಕೊನಿಯ ಮರವನೇರಿ ಕೂಡ್ರೆ ಸಿಂಹನೊಳು
ಸಂಗರಕ್ಕೆ ಸರಿಯು ಬಾಹದೇ
ಕೊಂಗೆ ಮನುಜರಾ ಪರಿಯು ಜಗುಲಿಯೇರಿ ಇಳಿಯದಿರಲು
ಸಂಗಹರಗೆ ಸಮನು ಆಹರೇ೯೫

ಯೋಗಿ ಮಹಿಮೆ ತಿಳಿದೆನೆನಲು ಭೋಗಪತಿಗೆ ವಾಸವನಿಗೆ
ವಾಗೀಶಗೆ ನಾಗಶಯನಗೆ
ಸಾಗರದ ಈ ಪರಿಯ ಅನುಭವದಲ್ಲಿಹರು ಎನಲು
ಮೂಗರಾಗಿಹವು ವೇದವು   ೯೬

ಆತನಿದ್ದುದೇ ಕಾಶಿ ಆತನಿದ್ದುದೇ ಗಯವು
ಆತನಿಹುದೇ ಕುರುಕ್ಷೇತ್ರವು
ಆತನಿದ್ದುದೇ ಮಧುರೇ ಆತನಿದ್ದುದೇ ಪ್ರಯಾಗ
ಆತನಿಹ ದೇಶ ಮಂಗಳ       ೯೭

ರಾಜಪುರದ ಬೀದಿಯಲ್ಲಿ ಅಡವಿಗುಡ್ಡಗಳನೆ ಏರಿ
ಬಾಜಗವಿಯನ್ನೆ ಹೊಕ್ಕೆಯು
ಸೋಜಿಗದ ಸಮಾಧಿಯಲಿ ಚಿದಾನಂದ ಅವಧೂತ
ರಾಜಯೋಗಿ ಬರುತಲಿರ್ದನು           ೯೮

ಪಾವನದ ತೋಟವಿಹ ಕಬ್ಬು ನೆಲ್ಲು ಬೆಳದುಯಿಹ
ಆವಸ್ಥಳದಿ ತೆಂಗುಬಾಳೆಯು
ಓವಿ ಹೇಳ್ವೆ ಅರುವತ್ತುನಾಲ್ಕು ಲಕ್ಷ ವರಹ ರಾಜ್ಯ
ದೇವಗಡಕೆಯು ಬಂದನು    ೯೯

ಬಂದು ಕುಳಿತ ಖಾಸಭಾಗ ಸದರಕಟ್ಟಿಯ ಮ್ಯಾಲೆ
ಛಂದವಾದ ಪುಷ್ಟಮಧ್ಯದಿ
ಧಿಂಧಿಮಿಧಿಮಿಯುಯೆಂಬ ಪ್ರಣವನಾದ ಪರವಶದಿ
ಸುಂದರಾತ್ಮ ತೂಗ್ಯಾಡುತ  ೧೦೦

ಇಳೆಯೊಳಗೆ ಹೆಸರು ಆದ ದೇವಗಡಕೆ ಅರಸನೀತ
ಬಲಯುತನು ಭಕ್ತ ಬಿಲ್ಲನು
ತಿಳವಿ ಕುಳ್ಳವನು ಹಠದಯೋಗದಲಿ ಬಲವಂತ
ಕುಲದಿ ಗೊಂಡ ಜಾತಿಲಿಹನು            ೧೦೧

ಆರ ಕಂಡರೆಯು ಭಕ್ತಿ ಆರ ಕೂಡೆ ನಯನುಡಿಯು
ಆರ ಕಾಣೆ ದಯದ ದೃಷ್ಟಿಯು
ಆರರೊಳು ಸಂತೋಷವು ಆರರಲ್ಲಿ ಭೂತದಯವು
ತೋರಿಹರು ಸತಿಪತಿಗಳು    ೧೦೨

ನಿಂದ್ಯಗಳ ಕೇಳರವರು ತಾವು ನಿಂದ್ಯ ಮಾಡರೀಗ
ಕುಂದು ಏನು ಬರಲು ನೊಯ್ವರು
ಮಂದಿಗಳು ನಡತಿ ಬ್ಯಾರೆ ತಮ್ಮ ನಡತಿ ಬ್ಯಾರೆಯಾಗಿ
ಅಂದು ದಂಪತಿಗಳಿಹರು      ೧೦೩

ಯೋಗಿಗಳ ಕರೆದುವೈದು ಸಂಭ್ರಮದಿ ಪೂಜಿಸಿಯೆ
ಸಾಗರಾನಂದದಿಂದಲಿ
ಆಗ ಕೇಳುವರು ತತ್ವಜ್ಞಾನ ದಂಪತಿಗಳು
ತೂಗುತಲಿ ಸುಖದ ಭೋಧೆಲೀ         ೧೦೪

ಹಿರಿದು ಅನ್ನಛತ್ರವು ಕೋನೇರಿಕೊಂಡವು ಮತ್ತೆ
ಕೆರಿಯು ಭಾವಿಗುಡಿಗಳೆಂಬುವ
ಅರವಟಿಗೆಯು ಆವದೇರುಗಳ ಪ್ರತಿಷ್ಟೆಯಿಂದ
ಇರುತಲಿಹರು ದಂಪತಿಗಳು  ೧೦೫

ವ್ರತವನೀಗ ಒಂದು ಬಿಡರು ಮತದ ಅಂತೆ ನಡೆವುತಿಹರು
ಅತಿಥಿ ಬರಲು ಸದ್ಭಕ್ತಿಲೀ
ಸತತ ಮಂಗಳೆಮಗೆಯೆಂದು ಸಂತೋಷವಬಡುತಲಿಹರು
ಮಿತಿಯು ಇಲ್ಲ ಅವರ ಭಕ್ತಿಗೆ          ೧೦೬

ಥಣ್ಣಗಳುವಾರು ರಾಜ್ಯ ಥಣ್ಣಗಿಹರು ಪ್ರಜೆಗಳೆಲ್ಲ
ಮನ್ನಿಪರು ಮಂದಿಮಕ್ಕಳ
ಅನ್ಯ ಚಿಂತಗಳು ಇಲ್ಲ ಆತ್ಮ ಚಿಂತಿಯಲ್ಲದಲೆ
ಚನ್ನಾಗಿಹರು ಈ ಪರಿಯಲೀ           ೧೦೭

ಹಠದಯೋಗ ಸಾಧನದಲಿ ಪಟುಪರಾಕ್ರಮಿಗಳವರು
ಕುಟಿಲವಳಿದ ದಂಪತಿಗಳು
ಚಟುವಳವಾದ ರಾಜಯೋಗ ಪಥದನುಗ್ರಹವು ಸಂ
ಘಟಣೆಯೆಂದಿಗಾಹದೆಂಬರು            ೧೦೮

ಏದಲಾಪುರದಲಿರಲು ಹಿಂದಕೆಯು ಸದ್ಗುರುವ
ಆದರಿಸಿ ಪೂಜೆ ಮಾಡ್ದದಾ
ಹಾದಿಕಾರರೀಗ ಹೇಳೆ ಭಕ್ತ ಬಿಲ್ಲನಾ ಸತಿಯ
ಳಾದ ಭವಾನೀಯು ಕೇಳ್ದಳು           ೧೦೯

ಬಿನ್ನಹವ ಮಾಡಿದಳು ಯೋಗಿಯನ್ನೆ ಕರೆದು ತಂದು
ನನ್ನಗೆಯು ಅವರ ಚರಣವ
ಚನ್ನಾಗಿಯೇ ದರುಶನವ ಮಾಡಿಸೆಂದು ಸತಿ ಭವಾನಿ
ಮಾನ್ಯ ಮಾಡಿಸಿಬ್ಬಂದಿಯಾ           ೧೧೦

ಚರರ ಕಾವಲಿಟ್ಟಿದ್ದ ಭಕ್ತ ಬಿಲ್ಲ ಹಾದಿಗೆಯು
ಹೊರಗು ಆಯ್ತು ಮಾರ್ಗ ಬ್ಯಾರೆಯು
ಗುರುವರನು ದಾಟಿ ಪೋದ ವಾರಣಾಶಿಗೆಂದೆನಲು
ಮರುಗುರ್ತಿರಾಗ ಸತಿಪತಿ    ೧೧೧

ತಮ್ಮ ತೋಟದವನು ಹಿಂದೆ ಏದಲಾಪುರದೊಳು
ಒಮ್ಮೆಯು ಕಂಡಿದ್ದ ಗುರುವರ
ಗಮ್ಮನೆಯು ಬಂದು ಅವನು ಯಮ್ಮಕಾಸಭಾಗದೊಳು
ಅಮ್ಮ ಬಂದಿಹೆನೆಂದು ಹೇಳ್ದನು      ೧೧೨

ಉಬ್ಬಿದಳು ಆ ಭವಾನಿ ಭಕ್ತ ಬಿಲ್ಲಾಳಗಾಗ
ಹಬ್ಬವಾಯ್ತು ಎಮಗೆಯಿಂದಿಲೀ
ಒಬ್ಬನೆಯು ಬಂದನಂತೆ ದೇವಸದ್ಗುರುರಾಯ
ಎಬ್ಬಿಸುವ ಪೌಜನೆಂದಳು    ೧೧೩

ಭೇರಿಗಳು ಬಡಿದವಾಗ ಕರ್ನೆಕಹಳೆ ಕೂಗಿದವು
ತೋರಣವು ಪುರಕೆ ಕಟ್ಟಿತು
ವಾರಣವು ಕುದುರೆ ಮಂದಿಗೂಡಿ ಪಾಲಕೇರದಲೆ
ಭೂರಮಣನೀಗ ಬಂದನು   ೧೧೪

ಕುಳಿತುಯಿದ್ದ ಚಿದಾನಂದ ಅವಧೂತ ರಾಜಯೋಗಿ
ಥಳಿಪ ಬೆಳದಿಂಗಳೊಳಗೆಯು
ಥಳಥಳಥಳವು ಆಗಿ ಉನ್ಮನೆಯವಸ್ಥೈಯಿರುವ
ಬಲು ಪರಮನನ್ನೆ ಕಂಡನು  ೧೧೫

ಭೇರಿ ಕರ್ನೆಕಹಳೆಗಳು ಕೂಗುತಿರೆ ಎಡಬಲದಿ
ಮೂರು ಸುತ್ತು ಪ್ರದಕ್ಷಣೆಯನು
ಭೂರಮಣ ಮಾಡಲಿಕ್ಕೆ ರಭಸಕೆಯು ಸದ್ಗುರು
ವೀರಕಣ್ಣ ತೆರೆದು ನೋಡ್ದನು         ೧೧೬

ಬಂದು ಸಾಷ್ಟಾಂಗವಿಕ್ಕಿ ಜಯಜಯಜಯತುಯೆನುತ
ನಿಂದು ಈಗ ಕೈಯ ಮುಗಿದೆಯು
ಇಂದು ದರುಶನವ ಕೊಟ್ಟಿ ಬಹಳಪೇಕ್ಷಿಸಿದ್ದೆ ನಾನು
ಎಂದೆನುತ ಮತ್ತೆ ಎರಗಿದಾ  ೧೧೭

ಮನಿಗೆ ದಯಮಾಡಬೇಕು ಚರಣಧೂಳಿ ಹಾಕಬೇಕು
ಅನುದಿನವು ನಿಮ್ಮ ಸ್ಮರಣೆಲಿ
ಮನೆಯು ಆಕೆಯಿರುತಿಹಳು ಎಂದು ಪಾದ ಹಿಡಿಯಲಿಕ್ಕೆ
ಚಿನುಮಯನು ಒಳಿತುಯೆಂದನು       ೧೧೮

ಪಾಲಕಿಯ ಮುಂದಿಟ್ಟು ಕೂಡ್ರಿಸಿಯೆ ಕೊಂಡಾಗ
ಬಾಳಸಂಭ್ರಮದಲಿಂದಲಿ
ಆಲಯಕ್ಕೆ ಕರೆದು ತಂದು ನಿವಾಳಿಯನ್ನು ಮಾಡ್ಡರಾಗ
ನೀಲತೋಯ ಮಧ್ಯಸ್ಥಗೆ   ೧೧೯

ಮೇದಿನಿಪತಿಯ ಪಟ್ಟ ಪತ್ನಿ ಭವಾನಿಯು ಆಗ
ಪಾದಕೆ ಅಡ್ಡಬಿದ್ದು ಅಪ್ಪಿಯೆ
ಭೇದವಿಲ್ಲದಲೆ ಆಲಯ ಬಲಾಯವನೆ ಕೊಂಡು
ಆದಳಾನಂದವಾಗಳು         ೧೨೦

ಪಟ್ಟೆ ಮಂಚದಲ್ಲಿ ಸದ್ಗುರುವರನ ಕೂಡ್ರಿಸಿಯೆ
ಶಿಷ್ಟವೇದೋಕ್ತದಿಂದಲಿ
ಸ್ಪಷ್ಟವಾಗಿ ಪಾದಗಳನ್ನು ದಂಪತಿಗಳು ತೊಳೆದರಾಗ
ದಟ್ಟವಾದ ವಾದ್ಯದಿಂದಲಿ  ೧೨೧

ತೀರ್ಥವನ್ನೆ ಕೊಂಡರಾಗ ಪಂಡಿತರು ಸರ್ವಪ್ರಜೆಯು
ಪಾತ್ರವಾಡುತಿತ್ತು ಬಹಳದಿ
ಚಿತ್ರಚಿತ್ರದ ಸಂಗೀತದವರು ವೀಣೆಯವರು
ಮತ್ತೆ ಹಾಡುತಿತ್ತು ಬಹುವಿಧ          ೧೨೨

ಮಂಗಳಾರತಿಯ ತುಂಬಿ ತಂದಳರಸಿನಂಗನೆಯು
ಸಂಗಹರಣೆ ಶೋಭಾನವ
ದಿಂಗುಹಚ್ಚಿ ಮಾಡಿ  ಗೋಕ್ಷೀರವನ್ನು ಕುಡಿಯೆ ಕೊಟ್ಟು
ಅಂಗನೆಯು ಆಡ್ದಬಿದ್ದಳು೧೨೩

ಮಂತ್ರಪುಷ್ಪವೇರಿಸಿಯೆ ದಂಪತಿಗಳು ಚರಣಕೆಯು ಗೃ
ಹಾಂತರಕ್ಕೆ ತೆರಳಿಯನುತಲಿ
ಕಂತುಹರನು ಆದನಾ ನಿರಂತರದಿ ಸೇವೆ ಮಾಡು
ತಿಂತಿದ್ದರಾಗ ನಿತ್ಯದಿ         ೧೨೪

ಒಂದು ದಿವಸ ಭಕ್ತ ಬಿಲ್ಲ ಬಿನ್ನಹವ ಮಾಡ್ಡನಾಗ
ಮಂದಿರೆಮ್ಮ ಸಂಪ್ರದಾಯದ
ಬಂದ ನಡೆಯು ಒಂದಿಹುದು ನಿಮ್ಮ ಚರಣ ನಂಬಿದರಿಗೆ
ಎಂದಿಗಿಲ್ಲ ಸಂಕಲ್ಪವು       ೧೨೫

ಅರಸುತನವ ಮಾಡುತಿಹ ಪಟ್ಟದರಸಿಯು ಉಗಾದಿ
ಬರಲು ಆ ಪಾಡ್ಯ ದಿನದಲಿ
ಎರಕೊಳ್ಳುವ ವಿವರ ಹೇಳ್ವೆ ನರರ ಶಿರವನೈದೆ ಮೆಟ್ಟಿ
ಸುರಿವ ರಕ್ತ ಚರ್ಮವುಟ್ಟೆಯೂ         ೧೨೬

ರಕ್ತ ತಲಿಗೆ ಹೂಸಿಕೊಂಡು ಕರುಳದಂಡೆಯನ್ನೆ ಮುಡಿದು
ರಕ್ತ ತಿಲಕ ಹಣಿಗೆ ಹಚ್ಚಿಯೇ
ಯುಕ್ತವಾಗಿ ಆರತಿಯ ಮಾಡಿಸಿಯೆಕೊಂಡ ಮ್ಯಾಲೆ
ರಕ್ತದಿಂದ ಎರೆದುಕೊಳುವದು           ೧೨೭

ಆಮ್ಯಾಲೆಯು ಬಿಸಿಯ ನೀರ ಎರೆದುಕೊಂಡು ಶುಭ್ರವಸ್ತ್ರ
ತಾ ಮತ್ತೆ ಉಡುವುದೀಗಲು
ಭೂಮಿಪಾಲರ ನಡತಿಯಂದು ಪ್ರತಿವರುಷ ಈ ಪರಿಯಲಿ
ಭಾಮಿನಿಯು ಮಾಡುತಿಹಳು           ೧೨೮

ಎಮ್ಮ ಮನಿಯ ಸಂಪ್ರದಾಯ ಎಂದು ಈಕೆ ಮಾಡುತಿಹಳು
ಬ್ರಹ್ಮರಾಕ್ಷಸರ ನಡೆಯಿದು
ನಮ್ಮಗೆಯು ಸರಿಯ ಹೋಗದೆಂದು ಮನಸಿಗೆಯು ಆಜ್ಞೆ
ನಮ್ಮಾಕೆಗೆ ಮಾಡ್ವದೆಂದನು            ೧೨೯

ಚಿನ್ಮಯನೆ ಕೇಳು ತಮ್ಮ ಮನಿಯ ಸಂಪ್ರದಾಯವನ್ನು
ಇನ್ನು ತಪ್ಪಿಸಲಿಬಾರದು
ಎನ್ನುತಿಹುದು ಲೋಕ ಅದು ಕಾರಣದಲ್ಲಿ ನಾನು
ಇನ್ನು ಮಾಡ್ವೆ ತಪ್ಪದೆಂದಳು          ೧೩೦

ಎಂದಡೆಯು ಗುರುವನು ಅಂದನಾಗ ಭವಾನಿಗೆ
ಇಂದು ತೋರ್ವ ತೋರ್ಕೆಯೋಮೃಕ್ಷಿ
ಎಂದು ವೇದಾಂತ ನುಡಿಯೆ ಮನಿಯಲ್ಲಿಹ ಸಂಪ್ರದಾಯ
ಎಂದು ಮೃಷಿಯು ಕೇಳೆಂದನು          ೧೩೧

ಅಸುರಕೃತ್ಯ ತಾನು ಇದು ಎಸಗುವದು ಬಹುದೋಷ
ಕಸಮಳಾದ ಜೀವರನಡೆ
ಮೃಷಿಯು ತಮ್ಮ ತಿಳಿದು ತಾವಾದ ಆತ್ಮ ಜ್ಞಾನಿಗಳಿಗೆ
ಹುಸಿಯು ಈ ನಡತಿಯೆಂದನು          ೧೩೨

ಜೀವಹಿಂಸೆ ಮಾಡುವದು ಜೀವರಾದರಿಗೆ ಸರಿಯು
ಕೇವಲಾತ್ಮ ಸರ್ವವೆನ್ನುತ
ಭಾವಿಕರಿಗೆ ಇಂತು ಕರ್ಮಸಲ್ಲದು ಇರುವನೊಬ್ಬ
ಆವನನ್ನು ಕೊಲ್ವದೆಂದನು  ೧೩೩

ನೀಲತೋಯ ಮಧ್ಯಸ್ಥ ಕಾಲುಕೈಯ ನಾಮತಾಳಿ
ಲೀಲೆಗಾಗಿ ಬಂದಿರುವನ
ಕಾಲಮಾಡಿ ತಲಿಯಮೆಟ್ಟಿ ರಕ್ತದಿಂದ ಎರಕೊಳುವದು
ಕೇಳ್ವದಲ್ಲ ಪಾತಕೆಂದನು   ೧೩೪

ದೇವ ಕೇಳು ಪಾತಕೆಂದು ಸಂಪ್ರದಾಯ ಹರಿಸುವಿರಿ
ಸಾವು ಮಾಡಿದ್ದುದಲ್ಲವೇ
ದೇವತೆಯರ ಮುಂದೆ ನರಯಾಗ ಹರಿಶ್ಚಂದ್ರ ಮಾಡ್ದ
ಕೇವಲಾತ ಅಜ್ಞಾನಿಯೇ       ೧೩೫

ರಾಮಚಂದ್ರ ಪಾಂಡುವರು ಜನಕ ಪೃಥು ಶಿಬಿಯು ಕೇತು
ತಾ ಮತ್ತೆ ಮರುತ್ತನೆಂಬನು
ಈ ಮಹಾರಾಜರೆಲ್ಲ ಆತ್ಮ ಜ್ಞಾನವರಿಯದವರೆ
ಸ್ವಾಮಿ ಬುದ್ಧಿಗೊಡಿರಿಯೆಂದಳು     ೧೩೬

ಭೂಸುರರು ವಾಜಪೇಯ ಮಾಡುತಿಹರು ಜನಮೇಜಯನು
ಆಸು ಸರ್ಪವೆಲ್ಲ ಕೊಂದನು
ಈಸು ಮಂದಿ ತಮ್ಮ ಕುಲಾಚಾರದಂತೆ ನಡಿದರೆನಗೆ
ದೋಷ ಬಂತೆ ಹೇಳಿರೆಂದಳು            ೧೩೭

ನೀನೆ ಮಾಡಿಯಿಹೆಯು ಸರ್ವಜಾತಿಗಳ ನಡತಿಯನು
ನಾನೆ ಇಬ್ಬಳೀಗ ನಡೆವೆನೆ
ಮಾನವರೆಲ್ಲ ಜಾತಿಧರ್ಮದಂತೆ ನಡಿಯೆ ಗುರುವೆ
ನೀನೆಯೆನ್ನ ಬೆದರಿಪೆಂದಳು  ೧೩೮

ನಕ್ಕನಾಗ ಮುಗುಳುನಗೆಯು ಧರ್ಮಶಾಸ್ತ್ರ ನಡೆಯು ತಾನು
ತಕ್ಕದದು ಪ್ರಪಂಚಕೆ
ಮುಕ್ಕುವರು ಸ್ವರ್ಗನರಕ ಇಂತು ನಡೆದರೀಗೆ ಜ್ಞಾನ
ಮಿಕ್ಕಿಹದು ಬೇರೆಯೆಂದನು೧೩೯

ಜ್ಞಾನಮಾರ್ಗ ಇದುವೆ ಅಲ್ಲ ಹುಟ್ಟಿಬರುವ ಕಾಮ್ಯಕರ್ಮ
ನೀನು ಹುಟ್ಟಿಬರುವೆಯಾದರೆ
ಏನು ಕಾರಣವು ಬಿಡುವೆ ಸಂಪ್ರದಾಯವೀಗ ನೀನು
ನಾನು ಜನ್ಮ ತಿರುಗುಯೆಂದನು         ೧೪೦

ಎನ್ನಲಿಕೆ ಬುದ್ಧಿ ಗುರುವೆ ಬಿಟ್ಟೆ ಪೂರ್ವಪದ್ಧತಿಯನು
ಇನ್ನೊಂದು ಬಿನ್ನಹವದೆ ಎನೆ
ಮುನ್ನ ಹೇಳು ಆವುದೆಂದು ಚಿದಾನಂದ ಅವಧೂತ
ನಿನ್ನು ಕೇಳ್ದ ಆ ಭವಾನಿಯಾ           ೧೪೧

ಗುರುವೆ ನೀವುಬಂದು ಗುರುವಾಗಿ ಹಟದಯೋಗ ಮಾರ್ಗ
ವರಿಯೆ ಇಬ್ಬರಿಗೆ ಸತಿಪತಿ
ಅರಸುಯೋಗದೊಳು ರಾಜಯೋಗವೆಂದು ಶೃತಿಗಳೀಗ
ಸೊರಹುವವು  ಬ್ರಹ್ಮವೆನ್ನುತಾ        ೧೪೨

ಅದುವೆ ವಿಹಂಗಮಾರ್ಗ ಅದಕೆ ರಾಜವೆನುತಿಹರು
ಇದನು ದಂಪತಿಗಳಿಗೆಯು
ಮುದದಿ ಹೇಳಬೇಕುಯೆನಲು ಭಕ್ತ ಬಿಲ್ಲನಹುದು ಒಡಿಯ
ಇದುವೆ ಸಿದ್ಧಬಯಕೆಯೆಂದನು         ೧೪೩

ಒಡಿಯ ನನಗೆ ಹೇಳ್ವೆ ಬುದ್ಧಿ ಆಕಿಗೆಯು ಹೆಳಬೇಕು
ಕಡು ಭಕುತಳಿಗ ನಿಮಗೆಯು
ಹುಡುಕುತಿದ್ದೆ ವಾವು ನಿಮ್ಮ ದರುಶನಾದಿತುಯೆನುತ
ಹಿಡಿದರೀಗ ಎರಡು ಪಾದವ೧೪೪

ಕೇಳು ಭವಾನಿಯೆ ನನ್ನ ದೇಹವುಯೆನುತಲಿದ್ದಿ
ಹೇಳೆ ತಂದಿತಾಯಿಲಾಯಿತು
ಬಾಳ ಹೆಸರಿನೊಳಗೆ ಒಂದು ಹೆಸರನಿಟ್ಟರು ರೂಪಿಗೆಯು
ಭೋಲೋಕ ಈಗ ಕರೆವುದು೧೪೫

ಒಳಗೆ ಇರುವವನುದಾರು ತಂದೆತಾಯಿ ಬದುಕು ಅಲ್ಲದೆ
ಎಲವೊ ಎನಲು ಓ ಎಂಬನು
ಒಳಗೆ ಇಹನವನು ಭೂತಪೇತು ಎಂದು ಒಬ್ಬರು
ತಿಳಿಯರು ತಮ್ಮ ಒಳಗೆಯು            ೧೪೬

ನನ್ನ ಮನೆಯು ನನ್ನ ಬದುಕು ಎನ್ನುತಿಹನವನು ಆರೊ
ಎನ್ನುವವನು ನೀನೆ ನಿಶ್ಚಯಾ
ಅನ್ನದೊಳು ತುಪ್ಪ ಹಾಕಿ ತೊವೆಯ ಕಲಸಿ ಸಾರು ಸುರುವು
ತಿನ್ನುವುಂಬವನ ತಿಳಿಯರು  ೧೪೭

ಹೋಳಿಗೆಯು ಮ್ರಿದು ತುಪ್ಪದೊಳು ಅದ್ದೊನಲ್ಲದಲೆ
ಹಳೆಹುಳಿಯೊಳೀಗ ಅದ್ದನು
ಹಾಲು ಪರಮನ್ನದೊಳು ಹಾಕಿಕೊಂಬನಲ್ಲದಲೆ
ಕಾಳಮಜ್ಜಿಗೆಯ ಕಲಸನು   ೧೪೮

ನಾನು ಎಂದು ದೇಹದೊಳಗೆ ಹೊಕ್ಕೊಂಡು ಬದುಕು ಮಾಡು
ತೇನೇನು ಎಚ್ಚರಿಲ್ಲದೆ
ಮಾನುನಿಯು ಎನ್ನ ಸುತನುಯೆಂದು ಅಭಿಮಾನವಿಹನ
ನೀನು ತಿಳಿಯು ನಿನ್ನ ಒಳಗೆಯು        ೧೪೯

ಕಣ್ಣಿನಿಂದ ನೋಡುತಲಿ ಕಿವಿಯಲಿಂದ ಕೇಳುತಲಿ
ಉಣ್ಣುತಲಿ ಬಾಯಿಯಿಂದಲಿ
ಚನ್ನಾಗಿಯೆ ಮನದ ಮುಖದಿ ವ್ಯಾಪಾರವ ಮಾಡುವನು
ಇನ್ನು ನೀನೆ ಅವನು ನಿಶ್ಚಯಾ         ೧೫೦