ಉಸುರನೀಗ ಆಲಿಸಲು ಉಸುರು ನಾಲ್ಕು ಘಳಿಗೆ ಮ್ಯಾಲೆ
ಉಸುರ ಆಡಿ ಮತ್ತೆ ಅಡಗಲೂ
ಉಸುರಯಿತ್ತ ತಿರಗದಲೆ ಉಸುರು ಅತ್ತಲೆ ಇರಲು
ಶಿಶುವೊಲೆತ್ತಿ ತಂದನ್ಹೊರಿಯಕೆ        ೭೬

ತರಸಿದನು ಗುರುರಾಯ ನಿಂಬೆಹಣ್ಣುಗಳ ಕೊರೆದು
ವರಸಿದನು ನಡು ನೆತ್ತಿಗೆ
ಸುರಸಿದನು ತಣ್ಣೀರ ಧಾರೆ ಹಿಡಿದು ಹೊಯ್ಯಲಿಕ್ಕೆ
ಮರುತ ಮೂಗಿನಲ್ಲಿ ಆಡಿತು           ೭೭

ಕಣ್ಣುಗಳು ತೆರದವಾಗ ಕಣ್ಣುಕರಿಯ ಗುಡ್ಡಿ ಕೆಟ್ಟು
ಇನ್ನು ಹಳದಿ ತುಂಬಿದವೊಲು
ಇನ್ನಿರಲು ಏನು ಕಾರಣವು ಕೆಟ್ಟವುಯೆನಲು
ಚನ್ನಗ್ಹೇಳ್ದನದರ ವಿವರವ            ೭೮

ದೃಷ್ಟಿಯೊಳಗೆ ನೋಡ್ವ ದೃಷ್ಟಿ ದಿವ್ಯ ದೃಷ್ಟಿಯೆನಿಸುವದು
ದೃಷ್ಟಿ ಆತ್ಮನಲ್ಲಿಯಿರುತಿರೆ
ದೃಷ್ಟಿಮಾಂಸ ದೃಷ್ಟಿಯದು ಬಾಹ್ಯಕಿರೆ ಚೊಕ್ಕಟಿಹುದು
ದೃಷ್ಟಿ ಕೆಟ್ಟವು ವ್ಯಾಪಾರಿಲ್ಲದೆ       ೭೯

ಗುರುವರನ ಮುಂದೆ ಕಂಡು ಎರಗಲಿಕೆ ಚರಣದಲಿ
ಕರದಿ ಮೈಯನ್ಯಾವರಿಸುತಲೀ
ಶಿರವ ಹಿಡಿದು ಎತ್ತಿ ಮಾತನಾಡಿದನು ಆವ ಪದವ
ಸ್ಮರಿಸಿದೆಯು ಮನಕೆಯೆಂದನೂ        ೮೦

ನಿಚ್ಚಳಾಗೆ ಯಾಕೆ ಇಂಥ ಸಮಾಧಿಯು ಎಮ್ಮಂಥ
ಹುಚ್ಚರೀಗ ಸಾಧಿಸುವದೂ
ಸ್ವಚರಿತನೆ ಚಿತ್ತವೃತ್ತಿ ಸ್ವಸ್ಥಿಡುವ ಕಾರಣೇನು
ಇಚ್ಚೆ ಮಾಡುವದುಯೆಂದನೂ         ೮೧

ತನ್ನ ತಿಳಿದು ತಾನೀಗ ತಾನಾದ ತರುವಾಯ
ಇನ್ನು ಯೋಗವೇನು ಕಾರಣ
ಚನ್ನಾಗಿಯೇ ಅವನೆ ಆಗಿ ಉಂಡು ಮಲಗಿ ಸಹಜವಾಗಿ
ಇನ್ನಿಹುದೆ ಯೋಗವೆಂದನು ೮೨

ಮನಕೆಯೂ ಸಾಕ್ಷಿಯಾಗಿ ಬುದ್ದಿಗೆಯು ಹೊರಗೆಯಾಗಿ
ಅನಿತು ಇಂದ್ರಿಯಿದ್ದು ಇಲ್ಲದೇ
ಜನಜನಿತವೆಲ್ಲ ತಾನೆಯಾಗಿ ಕಾಣುತಲಿ ಪ್ರತಿ
ದಿನವುಯಿರೆ ಯೋಗವೆಂದನೂ          ೮೩

ಸಿಕ್ಕದಲೆ ವಿಷಯಕೆಯು ಸೊಕ್ಕದಲೆ ಸಿರಿಯು ಬರಲು
ಸುಕ್ಕದಲೆ ಬಡತನಿಂದಲೀ
ಉಕ್ಕದಲೆ ಮದಗಳಿಂದ ಉನ್ಮನಿಯ ಹೊಂದಿರಲು
ತಕ್ಕು ಅದೇ ಯೋಗವೆಂದನೂ          ೮೪

ಜಾಗ್ರ ಕಾರ್ಯ ವಿಶ್ವಗೊಪ್ಪಿಸಿಯೇ ಸ್ವಪ್ನಕಾರ್ಯ ಸ
ಮಗ್ರ ತೈಜ ಸಂಗವೊಪ್ಪಿಸಿ
ವ್ಯಘ್ರದಿಂದ ಸೂಷುಪ್ತಿ ಪ್ರಾಜ್ಞಗೊಪ್ಪಿಸಿಯೇ ತಾ
ಭರ್ಗನಿರಲು ಯೋಗವೆಂದನೂ          ೮೫

ಸೃಷ್ಟಿಕಾರ್ಯ ಅಜಗೆಯಿತ್ತೆ ಸ್ಥಿತಿಯಕಾರ್ಯ ವಿಷ್ಣಗಿತ್ತೆ
ನಷ್ಟಕಾರ್ಯ ಶಿವಗೆಯಿತ್ತೆಯೂ
ಸ್ಪಷ್ಟವಸ್ತು ಜಗದ ಚಿಂತೆ ಇಷ್ಟುಯಿಲ್ಲ ಸರ್ವಕೆಯು
ಶ್ರೇಷ್ಟವಿರೆ ಯೋಗವೆಂದನೂ           ೮೬

ವಂದನಿಗ ಹಿಗ್ಗದಲೆ ನಿಂದ್ಯಕೆಯು ಕುಗ್ಗದಲೆ
ಬಂದರೀಗ ಎನ್ನದಲೆಯೂ
ಎಂದಿಗರಿಯದಲೆ ಪ್ರಪಂಚ ಪೂತ ಆತ್ಮನಾಗಿ
ನಿಂದಿರಲು ಯೋಗವೆಂದನು ೮೭

ಬಯಲೆಯಾಗಿ ಇರುತಿಹದೆ ಬಯಲು ಆಗಿ ನೋಡುವದೆ
ಬಯಲ ಆಗಿ ಮಾತನಾಡ್ವದೇ
ಬಯಲೆ ಆಗಿ ಚರಿಸುವದೆ ತಾನೆಯಾಗಿ ಬಯಲಿಗೆಯು
ಬಯಲಯಿಹದೆ ಯೋಗವೆಂದನು      ೮೮

ಇಂತು ಪರಿಯು ಯೋಗವನ್ನು ಬ್ರಹ್ಮವಾಗಿ ಪ್ರತಿದಿನದಿ
ಅಂತು ಮಾಡುವದು ಸಹಜವು
ಇಂತಿದನು ಬಿಟ್ಟು ನಮ್ಮಂಥ ಬ್ರಾಂತು ಮಾಡ್ವ ಯೋಗ
ನೀಂ ತಿಳದಗ್ಯಾತಕೆಂದನೂ   ೮೯

ನಗತಲಿತ್ತು ಭಕ್ತರುಗಳು ಗುರುವು ಆಡ್ದ ಮಾತಿಗಯು
ತೆಗೆದುಕೊಂಡು ಪಾಲಕಿಯೊಳು
ಸುಗಮ ಸಂತೋಷದಿಂದಯೋಧ್ಯಕೊಯ್ದು ಹಾಲ ಕುಡಿಸೆ
ಹೋಗವು ಮಲಕು ಕುಳಿತ ಕಾರಣಾ    ೯೦

ಇಷ್ಟು ಸೌಟನೆರಡು ಬಾಯ ಹಿಗ್ಗಿಸಿಯೆ ಅರಳೆಯಿಂದ
ಇಷ್ಟು ಇಷ್ಟು ಹಾಲ ಕುಡಿಸಿಯೇ
ಅಷ್ಟರಮ್ಯಾಲೆ ಉಂಡ ತಾನೀಗ ಸದ್ಗುರುವು
ಎಷ್ಟು ಮೋಹ ಶಿಷ್ಯನಲ್ಲಿಯೂ       ೯೧

ತನ್ನ ಹೆಸರನಿಟ್ಟು ಚಿದಾನಂದ ರಾಜಯೋಗಿಯಂದು
ಇನ್ನು ಸರ್ವ ಜನರು ಕೇಳಲು
ಸನ್ನುತದ ಸಮಾಧಿಯಲಿ ಮನೆಯೊಳಿರಲು ಮಾತನಾಡು
ತಿನ್ನು ಇದ್ದರಾಗ ಸಕಲರೂ ೯೨

ಈತನಿಗ ಎಮ್ಮ ಕೂಡ ದಾತನಾಗಿ ಇರುವನು
ಈತಗೆಯು ಮದುವೆ ಮಾಡ್ದಡೇ
ಮಾತು ಕೇಳುವನುಯಂದು ಕೂತು ಕೂಡಿ ವಿಚಾರವ
ಆತಗೆಯು ಮಾಡುತಿರ್ದರೂ            ೯೩

ತಂಬ್ರಹಳ್ಳಿಲಿಂದ ಬಂದು ಲೇಪಾಕ್ಷಿಯೆಂಬುವಾತ
ದುಂಬಲಾದ ಗುರುವಿಗೀಗಳೂ
ಸಂಭ್ರಮದಿ ಮಗಳನೀವೆ ತುಂಬುವದು ಬೋಧೆ ಎಂ
ದೆಂಬನಾಗಿ ಪಾದಕೆರಗಿದಾ    ೯೪

ಮತ್ತೆ ಆಕಡೀಕಡಿಯ ಭಕ್ತರುಗಳು ಕನ್ನಿಕೆಗಳ
ಎತ್ತಿ ತಂದರೀಗ ಎಂಟನೂ
ಕರ್ತು ಗುರುವರನ ಎಲ್ಲ ಸುತ್ತಿಕೊಂಡು ತಿಳುಹಬೇಕು
ಸತ್ಯವಾಗಿ ನಿಮ್ಮ ಶಿಷ್ಯನಾ   ೯೫

ಎಂದಡಾ ಮಾತಿಗೆಯು ಗುರುವರನು ತಾನು ಅಂದ
ಇಂದು ಎನ್ನ ಮಾತ ಕೇಳ್ವನೇ
ಅಂದು ನೋಡುವೆವು ಎರಡ ಮಾತನೆಂದು ಶಿಷ್ಯನಾ
ಮುಂದಿರಿಸಿಕೊಂಡು ಕೇಳ್ದನೂ          ೯೬

ಅಪ್ಪ ಕೆಳೋ ಸಂಸಾರದಿ ಇಪ್ಪರೀಗ ಮಹಾಋಷಿಗಳು
ಒಪ್ಪದಿರೆ ಅಪಕೀರ್ತಿಯಾ
ಇಪ್ಪೆ ನಾನು ಅದರ ಅಂತೆ ತಪ್ಪು ಏನು ನಿನಗೆ ಆದೆ
ಒಪ್ಪಗೊಳ್ಳೊ ಲಗ್ನಕೆಂದನೂ          ೯೭

ಎಂದಡೆಯು ಗುರುವೆ ಕೇಳು ಅಪರಾಧವು ಉತ್ತರೀಯೆ
ಒಂದು ನಿವೃತ್ತಿ ಸಂಸಾರಾ
ಇಂದು ಮಾಡಿಹಿರಿ ಇದರ ಮ್ಯಾಲೆ ಪ್ರವೃತ್ತಿ ಸಂಸಾ
ರೆಂದೆನಲುನಗವುಯೆಂದನೂ ೯೮

ಸತ್ಯವೆಂಬುದೆನ್ನ ಸತಿಯು ಶಾಂತನೆಂದೆಂಬ ಸುತನು
ನಿತ್ಯವೆಂಬುವೆನ್ನ ಸೊಸೆಯೊಳೂ
ನುತಭಕ್ತಿಯೆಂಬ ತಾಯಿ ಶ್ರದ್ಧೆಯೆಂಬ ತಾಯಿಯಿರಲು
ಮಿಥ್ಯ ಸಂಸಾರಯೆಂತು ಎನಗೆಯೂ   ೯೯

ಬುದ್ಧಿಯೆಂಬುದೆನ್ನ ಭ್ರಾತೃ ಬ್ರಹ್ಮಭಾವನೆಯೆ ಭಾವ
ಆಧ್ಯಾತ್ಮವೆಂಬ ಅತ್ತೆಯೂ
ಶುದ್ಧಾತ್ಮ ಮಾವ ಸುಲಭವೆಂಬ ಬಂಧು ಇರಲು ಆ
ಬುದ್ಧ ಸಂಸಾರೆನಗೆ ಒಪ್ಪುದೇ          ೧೦೦

ಗುರುವೇ ಕೇಳು ನಿವೃತ್ತಿ ಪ್ರವೃತ್ತಿಯುಯಂಬರಿಗೆ
ವಿರಸವಾವ ಕಾಲದಲ್ಲಿಯೂ
ಥರವೆ ನಿವೃತ್ತಿ ಸಂಸರಿರಲು ಮ್ಯಾಲೆ ಪ್ರವೃತ್ತಿ
ಕರಕರಿಯು ಸಂಸರೆಂದನೂ   ೧೦೧

ಮರತು ಮಾಡಿಕೊಂಡ ಸಂಸಾರರಿತರೇಯು ಬಿಡದು ಈಗ
ಅರಿತು ನಿವೃತ್ತಿ ಸಂಸಾರಾ
ಗುರುವು ಮಾಡಿ ಕೊಟ್ಟ ಹಿಂದೆ ಉರಲನೀಗ ಕೊರಳಿಗಿಕ್ಕಿ
ಗುರುಗುರೆಂಬುದ್ಯಾತಕೆಂದನೂ         ೧೦೨

ಇಂತು ಬಿನ್ನಹವ ಮಾಡಲಂತು ಗುರುವು ಅವರಿಗೆಯೂ
ಅಂತು ಉತ್ತರವ ಕೊಟ್ಟನು
ಎಂತು ಒಡಂಬಡಿಪದು ಕೊಡದಂಥ ಮುತ್ತು ಮೂಗಿಗಿ
ಟ್ಟಂತೆನಿಪರವರು ಹುಚ್ಚರೂ          ೧೦೩

ನೀವೆ ಒಡಂಬಡಿಸಿಕೊಳ್ಳಿ ನಾವು ಹೇಳ್ವದಲ್ಲೆನಲು
ತಾವು ಯೋಚನೆಯ ಮಾಡ್ದರು
ಆವ ಪರಿಯಲಿಂದ ಲಗ್ನ ಮಾಡಬೇಕು ಕೊಟ್ಟಡಿಯೊಳು
ನಾವು ಹಾಕಿ ಮಾಡ್ವುದೆಂದರೂ        ೧೦೪

ಎನ್ನುತೀಹ ಮಾತ ಕೇಳಿ ಗುರು ಪುತ್ರಿ ಲಕ್ಷ್ಮಿದೇವಿ
ಅಣ್ಣ ನಿನ್ನ ಕೊಟ್ಟಡಿಯೊಳು
ಇನ್ನು ಹಾಕಿ ಮದುವೆ ಮಾಡ್ವರೆಂದು ಕಿವಿಯೊಳ್ಹೇಳೆ
ನಾನಿನ್ನು ಇರಬಾರದೆಂದನೂ            ೧೦೫

ಅರ್ಧರಾತ್ರೆಲೆದ್ದು ಯೋಗಶಿದ್ಧನೀಗ ತೆರಳಿದನು
ಶಿದ್ಧವಾಗಿ ಬೆಳಗೊಪಾಟಿಗೇ
ಇದ್ದನೆರಡು ಗಾವುದವು ಬೆಳಗು ಆಗೆರವುಡ ಕುಂದಿ
ಲಿದ್ದ ಗುಡ್ಡದೊಳಗೆ ಅಡಗಿದಾ        ೧೦೬

ಮತ್ತೆ ಹೊರಟನೀಗ ಊರ ದಿವಾ ರಾತ್ರಿ ಕಾಲದಲ್ಲಿ
ಹೊತ್ತುಗಳೆದ ಬಳಗಾನೂರಿಲೀ
ಇತ್ತಲಾಗಿ ಗೃಹದೀ ನೋಡೆ ಮತ್ತೆ ಇಲ್ಲದಲೆ ಕಂಡು
ಸತ್ಯಗುರು ಬೈದನೆಲ್ಲರಾ   ೧೦೭

ಕಳೆದಿರಾ ಸತ್ಪುರುಷನಾದ ಮಹಾತ್ಮನನ್ನು
ಕಳೆದಿರಾ ಎನ್ನ ಪ್ರಾಣನಾ
ಕಳೆದಿರಾ ಎನ್ನ ಭಾಗ್ಯವೆಂದು ಸದ್ಗುರುರಾಯ
ಬಳಲಿದನು ತನ್ನ ಶಿಷ್ಯಗೇ   ೧೦೮

ಶೀತರಾಮನೆಂಬ ಶಿಷ್ಯ ಸತ್ತಡೆಯು ಮಿಡುಕಲಿಲ್ಲ
ಆತ ದೊಡ್ಡಪ್ಪನೆಂಬನು
ಏತಕೆಯು ನಿಲುಕದ್ಹೋದ ನಿರ್ಗುಣ ಬ್ರಹ್ಮವಾಗಿ
ಈತನಾಶೆಯಿತ್ತುಯೆಂದನೂ ೧೦೯

ಒಂಭತ್ತು ಕನ್ನಿಕೆಯರು ತಮ್ಮ ಖರ್ಚು ತಾವು ತಿಂದು
ಹಂಬಲಿಂದ ಅಲ್ಲಿ ವಾಸದೀ
ಇಂಬು ಮಾಡಿ ಎರಡು ತಿಂಗಳಿದ್ದು ನಿರಾಶರಾಗಿ ಪೈಣ
ಕೊಂಬರಾದರೆಲ್ಲ ಊರಿಗೇ ೧೧೦

ರಾಜಯೋಗವನ್ನೆ ಹೇಳ್ದೆ ವಿಹಂಗವನೆನಿಸುವುದು
ಗೋಜು ಕಳೆದು ಕಾಶಿಗ್ಹೋದುದಾ
ವಾಜಯಾಗಿ ಮುಂದೆ ಹೇಳ್ವೆ ಐದು ಸಂಧಿಯಿಲ್ಲಿಗೆಯು
ಮಾಜದೈಯಪ್ಪ ನುಡಿದನೂ           ೧೧೧

ಮಂಗಳವು ಕೇಳಿದರಿಗೆ ಮಂಗಳವು ಹೇಳಿದರಿಗೆ
ಮಂಗಳವು ಸ್ತ್ರೀಯ ದೇಶಕೆ
ಮಂಗಳವು ಚಿದಾನಂದ ಅವಧೂತ ಚಾರಿತ್ರ
ಮಂಗಳಕೆ ಮಂಗಳೆಂದನು     ೧೧೨

ಇತಿ ಶ್ರೀಮತ್ಪರಮಹಂಸ ಪರಿವ್ರಾಜಕಾಚಾರ್ಯ
ಶ್ರೀ ಚಿದಾನಂದ ಅವಧೂತ
ಸದ್ಗುರುವರ್ಯ ಚರಣಕಮಲ ಭೃಂಗ
ಅಯ್ಯಪ್ಪ ವಿರಚಿತ ಚಿದಾನಂದ ಸದ್ಗುರು ಅವಧೂತ ಚಾರಿತ್ರದಲ್ಲಿ
ರಾಜಯೋಗ ಸಮಾಪ್ತಂ
ಅಂತು ಸಂಧಿ ೫ಕ್ಕೆ ಪದ ೫೭೬ಕ್ಕಂ ಮಂಗಲಮಹಾಶ್ರೀ ಶ್ರೀ ಶ್ರೀ