ನೀನಾರು ಎಂದು ಕೇಳ್ವೆ ಪರರನೀಗ ಭವಾನಿಯೆ
ನಾನಾರು ಎಂದು ಕೇಳ್ವೆಯಾ
ನಾನು ಈಗ ತೋರಿಕೊಡುವೆ ನಾನು ಎಂಬುವನ ಈಗ
ನೀನು ಕೇಳು ಮರಿಯದೀಗಲಿ            ೧೫೧

ತನುವಿಗೆಯು ಹತ್ತದವನ ಹೆಣ್ಣುಗಂಡು ಅಲ್ಲದವನ
ಇನಿತುರೂಪು ನಾಮವಿಲ್ದನ
ಅನಿತು ದೇಹದಲ್ಲಿಯಿಹನ ದೇಹಧರಿಸಿ ಬಿಟ್ಟುವನ
ನಿನಗೆ ತೋರಿಕೊಡುವೆನೆಂದನು          ೧೫೨

ಎಂದಿಗೆಯು ಸಾಯದವನ ಹೋಗಿ ಬಾಹಣಿಲ್ಲದವನ
ನಿಂದ್ಯ ಸುತ್ತಿಗೆ ಅಂಟದವನ
ನಿಂದು ಕಡಿಮೆ ಹರಿಯದವನ ಬ್ರಹ್ಮಾದ್ಯರಲಿ ಬೆಳಗುವನ
ಇಂದು ತೋರ್ಪೆ ನಿನಗೆಯೆಂದನು       ೧೫೩

ಹತ್ತಿರಕೆ ಕರೆದು ಈಗ ದಂಪತಿಗಳಿಬ್ಬರನು
ನೆತ್ತಿಯಲ್ಲಿ ಕರವನಿಟ್ಟೆಯು
ನಿತ್ಯಾತ್ಮನೀಗ ವಿಹಂಗಮದ ಉಪದೇಶವ
ಬಿತ್ತುತಿರ್ದ ಅವರ ಕಿವಿಯಲಿ            ೧೫೪

ಅತ್ತ ನೋಡ್ವ ದೃಷ್ಟಿ ನೀವಿತ್ತ ಕೂಡ್ರಸಲು ತನುವು
ಮತ್ತೆ ಬಯಲು ಆಗಿ ತೋರ್ವವು
ಎತ್ತ ಹೋಗುವವು ಮನವು ಬುದ್ಧಿಯಿಂದ್ರಿವೃತ್ತಿಗಳು
ಸತ್ಯವಾಗಿ ಒಂದು ತೋರವು೧೫೫

ಆಲಿಯ ಮಧ್ಯದಲ್ಲಿ ದೃಷ್ಟಿಯ ನಿಲ್ಲಿಸಲಿಕೆ
ನೀಲತೋಯ ಕಾಣಿಸುವದು
ನೀಲತೋಯ ಎಂದಡೆಯು ಕಪ್ಪುವರ್ನಯಿರುತಿಹುದು
ಹೇಳಲಿಕೆ ಆಲಿ ಮಧ್ಯದಿ      ೧೫೬

ಹೊರಗೆ ನೋಡ್ವ ದೃಷ್ಟಿಯದು ಮಾಂಸದೃಷ್ಟಿಯನಿಸುತಿಹದು
ಶರೀರದೊಳಗೆ ನೋಡ್ವ ದೃಷ್ಟಿಯು
ಪರಮದಿವ್ಯ ದೃಷ್ಟಿಯೆನಿಪು ದೃಷ್ಟಿನಿಂತ ಸ್ಥಳವೆ ಹೃದಯ
ಅರಿಯಿರಿವಳುತಗೆಂದನು     ೧೫೭

ಕಪ್ಪು ತೋರುವದು ಮೊದಲು ಅಂಗುಷ್ಠ ಮಾತ್ರವಾಗಿ
ಇಪ್ಪುದು ದಿನದಿನದಿ ಕರಗಿಯೆ
ಅಪ್ಪುದು ಹುಣಿಸೆಕಾಳ ಮಾತ್ರದಲ್ಲಿ ಅದು ಕರಗಿ
ತಪ್ಪದಿಹುದು ಉದ್ದು ಮಾತ್ರದಿ      ೧೫೮

ಉದ್ದು ಮಾತ್ರ ಕಪ್ಪಿನಾ ಮಧ್ಯದಲ್ಲಿ ಮಿಂಚಿನಂತೆ
ಸಿದ್ಧವಾಗಿ ಕಿಡಿಯ ಮಾತ್ರದಿ
ಬುದ್ಧಿವಂತರರಿಯಲಣುವಿನಂತೆ ನೆಲ್ಲುಮುಳ್ಳು ಮಾತ್ರ
ಇದ್ದಿಹುದು ಪರಬ್ರಹ್ಮವು  ೧೫೯

ಅದುವೆ ಬ್ರಹ್ಮ ಅದುವೆ ವಿಷ್ಣು ಅದುವೆ ರುದ್ರ ಸರ್ವಜಗವು
ಅದರವಿನಹವಿಲ್ಲ ಇತರವು
ಅದುವೆ ನೀನು ಅದುವೆ ನಾನು ಅದುವೆ ಗಂಡಹೆಂಡರೀಗ
ಅದೇಯಾಗಿ ಚಿಂತಿಸೆಂದನು  ೧೬೦

ಆವ ಪದಾರ್ಥವು ಅದೆ ಹೇಳೊದದೆ ಕೇಳೊದದೆ
ಈವ ದೇಹ ಧರಿಸುವದದೆ
ಸಾವು ಜನನ ಕಳೆದುದದೆ ಸಾಕ್ಷಿಯಾಗಿಯಿರುತಲಿಹ
ಕೇವಲರುವು ನೀವೆಂದನು     ೧೬೧

ಇಂಥ ಬ್ರಹ್ಮವನ್ನೆ ನೀವು ಎಡಬಿಡದೆ ಲಕ್ಷವಿಟ್ಟು
ಚಿಂತಿಸುತ ಸೋಹಂ ಮಂತ್ರವ
ನಿಂತಲ್ಲಿ ಕುಳಿತಲ್ಲಿ ದಿವವು ರಾತ್ರಿಯಲ್ಲಿ ಆತ್ಮ
ಗಿಂತು ನಿತ್ಯನೆನಿಯಿರೆಂದನು  ೧೬೨

ಇಂತು ಉಪದೇಶ ಮಾಡುತಂತು ಅಂದು ಗುರುರಾಯ
ಇಂತಿದುವೆ ವಿಹಂಗಮ
ಇಂತಿದುವೆ ರಾಜಯೋಗ ಇಂತಿದುವೆ ಆತ್ಮಜ್ಞಾನ
ಚಿಂತಿಸಿರಿ ಬಯಲಾಗಿ ಎಂದನು          ೧೬೩

ಮಾಡಿರೀಗ ದೌಲತ್ತ ಕುಳಿತದೃಷ್ಟಿ ಕಿತ್ತದಲೆ
ಗೂಢವಾದ ಬ್ರಹ್ಮವಾಗಿಯೆ
ಮಾಡಬೇಕು ಪಯಣ ಗುರು ದರುಶನಕೆಯೆನುತ ಆ
ರೂಢನೀಗ ಎದ್ದು ನಿಂತನು  ೧೬೪

ಪಾದವನ್ನೆ ಹಿಡಿದರಾಗ ದಂಪತಿಗಳು ಇಲ್ಲೆ ವಾಸ
ವಾದರೆಯು ನಾವು ಪುಣ್ಯರು
ಭೇದವಿಲ್ಲದಲೆ ದೌಲತ್ತು ನಿಮ್ಮದೆನಲು ನಿರು
ಪಾಧಿಯೀಗ ಉತ್ತರಿತ್ತನು   ೧೬೫

ಗುರುದರುಶನಕೆ ಮನವು ಎಳವುತದೆ ನಿಲಲಿಬಾರ
ದರಿಯಿರಿ ನೀವು ಸುಖಿಯುಯೆನುತಲಿ
ಶಿರದ ಮ್ಯಾಲೆ ಕರವನಿಟ್ಟು ತೆರಳಿದನು ದಕ್ಷಿಣಕೆ
ಮೆರೆವ ಗೋದಾವರಿಗೆ ಬಂದನು        ೧೬೬

ಅಲ್ಲಿ ಕಾಶಿಕಾವಡಿಯವರು ನೀರ ಕುಪ್ಪೆ ತುಂಬುವರು
ಎಲ್ಲರೂ ಬಂದುಯೆರಗಲು
ಮೆಲ್ಲಗೊಬ್ಬಳು ರಾಧಾಬಾಯಿಯೆನಿಪಳು ಸೇವೆ
ಯಲ್ಲಿಹೆನು ನಾನುಯೆಂದಳು          ೧೬೭

ಒಳಿತುಯೆಂದು ಗುರುರಾಯ ಗೋದಾವರಿಯ ಸ್ನಾನ ಮಾಡಿ
ಬಳಿಕ ಹೊರಟ ಆಕೆಗೂಡಿಯೆ
ತಿಳಿವಿಕೇನು ಆಕೆಗಿಲ್ಲ ಅಡಿಗೆ ಮಾಡಿ ಬಡಿಸುವಳು
ಮಲಹರಗೆ ತಾನು ನಿತ್ಯದಿ   ೧೬೮

ಅನ್ನ ಮಾಡಿ ತಪೇಲಿಯೊಳಗೆ ತೊವಿಯನೀಗ ಹಾಕುವಳು
ಇನ್ನು ತುಪ್ಪ ಮ್ಯಾಲೆ ನೀಡಿಯೆ
ಚನ್ನಾಗಿಯೆ ಕಲಸಿ ಮುಟ್ಟಿಗೆಯ ಮಾಡಿ ಬಾಯೊಳಿಟ್ಟು
ಇನ್ನು ಹುಳಿಯು ಸುರಿದುಕೊಂಬಳು  ೧೬೯

ಅಲ್ಲೆ ಭಕ್ಷ ತಿನ್ನುವಳು ಅಲ್ಲೆ ಪಲ್ಲೆ ನಂಜುವಳು
ನಿಲ್ಲದಡಿಗೆ ಮಾಡುತಿಹಳು
ಉಳ್ಳಲಿಕೆಯು ಗುರುವರಾಗ ನಮಲಿಕೊಳುತ ಬಡಿಸುವಳು
ಒಳ್ಳೆ ಶಿಷ್ಟಳೀಗ ದೊರೆತಳು೧೭೦

ಒಂದು ಅಡಿಗೆ ಕೆಡದಲಿಹವು ಉಪ್ಪು ಹುಳಿಯು ಸಜ್ಜಾಗಿಹವು
ಅಂದು ಸವಿಯ ನೋಡಿ ಮಾಡ್ವಳು
ಮುಂದೆ ಕೆಡುವವು ಯಾಕೆ ಸೈಯೆನಿಸಿಕೊಳುತಲಿಹಳು
ಬಂದುದನ್ನೆ ಗಂಟಕಟ್ಟೊಳು            ೧೭೧

ಹೊರಕಡಿಗೆ ಕೂಡ್ರುತಲಿ ಕೂಡ್ರು ಬಳಿಯ ತಿನ್ನುವಳು
ಹರವಿದ್ಹಾಸಿಕೆಯ ಪದರದೀ
ಸರಿಯು ಬಂದುದನ್ನೆಯಿಟ್ಟು ಮಲಗಿಕೊಂಡು ತಿಂಬುವಳು
ಇರುವಳಿಂತು ಸೇವೆಯಿಂದಲಿ            ೧೭೨

ಇದ್ದಳಾಕೆ ಕೆಲವು ದಿವಸ ಎದ್ದು ಹೋದಳೀಗ ತಾನೆ
ಸಿದ್ಧನೀಗ ಕೃಷ್ಣಾದಾಟಿಯೆ
ಹೊದ್ದಿದನು ಕಂಪಲಿಯ ಸುದ್ದಿ ಕೇಳ್ದ ಗುರುವರನು
ಸಿದ್ಧಿ ಹೊಂದಿದ ವಿವರವ    ೧೭೩

ಕಟ್ಟಿಸಿದ ಕಂಪಲಿಯ ಪ್ಯಾಟೆಯೊಳಗೆ ಮಠವನೀಗ
ಕಟ್ಟಿ ಹಾಕಿಸಿಯೆ ಅದರೊಳು
ಇಷ್ಟು ಇಷ್ಟು ಗುಣಿಗಲ್ಲು ತುಂಬಿ ಆಸನದಲಿ ಬ್ರಹ್ಮ
ನಿಷ್ಠನು ಇರುತಲಿರ್ದನು     ೧೭೪

ಯೋಗಧಾರಣವು ಹೆಚ್ಚಿ ಶರೀರೆಲ್ಲ ತಪಿಸಲಾಗಿ
ಆಗ ಕಬ್ಬಿಣದ ಖಡಾವಿಲೀ
ಆಗಳೈದು ಕೊಡದನೀರ ಹೊಯಿದು ಕಾಲನಿಕ್ಕಲಿಕ್ಕೆ
ಬೇಗ ನೀರು ಕಾಯುತಿರ್ದವು೧೭೫

ರಾತ್ರಿಯಲ್ಲಿ ನೀರ ತೆಗೆದು ತುಂಬಲಿಕ್ಕೆ ಬೆಳಗು ಆಗೆ
ಮತ್ತೆ ನೀರು ಕಾದಿಹವು
ಹತ್ತಿಕೊಂಡಿರಲು ಬೇನೆ ಭೂತದವರು ಸ್ನಾನ ಮಾಡೆ
ಎತ್ತಲೋಡುವವು ಅವರಿಗೆ  ೧೭೬

ಜಗಲಿಯೊಳಗಣ ಕಲ್ಲು ಎಂಟು ದಿನಕೆ ಒಂದು ಸಾರಿ
ತೆಗೆದು ತೊಳೆದು ಮತ್ತೆ ತುಂಬಲು
ಬಗೆಬಗೆಯ ಹುಳವುಗಳು ಚೇಳು ಜರಿಯು ಜಂಡಿಗನು
ತೆಗೆದು ಹರಿದು ಹೋಗುತಿಹವು        ೧೭೭

ಕಪ್ಪೆ ಗೋವಿಂದನಕ್ಕ ಆನಂದ ಅಮ್ಮನೀಗ
ತಪ್ಪದಲೆ ಸೇವೆಲಿಹಳು
ಒಪ್ಪಿ ಅನ್ನ ಉದಕವನು ಆಕೆ ತಂದು ಉಣಿಸುತಿಹಳು
ಅಪ್ಪನಿಹನು ಯೋಗನಿದ್ರೇಲಿ           ೧೭೮

ಕಂಪಲಿಯ ಪದಕಿ ತಿರಕಪ್ಪ ಹತ್ತು ವರುಷದವನು
ಸೊಂಪು ಆದ ಹಲಿಗೆ ಧಟ್ಟಿಸಿ
ಪೆಂಪಿಲಿಂದ ತವರ ಬಾಳವನ್ನೆ ಮಾಡಿಕೊಂಡು ಬರಿಯ
ಲೆಂದು ಪುಟ್ಟ ಬಂದ ಮಠಕೆಯು       ೧೭೯

ಗುರುವೆ ಅರ್ಧರಾತ್ರಿಯೊಳು ನಿಮ್ಮ ಗುರುವು ಚಿದಾನಂದ
ಪರವಶಿರಲು ನಾನು ನಿದ್ರದಿ
ವರ ಚಿದಾನಂದ ಅವಧೂತನಲ್ಲಿಗೆಯು ಹೋಗಿ
ಬರೆದುಕೋ ಎಂದ ಗ್ರಂಥವ  ೧೮೦

ಬರುತಲಿಹವು ಈಗ ನೂರು ಕೀರ್ತನೆಗಳು ನಿಮಗೆ ಎಲ್ಲ
ಮರೆತಿಹವು ಕೆಲವು ಅದರೊಳು
ಸ್ಥಿರವು ಅಲ್ಲ ಕೀರ್ತನೆಗಳು ನಿಮ್ಮಲವರ ಕರುಣವಿಹದು
ಚರಣಹಿಡಿಯೆ ಹೇಳ್ವರೆಂದನು          ೧೮೧

ಎಂದು ನಿದ್ರೆಯೊಳಗೆ ಹೇಳಿ ಎನ್ನ ಬಡಿದು ಎಬ್ಬಿಸಲು
ಅಂದು ಹಲಗಿಯನ್ನೆ ಧಟ್ಟಿಸಿ
ಒಂದು ಪಾವು ತವರದ ಬಳಹ ಮಾಡಿಸಿಯೆ ಕೊಂಡು
ಬಂದಿಹೆನು ಎಂದು ಎರಗಿದ  ೧೮೨

ಗುರುವನು ಯೋಗನಿದ್ರೆಯಲ್ಲಿರಲು ಮೊದಲು ಅಂತೆ
ಶರೀರವ ತಾಳಿ ಬಂದೆಯು
ಮರೆತೆಯಾ ಎನ್ನ ಮಾತ ಒಂದು ಗ್ರಂಥ ಹೇಳು ಅಂದೆ
ಸ್ಮರಣೆಯಿಲ್ಲ ನಿನಗೆಯೆಂದನು         ೧೮೩

ಎನ್ನಲಿಕೆ ಬೆದರಿ ಕಣ್ಣ ತೆರೆಯಲಿಕ್ಕೆ ಇವನು ಬಂದು
ಬಿನ್ನಹವ ಮಾಡಿಕೊಂಡನು
ತನ್ನೊಳಗೆ ತಾ ತಿಳಿದು ಮೊದಲವರು ಹೇಳ್ದ ಗ್ರಂಥ
ಇನ್ನು ಸಾಲದಾಯ್ತೆಂದನು  ೧೮೪

ಜ್ಞಾನೇಶ್ವರನೆಂಬಾತ ಗೀತ ಟೀಕೆ ಮಾಡಿಹನು
ಏನು ಹೇಳ್ವೆ ಯಶೋಪಂತನ
ನಾನಾ ಯುಕುತಿ ಹೇಳಿಹನು ಭಾಗವತದಿ ಅವರಿಗಿಂದ
ತಾನು ಘನವೆ ಶಿವಶಿವೆಂದನು            ೧೮೫

ರೂಢಿಗೊಡೆಯ ಹೇಲಿ ಇರ್ದ ಎರಡು ಮೂರು ಸಾರಿಯೆನಗೆ
ಮಾಡು ಮೋಕ್ಷಗ್ರಂಥವೆನುತಲಿ
ಜೋಡಿಸಿದ ಈಗ ಎನಗೆ ಮಾಡುಯೆಂದು ಎಚ್ಚರವ
ಕೇಡು ಮಾಡದಿರಲುಯೆಂದನು         ೧೮೬

ಇಂದೆ ಬಂದಿಹನು ಇವನು ಗುರುವು ಹೇಳಿದನು ಎಂದು
ತಂದಿಹನು ಹಲಿಗೆಬಳಪವ
ಇಂದು ನುಡಿವೆನು ಮೊದಲ ವರ ಉಚ್ಚಿಷ್ಠ ಅವರ
ಬಾಂದಿ ಮಗನಾಗ್ಹೇಳ್ವೆನೆಂದನು       ೧೮೭

ಹೇಳ್ವೆ ಹಲಿಗೆ ತಾಯೆಂದು ಮಂಗಳಾಚರಣೆ ಮಾತ್ರ
ಲೋಲ ಸದ್ಗುರುವ ನೆನದೆಯು
ಪಾಲಿಸಿದ ತನ್ನ ಕೈಯ ಮುಟ್ಟಿ ತವರ ಬಳಹ ಸು
ಶೀಲ ಜ್ಞಾನಸಿಂಧು ಗ್ರಂಥವ  ೧೮೮

ಹೇಳಿದನು ಜ್ಞಾನಸಿಂಧು ಶುಭಕೃತು ಸಂವತ್ಸರದಿ
ಕಾಲಶುದ್ಧ ಜ್ಯೇಷ್ಠ ದಶಮಿಲಿ
ಪಾಲಿಸಲು ಮೊದಲು ಮಾಡಿ ನುಡಿವ ಅಷ್ಟರೊಳು ಬರೆವ
ಮ್ಯಾಲೆ ಪುಸ್ತಕೆತ್ತಿ ಬರೆವನು೧೮೯

ಹೇಳುವನು ಇಪ್ಪತ್ತು ಮೂವತ್ತು ಪದಗಳನು
ನಾಲಿಗೆಗೆ ಬಾರದಾದರೆ
ತಾಳುವನು ಸಮಾಧಿಯನು ಮತ್ತೆ ಎಚ್ಚರಾಗಿ ಹೇಳ್ವ
ಬಾಲಕನು ಬರೆವನಾಗಳು     ೧೯೦

ಭಾಮಿನಿಯ ಷಟ್ಟದಿಲಿ ನಾನಾ ರಾಗದಿಂದ ಓದಿ
ತಾ ಮತ್ತೆ ಬ್ರಹ್ಮವಾಗಿಯೆ
ನೇಮಿಸಿಯೆ ನಾಲ್ವತ್ತು ಆರು ಅಧ್ಯಾಯದಿಂದ
ಭೂಮಿಗುಪಕರಾಗಿ ಹೇಳ್ದನು           ೧೯೧

ಓದಿಸಿಯೆ ಬ್ರಹ್ಮ ಸಂತರ್ಪಣೆಯ ಮಾಡಿಸಿಯೆ
ಮೇದಿನಿಗೆ ಬರಿಯಲಿತ್ತನು
ವಾದರಹಿತನೀಗ ಪೂಜೆಗೊಳುತ ಕಂಪಲಿಯ ಪೇಟೆ
ಲಾ ದಯಾಂಬುಧಿಯು ಇದ್ದನು       ೧೯೨

ಬಿಟ್ಟು ಕಂಪಲಿಯ ಮತ್ತೆ ಉಳೆಯನೂರ ಹೊಳಿಯ ದಂಡಿ
ಕಟ್ಟೆಯಿರೆ ಅಶ್ವತ್ಥವೆಂಬುವ
ಗಟ್ಟ್ಯಾಗಿಯೆ ವಾಸಮಾಡ್ದ ನಾಲ್ಕು ತಿಂಗಳಲ್ಲಿ ಯೋಗ
ನಿಷ್ಠೆಲಿದ್ದ ದಿವರಾತ್ರಿಯು   ೧೯೩

ಹಾಲನೀಗ ನಿತ್ಯಭಕ್ತರಲ್ಲಿ ತಂದು ಕೊಡುತಲಿರಲು
ಮ್ಯಾಲೆ ಹೊಳಿಯು ತುಂಬಿ ಬಂದೆಯು
ಹೇಳಲೇನ ಕಟ್ಟಿ ಸುತ್ತ ಗಟ್ಟಿ ಮನುಜ ಹಾಯದಂತೆ
ಆಳೂಚ ನೀರು ಹರಿದುದು  ೧೯೪

ಇಲ್ಲವಾಯ್ತೊ ಹಾಲು ತಿಂಗಳಲ್ಲಿ ನಿರಾಹಾರವಿರ್ದು
ಕಲ್ಲುಕಟ್ಟೆಲಿರ್ದ ಹಾವ್‌ಗಳು
ಎಲ್ಲೆಲ್ಲಿ ಹಾವುಗಳು ಹೊಳೆಯೊಳಗೆ ಬಂದವಲ್ಲಿ
ಮೆಲ್ಲಗಡರಿದವು ಮೈಗೆಯು           ೧೯೫

ಮುಂದಕ್ಹತ್ತಿ ಹಾವುಗಳು ಹಿಂದಕಾಗಿ ಇಳಿವುತಿಹವು
ಹಿಂದೆ ಹತ್ತಿ ಮುಂದೆ ಇಳಿವವು
ಒಂದು ಕೊರಳಿಗೆಯು ಸುತ್ತಿ ಒಂದು ನೆತ್ತಿಲಿರುತಿಹದು
ಒಂದು ನಡುವಿನಲ್ಲಿ ಇಹುದು          ೧೯೬

ಸರ್ಪಗಳು ದಿನವು ರಾತ್ರಿ ಸುತ್ತಿಕೊಂಡು ಇರುತಿರಲು
ಅಪ್ಪನೀಗಯಿಷ್ಟು ಮಿಸುಕದೆ
ಇಪ್ಪನೀಗ ಮೈಮರೆತು ಸರ್ವಜನವು ನೋಡಿ ನ
ಮ್ಮಪ್ಪ ಎಂದು ಬೆದರುತಿಹರು         ೧೯೭

ಹೊಳೆಯು ಇಳಿದ ಹಿಂದೆ ಹಾವು ತೊಲಗಿದವು ಅವು ಎಲ್ಲ
ಬಲ್ಳಿಕ ನಾಲ್ಕು ಮಾಸ ಮುಗಿಯಲು ತೆ
ರಳಿದನು ಅಲ್ಲಿಂದ ಸಿದ್ಧಗಿರಿಯ ಗವಿಯೊಳಗೆ
ನಿಳಯ ಮಾಡ್ದ ಮೂರುತಿಂಗಳು      ೧೯೮

ಕಟ್ಟಿಸಿದನಾ ಮ್ಯಾಲೆ ಮಂಟಪವ ಬಗಳಗುಡಿಯ
ಕಟ್ಟೆಗಳ ನಾಲ್ಕು ಐದನು
ಇಟ್ಟ ಕ್ಷೇತ್ರಪಾಲ ದುರ್ಗಿ ಭೈರವನು ಗಣಪತೆಂದು
ಮುಟ್ಟಿ ಆವರಣ ದೇವತೆರ  ೧೯೯

ಬಗಳೆ ಬ್ರಹ್ಮಾಸ್ತ್ರ ಚಕ್ರ ಆಗಮೋಕ್ತದಿಂದ ಹಾಕಿ
ಬಗಳೆ ಚಿದಾನಂದೇಶ್ವರಿ
ಬಗೆದು ಪ್ರತಿಷ್ಠ ಮಾಡಿ ವ್ಯಾಘ್ರ ವಾಹನವನಿಟ್ಟು
ಅಗಿಸಿ ಮಾಡ್ಡ ಮೂರು ತೀರ್ಥವ      ೨೦೦

ಕೋಟಿತೀರ್ಥವೆಂಬುದೊಂದು ಬಗಳ ಪುಷ್ಕರಣೆಯೊಂದು
ಸಾಟಿಯಿಲ್ಲದಲೆ ಇರುತಿಹ ಮಾಡ
ಗೀಟ ಅಂಜಿಕೆಯು ಬ್ರಹ್ಮರಾಕ್ಷಸಗಳು ನಿ
ರ್ಧೂಟ ಪರಮ ಬ್ರಹ್ಮ ತೀರ್ಥ         ೨೦೧

ಇದ್ದಸ್ಥಳಕೆ ಚಿದಾನಂದ ಕ್ಷೇತ್ರವೆಂದು ಹೆಸರನಿಟ್ಟು
ಸಿದ್ಧಗಿರಿಯೆಂದು ಗಿರಿಯು
ಸಿದ್ಧವಾಗಿ ಹೆಸರನಿಟ್ಟು ವಾಸ ಮಾಡ್ದನಲ್ಲಿ ಯೋಗ
ಸಿದ್ಧ ಆತ್ಮನೀಗ ಗಿರಿಯಲಿ  ೨೦೨

ಬಗಳಚಕ್ರ ಸೇವೆವಂದು ಮಂಡಲವ ಮಾಡಿದರೆ
ಬಗೆಬಗೆಯ ಭೂತಪ್ರೇತವು
ಅಗಲದಂತ ಬ್ರಹ್ಮತಿಗಳು ಬ್ರಹ್ಮರಾಕ್ಷಸವು ಸರ್ವ
ತೆಗಿವವು ಸಂಶಯಿಲ್ಲದೆ      ೨೦೩

ಮದವಿಗೆಯು ಮುಂಜಿಗೆಯು ಬಂಜಿಗೆಯು ವಿದ್ಯೆಕೆಯು
ಕದನಕೆಯು ಮಂತ್ರವಾದಕೆ
ವಿಧವಿಧದ ಕ್ರಿಯೆಕೆಯು ವ್ಯಾಪಾರಕ್ಕೆ ರೋಗಕೆಯು
ಒದವಿ ಬಗಳ ಸೇವೆ ಮಾಡ್ದದು        ೨೦೪

ತಪ್ಪದಾಗುವವು ಮನವು ಒಪ್ಪಿ ಮಾಡೆ ಸಕಲ ಕಾಮ್ಯ
ಇಪ್ಪ ಮೂರು ತೀರ್ಥದಲ್ಲಿಯು
ಕೊಪ್ಪೆಬಿಲ್ವ ಪತ್ರಿ ಹಾಕೆ ಒಂದು ತೇಲದಿಹವು ಬಗಳ
ಇಪ್ಪ ಕ್ಷೇತ್ರಮಹಿಮೆಯಿಂದಲಿ          ೨೦೫

ಈ ಪರಿಯಲಿ ಹೇಳಿದನು ದೇವಿಯ ಮಹಾತ್ಮೆಯನು
ಓಪಿ ಚಿದಾನಂದ ಲಹರೆಯು
ಪಾಪಹರವು ಆದ ಆಧ್ಯಾತ್ಮ ಶತಕ ಬಗಳ ಶತಕ
ರೂಪಿಸಿದ ಜಗಕೆ ಬಳಿಕನು    ೨೦೬

ತತ್ವ ಸವಾಯಿಯನೀಗ ತತ್ವ ಬ್ರಹ್ಮೋಪದೇಶ
ತತ್ವದೊಳಗೆ ಸಾರವಾಗಿಯು
ತತ್ವಚೌಪದನವೀಗ ತತ್ವಕೀರ್ತನೆಯನೀಗ
ಮತ್ತೆ ಹೇಳ್ದ ಹತ್ತುಸಾವಿರ೨೦೭

ಬಗಳ ಕೀರ್ತಿನೆಗಳನೀಗ ಒಂದು ಸಾವಿರವು ಹೇಳ್ದ
ವಗೆದು ತತ್ವನೀತಿ ಪದ್ಯವ
ಮುಗಿಸಿದನು ಸಾವಿರದಲಿ ಚಿದಾನಂದ ರಗಳಿಯನು
ಒಗುವ ಆನಂದದಿಂದಲಿ      ೨೦೮

ಕಥಾಸಾಗರದ ಗ್ರಂಥ ನೂರುಕಥೆಯ ಮಂಗಳಾಗಿ
ಶಿಥಿಲದಿಂದ ಹೇಳಿ ಮ್ಯಾಲೆಯು
ಮತಿಯುವಂತರಾಡಿಕೊಳ್ಳೆ ಜೀವಮುಕ್ತಿಯಾಟವನ್ನು
ಹಿತವು ಆಗಿ ನಿರ್ಮಿಸಿದನು    ೨೦೯

ಇದ್ದ ಸಿದ್ದಪರ್ವತದಲಿ ಬಗಳಾಂಬ ಸನ್ನಿಧಿಯಲಿ
ಶುದ್ಧಬ್ರಹ್ಮವಾಗಿ ಜನಗಳ
ಸಿದ್ಧಮುಕ್ತಿ ಹೊಂದಿಸುತ್ತ ಬಾಲಕನ ಮತ್ತವಸ್ಥೆ
ಲಿದ್ದ ಪಿಶಾಚಿಯವಸ್ಥೆಲಿ    ೨೧೦

ನೀಲತೋಯ ಮಧ್ಯವಿಹ ನಿಗಿನಿಗಿ ಬ್ರಹ್ಮವಾಗಿ
ಕಾಲತ್ರಯಗಳೇನು ಕಾಣದೆ
ಬಾಳಬಯಲೆ ಆಗಿ ಸಮಾಧಿಯಲ್ಲಿ ಬಗಳ ಚಕ್ರದಲ್ಲಿ
ಹೇಳೆ ಐಕ್ಯವಾಗಿ ಹೋದನು೨೧೧

ಇದನು ಕೇಳಿದವರು ಈಗ ಇದರಂತೆಯು ಆಗುವರು
ಇದನು ವೋದಲಾದೇಶವು
ಸದಾ ಸುಖಿಯಲಿರುತಿಹರು ಸದುಭಕುತಿಯಲಿಂದ ಕೇಳೆ
ಚದುರಹವು ನಾನರಿಷ್ಟವು   ೨೧೨

ಓದಿ ಇದನು ಭಸ್ಮ ಕೊಂಡು ಓದಲಿಕ್ಕೆ ನಾನಾ ಗ್ರಹಗಳು
ಹಾದಿಹಿಡಿವು ನಾನಾ ರೋಗವು
ಬೂದಿಯಹುದು ದುಸ್ವಪ್ನ ಸುಸ್ವಪ್ನವಾಗುವವು
ಸಾಧನಹವು ನಾನವಶ್ಯವು    ೨೧೩

ಇಲ್ಲಿಗೇಳು ಸಂಧಿಯಾಯಿತು ಏಳು ಸಂಧಿಯಲಿಂದ
ಯಲ್ಲಳಾದ ಬಗಳ ದಯದಲಿ
ಸೊಲ್ಲಿಸಿದ ಚಿದಾನಂದ ಅವಧೂತ ಚರಿತವನ್ನು
ಬಾಲ ಐಯ್ಯಪ್ಪ ನುಡಿದನು            ೨೧೪

ಮಂಗಳವು ಕೇಳಿದರಿಗೆ ಮಂಗಳವು ಹೇಳಿದರಿಗೆ
ಮಂಗಳವು ಸ್ತ್ರೀಯ ದೇಶಕೆ
ಮಂಗಳವು ಚಿದಾನಂದ ಅವಧೂತ ಚಾರಿತ್ರ
ಮಂಗಳಕೆ ಮಂಗಳೆಂದನು     ೨೧೫

ಇತಿ ಶ್ರೀಮತ್ಪರಮಹಂಸ ಪರಿವ್ರಾಜಕಾಚಾರ್ಯ
ಶ್ರೀ ಚಿದಾನಂದ ಅವಧೂತ
ಸದ್ಗುರುವರ್ಯ ಚರಣಕಮಲ ಭೃಮರ
ಅಯ್ಯಪ್ಪ ವಿರಚಿತ
ಚಿದಾನಂದ ಸದ್ಗುರು ಅವಧೂತ ಚಾರಿತ್ರ ಸಮಾಪ್ತಂ
ಅಂತು ಸಂಧಿ ೭ಕ್ಕೆ ಪದ ೯೭೨ಕ್ಕಂ ಮಂಗಲಮಹಾಶ್ರೀ ಶ್ರೀ ಶ್ರೀ