ರಾಗ ತಮ್ಮಿಚ್ಛೆ ತಾಳ ರೂಪಕ

ಕೇಳಿಜನ ಸರ್ವವೆಲ್ಲ ಚಿದಾನಂದ ಅವಧೂತ
ಲೋಲ ರಾಜಯೋಗಿ ಚರಿತವಾ        ಪಲ್ಲವಿ

ಗುರುವ ಬಲಗೊಂಬೆನು ಮೊದಲು
ಗುರುವ ಚಾರಿತ್ರಕೆಯು ಗುರುಗಳೊಳಗೆ ಗುರುಗಳೆನಿಪನು
ಗುರುಚಿದಾನಂದ ಅವಧೂತ ರಾಜಯೋಗಿ ಚರಿತ
ಗುರುವನುತಿಸಿರೆಂದು ನಮಿಸುವೆನು   

ಸಿದ್ದಿವಿನಾಯಕನೆ ಬ್ರಹ್ಮಾದ್ಯರಿಗೆ ಮುನಿಗಳಿಗೆ
ಸಿದ್ಧಿ ಬಹಳಮಾಡಿಕೊಡುವನೆ
ಸಿದ್ಧಚಿದಾನಂದ ಅವಧೂತ ಚರಿತ ಹೇಳ್ವದಕ್ಕೆ
ಬುದ್ದಿಗೊಡುವಿರೆಂದು ನಮಿಸುವೆ    

ಅಂಬನೊಳು ಅಂಬನಾದ ಸಿದ್ದಾದ್ರಿ ವಾಸವಿಹ
ಅಂಬಗುರು ಚಾರಿತ್ರಕೆ
ಅಂಬ ಚಿದಾನಂದ ಅವಧೂತ ರಾಜಗೊಲಿದ
ಬಗಳಾಂಬ ಬುದ್ದಿಯನ್ನೀವುದು      

ಸಾಧುಗಳಿಗೆ ಸಜ್ಜನರಿಗೆ ಸರ್ವರಿಗೆ ಆಧ್ಯಾತ್ಮ
ಬೋಧಿಸುವ ಬಹಳ ದಯರಿಗೆ
ವಾದ ದೂರರಿಗೆ ವಸ್ತುವಾಗಿ ತಾವೆ ಈ ಹರವರ
ಪಾದಕೆಯು ನಾನು ನಮಿಸುವೆ          

ಹುಚ್ಚರಿಗೆ ಹುಡುಗರಿಗೆ ತುಚ್ಚರಿಗೆ ತುಡುಗರಿಗೆ
ನುಚ್ಚಕರಿಗೆ ನಷ್ಟರಿಂಗೆಯು
ಹಚ್ಚು ಬಾಯಿಯವರಿಗೆಯು ಗುರುವ ಚರಿತ ಹೇಳ್ವೆನೆಂದು
ಸ್ವಚ್ಛವಾಗಿ ಪಾದಕೆರಗುವೆ 

ನಿಂದಕರಿಗೆ ನಿತ್ಯಕಾಲ ಸಂದಿಗೊಂದಿ ಹುಡುಕುವವರಿಗೆ
ಎಂದಿಗೆಯೂ ದಾನವಿಲ್ದಗೆ
ತಂದೆತಾಯಿ ಗರಿಮಿದಂಥ ಬ್ರಷ್ಟನೀಚ ಅಧಮನಿಗೆ
ವಂದಿಸುತ ನಾನು ಹೇಳುವೆನು         

ಉತ್ತಮರಿಗೆ ನಡೆವಳಿಗೆ ಒಳ್ಳೆ ಮಾತು ಕೇಳ್ವಳಿಗೆ
ಸತ್ಯಮಾತು ಹೇಳ್ವಳಿಗೆಯು
ಮತ್ತೆ ದೇವ ಬ್ರಾಹ್ಮರಿಗೆ ಗಂಡಗೇಯು ನಡೆವ
ಸತ್ಪುತ್ರಳಿಗೆ ನಾನು ನಮಿಸುವೆ         

ಆಗಿ ಬಾರದವರಿಗೆಯೂ ಮನೆಯ ಸುದ್ದಿ ಹೇಳ್ವಳಿಗೆ
ಹೋಗಿ ಹೋಗಿ ಬಹಿರದೊಳಗೆಯು
ವಾಗರಾವು ರೊಟ್ಟಿಕಡಬು ಕದ್ದಕೊಂಡು ತಿಂಬಳಿಗೆ
ಸಾಗರಬಿದ್ದು ನಮಿಸುವೆ    

ನಿಂತರಿಗೆ ಕುಳಿತರಿಗೆ ಗೋಡೆಕಂಭಕಾತರಿಗೆ
ಅಂತು ಕಣ್ಣುಮುಚ್ಚಿ ಬಾಯನು
ಇಂತು ತೆರದು ಚಿಂತೆ ಮರೆದು ನೊಣವು ಹೊಕ್ಕು ಹೊರಡುವರಿಗೆ ಬಹಳ
ಅಂತು ನಾನು ಶರಣು ಮಾಡುವೆ      

ತ್ರಿಣಗಳಿಗೆ ಕಡ್ಡಿ ಕಾಷ್ಟ ಮುಳ್ಳುಗಳಿಗೆ ಕಲ್ಲುಗಳಿಗೆ
ಕುಳ್ಳುಗಳಿಗೆ ಕುಣಿಗಳಿಂಗೆಯು
ಮಣಿಗಳಿಗೆ ಮಂಚಕೆಯು ತಲಿಯ ಮಣಿದು ಗುರುವ ಚರಿತ
ವೆನಗೆ ಸಾಧ್ಯವಾಗಲೆಂದೆನು  ೧೦

ಹಿರಿಯಹಟ್ಟಿ ಕುಲಕರಣಿ ರುಗ್ವೇದಿ ಅತ್ರಿರುಷಿಯ
ರಿರುವ ಶಾಂಡಲ್ಯ ಗೋತ್ರದ
ಪರಮ ತಿಳವಿ ಕುಳ್ಳ ಪೊಂಪಣ್ಣನುದರದಲ್ಲಿ
ಉದ್ಭವಿಸಿದಯ್ಯಪ್ಪನೆಂಬನು           ೧೧

ಚಿದಾನಂದ ಅವಧೂತ ರಾಜಯೋಗಿ ಚಾರಿತ್ರ
ಸುಧಾವರುಷವನ್ನೆ ಸುರಿವುದು
ಮುದದಲಿಂದ ಅವರ ಶಿಷ್ಯನೆಂಬಾತ
ಸಾಧುಕಥೆಯ ಜಗಕೆ ಒರೆದನು           ೧೨

ವೇದಶಿರ ಹನುಮಯೋಗಿ ಪಾದಪದ್ಮ ಸ್ಮರಿಸುತಿಹ
ಸಾಧುಗಳೊಳು ಸಾಧು ಎನಿಪನು
ವಾದತೀತ ವಸ್ತುವಾದ ಶಿವಾನಂದ ರಾಜಯೋಗಿ
ಯಾದನಿಗೆ ನಮೋ ಎಂದೆನು೧೩

ಆತನಿಗೆ ಶಿಷ್ಯನಾರು ಎಂದೆನಲು ಪೇಳುವೆನು
ಖ್ಯಾತ ಚಿದಾನಂದ ಯೋಗಿಯು
ಭೂತಳದಿ ಪ್ರಕ್ಯಾತನಾತ ಸರ್ವಯೋಗದಲ್ಲಿ
ಆತನಿಗೆ ನಮೋ ಎಂಬೆನು     ೧೪

ಅವರ ಶಿಷ್ಯ ಚಿದಾನಂದ ಅವಧೂತ ರಾಜಯೋಗಿ
ಭುವನದಲ್ಲಿ ಅಸಮನೆನಿಸಿಹ
ಜವನಗಿವನ ಕಾಲಲೊದ್ದು ಸಾಧುಗಳಿಗೆ ತೌರುವಾಗಿ
[1]ಭುವಿ[2]ಯೊಳಗೆ ಕರೆದುಕೊಂಡನು      ೧೫

ಆತನ ಚರಣಕಮಲ ಹೃದಯದಲ್ಲಿ ಇಷ್ಟು ನಾನು
ಪೂತಪವಿತ್ರ ಚರಿತವಾ
ಪಾತಕವು ನೂರು ಹೋಗಿ ಭವಾರಣ್ಯ ಸುಡುವುದಾಗಿ
ಭೂತಳಕೆ ಹೇಳ್ವೆ ವಿವರದಿ   ೧೬

ಶಿದ್ಧಪರ್ವತದಲ್ಲಿ ವಾಸವಿಹ ಬಗಳಚರಣ
ಬದ್ಧ ಮಾಡಿ ಹೃದಯದಲ್ಲಿಯೇ
ಶಿದ್ಧರಾಜಯೋಗಿ ಚಿದಾನಂದ ಅವಧೂತ ಚರಿತ
ಶುದ್ಧವಾಗಿ ಜಗಕೆವರೆದನು  ೧೭

ಇದನು ಕೇಳೆ ಸರ್ವಮುಕ್ತಿ ಐಶ್ವರ್ಯಸಂಪದಹವು
ಮುದುವಿಮುಂಜ ಶುಭವು ಶೋಭನ
ಹದನ ಇಲ್ಲ ದಾಗುವವು ಹೃದಯದಲ್ಲಿ ಗುರುವರನ
ಚದಲ ಧಾರೆ ಕೇಳಿ ಜನಗಳು  ೧೮

ಪಾತಕಹರಾದ ಗುರುವರನ ಚರಿತಕೆಯು ಪೇಳ್ವೆ
ಅತಿಶಯಾಗಿ ಏಳು ಸಂಧಿಯು
ಪ್ರಥಮವೊರೆವೆ ಬಾಲ್ಯ ವಿವರ ದ್ವಿತೀಯ ಕ್ಷೇತ್ರ ಸಂಚಾರ
ತೃತಿಯ ಸದ್ಗುರು ಕಟಾಕ್ಷವ            ೧೯

ನಾಲಕನೆದು ಹಠದಯೋಗ ಐದನೆಯ ರಾಜಯೋಗ
ಲೀಲ ಕಾಶಿಯಾತ್ರೆ ಆರನೇದು
ಕಾಲಕರ್ಮ ತೀತವಾದ ಅವಧೂತ ಚಾರಿತ್ರ
ಏಳನೇದು ಎನಿಸಿಕೊಂಬುದು೨೦

ಗುರು ಚಿದಾನಂದ ಅವಧೂತ ಚಾರಿತ್ರದಲ್ಲಿ
ಒರೆವೆನೀಗ ಬಾಲಲೀಲೆಯ
ಪರಮ ಸಾಧುಗಳ ಕಿವಿಗೆ ಪೂರ್ಣಾನಂದವಾಗುವೋಲು
ಸುರುವೆನು ಭಾವಭಕ್ತಿಲಿ      ೨೧

ತನ್ನನೀಗ ತಾನ ತಿಳಿದು ತಾನಾದನೆಂಬರಿಗೆ
ಮುನ್ನ ಭವವನೆಲ್ಲ ನೀಗಿದ
ಉನ್ನತದ ಸಾಧಕರಿಗೆ ಉತ್ತೋತ್ತುಮರಿಗೆ ಇದು
ಚೆನ್ನಾಗಾದರದಿ ಹೇಳುವುದು           ೨೨

ಸಾಧುನಿಂದಕನಿಗೆ ಮುಕ್ತಿ ಆಗಿ ಬಾರದನಿಗೆ ತತ್ವ
ಬೋಧೆ ಕಿವಿಯ ಹುಗದಲೀಹಗೆ
ಕ್ರೋಧದಲ್ಲಿ ಸುಡುವನಿಗೆ ಕುಹಕ ಕುಚೋದ್ಯನಿಗಿದರ
ಹಾದಿಯನ್ನೇ ಉಸುರಲಾಗದು         ೨೩

ಹಿರಿಯ ಕಿರಿಯರೆಲ್ಲ ಕೇಳಿ ಹಾಳುಹರಟೆ ಗೋಷ್ಠಿ ಬಿಟ್ಟು
ಮರೆವೆ ತೂಕಡಿಕೆ ವರ್ಜಿಸಿ
ಗುರು ಚಿದಾನಂದ ಅವಧೂತ ಚರಿತ್ರ ವಿಸ್ತರವ
ನೊರೆವೆ ಸಜ್ಜನರು ಅರಿವವೊಲು      ೨೪

ಧರಯೊಳಧಿಕವಾದ ಕಿಲ್ಲೆ ಆದವಾನಿ ಸ್ಥಳಕೆ ಸನಿಯ
ಹಿರಿಯ ಹರಿವಾಣ ಗ್ರಾಮಕೆ
ಕರಣಿಕಾನು ಲಕ್ಷ್ಮೀಪತಿಯು ಪತ್ನಿ ಅನ್ನಮ್ಮ ಶ್ರೀ
ನರಹರಿಯ ಭಕ್ತಿಲತುಳರು   ೨೫

ಹುಟ್ಟಿದವರ ಗರ್ಭದಲ್ಲಿ ವೀರ ಸಾಧು ಸತ್ಪುರುಷ
ಮುಟ್ಟಿಯತುಳಬಲನು ಸುಂದರ
ಶಿಷ್ಟನುದಿಸೆ ಮಾತಾಪಿತರು ಝೇಂಕಪ್ಪನು ಎಂದು
ಇಟ್ಟು ನಾಮಕರ ಮಾಡ್ದರು           ೨೬

ಮುಂದೆ ಆಗೆ ನಾಲ್ಕು ವರುಷ ಅವರ ಅಣ್ಣ ನರಸಪ್ಪ
ನಂದು ಬಾಲಮಂತ್ರ ಹೇಳ್ದನು
ನಿಂದು ಕುಳಿತು ಮಲಗಿ ನಡೆದಾಡುತಾಡುತ ಮಂತ್ರ ಜಪಿಸಿ
ಬಂದವು ಪದನು ಬಾಯಿಗೆ   ೨೭

ಪಡೆದ ತಾಯಿ ಕಂಡು ಆಶ್ಚರ್ಯವಾಗಿ ಪದನು ಹೇಳು
ಕೊಡುವೆ ನಿನಗೆ ಓಲೆ ಎಂದಳು
ನುಡಿಯಲತ್ತ ಬರುತಲಿಹವು ನರಸಿಂಹ ಕೀರ್ತನೆಗಳು
ಒಡನೆ ಬರೆದುಕೊಂಬಳಾಗಲು           ೨೮

ಹೇಳು ಪದನ ಅರ್ಥವನ್ನು ಓಲೆ ಕೊಡುವೆನೆಂಬೆನೆನಲು
ಆಲಿಸೆಂದು ಹೇಳ್ವ ಅರ್ಥವ ಬ
ಹಳ ಜನರು ಆಶ್ಚರ್ಯವಾಗಿ ನೋಡುತಿಹರು ಬಾಲಕನ
ಲೀಲೆ ಹೊಸತು ಇದು ಎಂಬರು         ೨೯

ಮನಿಯ ಬಿಟ್ಟು ಬ್ಯಾರಾಗಿ ಕೆಂಚರಾವುತನೆಂಬನ
ಘನಗೃಹವು ಇರಲು ಅದರೊಳು
ದನವ ಕಟ್ಟೊ [3]ಕೊಠಡಿ[4]ಯಲ್ಲಿ ಹಂಡೆತ್ತು ಕಟ್ಟೊಕಂಭ
ತನತನಗೆ ಬೆಂಕಿ ಉಗುಳ್ವುದು           ೩೦

ಆ ಮನಿಯ ವಿವರ ಕೇಳಿ ಬಂದು ಸೇರಿದವರು ಎಲ್ಲ
ತಾ ಮತ್ತೆ ಸುತ್ತು ಕೆಟ್ಟೆಯು
ಭೂಮಿ ಪಾಲಾಗಲಿಕ್ಕೆ ಹಾಳು ಮನಿಯು ಇರುತಿರಲು
ಕಾಮಿಸಿದಳು ಅನ್ನಮ್ಮನು  ೩೧

ಸಾವೆ ನೀ ಮನೆಯೊಳಗೆ ಕೂಸು ನಾನೆಂದು ಎಲ್ಲ
ಓವಿ ಬಳಿದು ಗೋಡೆ ಸಾರಿಸಿ
ಈವಳಾಗಲಿಕ್ಕೆ ಬಂದಳಾಗ ಗಂಡಸುತರು ಸಹ
ತಾವು ಇದ್ದರಾಗ ಗೃಹದೊಳು         ೩೨

ಭರಿತವಾಗಿ ಕಂಭದಲ್ಲಿ ಏಳು ಮಕ್ಕಳಾ ತಾಯಿ
ಇರಲುಗೊಡಳು ಮನೆಯೊಳಾರನು
ಚರಣ ಹಿಡಿದು ಎಳೆದು ಬಿಟ್ಟರೊಬ್ಬರೂ ನಿಲ್ಲರಲ್ಲಿ
ಹರುಷವಿದ್ದಳಣ್ಣಮ್ಮನು  ೩೩

ಹಂಡೆತ್ತು ಕಟ್ಟೊ ಕಂಭ ಉಗುಳುತಿಹುದು ಬಹಳ ಬೆಂಕಿ
ಕೆಂಡ ಕೆಂಡವನ್ನು ಸೂಸುತ
ಕಂಡು ಆಶ್ಚರ್ಯವಾಗಿ ತನ್ನೊಳಗೆ ಮುಸುಮುಸಿಯ
ಗೊಂಡು ಆನಂದವಿರ್ದನು    ೩೪

ಚಂದ್ರಜ್ಯೋತಿಗಳು ಕಂಭದೊಳಗಿಂದ ಹೊರಡುತಿಹವು
ಚಂದ್ರ ಬಿಂಬಗಳು ತೋರ್ಪವು
ಸಂದು ಇಲ್ಲದುದರುವಾವು ಸ್ವರ್ಣದ ಪುಷ್ಪಗಳು
ನಿಂದು ನೋಡಿ ನಗುತಲೀಹನು         ೩೫

ಏಳು ಮಕ್ಕಳಾ ತಾಯಿ ಭೂತವಲ್ಲ ಪಿಶಾಚಲ್ಲ
ಲೋಲ ರಾಜರಾಜೇಶ್ವರಿ
ಬಾಲಕರು ಸಪ್ತ ಮಾತೃಕೆಗಳು ಆಕಿಗೆಯು
ಹೇಳುವೆನು ಅವರ ನಾಮವ೩೬

ವಾರಾಹಿ ನಾರಸಿಂಹ ವೈಷ್ಣವಿಯು ಬ್ರಹ್ಮಿಕೌ
ಮಾರಿ ಮತ್ತೆ ಮಾಹೇಶ್ವರಿ
ಘೋರ ಇಂದ್ರಾಣಿ ಸಪ್ತ ಬಾಲಕರಿಗೆ ತಾಯಿಯೆನಿಸಿ
ಕಾರಣಿಯು ಕರೆಸಿಕೊಂಬಳು೩೭

ಮಿರುಗುತಿರಲು ನಾನಬೆಳಗು ಹೊರಸಿನಲ್ಲಿ ತಾಯಿ ಮಗ್ಗು
ಲಿರುತ ನೋಡೆ ಅಮ್ಮ ಕಂಭವು
ಸುರಿವುತಿದೆ ಚಂದ್ರಜ್ಯೋತಿ ಅಕೋ ಎನಲು ಸುಮ್ಮಗೆಯು
ಒರಗಿಕೊಳ್ಳೊ ಎಂದು ಬಡಿವಳು       ೩೮

ಬೆದರುವಳು ಏಳು ಮಕ್ಕಳ ತಾಯಿ ಎಂದು ಶಿಶುವಿ
ಘ್ಹದ ಏನಹುದೋ ಎನುತಲಿ
ಹುದುಗುವಳು ಮುಸುಕಿನೊಳಗೆ ದೇವಿ ಕಾಯಿ ಎನುತ ಮಗನ
ಬದಿಗೆ ಎಳೆದು ಹೊದ್ದಿಸುವಳು         ೩೯

ಅಮ್ಮನೀಗ ನಡುಗಲಿಕ್ಕೆ ತನಗೆ ಈಗ ಅರಿಕೆ ಇಹುದು
ಅಮ್ಮ ಅಂಜಿಸುತ್ತಳೆನಗೆಯು
ಅಮ್ಮನಿಲ್ಲವೆನಗೆ ಈಗ ಅಮ್ಮ ಗೇಳ್ಹ ಬಾರದೆಂದು
ಸುಮ್ಮನಿಹನು ಕಂಭ ನೋಡುತ        ೪೦

ಬೆದರಿಕೆಯು ತನಗೆ ಇಲ್ಲ ಬೈತನಕ ಬೆಳತನಕ
ಅದನೆ ನೋಡುತಿಹನು ಖುಸಿಯಲಿ
ಇದುವೆ ಅಲ್ಲದಲೆ ಕಣ್ಣು ಮುಚ್ಚಲಿಕ್ಕೆ ಬೆಳಗುತಿಹವು
ವಿಧವಿಧದ ಕಳೆಯು ದೇಹದಿ            ೪೧

ತನಗೆ ಅಲ್ಲದಲೆ ತಾಯಿ ಕಣ್ಗೆ ಏನೂ ತೋರದಿಹವು
ಜಿನಸುಜಿನಸಿನ ಕಳೆಗಳು
ಜನನಿ ಮಗುವು ಅಂಜುವದೆಂದು ನೋಟವನ್ನೆ ಕೇಳ ಹೋಗೆ
ತನಯಗಿಲ್ಲ ಭಯವು ಎಂಬರು         ೪೨

ಕಣ್ಣು ತೆರೆದು ಹೊರಗೆ ನೋಡೆ ಬೆಳ್ಳಿ ಹೂವು ಸ್ವರ್ಣರಿಗೆ
ರನ್ನನಾಗರವು ಮುತ್ತಿನ
ಉನ್ನತದ ಗೊಂಚಲಗಳು ತೋರೆ ಆನಂದದಲ್ಲಿ
ತಮ್ಮೊಳಗೆ ಸುಖಿಸುತಿದ್ದನು            ೪೩

ಬಾಲಮಂತ್ರ ನಾಲಿಗೆಯಲಿ ದಿವವು ರಾತ್ರಿ ನುಡಿವುತಿರಲು
ಬಾಲರಂತೆ ಕಂಭದಮ್ಮನು
ಮ್ಯಾಳವಾಗಿ ಆಡುತಿಹಳು ನೆರೆಮನಿ ಭವಾನಿಯಾಗಿ
ಹಾಲು ಕಡಲೆ ಖೊಬ್ಬರಿ ಕೊಡುವಳು೪೪

ರಾತ್ರಿ ತಾಯಿ ಎಬ್ಬಿಸಿದೊಡೆ ಅಂಜೊಳೆಂದು ಹೊರಸನಿಳಿದು
ಮೂತ್ರ ಹೊರಕಡಿಗೆ ಹೋಗಲು
ಮಾತೃವಾಗಿ ಹಿಂದೆ ಬಹಳು ಬಂದಿಯಾಕೆಂದು ಬೈಯೆ
ಯಾತಕೆಯು ಬೈವಿ ಎಂಬಳು            ೪೫

ನೀನು ಅಂಜುಬುರುಕಿ ಅಂಜುವೆಯು ಎಂದು ಎಬ್ಬಿಸದೆ
ನಾನು ಬರಲು ಹಿಂದೆ ಬಂದೆಯು
ಏನು ಮಾತ್ರ ಅಂಜುತಿಹನೆ ಎನುತ ಕುಂಡೆ ತೊಳೆದು ಕೈಯ
ತಾನು ಹಿಡಿದು ಕರೆದುವಯ್ವಳು      ೪೬

ಬಂದು ಹಾಸಿಕೆಯ ಸವರಿ ತಾಯಿ ಮಲಗಿಹುದ ಕಂಡು
ಇಂದು ಆರೊ ಈಕೆ ಈಗಲು
ಮುಂದೆ ಉದಯವಾದ ಹಿಂದೆ ನಾನು ಕೇಳುವೆನು
ಎಂದು ಅಂದು ಮಲಗಿದನು ಮೌನದಿ೪೭

ತರಣಿ ಉದಯವಾದ ಮ್ಯಾಲೆ ತಾಯನೀಗ ಕೇಳಿದನು
ಮರೆಸಿ ಹೋಗಲು ಎನ್ನ ಸಂಗಡ
ಬರುವರೇನೆ ಅಂಜುಬುರಕಿ ಎನಲು ಬಂದಡಿಲ್ಲವೆನಲು
ಖರೆಯ ಕಂಭದಾಕೆ ಎಂದನು೪೮

ಅಂಬನಾದಾಳು ಎಂದು ತಿಳಿದು ಮನಸಿನಲ್ಲಿ ಆಗೆ
ತುಂಬಿ ಸಂತೋಷದಿಂದಲಿ
ಸಂಭ್ರಮದಲಿದ್ದ ದೇವಿ ಬೆಂಬಿಡದೆ ಹಿಂದೆಹಿಂದೆ
ಹಂಬಲ್ಹತ್ತಿ ತಿರುಗುತಿದ್ದಳು         ೪೯

ಮಾತೃವಿನ ಮಗ್ಗುಲೊಳಿರಲು ರಾತ್ರಿ ಕಾಲಕಂಭಕೆಯು
ಘಾತ್ರವಾದ ಹಗ್ಗ ಕಟ್ಟಿಯೆ
ಪಾತ್ರದಾಕೆಯಾಗಿ ಉಯ್ಯಾಲೆಯಾಡುತಿಹುದು ಕಂಡು
ತಾಯ ಮಾತಾಡಿಸಿದನಾಗಳು         ೫೦

ಅಮ್ಮ ಪಾತರದ ಆಕೆ ಉಯ್ಯಾಲೆ ಆಡುತಹಳೆ
ಎಮ್ಮ ನಾಡಿಸೆನ್ನ ಆಕೆಗೆ
ನಿಮ್ಮ ಮಾತು ಕೇಳ್ವಳೆನಲು ಛೀ ಸುಮ್ಮನೊರಗು ಎಂದು
ಅಮ್ಮನೀಗ ಬಡಿವಳಾತನ   ೫೧

ಗದಗದನೆ ನಡುಗಿ ತಾಯಿ ಬೆದರ್ವೊಳೆಂದು ಸುಮ್ಮನಾಗಿ
ಹದುಳವಾಗಿ ದೇವಿ ನೋಡುತ
ಮುದದಿ ಹಾಡೆ ಅಂಬನೀಗ ಹಾಡಿಗೆಯು ಕಿವಿಯಗೊಟ್ಟು
ಪದವ ಕೇಳ್ವ ಇಂಪಾಗೆಯೆ  ೫೨

ಈ ಪರಿಯು ದಿನಂಪ್ರತೀಲಿ ಎತ್ತು ಕಟ್ಟೊ ಹೃಹದಿ ತೋರೆ
ಆ ಪರಿಯನೇನ ಹೇಳಲಿ
ದೀಪಿಸುತ ಸುಂದರದಿ ಕಡಗ ಕಂಕಣವು ಕರಕೆ
ರೂಪು ಬಹಳವಾಗಿ ಮೆರೆದಳು        ೫೩

ಭಾರಿ ತೋಳು ಬಡನಡುವು ತೋರ ಮುತ್ತಿನ ಚಲುವ ನತ್ತು
ಭಾರಿ ತೇಜ ಮಕುಟದಿಂದಲಿ
ವೀರಳೇಲು ಮಕ್ಕಳಿಂದ ಶಾರ್ಜ ಶರವು ಧನುವಿನಿಂದ
ಸೂರ್ಯನ ರ್ತೆರೆದಲಿದ್ದಳು೫೪

ಉಟ್ಟ ಹೇಮಾಂಬರದಿಂದ ತೊಟ್ಟ ರತ್ನ ಕಂಚುಕಿಂದ
ಪಟ್ಟೆ ಕುಂಕುಮದಿಂದಲಿ
ಬಿಟ್ಟ ಕಂಗಳಿಂದ ಕರ್ನಕಿಟ್ಟನಾಗೋತ್ತರಿಂದ
ಮುಟ್ಟಿ ಹೊಳೆಯುತಿರ್ದಳಂಬನು     ೫೫

ಇಂತು ಪಾತರದ ಆಕೆಯಾಗಿ ಉಯ್ಯಾಲೆಯಾಡಿ
ಅಂತು ಕಾಣುತಾನಂದದಿ
ಇಂತು ಮರಿಯಲಿಲ್ಲ ಬಾಲಮಂತ್ರ ನುಡಿಯುತಲಿ ದೃಷ್ಟಿ
ಯಂತು ಇಟ್ಟದ್ದನೆಂಬಗ   ೫೬

ದಿನಗಳೀಪರಿಯು ಐದು ವರುಷವಾಗಲಿಕ್ಕೆ ತರುಳ
ತನದ ಆಟದಿಂದ ಗೃಹದಲಿ
ಅನಿತು ಕೆಡಿಪ ಏನನಾದರನಿತು ಚಲುವಾನು ದೃಷ್ಯ
ತನವನೀಗ ಹೇಳೆ ಕೂಡದು  ೫೭

ಹುಡುಗರ ಸಂಗಡಾಡಿ ಹಸಿದು ಬಂದು ಜೋಳದನ್ನ
ಗಡಿಯೊಳು ಎರಡು ಕೈಯನು
ಬಿಡದಲಿಟ್ಟು ಎಡದ ಕೈಲೆ ಬಲದಕೈಲೆ ತಿಂದು ನೀರ
ಕುಡಿದು ಕೊಡದ ಒಳಗೆ ತೊಳಿವನು   ೫೮

ಒಂದು ದಿವಸ ಅಹೋಬಲದ ನಾರಸಿಂಹನ ಹುಡಿಗೆ
ಅಂದು ನೈವೇದ್ಯ ಒಯ್ಯುತ
ಇಂದು ಇವನ ಮನೆಯೊಳ್ಪಿಡಲು ಕದ್ದುಕೊಂಡು ತಿಂಬನಿಗ
ಎಂದು ಚೂಡಣ್ಣ ಅಣ್ಣನು೫೯

ನಡಿವನಲ್ಲ ಮಧ್ಯಬಿಸಿಲು ಎತ್ತಣಾಗದೆಂದೆನುತ
ನಡುಮನಿಯ ಕಂಭಕಸ್ತವ
ಬಿಡದೆ ಕಟ್ಟಿ ಅಡಿಗೆಯಲ್ಲ್ಲ ಅಟ್ಟದಲ್ಲಿ ಇಟ್ಟು ಬಾಗಿ
ಲಡಸಿ ಬೀಗಹಾಕಿ ಹೋದರು         ೬೦

ಅತ್ತಲಾಗಿ ನರಹರಿಯ ಗುಡಿಗೆ ಎಲ್ಲರೀಗ ಹೋಗೆ
ಇತ್ತಲಾಗಿ ಕೇಳಿ ವಿವರವ
ಅತ್ತುಕೊಳುತ ಕಂಭಕೆಯು ಕೈಯ ಕಟ್ಟಿಕೊಂಡು ಇರಲು
ಮತ್ತೆ ತಾಯಿವೊಲು ಬಂದಳು        ೬೧

ತಾಯಿ ಸೀರೆ ಕುಪ್ಪಸಂತೆ ತಾಯಿ ಒಡವೆ ಇಟ್ಟಂತೆ
ತಾಯಿರೂಪ ಆಗಿ ಬಂದಳು
ಹೇಯ ಪಾಪಿ ಕೂಸ ಕಂಭಕೆಯು  ಕಟ್ಟುವರೆಂದು
ನೋಯ್ವನೆಂದು ಬಿಚ್ಚಲಮ್ಮನು     ೬೨

ದೇವರುರಿಯ ದೇವರ ಮಾರಿಗೇಯು ಬೆಂಕಿ ಹಚ್ಚ
ಸಾವುತ್ತಿತ್ತು ಕೂಸು ಎನುತಲಿ
ಆವ ಕಟ್ಟಿದಾನು ನಿನ್ನ ಕಟ್ಟಿದ ಚೂಡಣ್ಣ ಬರಲಿ
ಜೀವ ಹೋಗುವಂತೆ ಬಡಿವೆನು         ೬೩

ಎಂದು ತಲೆಯ ನ್ಯಾವರಿಸಿ ತಂದು ಮಣಿಯನೀಗ ಹಾಕಿ
ಇಂದು ಕುಡರು ಎಂದು ಕೂಡ್ರಿಸಿ
ಅಂದು ಅಟ್ಟದಲ್ಲಿ ಇದ್ದ ಅಡಿಗೆ ತಳಿಗೆಯೊಳಗೆ ಬಡಿಸಿ
ಮುಂದಿಟ್ಟುಕೊಂಡಳಂಬನು            ೬೪

ನೆಲುವಿನ ಮ್ಯಾಲೆ ಇದ್ದ ತುಪ್ಪದ ಚರಿಗೆಯೊಳಗೆ
ಬಳ್ಳು ಬೆರಳ ಹಾಕಿ ನಾಲ್ಕನು
ಚೆಲುವ ಬಟ್ಟದಲ್ಲಿ ಹೆತ್ತ ತುಪ್ಪವನ್ನೆ ಹಾಕಿ ತಾನು
ಕಲಸಿ ಬಾಯೊಳಿಕ್ಕುತಿದ್ದಳು            ೬೫

ಬಿಕ್ಕುತಿರಲು ದುಃಖದಿಂದ ಸುಮ್ಮ್ಮನಿರು ಚೂಡಣ್ಣನ
ಸೊಕ್ಕು ಮುರುವೆ ಬರಲಿ ಎನುತಲಿ
ಹಕ್ಕರಿಕೆಯ ಪಲ್ಯ ಕಡಬು ಪರಮಾನ್ನ ಅನ್ನವನು
ಅಕ್ಕರದಿ ಉಣಿಸುತಿದ್ದಳು   ೬೬

ಧ್ಯಾನ ಧಾರಣೆಗೆ ನಿಲಿಕದಾ ಸಮಾಧಿಗೆಯು ತುಳಕ
ದೇನ ಮಾಡೆ ರೂಪು ತೋರದ
ಜ್ಞಾನ ನಿಧಿಯು ತನ್ನ ಮುಂದೆ ಇಟ್ಟು ಉಣಿಸುತಿಹ ಭಾಗ್ಯ
ವೇನನೆಂಬೆ ಸುಕೃತಿ ತಾನೆಯು           ೬೭

ತುತ್ತು ಮಾಡಿ ಉಣಿಸುತಿಹ ವ್ಯಾಳ್ಯ ಗೃಹದಿ ಪೂಜೆ ಮುಗಿಸಿ
ಮತ್ತೆ ಬಂದು ಬೀಗ ತೆರೆವುತ
ಎತ್ತಲ್ಹೋದನೆನುತದೇ ವ್ಯಾಳ್ಯ ಬುತ್ತಿ ತರುವೆನೆಂದು
ನಿತ್ತಾತ್ಮಳೊಳೆಯಕ್ಹೋದಳು          ೬೮

ನೋಡಿದಾರು ಸರ್ವರೆಲ್ಲ ಕಂಭಕಿಲ್ಲದಾನೆ ಕಂಡು
ಮಾಡೆನೇನ ಒಳಗೆ ಎನತಲಿ
ಗಾಢದಿಂದ ಒಳಿಯಕ್ಹೋಗೆ ಇಟ್ಟುಕೊಂಡುಂಬನ ಕಂಡು
ಪಾಡ ಮಾಡ್ದೆ ಅಣ್ಣ ಎಂದನು         ೬೯

ಕಳ್ಳಗಳ ಮಣಿಯ ಕಟ್ಟಿ ಹಾಕಿದುದನೆ ಬಿಶಿಕೊಂಡು
ಎಲ್ಲ ಅಟ್ಟದಲ್ಲಿ ಇಟ್ಟಿಹ
ಚಲುವಿನಿಂದ ಇಳಿಸಿ ಮೀಸಲಡಿಗೆ ಮಣಿಯ ಹಾಕಿಕೊಂಡು
ಒಳ್ಳೆ ಕೆಲಸ ಮಾಡಿದೆಂದನು೭೦

ಚೂಡಣ್ಣ ನೆಂಬಾತ ಬಡಿವೆನೆಂದು ಪುಂಡಿದಂಟ
ಜೋಡಾಗಿ ಕೊಂಡು ಬರಲಿಕೆ
ಮಾಡಿದೇನ ತಪ್ಪ ನಾನು ನೀನು ಬಿಟ್ಟು ಉಣಿಸಿದಲ್ಲೆ
ನೋಡುತಿದ್ದಿ ಎಂದ ತಾಯಿಗೆ           ೭೧

ಅಟ್ಟ ನಿಲಕೊದೇನೆ ಎನಗೆ ಇಟ್ಟುಕೊಂಡು ಉಣಲಿಕೆಯು
ಬಟ್ಟು ನೋಡೆ ತುಪ್ಪದೊಳಗೆಯು
ಇಷ್ಟು ದೊಡ್ಡವನೆ ನಾನು ಎಂದೆನಲು ಮಗನ ಮ್ಯಾಲೆ
ಸಿಟ್ಟು ಬಿಟ್ಟಳಾಗ ತಾಯಿಯು         ೭೨

ಸುಮ್ಮನಿರು ಹುಚ್ಚ ನೀನು ಎಮ್ಮ ಬೆರಳಿನಂತೆ ಅವೆ
ಅಮ್ಮನ ಮಗನು ಈತನು
ನಮ್ಮ ರಕ್ಷಿಪಳು ಈ ಮನಿಯೊಳೆಂತು ಉಳಿವೆವೆಂದು
ಸಮ್ಮತಾದರೀಗ ಎಲ್ಲರು   ೭೩

ನೋಟವನ್ನೆ ಕೇಳಹೋಗೆ ನೋಟಕಾರ್ತಿ ಹೇಳಿದಳು
ಕೂಟಹಳೆ ಅಂಬನೀಗಲು
ಸಾಟಿ ಇಲ್ಲ ನಿನ್ನ ಮಗಗೆ ಸಾವು ಇಲ್ಲ ಆತ
ನಾಟ ದೇವಿಯದು ಎಂದಳು೭೪

ಇಂತು ಇರುತಿರಲು ಕಪಾಳ ಗುರುವು ಆಗ ಸುತನಿಗೆಯು
ಅಂತು ತಾಯಿಹೋಗಲೀಸನು
ಮುಂತೆ ಮಲಗಿಕೊಳ್ಳೆನಲು ಮಲಗಿಕೊಳ್ಳೆ ನಿದೆ ಹತ್ತಿ
ಸಂತೆ ಕೂಡಲೂರಿಗ್ಹೋದಳು           ೭೫

 

[1] ಭೂಮಿ

[2] ಭೂಮಿ

[3] ಕೊಟ್ಟಡಿ

[4] ಕೊಟ್ಟಡಿ