.ಮಂಗಳಾರತಿ ಪದಗಳು*

ಆರತಿಯನೆತ್ತಿರಿರೆಲ್ಲ ಅಂಬಗೆ ಮಂ
ಗಳಾರತಿಯನೆತ್ತಿರಿ ಬಗಳಾಂಬಗೆ        ಪಲ್ಲವಿ

ಪಾಲನೆ ಭಕ್ತರ ಮಾಡುವಂಬಗ ರಿಪು
ನಾಲಿಗೆಯನು ಪಿಡಿದಿಹ ಅಂಬಗೆ       

ವೀರಮಂಡಿಯಲಿರುತಿಹ ಅಂಬಗೆ
ಶತ್ರು ಕ್ರೂರ ದೃಷ್ಟಿಲಿ ನೋಡುತಿಹ ಅಂಬಗೆ    

ಉಚ್ಚಿಯೆ ಖಡ್ಗವ ಬಿದರುವಂಬಗ
ಅವಡುಗಚ್ಚಿಯಕೊಂಡು ಇರುತಿಹ ಅಂಬಗ    

ಮರಣಕೆಯು ಮರಣವಾದ ಅಂಬಗ
ವೈರಿಚೂರ್ಣ ಮಾಡುತಿಹ ಅಂಬಗ   

ಸಿದ್ಧಪರ್ವತವಾಸಿ ಅಂಬನಿಗೆ ಸ್ವ
ಸಿದ್ಧ ಚಿದಾನಂದ ಬಗಳಾಂಬಗ        

ಜಯಮಂಗಲಂ ನಿತ್ಯ ಶುಭಮಂಗಲಂ
ಜಯಜಯತು ಜಗಜ್ಜನನಿ ಬಗಳಾಂಬಗೆ          ಪಲ್ಲವಿ

ಕಾಳಿಕೆಯು ಎನಿಸುತಲಖಿಳ ಮಧುಯಂಬುವನ
ಖೂಳಕೈಠಭರೆಂಬ ಅಸುರರುಗಳಾ
ತಾಳಿ ಪುರುಷತ್ವವನು ಸೀಳುತಲಿ ಮಸ್ತಕವ
ಹೋಳು ಸಹಸ್ರವ ಮಾಡ್ದ ಫಾಲಾಕ್ಷಗೆ          

ದುಷ್ಟಮಹಿಷಾಸುರನು ಅಷ್ಟದಿಕ್ಪಾಲಕರ
ಪಟ್ಟಣಕೆ ದೊರೆಯಾಗಿ ದೇವರ್ಕಳು
ಕಷ್ಟಪರಿಹರಿಸೆನುತ ನಿಷ್ಠೆಯಿಂ ಮೊರೆಯಿಡಲು
ಮಹಿಷನನು ಮಹಲಕ್ಷ್ಮಿಗೆ  

ಹಿರಿಯ ಶುಂಭನು ತಾನು ಕಿರಿಯ ನಿಶ್ಸುಂಭನು
ಸುರರ ಬಾಧಿಸಲವರು ಮೊರೆಯಿಡುತಿರೆ
ದುರುಳ ದೈತ್ಯರ ಶಿರವ ಹರಿದು ಹರುಷವ ತಾಳ್ದ
ಗುರು ಚಿದಾನಂದ ಭಾರತದೇವಿಗೇ    

ಬೆಳಗಿರಾರತಿಯನೀಗ ಭಾಗ್ಯದಂಬಗ
ಮುಂದೆ ಸುಳಿದು ಆರತಿಯನೆತ್ತಿ ಸೂರ್ಯದಂಬಗ           ಪಲ್ಲವಿ

ಮುತ್ತಿನೋಲೆ ಮೂಗುತಿಯು ಮುರಡಿಯಂಬಗ
ಢಾಲು ಕತ್ತಿಯನ್ನು ಏರಿಸಿಹ ಕಠಿಣದಂಬಗ      

ಪದಕ ಕುಂಡಲಲೊಲಹುತಿಹ ಪಂಡಿತಂಬಗ
ಶತ್ರು ಛಿದರು ಛಿದರು ಮಾಡುತಿಹ ಶೌರ್ಯದಂಬಗ       

ಶರಣದ್ವಾರ ಕಾಯ್ದುಯಿಹ ಸುಖದ ಅಂಬಗ
ಮುಕ್ತಿಶರಧಿ ಚಿದಾನಂದ ಬಗಳ ಶಾಂತದಂಬಗ  

ಜಯದೇವಿ ಜಸ್ಯದೇವಿ ಬಗಳಾಮುಖಿಯೆ
ಜಯವೆಂದು ಬೆಳದುವೆನು ಜಯಭಕ್ತ ಸುಖಿಯೆ ಪಲ್ಲವಿ

ಪೀತಾಂಬರ ಧಾರಣಿ ಪೀತಾಭೂಷಾಣಿ
ಪೀತಾಕುಂಡಲಹಾರಿ ಪೀತಾದಾಭರಣಿ
ಪೀತಾಪುಷ್ಪದಿ ನಿತ್ಯ ಪೀತೋಪಚರಣಿ
ಪೀತಾಮೂರ್ತಿಯ ನೆನಿವೆ ಪೀತಾದಾಸ್ಮರಣೀ   

ಬತ್ತಿಸಾಯುಧ ಪಿಡಿದೆ ಭಯಂಕರಿ ಉಗ್ರ
ಶತ್ರುಗಳೆಲ್ಲ ತರಿದೆ ಶಿಶುವು ಸಾಮಗ್ರೆ
ಮತ್ತೆ ಸಾಲದೆ ಹುಡುಕಿದೆ ದೃಷ್ಟರ ನಿತಾಗ್ರೆ
ನಿತ್ಯದಿಂ ಭಜಿಸುವೆನು ನಾನು ಏಕಾಗ್ರೆ 

ಬ್ರಹ್ಮಚಿದಾನಂದ ಬಗಳಮುಖಿ ರಾಣಿ
ಹಮ್ಮಳ್ಳಿದ ಸತ್ಪುರುಷರುಗಳ ಕಠ್ಠಾಣಿ
ಬ್ರಹ್ಮರಂಧ್ರದಲಿ ಮಾಡಿದಿಯೆ ಠೀಕಾಣಿ
ಸುಮ್ಮನೆ ನೀ ಯಮಗೊಲಿಯೆ ಶೀಘ್ರದಿ ಕೃಪಾಣಿ         

ಆರತಿ ಬೆಳಗಿದನೆ ಶಾಂಭವಿಗಾರತಿ ಬೆಳಗಿದನೆ
ಆರತಿ ಬೆಳಗಿದೆ ಆರು ನೆಲೆಯ ಮೇಲೆ
ತೋರಿ ದ್ವಿದಳ ಸದ್ದರೇರಿ ರಂಜಿಪಳಿಗೊಂ
ದಾರತಿ ಬೆಳಗಿದನೆ  ಪಲ್ಲವಿ

ಥಳಥಳ ಬೆಳಗೊಳಿಪ ತಾರಕ ಬಳಗದ ಮಳೆಗರಿಪ
ಸೆಳೆಮಿಂಚಿನ ಹೊಳಪು ತಿಳಿಯದೆ ಕಳೆ ಕಾಂತಿಯ ಝಳಪು
ಕಳೆ ಶಶಿಜ್ಜನ್ನದ ರವಿಕಿರಣಕ ಮೇಲ್ಹೊಳೆವ
ನಿಳಯದಾನಂದದೊಳಿರುವಳಿಗಾರತಿ ಬೆಳಗಿದೆನೆ 

ಶಂಖ ಜಾಗಟಿ ಭೇರಿ ಕಿಂಕಣಿ ನುಡಿಸುವ ಕಿನ್ನೂರಿ
ಬಿಂಕದ ತುತ್ತೂರಿ ಓಂಕಾರ ಘಂಟನಾದ ಭೇರಿ
ಶಂಕರ ಹರಿಪಂಕಜ ಬವರಾಡಿಪ
ಶಂಕರಿ ಶಬರಿ ಭಯಂಕರಿ ರೂಪಿಗೊಂದಾರತಿ ಬೆಳಗಿದೆನೆ   

ಹಿಡಿದಿಹ ನಡುಗಡಿಯಾನಿರಲ್ಕೇರಿ ಮೃಡವರ
ನೆಡದೊಡೆಯ ಹಿಡಿದು ದೈತ್ಯ ಪಡಿಯಾ ಘರ್ಜಿಸಿ
ಕಡಿದಿಹಳಿಟ್ಟಡಿಯ ಖಡಿಖಡಿಯುದರುವ ಸಡಗರದುನ್ಮನಿ
ಬೆಡಗಿನ ಮಂಟಪದೊಳಗಡಗಿರುವಳಿಗೆಗೊಂದಾರತಿ  ಬೆಳಗಿದನೆ     

ಮಂಗಾಳಾರತಿ ಸರ್ವ ಮಂಗಳದೇವಿಗೆ
ಮಂಗಲಾರತಿಯೆತ್ತಿರೆ         ಪಲ್ಲವಿ

ಹರಿಹರ ಬ್ರಹ್ಮಾದಿಗಳ ತ್ರಿಗುಣಗಳಿಂದ
ವಿರಚಿಸಿದಂಬನಿಗೆ ಸುರುಚಿರ
ಚಕ್ರದಿ ಸುಭಟೇಂದ್ರ ಮಧುಕೈಟ
ಭರ ಕಂಠಕಡಿದ ಶ್ರೀಬಗಳಾಮುಖಿಗೆ ಜಯ       

ರಸಿಲೋಮರದಾಗ್ರ ಚಿಕ್ಷರ ಬಿಡಾಲ
ಸಸಿನೆ ಕೊಲ್ಲಿಹ ಶಕ್ತಿಗೆ
ಆಸಮ ಪರಾಕ್ರಮಿಯಾದ ಮಹಿಷಾಸುರ
ಕುಸುಕಿರಿದರೆ ಕಂಠ ಕಡಿದ ಮುಕ್ತಿಗೆ ಜಯ        

ಶುಂಭನಿಶ್ಯುಂಭರನ ಸಂಹರಿಸಿದ ಜಗ
ದಂಬ ಜಯನ್ನತಿಗೆ
ಶಂಬುರಾಮೇಶನ ಸ್ಮರಿಸುವ ಭಕ್ತರ
ಬೆಂಬಿಡದಿಹ ಶಾಂಭವಿಗೆ ಸುಗತಿಗೆ ಜಯ         

ಶೈಲಜಕುಮಾರಿ ಗೌರಿ
ಶೈಲಜ ಸುಕುಮಾರಿ ವರ್ದಾ ಭಯಕರಿ ಪರಮಕೃಪಾಕರಿ   ಪಲ್ಲವಿ

ಪ್ರಣಮದಿ ಮುನಿಜನ ಆನುದಿನ ಧ್ಯಾನಿಪ
ಪ್ರಣಮರೂಪಿ ಶಿವೆಘನ ಸುಖದಾಯಿನಿ          

ಸಂತತ ತ್ರೈಜಗದಂತರ್ಯಾಮಿ
ಸಾಂತಾನಂದ ಗುರುಸ್ವಾಂತ ಸ್ವರೂಪಳೆ         

ಗುರುಚಿದಾನಂದ ಚರಣವ ಪಿಡಿದಿಹ
ಪರಮಭಕ್ತರನು ಪೊರೆಯುವ ಕರುಣಿಯೆ        

 

* ಪ್ರತಿಸಂಧಿಮುಕ್ತಾಯವಾದಬಳಿಕಮಂಗಳಾರತಿಪದಗಳಿವೆ