ಕನ್ನಡ ವಿಶ್ವವಿದ್ಯಾಲಯವು ಕನ್ನಡ ಸಂಸ್ಕೃತಿಯ ಬಹುತ್ವದ ನೆಲೆಗಳನ್ನು ಹುಡುಕುವ, ಗಟ್ಟಿಗೊಳಿಸುವ, ಹರಡುವ ಕಾಯಕವನ್ನು ನೋಂಪಿಯಂತೆ ನಡೆಸಿಕೊಂಡು ಬರುತ್ತಿದೆ. ಕನ್ನಡ ಸಂಸ್ಕೃತಿಯನ್ನು ಮತ್ತೆ ಮತ್ತೆ ನಿರ್ವಚನ ಮಾಡಿಕೊಳ್ಳುವ ಪ್ರಕ್ರಿಯೆಯಲ್ಲಿ ಕನ್ನಡ ವಿಶ್ವವಿದ್ಯಾಲಯವು ಒಂದು ಆಡುಂಬೊಲವಾಗಿ ಕಾರ್ಯ ನಿರ್ವಹಿಸುತ್ತಿದೆ. ನಮಗೆ ಗೊತ್ತಿರುವ ಸಂಸ್ಕೃತಿಯ ಅರ್ಥಗಳ ಆಚೆಗೆ ಆನೂಹ್ಯಲೋಕಗಳ ಕಡೆಗೆ ತನ್ನನ್ನು ಮತ್ತು ಕನ್ನಡಿಗರನ್ನು ಒಯ್ಯುವ ಪಯಣದ ದಾರಿಗಳನ್ನು ರೂಪಿಸುವ ಮಹತ್ವದ ಸಾಹಸದ ಹೆಜ್ಜೆಗಳು ಮೂಡಿ ಬಂದಿವೆ. ಇದು ನಿರಂತರ ನಡೆಯಬೇಕಾದ ಬಹುದಾರಿಗಳ ಮಹಾಯಾನ.

ಇಪ್ಪತ್ತೊಂದನೆಯ ಶತಮಾನದ ಆರಂಭದಲ್ಲಿ ಜಾಗತೀಕರಣದ ಈ ಸಂಕ್ರಮಣ ಸ್ಥಿತಿಯಲ್ಲಿ ಕನ್ನಡ ವಿಶ್ವವಿದ್ಯಾಲಯದ ರಚನೆ ಮತ್ತು ಕಾರ್ಯಗಳು ಸವಾಲಿನವು ಮತ್ತು ಜವಾಬ್ದಾರಿಯವೂ ಆಗಿವೆ. ‘ಕನ್ನಡ’ ಎನ್ನುವ ಪರಿಕಲ್ಪನೆಯನ್ನು ಭಾಷೆ, ಸಾಹಿತ್ಯ, ಬದುಕು ಮತ್ತು ಅದರ ಆಧುನಿಕ ಸನ್ನಿವೇಶಗಳಲ್ಲಿ ಅರ್ಥೈಸುವ ಮತ್ತೆ ಕಟ್ಟುವ ಕೆಲಸವನ್ನು ಕನ್ನಡ ವಿಶ್ವವಿದ್ಯಾಲಯ ಒಂದು ಕಾಯಕದಂತೆ ಕೈಗೆತ್ತಿಕೊಂಡಿದೆ. ಕನ್ನಡ ಮತ್ತು ಅಭಿವೃದ್ಧಿ ಎನ್ನುವ ಎರಡು ಪರಿಕಲ್ಪನೆಗಳು ಎದುರುಬದುರಾಗುವ ಆತಂಕ ಒಂದು ಕಡೆಯಾದರೆ, ಅವು ಒಂದನ್ನೊಂದು ಪ್ರಭಾವಿಸಿ ನೆರವಾಗುವ ಆವರಣವನ್ನು ನಿರ್ಮಾಣ ಮಾಡುವುದು ಇನ್ನೊಂದೆಡೆ ಇರುತ್ತದೆ. ಇಂತಹ ಸಂದರ್ಭದಲ್ಲಿ ಕನ್ನಡ ವಿಶ್ವವಿದ್ಯಾನಿಲಯವು ಈ ಸಂಬಂಧಿಯಾದ ಹೊಸ ಆಲೋಚನೆಗಳ ಸಂವಾದ ಮತ್ತು ಅದರ ಆನ್ವಯಿಕ ಸಾಧನೆಗಳಲ್ಲಿ ತನ್ನನ್ನು ತೊಡಗಿಸಿಕೊಳ್ಳಲು ಬಯಸಿದೆ.

ಕನ್ನಡವು ಕಾಗದರಹಿತ ಮಾಧ್ಯಮದಲ್ಲಿ ಕಾಣಿಸಿಕೊಳ್ಳುತ್ತಿರುವಾಗಲೂ ಪುಸ್ತಕ ರೂಪದಲ್ಲಿ ಕನ್ನಡ ಕೃತಿಗಳ ಪ್ರಕಟಣೆ ಸಮಾನಾಂತರವಾಗಿ ಕ್ರಿಯಾಶೀಲವಾಗಿ ನಡೆಯುವುದು ಬಹಳ ಮುಖ್ಯವಾದದ್ದು. ಕನ್ನಡವು ತಾಂತ್ರಿಕ-ಮೌಖಿಕ ಮಾಧ್ಯಮದಲ್ಲಿ ಬಳಕೆಯಾಗುತ್ತಿರುವಾಗಲೇ ಕಾಗದದಲ್ಲಿ ಕನ್ನಡ ಅಕ್ಷರಗಳು ಮುದ್ರಣಗೊಂಡು ಕಣ್ಣಿಗೆ, ಕಿವಿಗೆ ಮತ್ತು ಮನಸ್ಸಿಗೆ ಕನ್ನಡವನ್ನು ಸಂವಹನಗೊಳಿಸುವ ಪ್ರಕ್ರಿಯೆ ನಿರಂತರವಾಗಿ ನಡೆಯಬೇಕಿದೆ. ಇಲ್ಲಿ ಪ್ರಕಟಗೊಳ್ಳುವ ಮಾಧ್ಯಮದೊಂದಿಗೆ ಅಭಿವ್ಯಕ್ತಗೊಳ್ಳುವ ಚಿಂತನ ಶರೀರವೂ ಮುಖ್ಯವಾದದ್ದು. ಭಾಷೆ, ಸಾಹಿತ್ಯ, ಕಲೆಗಳು, ವಿಜ್ಞಾನ, ತಂತ್ರಜ್ಞಾನ, ಸಮಾಜವಿಜ್ಞಾನ ಎನ್ನುವ ಬೌದ್ಧಿಕ ಗಡಿರೇಖೆಗಳನ್ನು ಕಳಚಿಕೊಂಡು ಕನ್ನಡ ಜ್ಞಾನವು ಕನ್ನಡ ವಿಶ್ವವಿದ್ಯಾಲಯದಲ್ಲಿ ರೂಪುಗೊಳ್ಳುವ ಮತ್ತು ಪ್ರಕಟಗೊಳ್ಳುವ ಪ್ರಕ್ರಿಯೆ ನಡೆಯುತ್ತಿದೆ.

ಬಳ್ಳಾರಿ ಜಿಲ್ಲೆಯ ಸಿರಗುಪ್ಪ ತಾಲೂಕಿನ ಹಿರಯಹಟ್ಟಿ ಊರಿನ ಅಯ್ಯಪ್ಪ ಕವಿ ತನ್ನ ಗುರುವಾಗಿದ್ದ ಮತ್ತು ಈ ಪ್ರದೇಶದ ಬಹಳ ಪ್ರಸಿದ್ಧ ಅವಧೂತ ಆಗಿದ್ದ ಚಿದಾನಂದಾವಧೂತರನ್ನು ಕುರಿತು ರಚಿಸಿದ ಕಾವ್ಯ ಇದಾಗಿದೆ. ಆರಂಭದಲ್ಲಿ ರಾಗ ತಾಳದ ಉಲ್ಲೇಖ ದೊರೆಯುತ್ತದೆ. ಸ್ವಾರಸ್ಯವೆಂದರೆ ತಾಳವನ್ನು ರೂಪಕವೆಂದು ನಿರ್ದಿಷ್ಟವಾಗಿ ಸೂಚಿಸಿದ ಕವಿ ರಾಗವನ್ನು ತಮ್ಮಿಚ್ಚೆಯೆಂದು ತಿಳಿಸಿದ್ದಾನೆ. ಸಾಂಗತ್ಯ ಛಂದಸ್ಸಿನಲ್ಲಿ ಕಥನ ಕಾವ್ಯವನ್ನು ಬರೆಯುವ ಪರೆಂಪರೆ ಕನ್ನಡದಲ್ಲಿ ದೇಪರಾಜನ ‘ಸೊಬೆಗಿನ ಸೋನೆ’ಯಿಂದ ಆರಂಭವಾಯಿತು. ಐತಿಹಾಸಿಕ ವ್ಯಕ್ತಿಗಳನ್ನು ಕುರಿತ ಸಾಂಗತ್ಯ ಕಾವ್ಯಗಳ ಪರಂಪರೆಯಲ್ಲಿ ಕುಮಾರ ರಾಮನ ಸಾಂಗತ್ಯ, ಕಂಠೀರವ ನರಸರಾಜ ವಿಜಯಗಳಂಥ ಕಾವ್ಯಗಳು ಪ್ರಸಿದ್ಧವಾಗಿದೆ. ಒಬ್ಬ ಕವಿ ಹಾಗೂ ಅವಧೂತನನ್ನು ಕುರಿತು ರಚನೆ ಮಾಡಿದ ಈ ಕಾವ್ಯದಲ್ಲಿ ಅನೇಕ ವೈಶಿಷ್ಟ್ಯಗಳಿವೆ. ಮೊದಲನೆಯದಾಗಿ ಅಯ್ಯಪ್ಪಕವಿ ಚಿದಾನಂದಾವಧೂತನ ಶಿಷ್ಯ ಮತ್ತು ಆತನ ಪರಿಸರದಲ್ಲಿಯೇ ಹುಟ್ಟಿ ಬೆಳೆದವನು. ಹೀಗಾಗಿಯೇ ಹೆಚ್ಚು ಅಧಿಕೃತವಾಗಿ ಚಿದಾನಂದಾವಧೂತರ ಬಾಲ್ಯ, ಕ್ಷೇತ್ರಸಂಚಾರ, ಸದ್ಗುರು ಕಟಾಕ್ಷ, ಹಠಯೋಗ, ರಾಜಯೋಗ ಹಾಗೂ ಕಾಶಿಯಾತ್ರೆಗಳನ್ನು ಇಲ್ಲಿ ಚಿತ್ರಿಸಲಾಗಿದೆ. ಕೊನೆಯಲ್ಲಿ ಎಲ್ಲಾ ಸಂಚಾರಗಳ ಬಳಿಕ ಚಿದಾನಂದಾವಧೂತರು ಕಂಪಲಿಯ ಸಮೀಪ ಅಯೋಧ್ಯೆ ಗ್ರಾಮಕ್ಕೆ ಬಂದು ತುಂಗಭದ್ರಾ ಹೊಳೆಯ ದಂಡೆಯ ಅರಳಿಗಿಡದ ಕಟ್ಟೆಯಲ್ಲಿ ಯೋಗಾಭ್ಯಾಸ ಮಾಡಿದ ಕಥನವಿದೆ. ವೇದಾಂತ ವಿಷಯಗಳನ್ನೊಳಗೊಂಡ ಕೃತಿ ರಚನೆ ಮಾಡಿದ ಚಿದಾನಂದಾವಧೂತರ ಜೀವನ ಚರಿತ್ರೆಯ ಹಿಂದೆ ಅನುಭವ ಮತ್ತು ಅನುಭಾವಗಳು ಸಮಪ್ರಮಾಣದಲ್ಲಿ ಬೆರೆತುಕೊಂಡಿವೆ.

ಹೈದ್ರಾಬಾದ್‌ ಕರ್ನಾಟಕ ಪ್ರದೇಶದ ಅವಧೂತ ಪರಂಪರೆಯ ದೃಷ್ಟಿಯಿಂದ ಅಯ್ಯಪ್ಪ ಕವಿಯ ‘ಚಿದಾನಂದಾವಧೂತ ಚಾರಿತ್ರ’ ಕೃತಿಗೆ ಸಾಂಸ್ಕೃತಿಕ ಮಹತ್ವವಿದೆ. ಈ ಕೃತಿಯನ್ನು ಒಂದು ಸಮಗ್ರ, ಇನ್ನೊಂದು ಅಸಮಗ್ರ ಹಸ್ತಪ್ರತಿಗಳ ಮೂಲಕ, ಜೊತೆಗೆ ಆ ಪ್ರದೇಶದ ಕ್ಷೇತ್ರಕಾರ್ಯ ಅಧ್ಯಯನದ ಮೂಲಕ ಶಾಸ್ತ್ರೀಯವಾಗಿ ಮತ್ತು ಸಾಂಸ್ಕೃತಿಕವಾಗಿ ಸಂಪಾದನೆ ಮಾಡಿದ ಕನ್ನಡ ವಿಶ್ವವಿದ್ಯಾಲಯದ ಹಸ್ತಪ್ರತಿಶಾಸ್ತ್ರ ವಿಭಾಗದ ಮುಖ್ಯಸ್ಥರಾದ ಡಾ. ಎಫ್‌. ಟಿ. ಹಳ್ಳಿಕೇರಿಯವರಿಗೆ ಅಭಿನಂದನೆಗಳನ್ನು ಸಲ್ಲಿಸುತ್ತೇನೆ. ಈ ಗ್ರಂಥ ಪ್ರಕಟಣೆಗೆ ಆರ್ಥಿಕ ಸಹಾಯ ನೀಡಿದ ತುಮಕೂರಿನ ಶ್ರೀದೇವಿ ಚಾರಿಟಬಲ್‌ ಟ್ರಸ್ಟ್‌ನ ಅಧ್ಯಕ್ಷರಾದ ಡಾ. ಎಂ. ಆರ್. ಹುಲಿನಾಯ್ಕರ್ ಅವರಿಗೆ ಕೃತಜ್ಞತೆಗಳು. ಈ ಗ್ರಂಥವನ್ನು ಅಚ್ಚುಕಟ್ಟಾಗಿ ಹೊರ ತರುತ್ತಿರುವ ಪ್ರಸಾರಾಂಗದ ನಿದೇಶಕರಾದ ಪ್ರೊ. ಮಲ್ಲೇಪುರಂ ಜಿ. ವೆಂಕಟೇಶ ಮತ್ತು ಸಹಾಯಕ ನಿರ್ದೇಶಕರಾದ ಶ್ರೀ ಸುಜ್ಞಾನಮೂರ್ತಿ ಅವರಿಗೆ ಅಭಿನಂದನೆಗಳು.

ಬಿ. ಎ. ವಿವೇಕ ರೈ
ಕುಲಪತಿಗಳು