ಜನನಿ ಸಂತಿಗೆಯು ಹೋಗೆ ಎದ್ದು ನೋಡ್ಡ ಸಂದುಗೊಂದು
ಮನಿಯೊಳ್ಹಾಗೆ ಹೋಗ್ವನೆನುತಲಿ
ಘನದ ಕೀಲಿ ಹಾಕಿ ಹೊರಬಾಗಿಲದ ಮಧ್ಯದಲ್ಲಿ
ಮುನಸಿಲಿಂದ ಕುಳಿತುಕೊಂಡನು        ೭೬

ಹೇಳದ್ಹೋದಳ್ಯಾಕ ಎನಗೆ ಎನುತಿರಲು ತಾಯಿಯಂತೆ
ಮೇಲು ನೀರುಕೊಡನ ಹೊತ್ತೆಯು
ಭಾಳ ಬೆವರು ಇಳಿಯುತಲಿ ಮೊಳಕಾಲಲಿಳವಿಕೊಂಡು
ಬಾಲನಿಗೆ ಉತ್ತರವಿತ್ತಳು    ೭೭

ಇಷ್ಟು ದೂರ ಹಳ್ಳದಿಂದ ಸೀನಿನೀರ ತಂದೆ ನಾನು
ಬಿಟ್ಟುಕೊಡು ಹಾದಿಯನನೆ
ಕಷ್ಟುಬಿಟ್ಟು ದೂರ ನೀರ ತಂದಳೆಂದು ಥೋಡೆವಾರೆ
ಇಟ್ಟು ಆಗೆ ಬಂದಳೊಳಿಯಕೆ            ೭೮

ಹ್ಯಾಗೆ ದಾಟುವಳು ನಾನು ಬಾಗಿಲೊಳಗೆ ಕುಳಿತಿರಲು
ಹೋಗಳ್ವೆಂತು ಮನಿಯೊಳೆನುತಲಿ
ಆಗ ನೋಡಿದನು ತಿರಗಿ ಹಿಂದಾಕಾಕೆ ಇಲ್ಲದಿರೆ
ಈಗಲೆತ್ತ ಹೋದಳೆಂದನು   ೭೯

ಕೀಲಿ ಬಾಗಲಿಗೆ ಅದೆ ಕೀಲಿ ಕೈಯಿ ಎನ್ನಲ್ಲದೆ
ಕಾಳು ಮಾಯಾಕಾರ್ತಿ ಎನ್ನುತಾ
ಸಾಲು ಜಂತೆ ಗೋಡೆಗೀಡೆ ಗೋದಲಿಯೊಳು ಬ
ಹಳ ಹುಡುಕಿದನು ತಾಯನು            ೮೦

ತೆರೆದು ಕೀಲಿ ಕಂಟಳಿಯ ಪೆಟ್ಟಿಗೆಯೊಳು ನೋಡಿ ನೀರ
ಹರವಿಯೊಳಗೆ ಕೈಯ ಹಾಕಿದ
ಇರುವ ಅಡಕಲನಿಳುಹಿ ನೋಡಿ ಬಳಕಂಡಿಲಿಂದ ಅಮ್ಮ
ತೆರಳಿದಾಳು ಇಂತೆಂದನು     ೮೧

ಎಂದು ಮಾಳಿಗೀಯ ಹತ್ತಿ ನೋಡೆ ಕೂಡಲೂರ ಸಂತಿ
ಯಿಂದ ಬರಲು ಅನ್ನಮ್ಮನು
ಮಂದಿರದ ಮುಂದೆ ಬಾಹ ತಾಯಿಯನು ಆಗ ಕಂಡು ಇ
ಲ್ಲಿಂದಲ್ಲಿರ್ದಳೆಂದನು       ೮೨

ಮನೆಗೆ ಬರಲು ತಾಯನೀಗ ದಂಟಿಲಿಂದ ಬಡಿದು ನೀನು
ಎನಗೆ ಹೇಳದ್ಹೋದೆ ಮತ್ತೆಯು
ಘನದ ನೀರ ಕೊಡನಕೊಂಡು ಕೀಲಿ ಇರಲು ಒಳಗೆ ಇಳುಹಿ
ಜಿನುಗಿದೆಯು ನೀನು ಎಂದನು          ೮೩

ಹೋರಿನೊಳು ಹುಡುಕಿದೆನು ನೀನು ತಂದು ಇಲುಹಿದ
ನೀರ ಕೊಡದಿ ನೋಡ್ಡೆನೆಂದನು
ಪೂರ ತಿಳಿದು ಅಂಬನೆಂದು ನಿನಗೆ ಕಡಲಿ ತರಲಿಕೆಯು
ಹಾರಿ ಹೋದೆ ಸಂತೆಗೆಂದಳು            ೮೪

ಅಂದಿಗಾರು ವರುಷವಾಗೆ ಊರ ಹೊರಗೆ ಆಡುತಲಿ
ಬಂದ ನೀರ ಹಳ್ಳಕೊಬ್ಬನೆ
ಒಂದು ಅರಳಿಮರನು ಮೂರು ಪಂಗಲಾಗಿ ಇರಲು ಮೇಲೆ
ನಿಂದು ಇರ್ದ ಬ್ರಹ್ಮರಾಕ್ಷಸ  ೮೫

ಪುಸ್ತಕವ ಕೈಲಿ ಹಿಡಿದು ಪಿಟಿಪಿಟೆನುತ ಓದುತಲಿ
ಮಸ್ತಕದಲಿ ಕೃಷ್ಣಾಂಜನ
ವಿಸ್ತರದ ಕಿವಿಯ ಟೊಪ್ಪಿಗಿಟ್ಟು ಜಪದಮಾಲೆ ಧರಿಸಿ
ಯಸ್ತುಮರದ ನಡುವೆ ಇರ್ದನು        ೮೬

ಕಂಡು ಮರದ ಮ್ಯಾಲಿಹನ ಮುಂಡೆ ಮಗನೆ ಕಟ್ಟಿಗೆಯು
ಕುಂಡಿಯೊಳಗೆ ನಡುವೊಲೀಗಲು
ಚಂಡ ಮುರಿಯ ಬಿದ್ದಿ ಇಳಿಯು ಎಂದೆನಲು ನಸುನಗೆಯ
ಗೊಂಡು ಬ್ರಹ್ಮರಾಕ್ಷಸಿರ್ದುದು         ೮೭

ಆ ಊರ ಅತೆಸೊಸೆಯ ಬಹಳ ಗೋಳಿಸುವಳು
ಆವಾಗ ಕರೆಕರೀಯನು
ಹಾವಿನಂತೆ ಇರುತಿಹಳು ಬಡಿಯೆ ಮುನಿಸುಗುಟ್ಟಿ ತಾನೆ
ಓರ್ವಳೆ ಬಂದಳಲ್ಲಿಗೆ         ೮೮

ಅಮ್ಮ ನೋಡೆ ಮರದ ಮ್ಯಾಲೆ ಓದುತಲಿ ಕುಳಿತಹನೆ
ಹೆಮ್ಮಿಲಿಂದ ಬಿದ್ದನೆನೆದಲೆ
ನಮ್ಮ ಮಾತ ಕೇಳ ಬ್ರಾಹ್ಮಣನ ಛೀಯೆಂದು ಎನಲು
ಬ್ರಹ್ಮರಾಕ್ಷಸನ್ನೆ ನೋಡ್ಡಳು           ೮೯

ನೋಡಿದಾಕ್ಷಣದಿ ಬ್ರಹ್ಮ ರಾಕ್ಷಸಿಯು ಹೋಯ್ತು ಆಕೆ
ರೂಢಿಗೊರಗೆ ಮೂರ್ಛೆಯಿಂದಲಿ
ಕೂಡಿ ಮನೆಯವರು ಬರಲು ಸ್ಮೃತಿಯು ಬಂದಿತಾಕ್ಷಣದಿ
ಕಾಡಿನಿಂದ ಕರೆದು ಕರೆದು ಒಯ್ದರು   ೯೦

ಇಲ್ಲ ಭಯವು ಈತಗೆಯು ಬ್ರಹ್ಮ ರಾಕ್ಷಸನು ಎಂಬ
ಹುಲ್ಲು ಚಿಂತೆ ಎತ್ತಣದು ಬಾಲಮಂತ್ರವ
ಸೊಲ್ಲಿ ಸೊಲ್ಲಿ ಗುಚ್ಚಾರ ಮಾಡುತಲಿ ವಜ್ರದುಂಡಿ
ಕಲ್ಲಿನಂತೆ ಇರುತಲೀಹನು   ೯೧

ದುಷ್ಟತನಗಳನ್ನೆ ಮಾಡ್ವ ದೇವರುಗಳ ಬಿಟ್ಟುತಿಹನು
ಕಷ್ಟಬಿಟ್ಟು ಮಾಡ್ದ ಅಡಿಗೆಯ
ಮುಟ್ಟಿಕೊಂಬ ಮೀಸಲಾದ ತುಪ್ಪ ತಿಂಬಆಡಕಲಿಯ
ನಟ್ಟು ಇಳುಹಿ ನೋಡುತಿಹನು         ೯೨

ಹುಡುಗುತನವ ನಿಂತು ಮಾಡೆ ತಂದೆತಾಯಿಗಳು ಮಠಕೆ
ಹಿಡಿದು ಹಾಕಿದರು ಓದಲು
ಬಡಿದನಯ್ಯ ಎರಡು ಸಾರೆ ದುಷ್ಟತನಗಳನ್ನೆ ಕಂಡು
ಬಿಡನು ಮೊದಲ ತೆರದಲಿರುತಿಹ       ೯೩

ಓದೋಮಠದ ಬದಿ ಪವಾಡಿನಾಯಕನ ಪಾಗಕೀಗ
ಹಾದಿ ಇರಲು ಕಂಡು ಓಡುತ
ಮಾಶ್ದಿಗನ ಓಲು ಹೇಲ್ವ ತೆರದಿ ಮೂಲಿಲೀ ಪಿಶಾಚಿ
ಓದುತಿರಲು ಹಾಳುಗಾಡನು            ೯೪

ಎಲವೋ ಓದೋ ಮಠದ ಬಳಿಯ ಹೇಲುವರೆ ಎಂದೆನುತ
ಕಲ್ಲುಗಳಿಂದ ಒಗದನಾಗಲು
ಬಲುಬಹಳ ಹಾಡನೀಗ ಮ್ಯಾಲೆಮ್ಯಾಲೆ ತಗಿಯ ಹೇಳಿ
ಕೊಲಿಪೆ ಅಯ್ಯನಿಂದಲೆಂದನು           ೯೫

ಓಡಿ ಹೋಗ್ವದಾನು ಬಿಟ್ಟು ಅಯ್ಯಗೆಯು ಹಿತನು ಆಗೆ
ಚಾಡಹೇಳ್ದ ಹೇಲ್ವನಿಲ್ಲಿಯು
ಮೂಢಹೊಲಿಯನೆಂಬೆನಲು ಗಾಡಬಂದು ಅಯ್ಯನೋಡೆ
ಹಾಡುತಿತ್ತು ಸರಿಯು ಬಂದೊಲು     ೯೬

ಏನೆಲವೋ ಹೇಲಲಿಕ್ಕೆ ಶೌಚಸ್ಥಳವೆ ತಾನು ಇದು
ಹೀನ ಎನುತ ಬಯ್ವುತಿರಲಿಕೆ
ಮಾನಿಷನ ಓಲು ಎದ್ದು ಬಡಿಯಲಿಕ್ಕೆ ಅಯ್ಯನನ್ನು
ತಾನು ಒರಗಿದನು ನೆಲಕೆಯು            ೯೭

ಕೇಳಿ ಮನೆಯವರು ಹೊತ್ತುಕೊಂಡು ಬಂದರಾಗ ಗೃಹಕೆ
ಏಳು ದಿನಕೆ ಸತ್ತನಾತನು
ಮ್ಯಾಲೆ ಓದಲಿಲ್ಲ ಮಠದಿ ದೇವಿ ದಯದಿ ವಿದ್ಯೆ ಕಲಿತ
ಹೇಳಿದವರು ಒಬ್ಬರಿಲ್ಲವು೯೮

ಅಷ್ಟವರ್ಷವಾಗೆ ತುಂಬುವಷ್ಟರೊಳು ಮೌಂಜಿಯನು
ಕಟ್ಟಿದಾರು ಆ ಬಳಿಯಲಿ
ಅಷ್ಟು ವೇದಶಾಸ್ತ್ರ ಪುರಾಣಷ್ಟು ಭಾರತೆಂಬುವೆಲ್ಲ
ಶ್ರೇಷ್ಠವಾಗಿ ತಾನು ಕಲಿತನು            ೯೯

ಹೇಳಿದಾನು ಒಂಭತು ವರ್ಷಕೆಯು ಗೌರಿ ಮದುವೆ
ಲೋಲ ಮಂಗಳನೆಸಿಕೊಳುತಿಹ ಬ
ಹಳ ಪ್ರಪಂಚದ ವಿಲಾಸ ಕಾಳು ಮಹಿಮೆ ಇದು
ಕೇಳಲೆಂದು ಸರ್ವ ಜನರಿಗೆ ಕನ್ನಡ      ೧೦೦

ನಡೆದರೀಗ ತಂದೆತಾಯಿ ನಡಿಯದಿರಲು ಸಂಸಾರ
ಪಡುವಲಾಗಿಯೆ ಮುಖವ ಮಾಡಿಯೆ
ನುಡಿಯೆ ಮುದುಗಲ್ಲ ಪರಗಣಿಯ ಗಂಗಾವತಿ ಮಾಜೆ
ಸಡಗರ ಹೆಬ್ಬಾಳಿಗೆ            ೧೦೧

ಒಂದು ಮನಿಯ ಮಾಡಿ ಹೆಬ್ಬಾಳೊಳಿರಲು ಕೆಲವು ದಿವಸಕೆ
ತಂದೆತಾಯ್ಗಳಾಗ ಸಿದ್ಧಿಯಾ
ಕೊಂದಲಿಕ್ಕೆ ಅಲ್ಲಿ ವಾಲಿಕರ ಲಕ್ಷ್ಮಕ್ಕನಿರಲು
ಅಂದಿಹಳು ಸರಸದಲ್ಲಿಯು೧೦೨

ಪರಗಣಿಯ ಗಂಗವತಿಗೆ ಪದಿಕಿಯೆಂದೆನಿಸುತಲಿ
ಇರುವ ನಾರಪ್ಪನೆಂಬನು
ಪರಮ ಪಾರುಪತ್ಯಗಾರನವನ ಪುತ್ರಿ ಪಂಪಕ್ಕ
ಇರಿದು ಸಲಿಗೆಯಾಗಿಹಳು    ೧೦೩

ಅರೆಯು ಶಂಕರಾನಿಭಂಡೆ ತುಂಗಭದ್ರಯೊಳಗೆ ಇರಲು
ನಿರುತ ಸ್ನಾನಕ್ಕೆಂದು ಅಲ್ಲಿಗೆ
ತೆರಳಲಾಗ ಲಕ್ಷ್ಮಕ್ಕ ಪಂಪಕ್ಕನ ಕೂಡೆ
ಪರಮ ಮಂಗಳೆ ಬಂದಳಲ್ಲಿಗೆ          ೧೦೪

ಶ್ರೀಶೈಲ ಮಲ್ಲಿಕಾರ್ಜುನನ ಪತ್ನಿ ಗೌರಿಯೆನಿಸಿ
ಭಾಸಿಸುತ ಬಗಳಮಂತ್ರವ
ಲೇಸಾಗಿ ಆಕೆ ನೀನೆ ಆಗಿ ಚಿಂತಿಸೆಂದು ಉಪ
ದೇಶಿಯೆ ಬಯಲು ಅದಳು  ೧೦೫

ನಿರುತ ಬಗಳೆ ದೈವತಾಗಿ ತನ್ನನೀಗ ಚಿಂತಿಸುವ
ಮರವು ಎಂದಿಗೆಯೂ ಹುಟ್ಟಿದೆ
ತಿರುಗಿ ಆಡುತಲಿ ಮಲಗುತಲಿ ಕೂಡ್ರುತಲಿ
ಪರಮ ಮಂಗಳೆಯು ಇಹನು            ೧೦೬

ಆವ ರೂಪು ಕಂಡರೆಯು ದೇವಿಯೆಂದು ಕಾಂಬುತಿಹ
ಭಾವೆಯರ ರೂಪು ಕಂಡರೆ
ಕೇವಲಂಬನೆಂದು ಮನದಿ ಭಾವಿಸುತ ನಮಿಸುತಲಿ
ಪಾವನಾತ್ಮನಾಗಿ ಇಹನು    ೧೦೭

ರೂಪು ಪೊಂಪಕ್ಕನಾಗಿ ಒಮ್ಮೆ ಇಹಳು ಆಡಿಪಾಡಿ
ಪೋಪಳು ಮತ್ತೆ ಬಾಹಳೂ
ಈ ಪರಿಯು ನಿತ್ಯಬಂದು ಕೆಲಸ ಮಾಡಿ ಬಯಲಹಳು
ಆಪರಿಯನೇನೆಂಬನು          ೧೦೮

ಅಡಿಗೆ ಮಾಡ್ವಳಾಕೆಯಾಗಿ ಬಡಿಸುವಳು ಆಕೆಯಾಗಿ
ನುಡಿವಳಾಡ್ವಳಾಕೆಯಾಗಿಯೆ
ಮಡಿಯ ಹಾಸಿಕೆಯು ಹಾಸಿ ಮಲಗು ಎಂದು ಮಲಗಿಸಿಯೆ
ಒಡನೆ ಮಟ್ಟಮಾಯವಾದಳು         ೧೦೯

ಪಾರುಪತ್ಯಗಾರ ನಾರಪ್ಪನ ಮನೆಗೆ ಹೋಗೆ
ಆರು ಮಾಡ್ಡರಡಿಗೆ ಎಂದೆನೆ
ಕಾರಭಾರಿ ಪೊಂಪಕ್ಕ ಮಾಡಿ ಬಡಿಸಿದಳು ಎನಲು
ಆರುಬಂದುದಿಲ್ಲವೆಂದರು  ೧೧೦

ಅಂಬನೆಂದು ತಿಳಿದು ತಾನು ಯಾರ ಮುಂದೆ ಹೇಳದಲೆ
ಸಂಭ್ರಮದಲಿ ಮನೆಗೆ ಬರಲಿಕೆ
ಎಂಬೆನೇನ ಲಕ್ಷ್ಮಕ್ಕನಾಗಿ ಸಾರಿಸಿಹಳು ಮನೆಯ
ಉಂಬುದಕ್ಕೆ ಮಾಡಿಹಳು    ೧೧೧

ಆಕೆಯಾಗಿ ಒಮೆ ಮಾಡ್ವಳೀಕೆಯಾಗಿ ಒಮ್ಮೆ ಮಾಡ್ವ
ಳಾಕೆ ಈಕೆಯನ್ನೆ ಕೇಳ್ವದೆ
ಕಾಕು ಸುದ್ದಿ ಎಲ್ಲೊ ಮಾತು ಮನೆಗೆ ಬಂದುದಿಲ್ಲವೆನಲು
ಆಕೆ ಲಕ್ಷ್ಮಕ್ಕ ಪೊಂಪಕ್ಕನಾಗಿಯೆ        ೧೧೨

ಸಚ್ಛಿ ದ್ರೂಪಳೆಂದು ತಿಳಿದು ಸ್ವಚ್ಛವಾಗಿ ಮಲಗಿರಲು
ಬಿಚ್ಚಿ ಬಿಸಿಲು ಬಂದಿರಲು ಬಗಳೆಯಾಗಳು
ಅಚ್ಛ ಲಕ್ಷ್ಮಕ್ಕ ನಾಗಿ ಬಿಚ್ಛಿ ಇರಲು ಧೋತ್ರ ಹೊದ್ದ
ಹಚ್ಚಡೆಳೆದು ಹುಚ್ಚದುಲ್ಲೆ ಏಳು ಎನುತಲಿ    ೧೧೩

ಜ್ಯಾಡ ಹಚ್ಚಡೆಳೆಯದಿರು ಬಿಚ್ಚಿ ಇದೆ ಧೋತ್ರವೆನಲು
ನೋಡು ಹೊತ್ತು ಎಷ್ಟು ಏರಿದೆ
ರೂಢಿಯೊಳಗೆ ಇಷ್ಟು ಹೊತ್ತು ಮಲಗುವರೆ ಎನಲು ಮಾತ
ನಾಡಿದಾನು ಮುಸುಕು ತೆರೆದೆಯು     ೧೧೪

ಅಂಬನಾ ಧ್ಯಾನದಿಂದ ಇದೆನೆನಲು ಸೀ ನೀರು
ಎಂಬುವವೆ ಎಂದು ಕೇಳಲು
ಹಂಬಲ್ಯಾಕೆ ಉದಯದಲ್ಲಿ ತಂದು ಕೊಂಬೆನೆನಲು ನಾನು
ತುಂಬಿ ತಾಹೆನೆಂದು ಹೊರಟಳು        ೧೧೫

ನಿಂದ ಹಾಸಿಕೆಯ ತೆಗೆವಷ್ಟರೊಳು ಹೊಳೆಯ ನೀರ
ತಂದಳು ಕೊಡನ ತುಂಬಿಯೆ
ಎಂದು ನಿಮ್ಮನಿಯೊಳಗೆ ತಂದೆ ಏನು ಎಂದೆನಲು
ಅಂದು ಮಾತನಾಡ್ದಳಾಗಳು            ೧೧೬

ನಿನ್ನಂತ ಬಡಹಡಕಿ ನೀರು ತರಲು ಮೂರು ತಾಸು
ಎನ್ನ ಕಾಲು ಉಸುಕ ನೋಡುವೆ
ನನ್ನ ನೋಡು ಎಷ್ಟು ಬ್ಯಾಗ ತಂದೆನೆಂದು ಮಾತನಾಡು
ತಿನ್ನುವಳಿಯಕ್ಕೆ ಹೋದಳು೧೧೭

ಮಾತನಾಡದಿರಲು ಬಳಿಕ ಲಕ್ಷ್ಮಕ್ಕನಾಗಳು
[1]ಆ ತತ್‌ಕ್ಷಣದಿ[2] ಒಳಿಯಕೆ
ಕೌತಕಿದು ಎಂದು ಹೋಗೆ ಇಲ್ಲದಿರಲು ಸರ್ವ ಜಗದ
ಮಾತೆಯೆಂದು ತಿಳಿದನಾಗಳು           ೧೧೮

ಅಂಬನಾನೆಷ್ಟರವನು ಸರಸವಾಡಲಿಕ್ಕೆ ಪೀ
ತಾಮಬರಿಯೇ ನಿನ್ನನರಿಯರು
ಶಂಭು ಮೊದಲಾದವರಿಗೆ ನಿನ್ನ ಚರಣರೇಣ ದೊರಕ
ದೆಂಬರನ್ನ ಭಾಗ್ಯವೆಂತೆಂದು೧೧೯

ಇಂತು ದಿನ[೦]ಪ್ರತಿಯಲಿ ಸಂತಸದಿ ಸರಸವಾಡು
ತಂತು ಇಹಳು ನಿತ್ಯ ಕಾಲದಿ
ಎಂತೆನಲಿ ಭಂಡುಭೂತ ಕೂವಾಡವಾಡುತಲಿ
ಅಂತರದಲಿ ದೃಶ್ಯವಾದಳು  ೧೨೦

ಒಂದು ದಿವಸ ಲಕ್ಷಮಕ್ಕನಾಗಿ ತಿಳಿಯ ಹೇಳಿದಳು
ಇಂದು ಕೇಳು ನೀನು ಪೊರ್ವದಿ
ಬಂಧುರಾದ ರಾಜಯೋಗಿ ನಿನ್ನ ಮೂಲ ತಿಳಿಯ ಹೇಳ್ವೆ
ನಿಂದು ಕೇಳು ನಿಶ್ಚಯಂದಳು            ೧೨೧

ಸದಾ ಆನಂದವಾಗಿ ಶಿದ್ಧನೆನಿಪ ಕಪಿಲ ಮುನಿಯು
ಎದರನಳಿದು ತಾನು ಇರಲಿಕೆ
ಉದುರೆ ನಯನದಿಂದ ಆನಂದದಿಂದಲುದಿಸಿದಾನು
ಸದಮಲಾನಂದ ಅಶ್ವಜಾ   ೧೨೨

ಆತ ಬೆಳೆದು ಶಿದ್ದರೊಳು ಖ್ಯಾತನಾಗಿ ಬ್ಯಾರೆಯಾಶ್ರ
ಮಾತಗೇಯು ಕಪಿಲ ಮಾಡಿರೇ
ದಾತನಾಗಿ ಸರ್ವತಪದಿ ಪೂತನೆನಿಸಕೊಳುತ ಮುನಿಜ
ನಾತಿಶಯದೊಳಿರ್ದ ಹರುಷದೀ        ೧೨೩

ಬಂದನಲ್ಲಿಗೊಬ್ಬ ಬ್ರಾಹ್ಮಣಾವಧೂತನೆಂಬುವಾನು
ಬಂದು ಭಿಕ್ಷ ಕೊಡುಯೆನಲಿಕೆ
ನಿಂದು ಬಾ ಮಹೂರ್ತವು ಎಂಬೆನಲಿಕೊಪ್ಪಿ ಕುಳಿತ
ನಂದು ಸುಕಸಮಾಧಿಯಲೀ  ೧೨೪

ಬನ್ನಿರೀಗ ಭೋಜನಕ್ಕೆ ಇನ್ನು ಸಿದ್ಧಾಯಿತೆನಲು
ತನ್ನನೀಗ ಮರೆದು ಬಾರ್ದಿರೇ
ಇನ್ನಿ ಆರರಿಯರೀ ಸಮಾಧಿಯೆಂದು [3]ಹಾಸ್ಯ[4] ಮಾಡು
ವಿನ್ನು ಅಷ್ಟರೊಲಗೆ ಎದ್ದನು         ೧೨೫

ಹಾಸ್ಯ ನರರಿಗೆಯು ಸಹಜ ದೋಷಿಗಳೆ ನೀವು ಸಿದ್ಧ
ರೀಸು ಫಲದಿ ನಿಮಗೆ ಜನ್ಮವು
ಭಾಸಿಸಲಿಯೆಂದು ಕೊಟ್ಟ ರೋಷದಿಂದ ಶಾಪ ಮರ್ತ್ಯ
ವಾಸವಾಗು ಎಂದು ಇತ್ತನು೧೨೬

ದ್ವಾಪರಾಂತ್ಯದಲ್ಲಿ ಕಥೆಯು ಈ ಪರ್ಯಾಗೆ ಜನ್ಮಕೆಯು
ಪಾಪಹರನು ತಾನು ಬಂದನು
ಸ್ಥಾಪಿತಾದ ರುಗ್ವೇದಿ ಪಂಚರುಷಿ ಶ್ರೀವತ್ಸಗೋತ್ರ
ರೂಪನಾಗಿ ಬ್ರಹ್ಮ ಜಾತಿಲೀ೧೨೭

ಆದವಾನಿ ಸೀಮೆ ಹಿರೆಹರಿವಾಣ ಕರಣಿಕನು
ಆದ ಲಕ್ಷ್ಮಿಪತಿಯ ಗರ್ಭದಿ
ಸಾಧುವಾದ ಅನ್ನಮ್ಮ ರಿಬ್ಬರುದರದಲ್ಲಿ ಜನ್ಮ
ವಾದ ಝೇಂಕಪ್ಪ ನಾಮದಿ  ೧೨೮

ಆನಂದ ಅಶ್ರುಜಾನು ನೀನು ಬಂದ ವರ್ತಮಾನ
ನಾನು ಹೇಳ್ದೆ ನಿನಗೆ ತಿಳಿವೊಲು
ಜ್ಞಾನಶಿದ್ಧ ಪುರಷ ಕೊಂಡಪ್ಪನಿಹನಯೋಧ್ಯದಲ್ಲಿ
ನೀನು ಹೊಂದು ಚರಣವೆಂದಳು        ೧೨೯

ಯೋಗಿಯಾತ ರುಷಿಯು ಆತ ಸಾಧುಸತ್ಪುರಷನಾತ
ಹೋಗು ನಿನ್ನ ಮೂಲ ತಿಳಿವದು
ಹೋಗುವವು ಭವವು ನಿನಗೆ ರಾಜಯೋಗಿಯಾಹೆಯೆನಲು
ಆಗ ಮುಸಿಮುಸಿ ನಕ್ಕನು    ೧೩೦

ನೀನು ಏನು ಬಲ್ಲೆ ಯೋಗಿರುಷಿಯು ಸಾಧುಸತ್ಪುರಷ
ಜ್ಞಾನಿಗಳುಯಂಬ ವಿವರವಾ
ಏನೇನು ಅರಿಯದು ಕುರಿಯು ಯರೆಮಂಗ ನೀನು
ಏನು ಸುದ್ದಿಯಾಡ್ವೆಯೆಂದನೂ       ೧೩೧

ಯರಿಮಂಗ ನಾನು ಅಲ್ಲ ಕಿರಿಯ ಮಂಗನನ್ನು ಮಾಡ್ವೆ
ಬರಿಯ ಮಾತಲ್ಲವೆನುತಲೀ
ಸರಿದು ಮರೆಯಾಗಲಿಕ್ಕೆ ಅರಿದನಂಬನೀಗಯೆಂದು
ಪರಮ ಹರುಷವನ್ನು ತಾಳಿದ          ೧೩೨

ಕಲಿಯುಗದಿ ಯೋಗಿಗಳ ಸುಳುಹುವೆಂಬುದಂಟೆ ಮೊದಲೆ
ಬಲು ಮಹತ್ಮರಿಹರು ನಿಜವದು
ಮಲಹರಾಳು ಎನಗೆ ಹೇಳಿದಳು ಸುಳ್ಳಲ್ಲ ಮಾತು
ಗೆಲಿದೆ ಭವವನೀಗಯಂದನು            ೧೩೩

ತುಂಗಭದ್ರ ತೀರದಲ್ಲಿಯಿರುವಯೋಧ್ಯಕ್ಕೆ ಬಂದು
ಕಂಗಳಲಿ ಕಂಡ ಗುರುವಿನ
ಮಂಗಳನ ಮಹಿಮ ಸರ್ವಸಂಗ ದೂರನೇ ನಮೋ ವೀ
ಹಂಗ ಪಥನೆಯೆಂದರೆಗಿದ    ೧೩೪

ನಿತ್ಯ ನಿರ್ಗುಣನೇ ನೀರವಯನೆ ನಿಜನಿತ್ಯ ತೃಪ್ತ
ಸತ್ಯ ತನ್ನಾತ್ಮನೇ
ಪ್ರತ್ಯಗಾತ್ಮ ಪರಬ್ರಹ್ಮ ಪರಮಾತ್ಮ ಪರಾವರನೇ
ಚಿತ್ತ ದೂರ ನಮೋಯೆಂದನೂ         ೧೩೫

ಭಕ್ತವತ್ಸಲನೆ ಭವಹರನೆ ಭಾಗ್ಯನಿಧಿಯೆ ನಿತ್ಯ
ಮುಕ್ತನೆನಿಪ ಭವ್ಯಚರಿತನೆ
ತ್ಯಕ್ತ ಮಾಡಿ ನಾಲ್ಕು ತನುವ ಚಿನ್ಮಾತ್ಮನೇ ಸರ್ವ
ಯುಕ್ತಿದೂರ ನಮೋಯೆಂದನು         ೧೩೬

ಆವುದಕ್ಕೆ ನಿಲುಕದಿಹ ಅರಿವಿಗೆ ರೂವಾಗಿಯಿಹ
ಪಾವನಾತ್ಮ ತನುವ ಧರಿಸಿಯೆ
ಸಾವಿರನಂತ ವೇದ ಹೊಗಳಿ ಕಾಣದಿಹ ಗುರು
ದೇವನೆ ನಮೋಯೆಂದನು    ೧೩೭

ಅವಯವವ ಧರಿಸಿ ಅಂಗರಹಿತ ಭಕ್ತರಾನು ಸಲಹೆ
ಭುವನ ಪಾವನವ ಮಾಡಲು
ಶಿವಗೆ ಶಿವನು ಆದ ಗುರು ತಾರಕ ಬ್ರಹ್ಮವೆನಿಸಿ
ಜವನನೊದೆಯ ಬಂದ್ಯಯೆಂದನು      ೧೩೮

ತನುವು ಸಾಕು ಸಾಕು ಸಾಕು ಸತ್ತು ಸತ್ತು ಹುಟ್ಟಲಾರೆ
ಯೆನಿತು ಜನ್ಮಯೆನಿತು ದುಖಃವು
ನೀನಗೆ ಹೇಳ್ವದೇನುಂಟು ನಿನ್ನಂತೆನ್ನ ಮಾಡಿಕೊಳ್ಳೊ
ಮನವು ಇದೇ ಎನ್ನದೆಂದನು            ೧೩೯

ಒಲ್ಲೆಒಲ್ಲೆ ಭವವನಿದನು ಉಂಡೆಉಂಡೆ ಸಾಕುಸಾಕು
ಕಲ್ಲವಿಲ್ಲಿಯಾದೆ ನಾನೆಯು
ಸುಳ್ಳಲ್ಲ ಸ್ವಸ್ವರೂಪದಲ್ಲಿ ಇಡುಯೆನ್ನೀಗ
ಬಲ್ಲವಿಕೆ ಬೇಡವೆಂದನು     ೧೪೦

ಎಷ್ಟು ತಂದೆ ಆದರೆನಗೆ ಎಷ್ಟು ತಾಯಿ ಆದರೆನಗೆ
ಎಷ್ಟು ಮನಿಯು ಎಷ್ಟು ಸ್ವಾಸ್ತಿಯು
ಎಷ್ಟು ಸ್ವರ್ಗ ಎಷ್ಟು ನರಕ ತಿರುಗೆ ತೀರದು ಇದನು
ಸುಟ್ಟು ಶುದ್ದನೆನಿಸುಯೆಂದನು        ೧೪೧

ದೀಪ ತಗುಲಿ ದೀಪದೊಲು ದೃಷ್ಟಿಯಿಡು ಎನ್ನ ಮೇಲೆ
ಅಪರಾಂಬ ಕಳುಹ ಬಂದೆನು
ರೂಪರಹಿತನನ್ನೆ ಮಾಡು ಇದೇ ಜನ್ಮ ಸಾಕುಯೆಂದು
ಕೃಪಾನಿಧಿಯೆ ಗುರವೆಯೆಂದನು        ೧೪೨

ಎನ್ನಲಿಕೆ ಗುರುವು ಕೇಳಿ ನಿನ್ನ ಸುಕೃತವಿದ್ದಡೆಯು
ತನ್ನಗೆಯು ತಾನೇ ಅಹುದು
ಕರ್ನಕಾ ಮಾತು ಬೀಳೆ ಸಂತೋಷದಿ ಗುರುಪಾದ
ಘನದ ಸೇವೆಯೊಳಗೆ ಇರ್ದನು          ೧೪೩

ಬಾಲಲೀಲೆ ಚರಿತವನು ಹೇಳಿದೆನು ನಾನು ಈಗ
ಭಾಳಕ್ಷೇತ್ರ ಸಂಚಾರವ
ಮ್ಯಾಳವಾಗಿ ಮುಂದೆ ಹೇಳ್ವೆ ಇಲ್ಲಿಗೊಂದು ಸಂಧಿಯೆಂದು
ಬಾಲ ಅಯ್ಯಪ್ಪ ನುಡಿದನು            ೧೪೪

ಮಂಗಳವು ಕೇಳಿದರಿಗೆ ಮಂಗಳವು ಹೇಳಿದರಿಗೆ
ಮಂಗಳವು ಸ್ತ್ರೀಯ ದೇಶಕೆ
ಮಂಗಳವು ಚಿದಾನಂದ ಅವಧೂತ ಚಾರಿತ್ರ
ಮಂಗಳಕೆ ಮಂಗಳೆಂದನು     ೧೪೫

ಇತಿ ಶ್ರೀಮತ್ಪರಮಹಂಸ ಪರಿವ್ರಾಜಕಾಚಾರ್ಯ
ಶ್ರೀ ಚಿದಾನಂದ ಅವಧೂತ
ಸದ್ಗುರುವರ್ಯ ಚರಣಕಮಲ ಭೃಂಗ
ಅಯ್ಯಪ್ಪ ವಿರಚಿತ ಚಿದಾನಂದ ಸದ್ಗುರು ಅವಧೂತ ಚಾರಿತ್ರದಲ್ಲಿ
ಬಾಲ ಚಾರಿತ್ರ ವಿವರ ಸಮಾಪ್ತಂ
ಅಂತು ಸಂಧಿ ೧ಕ್ಕೆ ಪದ ೧೪೫ಕ್ಕೆ ಮಂಗಲಮಹಾಶ್ರೀ ಶ್ರೀ ಶ್ರೀ

 

[1] ಆತುತಕ್ಷಣಾ

[2] ಆತುತಕ್ಷಣಾ

[3] ಹಾಶ್ಯ

[4] ಹಾಶ್ಯ