ಈ ಪ್ರಕಾರ ಭಿಕ್ಷವನ್ನು ಎರಡೆರಡು ದಿನಕೆ ಹೋಗಿ
ತಾಪಬಡದೆ ದೇಹ ಕಷ್ಟಕೆ
ಓಪಳಾಗಿ ಸರ್ವ ಕೆಲಸ ಸರ್ವಸೇವೆ ಮಾಡುತಲಿ
ಪಾಪಹರಳು ಉಣಿಪಳವರಿಗೆ            ೭೬

ಲೋಕ ಮೆಚ್ಚೆ ಗುರುವು ಮೆಚ್ಚೆ ಸಾಧುಸಂತರು ಮೆಚ್ಚೆ
ಏಕ ಆತ್ಮರೆಂಬ ಭಾವದಿ
ಕಾಕು ಮುಂಡೆಗಂಡರ ಗುಣವ ಮನಕೆ ತಾರದಲೆ
ಲೋಕೇಶಳಿದ್ದಳೀಪರೀ      ೭೭

ಅಲ್ಲಿಗೆಯು ಹೋಗಲಿಕ್ಕೆ ರಾಮಚಂದ್ರ ಗೋಸಾಮಿ
ನಿಲ್ಲಿಸೆಯೇಕೊಂಡ ದಶದಿನ
ಎಲ್ಲ ವೀರಮ್ಮನ ಸೇವೆಯನ್ನೆ ನೋಡಿದನು
ಸೊಲ್ಲಿಸಲಸಕ್ಯವೆಂದನು     ೭೮

ಈಸಗಾಯಿಯನ್ನೆ ಕಟ್ಟಿ ಗೋದಾವರಿಯನ್ನೆ ಈಸಿ
ಆಸು ಭಿಕ್ಷವನ್ನೆ ಮಾಡಿಯೆ
ಈಸಿ ಬಂದು ಸರ್ವ ಸೇವೆ ಮುಗಿಸಿ ರಾತ್ರ ಬ್ರಹ್ಮ ಚರ್ಚೆ
ವಾಸಳಾಗಿಹುದ ಕಂಡನು     ೭೯

ಎರಗಿದಾಕೆ ಪಾದಕೆ ನಿನಗೆ ಸರಿಯುವುಂಟೆ ಸೇವೆಲೀಗ
ಗುರುವ ಸೇವೆ ಮಾಡ್ವರೆಲ್ಲರು
ಕರದು ತಂದು ನಿನ್ನ ಮೇಲೆ ಬಲುನಿವಾಳಿ ಮಾಡಬೇಕು
ಪರಬ್ರಹ್ಮ ನೀನೇ ಎಂದನು  ೮೦

ಹೊಗಳಿದನು ನಿನ್ನಂತೆ ಗುರುವ ಸೇವೆ ಮಾಡ್ವದೆ
ಮಗೆ ಬಗೆದುಯೀಯ್ಯೆಂದೆನುತಲಿ
ತೆಗೆದು ಅಪ್ಪಿದಾಕೆಯನು ನೀಚರನ್ನೆ ನೋಡಿ ನೀವು
ಹೋಗಿರಿ ನರಕವೆಂದು ತೆರಳಿಸಿದಾ      ೮೧

ಪೈಣವಾದನಾ ಮ್ಯಾಲೆ ತುಲಸಿ ಗ್ರಾಮಕ್ಹೋದನಾಗ
ಜ್ಞಾನವೈಶ್ಯರಿದ್ದಲ್ಲಿಯು
ಕಾಣುತಲಿ ಮನಿಗೆ ಒಯ್ದು ಪೂಜಿಸಿಯೆ ಕೇಳಿದರು
ನೀನು ಎಲ್ಲಿಗೋಹೆ ಎಂದರು           ೮೨

ತುಂಗಭದ್ರೆ ತಿರಯೋಧ್ಯದಿಂದ ಗುರುವಿನಪ್ಪಣಿಂದ
ಇಂಗಿತದಿ ನಾನಾ ಕ್ಷೇತ್ರವ
ಕಂಗಳಲಿ ನೋಡ್ವೆನೆಂದು ಬಂದೆ ನೋಡ್ದೆ ಸರ್ವಕ್ಷೇತ್ರ
ಮಂಗಳ ಸ್ಥಳಗಳೆಂದನು      ೮೩

ಹೋಹೆದತ್ತಾತ್ರಿ ಸ್ಥಾನಕೆನಲು ಅವರು ನುಡಿದರೀಗ
ಈಹುದಿಲ್ಲಿಗಾವುದರೆಯಲೀ
ಮಹಾಕ್ಷೇತ್ರವದೆ ಉನಿಕಿಯೆಂಬುದೀಗ ವಿಚಿತ್ರ
ಹೋಹಣಾಗೆ ತಿಳಿವುದೆಂದರು           ೮೪

ಎಂತು ಮಹಿಮೆ ಉನಿಕಿಕ್ಷೇತ್ರವೆಂದರೆಯು ಹೇಳ್ದರಾಗ
ಅಂತದರೊಳು ವೆಂಕಪ್ಪನೆಂಬನು
ಯಂತಯಂತ ಭೂತ ಬ್ರಹ್ಮೇತಿಗಳು ಹೋಹವಲ್ಲಿ
ಚಿಂತಿ ಅಲ್ಲಿ ಉಳಿಯದೆಂದನು          ೮೫

ಉನಿಕಿಯೇಂಬ ಸ್ಥಾನದಲ್ಲಿ ಉಕ್ಕನಾ ಪುಡಿಯ ಮುಕ್ಕಿ
ಮುನಿಯು ವಿಶ್ವಾಮಿತ್ರನೀಗಲೀ
ಘನದ ತಪಸನೀಗ ಅಂಬಗೋಸ್ಕರಾಗಿ ಮಾಡಿದನು
ಎನಿತು ಹೇಳನೇನ ತಪಸನು  ೮೬

ಬಂದಳು ದೇವಿಯಾಗ ಅಂದಳು ಮುನಿಗೆ ಮಾತ
ನಿಂದು ಬೇಡಲೇನು ಹೇಳೆನೆ
ಸಂದೇಹವಿಲ್ಲದಲೆ ಎನ್ನ ಮಂದಿರದೊಳು ಇರು ಎನೆ
ಅಂದು ವಾಸವಾದಳಂಬನು  ೮೭

ಉನಿಕಿಯೆಂಬ ಕ್ಷೇತ್ರದಲ್ಲಿ ಉನಿಕೆಯೆಂಬ ದೇವಿಯು
ಉನಿಕೇಶನೆಂಬ ಈಶ್ವರ
ಘನಮುನಿಯ ವಿಶ್ವಮಿತ್ರನಾಶ್ರಮವು ತಾನು ಅದುವೆ
ಮುನಿಯು ಬಹಳ ಕಾಲವಿದ್ದನು       ೮೮

ಬಂದರಲ್ಲಿಗೆಯು ರಾಮಲಕ್ಷ್ಮಣ ಸೀತೆ ಸಹಿತ
ಬಂದು ಕಂಡು ವಿಶ್ವಾಮಿತ್ರಗೆ
ಅಂದು ಸಾಷ್ಟಾಂಗವಿಕ್ಕೆ ಎತ್ತಿದನು ಮೂವರನು
ಇಂದು ಬಳಲಿದಿರಿಯೆನುತಲಿ ೮೯

ಉನಿಕಿದೇವಿಯು ಹೋಗಿ ಅಡ್ಡಬೀಳಲಿಕ್ಕೆ ಆಗೆ
ಉನಿಕಿದೇವಿ ಅಪ್ಪಿಕೊಂಡಳು
ಉನಿಕಿ ಈಶನಾದವಂಗೆ ಹೋಗಿ ಅಡ್ಡಬೀಳಲಿಕ್ಕೆ
ಉನಿಕೇಶ್ವರನಪ್ಪಿಕೊಂಡನು ೯೦

ಬಂದನೀಗ ಅಂಬ ಶಿವನ ದರುಶನವ ತೆಗೆದುಕೊಂಡು
ಇಂದುಮುಖಿಯು ಸೀತೆ ಸಹಿತಲಿ
ಛಂದವಾದ ಆಶ್ರಮದವೆಡಬಲದಲಿಹ ಜಗುಲಿ
ಲಂದು ಕುಳಿತ ಸೀತೆ ರಾಮನು           ೯೧

ಆಗ ಸಿತಗೆಯು ರುಷಿಯ ಪತ್ನೆರಾಗಿ ರಾವಣನ
ನೀಗಿ ಕಲೆಯಲಿಕ್ಕೆ ಹೋಹೆಯು
ಯೋಗ ರೂಪೆ ಯೋಗ ಮಾಯೆ ಯೋಗಹೃದಯವಾಸಿಯೆಂದು
ಆಗಳಪ್ಪಿಕೊಂಡರೆಲ್ಲರೂ   ೯೨

ಸೀತೆಗಯು ಕಾದನೀರ ಸ್ತ್ರೀಯರು ಕೂಡಿ ಜಗದ
ಮಾತೆಯೆನುತ ಕೈಯಮೈಯನು
ಓತು ಹಿಸಿಕಿಯರದರಾಗ ಮಡಿಗಳನ್ನೆ ಹಾಸಿ ಮಲಗು
ಆತುಮಳೆಯೆಂತೆಂದರು       ೯೩

ಕೇಳಿದನು ವಿಶ್ವಾಮಿತ್ರ ರಾಮನವನ ವಾಸವ
ಭಾಳ ಚಿಂತೆ ಲೋಕದಂತೆಯು
ತಾಳಿ ದೇವತೇರ ಸಲಹೊ ಕಾರಣಾರಣ್ಯವಾಸ
ಲೀಲಾತ್ಮ ನೀನು ಬಂದೆಯು            ೯೪

ನಿಶ್ಚಯನೆ ನಿರವಯನೆ ನಿಷ್ಕಳಂಕ ನಿಷ್ಪ್ರಪಂಚ
ನಿಶ್ಚವನೆ ಸಾಧುರೂಪನೆ
ಕುಶ್ಚಿತನು ನಾನು ನೀನು ಬಂದೆಯೆನ್ನ ಗೃಹಕೆ ಈಗ
ನಿಶ್ಚಿತೆನ್ನ ಭಾಗ್ಯವೆಂದನು   ೯೫

ಶ್ರಮವುಯೇನಿಲ್ಲದೆಲೆ ಶ್ರಮವ ಕಳೆದರಣ್ಯ ಚರಿಪ
ವಿಮಲ ರುಷಿಪತ್ನಿಪತಿ ಸಹಾ
ಅಮಳ ಪಾದವನ್ನೆ ಹಿಸುಕಿ ಬಿಸಿಯ ನೀರನೆ ಎರೆದು
ಕ್ರಮದಲಿಂದ ಪೋಷಿಸಿದನು ೯೬

ಹಾಗೆ ಲಕ್ಷ್ಮಣನ ಪೋಷಣೆಯನೆ ಮಾಡಿ ಪಂಚಭಕ್ಷ
ವಾಗಲುಣಿಸಿಯೆ ಮೂರ್ವರ
ಯೋಗಿಗಳ ದಾತಾರನನ್ನು ಇಟ್ಟುಕೊಳ್ಳೆ ಸೀತೆ
ಆಗ ಮುಟ್ಟಾದಳಲ್ಲಿಯು  ೯೭

ಮುಟ್ಟು ಮೂರು ದಿನವು ಆಗೆ ಹುಟ್ಟಿಸಿದನೇಳುಕೊಂಡ
ಶಿಷ್ಟಳೀಗ ಎರದುಕೊಳಲಿಕೆ
ಸ್ಪಷ್ಟವಾಗಿ ಮೂರು ಬಿಸಿ ನೀರ ಓಕಳಿಯ
ದ್ಹಿಟ್ಟು ಮಾಡ್ದಕೊಂಡವಂದನು     ೯೮

ಅರಿಸಿನದ ಕೊಂಡವಂದು ಮಾಡ್ದ ತಣ್ಣೀರ ಕೊಂಡ
ಎರಡನಾಗೆ ಇಂತುಯೋಳನು
ಸ್ಮರಿಸಿ ಸಿದ್ಧಿಯನ್ನೆ ಮಾಡ್ದ ಏಳು ವಿವರ ಹೇಳುವೆನು
ಅರಿಯುಯೆಂದ ವೈಶ್ಯ ವೆಂಕಟ         ೯೯

ಮೂರು ಬಿಸಿನೀರು ಕೊಂಡ ವಿವರವದುಯೆಂತೆನಲು
ಪೋರಕೂಸು ಮಾಡ್ವದೆಂದದು
ಭಾರಿಭಾರಿ ಹಿರಯರೀಗ ಮಾಡುವದುವಂದದು
ಘೋರನೇದು ಎರಡನೆಯದು           ೧೦೦

ಮೂರನೆಯ ಕೊಂಡನೀರು ಉಕ್ಕೊ ಕೊಂಡ ಅದರೊಳಗೆ
ಚಾರು ಅಕ್ಕಿ ಕಣಕ ರೊಟ್ಟಿಯು
ತೋರೊ ನಾನಾ ಕಾಯಿಪಲ್ಯ ಅಡಿಗೆ ಮಾಡ್ವ ಬದುಕನೆಲ್ಲ
ಮೂರೆ ಸಾರೆ ಅದ್ದಿ ತೆಗೆವುದು          ೧೦೧

ಅದ್ದಿ ತೆಗೆದ ಹಿಂದೆ ಅನ್ನ ರೊಟ್ಟಿ ಕಾಯಿಪಲ್ಯಗಳು
ಸಿದ್ಧವಾಗಿ ಸಕಲ ಬೆಂದೆಯು
ಶುದ್ಧ ಬೆಂಕಿಯಲಿಂದ ಅಡಿಗೆ ಮಾಡಲಿಕ್ಕಿಲ್ಲದಂತೆ
ಶಿದ್ದ ವಿಶ್ವಾಮಿತ್ರ ಮಾಡಿದಾ          ೧೦೨

ಸ್ನಾನ ಮಾಡ್ವ ವಿವರ ಹೇಳ್ವೆ ಅವಲಕ್ಕಿ ಮೊಸರು ಧಡಿಯ
ತಾನು ಕಲಸಿ ಚರ್ವಣೀ ಸಹ
ಮೌನದಿಂದ ದಡದಲ್ಲಿಟ್ಟುಕೊಂಡು ನೀರಮಟ್ಟ ಕುಳಿತು
ತಾನು ಪ್ರಥಮ ಕಾಲನೆದ್ದೋದು      ೧೦೩

ಮೆಲ್ಲಮೆಲ್ಲಗೆಯು ಮೊಳಕಾಲನದ್ದಿ ತೊಡಿಯಮಟ್ಟ
ನಿಲ್ಲುತಲಿ ನಡುವಿಗಿಳಿಯುತ
ಅಲ್ಲಿಗಿಳಿಯಬೇಕು ಪಾವಟಿಗೆಗಳನಿಳಿದ ಅಂತೆ
ಮೆಲ್ಲಗೆಯು ಇಳಿದು ನಿಲ್ವದು         ೧೦೪

ಕೊರಳ ಮಟ್ಟ ನೀರು ಇಹವು ಮೂರು ಮುಳುಗು ಹಾಕಲಿಕ್ಕೆ
ಸೊರಗುವದು ದೇಹ ಉಷ್ಣದಿ
ಭರದಿ ಪಾವಟಿಗೆನಡರಿ ಅವಲಕ್ಕಿ ಮೊಸರಿಗೆಯು
ಕರವ ಹಾಕಿ ಬಾಯೊಳಿಕ್ಕೊದು          ೧೦೫

ಅಂದು ಅವಲಕ್ಕಿ ಮೊಸರನಂದು ಒದ್ದೆ ಬಿಡಲಿಬೇಕು
ಮುಂದೆ ಸಹ ಸಂಧ್ಯಾನವು ಶ್ರಾದ್ಧವು
ಒಂದು ಕ್ಷಣವು ಹೆಚ್ಚು ಆಗೆ ತಾಪ ಹೆಚ್ಚಿ ಮೈಯೊಳು
ಅಂದು ದಾಹದಿಂದ ಸಾವನು            ೧೦೬

ದೇವಿಯಾಜ್ಞೆಗೆ ಹೀಗೆ ಇಹದು ತಿಂದು ಶ್ರಾದ್ಧ ಮಾಡು ಅಂತ
ಆವು ಸಂಶಯವು ಇಲ್ಲವು
ತಾವು ಮೊಸರು ಅವಲಕ್ಕಿ ತಿಂದು ವಿಪ್ರ ಕರ್ಮವನು
ಓವಿ ನಡಸುವರು ಬ್ರಹ್ಮರು ೧೦೭

ಮೊರಮೊರೆಂದು ಗುಳ್ಳಿಗಳು ಹುಟ್ಟುವವು ಹೊಗೆಯು ಸಹಿತ
ಹರಳು ಬೀಳೆ ಕಾಣಿಸುವವು
ಪರಮ ಋಷಿಯು ಈ ಪರಿಯ ಸೇವೆಯನ್ನೆ ಮಾಡಿ ತೋರಿ
ಎರಗಿದನು ದೂರ ಸೀತೆಗೆ     ೧೦೮

ಎರಚಿದನು ಅರಿಶಿನದಕೊಂಡ ಓಕಳಿಯಕೊಂಡ
ಎರಚಿದನು ಬಿಸಿಯ ನೀರನು
ಒರಸಿ ಹೇಮಾಂಬರವ ಉಡಿಸಿ ರತ್ನಕುಂಚುಕೆಯನು
ಇರಿಸಿ ಸರ್ವಭೂಷಣುಡಿಸಿದ ೧೦೯

ತನ್ನ ಮನಕೆ ಬಂದ ಹಾಗೆ ಪೂಜಿಸಿದನು ಸೀತೆಯನು
ತನ್ನ ಸ್ಥಳದಿ ಒಂದು ಪಕ್ಷವ
ಸನ್ನುತಾನಂದದಲಿ ಮೂರ್ವರನ್ನೇ ಇಟ್ಟುಕೊಂಡು
ಚಿನ್ಮಯನ ಕಳುಹಿಸಿಕೊಟ್ಟನು          ೧೧೦

ಹೊರಟರಾಗ ಮೂರು ಮಂದಿ ಸಿಂಹಾದ್ರಿ ಮುಖವಾಗಿ
ಸ್ಥಿರವು ಆಗಿ ವಿಶ್ವಾಮಿತ್ರನು
ಪರಮ ಉನಿಕಿದೇವಿ ಸೇವೆ ಉನಿಕೇಶ ಈಶ್ವರನ
ನಿರುತ ಸೇವೆಲಿಂದಯಿರ್ದನು            ೧೧೧

ಕಾಲಬಹಳವಿದ್ದು ಹೇಮಕೂಟಕೆಂದು ಉನಿಕೆದೇವಿ
ಗ್ಹೇಳಿ ಉನಿಕೇಶಗ್ಹೇಳಿಯೇ
ವಾಲಯಾದಿ ಎನ್ನ ಸ್ಥಳದಿ ಎಂದೆಂದಿಗಿರಿಯೆಂದು
ಕಾಲ ಮೇಲೆ ಬಿದ್ದು ತೆರಳಿದಾ          ೧೧೨

ಇದ್ದರಲ್ಲಿ ಬಹಳ ಮುನಿಯು ಉನಿಕೆದೇವಿ ಉನಿಕೇಶನ
ಹೊದ್ದಿ ಸೇವೆಯನ್ನು ಮಾಡುತ
ಅದ್ದಿ ಉಷ್ಣ ನೀರೊಳಾಗೆ ಅಕ್ಕಿ ಭಕ್ಷ ಕಾಯಿಪಲ್ಯ
ಸಿದ್ದವಾಗಿ ಅಡಿಗೆವುಂಬರು  ೧೧೩

ಬೆಂಕಿಯನ್ನು ತರದಲೇ ಉಷ್ಣೋದಕದಿ ಸ್ವಯಂಪಾಕ
ಕೊಂಕು ಇಲ್ಲದಾಗಿ ಸರ್ವರು
ಹಂಕರುಡಗಿ ಮದವು ಮತ್ಸರುಡಗಿ ಜೀವತ್ವ ಉಡುಗಿ
ಶಂಕರಾಗಿ ಇಹರು ಮುನಿಗಳು           ೧೧೪

ಇರಲಿ ಹೋಗೆ ತ್ರೈತಯುಗವು ದ್ವಾಪರ ದಾಂಟಿ ಕಲಿಯು
ಬರಲು ದೇವಿ ಶಿಲದ ಮೂರ್ತಿಯು
ಹರನು ಈಗ ಶಿಲದ ಲಿಂಗವಾಗಿ ಸರ್ವಕಪ್ಪಣೆಯ
ಚರವು ಹಿಮಾಚಲಕೆ ಆದರು ೧೧೫

ಗೊಂಡರಾಜದರಸುಗಳ ವಂಶಪರಂಪರೆಯಲಿಂದ
ಚೆಂಡಿಕೆಯು ಶಿವನ ಸೇವೆಯ
ಖಂಡಣಗದಲೆ ಇರಲು ಬೀರಶಾಹಿಯೆಂಬುವನು
ಚಂಡರಾಜನೀಗ ಹುಟ್ಟಿದಾ ೧೧೬

ಹುಟ್ಟಲಿವನು ಬಹಳ ದೇಶ ದೇಶಕೆಯು ಹೆಸರು ಆದ
ನಿಷ್ಠಿಲಿರಲು ಅಂಬ ಸೇವೆಗೆ
ಹುಟ್ಟಿದನು ಅವಗೆ ಮಗನು ವೀರಶಾಹಿಯೆಂಬ ಹೆಸರ
ಇಟ್ಟರೀಗ ಮುನಿಯ ಹಿರಿಯರು       ೧೧೭

ಒಂದು ದಿವಸ ಬೀರಶಾಹಿ ಸಮಾರಾಧನೆಯ ಮಾಡ
ಲಂದು ಹೋದ ಉನಿಕಿ ಕ್ಷೇತ್ರಕೆ
ಸಂದಳಿಯ ಡೇರೆಝಾಂಡೆ ಮಂದಿ ಕುದರಿ ಆನೆಗಳು
ಅಂದು ನೆರೆಯಿತು ಬಹಳದೀ            ೧೧೮

ಶುದ್ಧವುಷ್ಣಕೊಂಡದಲ್ಲಿ ಅದ್ದಿಅದ್ದಿ ಅಡಿಗೆಯನು
ಸಿದ್ದವಾಗಿ ನೈವೇದ್ಯವ
ಬುದ್ದಿಲಿಂದ ಕೊಡಲಿಕೆಯು ಆಡುತಲಿ ವೀರಶಾಹಿ
ಬಿದ್ದ ಉಷ್ಣಕೊಂಡದೊಳಗೆಯು      ೧೧೯

ಕಮರಿ ಹೋದನೀಗ ಬಾಲ ಕಂಡುದಿಲ್ಲ ಒಬ್ಬರಾರು
ಅಮರಿಶೊಕ ಬೀರಶಾಹಿಗೆ
ವಿಮಳೆ ಎನ್ನ ಮಗನ ನೀನು ನುಂಗಿದ್ಯಾ ಎಂದು ಹೊರಳೆ
ಭ್ರಮರಿ ಅವಗೆ ಉತ್ತರಿತ್ತಳು            ೧೨೦

ನುಡಿದಳಂಬನೀಗ ಅವಗೆ ಬಿಡುವು ಶೊಕ ಮುಂದೆ ನಿನಗೆ
ಕೊಡುವೆನೀಗ ಮತ್ತೆ ಪುತ್ರನ
ಹಿಡಿಸು ಭಂಡಕೊಂಡ ಮೇಲೆ ಬಿದ್ದು ಸಾವರೆಂದು ಅವನ
ಒಡಂಬಡಿಸೆ ಭಂಡೆಯಿಡಿಸಿದ ೧೨೧

ಮುಚ್ಚಿಸಿದನು ಭಂಡೆಯಿಂದ ಉಷ್ಣೋದಕದ ಕೊಂಡವನು
ಅಚ್ಚರಿಯನೇನ ಹೇಳಲಿ
ಮುಚ್ಚಿದ ಕಲ್ಲ ಸಂದಿಯೊಳಗೆ ಉಸರು ಹಾಯೆ ಬೆರಳ
ಹಚ್ಚೆ ಬೆರಳು ಗುಳ್ಳೆಯೆಳ್ವದು         ೧೨೨

ಪುತ್ರವನ್ನೆ ಕೊಟ್ಟಳಾಗ ಉನಿಕಿದೇವಿಯ ಮ್ಯಾಲೆ
ಮತ್ತೆ ಹರಕಿ ಒಪ್ಪಿಸೆಂಬಗೆ
ತೆತ್ತಿಸಿದನು ಗುಡಿಯು ತೊಲೆಯ ಕಂಭವಿಲ್ಲದಲೇ ಕೊಂಡ
ಮತ್ತೆ ನಡುವೆ ಮಾಡಿಕೊಂಡೆಯಾ      ೧೨೩

ಏಳು ಕೊಂಡದೊಳಗೆ ಒಂದು ಕಡಿಮೆಯಾಗಿ ಆರುಕೊಂಡ
ಹೇಳೆ ಈಗ ಇರುತಲಿಹವು
ಬಹಲ ಜನರು ಈಗ ಅಗ್ನಿವೈದು ಅಡಿಗೆ ಮಾಡತಿಹರು
ಹೇಳದೆನು ಎಂದು ವೆಂಕಟಾ  ೧೨೪

ಸೂರ್ಯ [1]ನಾಳೆ ಉದಯವಾಗೆ[2] ನಿಮ್ಮನೀಗ ಕರೆದುಕೊಂಡು
ತೋರುವೆನು ಸರ್ವವೆನುತಲಿ
ನಾರಿಗೆಯು ಹೇಳ್ದ ಬುತ್ತಿ ಮಾಡಿ ನೀವು ಉನಿಕಿಕ್ಷೇತ್ರ
ದಾರಿಗೆಂದು ವೆಂಕಟೆಂದನು   ೧೨೫

ಕರೆದುಕೊಂಡು ಹೋದನವನು ಚಿಕ್ಕಚಿನಗು ಸಹಿತವಾಗಿ
ಮೊರೆವುತಿತ್ತು ಉಷ್ಣಕೊಂಡವು
ಹಿರಿಯ ಗುಳ್ಳೆ ಸಣ್ಣ ಗುಳ್ಳೆ ಹೊಗೆಯು ಏಳ್ವ ಇಷ್ಟು ನಿಲವು
ಅರಘಳಿಗೆ ನಿಂತು ನೋಡ್ದನು           ೧೨೬

ಇಟ್ಟು ಮೊಸರ ಅನ್ನಚಟ್ನಿ ಧಡದ ಮೇಲೆ ಭವಂತಿಗಳ
ಮೆಟ್ಟನಿಳಿದು ಸ್ನಾನ ಮಾಡಿಯೆ
ಹೊಟ್ಟೆ ತುಂಬ ತಿಂದು ಬುತ್ತಿ ಬಿಟ್ಟುಕೊಟ್ಟರುಟ್ಟುದನ
ಕಟ್ಟಿಕೊಂಡರಾಗ ಮಡಿಗಳ  ೧೨೭

ಸಂಧ್ಯಾ ವಂದನೆಯ ಮಾಡಿ ಅಡಿಗೆ ಮಾಡಿ ತೀರ್ಥ ವಿಧಿಯ
ನಂದು ಮುಗಿಸಿ ನೈವೇದ್ಯವ
ವಂದಿಸಿಯೆ ದೇವಿಗೆಯ ಉನಿಕೇಶನಿಗರ್ಪಿಸಿಯೆ
ಅಂದು ಭೂಜನವ ಮಾಡಿದರು         ೧೨೮

ಮೂರುದಿನವು ವೈಶ್ಯರೊಳು ಇದ್ದನಲ್ಲಿ ಅಲ್ಲಿಂದ
ದಾರಿಹಿಡಿದ ಸಿಂಹಾದ್ರಿಗೆ
ಏರಿದನು ಗಿರಿಯನೀಗ ಕಮಂಡಲ ಸ್ನಾನ ಮಾಡಿ
ಸೂರ್ಯನು ಯೇರೆ ತಾಸಿಗೆ  ೧೨೯

ದತ್ತಾತ್ರೆಯ ಲಿಂಗದರುಶನವನ್ನೆ ಮಾಡಿದನು
ಮತ್ತೆ ಅನುಸೂಯೆಯೆಂಬಳ
ಹತ್ತಿರಕೆ ಹೋಗಿ ಪೂಜಿಸಿಯೆ ಪರ್ವತವನಿಳಿದು
ಚಿತ್ತವಿಟ್ಟು ಮಾಹೊರಮ್ಮೆಗೆ          ೧೩೦

ನಡೆದಳು ಮಾವಳೆನಿಪ ಕೆರಿಯ ತೀರ್ಥಸ್ನಾನವನ್ನೆ ಮಾಡಿ
ಒಡಲನೀಡಿ ರೇಣುಕೆಗೆಯು
ಬಿಡದಲಿದ್ದು ಐದುದಿವಸ ದಕ್ಷಿಣಾಗಿ ಗುರುಸ್ಮರಣೆ
ನುಡಿಯುತಲಿ ಬಂದನಾಗಳು            ೧೩೧

ಬಂದು ತುಳಜಪುರಿಯ ಹೊಕ್ಕು ತುಕ್ಕಾಯಳನ್ನು ನೋಡಿ
ಅಂದು ಭಿಮರಥಿಯ ತಡಿಯಿಹ
ವಂದಿಸಿಯೆ ಸನ್ನುತಿಯ ಚಂದಲೆಯ ಪಾದುಕೆಯು
ಮುಂದೆ ನಡೆದ ಪೊಂಪಾಕ್ಷೇತ್ರಕೆ         ೧೩೨

ಬಂದು ಇದ್ದ ಚಿದಾನಂದ ಗುರುರಾಯನಲ್ಲಿಗೆಯು
ವಂದಿಸಿಯೆ ಅಡ್ಡಬೀಳಲು
ಅಂದು ಆವಾವ ಕ್ಷೇತ್ರ ನೋಡಿದೆಯು ಎಂದನಲು
ನಿಂದು ಬಿನ್ನಹವ ಮಾಡ್ದನು           ೧೩೩

ಸರ್ವತೀರ್ಥ ನೊಡ್ದದ್ಹೇಳ್ದ ಸರ್ವಕ್ಷೇತ್ರ ನೋಡ್ದದ್ಹೇಳ್ದ
ಸರ್ವ ಉನಿಕಿ ಕ್ಷೇತ್ರ ಮಹಿಮೆಯ
ಸರ್ವ ಹೇಳೆ ಗುರುರಾಯ ಸರ್ವಸಂತೋಷವಬಟ್ಟು
ಕರದಿ ಮೈಯ ನ್ಯಾವರಿಸಿದ  ೧೩೪

ಬಂದರಾಗಯೋಧ್ಯಕೆಯು ಗುರುವು ಶಿಷ್ಯರು ಕೂಡಿ
ಇಂದು ಕ್ಷೇತ್ರಾಚರಣೆ ಮುಗಿದುದು
ಸಂಧಿಯೆರಡು ಇಲ್ಲಿಗಾಯ್ತು ಮುಂದೆ ಗುರುಕಟಾಕ್ಷ ಹೇಳ್ವೆ
ನೆಂದು ಅಯ್ಯಪ್ಪ ನುಡಿದನು           ೧೩೫

ಮಂಗಳವು ಕೇಳಿದರಿಗೆ ಮಂಗಳವು ಹೇಳಿದರಿಗೆ
ಮಂಗಳವು ಸ್ತ್ರೀಯ ದೇಶಕೆ
ಮಂಗಳವು ಚಿದಾನಂದ ಅವಧೂತ ಚಾರಿತ್ರ
ಮಂಗಳಕೆ ಮಂಗಳೆಂದನು     ೧೩೬

ಇತಿ ಶ್ರೀಮತ್ಪರಮಹಂಸ ಪರಿವ್ರಾಜಕಾಚಾರ್ಯ
ಶ್ರೀ ಚಿದಾನಂದ ಅವಧೂತ
ಸದ್ಗುರುವರ್ಯ ಚರಣಕಮಲ ಭೃಂಗ
ಅಯ್ಯಪ್ಪ ವಿರಚಿತ ಚಿದಾನಂದ ಸದ್ಗುರು ಅವಧೂತ ಚಾರಿತ್ರದಲ್ಲಿ
ಕ್ಷೇತ್ರ ಸಂಚಾರ ಸಮಾಪ್ತಂ
ಅಂತು ಸಂಧಿ ೨ಕ್ಕೆ ಪದ ೨೮೧ಕ್ಕೆ ಮಂಗಲಮಹಾಶ್ರೀ ಶ್ರೀ ಶ್ರೀ

 

[1] ಸೂರ್ಯಉದಯನಾಳೆಆಗೆ

[2] ಸೂರ್ಯಉದಯನಾಳೆಆಗೆ