ಇಳಿವ ನಡೆವ ತಳುವ ಮಾಡ್ವ ತಿಳಿವ ಪಥವ ಮುಂದೆ ನೋಡ್ವ
ಬಲುಹು ಸರ್ಪನಿರಲು ದಾರಿಲೀ
ಎಳದು ಸರಕಿಗೆಯು ಮತ್ತೆ ಭಂಡೆಗಾನ್ವ ಸ್ಫಟಿಕ ಗುಂಡು
ಹಲವು ಪರಿಯಲಿಂದ ಬೆದಕಿದ          ೭೬

ಎದ್ದು ನಡೆವ ಬಗ್ಗಿ ನಡೆವ ಉದ್ದ ಅಡ್ಡ ಬಿದ್ದು ನಡೆವ
ನಿದ್ರೆ ನೀರಡಿಕೆಯಿಲ್ಲದೆ
ಸಿದ್ಧರ ಜಗುಲಿಗಳ ಮಳಲ ಹೆಜ್ಜೆಗಳನೆಲ್ಲ
ಶುದ್ಧವಾಗಿ ನೋಡುತಿರ್ದನು           ೭೭

ಬಲಕೆ ಹೋದ ಗವಿಗಳೆಷ್ಟು ಎಡಕೆ ಹೋದ ಗವಿಗಳೆಷ್ಟು
ಕೆಳಗೆ ಲೆಖ್ಖವಿಲ್ಲ ಗವಿಗಳು
ನಳಿನ ಸಖನು ಬೀಳಲಿಕ್ಕೆ ಬೆಳಕು ಬೀಳುವುದು ಚಂದ್ರ
ಹೊಳಿಯೆ ಬೆಳದಿಂಗಳಿಹುದು            ೭೮

ತೊಡಿಯ ಕಂಡಗಳು ಒಡಿದು [1]ನಡಿಯದಿರುತಿರಲು[2]
[3]ಕೂಡ್ರುವನು[4] ಘಳಿಗೆಘಳಿಗೆಯು
ಒಡನೆ ಎದ್ದು ಹೋಗಲಿಕ್ಕೆ ಎಡಬಲದಿ ಕೆಂಪುಕಲ್ಲು
ಬುಡದ ಬಂಡೆ ಹಸುರುಯಿತ್ತುದು     ೭೯

ನೆತ್ತಿಮ್ಯಾಲನ ಭಂಡೆ ನೀಲವರ್ನದಿಂದ ಇರಲು ಎದುರ
ಲಿತ್ತು ಸ್ಫಟಿಕ ಗುಂಡದು
ಹತ್ತಿ ಬುಡದ ನೀರು ಅಕ್ಷರೆತ್ತಿ ಹಳದಿಬಣ್ಣದಿಂದ
ಒತ್ತಿ ಬರೆದಿಹುದ ಕಂಡನು   ೮೦

ಬದಿಯಕ್ಹೋಗಿ ಓದಲಿಕ್ಕೆ ವರಮೂರ್ತಿ ವಿರೂಪಾಕ್ಷ
ಚಿದಾನಂದ ಸದ್ಗುರುವಿನ
ಸದಮಲಾದ ಮುದ್ರಿಕೆ ಇಹುದು ಶಿವಾನಂದ ರಾಜಯೋಗಿ
ಇದುವೆ ಸತ್ಯ ಸತ್ಯವೆಂದನು  ೮೧

ನೀರೊಳಗೆ ಊರಗೋಲು ಊರಲಿಕ್ಕೆ ನಿಲುಕದಿರೆ
ಆರೈದು ಸುತ್ತ ಗುರುತನು
ದಾರಿಸಿಕ್ಕೊದೆಂತು ಇನ್ನುಯೆಂದು ತಿರುಗೆ ಮುಂದಕೆಯು
ತೋರದಾಯ್ತು ಮಾರ್ಗವಾಗಳು       ೮೨

ಬೆಳಕು ಬಿದ್ದಿರಲು ಕಿರಿಯ ಗುಂಡುಗಳ ಅಡಕಲಿರಲು
ಬಳಿಕ ಊರಗೋಲ ಸತುವಿಲೀ
ನೆಲೆಯ ಹತ್ತಿದನು ಬಹಳ ಗುಂಡಿನ ಮ್ಯಾಲೆ ಗುಂಡ
ಮಲಹರನ ಧ್ಯಾನದಿಂದಲಿ   ೮೩

ನಿಂದನಾಗ ಗಿರಿಯ ಮ್ಯಾಲೆ ಅಂದು ತಿರುಗ್ಯಾಡಿ ಇಳಿದೆ
ನೆಂದರೆಯು ಜಾಗವಿಲ್ಲದೆ
ಮುಂದೆ ಪಶ್ಚಿಮದಲಿ ಡೊಂಬರೊಂದು ಗಣಿ ಪ್ರಮಾಣ
ವಂದು ನಿಲುಭಂಡೆ ಕಂಡನು  ೮೪

ಜಾರಿಕಿತ್ತು ದೊಡ್ಡಭಂಡೆ ಅದರವಿನಹ ಸ್ಥಳವು ಇಲ್ಲ
ಧೀರತನದಿ ಫಣಿಅಲದ
ಥೋರಸಿಂಬೆಯನ್ನೆ ಮಾಡಿ ಕುಂಡೆ ಬುಡದಲಿಟ್ಟು ತಾನು
ಜಾರಿದನು ಮ್ಯಾಲಿಂದಲಿ     ೮೫

ಒರಸಿ ಹೋಯಿತು ಸಿಂಬೆಯದು ಭಂಡಿಗೆಯು ಕಾಲುಗಳ
ಥರಥರಸಿ ನಿಲ್ಲಲೊಲ್ಲವು
ಕಿರಿಯ ಕಲ್ಲುಗಳ ದಾಟಿ ಬರಲು ಆನೆಗೊಂದಿ ಸಂತೆ
ನರರು ತಿರುಗಿ ಹೋಗುತಿರ್ದರು        ೮೬

ಮಂದಿಗಾವರಾವೆನಲಿ ಕಂದು ನುಡಿದವರು ಸಂತೆ
ಇಂದು ಶುಕ್ರವಾರವೆನಲಿಕೆ
ಬಂದದೀಗ ಸೋಮವಾರಯಿಂದಿಗೈದು ದಿನವಾಯ್ತು
ಅಂದನೇನೋ ಗುರುವುಯೆಂದನು      ೮೭

ಬರಲಿಕೆಯು ಮನಿಗೆ ಗುರುವು ಕಿರಿನಗುವು ನಗುತಲಾಡ್ಡ
ತೆರಳಿಯಿದ್ದಿರೆಲ್ಲಿಗೆಯೆನೆ
ಗುರುಗಳಾಡ್ಡ ಮಾತಕೇಳಿ ಪರಾಮರಿಸೆ ಅಕ್ಷರವ
ಗುರುಗಳ್ಹೇಳ್ದ ಗವಿಗೆಯೆಂದನು       ೮೮

ಬರೆದು ಏನಿದ್ದನೆನಲು ವರಮೂರ್ತಿ ವಿರೂಪಾಕ್ಷ
ಗುರುವಿನ ಗುರುವು ಮುದ್ರಿಕೆ
ಸ್ಥಿರಕರದಿ ಹಳದಿ ವರ್ಣ ಅಕ್ಷರದಲಿಂದ ಸ್ಫಟಿಕಗುಂಡಿ
ಗಿರಲು ಓದಿದೇನುಯೆಂದನು            ೮೯

ಇತು ಗುರುತುಯೇನೆನಲು ಎಡಬಲದಿ ಕೆಂಪುಕಲ್ಲು
ಮತ್ತೆ ಹಸರುಭಂಡೆ ಹಾಸಿಕೆ
ಹೊತ್ತ ಭಂಡೆ ನೀಲವರ್ನಯದುರು ಗುಂಡು ಸ್ಫಟಿಕವರ್ನ
ಹತ್ತಿ ನೀರು ಬುಡಕೆಯಿದ್ದವು           ೯೦

ಎಂದೆನಲಿಕ್ಕೆ ಗುರು ತಂದೆ ನುಡಿದ ಸಹಜ ಮಾತು
ಅಂದನು ನಿನಗೆ ಈಗಲೀ
ಇಂದು ಹೋಗೆಂದೆನೇನ ತಂದೆ ದಣಿದೆಯೆಂದು ಮೈಯ
ನಂದು ನ್ಯಾವರಿಸಿ ಗುರುವರಾ           ೯೧

ಮತ್ತೆ ನುಡಿದ ಒಳ್ಳೆ ದಿವಸ ನದಿಗೆ ಹೋಹನೆಂದು ಕೆಳ
ಗತ್ತ ತಾರಗಿರಿಯು ಇರಲಿಕೆ
ಹತ್ತಿ ಮ್ಯಾಲಕೆಯು ಕಪಿಲ ಆಶ್ರಮಿರಲು ಕಪಿಲ ತೀರ್ಥ
ಮತ್ತೆ ಸ್ನಾನ ಮಾಡುಯೆಂದನು        ೯೨

ಸ್ನಾನ ಮಾಡೆ ತನ್ನ ದಕ್ಷಿಣ ಭಾಗದಲ್ಲಿ ಕೂಡ್ರಿಸಿಯೆ
ಉನ್ನತದ ಬಲದ ಕೈಯನು
ಚೆನ್ನಾಗಿಯೆ ನೆತ್ತಿಲಿಟ್ಟು ನಿನ್ನ ವಿನಹವಿಲ್ಲವೆಂದು
ಮುನ್ನ [5]ಮಂತ್ರೋಪದೇಶ[6] ವಿತ್ತನು  ೯೩

ಇಂದು ರವಿಯು ಅಗ್ನಿಯಲ್ಲಿ ಹೊಂದಿಯೀಹ ನಿನ್ನ ಕಳಿಯು
ಯೆಂದುಕೊಳ್ಳು ಬ್ರಹ್ಮಾಧ್ಯರಲಿ
ಮುಂದೆ ಸುರರು ಅಸುರ ಮುನಿಯು ನರರು ಮೃಗವು ಅಣುವು ಸಕಲ
ಅಂದು ಚೇತನಾನೆಯೆಂದುಕೋ         ೯೪

ಮನಕೆಸಾಕ್ಷಿ ಬುದ್ಧಿಸಾಕ್ಷಿ ಇಂದ್ರೀಯಂಗಳಿಗೆ ಸಾಕ್ಷಿ
ಅನಿತಕೆಯು ಸಾಕ್ಷಿಯೆಂದುಕೋ
ಕನಸಿಗೆಯು ಜಾಗ್ರತೆಯು ಸಾಕ್ಷಿಗೆಯು ಸಾಕ್ಷಿಯೆಂದ
ಚಿನ್ಮಯನೆ ನೀನುಯೆಂದುಕೋ         ೯೫

ಲಕ್ಷಭೇದ ಹೇಳಿದನು ತಾರಕದ ಬ್ರಹ್ಮಕೆಯು
ಲಕ್ಷಕುಳಿತ ಸ್ಥಳವ ಬಿಡದಿರು
ಸಾಕ್ಷಿ ನೀನೆ ಆಗುವೆಯು ಸ್ಥಿರಕರದಿನೆನಿವುದೆಂದು
ಮೋಕ್ಷರೂಪ ಒರೆದ ಕಿವಿಯೊಳು        ೯೬

ಹೇಳಿದನು ಪಿಪೀಲ ಮಾರ್ಗ ಹಠಯೋಗ ವಿಧವನು
ಸಾಲು ಹಿಡಿದು ಸಾಧಿಸೆನುತಲಿ
ಮ್ಯಾಲೆ ಹೇಳ್ದ ರಾಜಯೋಗ ವಿಹಂಗ ಪಥವಿದೆನುತ
ಲೋಲ ನಿತ್ಮಾತ್ಮ ನಲಿಯುತ           ೯೭

ಬಿತ್ತಿದನಿ ಕರ್ಣದಲ್ಲಿ ಬ್ರಹ್ಮ ಉಪದೇಶವನು
ಎತ್ತೆತ್ತ ನೀನೆಂದು ಹೇಳಿದ
ಮತ್ತೆ ಯೋಗಗಳ ಕೀಲ ಮರೆಯದಲೆ ಎಲ್ಲ ಹೇಳ್ದ
ಸತ್ಯಾತ್ಮ ಸುಖವಬಡುತಲಿ  ೯೮

ಯೋಗಿಯಾಗು ನಿಜಸುಖದ ಭೋಗಿಯಾಗು ಸರ್ವಕಾಲ
ತೂಗು ನೀ ಆನಂದ ಭರದಲಿ
ಈಗ ನಿನಗೆ ಹೇಳುದುದೆಲ್ಲ ಸತ್ಯವೆಂದು ಸಾಧಿಸೆ
ಆಗು ಪೂರ್ಣನೆಂದು ಹರಿಸಿದ            ೯೯

ಇಲ್ಲಿ ಯೋಗ ಸಾಧಿಸುವುದು ಎಲ್ಲಿ ನಿನ್ನ ಮನಸುಕೊಳ್ಳ
ದಿಲ್ಲೆ ನಾನು ಬದಿಯಲಿಹೆನು
ಒಳ್ಳೆ ವ್ಯಾಳ್ಯೆವಿಹುದು ಮತ್ತೊಮ್ಮೆ ಕೆಟ್ಟ  ವ್ಯಾಳ್ಯೆವಿಹುದು
ಇಲ್ಲೆ ಸಿದ್ಧಿ ನಿನಗೆ ಎಂದನು ೧೦೦

ಎನ್ನಲಿಕ್ಕೆ ಅಡ್ಡಬಿದ್ದು ಇನ್ನೊಂದು ಬಿನ್ನಹವದೆ
ಏನು ಹೇಳು ಅದೇನೆಂದೆನೆ
ಎನ್ನಗೆಯು ಅಂಬ ಬಂದು ಬಗಳಮಂತ್ರ ಹೇಳಿಹಳು
ಇನ್ನಿದಕ್ಕೆ ಮಾರ್ಗವೆಂದನು  ೧೦೧

ಭಜಿಸು ಬಗಾಲೆಯಾಗಿ ನಿನ್ನ ಒಳಗೆ ಹೊರಗೆ ಅತ್ತ ಇತ್ತ
ಭಜಿಸು ನೀನೆ ನೀನೆಯಾಗಿಯೆ
ಭಜಿಸುಯೆಂದು ಹೇಳೆ ಬಯಲಾಗೋದಕ್ಕೆ ಯುಕುತಿಹನು
ಶ್ರುಜಿಸಿಕೊಡಿರಿಯೆಂದು ನಮಿಸಿದ      ೧೦೨

ಎನ್ನಲಿಕ್ಕೆ ಗುರುರಾಯ ದೇವಿ ಬ್ರಹ್ಮ ಬ್ಯಾರೆವುಂಟೆ
ಇನ್ನು ಆಕೆ ಪರಬ್ರಹ್ಮವು
ಮಾನ್ಯಯನೆ ಬಗಳಬೀಜ ಬ್ರಹ್ಮ ನೀನಾಗಿ ಭಜಿಸು
ನನ್ನ ಸಮ್ಮತೆಂದ ಗುರುವರ            ೧೦೩

ನಿರ್ಗುಣ ಬ್ರಹ್ಮವಾಗಿ ಬಗಸೆ ಬೀಜ ಚಿಂತಿಸು
ಭರ್ಗನೆಯಿಹೆಯು ಸಹಜದಿ
ಕುಗ್ಗದಿರುಯೆಂದು ಮೈಯ ನ್ಯಾವರಿಸಿ ಅಪ್ಪಿಕೊಳ್ಳೆ
ಸುಗ್ಗಿಸುಖದೊಳಗೆ ಮುಳುಗಿದ        ೧೦೪

ಬ್ರಹ್ಮವೇ ಬ್ರಹ್ಮಾಸ್ತ್ರ ಬ್ರಹ್ಮಾಸ್ತ್ರ ವೇ ಬ್ರಹ್ಮ
ಸಮ್ಮತಾಯ್ತು ಗುರುವಿಲೆನುತಲಿ
ಬ್ರಹ್ಮವಾಗಿ ತನ್ನ ಕಂಡ ತನ್ನ ಕಂಡೋಲೆಲ್ಲ ಕಂಡ
ಬ್ರಹ್ಮ ಚಿದಾನಂದ ಕಂಡನು  ೧೦೫

ಹೊಗಳಿದನು ಬಾಯದಣಿಯ ಸುಗಮ ಸದ್ಗುರುವರನ
ನಿಗಮದೂರ ನಿಜನೆಯೆನ್ನುತ
ತೆಗಿಸಿದೆನ್ನ ಭವಸಮುದ್ರ ಮುಗಿಸಿದೆನ್ನ ಜನನ ಮರಣ
ಸುಗಮ ಗುರುವೆ ನಮೋ ಎಂದನು     ೧೦೬

ಆದುದೆನ್ನ ಮನದ ಹರಕೆ ತೀರುದೆನ್ನ ಮನದ ಭ್ರಾಂತಿ
ಹೋದವೆನ್ನ ಸರ್ವಸಂಶಯ
ಮಾದವೆನ್ನ ಬಹಳ ಜನ್ಮ ಕಿಲ್ಪಿಷವುಯೆಂದು ನಿರೂ
ಪಾಧಿ ಬ್ರಹ್ಮಗಡ್ಡ ಬಿದ್ದನು            ೧೦೭

ಹೇಳೆದೆನು ಗುರು ಕಟಾಕ್ಷ ನಾನು ಈಗಲೂ ಮುಂದೆ
ಹೇಳುವೆನು ಹಠದ ಯೋಗವ
ಕೇಳುವರಿಗೆ ತಾನು ಮೂರು ಸಂಧಿಯಾಯಿತು ಎಂದು
ಸುಸ್ಸೀಲ ಅಯ್ಯಪ್ಪ ನುಡಿದನ್ನು      ೧೦೮

ಮಂಗಳವು ಕೇಳಿದರಿಗೆ ಮಂಗಳವು ಹೇಳಿದರಿಗೆ
ಮಂಗಳವು ಸ್ತ್ರೀಯ ದೇಶಕೆ
ಮಂಗಳವು ಚಿದಾನಂದ ಅವಧೂತ ಚಾರಿತ್ರ
ಮಂಗಳಕೆ ಮಂಗಳೆಂದನು     ೧೦೯

ಇತಿ ಶ್ರೀಮತ್ಪರಮಹಂಸ ಪರಿವ್ರಾಜಕಾಚಾರ್ಯ
ಶ್ರೀ ಚಿದಾನಂದ ಅವಧೂತ
ಸದ್ಗುರುವರ್ಯ ಚರಣಕಮಲ ಭೃಂಗ
ಅಯ್ಯಪ್ಪ ವಿರಚಿತ ಚಿದಾನಂದ ಸದ್ಗುರು ಅವಧೂತ ಚಾರಿತ್ರದಲ್ಲಿ
ಸದ್ಗರು ಕಟಾಕ್ಷ ಸಮಾಪ್ತಂ
ಅಂತು ಸಂಧಿ ೩ಕ್ಕೆ ಪದ ೩೯೦ಕ್ಕೆ ಮಂಗಲಮಹಾಶ್ರೀ ಶ್ರೀ ಶ್ರೀ

 

[1] ನುಡಿಯಲಾರದಿರುತಿರಲು

[2] ನುಡಿಯಲಾರದಿರುತಿರಲು

[3] ಕುಡುರುವನು

[4] ಕುಡುರುವನು

[5] ಮಂತ್ರುಪದೇಶ

[6] ಮಂತ್ರುಪದೇಶ