ಸೂ. ಕದನ ಮುಖದಲಿ ಖೋಡಿಯಿಲ್ಲದೆ
ಬೆದರದೊದಗಿದ ನರಗೆ ಕಾರು
ಣ್ಯದಲಿ ಕಾಮವಿರೋಧಿ ಕೊಟ್ಟನು ಪಾಶುಪತ ಶರವ

ಎಲೆ ಕಿರಾತ ಮದೀಯ ಬಾಣದ
ಬಲೆಗೆ ನೀ ಮೃಗವಾಗದಿರು ನಿ
ನ್ನಳವ ಮೆರೆಯಾ ಬನದ ನರಿ ಮೊಲ ಹುಲ್ಲೆ ಹರಿಣನಲಿ
ಗೆಲಿದ ಗರುವನು ನೀನು ನಿನ್ನ
ಗ್ಗಳಿಕೆಗಾವಂಜುವೆವು ನಿನ್ನೀ
ದಳಕೆ ಪತಿಯುಂಟಾದಡಾತನ ಕೊಂಡು ಬಾಯೆಂದ  ೧

ಎನಲು ನಕ್ಕನು ಶಂಭು ಭಕ್ತನ
ಮನದ ಧೃತಿಯನು ಭುಜ ಬಲವನಾ
ತನ ಪರಾಕ್ರಮ ಲಕ್ಷ್ಮಿಯನು ಪಾರ್ವತಿಗೆ ತೋರಿಸುತ
ನೆನೆದು ನುಡಿದನಿದೇನು ತಮ್ಮಡಿ
ನಿನಗೆ ತಪದಲಿ ಖಡ್ಗವೇಕೀ
ಧನು ಶರಾವಳಿಯೇಕೆ ನಿನ್ನಂಗವಣೆಯೇನೆಂದ  ೨

ಏಕೆ ನಿನಗೀ ತಪದ ಚಿಂತೆ ವಿ
ವೇಕ ಶಾಸ್ತ್ರ ವಿಚಾರವಿದು ವಿಪಿ
ನೌಕಸರ ಸಂಹಾರ ವಿದ್ಯಾವೃತ್ತಿ ನಿನ್ನದಲೆ
ಆಕೆವಾಳರ ಕರೆಸು ನೀನೇ
ಕಾಕಿ ನಿನ್ನಲಿ ಹರಿಯದಾಹವ
ವೇಕೆ ನಿನಗೀಗೆಂದು ಕಪಟ ಕಿರಾತನನು ಜರೆದ  ೩

ನೀವು ಬಲ್ಲಿರಿ ಶಾಸ್ತ್ರದಲಿ ಶ
ಸ್ತ್ರಾವಳಿಯಲಾವಿಂದು ಪಕ್ಷಿ ಮೃ
ಗಾವಳಿಯ ಬೇಂಟೆಯಲಿ ಬಲ್ಲೆವು ಜಾತಿ ಧರ್ಮವಿದು
ನೀವು ಬಲುಹುಳ್ಳವರು ನಿಮ್ಮೊಡ
ನಾವು ಸೆಣಸುವರಲ್ಲ ನಿಮ್ಮವೊ
ಲಾವ ಋಷಿ ಶಸ್ತ್ರಜ್ಞ ನಾತನ ಬಿರುದ ತಡೆಯೆಂದ  ೪

ಕಟಕಿಯೇಕೆ ಪುಳಿಂದ ನಾವು
ಬ್ಬಟೆಯ ತಪಸಿಗಳೆಂಬುದಿದು ವಿ
ಸ್ಫುಟವಲೇ ತಪ್ಪೇನು ನಿನ್ನೊಡನೆಂದು ಫಲವೇನು
ಜಟೆ ಮೃಗಾಜಿನ ಭಸ್ಮದೊಡನು
ತ್ಕಟದ ಧನು ಶರ ಖಡ್ಗದಲಿ ಧೂ
ರ್ಜಟಿಯಿಹನು ನಾವವರ ಶಿಷ್ಯರು ಶಬರ ಕೇಳೆಂದ  ೫

ಲೋಕ ಶಿಕ್ಷಕರಲ್ಲಲೇ ನಮ
ಗೇಕೆ ನಿಮ್ಮಯ ತಪದ ಚಿಂತೆ ಪಿ
ನಾಕಧರನಡಹಾಯ್ದರೆಯು ಬಿಡೆವೆಮ್ಮ ವಾಸಿಗಳ
ಈ ಕಳಂಬವಿದೆಮ್ಮದೆನುತ ವ
ನೌಕಹದ ನೆಳಲಿನಲಿ ನಿಂದು ಪಿ
ನಾಕಿ ನುಡಿದನು ಕಡಿದನೀತನ ಸೈರಣೆಯ ಮನವ  ೬

ಮಸಗಿದನು ನಿಮ್ಮಾತನುಗಿದೆ
ಬ್ಬಿಸಿದ ಹುಲಿಯೇ ನೊಂದ ಹಂದಿಯೊ
ಹಸಿದ ಭುಜಗನೊ ಕಾದ ಕಟ್ಟುಕ್ಕಿನ ಛಡಾಳಿಕೆಯೊ  ಉಸುರುಗಳ ಕಾರ್ಬೊಗೆಗಳಾಲಿಯ
ಬಿಸುಗುದಿಯ ಬಲು ಕೆಂಡವಂಬಿನ
ಹೊಸ ಮಸೆಗಳುರಿ ಝಾಡಿ ಝಳಪಿಸೆ ಪಾರ್ಥಖತಿಗೊಂಡ ೭

ಆದಡಿದ ಕೊಳ್ಳೆನುತ ಕೆನ್ನೆಗೆ
ಸೇದಿಬಿಟ್ಟನು ಸರಳನದು ಹಿಂ
ದಾದುದಾ ಬಳಿ ಸರಳನದ ಹಿಂದಿಕ್ಕಿ ಮತ್ತೊಂದು
ಹೋದುದದ ಹಿಂದಿಕ್ಕಿ ಮತ್ತೊಂ
ದೈದಿತತಿ ವೇಗಾಯ್ಲ ತನದನು
ವಾದಸಾಧ್ಯದ ಸರಳು ಕವಿದವು ಬಿಟ್ಟ ಸೂಟಿಯಲಿ  ೮

ಏನ ಹೇಳುವೆನರಸ ಶರದಭಿ
ಮಾನ ದೇವತೆಯುಂಟಲಾ ಹರಿ
ಸೂನುವರಿಯದಡಂಬೆಯರಿಯಳೆ ಚಂಡಿಕಾದೇವಿ
ಭಾನುಮಂಡಳದಂಧಕಾರದ
ವೈನತೇಯನ ಭುಜಗ ತತಿಯ ಸ
ಮಾನಧರ್ಮವ ಕಂಡೆನೀಶನೊಳರ್ಜುನಾಸ್ತ್ರದಲಿ  ೯

ಮತ್ತೆ ಸುರಿದನು ಸರಳ ಮಳೆಯನ
ದೆತ್ತ ನಭ ದೆಸೆಯೆತ್ತ ಧಾರುಣಿ
ಯೆತ್ತಲರ್ಜುನನೆತ್ತ ಕಪಟ ಕಿರಾತ ತಾನೆತ್ತ
ಹೊತ್ತ ಹೊಗರಿನ ಮೊರೆವ ಗರಿಗಳ
ಮುತ್ತುಗಿಡಗಳ ಹೊಳೆವ ಧಾರೆಯ
ಮೊತ್ತದಂಬೌಕಿದವು ಮೃತ್ಯುಂಜಯನ ಸಮ್ಮುಖಕೆ  ೧೦

ಮಂಜು ಮುಸುಕಿದೊಡೇನು ಪರ್ವತ
ವಂಜುವುದೆ ಹಾಲಾಹಲವ ನೊಣ
ನೆಂಜಲಿಸುವುದೆ ವಡಬ ಶಿಖಿ ನನೆವುದೆ ತುಷಾರದಲಿ
ಕಂಜ ನಾಳದಿ ಕಟ್ಟುವಡೆವುದೆ
ಕುಂಜರನು ನರಶರದ ಜೋಡಿನ
ಜುಂಜುವೊಳೆಯಲಿ ಜಾಹ್ನವೀಧರ ಜಾರುವನೆಯೆಂದ  ೧೧

ಕೆರಳಿದನು ಹೇರಂಬ ಗುಹನ
ಬ್ಬರಿಸಿದನು ರೋಷದಲಿ ಮಸಗಿತು
ತರತರದ ವರವೀರಭದ್ರಾದ್ಯಖಿಳ ಭೂತಗಣ
ಹರನು ಕಂಡನಿದೇನಿದೇನ
ಚ್ಚರಿ ಧನಂಜಯನೆಮಗೆ ನೂರ್ಮಡಿ
ಕರಹಿತವ ನಿಮ್ಮಿಂದ ನೀವ್ ಗಜಬಜಿಸ ಬೇಡೆಂದ  ೧೨

ಎನುತ ಕೊಂಡನು ಧನುವನಾ ಪಾ
ರ್ಥನ ಶರೌಘವನೆಚ್ಚಡೀಶನ
ಮೊನೆಗಣೆಯಲಕ್ಕಾಡಿದವು ಬಾಡಿದವು ಬಳಿಸರಳು
ಕನಲಿ ಕಿವಿವರೆಗುಗಿದು ಫಡ ಹೋ
ಗೆನುತ ಮಗುಳೆಚ್ಚನು ಧನಂಜಯ
ನನಿತು ಶರವನು ಕಡಿದು ಮದನವಿರೋಧಿ ಮಗುಳೆಚ್ಚ  ೧೩

ಎಸುಗೆಯೊಳ್ಳಿತು ಶಬರನತಿ ಸಾ
ಹಸಿಕನೈ ಬಿಲ್ಲಾಳಲಾ ಸರಿ
ಬೆಸನನೆಚ್ಚನು ನಮ್ಮೊಡನೆ ಮಝ ಪೂತು ಹಾಯ್ಕೆನುತ
ಹೊಸ ಮಸೆಯ ಹೊಗರಲಗುಗಳ ದ
ಳ್ಳಿಸುವ ಧಾರೆಯ ಕೆಂಗರಿಯ ಡಾ
ಳಿಸುವ ಕಣೆಗಳ ಶರನಿಧಿಯ ಕವಿಸಿದನು ಕಲಿಪಾರ್ಥ  ೧೪

ಈಡಿರಿದವೊಂದೊಂದರಲೆ ಹೊಗೆ
ಝಾಡಿ ಝಳಪಿಸೆ ಉರಿಗಳಲಿ ಸರ
ಳೋಡಿದವು ಗಾಂಡಿವವನೊದೆದು ಮಹೇಶನಿದಿರಿನಲಿ
ಕಾಡಿದೊಡೆ ಕಾರುಣ್ಯನಿಧಿ ಕೊಂ
ಡಾಡುತಿರ್ದನು ಪಾರ್ಥನಂಬಿನ
ಮೂಡಿಗೆಯ ಸಂವರಣೆ ಸವೆದುದು ಸವೆಯದಾಟೋಪ  ೧೫

ಎಲೆ ಕಿರಾತ ಕಿರಾತರೊಳಗ
ಗ್ಗಳೆಯನಹೆಯೋ ದೇವದಾನವ
ರೊಳಗೆ ಸೈರಿಸಿ ನಿಲುವನಾವನು ನಮ್ಮ ವಿಲಗದಲಿ
ಅಳುಕದಿರು ಕಲಿಯಾಗೆನುತ ತುದಿ
ಹಿಳುಕ ಮಂತ್ರಿಸಿ ದಿವ್ಯ ಬಾಣಾ
ವಳಿಗಳಲಿ ಬಾಲೇಂದುಮೌಳಿಯನೆಚ್ಚನಾ ಪಾರ್ಥ  ೧೬

ಏಸು ಮಂತ್ರಾಸ್ತ್ರದಲಿ ಮುಸುಕಿದ
ರೈಸುವನು ಹರ ನುಂಗಿದನು ಮಗು
ಳೇಸು ಕೂರಂಬುಗಳನೆಚ್ಚರೆ ಕಡಿದನಂಬಿನಲಿ
ಈಸು ವೆಗ್ಗಳರಾರೆನಿಪಭಿ
ಜ್ಞಾಸೆ ಬೇಡಾ ಕ್ಷಾತ್ರ ತಾಮಸ
ವೇಸು ಬಲುಹೋ ನಿಮ್ಮ ಜಾತಿಗೆ ರಾಯ ಕೇಳೆಂದ  ೧೭

ಅಂದು ಕಾಂಡವ ವನದ ದಹನದೆ
ಬಂದುದಕ್ಷಯ ಬಾಣವಿದು ತಾ
ನಿಂದು ಬರತುದು ಬಹಳ ಜಲನಿಧಿ ಬತ್ತುವಂದದಲಿ
ಇಂದುಮೌಳಿಯ ಸೇವೆಗಿಂದು ಪು
ಳಿಂದ ಕಂಟಕನಾದನೇ ಹಾ
ಯೆಂದು ಗರ್ಜಿಸಿ ಚಾಪದಿಂದಪ್ಪಳಸಿದನು ಶಿವನ  ೧೮

ಕಳಚಿದನು ದಂಡೆಯಲಿ ಗಾಯದ
ಲಳುಕಿದನಲಾಯೆನುತ ಮಗುಳ
ಪ್ಪಳಿಸಿದನು ಮೇಲ್ವಾಯ್ದು ಹೊಯ್ದನು ಜರೆದು ಝೋಂಪಿಸುತ
ಮೆಲುನಗೆಯಲರ್ಜುನನ ಚಾಪವ
ಸೆಳೆದುಕೊಂಡನು ತನ್ನ ಭಕ್ತನ
ಬೆಳವಿಗೆಯ ಮಾಡಿದನುಘೇಯೆಂದುದು ಸುರಸ್ತೋಮ ೧೯

ತಿಳಿವನುಗಿದಡಿಗಿಕ್ಕಿ ಮರವೆಯ
ಕಳಕಳವೆ ಮೇಲಾಯ್ತು ತಾಮಸ
ಜಲನಿಧಿಯ ತಾಯ್ಮಳಲ ಮುಟ್ಟಿತು ಮನ ಧನಂಜಯನ
ಸೆಳೆದನೊರೆಯಲಡಾಯುಧವ ಬೀ
ಳೆಲವೊ ಶಬರಯೆನುತ್ತ ಹೊಯ್ದನು
ತಳಿರೆಲೆಯ ತಳೆದೆಳೆವೆರೆಯ ನೆಲೆವನೆಯ ಪಶುಪತಿಯ  ೨೦

ಆಯುಧದ ಬರಿಮುಷ್ಟಿಯುಳಿಯಲ
ಡಾಯುಧವ ಶಿವ ಕೊಂಡನೀತನ
ಬಾಯ ಹವಣಿನ ತುತ್ತಹುದೆ ತ್ರಿಪುರಾರಿಯೊಡ್ಡವಣೆ
ರಾಯ ಕೇಳೈ ಪಾರ್ಥನುಬ್ಬಟೆ
ಬೀಯದೀಸರ ಮೇಲೆ ಮತ್ತೆ ವಿ
ಡಾಯಿಯಾಯ್ತತಿ ಚಪಲತನದ ವಿವೇಕ ಮಡಮುರಿಯೆ ೨೧

ಮರನ ಹೆಗ್ಗೊಂಬುಗಳಲಿಟ್ಟನು
ತಿರುಹಿ ಕಲ್ಗುಂಡುಗಳ ಮಳೆಯಲಿ
ಹರನ ನಾದಿದನೇನನೆಂಬೆನು ಪಾರ್ಥನುರವಣೆಯ
ಸರಳ ಸಾರದಲಿನಿತುವನು ಕ
ತ್ತರಿಸಿ ಕರುಣಾವನಧಿ ನುಡಿದನು
ಮರುಳೆ ತಮ್ಮಡಿ ಕೈದುವುಳ್ಳೊಡೆ ಕೊಂಡು ಬಾಯೆಂದ  ೨೨

ಕೈದುವೇಕೆ ಪುಳಿಂದ ನಮ್ಮೊಡ
ನೈದಿಸಾ ಭುಜ ಯುದ್ಧದಲಿ ಬಲು
ಗೈದುವಿದೆಲಾ ಮುಷ್ಟಿ ನಿನಗದುಪಾಯ ಚೊಕ್ಕೆಯವ
ಕಾಯ್ದುಕೊಳ್ಳನುವಾಗು ನಿನ್ನವ
ರೈದಿ ನೋಡಲಿಯೆನುತ ಭುಜವನು
ಹೊಯ್ದು ನಿಂದನು ಪಾರ್ಥನುರೆ ಬೆರಗಾಗೆ ಭೂತಗಣ  ೨೩

ಕಂಡಿರೇ ದೇವಿಯರು ನರನು
ದ್ದಂಡತನವನು ತರಗೆಲೆಯ ಕೈ
ಗೊಂಡು ತಿಂಗಳು ನಾಲ್ಕ ಪವನಗ್ರಾಸದಿಂ ಬಳಿಕ
ದಂಡಿಸಿದನೀ ದೇಹವನು ನಾ
ವಂಡಲೆಯಲೊದಗಿದನಲೇ ಸಮ
ದಂಡಿಯಲಿ ನಮ್ಮೊಡನೆ ಯೆಂದನು ನಗುತ ಶಶಿಮೌಳಿ  ೨೪

ಹಾರಿತಾಯುಧವೆಂದು ಭೀತಿಗೆ
ಮಾರುವೋದನೆ ವೀರರಸ ನೊರೆ
ಯಾರಿತೇ ನಿಜಬಾಹು ಶಕ್ತಿಯೊಳುಂಟೆ ಖಯಖೋಡಿ
ಮೀರಿ ಹತಕಂತುಕದವೊಲು ಪುಟ
ವೇರುತಿದೆ ವಿಕ್ರಮ ಚಡಾಳಿಸಿ
ಬೀರುತಿದೆ ಭುಜ ಭಾರಿಯಂಕವ ದೇವಿ ನೋಡೆಂದ  ೨೫

ಈತ ನರನೆಂಬವ ಕಣಾ ಸಂ
ಗಾತಿ ನಾರಾಯಣ ಋಷಿಗೆ ತಾ
ವೀತಗಳು ಹರಿವಂಶಭೂತರು ಭಕ್ತರಿವರೆಮಗೆ
ಈತನೆಮ್ಮಯ ಪಾಶುಪತ ವಿ
ಖ್ಯಾತ ಬಾಣವ ಬೇಡಿ ತಪದಲಿ
ವೀತರಾಗದ್ವೇಷಿಯಾದನು ಕಾಂತೆ ಕೇಳೆಂದ  ೨೬

ಕೊಡುವೆನೀತಂಗೆಮ್ಮ ಶರವನು
ಮಡದಿ ಮತ್ತೆಯು ನೋಡು ಪಾರ್ಥನ
ಕಡುಹನೆನುತಿದಿರಾಂತು ಬಾಹಪ್ಪಳಿಸಿ ಬೊಬ್ಬಿಡುತ
ಹಿಡಿದರಿಬ್ಬರು ಕೈಗಳನು ಹೊ
ಕ್ಕೊಡನೆ ಹತ್ತಾಹತ್ತಿಯಲಿ ಮಿಗೆ
ಜಡಿತೆಯಲಿ ಚಾಳೈಸಿದರು ಬಹುವಿಧದ ಬಿನ್ನಣವ  ೨೭

ಬಿಗಿವ ಬಿಡಿಸುವ ಬಿಡಿಸಿದಾಕ್ಷಣ
ತೆಗೆವ ಕಳಚುವ ಕೊಂಬ ಲಳಿಯಲಿ
ಹೊಗುವ ಹತ್ತುವ ಲವಣಿಯಲಿ ಲಾಗಿಸುವ ಹೊರವಡುವ
ಚಿಗಿವ ತೊಡಚುವ ಬಿಗಿವ ಬಿಡಿಸುವ
ಬಗಿವ ಬಳಸುವ ಬಂದ ಗತಿಯಲಿ
ಲಗಡಿಸುವ ಲೋಕೈಕ ವೀರರು ಹೊಕ್ಕು ಹೆಣಗಿದರು  ೨೮

ಕರವಳಯ ತಳಹತ್ತ ಡೊಕ್ಕರ
ಶಿರವ ಧಣುಧಣು ವಟ್ಟತಳ ಖೊ
ಪ್ಪರ ದುವಂಗುಲ ಕಂದ ಡೊಕ್ಕರ ತೋರಹತ್ತದಲಿ
ಸರಿಸವಂಕಡ ಬಂಧಪಟ್ಟಸ
ಉರಗ ಬಂಧನ ಬಾಹು ದಣುವಂ
ತರಲಗಡಿಯೆಂಬಿನಿತರಲಿ ತೋರಿದರು ಕೌಶಲವ  ೨೯

ಮುರಿವ ಬಿಡಿಸುವ ಢಗೆಯ ಸೈರಿಸಿ
ತೆರಳಿಚುವ ತಳ ಮೇಲುಗಳಲು
ತ್ತರಿಸವೇಳುವ ಬೀಳ್ವ ಹತ್ತುವ ಸುಳಿವ ವಂಚಿಸುವ
ಹೊರಳ್ವ ತನು ಹೋರಟೆಯ ಸತ್ವೋ
ತ್ಕರುಷ ಸರಿಯೆನೆ ಶಂಭು ಶಿಷ್ಯಗೆ
ಪರಿವಿಡಿಯ ತೋರಿಸುವೊಲಿದ್ದನು ಭೂಪ ಕೇಳೆಂದ  ೩೦

ಗಾಯವುಂಟೇ ತೋರು ನಿನಗಡು
ಪಾಯೊ ಬಿಡು ಜೊಕ್ಕೆಯವನೆನುತಲ
ಜೇಯನೊಡನಿದಿರೆದ್ದು ತಿವಿದನು ಹರನ ಪೇರುರವ
ಗಾಯ ಘಾತಿಗೆ ನಿಮ್ಮ ಮತವೆಮ
ಗಾಯಿತೆನುತ ಪುರಾರಿ ಕಡುಪೂ
ರಾಯದಲಿ ಕರವೆತ್ತಿ ನಸು ತಿವಿದನು ಧನಂಜಯನ  ೩೧

ತರಹರಿಸಿ ನರನಿಕ್ಕಿದನು ಶಂ
ಕರನ ವಕ್ಷಸ್ಥಳವನೆಡೆಯಲಿ
ಮುರಿದು ಕಳಚಿ ಗಿರೀಶನೆರಗಿದನಿಂದ್ರನಂದನನ
ಮರಳಿ ತಿವಿದನು ಪಾರ್ಥನಾತನ
ಶಿರಕೆ ಕೊಟ್ಟನು ಶಂಭುವಿಂತಿ
ಬ್ಬರ ವಿಷಮ ಗಾಯದ ಗಡಾವಣೆ ಗಲ್ಲಿಸಿತು ಜಗವ  ೩೨

ಸುಯ್ಲ ಹೊಗೆಗಳ ಹೊದರುದಿವಿಗುಳ
ಮಯ್ಲುಳಿಯ ಮುರಿವುಗಳ ದೃಢ ವೇ
ಗಾಯ್ಲ ರಿಕ್ಕಿದ ಗಾಯ ಗಾಯಕೆ ಮುಷ್ಟಿ ಕಿಡಿಯೇಳೆ
ಶಯ್ಲ ಹತಿಗಳ ಭಾರಣೆಯ ಬಲು
ಪೊಯ್ಲ ಬೆಳೆ ಸಿರಿವಂತರಿವರೆನ
ಲಯ್ಲು ಪೈಲದ ಜರಡುಗಳೆ ನರನಾಥ ಕೇಳೆಂದ  ೩೩

ತ್ರಾಣವೆಂತುಟೊ ಶಿವಶಿವಾ ಸ
ತ್ರಾಣನಹೆ ಬಹುದಿವಸ ಭುವನ
ಪ್ರಾಣವೇ ಪೋಷಣವಲಾ ಮಝ ಪೂತು ಜಗಜಟ್ಟಿ
ಕಾಣೆನಿವಗೆ ಸಮಾನರನು ಶಿವ
ನಾಣೆ ಗುಣದಲಸೂಯವೇ ತ
ನ್ನಾಣೆ ನೋಡೌ ಶಬರಿಯೆಂದನು ನಗುತ ಮದನಾರಿ  ೩೪

ನಿನಗೆ ನಾ ಬೆರಗಾದೆ ನೀನಿಂ
ದೆನಗೆ ಮೆಚ್ಚಿದೆ ದೇವದಾನವ
ಜನವೆನಗೆ ಪಾಡಲ್ಲ ನೀ ಹಲ್ಲಣಿಸಿದೈ ನಮ್ಮ
ಇನನೊ ಮೇಣ್ ದೇವೇಂದ್ರನೋ ಹರ
ತನುಜನೋ ಹರಿಯೋ ಮಹಾ ದೇ
ವನೊ ಕಿರಾತನೊ ನೀನೆನುತ ಮತ್ತೆರಗಿದನು ಶಿವನ  ೩೫

ಗಾಯವನು ಮನ್ನಿಸುತ ಶಿವ ಪೂ
ರಾಯದಲಿ ಮೆಟ್ಟಿದನು ಪಾರ್ಥನ
ಬಾಯಳೊಕ್ಕುದು ರುಧಿರ ನಾಸಿಕದೆರಡು ಬಾಹೆಯಲಿ
ನೋಯನೊಂದನು ಮೀರಿ ಮುನಿಯಲ
ಪಾಯವಾದುದಕಟಕಟಾ ತ
ಪ್ಪಾಯಿತೇ ತಪ್ಪಾಯ್ತೆನುತ ಮರುಗಿದನು ಮದನಾರಿ  ೩೬

ಬಿರಿದುದೀತನ ಗರ್ವಗಿರಿ ಮದ
ಮುರಿದುದೀತನ ಶಕ್ತಿ ಸಲೆ ಟೆ
ಬ್ಬರಿಸಿತಿಂದ್ರಿಯ ವರ್ಗ ನೆಗ್ಗಿತು ನೆನಹಿನೊಡ್ಡವಣೆ
ಹರಿದುದಂಗಸ್ವೇದಜಲ ಕಾ
ಹುರತೆ ಕಾಲ್ವೊಳೆಯಾಯ್ತು ಮತಿ ನಿ
ಬ್ಬರದ ಬೆರಗಿನ ಬೇಟದಲಿ ಬೆಂಡಾದನಾ ಪಾರ್ಥ  ೩೭

ಆವ ಸುವ್ರತ ಭಂಗವೋ ಮೇ
ಣಾವ ದೈವ ದ್ರೋಹವೋ ತಾ
ನಾವ ಶಿವಭಕ್ತಾಪರಾಧಿಯೊ ಪೂರ್ವಜನ್ಮದಲಿ
ಆವ ಹಿರಿಯರ ಹಳಿದೆನೋ ಮೇ
ಣಾವ ಧರ್ಮವನಳಿದೆನೋ ತನ
ಗಾವ ಪರಿ ಪರಿಭವ ಮಹೀರುಹ ಫಲಿತವಾಯ್ತೆಂದ  ೩೮

ಈತ ದಿಟಕೆ ಪುಳಿಂದನೇ ವಿ
ಖ್ಯಾತ ನರ ತಾನಲ್ಲಲೇ ದಿಟ
ಜಾತ ಪಾರ್ಥನೆ ತಾ ನಿಧಾನಿಸೆ ಶಬರನಿವನಲ್ಲ
ಈತ ಪಲ್ಲಟವಾದನೋ ಮೇಣ್
ಶ್ವೇತತುರಗನ ಪಲ್ಲಟವೊ ಕುಂ
ತೀತನುಜ ತಾನಲ್ಲ ನಿಶ್ಚಯವೆನುತ ಚಿಂತಿಸಿದ  ೩೯

ಅರಿದನೇ ಶಿವನೆಂದು ದೈವದ
ಸರಿಯ ಬಲುಹನು ಕಂಡೊಡೆಯು ದಿಟ
ವರಿಯಬಹುದೆ ರಹಸ್ಯಮಾಯಾ ಗೋಪಿತಾತ್ಮಕನ
ಅರುಹಿಕೊಡವೇ ವೇದ ಶಿರನೆ
ಚ್ಚರಿಸಿ ತನ್ನನಖಂಡ ಚಿನ್ಮಯ
ದರಿವು ತಾನೆಂದಾವನರಿವನು ರಾಯ ಕೇಳೆಂದ  ೪೦

ಹಂದಿಯೇತಕೆ ತನಗೆ ಬನದ ಪು
ಳಿಂದನಲಿ ಸೆಣಸಾಗಲೇತಕೆ ಪು
ಳಿಂದನೇ ಮಾನ್ಯಕನು ನಾವವಮಾನ್ಯರಾದೆವೆಲೆ
ಇಂದುಮೌಳಿಯುಪೇಕ್ಷೆಯೋ ತಾ
ನಿಂದು ಶಿವಪದ ಭಕ್ತಿ ಶೂನ್ಯನೊ
ಮಂದಭಾಗ್ಯನು ತಾನಲಾ ಹಾಯೆನುತ ಚಿಂತಿಸಿದ  ೪೧

ಏಕೆ ಚಿಂತೆ ವೃಥಾ ಮನೋವ್ಯಥೆ
ಕಾಕಲಾ ನಾನಜ್ಞನಾಗೆ ಪಿ
ನಾಕಿ ಮಾಡುವುದೇನು ಮರೆಯೊಗುವೆನು ಮಹೇಶ್ವರನ
ಈ ಕಿರಾತನ ಹರಿಬವನು ಬಳಿ
ಕೇಕೆ ನಿಮಿಷಕೆ ಗೆಲುವೆನೆನುತ ವಿ
ವೇಕ ಸಿರಿಯ ಕಟಾಕ್ಷ ಚಿತ್ತಕೆ ಮಾರಿದನು ಮನವ  ೪೨

ಮಣಲ ಲಿಂಗವ ಮಾಡಿದನು ನಿ
ರ್ಗುಣನ ಸಗುಣಾರಾಧನೆಯ ಮ
ನ್ನಣೆಗಳಲಿ ವಿಸ್ತರಿಸಿದನು ವಿವಿಧಾಗಮೋಕ್ತದಲಿ
ಕಣಗಿಲೆಯ ಬಂದುಗೆಯ ಕಕ್ಕೆಯ
ಸಣ ಬಸರಿಸದ ಕುಸುಮದಲಿ ರಿಪು
ಗಣ ಭಯಂಕರನರ್ಚಿ ಸಿದನಂಧಾಸುರಾಂತಕನ  ೪೩

ಅಮಲ ಶೈವಸ್ತವವ ಹೇಳಿದು
ನಮಿಸಿದನು ಬಲವಂದು ಪುನರಪಿ
ವಿಮಲಮತಿ ಮೈಯಿಕ್ಕಿದನು ನಿಜಭಾವಶುದ್ಧಿಯಲಿ
ಕಮಲಭವ ಸುರವಂದ್ಯ ಗಿರಿಜಾ
ರಮಣ ಭಕ್ತPಕ್ಷಿಟುಂಬಿ ದೇವೋ
ಷಿಮ ತ್ರಿಯಂಬಕ ಪುಷ್ಟಿವರ್ಧನ ಕರುಣಿಸುವುದೆಂದ  ೪೪

ಗೆಲಿದನೆನ್ನನು ಶಬರನೀತನ
ಗೆಲುವ ಶಕ್ತಿಯ ಕೊಡು ಕಿರಾತನ
ಬಲುಹು ಭಂಗಿಸಿತೆನ್ನ ಬಿಂಕದವೊಡೆಯ ನೀನಿರಲು
ಹಲವು ಮಾತೇನಿವನ ಮುರಿವ
ಗ್ಗಳಿಕೆಯನೆ ಕೃಪೆ ಮಾಡೆನುತ ಪರ
ಬಲ ಭಯಂಕರ ಭುಜವನೊದರಿಸುತಿತ್ತ ಮುಂದಾದ  ೪೫

ಕಾಣಬಹುದೋ ಶಬರ ನಿನ್ನೀ
ಪ್ರಾಣವೆನ್ನಾಧೀನವರಿಯಾ
ಸ್ಥಾಣುವಿನ ಬಲುಹುಂಟು ಹಿಂಡುವೆನಿನ್ನು ನಿನ್ನಸುವ
ಗೋಣ ಮುರಿವೆನು ಮಿಡುಕಿದೊಡೆ ಶಿವ
ನಾಣೆ ಬಾ ಸಮ್ಮುಖಕೆ ಹಾಣಾ
ಹಾಣಿಗಿನ್ನನುವಾಗೆನುತಲೆವೆಯಿಕ್ಕದೀಕ್ಷಿಸಿದ  ೪೬

ಕಂಡೆನರ್ಜುನನೀ ಕಿರಾತನ
ಮಂಡೆಯಲಿ ತಾ ಮಳಲ ಲಿಂಗದ
ಮಂಡೆಯಲಿ ಪೂಜಿಸಿದ ಬಹುವಿಧ ಕುಸುಮ ಮಂಜರಿಯ
ಕಂಡನಿತ್ತಲು ಮುರಿದು ಪುನರಪಿ
ಕಂಡನೀ ಶಬರಂಗಿದೆತ್ತಣ
ದಂಡಿಯೋ ಹಾಯೆನುತ ಸೈವೆರಗಾದನಾ ಪಾರ್ಥ  ೪೭

ಆಗಲಿದನಾರೈವೆನೆನುತವ
ನಾಗಮೋಕ್ತದಿ ಮತ್ತೆ ಲಿಂಗದ
ಮೇಗರೆಯ ನಿರ್ಮಾಲ್ಯವನು ಬೇರಿರಿಸಿ ಭಕ್ತಿಯಲಿ
ಹೂಗಳಲನು ತಿರಿದೊಟ್ಟಿ ಕರುಣಾ
ಸಾಗರನ ಬಲವಂದು ದಕ್ಷನ
ಯಾಗ ಹರನೆ ನಮಃಶಿವಾಯೆನುತಿತ್ತ ಮುಂದಾದ  ೪೮

ಮತ್ತೆ ಕಂಡನು ಖಂಡ ಪರಶುವಿ
ನುತ್ತಮಾಂಗದಲೀಚೆಯಲಿ ಲಿಂ
ಗೋತ್ತಮಾಂಗದ ಮೇಲೆ ಕಾಣನು ಕುಸುಮ ಮಂಜರಿಯ
ತುತ್ತಿದುವು ಕೌತುಕವ ರಂಜಿಸಿ
ಹೊತ್ತ ವದುಭುತವನು ಭಯಾನಕ
ವೆತ್ತ ರಸದಲಿ ಮುಳುಗಿದವು ಕಂಗಳು ಧನಂಜಯನ  ೪೯

ಶಿವನಲಾ ಸಾಕ್ಷಾಚ್ಚತುರ್ದಶ
ಭುವನ ಕರ್ತುವಲಾ ಕಿರಾತ
ವ್ಯವಹರಣೆಯಲಿ ಸುಳಿದುದಸ್ಮದನುಗ್ರಹಾರ್ಥವಲ
ಎವಗಿದನಶನ ತಪದ ಪಿತ್ತದ
ಬವಣೆ ತಲೆಗೇರಿದುದಲಾ ಶಿವ
ಶಿವ ಮಹಾದೇವೆನುತ ಮರುಗಿದನಂದು ಕಲಿಪಾರ್ಥ  ೫೦

ಹೃದಯವಿಬ್ಬಗಿಯಾಯ್ತು ಕಂಗಳು
ಬೆದರಿದವು ವೈವರ್ಣದಲಿ ತನು
ಗದಗದಿಸಿತಡಿಗಡಿಗೆ ಜಡಿದುದು ರೋಮ ಹರುಷದಲಿ
ಉದುರಿದವು ನೆತ್ರಾಂಬು ಬಿಂಕದ
ಬೆದರಿಕೆಯ ಮೂಢತೆಯ ತಿಳಿವಿನ
ಮುದದ ಭೇದದ ಗಾಯ ಘಾತಿಗೆ ಪಾರ್ಥನೊಳಗಾದ  ೫೧

ಸ್ವೇದ ಜಲದಲಿ ಮಿಂದು ಪುನರಪಿ
ಖೇದ ಪಂಕದೊಳದ್ದು ಬಹಳ ವಿ
ಷಾದ ರಜದಲಿ ಹೊರಳಿ ಭಯರಸ ನದಿಯೊಳೀಸಾಡಿ
ಮೈದೆಗೆದು ಮರನಾಗಿ ದೆಸೆಯಲಿ
ಬೀದಿವರಿವುತ ವಿವಿಧ ಭಾವನ  ೫೨
ಭೇದದಲಿ ಮನ ಮುಂದುಗೆಡುತಿರ್ದುದು ಧನಂಜಯನ

ಏಸು ಬಾಣದಲೆಚ್ಚರೆಯು ಹೊರ
ಸೂಸಿದವು ನಾನರಿದುದಿಲ್ಲ ಮ
ಹಾ ಶರೌಘವ ಕಳುಹೆ ನುಂಗಿದಡರಿದೆನೇ ಬಳಿಕ
ಆ ಶರಾಸನ ಖಡ್ಗವನು ಕೊಳ
ಲೈಸರೊಳಗೆಚ್ಚತ್ತೆನೇ ಹಿಂ
ದೇಸು ಜನ್ಮದ ಜಾಡ್ಯ ಜವನಿಕೆಯಾಯ್ತು ತನಗೆಂದ  ೫೩

ಆವನನು ಜಪ ಯಜ್ಞದಲಿ ಸಂ
ಭಾವಿಸುವರಾವನ ಪದಾಂಬುಜ
ಸೇವೆಯಲಿ ಸನಕಾದಿಗಳು ಧನ್ಯಾಭಿಮಾನಿಗಳು
ಆವನೊಬ್ಬನು ನಾದಬಿಂದು ಕ
ಳಾ ವಿಶೇಷಾತೀತನೀತನೊ
ಳಾವು ಸಮರಕೆ ಸೆಣಸಿದೆವಲಾ ಶಿವಶಿವಾಯೆಂದ  ೫೪

ಆವನನು ಯಜ್ಞಾದಿ ಕರ್ಮದೊ
ಳಾವನನು ನಿಯಮಾದಿ ಯೋಗದೊ
ಳಾವನನು ವಿವಿಧಾರ್ಚನಾಂಕಿತ ಭಕ್ತಿ ಮಾರ್ಗದಲಿ
ಆವನನು ಜೀವಾತ್ಮ ಚೈತ
ನ್ಯಾವಲಂಬನನೆಂದು ಭಜಿಸುವ
ರಾವು ರಣದಲಿ ಸೆಣಸಿದೆವಲಾ ಶಿವಶಿವಾಯೆಂದ  ೫೫

ಲೋಕವಾವನ ಮಾಯೆಯೀ ಜಗ
ಕಾಕೆವಾಳರದಾರು ಚಂದ್ರ ದಿ
ವಾಕರ ಗ್ರಹರಾಶಿ ತಾರೆಗಳಾರ ತೇಜದಲಿ
ಲೋಕರಚನಾ ರಕ್ಷೆ ಸಂಹೃತಿ
ಯಾಕರಣೆ ತಾನಾರದಾ ಜಗ
ದೇಕ ದೈವದ ಕೂಡೆ ತೋಟಿಯೆ ಶಿವ ಶಿವಾಯೆಂದ  ೫೬

ಜೀವರೂಪನು ಸಾಕ್ಷಿ ಕೂಟ
ಸಾವಲಂಬನ ಕರ್ತು ಚೇತನ
ನಾವನೀ ಕ್ಷೇತ್ರ ಜ್ಞನಂತರ್ಯಾಮಿ ಸಂಜ್ಞೆಯಲಿ
ಅವನಮಲ ಪ್ರತ್ಯಗಾತುಮ
ನಾವನುರು ಪರಮಾತ್ಮ ನೀಶ್ವರ
ನಾವನಾತನ ಕೂಡೆ ಕದನವೆ ಶಿವ ಶಿವಾಯೆಂದ  ೫೭

ಸ್ಫುರದಲಿಂಗನು ಲಿಂಗ ಮೂಲೋ
ತ್ಕರನು ದಾರವ್ಯಕ್ತ ಸದಸ
ತ್ಪರದ ಪರಶಿವನಾರು ಶೈವೋತ್ಕರುಷ ಲಿಂಗದಲಿ
ಪರಮ ಪರರೂಪಾತ್ಪರಾತ್ಪರ
ತರ ನಿರೂಪನದಾವನಾತನೊ
ಳರರೆ ನಾವೆಚ್ಚಾಡಿದೆವಲಾ ಶಿವ ಶಿವಾಯೆಂದ  ೫೮

ಆ ಅಕಾರ ಉಕಾರ ವಿಮಲ ಮ
ಕಾರ ಯುಕ್ತೇಕಾಕ್ಷರದ ವಿ
ಸ್ತಾರಿಯಾವನಮಾತೃಕಾಕ್ಷರ ರೂಪನಕ್ಷಯನು
ಆರು ವಾಙ್ಮಯನಾರು ವಾಚೋ
ದೂರನಾರು ವಚೋ ನಿಯಾಮಕ
ನಾರವನ ಕೂಡೆವಗೆ ಕಲಹವೆ ಶಿವಶಿವಾಯೆಂದ  ೫೯

ಗಾಹು ಹತ್ತಾಹತ್ತಿ ಗಡ ನಿ
ರ್ದೇಹನೊಡನೆ ಮಾಹಾ ಶರೌಘಕೆ
ಮೇಹು ಗಡ ಜೀವನವು ಮೃತ್ಯುಂಜಯನ ಸೀಮೆಯಲಿ
ಆಹ ಮೂದಲೆ ಗಡ ಸುನಿಗಮ
ವ್ಯೂಹದೂರನ ಕೂಡೆ ಹರನೊಡ
ನಾಹವಕೆ ಸಮಜೋಳಿ ನಾವ್ಗಡ ಶಿವ ಶಿವಾಯೆಂದ  ೬೦

ಎವಗೆರಡು ಕಣು ವಿಶ್ವತೋಚ
ಕ್ಷುವಿನೊಡನೆ ಸಕ್ರೋಧ ದರುಶನ
ವೆವಗೆರಡು ಭುಜ ವಿಶ್ವತೋಭುಜನೊಡನೆ ಸಂಗ್ರಾಮ
ಭುವನ ಚರಣನ ವಿಶ್ವತೋಮುಖ
ಶಿವನ ನಮ್ಮೀ ಕಾಲು ನಾಲಗೆ
ಯವಗಡಿಸಿ ಗೆಲಲಾವ್ ಸಮರ್ಥರೆ ಶಿವ ಶಿವಾಯೆಂದ  ೬೧

ಹೂಡಿ ಜಗವನು ಜಗದ ಜೀವರ
ಕೂಡೆ ಬೆರಸಿ ಸಮಸ್ತ ವಿಷಯದೊ
ಳಾಡಿ ಸೊಗಸುವನಾತನುಪಭೋಗ ಪ್ರಪಂಚದಲಿ
ಹೂಡದಳಿಯದ ಗಮಿಸಿ ಮರಳದ
ಕೂಡದಗಲದ ನಿತ್ಯತೃಪ್ತ ನಿ
ರೂಢನೊಡನೆಚ್ಚಾಡಿದೆವಲಾ ಶಿವ ಶಿವಾಯೆಂದ  ೬೨

ಆವನೊಬ್ಬನಣೋರಣೀಯನ
ದಾವನುರು ಮಹತೋ ಮಹೀಯನ
ದಾವ ನಿರುತಂ ದೃಷ್ಟಿಸಂಗತ ವಿಶ್ವ ಸಮಯದಲಿ
ಆವನೊಬ್ಬನು ನಾಮ ರೂಪು ಗು
ಣಾವಲಂಬನನಲ್ಲದೀಶ್ವರ
ನಾವನಾತನೊಳೆಮಗೆ ತೋಟಿಯೆ ಶಿವ ಶಿವಾಯೆಂದ  ೬೩

ಸೇವ್ಯನನು ಸತ್ಕೃತಿಗಳಲಿ ದೃ
ಷ್ಟವ್ಯನನು ದೃಢಚಿತ್ತದಲಿ ಮಂ
ತ್ರವ್ಯನಾ ಶ್ರೋತವ್ಯನನು ಸಂಕೀರ್ತಿತವ್ಯನನು
ಅವ್ಯಯನನಕ್ಷಯನನಭವನ
ನವ್ಯಧನನಜ್ಞಾನದಲಿ ಯೋ
ಗವ್ಯನೆಂದೇ ಸೆಣಸಿದೆವಲಾ ಶಿವ ಶಿವಾಯೆಂದ  ೬೪

ಸ್ಫುರದಕಾರಾದಿಯಹ ಕಾರೋ
ತ್ತರದ ಶಬ್ದಬ್ರಹ್ಮಮಯ ವಿ
ಸ್ತರದ ಹಂತತ್ವದ ಮಹತ್ತತ್ವಾತಿಶಯ ಪದದ
ಪುರುಷ ಮೂಲ ಪ್ರಕೃತಿಗಳನು
ತ್ತರಿಸಿ ತೊಳತೊಳತೊಳಗಿ ಬೆಳಗುವ
ಪರಮ ಶಿವನಲಿ ಸೆಣಸಿದೆವಲಾ ಶಿವ ಶಿವಾಯೆಂದ  ೬೫

ಸರಸಿಜಾಸನ ವಿಷ್ಣು ರುದ್ರೇ
ಶ್ವರ ಸದಾಶಿವರಾವಳೊಬ್ಬಳ
ಚರಣ ಸೇವಾ ಸಂಗದಲ್ಲಿಯೆ ಸುಪ್ರತಿಷ್ಠಿತರು
ಪರಮ ಶಕ್ತಿಯದಾವನಂಘ್ರಿಗೆ
ಶಿರವನೊಡ್ಡಿಹಳಾ ಮಹೋತ್ತಮ
ಪರಮ ಶಿವನಲಿ ಸೆಣಸಿದೆವಲಾ ಶಿವ ಶಿವಾಯೆಂದ  ೬೬

ಈ ಪರಿಯಲರ್ಜುನನ ಮನದನು
ತಾಪವನು ಕಾಣುತ್ತ ಶಾಬರ
ರೂಪ  ರಚನೆಯ ತೆರೆಯ ಮರೆಯಲಿ ಮೆರೆವ ಚಿನ್ಮಯದ
ರೂಪನವ್ಯಾಹತ ನಿಜೋನ್ನತ
ರೂಪರಸದಲಿ ನರನ ಚಿತ್ತದ
ಪಾಪವಡಗಲು ತಂಪನೆರೆದನು ತರುಣಶಶಿಮೌಳಿ  ೬೭

ಅರಸ ಕೇಳೈ ನಿಮ್ಮ ಪಾರ್ಥನ
ಪರಮ ಪುಣ್ಯೋದಯವನೀಶನ
ಕರುಣವನು ಶುಕ ಸನಕ ಸಿದ್ಧಾದ್ಯರಿಗಗೋಚರದ
ನಿರುಪಮಿತ ನಿಜರೂಪವನು ವಿ
ಸ್ತರಿಸಿದನು ವಿವಿಧ ಪ್ರಭಾವೋ
ತ್ಕರದ ನಿರುಗೆಯ ತೋರಿದನು ಸುರಕೋಟಿ ಕೈ ಮುಗಿಯೆ ೬೮

ಬಲಿದ ಚಂದ್ರಿಕೆಯೆರಕವೆನೆ ತಳ
ತಳಿಸಿ ಬೆಳಗುವ ಕಾಯ ಕಾಂತಿಯ
ಪುಲಿದೊಗಲ ಕೆಂಜೆಡೆಯ ಕೇವಣದಿಂದು ಫಣಿಪತಿಯ
ಹೊಳೆವ ಹರಿಣನ ಅಕ್ಷಮಾಲ
ವಲಯದಭಯದ ವರದಕರ ಪರಿ
ಕಲಿತನೆಸೆದನು ಶಂಭು ಸದ್ಯೋಜಾತ ವಕ್ತ್ರದಲಿ  ೬೯

ಹೊಳೆವ ಕುಂಕುಮ ಕಾಂತಿಯಲಿ ತಳ
ತಳಿಪ ತನು ಗಜಚರ್ಮದುಡುಗೆಯ
ಲಲಿತ ದಂತಪ್ರಭೆಯ ದರಹಸಿತಾನನಾಂಬುಜದ
ವಿಲಸಿತಾಭಯ ವರದಕರ ಪರಿ
ಲುಳಿತ ಪರಶುದೃಢಾಕ್ಷಮಾಲಾ
ವಳಿಗಳೊಪ್ಪಿರೆ ವಾಮದೇವಾನನದಿ ರಂಜಿಸಿದ  ೭೦

ಕಾಳಮೇಘ ಸುವರ್ಣದುರು ದಂ
ಷ್ಟ್ರಾಳಿ ಭೀಷಣದಮಳ ಜಪಮಣಿ
ಮಾಲಿಕೆಯ ಸುತಿಮುಖದ ಪಾಶಾಂಕುಶದ ಡಮರುಗದ
ಶೂಲ ಘನ ಖಟ್ವಾಂಗ ದ್ರುಹಿಣಕ
ಪಾಲ ಫಣಿವಲಯದ ಕರೋಟೀ
ಮಾಲೆಯಿಂದ ಮಹೋಗ್ರನೆಸೆದನಘೋರ ವಕ್ತ್ರದಲಿ  ೭೧

ಪರಶು ಡಮರುಗ ಖಡ್ಗ ಖೇಟಕ
ಶರ ಧನುಃಶೂಲದ ಕಪಾಲದ
ಕರದ ರಕ್ತಾಂಬರದ ಫಣಿಪನ ಭೋಗ ಭೂಷಣದ
ಸ್ಫುರದಘೋರದಭೇದದಭಯದ
ಕರದ ಪರಶು ಮೃಗಂಗಳಲಿ ತ
ತ್ಪುರುಷ ಮುಖದಲಿ ಮೆರೆದನೆರಕದ ಮಿಂಚಿನಂದದಲಿ  ೭೨

ಎಳೆಯ ಮುತ್ತಿನ ಢಾಳವನು ಮು
ಕ್ಕುಳಿಸಿದಂಗಚ್ಛವಿಯ ಭಯವರ
ಲುಳಿತ ಜಪಮಣಿ ವೇದ ಪಾಶಾಂಕುಶದ ಡಮರುಗದ
ಲಲಿತ ಖಟ್ವಾಂಗದ ಕಪಾಲದ
ಹೊಳೆವ ಶೂಲದ ಕರದ ನಿಗಮಾ
ವಳಿ ಶಿರೋಮಣಿ ಮೆರೆದನಂದೀಶಾನ ವಕ್ತ್ರದಲಿ  ೭೩

ಬೇರೆ ಬೇರುರಿಗಣ್ಣುಗಳ
ಪೂತ್ಕಾರದಹಿ ಬಂಧದ ಜಟಾ ಕೋ
ಟೀರ ಭಾರದ ಮುಖಚತುಷ್ಟಯ ಭುಜಚತುಷ್ಟಯದ
ವಾರಿಜಾಸನ ವಿಷ್ಣು ರುದ್ರಾ
ಧಾರನೀಶ್ವರ ಪಂಚವಕ್ತ್ರಾ
ಕಾರದಲಿ ಶಿವ ಮೆರೆದ ಪಂಚಬ್ರಹ್ಮರೂಪದಲಿ  ೭೪

ಶ್ರುತಿಗಳುಪನಿಷದಾದ್ಯಖಿಳ ದೇ
ವತೆಯರಾಕಲ್ಪಿತ ಕಿರಾತಾ
ಕೃತಿಯನುಳಿದರು ಸುಳಿದರೀಶನ ಸುತ್ತುವಳಯದಲಿ
ಸ್ಮಿತಮಧುರ ಮುಖಕಾಂತಿ ಕಲ್ಲೋ
ಲಿತ ಕಟಾಕ್ಷಚ್ಛವಿಯಲೀಶನ
ಧೃತಿಯಲೀಡಿರಿದೆಡದಲೆಸೆದರು ಗೌರಿದೇವಿಯರು  ೭೫

ಸನಕ ನಾರದ ಭೃಗು ಪರಾಶರ
ತನುಜ ಭಾರದ್ವಾಜ ಗೌತಮ
ಮುನಿ ವಸಿಷ್ಠ ಸನತ್ಕುಮಾರನು ಕಣ್ವನುಪಮನ್ಯು
ವನಕೆ ಬಂದರು ಪಾರ್ಥ ಕೇಳಿದು
ನಿನಗೆ ಸಿದ್ಧಿ ಗಡೆಮಗೆ ಲೇಸಾ  ೭೬
ಯ್ತೆನುತ ಮೈಯಿಕ್ಕಿದುದು ಹರನಂಘ್ರಿಯಲಿ ಮುನಿನಿಕರ

ಜಯ ಜಯೆಂದುದು ನಿಖಿಳ ಜಗವ
ಕ್ಷಯನ ದರುಶನಕೆಂದು ಸುತಿ ಕೋ
ಟಿಯ ಗಡಾವಣೆ ಗಾಸಿಯಾದುದು ಹರನ ಗಲ್ಲಣೆಗೆ
ನಿಯತವೇನೋ ಜನ್ಮಶತ ಸಂ
ಚಯದೊಳರರೆ ಕೃತಾರ್ಥನರ್ಜುನ
ಜಯವೆನಲು ಮೊಳಗಿದವು ಭೇರಿಗಳಮರ ಕಟಕದಲಿ ೭೭

ಬಿಟ್ಟ ಸೂಟಿಯೊಳೆದ್ದು ಹರುಷಕೆ
ಕೊಟ್ಟು ಮನವನು ನೋಡುತಿರ್ದನು
ನಟ್ಟ ದೃಷ್ಟಿಯೊಳೊಗುವ ಜಲದಲಿ ರೋಮ ಪುಳಕದಲಿ
ಬಿಟ್ಟು ಹಿಡಿದನು ಹರನ ಕಾಣದೆ
ತೊಟ್ಟ ಜಗೆಗಳ ರೋಮ ಹರುಷದ
ಲಿಟ್ಟೆಡೆಯ ಮೈದವಕದರ್ಜುನ ನಿಂದು ಬೆರಗಾದ  ೭೮

ಹರಹಿನಲಿ ಹೊದರೆದ್ದು ಹರುಷದ
ಹೊರಳಿಯಲಿ ಹೊಡಕರಿಸಿ ಚಿತ್ತವ
ತಿರುಹಿ ಹಿಡಿದನು ಮನಕೆ ಬುದ್ಧಿಯ ಹಮ್ಮು ಹಮ್ಮುಗೆಯ
ಕೊರಳುಗೊಳಿಸಿ ಕುಲಾಲ ಚಕ್ರದ
ಪರಿಬವಣಿಗೆಯ ಪಾಡಿನಲಿ ಕಾ
ತರಿಸುತವನಿಗೆ ಮೈಯನಿತ್ತನು ನೀಡಿ ಭುಜಯುಗವ  ೭೯

ಕ್ಷಮಿಸುವುದು ಸರ್ವೇಶ ಸರ್ವೋ
ತ್ತಮ ವೃಥಾ ಸುಭಟಾಭಿಮಾನ
ಭ್ರಮಿತನನು ಮೋಹಾಂಧಕೂಪ ಜಲಾವಗಾಹದಲಿ
ಸ್ತಿಮಿತನನು ದುರ್ಬೋಧ ವೇದ
ಭ್ರಮಿತನನು ಕಲ್ಯಾಣಪದ ನಿ
ರ್ಗಮಿತನನು ಕಾರುಣ್ಯನಿಧಿ ಕೈಗಾಯಬೇಕೆಂದ  ೮೦

ಅರಿದರಿದು ಮತಿಗೆಟ್ಟ ಮಾನವ
ಕುರಿಯಲಾ ನೆರೆ ಕಂಡು ಕಂಡೆ
ಚ್ಚರದ ಖೂಳನಲಾ ವಿವೇಕದ ಮೂಗು ಮಾರಿಯಲ
ಬರಿಮನದ ಬಾಹಿರನೊಳೆನ್ನಲಿ
ಮರೆವುದಪರಾಧವನು ನಿನ್ನನೆ
ಮೆರೆವುದೈ ಕಾರುಣ್ಯನಿಧಿ ಕೈಗಾಯಬೇಕೆಂದ  ೮೧

ದೇವ ದೇವ ಕೃಪಾಂಬುನಿಧಿ ಭ
ಕ್ತಾವಲಂಬನ ಭಕ್ತದೇಹಿಕ
ಸೇವಕಪ್ರಿಯ ಭೂತಭಾವನ ಭಾವನಾತೀತ
ದೇವವಂದಿತ ಕಾಲರೂಪ ಮ
ಹಾ ವಿಭವ ಭರರಹಿತ ಪಾವನ
ಪಾವಕಾಂಬಕ ಸುತಿಕುಟುಂಬಿಕ ಕರುಣಿಸುವುದೆಂದ  ೮೨

ಜಯ ಜಗತ್ರಯನಾಥ ಭಕ್ತಾ
ಶ್ರಯ ಸದಾಶಿವ ಭಕ್ತವತ್ಸಲ
ಲಯವಿಹೀನ ಮಹೇಶ ಮನ್ಮಥಹರ ಮಹಾದೇವ
ಭಯರಹಿತ ಭಾಳಾಕ್ಷ ಲೋಕ
ವ್ಯಯಭವನ ದುರ್ಲಕ್ಷಿ ದೇವ
ತ್ರಯ ನಮಸ್ಕೃತ ನಿಗಮಸತ್ಕೃತ ಕರುಣಿಸುವುದೆಂದ  ೮೩

ಸರ್ವಗತ ಸರ್ವಜ್ಞ ಸರ್ವದ
ಸರ್ವಭಾವನ ಸರ್ವತೋಮುಖ
ಸರ್ವಪೂಜಿತ ಸರ್ವಸಾಧಕ ಸರ್ವಗುಣನಿಲಯ
ಸರ್ವಸರ್ವಾಶ್ರಯ ಸಮಾಹಿತ
ಸರ್ವಮಯ ಸರ‍್ವೇಶ್ವರೇಶ್ವರ
ಸರ್ವ ದುಃಖಾಪಹ ಮಹೇಶ್ವರ ಕರುಣಿಸುವುದೆಂದ  ೮೪

ರೂಪರಹಿತ ಸರೂಪ ನಿರ್ಮಲ
ರೂಪ ವಿಶ್ವಾಧಾರ ಸದಸ
ದ್ರೂಪರೂಪವ್ಯೋಮರೂಪಕ ಸರ್ವತೋರೂಪ
ರೂಪರಸಗಂಧಾದಿ ವಿಷಯ ವಿ
ರೂಪ ರೂಪಾತೀತ ಸಂವಿ
ದ್ರೂಪ ವಿಮಲವಿರೂಪಲೋಚನ ಕರುಣಿಸುವುದೆಂದ  ೮೫

ರಚಿತ ಮಾಯ ವಿಮಾಯ ಮಾಯಾ
ನಿಚಿತ ಮಾಯಾಧಾರ ಮಾಯಾ
ರುಚಿರ ಮಾಯಾರೂಪ ಮಾಯಾಮಯ ಜಗನ್ಮಾಯ
ಶುಚಿ ಸತೇಜೋಬಲ ಹಿರಣ್ಯ
ಪ್ರಚಯತೇಜ ಸುತೇಜ ಗೌರೀ
ಕುಚಯುಗಾಂಕಿತ ವಕ್ಷನೀಕ್ಷಿಸಿ ಕರುಣಿಸುವುದೆಂದ  ೮೬

ಪರಮಹಂಸಪರಾತ್ಮ ಪರಮೇ
ಶ್ವರ ಪರಬ್ರಹ್ಮೈಕ ವಿಗ್ರಹ
ಪರಮಶಿವ ಪರತತ್ವರೂಪ ಪರಾತ್ಪರಾನಂದ
ಪರಮಗುಣ ಪರಶಕ್ತಿ ವಾಗೀ
ಶ್ವರ ಪರಾರ್ತಿಹರೇಶ ಪರಶಂ
ಕರ ಪರಂಜ್ಯೋತಿಯೆ ಪರೋತ್ತಮ ಕರುಣಿಸುವುದೆಂದ ೮೭

ಲಿಂಗಮಯ ನಿರ್ಲಿಂಗ ತೇಜೋ
ಲಿಂಗ ಲಿಂಗಾತ್ಮಕ ಸದಾಶಿವ
ಲಿಂಗ ನಿರ್ಮಳ ಲಿಂಗ ಲಿಂಗಸ್ಥಿತ ಮಹಾಲಿಂಗ
ಲಿಂಗ ವಿಲಸಿತ ಲಿಂಗ ಚಿನುಮಯ
ಲಿಂಗ ಚೇತನ ಲಿಂಗ ದುರ್ಗಾ
ಲಿಂಗಿತಾಂಗವಿಲಾಸ ಶಂಕರ ಕರುಣಿಸುವುದೆಂದ  ೮೮

ನಿರವಧಿಕ ನಿರ್ಮಾಯ ನಿಸ್ಪೃಹ
ನಿರುಪಮಿತ ನಿರ್ದ್ವಂದ್ವ ನಿರ್ಗುಣ
ನಿರವಯವ ನಿರ್ಲೇಪ ನಿರವಗ್ರಹ ನಿರಾಧಾರ
ನಿರುಪಮ ನಿರಾಮಯ ನಿರಂತರ
ನಿರವಶೇಷ ನಿರಂಗ ನಿರ್ಮಲ
ನಿರತಿಶಯ ನಿಷ್ಕಳ ಮಹೇಶ್ವರ ಕರುಣಿಸುವುದೆಂದ  ೮೯

ವಾಮದೇವ ದುರಂತವಿಮಲ
ವ್ಯೋಮಕೇಶ ಕೃತಾಂತಹರ ನಿ
ಸ್ಸೀಮ ಮೃತ್ಯುಂಜಯ ಸಮಂಜಸ ಸರ್ವತೋಭದ್ರ
ಭೀಮ ಭರ್ಗ ಕಪರ್ದಿ ಕಲ್ಪಿತ
ನಾಮ ರೂಪತ್ರಯ ವೃಷಧ್ವಜ
ಕಾಮಹರ ಕಿರುಣಾಮಹಾರ್ಣವ ಕರುಣಿಸುವುದೆಂದ  ೯೦

ಹರಹರಾ ತ್ರೈಮೂರ್ತಿರೂಪನು
ಧರಿಸಿಯತಳ ಮಹಾಷ್ಟಮೂರ್ತಿಯ
ಧರಿಸಿಯನುಪಮ ವಿಶ್ವಮೂರ್ತಿಯ ಧರಿಸಿ ರಂಜಿಸುವ
ಪರಿಯನರಿವವರಾರು ದೇವಾ
ಸುರ ಮುನೀಶರಿಗರಿದು ಕೃಪೆಯಿಂ
ಕರುಣಿಸಲು ಬಂದೈ ಮಹಾದೇವೆಂದನಾ ಪಾರ್ಥ  ೯೧

ದೇವ ಸುರ ದನುಜೇಶವಂದಿತ
ದೇವ ಮನುಮುನಿನಿಕರ ಪೂಜಿತ
ದೇವ ತತ್ವಾಕಾರ ಭಾವಿಪೊಡತಿ ನಿರಾಕಾರ
ದೇವ ಸಾಕಾರದಲಿ ನಿಜ ಭ
ಕ್ತಾ ವಳಿಯನುದ್ಧರಿಪ ಶಿವ ಮಾ
ದೇವ ಕರುಣಿಸಿದೈಯನಾಥಂಗೆಂದನಾ ಪಾರ್ಥ  ೯೨

ಹರನೆ ಗಂಗಾಧರನೆ ಗಿರಿಜಾ
ವರನೆ ಶಶಿಶೇಖರನೆ ದಕ್ಷಾ
ಧ್ವರಹರನೆ ಶಂಕರನೆ ನಿಜಭಕ್ತರ ಮನೋಹರನೆ
ಕರುಣಿಸುವುದುದ್ಧರಿಸುವುದು ಸಂ
ಹರಿಸು ಮತ್ಪರಿಭವವನೆಂದುರು
ತರದ ಭಕ್ತಿಯಲಂದು ಸೈಗೆಡೆದಿರ್ದನಾ ಪಾರ್ಥ  ೯೩

ಧರಣಿಪತಿ ಕೇಳೀಶನೀತನ
ಹೊರೆಗೆ ಬಿಜಯಂಗೈದು ಪಾರ್ಥನ
ಶಿರವ ಹಿಡಿದೆತ್ತಿದನು ಬಿಗಿಯಪ್ಪಿದನು ಬರಸೆಳೆದು
ಮರುಳು ಮಗನೆ ಮಹಾ ತಪಸ್ಸಂ
ಚರಣೆಯಲಿ ನೊಂದೈಯೆನುತ ಕಡು
ಗರುಣಿ ಕರುಣಾಮೃತ ಸಮುದ್ರದೊಳದ್ದಿದನು ನರನ  ೯೪

ಕೂಡೆ ಮೈದಡವಿದನು ಚೈಮುಂ
ಡಾಡಿದನು ಮನ ನೋಯದಿರು ನೀ
ಮಾಡಿದುಪಹತಿಯೆಂಬುದೆಮಗರ್ಚನೆ ನಮಸ್ಕಾರ
ಕೋಡದಿರು ಕೊಂಕದಿರು ಭಕ್ತಿಗೆ
ನಾಡೆ ಮೆಚ್ಚಿದೆನೆನ್ನ ಚಿತ್ತಕೆ
ಖೋಡಿಯಿಲ್ಲೆಲೆ ಮಗನೆ ಗುಹ ಗಣಪತಿಗಳಾಣೆಂದ  ೯೫

ನರನು ನೀ ಪೂರ್ವದಲಿ ಪೀತಾಂ
ಬರನ ವಿಮಲಾಂಶಪ್ರಸೂತನು
ಪರಮಋಷಿ ನೀನೆನ್ನ ಭಕ್ತನು ಚಿಂತೆ ಬೇಡಿನ್ನು
ವರದನಾದೆನು ಮಗನೆ ಶಸ್ತ್ರೋ
ತ್ಕರವನಿದನೀ ಮುನ್ನ ಕೊಳ್ಳೆಂ
ದುರುತರ ಪ್ರೇಮದಲಿ ಕೊಟ್ಟನು ಖಡ್ಗಶರ ಧನುವ  ೯೬

ಸಲಿಸುವೆನು ನೀ ಬೇಡಿದುದ ನಿ
ಸ್ಖಲಿತವಂಜದಿರಿನ್ನು ಸಾಕೆನೆ
ಸುಲಭ ನೀ ಭಕ್ತರಿಗೆ ಭಯವಿನ್ನೇಕೆ ನಮಗೆನುತ
ಸಲಿಸು ಪಾಶುಪತಾಸ್ತ್ರವನು ವೆ
ಗ್ಗಳದ ಬೊಮ್ಮ ಶಿರೋಸ್ತ್ರವನು ಕೈ  ೯೭
ಗೊಳಿಸುವುದು ಕೃಪೆಯುಳ್ಳೊಡೆಂದನು ನಗುತ ಕಲಿಪಾರ್ಥ

ಸವಡಿ ನುಡಿಯುಂಟೇ ಚತುರ್ದಶ
ಭುವನ ದಾಹವದಕ್ಷವೀ ಬಾ
ಣವನು ಕೊಟ್ಟೆನು ಮಗನೆ ಬೊಮ್ಮಶಿರೋ ಮಹಾಶರವ
ದಿವಿಜ ದನುಜ ಭುಜಂಗಮಾದಿಗ
ಳವಗಡಿಸಲುರೆ ಹೆಚ್ಚುವುದು ಸಂ
ಭವಿಸಿದಾಹುತಿಯೆಂದು ಶರವುದ್ದಂಡ ಬಲವೆಂದ  ೯೮

ಸರಸಿಯಲಿ ಮುಂದಾಚಮನ ವಿ
ಸ್ತರಣೆಯೆಲ್ಲವ ಮಾಡಿ ಶೂಲಿಯ
ಚರಣದಲಿ ಮೈಯಿಕ್ಕಿ ನಿಂದನು ಭಾವಶುದ್ಧಿಯಲಿ
ಸರಳ ಸಂಗೋಪಾಂಗ ಮಂತ್ರೋ
ಚ್ಚರಣ ಸಂಹೃತಿ ಮೋಕ್ಷವನು ವಿ
ಸ್ತರಿಸುತ ರಹಸ್ಯದಲಿ ಕೊಟ್ಟನು ಪಾಶುಪತಶರವ  ೯೯

ಜಗವುಘೇಯೆಂದುದು ಜಯಧ್ವನಿ
ಗಗನದಲಿ ಗಾಢಿಸಿತು ಹೂವಿನ
ಮುಗುಳ ಸರಿವಳೆ ಸುರಿದುದೀಶ್ವರನಂಘ್ರಿ ಕಮಲದಲಿ
ಢಗೆಯ ತಳಿ ಮುರಿದುದು ಮನೋರಥ
ದಗಳು ತುಂಬಿತು ನರನ ಮನ ಬು
ದ್ಧಿಗಳು ನೆರೆ ಸಿಲುಕಿತ್ತು ಹರುಷೋತ್ಸವದ ದಾಳಿಯಲಿ  ೧೦೦

ಹರನ ಕೋಮಲಪಾಣಿ ಕಮಲ
ಸ್ಪರುಶ ಪೀಯೂಷದಲಿ ಮುಳುಗಿದ
ನರನ ತನು ನಿರ್ಮೋಕ ಮುಕ್ತ ಭುಜಂಗನಂದದಲಿ
ಕಿರಣ ಲಹರಿಯ ಲಳಿಯ ದಿವ್ಯೋ
ತ್ಕರದ ಚಪಲಚ್ಛವಿಯ ಚಾರು
ಸ್ಫುರಣದಲಿ ಬೋಳೈಸಿದುದು ಸುರ ನರರ ಕಣ್ಮನವ  ೧೦೧

ಸುರಮುನೀಶರ ವೇದ ಮಂತ್ರೋ
ಚ್ಚರಣ ನಾದದ ಗರುಡ ಗಂಧ
ರ್ವರ ಮಹಾಸ್ತುತಿರವದ ತುಂಬುರ ನಾರದಾದಿಗಳ
ವರರಸಾನ್ವಿತ ಗೀತದೂರ್ವಶಿ
ಯರ ಸುನೃತ್ಯದ ದಿವ್ಯವಾದ್ಯದ
ಹರನ ಕರುಣಾಂಬುಧಿಯಲೋಲಾಡಿದನು ಕಲಿಪಾರ್ಥ  ೧೦೨

ಧರೆಗೆಸೆವ ಧರ್ಮಾರ್ಥ ಕಾಮೋ
ತ್ಕರವನನುಪಮ ಮೋಕ್ಷಪದವನು
ಧುರದೊಳಹಿತರ ಗೆಲುವ ಶೌರ್ಯೋನ್ನತಿಯ ಸಾಹಸವ
ಕರುಣಿಸಿದನಪ್ಪಿದನು ಕರೆದನು
ಗಿರಿತನುಜೆ ನೀನುದ್ಧರಿಪುದೀ
ಪರಮ ಭಕ್ತನನೆನಲು ಕರುಣದೊಳೀಕ್ಷಿಸಿದಳಗಜೆ  ೧೦೩

ಗಿರಿಜೆ ತ್ರಿಜಗನ್ಮಾತೆ ರಕ್ಷಿಸು
ಪರಮ ಕರುಣಾಮೂರ್ತಿ ಜಗದೊಳು
ಸಿರಿ ಸರಸ್ವತಿ ಚಂಡಿ ದುರ್ಗಿಯರೆಂಬ ನಾಮದಲಿ
ಚರಿಸುತಿಹ ನಿನ್ನೇಕ ಮೂರ್ತಿಯ
ಪರಿಯನರಿವವರಾರೆನುತ ತ
ಚ್ಚರಣ ಯುಗಳಕ್ಕೆರಗಿ ಪುಳಕಿತನಾದನಾ ಪಾರ್ಥ  ೧೦೪

ಕಂಜನಾಭನ ಮೈದುನನೆ ಬಾ
ಅಂಜದಿರು ನಿನಗಾಂತ ರಿಪುಗಳ
ಭಂಜಿಸುವ ಸಾಮರ್ಥ್ಯದನುವನು ತಳೆದು ರಂಜಿಸುವ
ಅಂಜನಾಸ್ತ್ರವನಿತ್ತೆ ಮಗನೆ ಧ
ನಂಜಯನೆ ನಿನಗೆನುತ ಕರುಣದಿ
ಮಂಜುಳಾರವದಿಂದ ತಚ್ಛಸ್ತ್ರವನು ಬೆಸಸಿದಳು  ೧೦೫

ಒಂದು ದಶ ಶತ ಸಾವಿರದ ಹೆಸ
ರಿಂದ ಲಕ್ಷವು ಕೋಟಿಯಗಣಿತ
ದಿಂದ ನಿನಗಾಂತದಟ ರಿಪುಗಳ ತಿಂದು ತೇಗುವುದು
ಬಂದು ಬೆಸನನು ಬೇಡುವುದು
ತಾನೊಂದು ಶರ ರೂಪಾಗೆನುತ ಮುದ
ದಿಂದ ವರ ಮಂತ್ರೋಪದೇಶವನಿತ್ತಳರ್ಜುನಗೆ  ೧೦೬

ಕರಿಮುಖನ ಷಣ್ಮುಖನ ಚರಣ
ಕ್ಕೆರಗಿ ನುತಿಸುತ್ತಿರಲು ಪಾರ್ಥನ
ಪರಮ ಭಕ್ತಿಗೆ ಮೆಚ್ಚಿ ತೆಗೆದಪ್ಪಿದರು ಕರುಣದಲಿ
ವರ ಮಹಾಸ್ತ್ರಂಗಳನು ಮಂತ್ರೋ
ತ್ಕರವನವರೊಲಿದಿತ್ತು ಗೆಲು ನೀ
ಧುರದೊಳಹಿತರನೆಂದು ಪರಸಿದರಾ ಧನಂಜಯನ  ೧೦೭

ಸರಳ ಸಾಂಗೋಪಾಂಗವನು ನಿನ
ಗರುಹಿದೆನು ನೀನಿನ್ನು ಶಕ್ರನ
ಪುರಕೆ ನಡೆ ನಿನ್ನುತ್ತರೋತ್ತರ ಕಾರ್ಯಗತಿಗಳಿಗೆ
ಹರಿ ಸಹಾಯನು ನಮ್ಮ ಸತ್ವದ
ಪರಮರೂಪಾತನು ಕಣಾ ನೀ
ನರಿದಿರೆಂದು ಮಹೇಶ ಬೀಳ್ಕೊಟ್ಟನು ಧನಂಜಯನ  ೧೦೮

ನಿಮ್ಮ ಕಥೆ ವೇದೋಕ್ತವಾಗಲಿ
ನಿಮ್ಮ ಚರಿತ ಸುಚರಿತವಾಗಲಿ
ನಿಮ್ಮ ಕಥನಾಮೃತವನಾಲಿಸಿ ಕೇಳ್ದರಘ ಕೆಡಲಿ
ನಿಮ್ಮ ನಿಂದಿಸುವವರುಗಳು ದು
ಷ್ಕರ್ಮಿಗಳು ಪಾತಕರು ತಾನಿದು
ನಮ್ಮ ಮತವೆಂದಭವ ಹರಸಿದನಾ ಧನಂಜಯನ  ೧೦೯

ದೇವಿಯರು ಗುಹ ಗಣಪ ಮುಖ್ಯ ಗ
ಣಾವಳಿಗೆ ಪೊಡಮಟ್ಟನವರ ಕೃ
ಪಾವಲೋಕನದಿಂದ ಹೊಂಪುಳಿ ಹೋದನಡಿಗಡಿಗೆ
ದೇವ ಬಿಜಯಂಗೈದ ರಜತ
ಗ್ರಾವ ಶಿಖರಕೆ ಮನದೊಳಗೆ ಸಂ
ಭಾವಿಸಿದನೀ ವೀರನಾರಾಯಣನ ಮೈದುನನ ೧೧೦