ಸೂ. ಭಯಭರಿತ ಭಕ್ತಿಯಲಿ ಕಾಮಾ
ರಿಯನು ಗೆಲಿದರ್ಜುನನು ಹರ ವೈ
ರಿಯನು ಗೆಲಿದನು ಧೈರ್ಯದಿಂದೂರ್ವಶಿಯ ಶಾಪದಲಿ

ಕೇಳು ಜನಮೇಜಯ ಧರಿತ್ರೀ
ಪಾಲ ಪಾರ್ಥನ ಮೈಯ ಹುಲುರೋ
ಮಾಳಿ ಹರಿಯದು ಮನುಮಥನ ಖಂಡೆಯದ ಗಾಯದಲಿ
ಬೀಳುಕೊಟ್ಟಳು ಚಿತ್ರಸೇನನ
ನಾ ಲತಾಂಗಿ ಸಹಸ್ರಸಂಖ್ಯೆಯ
ಖೇಳಮೇಳದ ಸತಿಯರನು ಕರೆಸಿದಳು ಹರುಷದಲಿ ೧

ವನಜಲೋಚನೆ ಮಾಡಿದಳು ಮ
ಜ್ಜನವನಮಳ ದುಕೂಲ ಪರಿಮಂ
ಡನದಲೆಸೆದಳು ವಿವಿಧ ರತ್ನಾಭರಣ ಶೋಭೆಯಲಿ
ತನತನಗೆ ಭರಣಿಗಳಲನುಲೇ
ಪನವ ತಂದರು ವಿಳಸದಧಿವಾ
ಸನೆಯ ಕುಸುಮದ ಮೊಗ್ಗೆಯಲಿ ರಚಿಸಿದರು ಸಿರಿಮುಡಿಯ ೨

ತಿಗುರ ಗೆಲಿದಳು ತಿಲಕವನು ತೆ
ತ್ತಿಗರಲಂಕರಿಸಿದರು ಹೊಳಹಿನ
ಹೊಗರ ಹೊಸ ಜವ್ವನದ ಜೋಡಿಯ ಜಾಡಿ ಯಿಮ್ಮಡಿಸೆ
ಉಗಿದೊರೆಯ ಕೂರಲಗೊ ಧಾರೆಯ
ಮಿಗೆ ಹಿಡಿದ ಖಂಡೆಯವೊ ಕಾಮನ
ಹಗೆಗೆ ಹುಟ್ಟಿದ ಧೂಮಕೇತುವೊ ರೂಪು ಸುರಸತಿಯ ೩

ಪರಿಮಳದ ಪುತ್ಥಳಿಯೊ ಚೆಲುವಿನ
ಕರುವಿನೆರಕವೊ ವಿಟರ ಪುಣ್ಯದ
ಪರಿಣತೆಯೊ ಕಾಮುಕರ ಭಾಗ್ಯದ ಕಲ್ಪತರುಫಲವೊ
ಸ್ಮರನ ವಿಜಯಧ್ವಜವೊ ಮನ್ಮಥ
ಪರಮ ಶಾಸ್ತ್ರದ ಮೂಲಮಂತ್ರವೊ
ಸುರಸತಿಯರಧಿ ದೇವತೆಯೊ ವರ್ಣಿಸುವೊಡರಿದೆಂದ ೪

ಲೋಕವಶ್ಯದ ತಿಲಕವೋ ಜಗ
ದೇಕ ರತ್ನವೊ ವಿಗಡ ಮುನಿ ಚಿ
ತ್ತಾಕರುಷಣದ ಮಂತ್ರವಾದವೊ ಋಷಿತಪಃಫಲವೊ
ಲೋಕಸೌಂದರ್ಯೈಕ ಸರ್ಗವೊ
ನಾಕಸುಖ ಸಾಕಾರವೊ ರೂ
ಪೈಕ ತಾಣವೊ ಚಿತ್ರವಾಯ್ತೂರ್ವಶಿಯ ಬರವಿನಲಿ ೫

ನೆರದರಬಲೆಯರಂಗವಟ್ಟದ
ಪರಿಮಳದ ಮುತ್ತಿಗೆಯ ತುಂಬಿಯ
ತೆರಳಿಕೆಯ ಕತ್ತಲೆಯ ಕೆದರುವ ಕಣ್ಣ ಬೆಳಗುಗಳ
ಪರಿಪರಿಯ ಹೊಂದೊಡಿಗೆಗಳ ಪರಿ
ಪರಿಗಳುಡಿಗೆಯ ದೇಶಿ ಮಿಗೆ ಪರಿ
ಪರಿಯ ಮುಡಿಗಳ ಮುಗುದೆಯರು ಬಳಸಿದರು ಬಾಲಕಿಯ ೬

ಹೆಗಲು ಹಡಪದ ಹಿಡಿದ ಮುಕುರಾ
ಳಿಗಳ ಚಿಮ್ಮುವ ಸೀಗುರಿಯ ಹಾ
ವುಗೆಯ ಹೇಮನಿಬಂಧ ಕಳಶದ ತಾಳವೃಂತಕದ
ಮುಗುದೆಯರು ಮನುಮಥನ ಮೊನೆಯಾ
ಳುಗಳು ಮುಸುಕಿತು ಮಾನಿನಿಯ ದಂ
ಡಿಗೆಯ ಮೈಕಾಂತಿಗಳ ದೂವಾಳಿಗಳ ಲಹರಿಯಲಿ ೭

ತುರಗಮೇಧದ ರಾಜಸೂಯದ
ವರ ಮಹಾಕ್ರತುಕಾರರೀಕೆಯ
ಚರಣದುಂಗುಟ ತುದಿಯ ಕಾಂಬರೆ ಪೂತು ಫಲುಗುಣನ
ಪರಮ ಪುಣ್ಯವದೇನು ತಾನಿ
ದ್ದರಮನೆಗೆ ಸತಿ ಬಂದಳೇನ
ಚ್ಚರಿಯೆನುತ ಹೊಗಳಿದರು ಮಾಗಧರಿಂದ್ರ ನಂದನನ ೮

ಧರಣಿಪತಿ ಕೇಳವರ ತೊತ್ತಿರ
ಹೊರಗೆಲಸದವದಿರ ಪಸಾಯಿತೆ
ಯರಿಗೆ ಪಡಿಗವ ನೀಡಸಲ್ಲರು ಸೋಮಯಾಜಿಗಳು
ವರುಣಸೂನು ಜಯಂತ ನಳಕೂ
ಬರರು ಸಮಯವನೊಮ್ಮೆ ಕಾಣದೆ
ವರುಷವೋಲೈಸುವರು ಸೌಧದ ದಾರವಟ್ಟದಲಿ ೯

ಜನಮನದ ಸಂಕಲೆವನೆಯೊ ಲೋ
ಚನಮೃಗದ ತಡೆವೇಂಟೆಕಾತಿಯೊ
ಮನುಮಥನ ಸಂಜೀವನೌಷಧಿಯೋ ಮಹಾದೇವ
ಮನಸಿಜನ ಮಾರಾಂಕ ಕಾಮುಕ
ಜನದ ಜೀವಾರ್ಥಕ್ಕೆ ವಿಭುವೆಂ
ದೆನಿಸಿದೂರ್ವಶಿ ಬಂದಳರ್ಜುನ ದೇವನರಮನೆಗೆ ೧೦

ಮೆಲುನುಡಿಗೆ ಗಿಣಿ ಹೊದ್ದಿದವು ಸರ
ದುಲಿಗೆ ಕೋಗಿಲೆಯೌಕಿದವು ಪರಿ
ಮಳದ ಪಸರಕೆ ತೂಳಿದವು ತುಂಬಿಗಳೂ ಡೊಂಬಿಯಲಿ
ಹೊಳೆವ ಮುಖಕೆ ಚಕೋರಚಯವಿ
ಟ್ಟಳಿಸಿದವು ನೇವುರದ ಬೊಬ್ಬೆಗೆ
ಸಿಲುಕಿದವು ಹಂಸೆಗಳು ಕಮಲಾನನೆಯ ಕೆಳದಿಯರ ೧೧

ಅಲರ್ದ ಪೊಂದಾವರೆಯ ಹಂತಿಯೊ
ತಳಿತ ಮಾವಿನ ಬನವೊ ಮಿಗೆ ಕ
ತ್ತಲಿಪ ಬಹಳ ತಮಾಲ ಕಾನನವೋ ದಿಗಂತದಲಿ
ಹೊಳೆವ ವಿದ್ರುಮ ವನವೊ ಕುಸುಮೋ
ಚ್ಚಲಿತ ಕೇತಕಿ ದಳವೊ ರಂಭಾ
ವಳಿಯೊ ಕಾಂತಾಜನವೊ ಕಮಲಾನನೆಯ ಮುಂಗುಡಿಯೊ ೧೨

ಬಂದಳೂರ್ವಶಿ ಬಳ್ಳಿ ಮಿಂಚಿನ
ಮಂದಿಯಲಿ ಮುರಿದಿಳಿವ ಮರಿ ಮುಗಿ
ಲಂದದಲಿ ದಂಡಿಗೆಯನಿಳಿದಳು ರಾಜ ಭವನದಲಿ
ಮುಂದೆ ಪಾಯವಧಾರು ಸತಿಯರ
ಸಂದಣಿಯ ಸಿಂಜಾರವದ ಸೊಗ
ಸಿಂದ ಶಬ್ದಬ್ರಹ್ಮ ಸೋತುದು ಸೊರಹಲೇನೆಂದ ೧೩

ಬಾಗಿಲಲಿ ಬಾಗಿಲಲಿ ನಿಂದರು
ಸೋಗೆಗಣ್ಣಬಲೆಯರು ಸೆಜ್ಜೆಯ
ಬಾಗಿಲಲಿ ಚಾಮರದ ಹಡಪದ ಚಲಪೆಯರು ಸಹಿತ
ಆ ಗರುವೆ ಹೊಕ್ಕಳು ಮಹಾಹಿಯ
ಭೋಗತಲ್ಪದ ಹರಿಯೊಲಿಹ ಶತ
ಯಾಗ ಸುತನನು ಕಂಡಳಂಗನೆ ಮಣಿಯ ಮಂಚದಲಿ ೧೪

ಹೊಳೆವ ಮಣಿದೀಪಾಂಶುಗಳ ಮು
ಕ್ಕುಳಿಸಿದವು ಕಡೆಗಂಗಳಿಂದೂ
ಪಳದ ಭಿತ್ತಿಯ ಬೆಳಗನಣಿದುದು ಬಹಳ ತನುಕಾಂತಿ
ಕೆಳದಿಯರ ಕಂಠದಲಿ ಕೈಗಳ
ನಿಳುಹಿ ನಿಂದಳು ತರುಣಿ ನೃಪ ಕುಲ
ತಿಲಕನಂಗೋಪಾಂಗದಲಿ ಹರಹಿದಳು ಕಣ್ಮನವ ೧೫

ಎಳೆಯ ಬೆಳದಿಂಗಳವೊಲೀಕೆಯ
ತಳತಳಿಪ ಮುಖಚಂದ್ರಮನ ತಂ
ಬೆಳಗು ಸುಳಿದುದು ಸಾರತರ ಪರಿಮಳದ ಪೂರದಲಿ
ತಿಳಿದುದೀತನ ನಿದ್ರೆ ಕರಣಾ
ವಳಿಯ ಪರಮ ಪ್ರೀತಿ ರಸದಲಿ
ಮುಳುಗಿ ಸುಖಭಾರದಲಿ ಭುಲ್ಲವಿಸಿದನು ಕಲಿಪಾರ್ಥ ೧೬

ಹರ ಮಹಾದೇವೀಯಘಾಟದ
ಪರಿಮಳವಿದೆತ್ತಣದೆನುತ ಮೈ
ಮುರಿದು ಕಂಡನಪೂರ್ವ ಪರಿಮಳ ಸಾರದಲಿ ಪಾರ್ಥ
ಕಿರಣ ಲಹರಿಯ ದಿವ್ಯ ರತ್ನಾ
ಭರಣ ರುಚಿರತರ ಪ್ರಭಾ ಪಂ ೧೭
ಜರದೊಳಗೆ ಹೊಳೆಹೊಳೆವ ಮದನಾಲಸೆಯನೂರ್ವಶಿಯ

ಹಾ ಮಹಾ ದೇವಿಯರಲಾ ಸು
ತ್ರಾಮನೋಲಗದೊಳಗೆ ನರ್ತನ
ರಾಮಣೀಯಕ ರಚನೆಯಲಿ ರಂಜಿಸಿದಳಾ ಸಭೆಯ
ಈ ಮಹಿಳೆಯಭಿವಂದನೀಯೆ ನಿ
ರಾಮಯದ ಶಶಿವಂತ ಜನನಿ ಸ
ನಾಮೆಯಲ್ಲಾ ಶಿವಯೆನುತ ಮಣಿಮಂಚದಿಂದಿಳಿದ ೧೮

ಏನು ಬಿಜಯಂಗೈದಿರಿತ್ತಲು
ಮಾನನಿಧಿ ಕುಳ್ಳಿರಿ ಸುರೇಂದ್ರನ
ಮಾನಿನಿಯರಭಿವಂದನೀಯರು ನಾವು ಕೃತಾರ್ಥರಲ
ಏನು ಬೆಸಸೆನಗೇನು ಹದ ನಿಮ
ಗಾನು ಮಗನುಪಚಾರವೇಕೆ ಮ
ನೋನುರಾಗದಲರುಹಿಯೆಂದನು ಪಾರ್ಥನೂರ್ವಶಿಗೆ ೧೯

ನುಡಿಗೆ ಬೆರಗಾದಳು ಮನೋಜನ
ಸಡಗರಕೆ ತೆಕ್ಕಿದಳು ಪಾರ್ಥನ
ನಡವಳಿಗೆ ಮೆಚ್ಚಿದಳು ಬೆಚ್ಚಿದಳಂಗಜಾಸ್ತ್ರದಲಿ
ಕಡುಗಿದಳು ಖಾತಿಯುಲಿ ಲಜ್ಜೆಯ
ಬಿಡೆಯದಲಿ ಭಯಗೊಂಡಳಂಗನೆ
ಮಿಡುಕಿದಳು ವಿವಿಧಾನುಭಾವದ ರಸದ ಭಂಗಿಯಲಿ ೨೦

ಏಕೆ ನುಡಿದನೊ ಚಿತ್ರಸೇನನ
ದೇಕೆ ನಾ ಕೈಕೊಂಡೆನೆತ್ತಣ
ಕಾಕು ಮೂಳಗೆ ಕೋಳು ಹೋದೆನೊ ಕಾಮನೆಂಬವಗೆ
ಲೋಕ ವರ್ತಕವಲ್ಲದಿವನನ
ದೇಕೆ ವಿಧಿ ನಿರ್ಮಿಸಿದನೋ ನಾ
ನೇಕೆ ನರನೇಕೆನುತ ಸುಯ್ದಳು ಬೈದು ಕಮಲಜನ ೨೧

ವಿಕಳಮತಿಯೋ ಮೇಣಿವ ನಪುಂ
ಸಕನೊ ಜಡನೋ ಶ್ರೋತ್ರಿಯನೊ ಬಾ
ಧಕನೊ ಖಳನೋ ಖೂಳನೋ ಮಾನವ ವಿಕಾರವಿದೊ
ವಿಕಟ ತಪಸಿನ ದೇವ ದೈತ್ಯರ
ಮಕುಟವಾಂತುದು ವಾಮ ಪಾದವ
ನಕಟ ಕೆಟ್ಟೆನಲಾ ಯೆನುತ ಕರಗಿದಳು ನಳಿನಾಕ್ಷಿ ೨೨

ಎಲವೊ ರಾಯನ ಹೇಳಿಕೆಯಲಂ
ಡಲೆದನೆನ್ನನು ಚಿತ್ರಸೇನಕ
ನಲುಗಿ ನಟ್ಟವು ಕಾಮಶರವೆನ್ನಂತರಂಗದಲಿ
ಒಲಿದು ಬಂದಬಲೆಯರ ಟೆಕ್ಕರಿ
ಗಳೆವುದೇ ವಿಟ ಧರ್ಮವಕಟಾ
ತಿಳಿಯಲಾ ತಾನಾವಳೆಂಬುದನೆಂದಳಿಂದುಮುಖಿ ೨೩

ಶಿವಶಿವೀ ಮಾತೇಕೆ ಕಾಮನ
ಬವಣೆಯಲಿ ನೀವರಿಯದಿರೆ ವಾ
ಸವನ ನೇಮವು ಚಿತ್ರಸೇನನ ನುಡಿಗಳಂತಿರಲಿ
ಎವಗೆ ಕರ್ತವ್ಯದಲಿ ಮನ ಸಂ
ಭವಿಸುವುದೆ ನೀವೆಮ್ಮ ವಂಶೋ
ದ್ಭವಕೆ ಜನನಿಯಲಾಯೆನುತ ವಿನಯದಲಿ ನರ ನುಡಿದ ೨೪

ನಾರಿ ನೀ ಪೂರ್ವದಲಿ ನಮ್ಮ ಪು
ರೂರವನ ಸತಿ ನಿನಗೆ ಬಳಿಕ ಕು
ಮಾರ ಜನಿಸಿದನಾಯುವಾತನೊಳುದಿಸಿದನು ನಹುಷ
ವೀರ ರಾಜ ಪರಂಪರೆಯು ಬರ
ಲಾರಿಗಾವುದಿಸಿದೆವು ನಮ್ಮ ವಿ
ಚಾರಿಸಿದುದಿಲ್ಲಾ ಯೆನುತ ವಿನಯದಲಿ ನರ ನುಡಿದ ೨೫

ಪ್ರಣವದರ್ಥ ವಿಚಾರವೆತ್ತಲು
ಗಣಿಕೆಯರಮನೆಯ ಸ್ವರಾಕ್ಷರ
ಗಣಿತ ಲಕ್ಷಣವೆತ್ತ ರತಿಕೇಳೀ ವಿಧಾನದಲಿ
ಬಣಗು ಭಾರತ ವರ್ಷದವದಿರ
ಭಣಿತ ನಮ್ಮೀ ದೇವ ಲೋಕಕೆ
ಸಣಬಿನಾರವೆ ಚೈತ್ರರಥದೊಳಗೆಂದಳಿಂದುಮುಖಿ ೨೬

ಅಯ್ಯನಯ್ಯನು ನಿಮ್ಮವರ ಮು
ತ್ತಯ್ಯನಾತನ ಭಾವ ಮೈದುನ
ನಯ್ಯನಗ್ರಜರನುಜರೆಂಬೀ ಜ್ಞಾತಿ ಬಾಂಧವರ
ಕೈಯಲರಿಗಳ ಹೊಯ್ದು ಶಿರನರಿ
ದುಯ್ಯಲಾಡಿದವರ್ಗೆ ಮೇಣ್ ಮಖ
ದಯ್ಯಗಳಿಗಾನೊಬ್ಬಳೆಂದಳು ನಗುತ ನಳಿನಾಕ್ಷಿ ೨೭

ಮರೆಯ ಮಾತಂತಿರಲಿ ಸಾಕದ
ಮರೆದು ಕಳೆ ಮಾನಿನಿಯರಿಚ್ಛೆಯ
ನರಿಯದವನು ಸುರೇಂದ್ರನಾಗಲಿ ಚಂದ್ರನಾಗಿರಲಿ
ಕುರಿ ಕಣಾ ಫಡ ಖೂಳ ನೀನೆಂ
ತರಿವೆಯೆನೆ ನಡನಡುಗಿ ಕೈ ಮುಗಿ
ದೆರಗಿ ಮಗುಳೀ ಮಾತನೆಂದನು ಪಾರ್ಥನೂರ್ವಶಿಗೆ ೨೮

ಇದು ಮನುಷ್ಯಶರೀರ ತದ್ಧ
ರ್ಮದಲಿ ತನ್ನವಸಾನ ಪರಿಯಂ
ತಿದರೊಳವ್ಯಭಿಚಾರದಲಿ ವರ್ತಿಸಿದ ಬಳಿಕಿನಲಿ
ತ್ರಿದಶರಲ್ಲಿಗೆ ಬಂದರಾ ಮಾ
ರ್ಗದಲಿ ನಡೆವುದು ದೇವತಾ ದೇ
ಹದಲಿ ಬಲವತ್ತರವು ದೇಹ ವಿಶೇಷ ವಿಧಿಯೆಂದ ೨೯

ಅಹುದಹುದಲೇ ಶ್ರೌತಪಥದಲಿ
ಬಹಿರಿ ನೀವೇ ಸ್ಮಾರ‍್ತವಿಧಿ ಸ
ನ್ನಿಹಿತರೆಂಬುದನರಿಯದೇ ಮೂಜಗದ ಜನವೆಲ್ಲ
ಮಹಿಳೆಯೊಬ್ಬಳೊಳೈವರೊಡಗೂ
ಡಿಹರು ನೀವೇನಲ್ಲಲೇ ನಿ
ಸ್ಪೃಹರು ನೀವ್ ನಮ್ಮಲ್ಲಿ ಹರ ಹರ ಯೆಂದಳಿಂದುಮುಖಿ ೩೦

ತಾಯ ನೇಮದಲಂದು ಕಮಲದ
ಳಾಯತಾಕ್ಷಿಯ ಕೂಟವೈವರಿ
ಗಾಯಿತದು ತಪ್ಪೇನು ಜನನಿಯ ನುಡಿಯಲಂಘ್ಯವಲೆ
ಕಾಯ ಸೌಖ್ಯಕೆ ಕಾಮ ಸುಖದ ವಿ
ಡಾಯ ತತುವಕೆ ವೇಡೆಗೊಂಡು ನ
ವಾಯಿಯಲಿ ದುರ್ಗತಿಗೆ ದುವ್ವಾಳಿಸುವನಲ್ಲೆಂದ ೩೧

ತಾಯ ನೇಮದಲೈವರಿಗೆ ಕಮ
ಲಾಯ ತಾಕ್ಷಿಯ ಕೂಟವೇ ಸುರ
ರಾಯ ನಿಮ್ಮಯ್ಯನು ವಿಲಂಘ್ಯವೆ ನಿನಗೆ ಪಿತೃವಚನ
ರಾಯನಟ್ಟಲು ಬಂದೆನೀ ಕುಸು
ಮಾಯುಧನ ಕಗ್ಗೊಲೆಯ ಕೆದರುವು
ಪಾಯವನು ನೀ ಬಲ್ಲೆಯೆಂದಳು ವನಿತೆ ವಿನಯದಲಿ ೩೨

ಸರಸಿಜದ ಮಧು ಮಧುಕರನನನು
ಕರಿಸಿದೊಡೆ ಚಂದ್ರಿಕೆ ಚಕೋರನ
ವರಿಸಿದರೆ ನಿಧಿಲಕ್ಷ್ಮಿ ಸುಳಿದರೆ ನಯನ ವೀಧಿಯಲಿ
ಗರುವೆಯರು ಮೇಲಿಕ್ಕಿ ಪುರುಷನ
ನರಸಿದರೆ ಜಾರುವರೆ ಸುಡಲಾ
ಸರಸಿಜವನಾ ಚಂದ್ರಿಕೆಯನಾ ನಿಧಿಯನಾ ವಧುವ ೩೩

ತಿಳುಹಿದೊಡೆ ಸುರ ಲೋಕದವರತಿ
ಗಳಹೆಯರಲಾಯೆಂಬೆ ಮನ್ಮಥ
ಖಳ ಕಣಾ ನಿಷ್ಕರುಣಿ ನೀ ಸೌಭಾಗ್ಯ ಗರ್ವದಲಿ
ಬಲುಮೆ ಬಿದ್ದುದು ವಾಸಿಯಲಿ ಕಂ
ದೊಳಸುಗೊಂಡುದು ಕಾಮಶರ ಮನ
ವಳುಕೆ ಕೆಡಹಿತು ವಿರಹತಾಪದಲೆಂದಳಿಂದುಮುಖಿ ೩೪

ಕಾಡಲಾಗದು ನಿಮ್ಮೊಡನೆ ಮುರಿ
ದಾಡಲಮ್ಮೆನು ಮನಕೆ ಧೈರ್ಯದ
ಜೋಡ ತೊಟ್ಟಿದಿರಾಗಿ ನಿಲೆ ನನೆಯಂಬು ನಾಟುವುವೆ
ಖೋಡಿಯೇಕಿದಕವ್ವೆ ಮಕ್ಕಳ
ನೋಡ ಬಂದರೆ ಬೇರೆ ಕಷ್ಟವ
ನಾಡುವರೆ ಬಲ್ಲವರು ಬಿಜಯಂಗೈಯಿ ನೀವೆಂದ ೩೫

ರೋಷವೀರೆಲೆಯಾಯ್ತು ಲಜ್ಜೆಯ
ಮೀಸಲಳಿದುದು ಬಲು ವಿಧದ ಬಹು
ವಾಸಿಗಳು ಪಲ್ಲವಿಸಿದವು ಕೆಲ್ಲವಿಸಿತನುತಾಪ
ಆಶೆ ಪೈಸರವೋಯ್ತು ಕಡು ಝಳ
ಸೂಸಿದುದು ಸುಯ್ಲಿನಲಿ ಕಂಗಳು
ಕೇಸುರಿಯ ಮುಕ್ಕುಳಿಸಿದವು ಹೆಕ್ಕಳಿಸಿ ಕಾಮಿನಿಯ ೩೬

ಸೊಂಪಡಗಿತು ಮುಖೇಂದು ತನುಲತೆ
ಕಂಪಿಸಿದುದಡಿಗಡಿಗೆ ಮೈ ತನಿ
ಗಂಪಿನಲಿ ಮಘಮಘಿಸಿತಮಲ ಸ್ವೇದ ಸಲಿಲದಲಿ
ತಂಪಿನಲಿ ಶಿಖಿ ಮಧುರದಲಿ ಕಟು
ನುಂಪಿನಲಿ ಬಿರಿಸಮೃತದಲಿ ವಿಷ
ಗುಂಪಿನಲಿ ನೆಲೆಯಾದವೋಲ್ ಸತಿಗಾಯ್ತು ಘನರೋಷ ೩೭

ಕೆತ್ತಿದವು ತುಟಿ ಕದಪಿನಲಿ ಕೈ
ಹತ್ತಿಸುತ ತೂಗಿದಳು ಶಿರವನು
ತತ್ತರೋಷಾಯುಧವ ಮಸೆದಳು ಧಾರೆಗಂಗಳಲಿ
ಎತ್ತಿದುಬ್ಬೇಗದ ವಿಕಾರದ
ಚಿತ್ತ ಬುದ್ಧಿ ಮನಂಗಳಾತ್ಮನ
ಜೊತ್ತಿಸಿದವದ್ಭುತದಹಂಕಾರದಲಿ ಕಾಮಿನಿಯ ೩೮

ಎಲವೊ ಭಂಡರ ಭಾವ ಖೂಳರ
ನಿಳಯ ಖಳರಧಿನಾಥ ವಂಚಕ
ತಿಲಕ ಗಾವಿಲರೊಡೆಯ ಬಂಧುವೆ ದುಷ್ಟ ನಾಯಕರ
ಎಲೆ ಮರುಳೆ ತಾನಾವಳೆಂಬುದ
ತಿಳಿಯಲಾ ನೀನಾವನೆಂಬುದ
ನಿಳೆಯರಿಯದೇ ಭಂಡ ಫಡ ಹೋಗೆಂದಳಿಂದುಮುಖಿ ೩೯

ಒಲಿದು ಬಂದವರಾವು ಸೊಬಗಿನೊ
ಳೊಲಿಸಿ ಮರುಗಿಪ ಮಿಂಡ ನೀನತಿ
ಸುಲಭರಾವ್ ದುರ್ಲಭನು ನೀ ದೇವೇಂದ್ರ ಕಟಕದಲಿ
ಎಲೆ ನಪುಂಸಕ ಗಂಡು ವೇಷದ
ಸುಳಿವು ನಿನಗೇಕೆನುತ ಸತಿ ಕಳ
ವಳಿಸಿ ಕರವೆತ್ತಿದಳು ಹಿಡಿ ಹಿಡಿ ಶಾಪವಿದೆಯೆನುತ ೪೦

ತುಳುಕಿತದ್ಭುತ ರೋಷ ಸುಯ್ಲಿನ
ಝಳ ಹೊಡೆದು ಮೂಗುತಿಯ ಮುತ್ತಿನ
ಬೆಳಕು ಕುಂದಿತು ಕುಂದಿತಮಳಚ್ಛವಿ ಮುಖಾಂಬುಜದ
ಹೊಳೆ ಹೊಳೆವ ಕೆಂದಳದ ಸೆಳ್ಳುಗು
ರೊಳ ಮಯೂಖದ ಮಣಿಯ ಮುದ್ರಿಕೆ
ಗಳ ಮರೀಚಿಯಲೆಸೆದುದೆತ್ತಿದ ಹಸ್ತವೂರ್ವಶಿಯ ೪೧

ರಾಹು ತುಡುಕಿದ ಶಶಿಯೊ ಮೇಣ್ ರೌ
ದ್ರಾಹಿ ಮಸ್ತಕ ಮಾಣಿಕವೊ ಕಡು
ಗಾಹಿನಮೃತವೊ ಕುಪಿತ ಸಿಂಹದ ಗುಹೆಯ ಮೃಗಮದವೊ
ಲೋಹ ಧಾರೆಯ ಮಧುವೊ ಕಳಿತ ಹ
ಲಾಹಳದ ಕಜ್ಜಾಯವೆನಿಸಿತು
ರೂಹು ಸುಮನೋಹರ ಭಯಂಕರವಾಯ್ತು ಸುರಸತಿಯ ೪೨

ನರಮೃಗಾಧಮ ನಿಮ್ಮ ಭಾರತ
ವರುಷ ಭೂಮಿಯೊಳೊಂದು ವರುಷಾಂ
ತರ ನಪುಂಸಕನಾಗಿ ಚರಿಸು ನಿರಂತರಾಯದಲಿ
ಹರಿಯ ಮರೆಯೊಗು ಹರನ ನೀನನು
ಸರಿಸು ನಿಮ್ಮಯ್ಯಂಗೆ ಹೇಳಿದು
ನಿರುತ ತಪ್ಪದು ಹೋಗೆನುತ ಮೊಗದಿರುಹಿದಳು ಚಪಲೆ ೪೩

ಮೂಗನಾದನು ಬಹಳ ಧೈರ್ಯದ
ಬೇಗಡೆಯ ಬಿಡೆ ಬಿಗಿದ ಬೆರಗಿನ
ಮೂಗಿನಂಗುಲಿಗಳ ಧನಂಜಯನೊಲೆದು ನಿಜಶಿರವ
ಆಗಲಿದು ಸುರಭವನ ವಧುಗಳು
ನಾಗರಿಗರಿವರೆತ್ತ ಭಾರತ
ಭೂಗತರು ತಾವೆತ್ತಲಿದು ಘಟಿಸಿದುದು ವಿಧಿಯೆಂದ ೪೪

ಸುರಪತಿಗೆ ಸೂಚಿಸಿದೆನೇ ಮೇಣ್
ಕರೆಸಿದೆನೆ ಕಮಲಾನನೆಯ ನಿ
ಷ್ಠುರದ ನುಡಿಗಪರಾಧವುಂಟೇ ತಾನು ಮಾಡಿದುದು
ವರುಷತನಕ ನಪುಂಸಕದಲಾ
ಚರಿಸ ಬಲ್ಲೆನೆ ಸಾಕು ದೇಹಾಂ
ತರವನಂಗೀಕರಿಸುವೆನಲಾ ತನ್ನ ಸುಡಲೆಂದ ೪೫

ಎಲೆ ವಿಧಾತ್ರ ಕೃತಾಪರಾಧ
ಸ್ಥಳಕೆ ದಂಡ ಪ್ರಾಪ್ತಿಯಲ್ಲದೆ
ವಿಲಸಿತದ ವೇದಾರ್ಥದಲಿ ಮನ್ವಾದಿ ಮಾರ್ಗದಲಿ
ಚಲಿಸದಾಚರಿಸಿದೊಡೆ ಧರ್ಮ
ಸ್ಥಳದೊಳೇನು ನಿಮಿತ್ತವಕಟಾ
ಗಳಿತ ಪೌರುಷನಾಗಿ ಬದುಕುವನಲ್ಲ ತಾನೆಂದ ೪೬

ತಪವನಾಚರಿಸಿದೊಡೆ ವರ ಪಾ
ಶುಪತ ಶರವೆನಗಾಯ್ತು ಧರ್ಮವೆ
ತಪವಲಾ ಯೆಂದರಿದು ನಡೆದರೆ ಷಂಡತನವಾಯ್ತು
ತಪರೆಚಡು ಪರಿ ಫಲದೊಳಾದುದು
ವಿಪರಿತದ ಗತಿ ಗಹನ ತರವೇ
ವಿಪುಳ ಕರ್ಮಸ್ಥಿತಿಯೆನುತ ತೂಗಿದನು ನಿಜಶಿರವ ೪೭

ಶಿವನ ಶರವೆನಗಾಯ್ತು ರಿಪು ಕೌ
ರವರ ರಕುತದ ರಾಟಳವನೆ
ತ್ತುವೆನು ಕಟ್ಟಾ ಮುಡಿಯನೆಂಬೆನು ದುರುಪದೀ ಸತಿಗೆ
ಇವಳು ಭಂಗಿಸಿ ಬೂತುಗೆಡಹಿದ
ಹವಣನಾರಿಗೆ ಹೇಳುವೆನು ವರ
ಯುವತಿಗೀ ನುಡಿಯೊಸಗೆಯೇ ಹಾಯೆನುತ ಬಿಸುಸುಯ್ದ ೪೮

ಅರಸ ಕೇಳೈ ಚಿತ್ರಸೇನನ
ಕರೆಸಿ ಯೂರ್ವಶಿ ಪಾರ್ಥ ಮಾಡಿದ
ದುರುಳತನವನು ದೂರಿದೊಡೆ ಸುರಸತಿಯ ಸಂತೈಸಿ
ಸುರಪತಿಗೆ ಗಂಧರ್ವನಿವರಿ
ಬ್ಬರ ನಿರೋಧ ನಿಬಂಧನವನೆ
ಚ್ಚರಿಸಲರ್ಜುನನರಮನೆಗೆ ಬಂದನು ಬಲಧ್ವಂಸಿ ೪೯

ಮಗನಪ್ಪಿದನೆನ್ನ ತಂದೆಗೆ
ದುಗುಡವೇಕೆನ್ನಾನೆಗೆತ್ತಣ
ಬೆಗಡಿನ್ನರಸಂಗಿದೆತ್ತಣ ದೆಸೆಯ ದುಮ್ಮಾನ
ಮೊಗದ ತನಿ ಹಳಹಳಿಕೆ ನೇತ್ರಾಂ
ಬುಗಳೊಳದ್ದುದು ನಿಜ ಮನೋವೃ
ತ್ತಿಗಳೊಳಗೆ ನುಡಿ ಮುಳುಗಿತೇನಿದು ಚಿತ್ರವಾಯ್ತೆಂದ ೫೦

ನುಡಿಸೆ ತಲೆವಾಗಿದನು ಲಜ್ಜೆಯ
ಝಡಿತೆಯಲಿ ಝೊಮ್ಮೇರಿದಂತೆವೆ
ಮಿಡುಕದಿರೆ ಮುಗುಳಪ್ಪಿ ಹರಿ ಮೊಗ ನೆಗಹಿ ಮುಂಡಾಡಿ
ಬಿಡು ಮನೋಗ್ಲಾನಿಯನು ಸತಿ ಕೆಡೆ
ನುಡಿದುದೆಲ್ಲವನೆನಗೆ ಸೈರಿಸು
ಮಡದಿಯರಲೇನುಂಟು ಗುಣವೆನ್ನಾಣೆ ಹೇಳೆಂದ ೫೧

ಎಲೆ ಕಿರೀಟ ವೃಥಾ ಮನೋವ್ಯಥೆ
ತಳಿತುದೇಕೂರ್ವಶಿಯ ಶಾಪದ
ಲಳುಕಿದೈ ತತ್ಕ್ರೋಧ ನಿನಗುಪಕಾರವಾಯ್ತು ಕಣ
ಹಳುವದಲಿ ಹನ್ನೆರಡು ವರುಷದ
ತಲಹಿನಜ್ಞಾತದಲಿ ವರುಷವ
ಕಳೆವಡಿದು ಸಾಧನವೆಯಾಯ್ತು ಶಿಖಂಡಿತನವೆಂದ ೫೨

ಖೋಡಿಯಿಲ್ಲೆಲೆ ಮಗನೆ ಚಿಂತಿಸ
ಬೇಡ ನಿಮ್ಮಜ್ಞಾತದಲಿ ನೆರೆ
ಜೋಡಲಾ ಜಾಣಾಯ್ಲ ರಿಪುಜನ ದೃಷ್ಟಿಶರ ಹತಿಗೆ
ಕೂಡಿತಿದು ಪುಣ್ಯದಲಿ ಸುರಸತಿ
ಮಾಡಿದಪಕೃತಿ ನಿನ್ನ ಭಾಷೆಯ
ಬೀಡ ಸಲಹಿದುದರಿಯೆ ನೀ ಸಾಹಿತ್ಯನಲ್ಲೆಂದ ೫೩

ಎಂದು ಪಾರ್ಥನ ಸಂತವಿಟ್ಟು ಪು
ರಂದರನು ತನ್ನರಮನೆಗೆ ನಡೆ
ತಂದನರ್ಜುನ ಸಹಿತ ವಿವಿಧ ವಿನೋದ ವಿಭವದಲಿ
ಅಂದು ಶಿಖಿ ಪವನಾದಿಗಳು ನಲ
ವಿಂದ ಕೊಟ್ಟರು ಶರವನಮರೀ
ವೃಂದ ಸೂಸಿತು ಸೇಸೆಯನು ಜಯರವದ ರಭಸದಲಿ ೫೪

ಸುರಪನರುಹಿದನಸ್ತ್ರ ಶಸ್ತ್ರೋ
ತ್ತರ ರಹಸ್ಯವನವನಮರ ಭುವನದ
ಭರತ ವಿದ್ಯೆಯನರುಹಿಸಿದನಾ ಶಾಸ್ತ್ರವಿಧಿಯಿಂದ
ಸುರರಿಗಲಣಸಾದ ದೈತ್ಯರ
ನೊರಸಿದನು ತತ್ಕೀರ್ತಿಲತೆ ಕುಡಿ
ವರಿದು ಬೆಳೆದುದು ವೀರ ನಾರಾಯಣನ ಮೈದುನನ ೫೫