ಸೂ. ಮುನಿನಿಕರ ಬಿನ್ನವಿಸೆ ಕರುಣಾ
ವನಧಿ ಶಂಭು ಕಿರಾತಮಯ ರೂ
ಪಿನಲಿ ಹೊಕ್ಕನು ವನದಲೆಚ್ಚನು ಮೂಕದಾನವನ

ಮರಳಿದನು ದೇವೇಂದ್ರನತ್ತಲು
ಹರನೊಡನೆ ಹೊರೆಯೇರಿದಂತಃ
ಕರಣ ಹಿಗ್ಗಿತು ಹುದುಗಿದನು ಬಹಿರಂಗ ಭಾವನೆಯ
ಧರಣಿ ಮೊದಲೆನೆ ಭೂತ ಪಂಚಕ
ಮರುತ ಪಂಚಕ ವಿಷಯವಿಂದ್ರಿಯ
ಕರಣ ವಿಪ್ಪತ್ತೈದು ತತ್ವಾತ್ಮಕನ ಚಿಂತಿಸಿದ  ೧

ಮೇಲೆ ವಿದ್ಯಾರಾಗ ನೀತಿಯ
ಕಾಲಕ ಲಯಾತ್ಮಕನ ಮಾಯೆಯ
ಮೇಲುಪೋಗಿನ ಶುದ್ಧ ವಿದ್ಯಾರೂಪನೀಶ್ವರನ
ಕೇಳು ನೃಪತಿ ಸದಾಶಿವನನು
ತ್ತಾಳ ಶಕ್ತಿಯನಖಿಲ ತತ್ವದ
ಮೌಳಿಮಣಿಯನಖಂಡ ಚಿನುಮಯ ಶಿವನ ಚಿಂತಿಸಿದ ೨

ಮೂರು ದಿನಕೊಮ್ಮೊಮ್ಮೆ ಫಲದಾ
ಹಾರದಲಿ ನೂಕಿದನು ತಿಂಗಳ
ನಾರು ದಿವಸಕೆ ಫಲವಗೊಂಡನು ತಿಂಗಳೆರಡರಲಿ
ಮೂರು ತಿಂಗಳ ಕಳೆದನಿಂತೀ
ರಾರು ದಿವಸಕೆ ಕಂದಮೂಲಾ
ಹಾರದಲಿ ತರಗೆಲೆಯಲಿರ್ದನು ನಾಲ್ಕು ಮಾಸದಲಿ  ೩

ಬಳಿಕ ಪವನಾಹಾರದಲಿ ನಿ
ಸ್ಖಲಿತ ಶಿವಪದ ಭಕ್ತಿ ಸುಧೆಯಲಿ
ತಳಿತ ರೋಮಾಂಚನದ ಕಂದದ ಕುಂದದವಯವದ
ಥಳಥಳಿಸುವಾನನದೆ ಸತ್ವೋ
ಜ್ಜ್ವಲಿತ ಚಿತ್ತದ ಸುಪ್ರಭಾವದ
ಬಳವಿಗೆಯಲುತ್ಕೋಚವಾಯಿತು ತಪ ಧನಂಜಯನ  ೪

ಯಮದಲುತ್ಸಾಹಿಸಿದು ನಿಯಮ
ಶ್ರಮವ ಗೆಲಿದನು ಶಂಭುವಿನ ಪದ
ಕಮಲ ಬಯಸಿಕೆಯಾದುದೆತ್ತಿದ ಜೀವ ಪರಮನಲಿ
ಭ್ರಮಿಸುವಿಂದ್ರಿಯ ಗುಣವನುಗಿದಾ
ಕ್ರಮಿಸಿ ಶಂಕರ ಭಾವದಲಿ ಸಂ
ಕ್ರಮಿಸಿ ಧರಿಸಿ ಸಮಾಧಿಯನು ತಳೆದಾತ್ಮಪರನಾದ  ೫

ವಿಮಳಮತಿ ಕೇಳಿಂದ್ರಿಯಾರ್ಥ
ಭ್ರಮೆಯ ಜಾಗ್ರದವಸ್ಥೆಯಂತಃ
ಸ್ತಿಮಿರ ಕರಣಭ್ರಮೆಯಲುದಿತ ಸ್ವಪ್ನವೀಧಿಯಲಿ
ಗಮಿತ ತದ್ವಾಸನೆಯ ಬೀಜ
ಕ್ರಮ ಸುಷುಪ್ತ್ಯಾವಸ್ಥೆಯಲಿ ಸಂ
ಕ್ರಮಿಸದಗ್ಗದ ತುರ್ಯ ಶಿವನನು ಪಾರ್ಥ ಚಿಂತಿಸಿದ  ೬

ತಾನೆ ಶಿವನೋ ಮೇಣು ಶಿವನ
ಧ್ಯಾನ ತನಗದ್ವೈತದನುಸಂ
ಧಾನವಿದು ಜವನಿಕೆಯೋ ಜೀವಾತುಮನ ಜಂಜಡಕೆ
ಧ್ಯಾನವೋ ಮೇಣ್ ಧೈರ್ಯವೋ ತ
ಧ್ಧ್ಯಾನ ಕರ್ತುವೊ ತ್ರಿಪುಟಿರಹಿತನೊ
ತಾನು ಮೇಣೆನಲಾಯ್ತು ಚಿತ್ತದ ಶುದ್ಧಿಯರ್ಜುನನ  ೭

ಮುನಿಯಿದೇನೈ ಚಿತ್ರವಾಯ್ತ
ರ್ಜುನನ ಚಿತ್ತದೊಳೇನು ತಾಮಸ
ಜನಿತ ಕರ್ಮವೊ ಶುದ್ಧ ತತ್ವಜ್ಞಾನ ಜಲಧಿಯಲಿ
ಮನ ಮುಳುಗಿ ಮಗುಳೆದ್ದು ಶಿತಿ ಕಂ
ಠನಲಿ ಶಸ್ತ್ರಾಸ್ತ್ರವನು ಬೇಡಿದ
ನೆನಲು ಜನಮೇಜಯಗೆ ಮುನಿಯಿಂತೆಂದ ನಸುನಗುತ  ೮

ಅರಸ ಕೇಳೈ ರಾಜಸಾಂತಃ
ಕರಣವದು ಕಾಮ್ಯೈಕ ಸಿದ್ಧಿ
ಸ್ಫುರಣೆಗೋಸುಗ ತಪವಲೇ ರಾಜ್ಯಾಭಿಲಾಷೆಯಲಿ
ಹರಚರಣನಿಕ್ಷಿಪ್ತ ಚೇತಃ
ಸ್ಫುರಣೆ ತತ್ಪರಿಯಂತ ಉಕ್ಕಿತು
ಪರಮವಸ್ತು ನಿಜಸ್ವಭಾವಕೆ ಚಿತ್ರವೇನೆಂದ  ೯

ಮೇಲೆ ಮೇಲೀತನ ತಪೋಗ್ನಿ
ಜ್ವಾಲೆ ಜಡಿದುದು ತಡೆದುದಭ್ರ
ಸ್ಥಾಳಿಯಲಿ ಸೈವರಿವ ಸೂರ್ಯಾಚಂದ್ರಮ ಪ್ರಭೆಯ
ಢಾಳಿಸುವ ಪರಿಧೌತ ಮೌನ ಕ
ರಾಳ ತೇಜೋಗರ್ಭ ತಪಧೂ
ಮಾಳಿಯಲಿ ಮೇಘಾಳಿ ಮಸಗಿದುದರಸ ಕೇಳೆಂದ  ೧೦

ಆತನುಗ್ರತಪಃಪ್ರಭಾ ವಿ
ಖ್ಯಾತಿ ವಿಗಡಿಸಿತಖಿಳ ಲೋಕ
ವ್ರಾತವನು ಸೋತವನು ಕೌರವನೋ ಯುಧಿಷ್ಠಿರನೊ
ಈತನೀಶ್ವರಶಸ್ತ್ರವನು ಕೈ
ಯಾತುಕೊಂಡರೆ ಬಳಿಕ ರಿಪು ನೃಪ
ಜಾತವಿದಿರೇ ಕೇಳು ಜನಮೇಜಯ ಮಹೀಪಾಲ  ೧೧

ಏನನೆಂಬೆನು ಪಾರ್ಥನುಗ್ರ ತ
ಪೋ ನಿದಾಘ ಜ್ವಾಲೆಯನು ಸಂ
ಧಾನವನು ತತ್ಪರಿಸರದ ಪಾವನ ತಪೋಧನರ
ಮೌನವುರೆ ಸೀದುದು ಜಪಾನು
ಷ್ಠಾನ ಬಿಡೆ ಬೆವರಿತು ಸಮಾಧಿ
ಧ್ಯಾನ ಸೀಕರಿಯಾಯ್ತು ಸಾರವಿಚಾರ ಶಮಸಹಿತ  ೧೨

ಶ್ರುತಿಯ ಲುಳಿ ತಗ್ಗಿತು ವಿವೇಕ
ಸ್ಥಿತಿಗೆ ಪಲ್ಲಟವಾದುದೀಶ್ವರ
ರೂಪವನು ಮುಚ್ಚಿದುದು ಮಾಯಾ ಮೋಹಮುದ್ರೆಯಲಿ
ಶಾಪಭೀತರಹಂ ಮಮತ್ವ ಕೃ
ತಾಪರಾಧರು ವಿಕೃತಗುಣ ಯ
ಜ್ಞಾಪವೀತರು ಮಸಗಿದರು ಮುನಿಗಳು ತಪೋವನದ ೧೩

ಹಳಿವ ಹಾವಸೆ ಮನದೊಳಿದ್ದರು
ಕೆಲವು ಕೆಲರೆಡೆಯಾಡುತಿರ್ದರು
ತಿಳಿವು ಮರವೆಗಳಲ್ಲಿ ಕೆಲರುಪಶಾಂತಿ ಭಾವದಲಿ
ಕೆಲರಿದೇನಿವಗಿಲ್ಲಿ ತೊಲಗಿಸಿ
ಕಳೆವುದೀತನನೆಂದು ತಮ್ಮೊಳು
ಕಳವಳಿಸುತೊಮ್ಮೊತ್ತವಾದುದು ಸಕಲ ಮುನಿನಿಕರ  ೧೪

ಕೆದರಿದವು ಜಡೆಯಕ್ಷಮಾಲೆಗ
ಳುದುರಿದವು ಕರದಲಿ ಕಮಂಡಲ
ವದುರಿದವು ಹಳುವಾಯ್ತು ಹರಿಣಾಜಿನ ಮುನೀಶ್ವರರ
ಕದಡಿತಂಗ ವಿಭೂತಿ ಕಡುಗೋ
ಪದಲಿ ಹರಿದರು ಹರಗಿರಿಯ ಹ
ತ್ತಿದರು ಕಂಡರು ರಾಜಮೌಳಿಯ ರಾಜಮಂದಿರವ  ೧೫

ಶಿವನ ಭವನದ ದೂರದಲಿ ಕಂ
ಡಿವರು ಮೈಯಿಕ್ಕಿದರು ವರಮುನಿ
ನಿವಹ ಬಂದುದು ಬಾಗಿಲವದಿರು ಬಿನ್ನಹದ ಹದನ
ವಿವರಿಸಲು ಕರೆಸಿದನು ಕರುಣಾ
ರ್ಣವನ ಕಂಡರು ಮೈಯ ಚಾಚಿದ
ರವನಿಯಲಿ ಜಯ ಜಯ ಮಹೇಶ ನಮಃಶಿವಾಯೆನುತ  ೧೬

ಏಳಿರೈ ಸಾಕೇಳಿರೈ ಸಾ
ಕೇಳಿ ಕುಳ್ಳಿರಿ ಬಂದ ಕಾರ್ಯವ
ಹೇಳಿಯೆನೆ ಮುನಿನಿಕರವೆದ್ದುದು ನೊಸಲ ಕೈಗಳಲಿ
ಹೇಳಿ ನೀವ್ ಹೇಳಿನ್ನು ಹಿರಿಯರು
ಹೇಳಿಯೆನುತೊಳಗೊಳಗೆ ಘೋಳಾ
ಘೋಳಿ ಮಸಗಿದುದೊಬ್ಬ ಮುನಿ ನಿಲಿಸಿದನು ಕಳಕಳವ ೧೭

ನೀಲಲೋಹಿತ ಚಿತ್ತವಿಸು ಶಶಿ
ಮೌಳಿ ಬಿನ್ನಹ ನಿಗಮ ಮಹಿಳಾ
ಮೌಳಿಮಣಿ ನೀರಾಜಿತಾಂಘ್ರಿ ಸರೋಜನವಧಾನ
ಪಾಲಿಸುವುದಾರ್ತರನು ಪರಮ ಕೃ
ಪಾಳು ನೀನತಿದೀನರಾವು ವಿ
ಟಾಳ ಸಂಗತಿಯಾದುದೆಮ್ಮಯ ಜಪತಪಸ್ಥಿತಿಗೆ  ೧೮

ಶಾಂತಿಯೇ ಮನೆ ನಿಮ್ಮ ಚರಣವ
ಚಿಂತೆಯೇ ಮನೆವಾರ್ತೆ ವರ ವೇ
ದಾಂತ ತತ್ವರಹಸ್ಯ ಮನನಾದಿಗಳು ಸರ್ವಸ್ವ
ದಾಂತಿಯೇ ಸುಖಭೋಗ ಮಾಯಾ
ಶ್ರಾಂತಿಯೇ ಮಹಾತ್ಮ್ಯೆಯಿವು ಋಷಿ
ಸಂತತಿಗೆ ವರ್ತನವಲೇ ವೈದಿಕ ವಿಧಾನದಲಿ  ೧೯

ಹೋದ ಹೊಲಬಿಲ್ಲದರೊಳಗೆ ದು
ರ್ಭೇದ ತಪವೇ ಹೊಗೆವುತದೆ ಹೊ
ಳ್ಳಾದವೆಮ್ಮ ಸಮಾಧಿ ಸೈರಣೆ ಶಮ ದಮಾದಿಗಳು
ಕಾದುದಾ ವನಭೂಮಿ ತರು ಗು
ಲ್ಮಾದಿಗಳು ಕಟ್ಟೊಣಗಲಾದವು
ತೀದುದೆಮ್ಮಯ ನಿತ್ಯವಿಧಿಯೊಬ್ಬನ ದೆಸೆಯಲಿಂದು  ೨೦

ರಾಯನೋ ಮೇಣವನು ರಾವುತ
ಪಾಯಕನೊ ಋಷಿಯಲ್ಲ ಋಷಿಗೇ
ಕಾಯುಧಂಗಳ ಗೊಡವೆ ನಮಗೇಕದರ ಬೂತಾಟ
ಸಾಯಕದ ಬತ್ತಳಿಗೆ ಚಾಪವ
ಡಾಯುಧದ ಕುಶೆವೆರಳ ಜಡೆಗಳ
ನಾಯತದಲನುಚಿತದ ಸಂಗದ ತಪಸಿಯಹನೆಂದ  ೨೧

ಆಡಿದೊಡೆ ನಾವ್ ಮುನಿಗಸೂಯವ
ಮಾಡಿದವರುಗಳಿಂದು ನಿಮ್ಮಡಿ
ಗಾಡದಿದ್ದರೆ ಬಿಸಿಲ ರಾಶಿಯನುರಿಯ ಸೂತಕವ
ಕೂಡಿತೆಮ್ಮಯ ನಿತ್ಯವಿಧಿ ತಪ
ಗೇಡಿಯನು ಬಿಡದೆಬ್ಬಿ ಸೆಮಗೆಡೆ
ಮಾಡಿಕೊಡಬೇಕೆಂದು ಮತ್ತೆರಗಿದನು ಶಿವಪದಕೆ  ೨೨

ಮತ್ತೆ ನಮ್ಮನು ಪಿಸುಣರೆಂದೇ
ಚಿತ್ತವಿಸಲಾಗದು ತಪೋವನ
ಹೊತ್ತುತಿದೆ ವಿಪರೀತ ತಪಸಿಯ ತೀವ್ರತೇಜದಲಿ
ಇತ್ತಲೊಂದು ತಪೋವನವನೆಮ
ಗಿತ್ತು ಕರುಣಿಸು ಮೇಣ್ ವಿಕಾರಿಯ
ನೆತ್ತಿ ಕಳೆ ಕಾರುಣ್ಯ ನಿಧಿಯೆಂದುದು ಮುನಿಸ್ತೋಮ  ೨೩

ಕೇಳುತವನಾರೋಯೆನುತ ಶಶಿ
ಮೌಳಿ ವಿಮಲಜ್ಞಾನ ದೃಷ್ಟಿಯೊ
ಳಾಳನರಿದನು ಮನದೊಳಗೆ ನಮ್ಮವನಲಾಯೆನುತ
ಬಾಲಹಿಮಕರಕಿರಣನೊಡನೆ ಸ
ಮೇಳವಹ ನಗೆ ಮಿನುಗೆ ಮುನಿಜನ
ಜಾಲವನು ನೋಡಿದನು ಕರೆದನು ಕೃಪೆಯ ತನಿಮಳೆಯ  ೨೪

ಅರಿದೆ ನಾನಂಜದಿರಿ ಹುಯ್ಯಲ
ಬರಿದೆ ತಂದಿರಿ ನಿಮ್ಮ ಗೆಲವಿಂ
ಗೆರಗುವವನವನಲ್ಲ ಬೇರಿಹುದಾತನಂಗವಣೆ
ಅರುಹಲೇಕೆ ಭವತ್ತಪೋವನ
ನೆರೆ ನಿಮಗೆ ನಾನವನನೆಬ್ಬಿಸಿ
ತೆರಹ ಮಾಡಿಸಿಕೊಡುವೆನೆಂದನು ನಗುತ ಶಶಿಮೌಳಿ  ೨೫

ಏಳಿ ನೀವಾಶ್ರಮಕೆ ಪೋಗಿ ಚ
ಡಾಳಿಸದು ಮುನಿವರನ ತಪವಿ
ನ್ನೇಳಿ ದಿಟ ಭಯವಿಲ್ಲವೆಂದು ಕರಾಂಬುಜವ ನೆಗಹಿ
ಬೀಳುಗೊಟ್ಟನು ಸಕಲ ಮುನಿಜನ
ಜಾಲವನು ಕರೆ ಭೂತ ನಿಕರವ
ಮೇಳವಿಸಹೇಳೆಂದು ನಂದೀಶ್ವರಗೆ ನೇಮಿಸಿದ  ೨೬

ಅರಸ ಕೇಳೈ ಬೇಂಟೆಯೆಂದೀ
ಶ್ವರನ ಕಟಕದೊಳೊದರಿದುದು ಡಂ
ಗುರದ ದನಿ ಡಾವರದೊಳೈದಿತು ನಿಖಿಳ ಭುವನವನು
ಪರಮ ಕರುಣಾಸಿಂಧು ಭಕ್ತನ
ಹೊರೆವ ಭರದಲಿ ಭೂರಿ ಮೃಗಯಾ
ಚರಣೆಗೋಸುಗ ಶಬರ ವರರೂಪದಲಿ ರಂಜಿಸಿದ  ೨೭

ತೆಗೆದು ತಲೆಮಾಲೆಯನು ಹಸುರಂ
ಗಿಗಳ ತೊಟ್ಟನು ಸುತ್ತುಬರೆ ಹೀ
ಲಿಗಳ ಹರಹಿನ ಪಾರಿವದ ಚಲ್ಲಣವನಳವಡಿಸಿ
ಬಿಗಿಜಡೆಯ ಶಶಿಮುಖಕೆ ಪತ್ರಾ
ಳಿಗಳ ಕಟ್ಟಿ ಕಿರಾತವೇಷದ
ವಿಗಡ ದೇವರ ದೇವ ಕೊಂಡನು ಚಾಪ ಮಾರ್ಗಣವ  ೨೮

ದೇವನನುರೂಪದಲಿ ನಿಂದರು
ದೇವಿಯರು ಗುಹ ಗಣಪತಿಗಳೆ
ಲ್ಲಾ ವಿನೋದವ ನೋಡಿ ಧರಿಸಿದರೊಲಿದು ಶಾಬರವ
ಆ ವಿಗಡ ನಂದೀಶ ವೀರಕ
ದೇವಲಕ ರೇಣುಕ ಮಹೋದರ
ದಾವಶಿಖಿಮುಖ ವೀರಭದ್ರಾದ್ಯಖಿಲ ಭೂತಗಣ  ೨೯

ಅರಸ ಕೇಳೈ ಸಪ್ತ ಮಾತೃಕೆ
ಯರು ಮಹೋಪನಿಷನ್ನಿತಂಬಿನಿ
ಯರು ದಿಶಾದೇವಿಯರು ಶ್ರುತಿವಿದ್ಯಾದಿಶಕ್ತಿಯರು
ಉರಗಿಯರು ವಿದ್ಯಾಧರಿಯರ
ಪ್ಸರಿಯರೌಷಧ ಮಂತ್ರ ದೇವತೆ
ಯರು ಪುಳಿಂದಿಯರಾಯ್ತು ಪರಮೇಶ್ವರಿಯ ಬಳಸಿನಲಿ  ೩೦

ಧೃತಿ ಮಹೋನ್ನತಿ ತುಷ್ಟಿಪುಷ್ಟಿ
ಸ್ಮೃತಿ ಸರಸ್ವತಿ ಸಂವಿಧಾಯಕಿ
ಮತಿ ಮನಸ್ವಿನಿ ಸಿದ್ಧಿ ಕೀರ್ತಿಖ್ಯಾತಿ ನಿಯತಮತಿ
ಗತಿ ಕಳಾಮಾನಿನಿ ಕಳಾವತಿ
ರತಿ ರಸಾವತಿ ಚಂಡಿ ಜಯೆ ಮಧು  ೩೧
ಮತಿಯೆನಿಪ ದೇವಿಯರು ಶಬರಿಯರಾಯ್ತು ನಿಮಿಷದಲಿ

ಮಾರಿ ಚಾಮುಂಡಿ ಸ್ಮಶಾನಾ
ಕಾರವತಿ ವರಕಾಳರಾತ್ರಿ ಮ
ಹೀರಮಣಿ ಜಯಲಕ್ಷ್ಮಿ ಯೋಗಿನಿ ಯಜ್ಞ ದೇವಿಯರು
ವೀರಸಿರಿ ವನಲಕ್ಷ್ಮಿ ಶಾಕಿನಿ
ನಾರಿ ದೇವತೆ ಡಾಕಿನೀಮುಖಿ
ಭೂರಿ ಶಕ್ತಿಯರೈದೆ ಶಬರಿಯರಾಯ್ತು ನಿಮಿಷದಲಿ  ೩೨

ಚಾಳಿಸಿದ ಹದವಿಲ್ಲುಗಳ ಬಡಿ
ಕೋಲುಗಳ ಸಂಕಲೆಯ ನಾಯ್ಗಳ
ಕೋಲುವಲೆಗಳ ಸಿಡಿವಲೆಯ ಮಿಡಿವಲೆಯ
ಕಾಲುಗಣ್ಣಿಯ ಹೆಬ್ಬಲೆಯ ಬೆ
ಳ್ಳಾಲವಲೆಗಳ ಮಯಣದಂಟಿನ
ಮೇಲುಕೊಂಬಿನ ಬೇಟೆಗಾರರು ಬಳಸಿದರು ಶಿವನ  ೩೩

ಶ್ರುತಿಗಳೂಳಿಗ ತರ್ಕಶಾಸ್ತ್ರದ
ಗತಿಯ ಸೋಹಿನ ಮಂತ್ರಮಯ ಸಂ
ತತಿಯ ಸೊಂಪಿನ ವಿವಿಧ ಜಪಯಜ್ಞಾದಿಗಳ ಬಲೆಯ
ವ್ರತದ ಜಂತ್ರದ ಕಣ್ಣಿಗಳ ಸ
ತ್ಕೃತಿಯ ಕೋಲ್ಗುಂಡುಗಳ ಯೋಗ
ಸ್ಥಿತಿಯ ಸರಳಿನ ಶಬರರೈದಿತು ಶಿವನ ಬಳಸಿನಲಿ ೩೪

ಶ್ರವಣ ಮನನದ ಬೀಸುವಲೆ ಶಾಂ
ಭವ ಸುವೇದಾ ದೀಕ್ಷೆಗಳ ಬಲು
ಗವಣೆಗಳ ಪಶುಪಾಶ ಬಂಧದ ಬೋಳೆಯಂಬುಗಳ
ನವ ವಿಧಾಮಲ ಭಕ್ತಿಗಳ ರಣ
ತವಕ ದೀಹದ ಹುಲ್ಲೆಗಳ ಮೃಗ
ಭವ ವಿದಾರಣ ಸುಭಟರೈದಿತು ಶಿವನ ನೇಮದಲಿ  ೩೫

ಸೋಹಿದೊಡೆ ದೆಸೆದೆಸೆಗೆ ಹಾಯ್ದುದು
ಮೋಹತಮ ಡಂಭಾದಿ ಮೃಗತತಿ
ತೋಹಿನಲಿ ಬಿದ್ದುದು ಮಹಾಪಾತಕ ಮದೇಭಚಯ
ದ್ರೋಹ ದೀಹಾಮೃಗವಸೂಯ ವ
ರಾಹ ಸಂಕೀರ್ಣೋಪಪಾತಕ
ದೇಹವಳಿದವನಂತವದರೊಳು ಶಿವನ ಬೇಂಟೆಯಲಿ  ೩೬

ಜಯಜಯೆಂದುದು ನಿಖಿಳ ಜಗ ಶ್ರುತಿ
ಚಯ ಛಡಾಳಿಸಿ ಹೊಗಳುತಿರ್ದುದು
ನಯನ ಗೋಚರವಾಯ್ತು ಸಾಕ್ಷಾತ್ಪರಮ ಶಿವತತ್ವ
ಲಯದ ಜನನದ ಸುಳಿಯ ಸಂಸ್ಕೃತಿ
ಮಯ ಸಮುದ್ರವ ಸುರಿದು ಸಲೆ ನಿ ೩೭
ರ್ಭಯವು ಭಕುತರಿಗೆಂಬವೊಲು ಮಸಗಿತು ಮಹಾಸಬುದ

ಹೇಳುವೊಡೆ ರೋಮಾಂಚನವಲೇ
ಕೇಳು ನೃಪ ಕೈಲಾಸವಾಸಿಯ
ಲೀಲೆಯನು ನಿಜಭಕ್ತಜನ ಸಂದರ್ಶನಾರ್ಥವಲೆ
ಆಳು ನಡೆತಂದಿಂದ್ರ ಕೀಲದ
ಶೈಲವನು ಬೆರೆಸಿತು ಮಹಾಧ್ಭುತ
ದೇಳಿಗೆಯನೇನೆಂಬೆನೈ ಕೈರಾತ ವಿಭ್ರಮವ  ೩೮

ಇಂಬಿನಲ್ಲಿಹ ಮೂಕ ದಾನವ
ನೆಂಬನೊಬ್ಬನು ತನ್ಮಹಾದ್ರಿ ನಿ
ತಂಬ ವನದ ನಿಕುಂಜದಲಿ ನಿರ್ಭಯ ವಿಹಾರದಲಿ
ಚುಂಬಿಸಿತು ಬಲುರಭಸವೆನೆ ವಿಲ
ಯಾಂಬುಧಿಯ ಕಳಕಳವನಮರರ
ತಿಂಬೆನೀಕ್ಷಣವೆನುತಖಳನಾಲಿಸಿದನಾ ಧ್ವನಿಯ  ೩೯

ಹಂದಿಯಾದನು ದನುಜನಾ ಗಿರಿ
ಕಂದರವ ಹೊರವಂಟು ಬೇಂಟೆಯ
ಮಂದಿಯೊಳಗಡಹಾಯ್ದ ನೆತ್ತಿದನಡ್ಡ ಬಿದ್ದವರ
ಹಂದಿಯೋ ತಡೆ ನಾಯಗಳ ಬಿಡಿ
ಹಿಂದೆ ಹಿಡಿ ಕೆಡೆ ಕುತ್ತು ಕೈಗೊ
ಳ್ಳೆಂದು ಗಜಬಜಿಸಿತ್ತು ಗಾವಳಿ ಗಹನ ಮಧ್ಯದಲಿ  ೪೦

ಎಳೆವರೆಯ ನಡುವಿದ್ದ ರಾಹುವೊ
ಲಳವಡುವ ದಾಡೆಗಳ ದೊಗುಮಿಗೆ
ಬೆಳೆದ ನೀಲಾಚಲಕೆ ಸರಿಯೆಂದೆನಿಪ ಹೇರೊಡಲ
ಮುಳಿದು ಗರ್ಜಿಸಿ ಕಿಡಿಸುರಿವ ಕಂ
ಗಳಲಿ ರೌದ್ರಾಟೋಪದಲಿ ಕೆ
ಕ್ಕಳಿಸಿದಿಕ್ಕೆಲ ನೋಡುತಿರ್ದುದು ದೇವಸಂತತಿಯ  ೪೧

ಕೂಡೆ ಕಟ್ಟಿತು ಭೂತಗಣ ಧ್ವನಿ
ಮಾಡಿ ಜಡಿದಬ್ಬರಿಸಿ ಮೋರೆಯ
ನೀಡಿ ನಾಯ್ಗಳು ತುಡುಕಿದವು ತಿರುಗಿದೊಲೆ ಹಿಮ್ಮಡಿಯ
ಝಾಡಿಸುತ ಕವಿದೆತ್ತ ಲೊಂದೇ
ದಾಡೆ ಬರತುದು ನೂರು ಗಾಯವ
ನೋಡುತಿರ್ದುದು ಸೇನೆ ಕಂಡನು ಶೂಲಿ ಸೂಕರನ  ೪೨

ಇಡುವ ಸೆಲ್ಲೆಹ ಬಲ್ಲೆಹದ ಹೆ
ಗ್ಗಿಡಿಯನುಗುಳುವ ಬಾಯ ಧಾರೆಯ
ನುಡಿದು ಹರಹಿ ಮಹೋಗ್ರತರ ಜಾಯಿಲನ ಜಂಗುಳಿಯ
ಕಡಿದು ಕೆಡಹಿ ಪುಳಿಂದ ಶಬರಿಯ
ರೆಡೆಗೆಡೆಯಲೊಡಹಾಯ್ದು ಮಿಗೆ ಘುಡಿ
ಘುಡಿಸಿ ಕವಿದೈತರಲು ಧೃತಿಗೆಟ್ಟುದು ಗಣಸ್ತೋಮ  ೪೩

ಇದುವೆ ಸಮಯವಲಾಯೆನುತ ಹೂ
ಡಿದನು ಬಾಣವನುಗಿದು ಪೂರಾ
ಯದಲಿ ತೂಗಿ ಪಿನಾಕಿಯೆಚ್ಚನು ಮೂಕದಾನವನ
ಒದೆದು ಹಾಯ್ದುದು ಬಾಣಗರಿದೋ
ರಿದುದು ಬದಿಯಲಿ ಕೊಡಹಿ ಗೋಳಿಡು
ತದು ಧನಂಜಯನತ್ತ ಹೋದುದು ಹೊತ್ತಕಣೆ ಸಹಿತ ೪೪

ಬಂದು ಗಿರಿ ಕಂದರದೊಳಿಹ ಮುನಿ
ವೃಂದದೊಳಗಡಹಾಯ್ದು ಕೆಡಹುತ
ಹಂದಿ ಮೋರೆಯ ನೆಗಹಿ ಮಲೆವುತ ಗಜರಿ ಗರ್ಜಿಸಿತು
ಮಂದಿ ಬೆದರುತ ಗೋಳಿಡುತಲಾ
ಇಂದುಧರನೇ ಬಲ್ಲ ಶಿವ ಶಿವ
ಯೆಂದು ಮೊರೆಯಿಡೆ ಕೇಳಿ ಕಂದೆರೆದೆದ್ದನಾ ಪಾರ್ಥ  ೪೫

ಕಂಡನರ್ಜುನನೀ ವರಾಹನ
ದಂಡಿ ಲೇಸಲ್ಲೆನುತ ಬಾಣವ
ಗಾಂಡಿವದೊಳಳವಡಿಸಿ ಬೊಬ್ಬಿರಿದೆಚ್ಚನಾ ಖಳನ
ದಿಂಡುಗೆಡೆದುದು ಕಾಲ ಕೊಡಹುತ
ಗಂಡಶೈಲದವೋಲು ಭೂತವ
ದಿಂಡುದರಿಯುವ ಹಂದಿ ಬಿದ್ದುದು ಪಾರ್ಥನಿದಿರಿನಲಿ  ೪೬

ಬಂದನೀಶ್ವರ ನಾವು ಕೆಡಹಿದ
ಹಂದಿ ನಮ್ಮದು ತೆಗೆಯಿಯೆನೆ ನರ
ನೆಂದ ನಮ್ಮಂಬಿನಲಿ ಬಿದ್ದುದು ಸಾರು ನೀನೆನಲು
ಬಂದುದೇಕಾಮಿಪ ವಿರೋಧದ
ಕುಂದು ಪಾರ್ಥನ ಚಿತ್ತದಲಿ ಬಾ
ಲೇಂದು ಧರನೆಂದೆತ್ತಬಲ್ಲನು ಕೆಣಕಿದನು ಶಿವನ  ೪೭