ರತ್ನಾಬಾಯಿ : ಪ್ರಾಣಾನಾಥ ಬಂದದ್ದು ಬರಲಿ, ಸದ್ಗುರುವಿನ ದಯಾ ಇರಲಿ. ಹೀಗೆ ನಾವು ದುಃಖ ಮಾಡುತ್ತ ಕುಳಿತರೆ ಹೊತ್ತ ಹೊಂಟ ಬಳಿಕ ಮೂರ್ಖರು ಬಂದು ಕಾಡುವರು. ಬೇಗನೆ ಹೋಗೂನ ನಡೆವಂಥವರಾಗಿರಿ.

ಬಡವ : ಕಾಂತಿಮಣಿಯೇ ! ಹಡೆದ ತಾಯಿ : ತಂದಿಯನ್ನು ಬಿಟ್ಟು ಹಿಂಥಾ ಪುಣ್ಯಾತ್ಮನ ಮನೆಯಲ್ಲಿ ಬಂದು ಎಷ್ಟು ಸುಖದಿಂದ ಇದ್ದೆವು. ಇವರ ಉಪಕಾರ ಯಾವ ಜನ್ಮಕ್ಕೆ ಹೋಗಿ ಮುಟ್ಟಿಸಬೇಕು ಕಾಂತಿ. ಆಗಲಿ ಬೇಗನೆ ನಡೆವಂತವಳಾಗು.

ರತ್ನಾಬಾಯಿ : ಸುಂದರ ತಪ್ಪದು ಪೂರ್ವದ ಕೃತಿಯೋ ॥ಪಲ್ಲ ॥

ಇಲ್ಲಿ ಇರುವದು ಕಾಣುದಿಲ್ಲಾ ಚಂದ
ಪತಿವ್ರತಕ ಬರುವದೊ ಕುಂದ ಅಬ್ರು
ಹೋದ ಮೇಲೆ ಸಿಕ್ಕಿತೇನೊ ಮುಂದ ॥1 ॥

ನೀತಿ ಶಾಸ್ತ್ರದಲ್ಲಿ ಹೇಳ್ಯಾರ ಹಿಂಗ ಖೂನ
ಪ್ರಾಣ ಕೊಟ್ಟು ಕಾಯಬೇಕು ಆಕಿ ಮಾನ
ನಾಮ ನುಡಿಬೇಕೋ ಶಿವ ಬಸವನ ॥2 ॥

ಹೇ ! ಪ್ರಾಣನಾಥ, ಹಿಂದೆ ಪಡಿದು ಬಂದದ್ದು ಮುಂದೆ ನಮಗೆ ಬಿಡಲಾರದು. ಇಲ್ಲಿ ನಾವು ಇದ್ದರೆ ನಮ್ಮ ಪತಿವ್ರತಾ ಹಾನ್ಯ ಆಗುವದು. ನಮ್ಮ ನೇಮ ನಿಷ್ಠಿಗೆ ಕುಂದು ಬರುವದು. ಕಾಂತಾ, ಎಲ್ಯಾದರು ಹೋಗಿ ಗುಡ್ಡ ಗಂವಾರ ಸೇರಿ ಪ್ರಾಣ ಹೋದರೂ ಚಿಂತಿ ಇಲ್ಲ. ಪತಿವ್ರತಾ ಹೋಗಬಾರದು ಕಾಂತಾ, ಬೇಗನೆ ನಡೆವಂಥವರಾಗಿರಿ.

ಬಡವ : ನಿಜ, ನಿಜ, ಸತಿಯಳೆ ನೀನಾಡುವ ಮಾತು ನಿಜ. ನಡೆ ಬೇಗನೆ ಹೋಗಿ, ತಂದೆಯವರ ಅಪ್ಪಣೆ ತಗೆದುಕೊಂಡು ಮುಂದಕ್ಕೆ ಸಾಗೋಣ ನಡೆ.

[ರಾಮಶೆಟ್ಟಿ ಸಾಹುಕಾರನ ಹತ್ತಿರ ಹೋಗುವರು]

ಸಾಹುಕಾರ ಪೋಗಿ ಬರುವೇನೊ
ನಿಮ್ಮ ದಯಾ ಇರಲಿ ಚರಣಕ್ಕೆರಗುವೆನು
ಸಾಹುಕಾರ ಶಂಕರ ಪ್ರಭುಹರ ॥1 ॥

ಅರಬರದು ಆಯ್ತಿರಿ ನಮಗ ಭಾಸ
ಹ್ಯಾಂಗ ಪೇಳಲಿ ನಾ ನಿಮ್ಮ ಕೂಸಾ
ಸಾಹುಕಾರ ಶಂಕರ ಪ್ರಭುಹರಾ ॥2 ॥

ಕೆಟ್ಟ ಅಮವಾಸಿ ಕತ್ತಲಿ ಕಾಳ
ನಮ್ಮದು ಹತ್ತಲಿ ಅರಬರಿಗೆ ಗೋಳ
ಸಾಹುಕಾರ ಶಂಕರ ಪ್ರಭುಹರಾ ॥3 ॥

ನಿಮ್ಮ ಉಪಕಾರ ಐತರಿ ನಮಗ ಬಹಳ
ನನ್ನ ಹಡದ ತಂದಿ ಜೀವದ ಜೀವಕಾಳ
ಸಾಹುಕಾರ ಶಂಕರಾ ಪ್ರಭುಹರಾ ॥4 ॥

ಇಷ್ಟು ಸುಖ ತನ್ನ ತವರ ಮನಿಯಾಗ
ನಾ ಕಂಡಿದಿಲ್ಲಾ ತಾಯಿ ಉಡಿವಳಗ
ಸಾಹುಕಾರ ಶಂಕರಾ ಪ್ರಭುಹರಾ ॥5 ॥

ಹೇ ! ತಂದೆಯವರೇ, ತಡಮಾಡದೆ ಬೇಗನೆ ಅಪ್ಪಣೆಯನ್ನು ಕೊಡುವಂಥವರಾಗಿರಿ.

ಸಾಹುಕಾರ : ಹೇ ! ಮಗನೇ ನೀನು ಇಲ್ಲಿಂದ ಅಪ್ಪಣೆ ತೆಗೆದುಕೊಂಡು ಹೋಗುವದೆಲ್ಲಿ ?

ಬಡವ : ಹೇ ! ತಂದೆಯವರೇ ಆ ದುಷ್ಟ ಅರಬರು ಬಂದು ನಮಗೆ ಜರ್ಬದಿಂದ ಕಾಡುವರು. ಇದು ಅಲ್ಲದೆನಮ್ಮ ಮರ್ಯಾದೆ ಹಾನ್ಯ ಆಗುವ ಪ್ರಸಂಗ ಬಂದಿರುವದು ತಂದೆಯವರೇ ಹೇಳಲಾರೆ ಹೇಳಲಾರೆ.

ರತ್ನಾಬಾಯಿ : ಅಯ್ ! ತಂದೆಯವರೇ, ಆ ದುಷ್ಟ ಅರಬರು ನಮಗೆ ಕೆಟ್ಟ ನುಡಿಗಳನ್ನಾಡಿ ಸದನಕ್ಕೆ ಬಾಯೆಂದು ಬಿರಿ ಶಬ್ದಗಳನ್ನು ನುಡಿದಿರುವರು. ತಂದೆಯವರೇ ಬೇಗನೆ ಅಪ್ಪಣೆಯನ್ನು ಕೊಡಿರಿ.

ಸಾಹುಕಾರ : ಆಹಾ ! ಮಗಳೇ ನಿಮ್ಮಂಥ ಪತಿವ್ರತಿಗೆ ಹಿಂಥಾ ಕಠೋರವಾದ ವೇಳೆ ಒದಗಿತೇ ? ಅಕಟಾಕಟಾ ಕೇಳಲಾರೆ ಕೇಳಲಾರೆ, ಅಮ್ಮಾ ಮಗಳೆ ಇನ್ನೇನು ಗತಿ ಮಾಡಲಿ ? ಕಿವಿ ಇದ್ದು ಕಿವಡನಾದೆ. ಕಣ್ಣಿದ್ದು ಕುರುಡನಾದೆ. ನಿಮಗೆ ಹೋಗೆನ್ನುವದು ಎನ್ನಿಂದ ಸರ್ವತಾ ಆಗದು ಮಗಳೇ.

ರತ್ನಾಬಾಯಿ : ಹೇ, ತಂದೆಯವರೆ ನಿಮ್ಮ ಉಪಕಾರವು ನಮ್ಮ ಮೇಲೆ ಅಲ್ಲದೆ ಭೂಮಿಗೆ ವಜ್ಜಿ ಆಗಿರುವದು. ತಂದೆ ನಿಮ್ಮ ಮನೆಯಲ್ಲಿ ಉಂಡ ಸುಖ ನನ್ನ ತವರ ಮನೆಯಲ್ಲಿ ಸಹ ಸಿಕ್ಕಿದ್ದಿಲ್ಲ. ಇರಲಿ, ತಂದೆಯವರೆ ಬಂದಿದ್ದು ಭೋಗಿಸಲಿಕ್ಕೆಬೇಕು. ಅಪ್ಪಣೆ ಕೊಡುವಂಥವರಾಗಿರಿ.

ಸಾಹುಕಾರ :

ಹ್ಯಾಂಗ ಇರು ಅನ್ನಲಿ ನಾ ನಿಮಗೆ
ಕೆಟ್ಟ ವಾಕ್ಯವು ಬಿತ್ತೊ ನನ್ನ ಕಿವಿಗೆ
ಕೇಳ ಜಜನಿ ಕೇಳ ಜನನಿ ॥1 ॥

ಆತರೆ ಕೇಳೋದಿಲ್ಲ ಎನ್ನ ಮಾತಾ
ಅವರಿಗೆ ಹೇಳದೋ ತ್ರಾಣ ಜನನಿ
ನಿನ್ನ ಕಾಲಗುಣ ಹೇಳಲಿ ಎಷ್ಟಾ ॥2 ॥

ಮನಿ ಉಕ್ಕಿ ಏರಿ ಅಬ್ರನೊ ಶ್ರೇಷ್ಠ ಕೇಳ
ನಿಮ್ಮ ಅಗಲಿ ಹೊತ್ತು ನಾ ಹ್ಯಾಂಗಗಳಿಲಿ
ಕಾಂತಾರದೊಳಗೆ ಕೇಳ ಜನನಿ ॥2 ॥

ಅಮ್ಮಾ ! ಮಗಳೆ ಹಿಂಥಾ ಶಬ್ದವನ್ನು ಕಿವಿಯಿಂದ ಕೇಳಿ, ಇರು ಹೇಗೆ ಅನ್ನಲಮ್ಮಾ. ಆ ದುಷ್ಟ ಅರಬರು ಯಾರ ಮಾತು ಕೇಳುವದಿಲ್ಲ. ಅವರಿಗೆ ಹೇಳುವ ತ್ರಾಣ ಸಹ ನಂದಲ್ಲಮ್ಮಾ. ಹೋಗಿ ಬರುವಂತವರಾಗಿರೆಮ್ಮಾ. ನೀವು ಹೋದ ಮೇಲೆ ನಾನು ಈ ಮನೆಯೊಳಗೆ ಇರುವದು ನನ್ನಿಂದ ಸರ್ವತಾ ಆಗಲಾರದಮ್ಮಾ. ಈ ಮೇಲ್ ಮಾಡಿಯು ಹಾಳಗೋಡೆಯಂತೆ ತೋರುವದು. ಮಗಳೆ ನಿನ್ನ ವರ್ಣನ ಎಷ್ಟಂತ ಮಾಡಲಿ? ನೀನು ನನ್ನ ಮನೆಗೆ ಬಂದ ಮೇಲೆ ನನ್ನ ಮಂದಿರವು ಹಾಲು ಉಕ್ಕಿದಂತೆ ಉಕ್ಕಹತ್ತಿತ್ತು. ಆ ಹಾಲಿನಲ್ಲಿ ಉಪ್ಪು ಒಗೆದು ನಡೆದೆಯಮ್ಮಾ.

ಬಡವ :

ತಡವು ಯಾತಕ್ಕೆ ಕೂಡು ಘಡನೆ ಅಪ್ಪಣೆ
ಎನಗೆ ತಡವು ಯಾತಕ್ಕೆ ಕೂಡು ಘಡನೆ
ಆರು ತಾಸು ರಾತ್ರಿಯಲ್ಲಿ ಅರಮನೆ ॥1 ॥

ಹೊರಗೆ ಆಗೆ ಧೊರಿಯೆ ನಿಮ್ಮ
ಆಜ್ಞೆ ಸರಿ ಆಗಿ ನಾ ಪೋಗುವೆ
ವ್ಯರ್ಥ ಮಾತಾಡಿ ವೇಳೆ ಬಹಳ ಆಗುವದು ॥2 ॥

ವ್ಯರ್ಥ ಮಾತಾಡಿ ವೇಳೆ ಬಹು
ಮೂರ್ತಿ ಮಂತ್ರ ನಿಮ್ಮ ಗುರುತ್ತ ಹ್ಯಾಂಗ
ಮರಿಯಲಿ ಕರ್ತ ರೇವಣಸಿದ್ಧ ಕಾಯೋ ಎನಗೆ ॥3 ॥

ಶಿವ ಎಂಬು ಭದ್ರ ಶೀಲಾ ಮೂರು
ಲೋಕಕ್ಕೆ ಮಿಗಲಾ ನೆನಿಯುವೆನೋ
ರಾತ್ರಿ ಹಗಲಾ ನನ್ನ ಆತ್ಮದಲ್ಲಿ ॥4 ॥

ಹೇ ! ತಂದೆಯವರೇ ತಡ ಮಾಡದೆ ಬೇಗನೆ ಅಪ್ಪಣೆ ಕೊಡುವಂಥವರಾಗಿರಿ. ಆಹಾ ! ಸತಿಯಳೆ ಈ ಆರು ತಾಸು ರಾತ್ರಿಯಲ್ಲಿ ಅರಮನೆಯನ್ನು ಬಿಟ್ಟು ಹೋಗುನ ನಡೆ ಸತಿಯಳೆ. ಆಹಾ ! ತಂದೆ ಬೇಗನೆ ಅಪ್ಪಣೆ ಕೊಡಿರಿ.

ಸಾಹುಕಾರ : ಹೋಗಿ ಬನ್ನಿರಪ್ಪ ಹೋಗಿ ಬನ್ನಿರಿ.

ರತ್ನಾಬಾಯಿ : ಹೇ ! ಕಾಂತಾ ತಂದಿಯವರ ಅಪ್ಪಣೆ ಸಿಕ್ಕಿರುವದು. ಇನ್ನು ತಾಯಿ ಅವರ ಕಡೆಗೆ ಹೋಗಿ ಅಪ್ಪಣೆಯನ್ನು ತೆಗೆದುಕೊಂಡು ಹೋಗುಣ ನಡಿಯಿರಿ ಕಾಂತಾ.

[ಹೋಗುವರು]

ಹೇ ! ತಾಯಿಯವರೆ ನಿನ್ನಿನ ದಿವಸ ರಾತ್ರಿಯಲ್ಲಿ ಆ ದುಷ್ಟ ಅರಬರು ಬಂದು ಎನಗೆ ಕೆಟ್ಟ ನುಡಿಗಳನ್ನಾಡಿರುವರು. ಆದ್ದರಿಂದ ಇಲ್ಲೇ ಇದ್ದರೆ ನಮಗೆ ಪರಿಪರಿಯಾಗಿ ಕಾಡುವರು. ನಮಗೆ ಬೇಗನೆ ಅಪ್ಪಣೆ ಕೊಡಬೇಕು. ತಂದೆಯವರ ಅಪ್ಪಣೆಯಾಗಿರುವದು. ನಾವು ತಾಯಿ ಪೋಗಿ ಬರುವೆನಮ್ಮಾ.

ಚಂದ್ರುಣಿದೇವಿ :

ಚೆನ್ನಿಂಗ ರೂಪದ ಮಗಳೆ ಚಿನ್ನದ ಹಾರದಂತೆ
ನಿನ್ನ ಗುಣದ ರೀತಿ ಬಹು ಪ್ರೀತಿ ಆತ್ಮಕ
ಉರಿ ಹಚ್ಚಿ ನಡದಿ ಮಗಳೆ ಮಾಡಲಿ ಏನುಗತಿ ॥1 ॥

ಕೆಟ್ಟ ಅಮವಾಸಿ ಕಾಳ ರಾತ್ರಿ ಬಿಟ್ಟ ಆರಾಣದಲ್ಲಿ
ಧಿಟ್ಟ ಅರಬರು ಜಾತಿ ಬೆನ್ನ ಹತ್ತಿ ಬಂದರ
ಬಿಡಿಸಿ ಕೊಳ್ಳುವರು ಯಾರ ಮಗಳೆ ಹೇಳ ರೀತಿ ॥2 ॥

ಹೊಟ್ಟಿ ಮಕ್ಕಳಂತೆ ಸಾಕಿ ಸಾರ್ಥಕ ಆಗಲಿಲ್ಲಾ
ಕಾಡಾ ಕಾಲ ಬೆನ್ನ ಹತ್ತಿ ಬಂದಿತ
ನನ್ನ ಹಣಿಬಾರ ಬಂಜಿಯೆಂದುಬರದೈತಿ ॥3 ॥

ಅಮ್ಮಾ, ಮಗಳೆ ನಿನ್ನ ಚಂದವಾದ ಗುಣವನ್ನು ನಾನು ಎಷ್ಟಂತ ವರ್ಣಿಸಲಿ, ನನ್ನ ಆತ್ಮಕ್ಕೆ ಉರಿ ಹಚ್ಚಿ ನಡೆದೆಯಮ್ಮಾ ಮಗಳೆ, ಕೆಟ್ಟ ಕಾಂತಾರದಲ್ಲಿ ಹೋಗುವಾಗ ದುಷ್ಟ ಅರಬರು ಬಂದು ಮತ್ತೇ ಕಾಡಿದರೆ ನಿಮ್ಮನ್ನು ಬಿಡಿಸಿಕೊಳ್ಳುವರು ಯಾರಮ್ಮ ಮಗಳೆ, ಹೊಟ್ಟಿ ಮಕ್ಕಳಂತೆ ಸಾಕಿ ಸಲಹಿ ಸಾರ್ಥಕವಾಗಲಿಲ್ಲವಲ್ಲ ಅಮ್ಮಾ.

[ಅಳುವಳು]

ರತ್ನಾಬಾಯಿ :

ಸಾಕೆನ್ನ ಹಡದಮ್ಮ ಶೋಕ ಮಾಡಲಿ ಬೇಡ
ಲೋಕದಲ್ಲಿ ಬಂದ ಬಳಿಕ ತಿಳಬೇಕ ಶಂಭು
ಶಂಕರ ತಂದದ ವ್ಯಾಳ್ಯಾಕ್ಯಾಕ ಅಂಜಬೇಕ ॥1 ॥

ಹರನು ಮಾಡಿದ ಆಟ ನರರಿಗೆ ತಿಳಿಯದು
ಬರಿಯುವ ಬ್ರಹ್ಮನಿಗೆ ಗೊತ್ತ ಈ ಮಾತ
ಬಂದದು ಬರಲಿ ಗುರುವಿನ ದಯ ಇರಲಿ ಸಿದ್ಧಾಂತ ॥2 ॥

ಹೊತ್ತು ಹೊಂಟ ಬಳಿಕ ಮತ್ತು ಗೊತ್ತ ಮಾಡಿ
ಅರಬರು ಕತ್ತಿಯಂತೆ ಕೂಗುವರು ಮೂರ್ಖರು
ತಾಯಿ ಕೊಡು ಅಪ್ಪಣಿ ಗೈಬಿ ಫೀರ ಹಾನಕಾಯ್ವ ॥3 ॥

ಸಾಕು ಮಾಡ್ರಿ ತಾಯಿಯವರೇ ಶೋಕಮಾಡಿ ಫಲವೇನು ? ಲೋಕದಲ್ಲಿ ಬಂದ ಮೇಲೆ ಆ ಪರಮೇಶ್ವರನು ತಂದ ವೇಳಕ್ಕೆ ಯಾರೇನು ಮಾಡುವರು ತಾಯಿ ? ಬೇಗನೆ ಅಪ್ಪಣೆಯನ್ನು ಕೊಡುವಂಥವರಾಗಿರಿ. ಆ ಮಹಾದೇವ ಮಾಡಿದ ಆಟ ಮಾನವರಿಗೆ ತಿಳಿಯದಮ್ಮಾ. ಬ್ರಹ್ಮ ಬರೆದ ಲಿಖಿತ ಆ ಬ್ರಹ್ಮನಿಗೆ ಗುರ್ತು. ವ್ಯರ್ಥ ವೇಳೆ ಆಗುವದು ತುರ್ತ ಅಪ್ಪಣೆ ಕೊಡ್ರಿ ತಾಯಿ.

ಚಂದ್ರುಣಿದೇವಿ : ಅಮ್ಮಾ, ಮಗಳೆ ಸ್ವಲ್ಪ ತಡಿವಂತವಳಾಗಮ್ಮ. ನಿನಗೆ ಬುತ್ತಿಯನ್ನು ಕಟ್ಟಿ ಕೊಡುವೆನು. ಎಲ್ಲಾದರೂ ದಾರಿಯಲ್ಲಿ ಊಟ ಮಾಡಿ ಹೋಗುವಂತವರಾಗಿರೆಮ್ಮಾ ಮಗಳೆ.

ಬಡವ : ಹೇ ! ಸತಿಯಳೆ ಸಾಹುಕಾರ ಕೊಟ್ಟಂತಹ ವಸ್ತ ಬಂಗಾರ ಮತ್ತು ಬಟ್ಟಿ ಬರಿಗಳೆಲ್ಲಾ ಕೊಟ್ಟು ಬಿಡು. ಮತ್ತು ಮೊದಲಿನಂತೆ ಹದಿನಾರು ಗಂಟಿನ ಸೀರಿಯನ್ನುಟ್ಟು ಕಳ್ಳ ಸುಳ್ಳರ ಭಯವಿಲ್ಲದಂತೆ ಹೋಗುನ ನಡೆವಂತಾಕ್ಕಿಯಾಗು ಕಾಂತಿಯೇ.

ರತ್ನಾಬಾಯಿ : ಆಗಲಿ ! ಪ್ರಾಣನಾಥ ನೀವು ಹೇಳಿದಂತೆ ಅವರ ಬಟ್ಟೆ ಬರೆಗಳನ್ನು ಕೊಟ್ಟು ಬಂದಿರುವೆನು. ಬೇಗನೆ ಹೋಗುವಂತವರಾಗಿ ಕಾಂತಾ.

ನಡಿ ನಡಿ ಪ್ರಿಯಾ ದಾರಿ ಹಿಡಿ ಹಿಡಿ
ಹೆದರದೆ ಬೆದರದೆ ಮಧುರ ವಾಕ್ಯನಿ ಶಿವನಾಮ ॥ಪಲ್ಲ ॥

ಕತ್ತಲಿ ಕಾಳ ಎತ್ತರ ಹೋಗಿ
ತಪ್ಪಾಗಿತ್ತೋ ನಮಗ ನಿಮಗ ನಡಿ ನಡಿ
ನಿಮ್ಮ ಚರಣ ನೊಂದಾವು ದಾರಿ ನಡಿದು ನಡಿದು ॥1 ॥

ಸಾಹುಕಾರ ಕಟ್ಟಿದ ಹೋಳಿಗೆ ಬುತ್ತಿ
ಹೊತ್ತ ಹೊಂಟ ಬಳಿಕ ಊಟ ಮಾಡಿ ನೀವು
ಮನಗಿರಿ ಕಾಂತಾ ತಂಪ ನೆರಳ ನೋಡಿ ॥2 ॥

ಮಾಡಿ ನಿತ್ಯ ಲಿಂಗಪೂಜೆ ಸಾಷ್ಟಾಂಗ ಹಾಕಿದರ
ಭಂಗ ಬರೋದಿಲ್ಲ ನಮ್ಮ ಲಿಂಗಯ್ಯಗ
ರಂಗಮಂಟಪ ಮೈಂದರ್ಗಿ ಅಂಗದ ತಿಳಿದ ನಡಿ ॥3 ॥

ಹೇ ! ಪ್ರಾಣಕಾಂತಾ, ಅರಣ್ಯದ ಅಧಿಕಾರಿ ಆದ ಬಳಿಕ ಅಂಜಿದರೆ ಫಲವಿಲ್ಲ ಕಾಂತಾ. ಸಾಹುಕಾರನ ಸುಖ ಮರೆತು ದುಃಖಕ್ಕೆ ಎದಿಕೊಟ್ಟು ದಾರಿಯನ್ನು ಮೆಟ್ಟಿರುವೆವು. ಆದರೆ ಈ ಕತ್ತಲೆ ಕಾಳದಲ್ಲಿ ನಮ್ಮಿಬ್ಬರಿಗೆ ತಪ್ಪಗಿಯಾದೀತು. ಕೈ ಕೈ ಹಿಡಿದುಕೊಂಡು ಭಯವಿಲ್ಲದೆ ಹೋಗುನ ನಡಿಯಿರಿ ಕಾಂತಾ.

ಬಡವ : ನಡಿ ಸತಿಯಳೇ, ನಡಿವಂತಕ್ಕಿಯಾಗು. ಈ ಕಗ್ಗತ್ತಲೆಯನ್ನು ನೋಡಿ ಎನಗೆ ಭಯ ಹತ್ತಿರುವದು. ಎನ್ನ ಎದಿವಡಿದು ನೀರಾಗಿ, ಯಾರ ಮುಂದೆ ಹೇಳದಂತೆ ಆಯಿತು. ಕಾಂತಿ ಇನ್ನೇನು ಗತಿ ಮಾಡಲಿ ?

ರತ್ನಾಬಾಯಿ : ಇರಲಿ ಕಾಂತಾ, ಕಾಂತಾರದಲ್ಲಿ ದುಃಖಿಸುತ್ತ ಕುಳಿತರೆ ನಮ್ಮನ್ನಾರು ಕೇಳುವರು. ನಡೆವಂತವರಾಗಿರಿ ಪ್ರಿಯಾ.

ಬಡವ :

ಎಷ್ಟು ಇದು ಹೈರಾಣಾ ಸತಿಯಳೇ
ಸತಿಯಳೇ ಎಷ್ಟು ಇದು ಹೈರಾಣ ॥ಪಲ್ಲ ॥

ಕೆಟ್ಟ ಅಮವಾಸಿ ಕತ್ತಲಿ ಕಾಳ ದಾರಿ
ಸಿಗುವಲ್ಲದೋ ಆರ‌್ಯಾಣಾ ಎಷ್ಟಟು ಇದು
ಪ್ರಾಲಬ್ಧ ಹೆಂಥ ಹೀನಾ ಬ್ರಹ್ಮ ಬರೆದಿದ ॥1 ॥

ಪ್ರಾಲಬ್ಧ ಹೆಂಥಾ ಹೀನ ಇಂದಿಗೆ
ಎರವಾಯಿತೋ ರಾಮಶೆಟ್ಟಿ ತಂದಿಯ
ಮುಖವನ್ನ ತೋರುವದೋ ಅಪಶಕುನ ॥2 ॥

ಅಹೋ ! ಸತಿಯಳೇ ಎಷ್ಟದು ಹೈರಾಣ. ಕೆಟ್ಟ ಕತ್ತಲ ಕಾಳಿನಲ್ಲಿ, ಕಲ್ಲ ಮುಳ್ಳುಗಳು ಬಡಿದು ಅಂಗಾಲ ನೋಯಿತ್ತಿರುವದು. ನಮ್ಮ ಹಿಂದಿನ ಜನ್ಮದ ಕರ್ಮ, ಈ ಜನ್ಮದಲ್ಲಿ ಒದಗಿರುವದು ನೋಡು ಕಾಂತೆ. ಅದಕ್ಯಾರೇನು ಮಾಡುವರು ? ನಮಗೆ ಬಂದದು ನಾವೇ ಉಣಬೇಕು ಕಾಂತೆ.

ರತ್ನಾಬಾಯಿ : ಹೌದು ! ಪ್ರಾಣಕಾಂತ, ಪತಿದೇವರಾದ ನೀವು ಧೈರ್ಯವನ್ನು ಬಿಟ್ಟ ಮೇಲೆ ನಂದೇನು ಗತಿ ವಲ್ಲಭ ? ಬಂದದ್ದು ಬರಲಿ ಸದ್ಗುರುವಿನ ದಯ ಇರಲಿ. ಮುಂದಕ್ಕೆ ನಡಿಯಿರಿ ಸ್ವಾಮಿ.

ಬಡವ : ಹೇ ! ಕಾಂತಿ ಈ ಕಾಲಿಗೆ ಕಲ್ಲ ಬಡಿಯಿತಲ್ಲ. ಬೊಟ್ಟೊಡೆದ ಪೆಟ್ಟಿನ ದೋಷ ಇದು. ಮುಂದಿನ ಭವಿಷ್ಯ ನೋಡು ಸತಿಯೇ.

ರತ್ನಾಬಾಯಿ :

ಮಾಡಿರಿ ಶಿವಧ್ಯಾನ ಪ್ರಾಣಕಾಂತ
ಮಾಡಿರಿ ಶಿವಧ್ಯಾನ ಈಗ ಬಂದದ್ದು ಸಂಕಷ್ಟ
ಬೈಲ ಮಾಡವಾ ಭಗವಾನ ಮಾಡರಿ ಶಿವಧ್ಯಾನ ॥1 ॥

ಪ್ರಲ್ಹಾದ ಸಣ್ಣವನಾ ಹರಿಭಕ್ತಿ ಪ್ರಲ್ಹಾದ
ಸಣ್ಣವನಾ ಅವನ ಸಾತ್ವಿಕ ಶಿವಯೋಗಿ
ಉಳಿಸಿದ ಆತನ ಪ್ರಾಣ ॥2 ॥

ಚೆಂಗುಳೆ ತನ್ನ ಮಗನಾ ಶಿರಾ ಕೊಯಿದ್ದಾಳ
ಚೆಂಗುಳೆ ತನ್ನ ಮಗನಾ ಅವರ ಸಾತ್ವಿಕ
ಶಿವಯೋಗಿ ಪುತ್ರಗ ಕೊಟ್ಟಾನ ಜೀವದಾನಾ ॥3 ॥

ಹೇ ! ಕಾಂತಾ ಈ ರೀತಿ ನೀವು ಭಯಗೊಂಡು ಧಾರುಣಿಯ ಮೇಲೆ ಬಿದ್ದರೆ ನಮ್ಮ ಗತಿಯೇನು ಕಾಂತಾ. ಹೆಜ್ಜೆ ಹೆಜ್ಜೆಗೆ ಶಿವನಾಮ ನುಡಿದರೆ ನಮಗೆ ಬಂದ ಸಂಕಷ್ಟ ದೂರಾಗುವದು ನಡೆ ಕಾಂತಾ. ಸತ್ಯಕ್ಕೆ ಸಾವಿಲ್ಲ, ತತ್ತ್ವಕ್ಕೆ ಮೃತ್ಯುವಿಲ್ಲಾ. ಮೃತ್ಯು ಲೋಕದಲ್ಲಿ ಮಹಾದೇವನ ಮಂತ್ರವನ್ನು ಜಪಿಸಿ ಎಷ್ಟೋ ಜನರು ಮೋಕ್ಷ ಹೊಂದಿರುವರು.

ಬಡವ : ಅದು ಹೇಗೆ ಸತಿಯಳೇ ?

ರತ್ನಾಬಾಯಿ : ಆ ! ಹರಿಭಕ್ತನಾದ ಪ್ರಲ್ಹಾದನು ಆರುವರ್ಷದವನಿದ್ದ. ಯಾರಿಗೆ ತೀರದಂತಾ ಭಕ್ತಿಮಾಡಿ ಭಗವಂತನನ್ನು ಒಲಿಸಿಕೊಳ್ಳಲಿಲ್ಲವೇನು ಕಾಂತಾ. ಇದು ಅಲ್ಲದೆ ಸಿರಿಯಾಳ ರಾಜನ ಹೆಂಡತಿ ಚಂಗಳೆ ದೇವಿ ಇದ್ದೊಬ್ಬ ತನ್ನ ಮೋಹದ ಮಗನನ್ನು ಕೊಯಿದು ಆ ಮಹಾದೇವನಿಗೆ ಎಡಿ ಮಾಡಲಿಲ್ಲವೇನು ? ಆ ದೃಢ ಭಕ್ತಿಯನ್ನು ನೋಡಿ ಮೃಡಹರನು ಮರಳಿ ಅವರ ಮಗನ ಪ್ರಾಣ ದಾನ ಮಾಡಲಿಲ್ಲವೇನು ಕಾಂತಾ ? ಹೆಂಥೆಂಥವರಿಗೆ ಸಲಹಿದ ಭಗವಂತ ನಮಗಾದರು ಮರೆಲಾರನು ಕಾಂತಾ. ಆ ಶಿವನ ನಾಮ ಸ್ತೋತ್ರ ನಿಮ್ಮ ಪ್ರಾಣಲಿಂಗವೆಂದು ತಿಳಿರಿ. ಮುಂದಕ್ಕೆ ನಡೆಯಿರಿ.

ಬಡವ : ಅಹುದು ! ಸತಿಯಳೇ ನೀನಾಡುವ ಮಾತು ನನ್ನ ಹೃದಯ ಕಮಲದಲ್ಲಿ ನಡತಿರುವವು ಕಾಂತೆ. ಮಾಡಲೇನು ನಡೆದೇನಂದರೆ ತ್ರಾಣವಿಲ್ಲದಂತೆ ಆಗಿದೆ.

ಅರಬರು :

ಹೋದಳಂತೆ ಕೈಯಾಗ ಸಿಕ್ಕಂತ ನಾರಿ
ಛಪ್ಪನ್ನ ದೇಶವ ತಿರಗಿ ಗಪ್ಪನೆ ತಪಾಸ ಮಾಡಿ
ಝಪ್ಪನೆ ಹಿಡದ ಅವಳ ತುರಬಾ ಅಗ್ಗದವಳಿಗೆ
ಗೊತ್ತಯಿಲ್ಲ ಅರಬರ ಜರಬಾ ಹೋದ ॥1 ॥

ತಕ್ಕೊಂಡ ಪಾಗದ ಕುದರಿ ಮ್ಯಾಗ ಆಗುನಾ
ಸ್ವರಿ ಥಟ್ಟನೆ ಹಾಯಾಕ ಥಡಿ ಅಡವಿ
ಯಲ್ಲಿ ಕುಂತಾಳ ನಡಿಯೋ ನಾರಿ
ಸಿಕ್ಕ ಮುಕ್ಕಾ ತೆಕ್ಕಿ ಒಳಗ ಪಿಡಿ ॥2 ॥

ಅವಳ ಗಂಡನ ಶಿರ ಕಡದು ಮಾಡುವೆ ಚೂರ
ಅಲ್ಲಿಂದ ನಾರಿಯ ಮನಸ್ಸು ಗಂಡನ ಮೇಲಿಂದ
ಪ್ರೀತಿ ಹೋಗದು ದ್ಯಾಸ ನಮ್ಮ ಕಾರ್ಯ
ಕೈಗೂಡಿ ಬರುವದು ಲೇಸಾ ॥3 ॥

ದೊಡ್ಡ ಅರಬ : ಹೇ ! ತಮ್ಮಾ, ಸಾಹುಕಾರನ ಮನೆಯಲ್ಲಿ ರತ್ನಿ ಸುಳವೆ ಇಲ್ಲಾ. ನಾವು ಸುಮ್ಮನಿದ್ದರೆ ಫಲವಿಲ್ಲ. ಹೋದಂತೆ ಕಾಣುವಳು. ನಡೆ ಬೇಗನೆ ಎಲ್ಲಿ ಹೋಗಿರುವಳು ತಪಾಸು ಮಾಡಿ ಅವಳ ತುರಬನ್ನು ಹಿಡಿದು ದರದರನೆ ಎಳೆದು ತರೋಣ ನಡೆ ತಮ್ಮಾ.

ಸಣ್ಣ ಅರಬ :  ಹೌದು ! ಅಣ್ಣಾ ಆ ಅಗ್ಗದವಳಿಗೆ ಅರಬರೆಂಬ ಜರಬ ಗುರ್ತಿಲ್ಲ. ಬೇಗನೆ ಹೋಗಿ ಅವಳ ಮಾನಹಾನಿ ಮಾಡಿ ಬರೋಣ ನಡೆವಂತವನಾಗಣ್ಣ.

ದೊಡ್ಡ ಅರಬ : ಹೇ ! ತಮ್ಮಾ ಪಾಗದೊಳಗಿನ ಕುದರಿಯನ್ನು ತಗೆವಂತವನಾಗು. ಥಡಿ ಹಚ್ಚಿ ಮೇಲೆ ಸವಾರಾಗಿ ಸಿಕ್ಕರೆ ಅವಳಿಗೆ ತೆಕ್ಕಿಲಿ ಅಪ್ಪಿಕೊಂಡು ಒಪ್ಪಿಲಿಂದ ಬರೋಣ ನಡೆ ತಮ್ಮಾ. ಹೊಡಿ ಹೊಡಿ ಕುದರಿಯನ್ನು ನೋಡು ತಮ್ಮಾ ನಾಲ್ಕು ದಿಕ್ಕ ಶೋಧ ಮಾಡಿ ಎಲ್ಯ್‌ದರೂ ಕಾಣುತ್ತಿರುವಳು ಏನು ನೋಡು.

[ಹೋಗುವರು]

ರತ್ನಾಬಾಯಿ : ಕಾಂತಾ, ಏನೋ ಹಿಂದೆ ಸಪ್ಪಳ ಬರುತ್ತಿರುವದಲ್ಲಾ. ಕೆಟ್ಟ ಜಾತಿಯ ಅರಬರು ಬಂದ್ರೋಯೇನೋ ? ಇಲ್ಲಿ ನೀವು ಸ್ವಲ್ಪ ಕಂಟಿಮರಿಗೆ ಕೂಡುವಂತವರಾಗಿರಿ.

[ಕೂಡುವನು]

ದೊಡ್ಡ ಅರಬ : ಹೇ ! ತಮ್ಮಾ ತಡ ಮಾಡದೆ ಬೇಗನೆ ಕುದರೆ ಹೊಡೆವಂತವನಾಗು. ಅಕೋ ನೋಡು ಅಲ್ಲಿ ಕಾಣುತ್ತಿರುವಳು. ಏ…… ಚಾಂಡಾಲಿ ಎಲ್ಲಿಗೆ ಹೋಗುತ್ತಿರುವಿ, ನಿಲ್ಲು ನಿಲ್ಲು.

ಅರಬರು :

ಸಿಕ್ಕೆ ನಾರಿ ಸಿಕ್ಕೆ ನಿಂದೆಷ್ಟ ರಮಣಿ
ಅಕಟ ನಮ್ಮ ಧಾಕಾ ದರಕಾರ ಇಲ್ಲದೆ
ಬಂದು ಮುರಕಾ ಮಾಡತಿ ಭಾಳಾ
ಏನ ಪ್ಯಾರಿ ಕುಬಸಾ ತಿರವಿದಿ ಎಡಕಿನ ತೋಳ ॥1 ॥

ನೀ ಏನ ಬೆಳದಾಂಗ ಬೆಳದಿದಿ ಮುಂಗಾರಿ ಜೋಳಾ
ನಿರ್ತಾ ಬೇತಲ ನಿಂದು ಗುರ್ತ ಇಟ್ಟ ನಾವು
ಮರತು ಮನಿಮಾರ ಸುದ್ದಿ ನಿಸ್ಸಂಗ ಮಾಡ ಬಂಗಾರ
ಮುದ್ದಿ ನೀ ಬಾರದಿರಕ ಜುಲಮಿಲಿ ಒತೇವು ಕಟ್ಟಿ ॥2 ॥

ದೊಡ್ಡ ಅರಬ : ಎಲೇ ! ನಾರಿಯೇ ಸಿಕ್ಕೆಲ್ಲಾ ಸಿಕ್ಕೆಲ್ಲಾ, ನಮ್ಮ ಕೈವಳಗಿಂದ ಪಾರಾಗಿ ಎಲ್ಲಿಗೆ ಹೋಗುತ್ತಿರುವಿ ? ನಿನ್ನ ಸೆರಗು ಹಿಡಿದು ದರದರನೆ ಎಳೆಯುವೆವು. ಬೇಗನೆ ನಮ್ಮ ಸ್ವಾಧೀನವಾಗು. ಆಗದಿದ್ದರೆ ನಿನ್ನ ಮರ್ಯಾದೆ ಹೋದೀತು ಜೋಕೆ.

ಸಣ್ಣ ಅರಬ :  ಹೇ ! ಅಣ್ಣಾ, ಇವಳನ್ನು ಬಿಡಬೇಡ, ಬಾಲೆ ಸಿಕ್ಕಿರುವಳು ಜಾಡನ ಬಲಿಯಲ್ಲಿ. ಇವಳ ಖೋಡಿಕಿ ಎನ್ನು ಮುರಿದು ನಮ್ಮ ಮಂದಿರಕ್ಕೆ ವೈಯುನ, ಇವಳ ಕೈಕಾಲುಗಳನ್ನು ಬಿಗಿದು ಕಟ್ಟಿ, ಎತ್ತಿ ಕುದರಿಯ ಮೇಲೆ ಒಗಿದು ನಮ್ಮ ಮಂದಿರಕ್ಕೆ ವೈಯಾನು ನಡಿ ಅಣ್ಣಾ.

ದೊಡ್ಡ ಅರಬ : ಹೇ ! ಮೂರ್ಖಳೆ, ಹರಕ ಸೀರಿಯನ್ನುಟ್ಟು, ನಿನ್ನ ಮುರಕವೆಷ್ಟು ದಿಟ್ಟತನದಿಂದ ಮಾತನಾಡುವಿಯಾ ಬಿಟ್ಟ ಹೋಗುವರೆಂದು ತಿಳಿದಿಯಾಯೇನು ? ಝಟ್ಟನೆ ನಮ್ಮನ್ನು ಒಡಗೂಡಿದರೆ ನೆಟ್ಟಗೆ. ಇಲ್ಲವಾದರೆ ನೋಡು.

[ಸೆರಗ ಹಿಡಿಯುವನು]

ರತ್ನಾಬಾಯಿ :

ಸಾಕರೆಪ್ಪ ಯಾಕಿಷ್ಟು ಅಹಂಕಾರ ಪೊಡುವಿಯೊಳಗೆ
ಯಾರು ಬಡವರು ಇರಬಾರದೇನೋ ಹಮ್ಮದಿಂದಲಿ
ಸಾಯಿಲೆ ಶಂಕರ ಕಾಯಾವಾ ಬ್ಯಾರಿ
ಹೆಂಥ ವ್ಯಾಳಾ ತಂದೋ ಮುಕುಂದ ಹರಿ ॥1॥

ನನ್ನಂಥ ಮನಿಹೆಣ್ಣ ನಿಮಗೆ ಇಲ್ಲೇನೋ ಅಣ್ಣಾ
ಹಮ್ಮದಿಂದಲ್ಲೆ ಹರಿ ನೀವು ಒಮ್ಮಿಂದ ಒಮ್ಮೆ
ಬಂದಿರಿ ಕುದರಿಯೇರಿ ನಾ ಸಾಯಿಲೇನೋ
ಹಾರಿ ಯಾವ ಭಾವಿ ಕೇರಿ ॥2 ॥

ರಾವಣ ಮಾಡಿದ ಕರ್ತಾ ದೊರದಾಳೇನಪ್ಪ
ಸೀತಾ ಸೋತು ಆತನ ಸುರಿ
ದುರ್ಯೋಧನೆಗೆ ದ್ರೌಪದಿ ಆದಾಳ ವೈರಿ
ಹೆಚ್ಚಿನ ಗೋಳ ಯಮನರ ಶಿಕ್ಷವು ಬ್ಯಾರಿ ॥3 ॥

ಹೇ ! ಅಪ್ಪಯ್ಯಗಳಿರಾ, ಪರ ನಾರಿ ಮೇಲೆ ಬಲತ್ಕಾರ ಮಾಡುದು ಥರವಲ್ಲ, ದೂರನಿಂತ ಮಾತಾಡರಿ. ಈ ಪೊಡವಿಯೊಳಗೆ ಯಾರು ಬಡವರಿರಬಾರದೇನು ? ಶ್ರೀಮಂತರಿಗು ಅಷ್ಟೇ ಮರ್ಯಾದಿ, ಬಡವರಿಗೆ ಅಷ್ಟೇ ಮರ್ಯಾದಿ. ಮರ್ಯಾದಿಯಲ್ಲಿ ಭೇದಿಲ್ಲಾ. ನನ್ನಂಥವಳಿಗೆ ಮನಕರಗಿದರೆ ನಿಮಗೆ ಮಹಾದೇವ ಮೆಚ್ಚಲಾರನು. ತಿಳಿದು ನೋಡಿ ಮಾತನಾಡಿರಿ. ಅಣ್ಣಯ್ಯಗಳಿರಾ ಕೇವಲ ಬಡವರ ಮನೆಬಾಲಿ ನಾನು. ನಿಮ್ಮ ಅಕ್ಕ ತಂಗಿ ಸರಿಯಂದು ತಿಳಿರೆಪ್ಪ. ಅಣ್ಣಯ್ಯಗಳಿರಾ ಕಾಡಬೇಡಿರಿ.

ಸಣ್ಣ ಅರಬ :  ಏನೇ ! ರತ್ನಿ ವ್ಯರ್ಥ ಮಾತನಾಡಿ ವೇಳೆಗಳಿಯಬೇಡಾ. ಬೇಗನೆ ನಮ್ಮನ್ನು ಒಡಗೂಡವಂಥವಳಾಗು. ಮೂರ್ಖಳೆ, ವ್ಯರ್ಥ ಬೊಗಳಿ ಫಲವಿಲ್ಲ ನಾರಿ, ವೈಯಾರಿ.

ರತ್ನಾಬಾಯಿ : ಏನರೆಪ್ಪ, ಅಣ್ಣಯ್ಯಗಳಿರಾ ನಾನು ಎಷ್ಟು ಪರಿ ಪರಿಯಿಂದ ಹೇಳಿದರೂ ನಿಮಗೆ ಕರುಣ ಬಾರದೆ ? ಅಯ್ಯಯ್ಯೋ ಶಿವ ಶಿವಾ ಇನ್ನೇನು ಗತಿ ಮಾಡಲಿ ? ಹೇ ಅಣ್ಣಯ್ಯಗಳಿರಾ, ಹೆಣ್ಣಿನ ಮೇಲೆ ಕಣ್ಣಿಟ್ಟು ಕುನ್ನಿ ರಾವಣನು ಮಣ್ಣುಗೂಡಿದರು. ಸೀತಾ ಮಾತೆ ದೊರೆದಾಳೇನು ? ತಿಳಿದು ನೋಡಿರೆಪ್ಪ ಪರನಾರಿಯರ ಸಂಗವಳಿತಲ್ಲಾ. ಪರನಾರಿಯ ಸಂಗ ಬೆಂಕಿ ಇದ್ದಾಂಗ ತಿಳಿರೆಪ್ಪ ಅಣ್ಣಯ್ಯಗಳಿರಯ್ಯ.

ಅರಬರು :

ಕಾಂತಾಗ ಯಾರ ಹಂತಿಲ್ಲೆ ಇಟ್ಟಿದೆ ಮುಚ್ಚಿ
ಬಂದು ನಮಗೆ ಆತ ಶರಣಾಗತ ಆದರೆ ಕರುಣಾ
ಹೆಚ್ಚಿ ಬಿಡತೇವ ಸುಳ್ಳ ಅಲ್ಲಯೇನ ಘಚ್ಚಿ
ಕಮಲಾದಲ್ಲಿ ಕರುಣಾಬಾರದೊ ನಾಚಿ ॥1 ॥

ನಿನ್ನ ಪುಣ್ಯದ ಧರ್ಮ ನಮಗ ತಟ್ಟಲಿಯೊಮ್ಮ
ಕರ್ಮಯಂಬೊ ಕಾರ್ಯಕ ಖೋಚಿ ಪಾಪ
ಸೊಕ್ಕಿ ಅರಬರ ರೂಪಕ್ಕೆ ಮೆಚ್ಚಿ
ಸಾವುದದೋ ಸರ್ಪ ಒಮ್ಮೆ ಕಚ್ಚಿ ॥2 ॥

ಬಿಡತೆವು ನಾವು ನಿನ್ನ ಸೆರಗ ಕುಡತೇವು
ನಿನ್ನ ಗಂಡಗ ಕರ್ಮ ಎಂಬೋ ಕಾರ್ಯದ
ಒಗದೇವು ಹಸಿ ಗಿಡಕ ಹೊಡದಂಗ ಬಾಚಿ
ಆಣಿ ತಕೋ ಅಂಜಲಾರದೆ ಹುಚ್ಚಿ ಕಾಂತಾಗ ಯಾರ ॥3 ॥