ದೊಡ್ಡ ಅರಬ : ಅದೇನು ಇರುವದು ? ಬೇಗನೆ ಹೇಳು.

ಮಾಳವ್ವ : ಕೇಳರಿ ತಮ್ಮಾ, ರಾಮನ ಹೆಂಡತಿಯಾದ ಸೀತೆಯ ಮೇಲೆ ಮನಸ್ಸು ಇಟ್ಟು ರಾವಣ ತನ್ನ ಲಂಕಾ ಪಟ್ಟಣವನ್ನು ಸುಟ್ಟುಕೊಂಡ. ಅಲ್ಲದೆ ಆರು ಕೋಟಿ ವರ್ಷ ಆಯುಷ್ಯ ಇದ್ದು, ಅರ್ಧ ಕೋಟಿ ವರ್ಷ ಸಹ ಇರಲಿಲ್ಲ ಮಣ್ಣಿಗಿ ಹೋದ. ಮತ್ತೂ ಆ ಭಸ್ಮಾಸುರನು ಪರಮೇಶ್ವರನ ಪತ್ನಿ ಪಾರ್ವತಿ ಮೇಲೆ ಮನಸ್ಸು ಮಾಡಿ, ಆಕಿ ಹೇಳಿದಂತೆ ಕುಣಿ ಕುಣಿದು, ದಣಿದು ತನ್ನ ಹಸ್ತ ತನ್ನ ತಲೆಯ ಮೇಲೆ ಇಟ್ಟಕೊಂಡು ಭಸ್ಮಾ ಆಗಿ ಹೋಗಲಿಲ್ಲವೇ ? ಬ್ಯಾಡರಪ್ಪ ಹಿಂತ ಕೆಲಸವೇ ಬ್ಯಾಡರಿ. ನಮ್ಮ ಮಾತು ಕೇಳಿರಿ.

ಸಣ್ಣರಬ : ಏನೇ….. ಮಾಳವ್ವಾಯಿ. ಇಲ್ಲದೊಂದು ನೆವನ ಹೇಳಬ್ಯಾಡ. ಬೇಗನೆ ಹೋಗಿ ಬರುವಂಥವಳಾಗು.

ಮಾಳವ್ವ : ತಮ್ಮಾ, ಇನ್ನಾದರೂ ಹೇಳುವೆನು ಕೇಳಿರಿ. ನಿಮಗ ಹಿಂದಿನ ಕತಿ ಖೂನ ಇಲ್ಲಾ. ಶುಂಭ ನಿಶುಭಂ ಎಂಬ ದೈತ್ಯರು ದೇವಿಗೆ ಮನಸೋತು ಅವಳ ಸಂಗಡ ಯುದ್ಧಮಾಡಿ ಶಿರವನ್ನು ಹರಿದುಕೊಂಡರು. ನರಕಾಸುರ ದೈತ್ಯನು ಚಿರಕಿ ಘಾಣದಲ್ಲಿ ಸಿಕ್ಕಿ ಚೀರಿ ಚೀರಿ ಸಾಯಲಿಲ್ಲವೇನರಪ್ಪ ?

ಸಣ್ಣ ಅರಬ :  ಏನು ಮಾಳವ್ವ, ಹಿಂಥ ಗೊಳ್ಳ ಪುರಾಣವು ಸಾಕು ಮಾಡು. ಈ ಕೋಕಶಾಸ್ತ್ರ ನಾವೆಲ್ಲಾ ಬಲ್ಲೆವು.

ಮಾಳವ್ವ : ಇನ್ನಾದರೂ ಕೇಳರೆಪ್ಪ, ಗೌತಮ ಮುನಿ ಶಾಪಕ್ಕಾಗಿ ಇಂದ್ರನ ಮೈ ಯೋನಿ ಆಗಲಿಲ್ಲವೇನು? ಚಂದ್ರನು ಛಾಯಾರೋಗದಿಂದ ಕಪ್ಪ ಆದನು. ಇದು ಅಲ್ಲದೆ ದ್ವಾಪಾರದಲ್ಲಿ ಕೀಚಕನು ದ್ರೌಪದಿಯ ಮೇಲೆ ಮನಸ್ಸು ಇಟ್ಟದ್ದಕ್ಕಾಗಿ ಭೀಮನು ಸೀಳಿ ಒಗಿಯಲಿಲ್ಲವೇನು ? ಅಪ್ಪಾ ಹೆಣ್ಣು ಅಂಬುದು ಕೆಟ್ಟ ಹುಣ್ಣು ಇದ್ದಂತೆ. ನಮ್ಮ ಮಾತು ಕೇಳಿರಿ.

ಸಣ್ಣ ಅರಬ :  ಏನೇ ಮಾಳವ್ವಾಯಿ, ಗೊಡ್ಡು ಗರಾನಿಯಲ್ಲಾ ಬಿಟ್ಟು ಬಿಡು. ನೀ ಜರಾ ಅವಳನ್ನು ತಂದು ಕೊಡದಿದ್ದರೆ ನಾವು ಇಲ್ಲೆ, ನಿನ್ನ ಪಾದದ ಮೇಲೆ ಬಿದ್ದು ಪ್ರಾಣ ಕಳಿದುಕೊಳ್ಳುವೆವು.

ಮಾಳವ್ವ : ನಿಂದಿರಿ….. ನಿಂದ್ರಿ……. ಹಾಂಗೇನು ಮಾಡಬೇಡ್ರಿ ತಮ್ಮಾ ನಿರವಾ ಇಲ್ಲಾ. ಹೋಗದ್ದು ಹೋಗಿ ಬರುತ್ತೇನು. ನನ್ನ ಕೈ ಗುಣ ನಿಮ್ಮ ಹಣಿಯ ಬರಹ.

[ಹೋಗುವಳು]

ಏ…… ರತ್ನಾಬಾಯಿ…… ಏ….. ರತ್ನಾಬಾಯಿ. ದೊಡ್ಡ ಮನಿಯಾಗ, ಮನಿಯಾಗೆ ಹಾಳೇ ಖೊಲ್ಯ್‌ಗ ಹಾಳೆ. ಏನು ಅಡಗಿ ಮನ್ಯಾಗ ಇರುತ್ತಾಳೋ ? ಎನು ಕೋಟಿಗ್ಯಾಗ ಇರುತ್ತಾಳೋ ಏನು….. ಮಾಳಗಿ ಮ್ಯಾಗ ? ಎಲ್ಲೋ ದೊಡ್ಡ ಮನಿ.ಏ…… ರತ್ನಾಬಾಯಿ……

ರತ್ನಾಬಾಯಿ : ಯಾರಿರಬಹುದು ? ಮದರಾಬಿಯಲ್ಲಿ ? ಹಕ್ಕಿ ಗುಬ್ಬಿ ಸುಳವಿಲ್ಲ. ದೊಡ್ಡ ಸ್ವರದಿಂದ ಯಾರು ಕರೆಯುತ್ತಿರುವರು ? ಬಾಗಿಲ ತೆರದು ನೋಡಬೇಕು. [ಹೊರಗೆ ಬರುವಳು]

ಯಾರಮ್ಮಾ ನೀನು ? ಹಿಂಥಾ ಅಡ ಹೊತ್ತಿನಲ್ಲಿ ಬಂದು ರತ್ನಾಬಾಯಿ ಎಂಬ ಸ್ವರದಿಂದ ಒದರುತಿರುವಿ ?

ಮಾಳವ್ವ : ಏ, ತಂಗಿ ನನಗ ಖೂನಾ ಹಿಡಿದಿಲ್ಲ. ಬಾಳಾ ನಾ ಹೂಗಾರ ಮಾಳವ್ವ ಇದ್ದೀನವ್ವಾ.

ರತ್ನಾಬಾಯಿ : ಯಾಕಮ್ಮ ಯಾಕ ? ಇಷ್ಟು ಹೊತ್ತಿನಾಗ ಬಂದ ಕಾರಣವೇನು ?

ಮಾಳವ್ವ : ನನಗಂದಾ ತಂಗಿ, ಏನ ಕೇಳತೇನ್ವಾ ನನ್ನ ಹೈರಾಣ. ಊರಾನ ಗಿರಣಿ ಪಂಪ ಸಡಲ ಆಗ್ಯಾದಂತ. ಬಂದು ಬಿದ್ದಾದಂತ. ನನ್ನ ಹಾಟ್ಯಾದು, ಮನ್ಯಾಗ ಹಿಟ್ಟಿಲ್ಲ. ಬೀಸುಕಲ್ಲ ಸೈತ ಇಲ್ಲಾ. ಆದಕ ಅದ್ದನ ಜ್ವಾಳ ತೊಗೊಂಡ ನಿನ್ನ ಮನಿಗಿ ಬಂದಿನಿ. ಯಾಕ್ಕಾ ಜರಾ ಬೀಸಾಕ ಹಿಡಿತ್ಯಾ ತಂಗಿ.

ರತ್ನಾಬಾಯಿ : ಏ…… ಏ…… ಏ…… ಯೇ……. ಪಾಪ ಮುದುಕಿ ಮನುಷ್ಯಳು. ಪಾಪ ತಾಯಿ ಸ್ವರೂಪ. ಹಿಡಿತೀನಿ ಬಾರಾಯಿ. ಇನ್ನ ಬಂದ ಸೊಲಗಿ ಆವಾ. [ಕೂಡುವರು]

ಮಾಳವ್ವ :

ದೇಶಕ ಹೋದರ ಬೀಸುದು ತಪ್ಪಲಿಲ್ಲಾ
ಬೀಸುನಾ ಬಾ ತಂಗಿ ಪದಾ ಹಾಡಿ
ಪದ ಹಾಡಿ ನಾವು ಇಬ್ಬರು ಕೂಡಿ
ಮಾನ ಎಂಬ ಮರದಾಗ ಖೂನ ಎಂಬ ಜ್ವಾಳ
ಕೇರಿ ಹೀನ ಎಂಬ ತವಡ ಬೀಸಾಡಿ ॥1 ॥

ಚೌಕಾಶಿ ಎಂಬ ಚಾಳಣಿ ತರಸಿ
ಅವಕಾಶ ಎಂಬ ಹಿಟ್ಟವ ಸೋಸಿ
ಸಾವಕಾಶ ತೆಗೆದು ಇಡು ನೀ ನೋಡಿ
ತಾಜಾ ರೊಟ್ಟಿ ತೇಜ ಮಾಡಿ ಮೋಜಿಲಿಂದ ಮೊದಲ ಉಂಡು
ಗಂಡನ ಖರೆ ಆಗ ಬಣ್ಣದ ಮಾತಾಡಿ ॥2 ॥

ಚಿಂತಿಯೆಂಬ ಕಾಂತಾಗ ಹೇಳಿ
ಭ್ರಾಂತಿ ಎಂಬೊ ಸಂತ್ಯಾಗ ಹಚ್ಚಿ
ಮೂರುದಿನ ಮರೆಯಬೇಕು ಬಾಜಾರ ಮಾಡಿ
ಬೇಜಾರ ಇಲ್ಲದೆ ಖೋಡಿ ಮುತ್ತಿನಂತಾ ಮೈಂದರ್ಗಿ ಊರಾ
ಸತ್ಯಯುಳ್ಳ ಸ್ವಾಮಿ ಗೈಬಿ ಫೀರನ ಪಾದದಲ್ಲಿ ಭಕ್ತಿಪೂರಾ ॥3 ॥

ಅಮ್ಮಾ ! ರತ್ನಾಬಾಯಿ ದೇಶ ಬಿಟ್ಟು ಪರದೇಶಕ್ಕೆ ಹೋದರೆ ಬೀಸುವದು ಬಿಡಲಾರದು. ಹೇಸಿ ಹೆಣ್ಣಿನ ಜನಕ್ಕೆ ಹುಟ್ಟಲಾರದಂತೆ ನೋಡಮ್ಮಾ.

ರತ್ನಾಬಾಯಿ : ಹೌದಮ್ಮಾ.

ಮಾಳವ್ವ : ಅಮ್ಮಾ ಮನಯೆಂಬ ಮರದಲ್ಲಿ ಖೂನ ಎಂಬ ಧ್ಯಾನ ಖೇರಿ ಹೀನ ಅಂಬುವ ತೌಡ ಬೀಸ್ಯಾಡಿ ಒಗಿಯಬೇಕು ನೋಡಮ್ಮಾ. ಇದು ಅಲ್ಲದೆ ಚೌಕಾಶಿ ಎಂಬು ಚ್ಯಾಳಣಿ ವಳಗೆ ಅವಕಾಶ ಎಂಬ ಹಿಟ್ಟ ಸೋಸಿ, ಸಾವಕಾಶ ತಗೆಯಬೇಕು ನೋಡಮ್ಮಾ. ಅರ್ಥ ಎಂಬ ಅಡಿಗೆ ಮಾಡಿ ಗುರುತು ಇಲ್ಲದೆ ಉಂಡು ಗಂಡಗ ಖರೇಯಾಗಬೇಕು ನೋಡಮ್ಮ.

ರತ್ನಾಬಾಯಿ : ಹಾಗಲಮ್ಮಾ ಮೊದಲು ಗಂಡಸರೂ ಉಣ್ಣಲಾರದೆ, ತಾನೆ ಉಂಡು ಕೂಡುವ್ರ ಹೆಣ್ಣ ಅದು ಹೆಣ್ಣಲ್ಲಮ್ಮಾ. ಭವರೋಗದ ಹುಣ್ಣು. ಗಂಡಸರ ಗಂಟಲಿಗೆ ಘಾಣಾ.

ಮಾಳವ್ವ : ಹಾಂಗಲ್ಲ ತಂಗಿ ನಿನಗೇನ ಗೊತ್ತ ? ತನ್ನ ಮನ ಬಂದಂತೆ ಮೆರದ್ಯಾಡಿ ಬೇಕಾದು ಉಂಡು, ತಿಂದು, ಉಟ್ಟು ತೊಟ್ಟು ಈ ಭವ ಎಂಬ ಬಾಜಾರದೊಳಗೆ ಮೆರದಾಡಿ ಹೋಗಬೇಕು ನೋಡ ತಂಗಿ.

ರತ್ನಾಬಾಯಿ : ಏನವ್ವಾ, ಹೀರೆ ಮನುಷ್ಯಾಳಾದ ನೀನು ಹರೆದವರ ಮುಂದ ಬಂದು ಬೀರಿ ನುಡಿಗಳ ಬೋಧಾ ಮಾಡಬಾರದು ನೋಡಮ್ಮಾ.

ಮಾಳವ್ವ : ಏನ ! ತಂಗಿ ಎಷ್ಟ ಪರಿ ಹೇಳಿದರೂ ನನ್ನ ಮಾತಿನ ಅರ್ಥ ಆಗವಲದಲ್ಲಾ ನಿನಗ. ಇರುಸ್ತನಕಾ ಛೋಲೊ ಕೆಟ್ಟ ಎರಡು ಸಮನಾಗಿ ಬಳಿಸಿ ಶ್ರೇಷ್ಠ ಕನಿಷ್ಠರಲ್ಲಿ ಕೀರ್ತಿ ಉಳಿಸಿ, ಗಂಡನಿಗೆ ಖರೆಯಾಗುವದೇ ಹೆಣ್ಣಿನ ಕರ್ತವ್ಯ.

ರತ್ನಾಬಾಯಿ : ನೀನು ಏನು ಮಾತನಾಡಿದೆಮ್ಮಾ ನಿನ್ನ ಮಾತಿನ ಅರ್ಥ ಆಗವಲ್ಲದಲ್ಲಾ. ದೊಡ್ಡವಳಾದ ನೀನು ನಮ್ಮಂಥವರಿಗೆ ಹಿಂಥ ಮಾಡನಾಡಬಾರದು ನೋಡಮ್ಮಾ. ಹೇಳುವೆನು ಕೇಳುವಂಆಕ್ಕಿಯಾಗು.

ಬೀಸದು ಬೀಸನು ನೀ ಬಂದ ಕಾರಣ
ಚಂದಾಗಿ ಹೇಳ ತಡಾ ಮಾಡಿಗಿಡಿ
ತಡ ಮಾಡಿಗಿಡಿ ಬಂದಿದಿ ಅವರಸ ಮಾಡಿ
ಮನಸ್ಸಿಗ ಇಟ್ಟರ ಜಾಣಿ ॥1 ॥

ನಿನಗ ಆಗ್ಯಾದ ನನ್ನ ಆಣಿ
ಹೆಸರಕಾಯಿ ಸೀಳಿದಂಗ ಹೇಳಜಾಣಿ
ನಾನಿನ್ನ ಸಣ್ಣಾಕಿ ನೀ ನನ್ನ ಹಡದ ಜನನಿ
ನಡ ಹೊಳಿಯಾಗ ಹೈಸಿದಂಗ ಸಂಗಡಿ ॥2 ॥

ಸಂಗಡಿ ಇಬ್ಬರ ಮನಸು ಕೂಡಿ
ರಾಮಶೆಟ್ಟಿ ಪುಣ್ಯಾದಿಂದ ನಮ್ಮದು
ನಿಮ್ಮದು ಖೂನ ಬಂತ ಎಣಿಸಿದವರ
ಪುಣ್ಯ ನಾವು ನಿತ್ಯ ಕೊಂಡಾಡಿ ॥3 ॥

ಏನಮ್ಮ ! ಬೀಸುವದು ಇರಲಿ. ನೀ ಬಂದ ಬಗಿ ಏನಿರುವದು ಹೇಳು. ಮಜ್ಜಿಗಿಗೆ ಬಂದು ಮಗಿ ಮುಚ್ಚಿ ಇಡಬೇಡಾ. ಮನಸ್ಸಿನಲ್ಲಿ ಇಟ್ಟುಕೊಂಡು ಹೋದರೆ ನನ್ನ ಆಣೆ ಆಗಿದೆ. ಹೆಸರಕಾಯಿ ಸೀಳಿದಂತೆ ಶಿಸ್ತಾಗಿ ಹೇಳಿ ಬಿಡು.

ಮಾಳವ್ವ : ಹೇಳತೀನಿ ಹೇಳತೀನಿ ಹೇಳತೀನವ್ವಾ ಹೇಳತೀನೀ ಹೇಳಲಿಕ್ಕೆ ಬಂದಿನಿ.

ರತ್ನಾಬಾಯಿ : ಮನಸ್ಸಿನಲ್ಲಿಟ್ಟುಕೊಂಡು, ಬಿಚ್ಚಿ ಹೇಳಬಾರದೆಂಬ ಆಶಾ ಇಡಬಾರದಮ್ಮಾ. ನಾ ನಿನ್ನ ಮಗಳ ಸರಿ. ನೀ ನನ್ನ ತಾಯಿ ಸರಿ. ಬಾಯಿ ಬಿಚ್ಚಿ ಹೇಳಿ ಬಿಡು ಅಮ್ಮಾ ತಾಯಿ. ರಾಮಶೆಟ್ಟಿ ಪುಣ್ಯದಿಂದ ನಮ್ಮ ನಿಮ್ಮ ಗುರುತು ಬಿತ್ತು. ಉಪ್ಪು ಉಂಡವರ ಮಾತು ನೆಪ್ಪಿಡುವದೆ ನಮ್ಮ ಕರ್ತವ್ಯ. ಅಲ್ಲದೆ ಬೇಗನೆ ನಿನ್ನ ಮನಸ್ಸಿನೊಳಗಿನ ಮಾತು ಹೇಳಿ ಬಿಡು ಅಮ್ಮಾ.

ಮಾಳವ್ವ : ಏ, ತಂಗಿ ಇಷ್ಟ ಯಾವಾಗ ಹೊಟ್ಟಿ ಹುಕ್ಕಿ ಹೇಳತಿ ಅಂದ ಬಳಿಕ ಹೇಳತೀನಿ ತೊಗೋರವ್ವಾ.

ಬಂದಂತಾ ಕಾರಣ ಹೇಳುವೇನೆ ಕೇಳ ರತ್ನಾ
ಎಷ್ಟು ನೋಡಲಿ ನಿನ್ನ ಬಡತನ
ಬಡತನ ಭಾವದಲ್ಲಿ ಹೀನ ನಿನ್ನ
ರೊಟ್ಟಿ ತುಪ್ಪಿನಾಗ ಬೀಳದು ಬಂತಾ ॥1 ॥

ಅರಬ ಎಂಬ ಜರಬವ ದೂರಾ
ದೂರತನಕಾ ಜಾಹೀರಾ ಕಂಡು
ಮೆಚ್ಚ್ಯಾರಾ ನಿನ್ನ ರೂಪವನ್ನ ಬೇಡು
ಡಾಗಿನಾ ನಾಲ್ಕು ಮಂದಿ ತೊತ್ತದೈರು ॥2 ॥

ಕೊಟ್ಟ ನಿನ್ನ ಕೈ ಕೆಳಗ ರೊಕ್ಕ
ರೂಪಾಯಿ ಎಣಸ ಕವಡಿ ಸಮಾನ
ಏಳ ಅಂತರ ಮೇಲ ಮಾಡಿ
ಸುತ್ತೇಲ ನೀಲಗನ್ನಡಿ ಅದರೋಳು ॥3 ॥

ಜೋಕ ಹೊಡಿಬೇಕು ರಮಣಾ
ಬೇಕ ರಮಣಾ ಯಾಕ ಅನುಮಾನ
ಬಡವ ಗಂಡದ ಬಲ್ಲಿ ಇದ್ದು ಅಡವಿ ಕೋಂಚ್ಯಾರಾಂಗ
ತಿರಗಿ ಕೂಲಿ ಮಾಡಿ ಸಾಯಿತ್ತಿದ್ದಿ ಬೇಗನಾ ॥4 ॥

ತಂಗಿ ನಾನು ಬಂದಂತಾ ಕಾರಣವೇನಂದರೆ, ನಿನ್ನ ಬಡತನದ ಬಾಧೆಯನ್ನು ನೋಡಿ ನನ್ನ ಹೊಟ್ಟಿಯಲ್ಲಿ ನುಚ್ಚು ಮಜ್ಜಗಿ ಕಲಿಸಿದಂತೆ ಆಗುವದು ನೋಡಮ್ಮಾ. ಬಡತನ ಎಂಬುದು ಹೀನ ಮಾನಗೇಡಿ ಇರುವದು ನೋಡಮ್ಮಾ. ನೀನು ಸುಖದಿಂದ ಕಾಲಹರಣ ಮಾಡಬೇಕಾದರೆ ನಾನು ಹೇಳಿದಂಗ ಮಾಡತ್ಯಾ ? ತಂಗಿ ನಿನ್ನ ರೊಟ್ಟಿ ತುಪ್ಪನಾಗ ಬಿತ್ತಂತ ತಿಳಿ.

ರತ್ನಾಬಾಯಿ : ಏ, ಖೋಡಿ ಅದು ಹ್ಯಾಂಗಮ್ಮ ರೊಟ್ಟಿ ತುಪ್ಪದಾಗ ಬೀಳುವ ಬಗಿ. ಹೇಗಿರುವದು ಬೇಗನೆ ಹೇಳಬಾರದಾ.

ಮಾಳವ್ವ : ಹೇಳ್ಯಾ ತಂಗಿ ಸಿಟ್ಟಿಗಿ ಬಂದಿಯವ್ವಾ ಮತ್ತ. ನೀ ಹೇಳಂದ್ರ ಹೇಳತ್ತೀನಿ ಈಗೊ ಕರಾರು.

ರತ್ನಾಬಾಯಿ : ಲಗು ಹೇಳವ್ವಾ ಹೇಳು.

ಮಾಳವ್ವ : ನೋಡ ತಂಗಿ, ಅರಬರೆಂಬ ಇಬ್ಬರು ಅಣ್ಣ ತಮ್ಮರು. ಅರಬ ಸ್ಥಾನದಿಂದ ನಮ್ಮ ಊರಿಗೆ ಬಂದಾರ. ಅವರದೇನು ರೂಪಾ ಅವರೆದೇನು ಬಣ್ಣ, ಅವರದೇನು ಲಾವಣ್ಯ. ಜೋಡಿಲೆ ಇಬ್ಬರು ನಿಂತರೆ ರಾಮ : ಲಕ್ಷ್ಮಣ ನಿಂತಾಂಗ ನೋಡು ತಂಗಿ.

ರತ್ನಾಬಾಯಿ : ಇದ್ದಿರಬಹುದಮ್ಮಾ ನನಗೇನು ಮಾಡಂದಿ ?

ಮಾಳವ್ವ : ಏ ! ತಂಗಿ ಇನ್ನೂ ತಿಳಿದಿಲ್ಲ ನಿನಗ. ನೋಡು ನಾ ಹೇಳಿದಾಂಗ ಕೇಳಿದಿ ಅಂದ್ರ ನಿನ್ನ ಕೆಲಸ ಪಕ್ಕಡೆ ಆಯಿತು. ಡಾಗ ಬೇಡು, ಡಾಗಿಣ ಬೇಡು, ವಸ್ತು ಬೇಡು, ಒಡವಿಬೇಡು, ಬೇಕಾದರೆ ಕೈ ಕೆಳಗ ನಾಲ್ಕು ತೊತ್ತದೆರ ಬೇಡು. ರೊಕ್ಕಂತು ಕಿಮ್ಮತ್ತಿಲ್ಲ ಚಲ್ಲಾಡತ್ತಾರ ನೋಡ ತಂಗಿ.

ರತ್ನಾಬಾಯಿ : ಏನ ! ಮುದಿಸೂಳಿ ಮುದಿ ವಿಚಾರ ಹಿಡಿತೆನ ನಿನಗ. ಸ್ವಲ್ಪನ ಬುದ್ಧಿಯಿಂದ ಬಾಯಿ ಬಿಗಿ ಹಿಡಿದ ಮಾತಾಡು. ನಿನ್ನ ದವಡಿ ಹಲ್ಲ ಸಡಲ ಆದಾವು ಮುದಿರಂಡೆ.

ಮಾಳವ್ವ : ಏ….. ಏ…… ಏ……. ಎಷ್ಟು ಬಾಯಿಲೆ ಉದರ ಇದ್ದಿಯೇ ತಂಗಿ. ಏಸು ಬೈದಿ, ಒಮ್ಮೆ ನಿನ್ನ ಹಿತಕ ಹೇಳಿದೆನವ್ವ. ಸ್ವಲ್ಪ ಹೇಳುತಾನೆ ಅರೆಕೇಳು.

ರತ್ನಾಬಾಯಿ : ಒಳ್ಳೇದು ಏನ ಹೇಳುದೆಲ್ಲಾ ಹೇಳಿ ಬಿಡು ಮುದವಿ.

[ಹಿಂದಕ್ಕೆ ಸರಿಯುವಳು]

ಮಾಳವ್ವ : ತಂಗಿ ಇಲ್ಲಿ ಬಾ. ಅವರ ಮನಿ ಮಾತು ನೋಡಬಿಟ್ರ, ರಾಜ ವಾಡಿ ನೋಡಿದಂಗ ತಂಗಿ. ಏಳ ಅಂತರ ಮಾಡಿ ಏನು ? ಮನಿಮುಂದ ಮೋಟಾರಗಳ ಯೇಸು, ಗುಮಾಸ್ತಿಗಳು ಯೇಸು ಮಂದಿ, ಆನಿ ಕುದರಿ…..

[ರತ್ನಾಬಾಯಿ ಕೈ ಹಿಡಿಯುವಳು]

ರತ್ನಾಬಾಯಿ : ಏನೇ ! ಏ ಮುದಿಸೂಳಿ, ತನಗಲ್ಲದವರ ಮನೆತನ ಬೆಲ್ಲದಕ್ಕಿಂತ ಸವಿ ಮಾಡಿ ಹೇಳಿದರೂ, ಅ ಮಾತಿಗೆ ನಾನು ಒಪ್ಪುವಳಲ್ಲ. ನನಗೇನು ಬಸವಿ ಅಂದ ತಿಳಿದೀಯೇನೇ ಮುದರಂಡಿ.

ಮಾಳವ್ವ : ಅಲ್ಲ ತಂಗಿ, ನಿಂದ ಕಲ್ಯಾಣ ಆಗಲೆಂತ ಹದಿನಾರು ಹಲ್ಲು ಕಿಸಿದು ಹೇಳಿದರೂ ಕರುಣ ಬರುವಲ್ಲದು. ಹಿಂತಾ ಕೇರಿ ಹರಕನ ಮನ್ಯಾಗ ಹರಕ ಛಪ್ಪರ ಸೌತ ಇಲ್ಲಾ. ಹಂತದಕ ನೀ ಅಂತ ನೆಂಬಿದಿ. ನನ್ನಂತಾಕಿ ಆದರ ನಡು ಮದ್ಯಾನ್ನದಾನ ಅರಬರ ಬೆನ್ನಹತ್ತಿ ಹೋಗುತ್ತಿದ್ದೆ.

ರತ್ನಾಬಾಯಿ :

ಆಡಿದಿ ಹೆಂಥಾ ನುಡಿ
ಬೆಅಬ್ರು ಬೆಶರಮ ಲವಡಿ
ಬಡಸೆನ ದವಡಿ ದವಡಿ ಹೈವಾನ !
ಹೈವಾನ ತಿಳಿಗೇಡಿ ಸ್ವಾನ
ಓಣ್ಯಾಗ ಬುದ್ಧಿ ಮಾತು ಹೇಳಿಲ್ಲೇನ
ನಿನಗ ಯಾರು ಮಾಡಿಲ್ಲೇನ ಹೈವಾನ ॥1 ॥
ಹಾದರ ಎಂಬುದ ಖೊಟ್ಟಿ
ಹೀನ ಜನ್ಮಕ್ಕ ಹುಟ್ಟಿ ಕರ್ಮದ
ಮಟ್ಟ ಹೊರಿಸುಂವಾ ಭಗವಾನ !
ಭಗವಾನ ಬೆಂಕಿ ರೂಪದಾಂವ
ಆತನ ಪಾದ ಪೂಜೆ ಮಾಡಿ

ಶಿವ ಎಂಬ ಶಬ್ದ ನುಡಿ ॥2 ॥
ಭಕ್ತಿಯಿಟ್ಟು ನಡಿಬೇಕು ಕಡಿತಾನ
ಕೇಳದ ಕೇಳದಿ ಹೋಗವ್ವಾ ಬಹಳ ದಣದಿ
ಹೈವಾನ ತಿಳಿಗೇಡಿ ಸ್ವಾನ……
ನರಕ ತಿನ್ನು ಜಾತಿ ನಿಂದು ಅರಕಿನ
ಆಣಿ ಹಾಕಿದರೇನಿ ತರಕ
ಹಿಡಿದು ನಡಿ ರಾಚೂ ಮಾರುತಿ ಖೂನಾ ॥3 ॥

ಎಲೇ ಏ ಖಬರಗೇಡಿ ಸ್ವಲ್ಪ ಅಬರೂ ನಾಚಕಿ ಇಲ್ಲೇನ ನಿನಗ. ಬುದ್ಧಿವಂತರ ಮನೆ ಹೆಣ್ಣ ಮಕ್ಕಳ ಮನ ಕೆಡಿಸಿ, ಅವರಿಗೆ ಮನ ಬಂದಂತೆ ಹೇಳಿ, ಅವರ ಒಗತಾನ ಹರಿಸಬೇಕೆನ್ನುವಿ ಏನೇ ಏ ಮುದಿರಂಡಿ? ಇದು ಒಮ್ಮ ಅನ್ನುವದು ಅಂದಿದಿ. ಇನ್ನೊಮ್ಮೆ ಅಂದ್ರ ನಿನ್ನ ನಾಲಿಗೆ ಕಿತ್ತಿಸೇನು. ಬಡವನೆ ಇರಲಿ, ಬಲ್ಲಿದನೆ ಇರಲಿ, ನನ್ನ ಬಡು ಗಂಡನ ಪಾದವೇ ಪವಿತ್ರ. ನಿಮ್ಮಂಥ ಮುದಿರಂಡೆರ ಮಾತು ಕೇಳಿದರೆ, ಭಂಡಾಟಕ್ಕೆ ಈಡಾಗುವದು. ನನ್ನ ಪತಿನ ಬಿಟ್ಟ ಪರ ಗಂಡಸರ ನೋಡಿದರೆ, ರವ ರವ ನರಕ ತಪ್ಪಲಾರದು. ಈ ಮಾತು ಮತ್ಯಾರ ಮುಂದಾದರು ಹೇಳಿ ! ಮೊದಲು ಇಲ್ಲಿಂದ ನಡಿ ರಂಡಿ, ಭಂಡ ರಂಡಿ.

[ಬಡಿಯುವಳು]

ಮಾಳವ್ವ : ಬಡಿಬ್ಯಾಡ, ಬಡಿಬ್ಯಾಡ ತಂಗಿ ತಪ್ಪಾಯಿತವ್ವಾ. ಇನ್ನೊಮ್ಮೆ ನಿನ್ನ ಮನಿಗೆ ಬರುವದಿಲ್ಲವ್ವ.

ರತ್ನಾಬಾಯಿ : ಎಲೇ ! ಮುದಕಿ, ಹಿಂಥಾ ಹೇಸಿ ಕೆಲಸ ಯಾರು ಮಾಡತ್ತಾರ ಗುರತಾಯಿತಿಲ್ಲ ನಿನಗ. ಡೊಂಬ, ದಾಸರೂ, ವೇಶಾಂಗಿನಿಯರೂ ತಮ್ಮ ಮನೆ ಹೆಣ್ಣು ಮಕ್ಕಳನ್ನು ದೇವರ ಹೆಸರಿನ ಮೇಲೆ ಬಿಟ್ಟವರೆ ಆ ಕೆಲಸ ಮಾಡುವರು. ಇರಲಿ ಇದೊಮ್ಮೆ ಕೇಳದ್ದು ಕೇಳಿದಿ. ಇನ್ನೊಮ್ಮೆ ಕೇಳಿದರೆ ನಿನ್ನ ಚರ್ಮ ಸುಲಿಸೇನು ನೆನಪಿರಲಿ.

[ಬಡಿದು ಕಳಿಸುವಳು]

ಮಾಳವ್ವ :

ನಿಮ್ಮ ಮಾತು ಕೇಳಿ ಸುಳ್ಳೆ ಹೋದಯಲೋ
ಬೆಂಕಿ ಹಚ್ಚಲಿ ಮೊದಲೆ ನಾನು ಹೇಳಿದೆನಲ್ಲಾ
ನಿಮ್ಮಗೇನ ತಿಳಿಲಿಲ್ಲಾ ನಾನು ಹೆಂಥ ಅಗದ
ಲವಡಿ ಹಿಗ್ಗಿನಿಂದೆ ಹೋದೆನೋ ಓಡಿ ॥1 ॥

ಬೆಂಕಿ ಹಚ್ಚಲಿ ಗಂಡುಳ್ಳ ಬಾಲ್ಯಾರ ಕೆಣಕಿ
ಲತ್ತಿ ತಿಂದು ಬಂದೆನು ಟಿನಕಿ
ಸೀರಿ ಕುಬಸಿನ ಆಸಿ ಮಾಡಿ
ಮುಪ್ಪಿನ ಕಾಲಕ್ಕೆ ಆದೇನು ಲವಡಿ ॥2 ॥

ನನ್ನ ಮಾತ ಕೇಳರಿ ತಮ್ಮಾ
ಮಾನದಿಂದ ಕುಂದರಿ ಸುಮ್ಮನಾ
ಕೆಣಕಿದಾರ ತೆಲಿಯಾನ ದಿಮ್ಮ
ಒಣಕಿ ಏಟು ಬೀಳುತಾವ ಧಮ್ಮಾ ॥3 ॥

ಎ ! ತಮ್ಮಗೋಳ್ರ್ಯಾ ಇಲ್ಲಿ ಬರ್ರ‌್ಯೋಯಪ್ಪ. [ಅಳುವಳು] ನಿಮ್ಮ ಸೀರಿ ಮಾರಿಗೆ ನಿಮ್ಮ ಮಾರಿಗಿ ಬೆಂಕಿ ಹಚ್ಚಲಿ. ಯವ್ವಾ ನನ್ನ ಮೈನುಗ್ಗ ಆಯಿತವ್ವಾ. ಇವು ಎಲ್ಲಿಂದ ಬಂದುವು ಯವ್ವಾ. ಎಲೋ ಹೇಳಿ ಕಡಿ ಕುಂತರಿ. ಕಾಟರ ಆಗಿ ವಟಾರದಾಗ ಉಳ್ಳಿ ಉಳ್ಳಿಸ್ಯಾಡಿ ಹೊಡದಾಳ. ಯಪ್ಪ ಹೋಗಬಾರದು. ಹೋಗಿ ಹುಚ್ಚು ಭಾರಗಿ ಆಗಿ, ಗಂಡುಳ್ಳ ಬಾಲಿಗೆ ಕೆಣಕಿ ಟಿಣಕಿ ಬಂದೆನೊ ಯಪ್ಪ.

ದೊಡ್ಡ ಅರಬ : ಏನೇ, ಮಾಳವ್ವಾಯಿ ಎಷ್ಟ ಅಳತಿಯಲ್ಲಾ. ಬಹಳ ಹೊಡದಾಳೇನು ?

ಮಾಳವ್ವ : ಹೌದೋ ತಮ್ಮಾ. ನಿಮಗ ಎಷ್ಟು ಪರಿ ಹೇಳಿದೆನಲ್ಲೋ ಯಪ್ಪಾ. ನಿಮ್ಮ ಮಾತ ಕೇಳಿ ಅಬರು ಕಳಕೊಂಡು ಮೈ ಮೆತ್ತಗ ಮಾಡಿಕೊಂಡೆನೋ ತಮ್ಮಾ. ಇನ್ನಾರೆ ನನ್ನ ಮಾತ ಕೇಳಿ ಅಬರುದಿಂದ ಸುಮ್ಮಕೂಡ್ರೆಪ್ಪ. ಛಲೋದಲ್ಲ. ಪರನಾರಿಯರ ವ್ಯಸನ ಬಿಡ್ರಪ್ಪ.

ಸಣ್ಣ ಅರಬ :  ಏನೇ ಮಾಳವ್ವಾಯಿ ಸನ್ಮತಿಯಿಂದ ಕೇಳದಕ್ಕೆ ಹೋದರೆ ನಿನಗ ಅವಳು ಹೊಡೆದು ಬಡಿದು ಕಳಿಸಿದಳೇನು ? ಒಳ್ಳೇದು ಇರಲಿ ಅವಳಿಗೆ ಬಿಟ್ಟರೆ ನಮ್ಮ ಅರಬರ ಮತಕ್ಕೆ ಕುಂದು ಬರುವದು. ಅವಳು ನಿನ್ನನ್ನು ಹೊಡಿದಿಲ್ಲ. ಆ ಹೊಡೆದ ಬ್ಯಾನಿ ನಮಗಿರುವದು. ನೀ ಏನು ಚಿಂತಿಸಬೇಡ. ಮನಿಗೆ ನಡಿ. [ಅಣ್ಣಗ ನೋಡಿ]

ಹೇ ! ಅಣ್ಣಾ ನಾವಿಬ್ಬರು ಬೇಗನೆ ಹೋಗಿ ಆ ಭಂಡ ರಂಡೆಯ ಸೆರಗನ್ನು ಹಿಡಿದು ದರದರನೆ ಎಳೆದು ತರೋಣ ನಡಿ ಅಣ್ಣಾ.

ಮಾಳವ್ವ : ಏನ್ರೋ ! ತಮ್ಮಾ ನನಗ ಸೀರಿ ಕುಬ್ಬಸ ಕೊಡತ್ತೇನಿ ಅಂದಿದ್ರಿ ಕೊಟ್ಟ ಹೋಗರಿ ಮೊದಲ.

ದೊಡ್ಡ ಅರಬ : ಏನೇ ! ಮಾಳವ್ವಾಯಿ ಹಂಥಾ ಶ್ರೀಮಂತರ ಮನೆಯಲ್ಲಿ ಹೋಗಿ ಅಂಥಾ ಪತಿವ್ರತಿಗೆ ಕೆಣಕಲು ನಾಚಿಕೆ ಬರಲಿಲ್ಲವೆನು ಒಂದ ಸ್ವಲ್ಪ.

ಮಾಳವ್ವ : ಎ…… ಎ…….. ಎ…… ಎ……. ಎಡ್ಡ ನೀವು ಮಾತಾಡುತಿರಲ್ಲೋ ಉಡದು ನಾಲಿಗೆಯವರೇ. ನೀವು ಹೋಗನದಲ್ಲೇ ಹೋಗಿರಬೇಕು. ಏ…… ನಿಮ್ಮ ದೀಪಾ ಬಿಡಿಲಿ. ನಿಮ್ಮ ದೀಪದಾಗ ನಾಯಿ ಉಚ್ಚಿ ಹೊಯಿಲಿ. ಏ…… ನಿಮ್ಮ ಮೀಸಿಗೆ ಮಿಡಚಿ ಹತ್ತಲಿ. ನಿಮ್ಮ ಭಾಸಿಂಗದಾಗ ಬಳುವ ಆಡಲಿ. ನಿಮ್ಮ ಚೆಂಡಿ ಚಿವಟಲಿ.

ಸಣ್ಣ ಅರಬ :  ಹೌದು, ಮಾಳವ್ವಾಯಿ ನಿನಗೆ ಕೊಡತೇವು ಅಂದಿದ್ದೆ ಖರೆ ಸ್ವಲ್ಪ ತಾಳು.

[ಅಣ್ಣ : ತಮ್ಮರು ಮಾತಾಡುವರು]

ದೊಡ್ಡ ಅರಬ : ಹಾಂಗಲ್ಲ ತಮ್ಮಾ ಇತ್ತ ಬಾ ನಾಯಿದರ ಮಲ್ಲನ ಕರಿಸಿ ಇವಳ ತಲಿ ಬೋಳಸಲ್ಲಿಕ್ಕೆ ಹೇಳೋಣ ನಡೆ.

[ಮಲ್ಲಣ್ಣನ ಕರೆಸುವರು]

ಸಣ್ಣ ಅರಬ :  ಏ ! ಮಲ್ಲಣ್ಣ ಇತ್ತ ಕಡೆಗೆ ಬರುವಂಥವನಾಗು.

ಮಲ್ಲಣ್ಣ : ಯಾಕರಿ ಯಪ್ಪ.

ದೊಡ್ಡ ಅರಬ : ಏನ ಮಾಡತೋ.

ಮಲ್ಲಣ್ಣ : ನನ್ನ ಹೆಣ್ತಿ ದಾಡಿ ಮಾಡತ್ತಿನರಿ.

ದೊಡ್ಡ ಅರಬ : ಚೇಷ್ಟಿ ಮಾಡತ್ತೇನೋ ಮುಂಡೆ ಮಗನೆ ಬೇಗನೆ ಬರುವಂಥವನಾಗು.

ಸಣ್ಣ ಅರಬ :  ಇವಳ ತಲೆಬೋಳಿಸಿ ಸುಣ್ಣಾ ಬಡಿದು ಊರ ಹೊರಗೆ ದಬ್ಬಿ ಬಿಡುವಂತವನಾಗು.

ಮಲ್ಲಣ್ಣ : ಏ….. ಹೇ…… ಈಗ ಆಗುದಿಲ್ಲ ಬಿಡಿರಿ. ಮನ್ಯಾಗ ಗಿರಾಕಿ ಬಹಳ ಕೂತಾವ ದಾಡಿ ಮಾಡವು.

ದೊಡ್ಡ ಅರಬ : ಎಲೋ ! ಮುಂಡೆ ಮಗನೆ ಚಾರ ಆಟ ಆಣೆ ತಕ್ಕೊಂಡ ಏನ ಮಾಡತ್ತಿಯೋ. ಹತ್ತು ರೂಪಾಯಿ ಕೊಡತ್ತಿನಿ ಲಗೂ ಬೋಳಿಸಿ ಬಿಡುವಂತವನಾಗು.

ಮಲ್ಲಣ್ಣ : ಯಾಕ ಆಗುವಲ್ಲದರಿ ಯಪ್ಪ. ಅಷ್ಟು ರೂಪಾಯಿ ಕೊಟ್ರ ನಾಯಾಕ ಒಲ್ಲಲ್ಲಿ ಯಪ್ಪ.

ಮಾಳವ್ವ : ಬೋಳಿಸಬ್ಯಾಡೋ ತಮ್ಮಾ ಬೋಳಿಸಬ್ಯಾಡೋ ಮುಪ್ಪಿನಾಕ್ಕಿ ತಾಯಿ ಸರಿ ಹೆಣ್ಣಮಗಳು.

ಮಲ್ಲಣ್ಣ : ಥೂ, ಅವನೌನ ಕಿರಿಕಿರಿನಾ ಹಡಾ, ನೀರ ಹಚ್ಚತನಾರೆ ಸುಮ್ಮನ ಕೂಡ್ರ ಜರಾ. ಕನ್ನಡಿ ಹಿಡಕೋ ಕೈಯಾಗ, ನೀ ಬ್ಯಾಡಂತಿ, ಅವರು ಬೋಳಿಸಂತರಾ. ಯಾರದು ಕೇಳಬೇಕು. ನಾ ನನ್ನ ನೂರಾ ಒಂದು ರೂಪಾಯಿ ಮ್ಯಾಗ ನೀರ ಹಾಕಿ ಭಾಳೇನು ಆಸಿ ಮಾಡುವದಿಲ್ಲ ಸುಮ್ಮ ಕೂಡ್ರ. ಕತ್ತಿ ಸಾಣಿ ಹಿಡಿಸ್ಯಾವ. ನೋಡ ನೋಡಾರದಾಗ ಬೋಳಸಿ ಬಿಡತ್ತೀನಿ. ನಿನಗ್ಯಾಕ ಕಾಳಜಿ.

ಮಾಳವ್ವ : ಎಲ್ಲೊ ! ಮಲ್ಲಾ ನೂರಾ ಒಂದು ರೂಪಾಯಿ ನೋಡಿದಿ. ನನ್ನ ಮಾರಿ ನೋಡಲಿಲ್ಲಲ್ಲೋ ತಮ್ಮಾ, ಹೆಂಥಾ ಕರ್ಮ ತಾಯಿ. ನೋಡರೆವ್ವ ನನ್ನ ಹೈರಾಣ.

ಮಲ್ಲಣ್ಣ : ಏನೇ ! ಆಯಿ, ಅಲ್ಲ…… ಅಲ್ಲ…… ತಲಿ ಬೋಳಿಸಿಕೊಳ್ಳಕ್ಕ ಹಂತದೇನ ಮಾಡದಿ.

ಮಾಳವ್ವ : ನಾ ತಮ್ಮಾ, ಹೇಳಬಾರದೋ ಯಪ್ಪಾ.

ಮಲ್ಲಣ್ಣ : ಯಾಕ ಹೇಳಲ್ಲಾ. ಮಾತಾಡಕೂತ ಬೋಳಸುನು.

ಮಾಳವ್ವ : ಅಲ್ಲಾ, ಸುಮ್ಮನೆ ಕಿರಿ ಕಿರಿ ಹಚ್ಚ್ಯಾನ ಏನ ಮಾಡಿದಿ ಅಂತ. ಸುಮ್ಮನ ನಿನ್ನ ಕೆಲಸ ನೀ ಮಾಡಲಾ ನನ್ನ ತೊಗೊಂಡು ಏನ ಮಾಡತ್ತಿ ?

ಮಲ್ಲಣ್ಣ : ಹ್ಞಾ ! ಛಲೋ ಹಚ್ಚ್ಯಾರ ಅದಕ್ಕೆ ನಿನಗ ತಲಿ ಬೋಳಸಲಾಕ ತೋಳಿನ ಮಾರ‌್ಯಾಕ್ಕೆ ನೆಟ್ಟಗ ಕೂಂಡ್ರು. ಇತ್ತತ್ತ ಸರಿ ಮುಂದಕ.

[ಬೋಳಿಸುವನು]

ಹುಂ, ಯಪ್ಪ ಮುಗಿಯಿತು. ನೋಡ್ರಿ, ತರ‌್ರಿ ನಮ್ಮ ಪಗಾರ. ಹೋಗಬೇಕು ಗಿರಾಕಿ ಕೂತಾವ.

ಸಣ್ಣ ಅರಬ :  ಅರ್ಧವಟಿ ಕೆಲಸ ಮಾಡಿ ಪೂರಾ ಪಗಾರ ಬೇಡತಿ. ಸುಣ್ಣ ಹಚ್ಚಿ, ಉಳ್ಳಾಗಡ್ಡಿ ಕಟ್ಟಿ, ಕತ್ತಿಮ್ಯಾಲ ಕೂಡ್ರಿಸಿ, ಇವಳಿಗೆ ಅಗಸಿ ಹೊರಗ ಬಿಟ್ಟು ಬರವಂವನಾಗು.

ಮಲ್ಲಣ್ಣ : ಬಿಟ್ಟ ಬಂದಿನರಿಯಪ್ಪ. ನನ್ನ ಪಗಾರ ಕೊಡ್ರಿ.

ಸಣ್ಣ ಅರಬ :  ಎಲೋ ಮುಂಡೆ ಮಗನೇ ತಾಯಿ ಸವರೂಪ ಹೆಣ್ಣು ಮಗಳಿಗೆ ತಲಿ ಬೋಳಿಸಲ್ಲಿಕ್ಕೆ ತಿಳಿಲಿಲ್ಲವೇ ನಿನಗೆ.

ಮಲ್ಲಣ್ಣ : ನೀವು ಹೇಳಿದಿರೆಲ್ಲರಿ ಯಪ್ಪ, ನೂರಾರು ಗಿರಾಕಿ ಬಿಟಟಿ ಓಡಿ ಬಂದಿನರಿ.

ದೊಡ್ಡ ಅರಬ : ನಾವು ಹೇಳಿದರೇನಾಯಿತ್ತು ? ನೀ ಮಾಡಬೇಕೆನ ಹಿಂಥಾ ಕೆಲಸ. ತಮ್ಮಾ ಇವನನ್ನು ಹೆಡಕಿಗೆ ಕೈ ಹಾಕಿ ದಬ್ಬಿ ಬಿಡು ಹೋಗಲೇ ಮುಂಡೆ ಮಗ.

ಮಾಳವ್ವ : ಥೂ, ನನ್ನ ಹಾಟ್ಯಾ. ಬೋಳಿಸ ಬ್ಯಾಡೋ ನನ್ನ ಹಾಟ್ಯಾ ಅಂದ್ರ, ಎಷ್ಟಯಾರಾ ತಗೋ ಪಗಾರ ಎಣಸಿ.

ಸಣ್ಣ ಅರಬ :  ಅಣ್ಣಾ, ಬೇಗನೆ ನಡೆವಂತನಾಗು. ಆ ರತ್ನಿಯ ಮನೆಯನ್ನು ಶೋಧ ಮಾಡಿ. ಬೇಗನೆ ಅವಳನ್ನು ನಮ್ಮ ಕೈವಶ ಮಾಡಿಕೊಳ್ಳುವ ನಡಿ ಅಣ್ಣಾ.

ದೊಡ್ಡ ಅರಬ :

ಹೌದು, ತಮ್ಮಾ ಬೇಗ ಕುದರೆ ಹೊಡೆಯುವಂತವನಾಗು.
ಇನ ಬಿಟ್ಟರ ಇನ ಬಿಟ್ಟರ ಹುಟ್ಟ ಬಾರದೋ
ಅರಬರ ಜಾತಿಗೆ ಹುಟ್ಟಿ ಹುಟ್ಟಲದಂಗ ವ್ಯರ್ಥ
ಬಿಟ್ಟರ ನಮ್ಮ ಕುಲದಲ್ಲಿ ವ್ಯರ್ಥ ಕೈಯಾನ
ಹೆಣ್ಣು ಕಳದ ಬಳಿಕ ಗಂಡಸರಾಗಿ ಹುಟ್ಟುವದು ಯಾಕ ॥1 ॥
ನಾಳಿಗೆ ಅಂದಲ್ಲಿ ವ್ಯರ್ಥ
ನೋಡ ಅವಳ ಗಮ್ಮತ
ಇವಳಿಗೆ ಯಾರದು ಹಿಮ್ಮತ
ಬಡವನದೇನ ಕಿಮ್ಮತ ॥2 ॥

ಹೇ ! ತಮ್ಮಾ, ಈ ಹೆಣ್ಣಿಗೆ ನಾವು ಬಿಟ್ಟರೆ ಹುಟ್ಟಿ ಹುಟ್ಟದಂತೆ ನೋಡು ತಮ್ಮಾ. ನಮ್ಮ ಧನ ದ್ರವ್ಯ ಲೂಟಿಯಾದರೂ ಚಿಂತಿಯಿಲ್ಲ. ಬೇಗನೆ ಹೋಗಿ ಅವಳನ್ನು ವಶಮಾಡಿಕೊಂಡರೆ ನಮ್ಮ ಕಾರ್ಯ ಕೈಗೂಡುವದು. ಬೇಗನೆ ನಡೆವಂತವನಾಗು.

ಸಣ್ಣ ಅರಬ :  ನಾಳೆ ಸೂರ್ಯ ಉದಯಕ್ಕೆ ಹೋಗಿ ಅವಳ ಸೊಕ್ಕು ಮುರಿಲಿಕ್ಕೆಬೇಕು. ಇವಳ ಹಿಮ್ಮತ ಎಷ್ಟು ಇರುವದು? ಆಕಿಯ ಬಡವಗಂಡಂದು ಏನು ಕಿಮ್ಮತಾ. ಬೇಗನೆ ನಡೆ ಅಣ್ಣಾ.

[ಹೋಗುವರು]

[ರತ್ನಾಬಾಯಿ ಬಸವಲಿಂಗ ಬರುವರು]

ರತ್ನಾಬಾಯಿ : ಹೇ ! ಕಾಂತಾ ಘಾತವಾಯಿತು. ಕಾಂತಾ ಇನ್ನೇನು ಗತಿ ಮಾಡಲಿ.

ಬಡವ : ಏನಾತು ಸತಿಯಳೇ ಬೇಗನೆ ಹೇಳುವಂತಾಕಿಯಾಗು.

ರತ್ನಾಬಾಯಿ : ನಿನ್ನೆ ರಾತ್ರಿ ಸರಹೊತ್ತಿನಲ್ಲಿ ಆ ಹೀನ ಬುದ್ಧಿ ಅರಬರು ಮಾನಗೇಡಿ ಮಾಳವ್ವಗೆ ನನ್ನ ಮನಗೆ ಕಳಿಸಿ ನನ್ನನ್ನು ಕೇಳಲಿಕ್ಕೆ ಹಚ್ಚಿದರೂ. ಅಂದ ಮೇಲೆ ನಮ್ಮ ಮಾನ ಹತ್ಯಾ ಆಗುವದು. ಬೇಗನೆ ನಾವು ಯಾರ ಕೈಗೆ ಸಿಗದೆ, ಸಾಹುಕಾರರ ಮನೆ ಬಿಟ್ಟು ಹೋಗುನೂ ನಡೆವಂತವರಾಗಿರಿ ಕಾಂತಾ.

ಬಡವ :

ಶಂಕರ ತಂದ ಹೆಂಥ ಬಿರಿಯಾ
ಶಿವ ಶಿವ ಶಂಕರ ಪ್ರಭುಹರಾ ॥ಪಲ್ಲ ॥

ಒಳ್ಳೆ ಬೇಸಿ ಸಿಕ್ಕಿತೋ ಎನಗ ದಾರಿ
ಮತ್ತೂ ಬಿಟ್ಟು ಹೋಗಬೇಕು ಎನನಾರಿ
ಹೋಗಿ ಬಿಳಲಿ ಯಾರ ಬಾವಿ ಕೇರಿ ॥1 ॥

ಬಹಳ ಪುಣ್ಯವಂತ ಸ್ವಾಮಿ ರಾಮಶೆಟ್ಟಿ
ಅಲ್ಲಿ ಹೋಗಿ ಕಂಡಿದೆವು ರೊಟ್ಟಿ ಬಟ್ಟಿ
ಮತ್ತು ಬಡಕೊಳ್ಳುವದು ಬಂತೋ ಹೊಟ್ಟಿ ॥2 ॥

ಹಿಂತಾದು ಬಿಟ್ಟು ಒಮ್ಮಿದೆಯೊಮ್ಮ ಆಗಲಿ ಏಕ
ಏಕಿ ಹ್ಯಾಂಗ ಹೋಗುನ ಬಾಲಿ
ಇಲ್ಲಿ ಇರುವದು ಆಗಲಿ ಶಂಕರ ॥3 ॥

ಈ ಸಾರ ಸಂಸಾರ ಸಾಕಾಯ್ತಿ
ಈ ಲೋಕದಲ್ಲಿ ಯಾತಕ ಇರಬೇಕ
ವಿಷ ತಿಂದು ಪ್ರಾಣ ಕೊಡಬೇಕು ॥4 ॥

ಶಿವ…… ಶಿವ…… ಶಂಕರಾ ಪ್ರಭುಹರಾ ಹೆಂಥಾ ವ್ಯಾಳೆಯನ್ನು ಒದಗಿಸಿದಿ. ಮತ್ತಾದರೂ ಹಿಂದಿನಂತೆ ರೊಟ್ಟಿ ಬಟ್ಟಿಗೆ ದೂರ ಮಾಡಿದಿಯಾ. ಇರಲಿ. ಪರಮೇಶಾ ! ಹಿಂಥ ಪುಣ್ಯಶಾಲಿ ಸಾಹುಕಾರನ ಮನೆಬಿಟ್ಟು ಮತ್ತೆ ಅಡವಿ ಪಾಲಾಗೂದು ಬಂತಲ್ಲ ಸತಿಯಳೇ.