[ಮಿಠಾಯಿವಾಲಾ ಬರುವನು]

ಮಿಠಾಯಿವಾಲ : ಗರಮ ಚಿವಡಾ, ತಾಜಾ ಲವಡಾ, ಜಿಲ್ಯಾನ ಬುಲ್ಲಿ ಕುಂಡ್ಯಾನ ಲಾಡು. ನನ್ನ ಬಾಳಕಾಯಿ.

ಸಣ್ಣ ಅರಬ :  ಅಣ್ಣಾ ಇಲ್ಲಿ ಮಿಠಾಯಿ ಗಾಡಿ ಇರುವದು. ಫರಾಳ ತೆಗೆದುಕೊಂಡು ಹೋಗೋಣ ನಡೆ ಅಣ್ಣಾ.

ದೊಡ್ಡ ಅರಬ : ಎಲೋ ! ಮಿಠಾಯಿವಾಲಾ ನಿಮ್ಮ ಗಾಡಿಯಲ್ಲಿ ಏನೇನು ಇರುವದು ? ಎಲೋ ಮೂರ್ಖಾ ತಾಜಾ ಲವಡಾ ಅಲ್ಲೋ, ತಾಜಾ ವಡಾ ಅನ್ನಬೇಕು.

ಮಿಠಾಯಿವಾಲಾ : ಹಾಂ….. ಹಾಂ….. ತಾಜಾ ವಡಾರಿ.

ದೊಡ್ಡ ಅರಬ : ಮತ್ತೇನು ಇರುವದು ?

ಮಿಠಾಯಿವಾಲ : ಆದುರಿ ಆದು ಜಿಲ್ಯಾನ ಬುಲ್ಲಿರಿ.

ದೊಡ್ಡ ಅರಬ : ಏ ! ಮೂರ್ಖಾ, ಜಿಲ್ಯಾನ ಬುಲ್ಲಿ ಅಲ್ಲೋ, ಜಿಲೇಬಿ ಅನ್ನಬೇಕು.

ಮಿಠಾಯಿವಾಲ : ಹಾಂ….. ಹಾಂ……. ಜಿಲೇಬಿರಿ ಜಿಲೇಬಿರಿ.

ದೊಡ್ಡ ಅರಬ : ಮತ್ತೇನು ಇರುವದು ?

ಮಿಠಾಯಿವಾಲಾ : ಅದು ಕುಂಡ್ಯಾನ ಲಾಡುರಿ.

ದೊಡ್ಡ ಅರಬ : ಏ ! ಮೂರ್ಖಾ, ಕುಂಡ್ಯಾನ ಲಡ್ಡು ಅಲ್ಲೊ, ಡಿಂಕ ಲಾಡು ಅನ್ನಬೇಕು.

ಮಿಠಾಯಿವಾಲಾ : ಹಾಂ….. ಹಾ…… ಡಿಂಕ ಲಾಡು ಡಿಂಕ ಲಾಡು. ನನಗೇನ ಗೊತ್ತುಬಿಡಿರಿ.

ದೊಡ್ಡ ಅರಬ : ಮತ್ತೇನಿರುವದು ?

ಮಿಠಾಯಿವಾಲಾ : ಅದು ನನ್ನ ಬಾಳಿಕಾಯಿರಿ.

ದೊಡ್ಡ ಅರಬ : ಏ ! ಮೂರ್ಖಾ, ನನ್ನ ಬಾಳಿಕಾಯಿ ಅಲ್ಲೋ, ಹಣ್ಣ ಬಾಳೆಕಾಯಿ ಅನ್ನಬೇಕು.

ಮಿಠಾಯಿವಾಲಾ : ಹಾಂ….. ಹಾಂ…… ಹಣ್ಣ ಬಾಳೆಕಾಯಿರಿ.

ದೊಡ್ಡ ಅರಬ : ಒಳ್ಳೇದು ! ಜಿಲೇಬಿ ಹ್ಯಾಂಗ ಪಾವಸೇರು ಕೊಡತೋ ?

ಮಿಠಾಯಿವಾಲಾ : ಚಾರ ಆಣೆಕ ಛಟಾಕರಿ ಬಾಬಾ.

ದೊಡ್ಡ ಅರಬ : ಲಾಡು ಹ್ಯಾಗೆ ?

ಮಿಠಾಯಿವಾಲಾ : ಅದು ಹಂಗೇರಿ ಅಪ್ಪ.

ದೊಡ್ಡ ಅರಬ : ವಡಾ ಹ್ಯಾಗೆ ?

ಮಿಠಾಯಿವಾಲಾ : ಅದು ಹಂಗೇರಿ.

ದೊಡ್ಡ ಅರಬ : ಪ್ರತಿಯೊಂದು ಮಿಠಾಯಿ ಅರ್ಧ ಅರ್ಧ ಕಿಲೊ ಕೊಡು.

ಮಿಠಾಯಿವಾಲಾ : ಹಾಂ….. ಹಾ….. ಕೊಡತ್ತೇನರಿ ಬಾಬಾ. ಬಾಬಾ ಕುಡತ್ತೇನರಿ. ತಗೋರಿ ಬಾಬಾ ತಗೋರಿ. ಇದು ಒಂದು ಇದು ಎರಡು, ಇದು ಮೂರು ತಗೋರಿ.

ದೊಡ್ಡ ಅರಬ : ಹಾಂ….. ತಮ್ಮಾ, ಎಲ್ಲಿಯಾದರೂ ನೀರಿನ ಹತ್ತಿರ ಹೋಗಿ ಫರಾಳ ಮಾಡೋಣ ನಡೆ.

ಮಿಠಾಯಿವಾಲಾ : ಅಲಾ ! ಅಲ್ಲಿ, ಇಲ್ಲಿ ನೀವ್ಯಾಕ ಹುಡುಕಿತ್ತಿರಿ ಬಾಬಾ. ಈ ಬೋರ್ಡ ನೋಡಿರಿ ಭಂಡಗಾರ ಪಿಣ್ಯಾಚೀ ಪಾಣಿ. ಈ ನಳಾ ತಿರತಾ ತಿರವಿದರ ಆಯಿತ್ತು. ಬಾಯಿ ಹಚ್ಚಿ ಕುಡಿರಿ. ಪುಳೂಳೂಳೂ ನೀರ ಬರತಾವ.

ದೊಡ್ಡ ಅರಬ : ಏನೋ ! ಮೂರ್ಖಾ, ಚೇಷ್ಟೆ ಮಾಡುತ್ತಿದ್ದೇನು. ಈ ನೀರು ನಮಗೆ ಬೇಕಿಲ್ಲ. ನಡಿ ತಮ್ಮಾ ಬಾವಿಗೆ ಹೋಗೂಣ.

ಮಿಠಾಯಿವಾಲಾ : ಅಲ್ಲಾ ! ಅಲ್ಲಾ. ಬಾವಿಗಾರ ಹೋಗರಿ ಕೇರಿಗಾರ ಹೋಗರಿ ನಮ್ಮ ರೊಕ್ಕ ಕೊಡರಿ ಮಹಾರಾಯ.

ದೊಡ್ಡ ಅರಬ : ಏನು ಅಂದಿ ? ಮಿಠಾಯಿ ಧಾರಣಿ ಹಾಗೆ ಹೀಗೆ ಅಂದು ಎಂದು ಹೇಳಿದಲೋ. ಮತ್ತೇ ರೊಕ್ಕ ಬೇಡಲಿಕ್ಕೆ ನಾಚಿಕೆ ಬರುವದಿಲ್ಲವೇನು ನಿನಗ. [ದಬ್ಬುವರು]

ರತ್ನಾಬಾಯಿ :

ಇಂದು ದೇವತಾ ಇಂದು ದೇವತಾ
ಸಿಂಧೂ ಭರಣಿ ಲಕ್ಷ್ಮೀಕಾಂತ ॥1 ॥

ಸ್ವಾನಂತ ಜೀವನ ಜೀವ ರಾಜಬಾ
ತುಝೆ ನಯನ ಅಗ್ನಿ ತುಝೆ ರೂಪ ॥2 ॥

ಭಸ್ಮ ಝಾಲೆ ಪಾಪ ಲಮಕಾ ಜಾಳಿತ
ದೇವಾಚೆ ಬಂದಿ ಸೇಡವಿ ತಾತಾ ॥3 ॥

ಮೈಂದರ್ಗಿ ಗಾಂವ ಶಂಕರಾಚೆ ನಾವ
ಭಜನಿ ಕರತಾ ವೃದ್ಧ ಬಾಲಕಾವರ ತುಝೆ ಮಮತಾ ॥4 ॥

ಚಂದ್ರುಣಿದೇವಿ : ಕೇಳೆ ಕೇಳೆ ಮಗಳೆ ರತನಾ
ಲಿಂಗ ಪೂಜಾಕ ನೀರಿಲ್ಲ ತಿಳಿ ಖೂನಾ ॥1 ॥

ಮಧ್ಯಸ್ಥಾನದಲ್ಲಿ ಮನವ ನಿಲ್ಲಿಸಿ
ಶುದ್ಧ ಭಾವ ಶ್ರೀಗಂಧವ ಧರಿಸಿ ॥2 ॥

ಕರವ ಮುಗಿದು ಕಂಗಳ ಮುಚ್ಚಿ
ಚಂದ್ರ ಹಚ್ಚಿ ಚಿನ್ಮಯ ಪಾದಕ ॥3 ॥

ಭಯನಿಲ್ಲದೆ ಬಾವಿ ನೀರಿಗೆ ಹೋಗಿ
ದೈವುಳ್ಳ ಗುರುವಿನ ಪಾದಕ್ಕೆರಗಿ ॥4 ॥

ಬ್ಯಾಗದಿಂದೆ ನೀ ಪೋಗಿ ಬಾರೆ
ನಾಗಭೂಷಣನ ಪೂಜೆಯ ಮಾಡಿ ॥5 ॥

ಅಮ್ಮಾ ! ಮಗಳೆ ರತ್ನಾಬಾಯಿ ಇಷ್ಟಲಿಂಗ ಪೂಜೆಕ್ಕೆ ನೀರಿಲ್ಲ, ಬೇಗನೆ ಹೋಗಿ ನೀರು ತೆಗೆದುಕೊಂಡು ಬಾರಮ್ಮಾ.

ರತ್ನಾಬಾಯಿ : ಅಮ್ಮಾ ! ತಾಯಿಯವರೇ, ನೀವು ಹೇಳಿದ ಮಾತು ತಿಲ ಮಾತ್ರ ತಪ್ಪಿ ನಡೆಯುವಳಲ್ಲ. ನಿಮ್ಮ ಆಜ್ಞೆದಂತೆ ನಾನಾದರೂ ನೀರು ತಗೆದುಕೊಂಡು ಬರುವೆನು ತಾಯಿ.

ಚಂದ್ರುಣಿದೇವಿ : ಹೇ ! ಮಗಳೆ ರತ್ನಾ, ಜತನದಿಂದ ಹೋಗಬೇಕು. ಸಿದ್ಧಲಿಂಗನ ಸ್ಮರಿಸುತ್ತಾ, ಮಧ್ಯಸ್ಥಾನದಲ್ಲಿ ಮನವ ನಿಲ್ಲಿಸಿ ಶುದ್ಧ ಭಾವ ಶ್ರೀಗಂಧ ಧರಿಸಿ ಬೇಗನೆ ಹೋಗಿ ಬಾರಮ್ಮ ಮಗಳೆ.

[ಕೊಡಾ ಕೊಡುವಳು]

ರತ್ನಾಬಾಯಿ : ಆಗಲೆಮ್ಮಾ ನಿನ್ನ ಆಜ್ಞೆಕ್ಕೆ ಅನುಸರಿಸಿ ನೀರು ತೆಗೆದುಕೊಂಡು ಬರುವೆನಮ್ಮಾ.

[ಹೋಗುವಳು]

ಸಾಹುಕಾರ : ಆಶೀರ್ವಾದ ಆಗಲಿ, ಏಳಮ್ಮ ಮಗಳೆ, ಅಮ್ಮಾ ಮಗಳೆ ನೀನು ಇಲ್ಲಿಗೆ ಬರುವ ಕಾರಣವೇನಮ್ಮಾ.

ರತ್ನಾಬಾಯಿ :

ಮನಿಯಾಗ ನೀರಿಲ್ಲ ನಾ ಪೋಗುವೆ
ಕೇಳರಿ ಸಾಹುಕಾರ ಹೋಗುವೆ ನೀರಿಗೆ ॥1 ॥

ಅಮ್ಮನವರು ಹೇಳ್ಯಾರ ಎನಗ
ತಡವಾ ಯಾಕೆ ಘೋರ ನಾ ಪೋಗುವೆ ॥2 ॥

ತುಂಬಿಕೊಂಡು ಕುಂಭದಲ್ಲಿ
ಹಂಬಲ ಇಟ್ಟು ಬರವೆನ ಇಲ್ಲಿ ॥3 ॥

ರಂಭ್ಯಾರು ವಾರಿಗೆಯವರಾ ಕರಿ ಹೂವಾ
ಕೇಳಾ ಮನಿಯಾಗ ಇಲ್ಲ ನೀರಾ ॥4 ॥

ಹಾಯ ! ತಂದೆಯವರೇ, ಇಷ್ಟಲಿಂಗ ಪೂಜ್ಯಕ್ಕ ಮನಿಯಲ್ಲಿ ನೀರಿಲ್ಲೆಂದು ಅಮ್ಮನವರು ಆಜ್ಞಾ ಮಾಡಿದರು. ತಂದೆಯವರೇ ನೀರನ್ನು ತೆಗೆದುಕೊಂಡು ಬರುವೆನು ಅಪ್ಪಣೆಯನ್ನು ಕೊಡಿರಿ.

ಸಾಹುಕಾರ : ಏನು ನೀರಾ ? ಹಾಂ……. ಹಾಂ……. ಮಗಳೆ ಬೇಡಮ್ಮ ಬೇಡಾ. ನೀನು ಮನಿ ಕೆಲಸಮಾಡಿದರೆ ಆ ಉಳಿದ ದಾಸಿಯರ ಕೆಲಸವೇನು ? ಕಮಲದಂಥ ನಿನ್ನ ಕೈ ಕಾಲು ನೊಂದು ಹೋದಾವು. ಅಮ್ಮಾ, ನೀನು ನನ್ನ ಮನೆಯ ಭಾಗ್ಯದ ಲಕ್ಷ್ಮಿ. ಸರ್ವತಾ ನಿನಗೆ ಮನೆ ಕೆಲಸ ಬೇಡಮ್ಮಾ ಬೇಡ.

ರತ್ನಾಬಾಯಿ : ಹೇ ! ತಂದಿಯವರೇ ಮನೆಯಲ್ಲಿ ಅಮ್ಮನವರ ಮಾತು ಮೀರಿದರೆ ಹುಂಬ ಸೂಳಿ ಎಂದು ಸಿಟ್ಟು ಮಾಡುವರು. ಅವರ ಹೇಳಿಕೆಯಂತೆ ತುರ್ತ ನಾನು ನೀರು ತರಲಿಕ್ಕೆಬೇಕು. ತಂದೆಯವರೇ ಅವರ ಮಾತು ಮೀರಲಾರೆ ಮೀರಲಾರೆ.

ಸಾಹುಕಾರ :

ಮನಿಯಲ್ಲಿ ಮಾಡುವರಾ ಇರಲಿಕ್ಕಾಗಿ
ನಿನಗ್ಯಾಕವ್ವಾ ಘೋರಾ ಹೋದರ ನಿನ್ನ ಖುಸಿ ॥1 ॥

ಬ್ಯಾಡನೆಂದಿಲ್ಲ ಕಾಶಿ….
ಕಾಲ ಜಾರಿ ಬಿದ್ದಿತು ಫೇರಿ ॥2 ॥

ನಿನ್ನ ಕಾಲ ಗುಣದಿಂದ ಭಾಗ್ಯದಲ್ಲಿ
ಹೋದೆ ಮುಂದ ಭಾಗ್ಯದ ಲಕ್ಷ್ಮೀಪುರಾ ॥3 ॥

ನಿನ್ನ ನಡತಿ ನೋಡ ಪಾದ ಜಾಣಿ
ಸಣ್ಣ ದೊಡ್ಡ ನನ್ನ ಓಣಿ ಶುದ್ಧಾಗಿ ನಡೆಯುವರಾ ॥4 ॥

ಹೇ ! ಅಮ್ಮಾ….. ಮಗಳೆ ಮನಿಯಲ್ಲಿ ನಾಲ್ಕಾರು ತೊತ್ತುಗಳು ಇರಲಿಕ್ಕಾಗಿ ಮನೆಗೆಲಸ್ಕ ನಿನ್ನನ್ನು ಹಚ್ಚಿದಾಳೆ ಅವಳು. ಬೇಡಮ್ಮಾ ನಿಮ್ಮ ಕಾಲಗುಣದಿಂದ ನಾನು ಭಾಗ್ಯಶಾಲಿಯಾದೆ, ನಿನ್ನಂಥ ಭಾಗ್ಯದ ಲಕ್ಷ್ಮೀಯನ್ನು ನೀರಿಗೆ ಹಚ್ಚಿದರೆ ನನಗೆ ಕುಂದು ಬರುವದು ಅಮ್ಮಾ. ನೀನು ನನ್ನ ಮನೆ ಮಗಳೆಂದು ಭಾವಿಸಿದ್ದು ವ್ಯರ್ಥವಾಗುವದಮ್ಮಾ. ಆದರೆ ನಿಮ್ಮ ತಾಯಿ ಆಜ್ಞೆ ಪಾಲಿಸಬೇಕಾದರೆ ಹೋಗಮ್ಮ ಬೇಡ ಅನ್ನುವುದಿಲ್ಲ. ನಿರ್ಗುಣ ಎಂಬ ನೀರನ್ನು ತನುವೆಂಬ ಪ್ಯಾಲೆಯಲ್ಲಿ ತುಂಬಿಕೊಂಡು, ತನು ಮನ ಧನ ಗುರು ಚರಣದಲ್ಲಿಟಟು ನಾಸಿಕಾಗ್ರದಲ್ಲಿ ಮನವ ನಿಲ್ಲಿಸಿ ಎಡ ಬಲಕ್ಕೆ ನೋಡದೆ ನಿನ್ನ ಮರ್ಯಾದೆ ಮಧ್ಯದಲ್ಲಿ ಹೆಜ್ಜೆಯನ್ನು ಇಡಬೇಕು ನೋಡಮ್ಮ ಮಗಳೆ, ಹೋಗು ಬೇಗನೆ ಹೋಗು.

ರತ್ನಾಬಾಯಿ : ಆಗಲಿ ತಂದೆ ನಿಮ್ಮ ಆಜ್ಞೆದಂತೆ ಬೇಗನೆ ಬರುವೆ.

[ನೀರಿಗೆ ಹೋಗುವಳು]

ಶಿವ ಶಿವ ಶಿವ ಶಿವ ಸಿದ್ಧಲಿಂಗ
ನೀರಿಗೆ ಒಬ್ಬವಳೆ ಬಂದೆನು ಹೆಂತ ಮಂಗ ॥1 ॥

ಮೀಸಲು ನೀರಿಗೆ ಬೇಕಾಗಿ ತೊಳದೇನು ಕಾಶಿಲಿಂಗ
ಅಷ್ಟಾವರಣಕ್ಕೆ ಸರಿಯಾಗಿ ಆತ್ಮಲಿಂಗ ॥2 ॥

ಭಾವ ಭಕ್ತಿ ಇಟ್ಟ ನಡಿಯರಿ ಆತ್ಮದಲಿಂಗ
ದೇಶದೊಳು ವಾಸುಳ್ಳ ಜ್ಯಾಗ ಮೈಂದರ್ಗಿ ಊರಾ ॥3 ॥

ನಟ್ಟನಡಿವೆ ನೆನದಾರ ಸ್ವಾಮಿ ಗೈಬಿ ಫೀರ
ಹೂವಿನ ಹಾರ ಹಾಕಿ ಮಾಡುವೆ ನಮಸ್ಕಾರ ॥4 ॥

ಆಹಾ….. ಏನು ಆಶ್ಚರ್ಯ ? ತಂದೆ ಅಪ್ಪಣೆ ತಗೆದುಕೊಂಡು ಬರುವಷ್ಟರಲ್ಲಿ ವಾರಗಿ ಗೆಳದೆರಲ್ಲರು ಮರೆ ಆದರಲ್ಲ. ಇನ್ನೇನು ಮಾಡಲಿ ? ಕೂಡಿ ಹೋಗಲು ಜೋಡಿಯಿಲ್ಲದಂತೆ ಆಯಿತು. ಇರಲಿ, ಶಂಭುಲಿಂಗ ನೀನೊಬ್ಬ ನನ್ನ ಬೆನ್ನ ಹಿಂದೆ ಇದ್ದರೆ ಅನ್ಯರ ಗೊಡವಿ ನನಗೇನು? ಸ್ವಲ್ಪ ತಡವಾದರೆ ತಾಯಿ ಅವರು ಸಿಟ್ಟು ಮಾಡುವರು. ಬೇಗನೆ ನೀರು ತುಂಬಿಕೊಂಡು ಹೋಗಲಿಕ್ಕೆ ಬೇಕು.

[ಹೋಗುವಳು]

ದೊಡ್ಡ ಅರಬ : ಆಹಾ ಇವಳ್ಯಾರು ? ಇವಳ ರೂಪ ಇವಳ ಒನಪು ಎಂಥಾದೋ ತಮ್ಮಾ.

ಸಣ್ಣ ಅರಬ :  ಏನಾಯಿತು ? ಅಣ್ಣಾ ಏನಾಯಿತು ? ಹೀಗೇಕೆ ಮೂರ್ಛಿತವಾದಿರಿ ?

ದೊಡ್ಡ ಅರಬ :

ನು ಹೇಳಲಿ ತಮ್ಮಾ
ಚಂದನವಳು ಚಲವಿ ಬಂದು ಎನ್ನ ಇದರಾ
ಹಾಯ್ದು ಹೋದದ್ದು ಕಂಡು ಕಣ್ಣಿಗೆ ಬಂತೋ ಚಕ್ರ
ನಮ್ಮ ಮಸ್ತಕದಲ್ಲಿ ಕಾಮ ಕ್ರೋಧ ಅಹಂಕಾರ
ತಾಳಲಾರೆ ಜೀ….. ಜೀ….. ರಾ….. ॥1 ॥

ವಸ್ತ್ರಾ ಒಡವಿ ಮಸ್ತಕ ಸಿಸ್ತಾ ಪುತ್ತಳಿ ಸರಾ
ಸುಂದರ ಸುಗಣಿಗ ಒಪ್ಪುವದೇನೋ ಚಂದ್ರಹಾರ
ಇವಳಿಗಿ ಸರಿಯಲ್ಲ ದೇವಲೋಕದ ಸ್ತ್ರೀಯರಾ
ಚಿಕ್ಕ ವಯ್ಯ ಬರೊ ಜೀ….. ಜೀ…… ರಾ…… ॥2 ॥

ಕುಬಸಿನ ಮೇಲಾ ಕುಸಲವನ್ನ ತರತರಾ
ಜರದ ಶಾಲು ಮುರದು ಉಟ್ಟಾಳ ಪೀತಾಂಬರ
ಏನ ಕೊರದ ರೂಪ ಬರದಾನಪ್ಪ ಬ್ರಹ್ಮ ದೇವರಾ
ಮಾಡಿ ವಿಸ್ತಾರೊ ಜೀ…… ಜೀ…… ರಾ…… ॥3 ॥

ಬಂದರೆ ಕುಂದರೆ ಮಾಡುವೆ ನೂರಾರಾ
ಹೊಲ ಮನಿ ಇಕ್ಕಿ ಮ್ಯಾಲಿನ ಬಲಾದೂರಾ
ಎಂಥ ಗಂಟ ಹಾಕಿ ಕೊಟ್ಟನಪ್ಪ ಗೈಬಿ ಫೀರಾ
ಇರುವದು ಮೈಂದರ್ಗಿ ಊರಾ ಜೀ…… ಜೀ……. ರಾ…… ॥4 ॥

ತಮ್ಮಾನಾವಿಬ್ಬರು ಫಳಾರ ಮಾಡುವಾಗ ಏನೋ ಒಂದು ಕೋಲ್ಮಿಂಚು ಹೊಡಿದಂತೆ ಆಯಿತು ನೋಡು ತಮ್ಮಾ.

ಸಣ್ಣ ಅರಬ :  ಅದೇನು ಇರುವದು ಅಣ್ಣಾ ?

ದೊಡ್ಡ ಅರಬ : ಎನು ಹೇಳಲಿ ತಮ್ಮಾ ? ಇದೇ ಬಾವಿಯ ದಂಡಿಯ ಮೇಲೆ ನಾವು ಫರಾಳ ಮಾಡೂವಾಗ ಒಂದು ಹೆಣ್ಣನ್ನು ನೋಡಿ ನನ್ನ ಕಣ್ಣಿಗೆ ಚಕ್ಕರ ಬಂತು ನೋಡು ತಮ್ಮಾ. ಆ ಹೆಣ್ಣಿನ ವರ್ಣನೆ ನಾನು ಒಂದೇ ನಾಲಿಗೆ ಇಂದ ಹೇಳಲಾಗದು. ಅವಳನ್ನು ನೋಡಿ ನನ್ನ ಮಸ್ತಕದಲ್ಲಿ ಕಿಡಿ ಕಾರಿದಂತೆ ಆಯ್ತಿ ನೋಡು ತಮ್ಮಾ.

ಸಣ್ಣ ಅರಬ :  ಅಣ್ಣಾ ! ಮತ್ತೇನಾಯಿತು ?

ದೊಡ್ಡ ಅರಬ : ತಮ್ಮಾ ! ಇತ್ತ ಬಾ….. ಇತ್ತ ಬಾ. ಅವಳ ವಸ್ತ್ರ ಅಲಂಕಾರ ನೋಡಿಅವಳ ವನಪ ವೈಯಾರಕ್ಕೆ ಮೆಚ್ಚಿ ನಮ್ಮ ಮನಸ್ಸು ಛಿದ್ರವಾಗಿರುವದು ನೋಡು ತಮ್ಮಾ.

ಸಣ್ಣ ಅರಬ :  ಆಗಲಿ ಅಣ್ಣಾ ! ಸೈರಿಸು, ಸೈರಿಸು ಮತ್ತೇನಾಯಿತು ?

ದೊಡ್ಡ ಅರಬ : ಆಹಾ ! ಏನು ಅವಳ ರೂಪಾ, ಹಗಲ ಪಂಜು ಹಚ್ಚಿದಂತೆ ಜರದ ಶಾಲೂ ಮುರಿದು ಉಟ್ಟು, ನೊಸಲಿನ ಮೇಲೆ ಕುಂಕುಮ ಬಟ್ಟು, ಕುಶಲದ ಕುಬಸದ ಮೇಲೆ ಕುತ್ತನಿಯನ್ನು ಕೊರದಿದ್ದಳು. ನಡುವಿನಲ್ಲಿ ಒಡ್ಡ್ಯಾಣಾ. ಬಾಜು ಬಂದು ಬಂಗಾರದ ಸರಗಿ ಅವಳ ಕೊರಳಿಗೆ ಶೋಭಿಸುವದು ನೋಡು ತಮ್ಮಾ.

ಸಣ್ಣ ಅರಬ :  ಇರಲಿ ! ಅಣ್ಣಾ ಮತ್ತೇನಾಯಿತು ?

ದೊಡ್ಡ ಅರಬ : ಏನು ಹೇಳಲಿ ತಮ್ಮಾ ಅವಳ ವಿಸ್ತಾರ, ಎಷ್ಟಂತ ಹೇಳಲಿ. ಅವಳ ಹುಬ್ಬು ಕಾಮನ ಬಿಲ್ಲಿನಂತೆ. ಕಣ್ಣು ನಿಂಬಿಯ ಹೋಳಿನಂತೆ, ಕುಂಬ ಕುಚಗಳ ತುಂಬಿ. ಹಂಬಲಿಸಿ ಅವಳ ತೆಕ್ಕಿಗೆ ಹಾಯಲೇನೊ ತಮ್ಮಾ.

ಸಣ್ಣ ಅರಬ :  ಹಾಗಾದರೆ ಇದಕ್ಕೆ ಉಪಾಯ ಏನು ಮಾಡಬೇಕು ಅಣ್ಣಾ.

ದೊಡ್ಡ ಅರಬ : ಹೇ ! ತಮ್ಮಾ ಕಾಜಿನ ಬಳಿಯನಿಟ್ಟು, ಮೋಜ ಮಾಡುತ್ತ ತೋಳ ತಿರವಿ ನಕ್ಕರೆ, ಹಲ್ಲು ದಾಳಂಬರ ಬೀಜದಂತೆ ಕಾಣುವವು. ಮೂಗು ಸಂಪಿಗೆ ತೆನೆಯಂತೆ, ಅವಳ ತೋಳ ತೊಡೆಯು ಬಾಳೆಯ ದಿಂಡಿನಂತೆ ಶೋಭಿಸುವದು ನೋಡು ತಮ್ಮ. ಎಷ್ಟು ವರ್ಣಿಸಲಿ ತಮ್ಮಾ. ಬೇಕಾದಷ್ಟು ಬೆಳ್ಳಿ ಬಂಗಾರ ಹೋದರು ಚಿಂತಿಯಿಲ್ಲ. ಇವಳನ್ನು ವಶ ಮಾಡಿಕೊಳ್ಳಲೇಬೇಕು.

ಸಣ್ಣ ಅರಬ :  ಹೇ ! ಅಣ್ಣಾ ಅಡವಿಯೊಳಗತ್ತರೆ ಗಿಡ ಏನು ಬಲ್ಲದು ? ನಡೆ ಬೇಗನೆ ನಡೆ. ಊರೊಳಗೆ ಹೋಗಿ ಅವಳಿರುವ ಸ್ಥಾನವನ್ನು ಶೋಧಿಸಿ, ನಮ್ಮ ಸ್ವಾಧೀನವಾಗುವಂತೆ ಬೋಧಿಸಿ, ನಮ್ಮ ಕಾರ್ಯಕ್ಕೆ ಜಯ ಆಗುವಂತೆ ಮಾಡೋಣ ನಡೆ ಅಣ್ಣಾ. ಈ ಮಾನವರ ಹೆಣ್ಣು ಏಕೆ ? ಇವರಗಿಂತಲು ದೇವತಾಕನ್ಯ ಬೇಕಾದರೆ ಹೇಳು. ನಮ್ಮ ಮನೆಯಲ್ಲಿರುವ ಹೊನ್ನ ಚಿನ್ನ ಲೂಟಿಯಾದರೂ ಚಿಂತೆ ಇಲ್ಲ. ಹಾ ! ಅಣ್ಣಾ ನೆನಪಾಯಿತು, ನೆನಪಾಯಿತು. ಒಳ್ಳೆ ಸಮಯ ಸಿಕ್ಕಿತು. ಹಿಂದಕ್ಕೆ ನಮ್ಮ ತಂದೆ ಈ ಗ್ರಾಮಕ್ಕೆ ಉದ್ರಿ ವಸೂಲಿಗೆ ಬರುತ್ತಿದ್ದಾಗ ನಾನು ಅವನ ಹಿಂಬಾಲ ಬರುತ್ತಿದ್ದೆನು. ಇದೇ ಊರಲ್ಲಿ ಹೂಗಾರ ಮಾಳವ್ವ ಎಂಬ ಮುದಕಿಯ ಮನೆಯಲ್ಲಿ ನಮ್ಮ ತಂದಿ ಇರುತ್ತಿದ್ದನು. ಆದರೆ ಆ ಮುದಕಿಯು ಮನೆಯಲ್ಲಿ ನಮ್ಮ ತಂದಿ ಇರುತ್ತಿದ್ದನು. ಆದರೆ ಆ ಮುದಕಿಯು ನನಗೆ ಬಹು ಪ್ರೀತಿ ಮಾಡುತ್ತಿದ್ದಳು. ಆದರೆ ತಡ ಮಾಡದೆ ನಾವು ಅಲ್ಲಿಗೆ ಹೋಗಿ ಈ ವೃತ್ತಾಂತಯೆಲ್ಲಾ ಆ ಮುದಕಿಗೆ ಹೇಳಿ, ಆ ಹೆಣ್ಣು ನಮ್ಮ ಕೈವಶ ಮಾಡಿಕೊಳ್ಳೋಣ ನಡೆ ಅಣ್ಣಾ, ಏನು ಚಿಂತಿಸಬೇಡ.

ದೊಡ್ಡ ಅರಬ : ಹೌದು ತಮ್ಮಾ ಎಷ್ಟು ಬುದ್ಧಿಶಾಲಿ ನೀನು. ಆ ಮಾಳವ್ವನ ಮನಿಗೆ ಹೋಗಿ ನಮ್ಮ ಕಾರ್ಯ ಕೈಗೂಡಿಸೋಣ ನಡೆ.

ಮಾಳವ್ವನ ಮನೆ

[ಮಾಳವ್ವನ ಮನೆಗೆ ಹೋಗಿ ಅವಳಿಗೆ ಕರೆಯುವರು]

ಸಣ್ಣ ಅರಬ :  ಏ…… ಮಾಳವ್ವ ಆಯಿ, ಏ……. ಮಾಳವ್ವ ಆಯಿ.

ಮಾಳವ್ವ : ಯಾರೋ ತಮ್ಮಾ ?

ಸಣ್ಣ ಅರಬ :  ಏನ ಮಾಡುತ್ತಿದ್ದಿ ಮನಿಯಾಗ ?

ಮಾಳವ್ವ : ಯಾಕೋ ತಮ್ಮಾ ಯಾರ ನೀ ?

ಸಣ್ಣ ಅರಬ :  ಏನು ಮಾಡುತ್ತಿ ಮನ್ಯಾಗ ? ಹೊರಗೆ ಬರವಂತಕಿಯಾಗು.

ಮಾಳವ್ವ : ಈಗ ಬರೊದಿಲ್ಲೋ ತಮ್ಮಾ ನನ್ನ ಗಂಡ ಹಸದಾನ.

ದೊಡ್ಡ ಅರಬ : ಹಸಿದರೆ ಏನು ಮಾಡುತ್ತಿದಿ ?

ಮಾಳವ್ವ : ಮಲಿ ಕುಡಿಸುತ್ತಿದ್ದೀನಿ.

ಸಣ್ಣ ಅರಬ :  ಏನು ! ಮಾಳವ್ವ ಆಯಿ ಚೇಷ್ಟಿ ಮಾಡುತ್ತಿಯೇನು ? ಬೇಗನೆ ಹೊರಗೆ ಬರುವಂತಾಕ್ಕಿಯಾಗು.

[ಹೊರಗೆ ಬರುವಳು]

ಮಾಳವ್ವ : ಯಾರೋ ತಮ್ಮಾ, ಯಾರ ನೀ ಖೂನೆ ಸಿಗುವಲ್ಲದಲ್ಲ.

ಸಣ್ಣ ಅರಬ :  ಏನೇ ! ಮಾಳವ್ವ ಆಯಿ ಗುರುತು ಸಿಗುವಲ್ಲದೇನು ?

ಮಾಳವ್ವ : ಹ್ಯಾಂಗ ಖೂನ ಸಿಕ್ಕಿತು ತಮ್ಮಾ, ಕಣ್ಣು ಕಾಣುವದಿಲ್ಲ. ತಲಿ ಬೆಳ್ಳಗ ಆಗ್ಯಾದ ಹಲ್ಲ ಬಿದ್ದಾವ, ಮಂದಿ ಮಾರಿ ಮಂಜ ಮಂಜ ಹರಿತದ. ನೋಡೊ ತಮ್ಮಾ ಯಾರ ಮಗನೋ ಯಪ್ಪ ನೀ ?

ಸಣ್ಣ ಅರಬ :  ಏನೇ ! ಮಾಳವ್ವ ಆಯಿ ಹಿಂದಕ್ಕೆ ನಮ್ಮ ತಂದೆ ಉದ್ರಿ ವಸೂಲಿಗೆ ಬಂದು ನಿನ್ನ ಮನಿಯಲ್ಲಿ ಇರುವಾಗ ನಾನು ಅವನ ಹಿಂದಿಂದ ಬರತ್ತಿದ್ದಿಲ್ಲೇನು ?

ಮಾಳವ್ವ : ಏ…… ಏ….. ಏ….. ಏ…… ಅವನ ಮಗನಾ ನೀ….. ನನಗೆ ಖೂನ ಸಿಕ್ಕಿಲ್ಲಲ್ಲೊ ತಮ್ಮಾ. ದೊಡ್ಡಂವಾ ಆಗಿದಿಯಲ್ಲಾ ನೀ ಸಣ್ಣಾವ ಇದ್ದೆಪ್ಪ ನನ್ನ ಮಗ್ಗಲಾಗೆ ಮಕ್ಕೋತಿದ್ದಿ. ಇನಾ ಆದರೂ ನನ್ನ ಮಗ್ಗಲು ಭಣ ಭಣ ಆಗತ್ತಾದೊ ತಮ್ಮಾ ನೀ ಇಲ್ಲದಕ್ಕ….. ಯಾವಾಗ ಬಂದ್ರಿಯಪ್ಪ ಇಲ್ಲಿಗಿ. ಯಾಕ ಬಂದಿರಿ ಬೇಗನೇ ಹೇಳುವಂತವರಾಗಿರಿ.

ಸಣ್ಣ ಅರಬ : ಏನೇ ! ಮಾಳವ್ವ ಆಯಿ ಇದೇ ಊರಲ್ಲಿ ಬಾವಿ ಮೇಲೆ ಕುಳಿತು ನಮ್ಮ ಅಣ್ಣನ ಕಣ್ಣಿಗೆ ಒಂದು ಹೆಣ್ಣು ಕಂಡು ಭಯಾ ಆಗಿರುವದು.

ಮಾಳವ್ವ : ನನಗೇನ ಮಾಡ ಅಂದ್ಯಪ್ಪ ? ಆದರ ಆಗಿರಬೇಕು.

ದೊಡ್ಡ ಅರಬ :

ಹೆಣ್ಣೊಂದು ಕಂಡೆನೋ ನಾಜೂಕಾ
ಅದಕ್ಕಾಗಿ ಬಂದೇವ ಇಲ್ಲಿತನಕ
ಸಾಂಬ ಹರಹರ ಮೆಚ್ಚವೆ ನಾರಿ ಜೋಕಾ
ಕೂಡಿಸಿ ಕೊಡಬೇಕೋ ಜೀ…… ಜೀ…… ರಾ ॥1 ॥

ಆಕಿ ಇರುವದು ಠಿಕಾಣಿ ಕೇಳ ಠೀಕಾ
ರಾಮಶೆಟ್ಟಿ ಸಾಹುಕಾರನ ಮಂದಿರಕಾ
ನೀನು ಬೆಂಕಿ ನೆವನ ಮಾಡಿ ಹೋಗು ಅಲ್ಲಿ ತನಕಾ
ಕೇಳ ಮನ ಪಾಕಾ ಜೀ…… ಜೀ…… ರಾ…… ॥2 ॥

ಹೊಟ್ಟಿಗ ಬೇಡ ಕೊಡತ್ತಿನಿ ಅನುಮಾನ ಯಾಕಾ
ನೂರ ರೂಪಾಯಿ ಸೀರಿ ತಗೋ ಉಡಲಾಕಾ
ನೀನು ಉಟ್ಟು ತೊಟ್ಟು ಜೋಕ ಹೊಡಿಯ ಮುಪ್ಪಿನ ಕಾಲಕಾ
ನಮ್ಮದು ದೇಖರೇಕಾ ಜೀ…… ಜೀ…… ರಾ……. ॥3 ॥

ಏನೇ ! ಮಾಳವ್ವಾಯಿ ನಾನು ನನ್ ತಮ್ಮಾ ಕೂಡಿ, ಆ ಬಾವಿಯ ಮೇಲೆ ಕುಳಿತು ಫರಾಳ ಮಾಡುವಾಗ, ಅವಳು ಬಾವಿ ನೀರಿಗೆ ಬಂದಿದ್ದಳು ನೋಡು. ಅವಳನ್ನು ನೋಡಿ ನನ್ನ ಮನಸ್ಸು ಮೆಚ್ಚಿ ಹುಚ್ಚ ಆಗಿರುವದು. ಆದರೆ ಅವಳನ್ನು ಕೂಡಿಸಿ ಕೊಡಬೇಕು ಮಾಳವ್ವಾಯಿ.

ಮಾಳವ್ವ : ಏನೋ ! ತಮ್ಮಾ ಅದೆಲ್ಲಾ ಖರೇ…… ಆಕೆ ಯಾರು, ಏನು ಆಕಿ ಹೆಸರ ? ಆಕಿನ ಖೂನಾ ? ಗುರ್ತಾ ? ಆಕಿ ಎಲ್ಲಿ ಇರತ್ತಾಳ ? ನಾ ಯಾರ ಮನಿಗಂತ ಹೋಗಲ್ಯಾ ತಮ್ಮಾ.

ಸಣ್ಣ ಅರಬ :  ಏನು ? ಮಾಳವ್ವಾಯಿ ಆಕಿಯಿರುವ ಮಂದಿರವು ಛಂದದಿಂದೆ ಹೇಳುವೆನು. ಇತ್ತ ಕಡೆಗೆ ಬರುವಂತಾಕಿ ಯಾಗು.

ಮಾಳವ್ವ : ಹ್ಞೂಂ ! ಹೇಳಪ್ಪ ಹೇಳು.

ಸಣ್ಣ ಅರಬ :  ಏನು, ಮಾಳವ್ವಾಯಿ ಅವಳು ಇರುವ ಸ್ಥಳ ರಾಮಶೆಟ್ಟಿ ಸಾಹುಕಾರನ ಮನೆಯಲ್ಲಿ ಇರುವದು. ಆದರೆ ನೀನು ಹೋಗಿ ನಮ್ಮ ವೃತ್ತಾಂತವನ್ನು ಅವಳಿಗೆ ಹೇಳು. ಅವಳ ಮನಸ್ಸು ಕರಗುವಂತೆ ಮಾಡಬೇಕು. ಬೇಗನೆ ಹೋಗಿ ಬರುವಂಥವಳಾಗು.

ಮಾಳವ್ವ : ಛೇ…… ಛೇ….. ಛೇ….. ಛೇ….. ಛೇ…… ಅದೇನು ಕೂಲಿಕಾರನ ಮನಿಯೇನೋ ತಮ್ಮಾ. ನಮ್ಮ ಊರಿಗೆ ದೊಡ್ಡ ಸಾಹುಕಾರ. ಮರ್ಯಾದೆ ಮನೆತನ, ಪರ ಮನುಷ್ಯರನ್ನು ಒಳಗ ಬರುಗೂಡದಿಲ್ಲ. ನನ್ನ ಕೈಲಿ ಸರ್ವತಾ ಆಗಲಾರದು. ಮತ್ಯೇನಾರ ಹೇಳು ಇದಕ್ಕ ಬಿಟ್ಟು.

ದೊಡ್ಡ ಅರಬ : ಏನು ! ಮಾಳವ್ವಾಯಿ ಒಲ್ಲೆ ಅನುಬಾರದು. ನಿನ್ನ ಹೊರ್ತು ಈ ಕಾರ್ಯ ಯಾರಿಂದಲು ಆಗಲಾರದು. ಬೇಕಾದರೆ ಡಾಗ ಡಾಗಿಣ ಬೇಕಾದ್ದು ಬೇಡು. ಕುಡುವೆನು. ಬಂಗಾರದ ಸರಗಿ ಹಿಡಿ ಕುಡುವೆನು.

ಸಣ್ಣ ಅರಬ :  ಏನು ! ಮಾಳವ್ವಾಯಿ ಅದನಷ್ಟೇ ಅಲ್ಲಾ. ನಿನ್ನ ಹೊಟ್ಟಿಗೆ ಬೇಕಾದ್ದು ಬೇಡು. ನೂರು ರೂಪಾಯಿ ಸೀರಿ ಕೊಡುವೆನು. ಇರಲಿ ನಮ್ಮ ಖೂನಾ ಮುಪ್ಪಿನ ಕಾಲಕ್ಕೆ ಹತ್ತ ರೂಪಾಯಿ ಕುಬಸಾ, ಮತ್ತು ನಿನ್ನ ಹೊಟ್ಟಿಗೆ ಜೋಳ ಗೋದಿ ಬೇಕಾದದ್ದು ಕೊಡುವೆನು. ನೀನು ಅವಳ ಮನಿಗೆ ಬೆಂಕಿ ನೆವನ ಮಾಡಿಕೊಂಡು ಹೋಗಿ, ಏನಾದರೂ ಅವಳಿಗೆ ಬೋಧಾ ಹೇಳಿ ನಮ್ಮ ಕಾರ್ಯ ಕೈಗೂಡಿಸುವಂತೆ ಮಾಡು ಬೇಗನೆ ಹೋಗು.

ಮಾಳವ್ವ : ಏನೋ, ತಮ್ಮಾ ನೂರು ರೂಪಾಯಿ ಸೀರಿ ಕುಡತ್ತಿರಿ. ಔವಾವಾ ಅವ್ವಾ.

ಸಣ್ಣ ಅರಬ :  ಅಹುದು. ಆಯಿ ನೀನು ಬೇಡಿದ್ದು ಕೊಡುವೆವು.

ಮಾಳವ್ವ :

ಬ್ಯಾಡರಪ್ಪ ಪರ ನಾರಿ ಸಂಗ ಹೀನಾ
ಸೀತಾಗಾಗಿ ಲಂಕಾ ಸುಟ್ಟುಕೊಂಡ ರಾವಣ
ಭಸ್ಮಾಸುರ ಭಸ್ಮ ಆದ ಉಳಿಲಿಲ್ಲ ಖೂನಾ
ಕೊಟ್ಟ ವಾಲಿ ಪ್ರಾಣಾ ಜೀ….. ಜೀ…… ರಾ ॥1 ॥

ಸೂಂಬ ನಿಸೂಂಬ ಎಂದ ದೈತ್ಯರನಾ
ಪಾರ್ವತಿ ಮೇಲೆ ಮನಸ್ಸಿಟ್ಟು ಹೋಯಿತ್ತು ಗೋಣಾ
ನರಕಾಸುರ ಹೋಗಿಬಿದ್ದ ಚಿರಕಿ ಘಾಣಾ
ಅದರಾಗ ಇಲ್ಲೋ ಮಾನಾ ಜೀ….. ಜೀ….. ರಾ ॥2 ॥

ಗೌತಮ ಮುನಿ ಶಾಪಕ್ಕಾಗಿ ಇಂದ್ರ ಯೋನಿ ವರ್ಣ
ದ್ವಾಪಾರದಲ್ಲಿ ಹೇಳಲ್ಲೇನೊ ದುರ್ಯೋಧನ
ಭೀಮ ಹೇಳಿ ಕೇಳಿ ಸೀಳಲಿಲ್ಲೇನೊ ಕೀಚಕನಾ
ಹೆಣ್ಣ ಎಂಬ ಕೆಟ್ಟ ಹುಣ್ಣಾ ಜೀ….. ಜೀ….. ರಾ ॥3 ॥

ಏನರೋ ತಮ್ಮಾ ಜರಾ ನನ್ನ ಮಾತು ಕೇಳತ್ತೀರಿ ?