ಬಡವ : ಏನು ಡಂಗುರ ಇರುವದು ತಂದಿಯವರೇ ?

ಹೂಗಾರ : ಅಲ್ಲೋ ! ಇಷ್ಟೊತ್ತಿನ ತನಕ ಊರ ತುಂಬಾ ಒದರಾಡಿ ಸಾಕಾಯಿತ್ತು. ಈಗ ಬಂದಿನೀ ನಾ ಒದರಾಗ ನೀ ಸತ್ತಿದ್ದೇನೊ ?

ಬಡವ : ಹಾಂಗಲ್ ! ತಂದಿಯವರೇ ನೀವು ಅಂದಿದ್ದು ನಾನು ಕೇಳಲಿಲ್ಲ. ಏನಿರುವದು ಹೇಳುವಂತವರಾಗಿರಿ ತಂದೇ.

ಹೂಗಾರ : ಥೂತ್ ! ಅವನೌನ ಹಡಾ. ಭಲೆ ಹತ್ತಿತ್ತಪ್ಪ ಇಂದು. ಮೂರು ಗೇಣ ಪಗಾರ ಇಲ್ಲ. ಮೂರು ತಾಸು ಒದರಾದು. ಅಲ್ಲೋ ! ನಮ್ಮೂರಾಗ ರಾಮಶೆಟ್ಟಿ ಸಾಹುಕಾರ ಏಳು ದಿವಸ ಅನ್ನಛತ್ರ ಇಟ್ಟಾನ. ಹೋಗಿ ಉಂಡು ಬಾ. ಪಾಪ ಹಸದಂಗ ಕಾಣತೈತಿ.

ಬಡವ : ಹೌದು, ತಂದೆಯವರೇ ಇಂದಿಗೆ ಮೂರು ದಿವಸಗಳಾದವು. ನೀರು ಸಹ ಕುಡಿಯಲಿಲ್ಲ. ಹಸಿವಿನಿಂದ ಬಳಲುತ್ತಿದ್ದೇನೆ. ಆ ಶ್ರೀಮಂತರ ಮನೆ ತೋರಿಸಿರಿ ತಂದೆಯವರೇ.

ಹೂಗಾರ : ಅಬ್ಬಬ್ಬಾ ! ಭಲೆ ಹತ್ತಿತ್ತಪ್ಪ ಇದು. ರಸ್ತಾ ಕೇಳಿಕೊಂತ ಹೋಗಲ್ಲಾ; ಯಾರಾದರೂ ಹೇಳತಾರ.

ಬಡವ : ಹಾಗಲ್ಲ ! ತಂದಿಯೇ ತನಗೆ ನೀಡುವ ಶಕ್ತಿ ಇಲ್ಲದಿದ್ದರೂ ನೀಡುವವರ ಮನೆ ತೋರಿಸಬೇಕು ತಂದೆ. ಬೇಗನೆ ಅವರ ಮನೆ ತೋರಿಸಿರಿ. ನಿಮಗೆ ಪುಣ್ಯ ಬರುವದು ಸ್ವಾಮಿ.

ಹೂಗಾರ : ಥೂ ! ಇವನೌವನ ಹಡಾ. ಪೂಣೆ ಮುಂಬಯಿನಾಡು, ಊರೆಲ್ಲ ತಿರಗಿದರೂ ನ್ಯಾರಿ ರೊಟ್ಟಿ ಸಿಗುವಲ್ಲದು. ಇವನೌವನ ಕಿರಿ ಕಿರಿ. ಇಲ್ಲಿ ಬಾ ಇಲ್ಲಿ ಮುಂದಕ. ಅಲ್ಲೊ ಲ್ಲೊ ಲ್ಲೊ ಲ್ಲೊ ಕಾಗಿ ಕೂತದ ನೋಡು ಕಾಗಿ, ಅದೇ ಅವರ ಮನೆ, ನೆಟ್ಟಗೆ ಹೋಗು ಈ ಸಂದಿ ಹಿಡಿದು. ದಾರಿ ತಪ್ಪೀತು, ನಡುವಿನ ಸಂದೀನೆ ಹಿಡಿ ನೆಟ್ಟಗ.

ಬಡವ : ಹಾಗಲ್ಲಾ ! ತಂದಿಯವರೇ, ಹಸಿದವರ ಸುದ್ದಿ ಉಂಡವರೇನು ಬಲ್ಲರಂತೆ ? ಹಾಗೆ ಮಾಡಬೇಡಿ ತಂದಿ…. ಆ…. ಕಾಗೆ ಎದ್ದು ಹೋದ ಮೇಲೆ ನಾನೆಲ್ಲಿ ಹೋಗಬೇಕು ತಂದಿಯೇ?

ಹೂಗಾರ : ನಿಂತು ಶಂಕಾ ಹಚ್ಚು. ಅದರ ಬೆನ್ನ ಹತ್ತು. ಹತ್ತಿ ಸಾಕಾಗೆದ ಅದು ಎದ್ದು ಒದ್ದರೆ ನಾ ಏನು ಮಾಡಲಿ ?

ಬಡವ : ಹಾಗಲ್ಲ ! ತಂದೆ ಹಸಿವಿನಿಂದೆ ನನಗೆ ನಡಿಯುವ ತ್ರಾಣಿಲ್ಲ. ಆ ದಾನಶೂರನ ಮನೆಗೆ ವೈದು ಬಿಟ್ಟು ಬಂದರೆ ನಿಮಗೆ ಕೋಟಿ ಪುಣ್ಯ ಬರುವದು. ತಂದಿಯವರೇ ತಡಮಾಡದೆ ಕೈಡಿದು ಕರಿದುಕೊಂಡು ಹೋಗುವಂತವರಾಗಿರಿ.

[ಕರೆದೊಯ್ದು ಮನೆ ತೋರಿಸುವನು]

ಬಡವ :

ನಮೋ ನಮೋ ನಮಿಸುವೆ ಸಾಹುಕಾರ
ನಿಮ್ಮ ವಾರ್ತೆ ದೂರತನಕ ಜಾಹೀರ
ಸುದ್ದಿ ಕೇಳಿ ತುರ್ತ ಬಂದೆವು ಭಿನ್ನಘೋರ ॥1 ॥

ಸತಿ ಪತಿ ಕೂಡಿ ನಾವು ಇಬ್ಬರಾ
ನಿಮ್ಮ ಮಂದಿರದಲ್ಲಿ ಆಗಿ ನೌಕರದಾರ
ಹೊಟ್ಟಿಗೆ ಹಾಕಿ ಬುಟ್ಟಿ ಹೊರಸಿ ಮಾಡಿ ಜೋರಾ ॥2 ॥

ತಗಲ ಇಲ್ಲದೆ ಹಗಲ ರಾತ್ರಿ ದಗದ ಮಾಡುವರಾ
ಒಗದೇವು ನಿಮ್ಮ ಸೀರಿ ಧೋತರಾ
ಹೊಟ್ಟಿ ಮಕ್ಕಳಂತೆ ತಿಳಿಯಿರಿ ಚತುರಾ ॥3 ॥

ಉಪ್ಪು ಉಣ್ಣಸಿನವರು ಅವರು ಹೆಚ್ಚಿನವರು
ಧಂದೆ ಕಲಿಸಿದಾವ ತಂದೆ ರಾಮಚಂದ್ರ
ಬುದ್ಧಿ ಕೊಟ್ಟು ಕಾಯಾವಾ ಗೈಬಿ ಫೀರಾ ॥4 ॥

ನಮೋ, ನಮೋ ನಮಸ್ಕರಿಸುವೆನು ಸಾಹುಕಾರ.

ಸಾಹುಕಾರ : ಆಶೀರ್ವಾದ ಆಗಲಿ ! ಏಳಪ್ಪ ಮಗ ನೀನಾರು ? ನಿನ್ನ ಹೆಸರೇನು ? ನಿನ್ನ ಮುಖ ಚಿನ್ನವು ಬಾಡಿರುವದೇಕೆ?

ಬಡವ : ಹೇ ! ತಂದೆಯವರೇ ನಿಮ್ಮ ವಾರ್ತೆ ಕೀರ್ತಿಯನ್ನು ದೂರಿನಿಂದ ಕೇಳಿ ಅನ್ನದ ಸಲವಾಗಿ ನಡಿಯುವ ತ್ರಾಣವಿಲ್ಲದೆ ಬೀಳುತ್ತ ಏಳುತ್ತ, ಹಂಬಲಿಟ್ಟು ಇಲ್ಲಿಗೆ ಬರೋಣವಾಯಿತು ಸಾಹುಕಾರರೇ.

ಸಾಹುಕಾರ : ಆಹಾ ! ಹೆಂಥ ಶಬ್ದವನ್ನು ಕೇಳಿದೆನಲ್ಲಾ. ಹೇ ! ಪ್ರಭುವೇ ಜಗತ್ತಿನಲ್ಲಿ ಮಾನವ ಜನ್ಮಕ್ಕೆ ಬಂದು, ಎಲ್ಲರಿಗೆ ಒಂದೇ ರೂಪ ಇಡಬಾರದೆ ? ಹೇ ಸ್ವಾಮಿ ನಿಮ್ಮ ಆಟ ಹರಿಹರರಿಗೆ ಅಸಾಧ್ಯ. ಈ ಬಡವನ ವಾಕ್ಯವನ್ನು ಕೇಳಿ, ಎನ್ನ ಆತ್ಮದಲ್ಲಿ ತಳಮಳ ಆಗ ಹತ್ತಿದೆ. ಇರಲಿ, ಅಪ್ಪ ಮಗನೆ ಹೋಗು ನನ್ನ ಮನೆಯಲ್ಲಿ ಅನ್ನಛತ್ರವನ್ನು ಇಟ್ಟಿದ್ದೇನೆ. ಹೋಗಿ ಹೊಟ್ಟಿ ತುಂಬಾ ಉಂಡು ಬಾ. ಮತ್ತು ನಿಮ್ಮ ಸಂಗಡ ಯಾರಾದರೂ ಇದ್ದರೆ, ಕರೆದುಕೊಂಡು ಬಂದು ಊಟ ಮಾಡಪ್ಪ.

[ಊಟಕ್ಕೆ ಹೋಗುವರು]

ಆಹಾ ! ಶಿವ ಶಿವಾ…. ನಿಮ್ಮ ಕಾರ್ಯವು ಹೆಂಥಾ ಕಾರ್ಯವು. ಶ್ರೇಷ್ಠ ಅನಿಸುವವನು ನೀನೆ, ಕನಿಷ್ಟ ಅನಿಸುವವನು ನೀನೆ. ಬಡವ ಅನಿಸಿದವನು ನೀನೆ ಬಲ್ಲಿದ ಅನಿಸಿದವನು ನೀನೆ. ಈ ಬಡವನ ಸ್ಥಿತಿಯನ್ನು ನೋಡಿ ನನ್ನ ಮನಸ್ಸು ಕರಗಿ ಮರಗುತ್ತಿದೆ. ಈತನಿಗೆ ನನ್ನ ಮಂದಿರದಲ್ಲಿಯೇ ಇಟ್ಟುಕೊಳ್ಳಬೇಕು. ಊಟ ಮಾಡಿಬರಲಿ.

ಓಹೋ ! ಬಂದೇಬಿಟ್ಟನಲ್ಲಾ. ಅಪ್ಪ ಬಡಬಾಲಕನೆ,

ಬಡವ : ಹಾಯ್ ! ತಂದೆಯವರ ಏನು ಇರುವದು ?

ಸಾಹುಕಾರ : ಅಪ್ಪ ಮಗನೇ, ನಿನ್ನ ಮುಖ ಚಿನ್ನ ನೋಡಿ ಬೆಣ್ಣಿಯಂತೆ ನನ್ನ ಮನ ಕರಗಿ, ನನ್ನ ಮನೆಯಲ್ಲಿ ಇರು ಅಪ್ಪ ಮಗನೆ.

ಬಡವ : ಓಹೋ ! ಸಾಹುಕರರೇ ಬೇಡಿಕೊಂಡ ದೇವರು ಎದರಿಗೆ ಬಂದಂತಾಯಿತ್ತಲ್ಲ. ಸಾಹುಕಾರರೇ ನಮ್ಮ ಇಬ್ಬರ ಸತಿ : ಪತಿಗೆ ಹೊಟ್ಟಿಗೆ ಅನ್ನ ಮೈಗೆ ಬಟ್ಟೆಕೊಟ್ಟರೆ ಹಗಲು ರಾತ್ರಿ ನಿಮ್ಮ ಆಳಾಗಿ ದುಡಿಯುವೆವು.

ರತ್ನಾಬಾಯಿ : ಹೌದು ತಂದೆಯವರ ನಿಮ್ಮ ಮನಿಯಲ್ಲಿ ನಾವು ಇಬ್ಬರು ತೊತ್ತಾಗಿ, ಹೊತ್ತು ಹೊತ್ತಿಗೆನಿಮ್ಮ ನಾಮವನ್ನು, ಸ್ಮರಿಸುತ್ತಾ, ನಿಮ್ಮ ಬಟ್ಟೆ ಬರೆಗಳನ್ನು ಒಗೆದು ಹಾಕಿ, ಕಸ ಮುಸರೆಯನ್ನು, ಸಿದ್ದ ಪಡಿಸುವೆನು. ನಮಗೆ ಅನ್ನ ಹಾಕಿ ಜೋಕಿ ಮಾಡು ತಂದಿಯೇ.

[ನಮಸ್ಕರಿಸುವಳು]

ಬಡವ : ಹೌದು ! ತಂದಿಯೇ, ಉಪ್ಪು ಉಣಿಸಿದವರ ಉಪಕಾರ ನೆನಪಿಟ್ಟು ನಡೆಯುವ ಕರ್ತವ್ಯ ನಮ್ಮದಾಗಿದೆ. ತಂದಿಯೇ ಕಾಪಾಡು ಕಾಪಾಡು.

[ನಮಸ್ಕರಿಸುವನು]

ಸಾಹುಕಾರ :

ಯಾರ ನಿಮ್ಮ ಗುರುತೇನು ಇರುವದು ಯಾವೂರು
ಸರ್ವರಿಗೆ ಹುಟ್ಟಿಸಿದವ ಶಂಕರ
ಯಾರಿಗೇನು ತಿಳಿಯಲಿಲ್ಲೊ ಅಹಂಕಾರ ॥1

ಹಮ್ಮು ಆಡಿ ಕೆಟ್ಟಹೋಯ್ತು ಬ್ರಹ್ಮನ ಶಿರಾ
ನನ್ನ ಮಂದಿರದಲ್ಲಿ ಇರವಿ ಬಿನ್ನಘೋರಾ
ವ್ಯಾಳ್ಯಾ ಬಂದಂಗ ಬಾಳೆ ಮಾಡುನ ಎಲ್ಲರಾ ॥2 ॥

ಘಟ್ಟಿಯಾಗಿ ಕಟ್ಟಿಸಿಕೊಡುವೆನು ಮೇಲ್ ಮಂದಿರ
ನಿಮ್ಮನ್ನು ಕಂಡ ಕಮಲದಲ್ಲಿ ಕರುಣ ಪೂರಾ
ಬಡವನ ಮನೆಗೆ ಬಂದಾಂಗ ಆಯಿತ್ತೊ ಭಾಗ್ಯದದೇವರಾ ॥3 ॥

ನಮ್ಮದು ನಿಮ್ಮದು ವಿಶ್ವಾಸವಿದ್ದರೆ ಹೇಳುವರ ಯಾರಾ
ಪರೋಪಕಾರದಲ್ಲಿ ಪರಮೇಶ್ವರಾ
ರಾಚು ಮಾರುತಿ ಹೇಳ್ಯಾರ ಹಿಂಗ ಕವಿ ಸಾರ ॥4 ॥

ಹೇ ! ಬಡಬಾಲಕನೇ, ನೀವು ಯಾರು ? ಯಾವ ಊರು ? ಇಲ್ಲಿಗೆ ಬಂದ ಕಾರಣವೇನು ?

ಬಡವ : ತಂದೆಯವರೇ, ನಮ್ಮ ಊರು ಸುರಪುರಗ್ರಾಮ. ಮೂರು ವರ್ಷ ಬರ ಬಿದ್ದ ಕಾಲಕ್ಕೆ ಅನ್ನ ಹೀನರಾಗಿ, ನಿಮ್ಮ ಅಡಿಗೆ ಬರೋಣವಾಯಿತು ತಂದಿಯೇ. ಮತ್ತು ನನ್ನ ಹೆಸರು ಬಡವ ಬಸವಲಿಂಗಾ ಇರುವದು. ನನ್ನ ಪತ್ನಿಯ ಹೆಸರು ರತ್ನಾಬಾಯಿ ಇರುವದು. ನಾವು ಇಬ್ಬರು ನಿಮ್ಮ ಮಕ್ಕಳೆಮದು ತಿಳಿದು ಅನ್ನ ಹಾಕಿರಿ ತಂದೆಯೇ.

ಸಾಹುಕಾರ : ಹೇ ! ಮಗನೆ ನನ್ನ ಮನೆಯಲ್ಲಿ ನೀವಿಬ್ಬರು ಚನ್ನಾಗಿ ಇರುವಂಥವರಾಗಿರಿ.

ಬಡವ :

ಒಳ್ಳೆ ಪುಣ್ಯ ಪುರುಷರಾದಿರಿ ತಂದೆ ಹಿಡದಿರಿ ಆಧಾರ
ನಿಮ್ಮ ಮಕ್ಕಳಿಗೆ ಯಶ ಬರಲಿ ಒಂದಕ್ಕ ನೂರಾ
ಬಡವನ ಹರಕಿ ಮುಟ್ಟಿ ಪೊಡವಿಗೆ ಆಗಿರಿ ಧೀರಾ ॥1 ॥

ಕಾಡೊ ಕಾಲ ತಪ್ಪದು ನಮಗ ಕರ್ಮದ ಜೋರಾ
ಹಿಂದಕ ತಿರಗಿ ತಿರಗಿ ಬಂದೆವೋ ದೇಶಾ ಸಂಚಾರ
ನಿಮ್ಮ ಪಾದ ಪುಣ್ಯದಿಂದ ಆಗಲಿ ಉದ್ಧಾರ ॥2 ॥

ಎಂದ ಮುಟ್ಟಬೇಕೊ ನಿಮ್ಮ ಉಪಕಾರಾ
ಪರೋಪಕಾರದಲ್ಲಿ ಪರಮೇಶ್ವರಾ
ರಾಚು ಮಾರುತಿ ಹೇಳ್ಯಾರ ಹಿಂಗ ಕವಿಸಾರ ॥3 ॥

ಹೇ ! ಪುಣ್ಯಶಾಲಿ ಧನವಂತರೇ ನೀವು ಆಡುವ ನುಡಿಯು ಎನ್ನ ಹೃದಯ ಕಮಲದಲ್ಲಿ ಕೋಮಲತರವಾಗಿ ಉಳಿಯಿತು. ಆದರೆ ಈ ಬಡವನಿಗೆ ನೀವು ಹಿಡಿದು ಪಡೆದ ಪುಣ್ಯವನ್ನು ನನ್ನ ಒಂದು ನಾಲಿಗೆಯಿಂದ ವರ್ಣಿಸಲಾಗದು. ತಂದೆಯವರೇ ನೀವು ಮಾಡಿದ ಧರ್ಮಕ್ಕೆ ಆ ಪರಮೇಶ್ವರನು ನಿಮ್ಮನ್ನು ಕಾಪಾಡಲಿ ತಂದೆಯವರೇ ಕಾಪಾಡಲಿ.

ರತ್ನಾಬಾಯಿ : ಆಹಾ ! ತಂದೆಯವರೇ ಬಂಧು ಬಳಗವಿಲ್ಲದೆ ಬಂದ ನನ್ನಂಥ ಅನಾಥಳಿಗೆ ಆಶ್ರಯವನ್ನು ಕೊಟ್ಟಿದ್ದೀರಿ. ಉಪಕಾರ ಎಂದು ಮುಟ್ಟಿಸಬೇಕು ತಂದಿಯೇ.

ಸಾಹುಕಾರ :

ತಂಗಿ ಕೇಳೆ ರತ್ನಾಬಾಯಿ ರತ್ನದ ಹಾರ
ಜತನ ಮಾಡಿಕ್ಕೊರಿ ನಿಮ್ಮ ಸಂಸಾರ
ಪತಿ ಸೇವೆಯಲ್ಲಿ ಇರು ನಿರಂತರಾ ॥1ನ್ನ

ಧಂದಿವಿಲ್ಲದೆ ಚಂದಾಗಿ ಉಣ್ಣರಿ ಬಿನ್ನ ಘೋರಾ
ಅನ್ನ ಅರವಿ ಕೊಟ್ಟು ಮರತಾನ ದೇವರಾ
ದೇಕರೇಖ ಇರಲಿ ನಮ್ಮ ಮನಿ ಮಾರ ॥2 ॥

ದೇಶದೊಳಗೆ ವಾಸುಳ್ಳ ಜಗ ಮೈಂದರ್ಗಿ ಊರಾ
ನಟ್ಟ ನಡವೆ ನೆನೆದಾರ ಸ್ವಾಮಿ ಗೈಬಿ ಫೀರಾ
ಹೂವಿನ ಹಾರ ಹಾಕಿ ಮಾಡುವೆ ನಮಸ್ಕಾರ ॥3 ॥

ಅಮ್ಮಾ ! ಮಗಳೆ ರತ್ನಾಬಾಯಿ ನಿನ್ನ ಗುಣವನ್ನು ನೋಡಿ ಎನ್ನ ಮನಸ್ಸಿಗೆ ರತ್ನದಂತೆ ಹೊಳೆಯುವದು. ಆದರೆ ಮಗಳೆ ಇದು ಎಲ್ಲಾ ನನ್ನ ಸಂಸಾರ ಇಂದಿಗೆ ನಿನ್ನದಾಯಿತು. ಆದರೆ ನೀನು ಪತಿಪಾದ ಸೇವೆಯಲ್ಲಿ ಕಾಲಕಳಿವಂತವಳಾಗಮ್ಮ ಮಗಳೆ.

ರತ್ನಾಬಾಯಿ : ಆಗಲಿ ತಂದೆಯವರೇ ನೀವು ಹೇಳಿದಂತೆ ನನ್ನ ಪತಿ ಸೇವೆಯಲ್ಲಿಯೇ ಕಾಲ ಕಳಿಯುವೆನು. [ನಮಸ್ಕರಿಸುವಳು]

ಸಾಹುಕಾರ : ಎಲೋ ! ಗುಮಾಸ್ತ.

ಗುಮಾಸ್ತ : ಯಾಕರಿ ಎಪ್ಪಾ, ಯಾಕರಿ ?

ಸಾಹುಕಾರ : ಏನು ಮಾಡತೋ.

ಗುಮಾಸ್ತ : ನನ್ನ ಹೆಂಡತಿ ಹಡಿಯಲಾಗ್ಯಾಳ, ಟೊಂಕ ಹಿಡಿದಿನರಿ.

ಸಾಹುಕಾರ : ಏನೋ ! ಗುಮಾಸ್ತ ಚೇಷ್ಟಿ ಮಾಡತೇನೋ ?

ಗುಮಾಸ್ತ : ಬಂದೆನರಿ ಎಪ್ಪ ಯಾಕರೆಪ್ಪ ಯಾಕ ಕರಿದ್ರಿ.

ಸಾಹುಕಾರ : ಇಷ್ಟ ಹೊತ್ತಿನ ತನ ಏನ ಮಾಡುತ್ತಿದ್ದಿ ಗುಮಾಸ್ತ.

ಗುಮಾಸ್ತ : ಅಲ್ಲಾ ನಿಮ್ಮ ಖಾತೆ ಕೀರ್ದಿಯಲ್ಲಾ ಕಿತ್ತಿ ಬುಟ್ಟಿಯಾಗ ತುಂಬಿ ತಿಪ್ಪಿಯಾಗ ಚೆಲ್ಲಿ ಬಂದೆ. ಅವನೌನ ಹೆಗ್ಗಣ ಕೆದರಾಕ ಹತ್ತಿದ್ದು ಸೂಳೆಮಗನು.

ಸಾಹುಕಾರ : ಏನೋ ! ಗುಮಾಸ್ತ ಚೇಷ್ಟಿ ಮಾಡತೇನೋ ?

ಗುಮಾಸ್ತ : ಅಲ್ಲಾ ! ಹೆಂಥ ಮಾತರಿ ಸಾಹುಕಾರ, ಚೇಷ್ಟಿ ನಾ ಯಾಕ ಮಾಡಲಿ. ಸುಮ್ಮನ ಸ್ವಲ್ಪ ಥಟ್ಟೆ ಮಾಡದೆ. ಸಿಟ್ಟಿಗೆ ಬಂದರೇನು ? ನಾ ಬುಟ್ಟಿ ತುಂಬಾ ಕಾಗದ ಎಲ್ಲಾ ವೈಯಾಗ ಅವ್ವಾ ಅವರು ಬಂದು ಸಿಟ್ಟು ಮಾಡಿ, ಅದರಾನು ಒಂದು ತೊಡೆ ತೊಕ್ಕೊಂಡ ಒಯ್ದ ಒಳಗ ಹಾಯಕೊಂಡಾರ ಕೇಳರಿ ಬೇಕರಾ.

ಸಾಹುಕಾರ : ಏ ! ಮೂರ್ಖಾ.

[ಹೊಡಿಯಲಿಕ್ಕೆ ಹೋಗುವನು]

ಗುಮಾಸ್ತ : ಇಲ್ಲರಿ ಎಪ್ಪ ಇಲ್ಲರಿ ! ತಪ್ಪಾಯಿತು, ನಿಮ್ಮ ಕಾಲಿಗ ಬೀಳತ್ತೇರಿ ಎಪ್ಪ.

ಸಾಹುಕಾರ : ಎಲೋ ! ಗುಮಾಸ್ತ.

ಗುಮಾಸ್ತ : ಯಾಕರಿ ಎಪ್ಪ ?

ಸಾಹುಕಾರ : ನಮ್ಮ ಅಂಗಡಿಯಲ್ಲಿ ಹೋಗಿ, ಸೀರಿ ಕುಪ್ಪಸ ಮತ್ತು ಧೋತರ ರುಮಾಲದ ಗಳಿಗೆಯನ್ನು ತೆಗೆದುಕೊಂಡು ಬೇಗನೆ ಬಾ ಹೋಗು.

[ಗುಮಾಸ್ತ ಹೋಗುವನು]

ಹೇ ! ಸತಿಯಳೆ ಇತ್ತ ಕಡೆಗೆ ಬರುವಂಥವಳಾಗು. ಇಕೋ ನೋಡು ಇವರಿಬ್ಬರು ದಂಪತಿಗಳು. ಆ ರತ್ನಾಬಾಯಿಯು ನಿನ್ನ ಮಗಳು. ಈ ಬಡವ ಬಸವಲಿಂಗನು ನನ್ನ ಮಗ. ಇಂದಿಗೆ ನಮ್ಮ ಬಂಜಿತನವೇ ಹೊಯಿತು. ಈ ರತ್ನಾಬಾಯಿಗೆ ನೀನಿರುವ ಅರಮನೆಯಲ್ಲಿ ಒಯ್ದು ಹೆಣ್ಣು ಮಕ್ಕಳ ಪದ್ಧತಿಯಂತೆ ಸೀರಿ ಕುಪ್ಪಸಗಳನ್ನು ಉಡಿಸಿ ಬಂಗಾರದ ವಸ್ತು ಒಡವಿಗಳನ್ನು ಇಡಿಸಿ, ಉಣ ಬಡಿಸುವಂತವಳಾಗು ಬೇಗನೆ ಹೋಗು.

ಚಂದ್ರುಣಿದೇವಿ : ಅಮ್ಮಾ ! ರತ್ನಾಬಾಯಿ ನಡಿವಂಥವಳಾಗಮ್ಮ.

[ಐಯ್ಯರಿ ಮಾಡುವರು]

ಬಡವ :

ನಡಿ ಜಾಣಿ ನಡಿಹೋಗೊಣ
ಇಬ್ಬರು ಕೂಡಿ ಸುಖದಿಂದೆ ಕಾಲ ಕಳೆಯುವಣಾ ॥1 ॥
ಸಾಹುಕಾರನ ಮನೆಯಲ್ಲಿ ಚೆನ್ನಾಗಿ ದುಡಿಕೊಂಡು
ಅನ್ನ ಅರವಿ ಕಡಿಮೆ ಇಲ್ಲಾ ಬ್ಯಾಗ ದೌಡ ಹೋಗುನ ನಡಿ ॥2 ॥

ರತ್ನಾಬಾಯಿ :

ನಡಿ ಜಾಣ ನಡಿ ಹೊಗುನ ನಡಿ
ಇಬ್ಬರ ಕೂಡಿ ಸುಖದಿಂದ ಕಾಲ ಕಳೆಯುವಣ ॥1 ॥
ಸಾಹುಕಾರನ ಮನೆಯಲ್ಲಿ ತೊತ್ತಾಗಿ ದುಡಿದುಕ್ಕೊಂಡು
ವಸ್ತ್ರ ಒಡವಿ ಕಡಿಮೆಯಿಲ್ಲಾ ಬ್ಯಾಗ ದೌಡ ಹೋಗುಣ ॥2 ॥
ದೇಶದೊಳಗೆ ವಾಸುಳ್ಳ ಜಾಗ ಮೈಂದರ್ಗಿ ಗ್ರಾಮ
ಈಶ ಗೈಬಿ ಫೀರನ ಪಾದಕ ಎರಗುನ ॥3 ॥

ಅರಬರ ಸಭಾ

ದೊಡ್ಡ ಅರಬ : ಕ್ಯಾಯ ರಂಗ ಭರಾ ಹೈ ದುನಿಯಾಮೆ
ದುನಿಯಾಮೆ ದುನಿಯಾಮೆ ಭಗವಾನ್ ತುಮ್ಹಾರ ಸಾತಮೆ ॥1 ॥

ರಾಮ ಲಕ್ಷ್ಮಣ ವನಕೆ ವೀರಾ
ಹನುಮಾನ ತುಮಾರೆ ಸಾತೋಮೇ ॥2 ॥

ಮಹಾತ್ಮ ಗಾಂಧೀಜಿ ಬನಕೆ ವೀರ
ನೆಹರು ತುಮ್ಹಾರೆ ಸಾತೋಮೇ ॥3 ॥

ಆಯ್ ಅಲ್ಲಾ ಆಯ ಮೊಹವದು ರಸೂಲಲ್ಲಾ. ಕ್ಯಾ ತುಮಾರಿ ಕುದರತ್ ಹೈ. ಯಹ ಸಾರೆ ದುನಿಯಾ ತೇರಿ ಮಾಲೆ ಆತಿ ಹೈ. ವ್ಹಾಹಾ ವಾ ಕ್ಯಾ ಶ್ಯಾನ ಹೈ. ಕರಿಮ ಬಗರ ಹುಕುಮಕೆ ತೇರೆ ಏಕ ಪತಾ ಭೀ ಹಿಲ್ಲ ನಹಿ ಸಕತಾ. ವ್ಹಾ ವಾ ವಾ.

ಸಣ್ಣ ಅರಬ :

ರಾಮ ರಹೀಮ ನಾಮ ಹೈ ತೇರಾ
ತುಹೈ ಜಗಕಾ ಪಾಲನೆ ವಾಲಾ ॥1 ॥

ಹಿಂದು ಬೋಲತಾ ಹೈ ಹರಿಹರ ಭಗವಾನ
ಮುಸಲ್ಮಾನ ಲೆತಾ ಹೈ ಅಲ್ಲಾಕಾ ನಾಮ ॥2 ॥

ಯಹ ಖುದಾ ಕ್ಯಾ ಶಾನ ಹೈ, ಕಿತನೆ ನಾಮೆ ತುಜಪೆ ಫೀದಾ ಹೈ. ಭಗವಾನ್ ಭೀ ತೇರಿ ನಾಮ ಹೈ. ಶಿವ ಶಿವಾ ಭೀ ತೇರಾ ನಾಮ ಹೈ. ಔರ ಅಲ್ಲಾಲ್ಲಾ ಭೀ ತೇರಾ ನಾಮ ಹೈ. ಲೇಕಿನ ಸಬಕಾ ಅಲ್ಲಾ ತುಹಿ ಹೈ.

ಪ್ರಚಾರಿಕಾ : ಅಲ್ಲಪ್ಪ ! ಅಲಾಯಿ ಪಂಜಿಯಂತೆ ಹಿಂಗ ಯ್ಯಕ ಕುನೀಯಲಿಕ್ಕೆ ಹತ್ತಿರಿ ? ನಿಂದ್ರಿ, ನಿಂದ್ರಿ ನೀವು ಯಾರು ಏನು ಹೆಸರು ? ನಿಮ್ಮ ಇಬ್ಬರ ನಾಮವನ್ನು ಬೇಗನೆ ಹೇಳಿ.

ದೊಡ್ಡ ಅರಬ : ಅರೇ ! ಬೈಕುಬ ನೀ ಯಾರು ?

ಪ್ರಚಾರಿಕಾ : ಯ…. ಯ…. ಯ…. ಪ್ಪ…. ಪ್ಪ….ಪ್ಪ ನ…. ನ…. ನ…. ಪ್ರ…. ಪ್ರ…. ಪ್ರಚಾರಿಕರಿ.

ಸಣ್ಣ ಅರಬ :  ಏನಾಯಿತೊ ನಗಡಲಿಕ್ಕೆ ನಿನಗೆ ?

ಪ್ರಚಾರಿಕಾ : ಇ…. ಇ…. ಇ…. ಇ…. ಇಲ್ಲರಿ.ಎ…. ಎ…. ಎಪ್ಪ [ಅಳುವನು] ನಾನೇನು ಬಂದೆ ಸಿಕ್ಕೆನಪ್ಪ. ಮರಗವ್ವ ದುರ್ಗವ್ವನ ಕೈಯಾಗ.

ದೊಡ್ಡ ಅರಬ : ಎಲೋ ! ಪ್ರಚಾರಿಕಾ ಬಾ ಇಲ್ಲಿ.

ಪ್ರಚಾರಿಕಾ : ಯ…. ಯ…. ಯಾಕರಿ. ಬ…. ಬ…. ಬ…. ಬಂತರಿ.

ಸಣ್ಣ ಅರಬ :  ಏನು ಬಂತೋ ?

ಪ್ರಚಾರಿಕಾ : ಬ…. ಬ…. ಬೈಲಕಡಿ ಬಂತು. ಹೋಯಿತ್ತಿನಿ ಯಪ್ಪ. ಅಲ್ಲರಿ ನೀವು ಯಾರರಿ ಬಾಬಾ?

ಅರಬರು :

ಅರಬ ಜರಬ ಗೊತ್ತಿಲ್ಲೆನೊ ದಾರೊ ಅಧಮಾ
ಡರನೆಸೆ ಫೀರ ಪುಸ್ತ ಕೈಸಾ ಗುಲಾಮ
ಬಡದ ವೈರಿಗೆ ಹೊಡಿದು ಕಡದ ಹಾಕನೇಮೆ ॥1 ॥

ಮಡದಿ ಮಕ್ಕಳು ಸಡಗರ ನಮ್ಮಗೇನು ಕಡಿಮಾ
ಫೀರತೆ ಫೀರತೆ ನೀಕಾಲೆ
ಹಮಾರೆ ನಾಮ ಮಕ್ತೂಮ್ ॥2 ॥

ಗೈಬಿ ಫೀರ ನೆನದಾ ಸ್ವಾಮಿ
ಮೈಂದರ್ಗಿ ಗ್ರಾಮ ಅವರ ಚರಣಕ್ಕೆ
ಎರಗುವೆ ನಾನು ನಿತ್ಯ ನೇಮ ॥3 ॥

ದೊಡ್ಡ ಅರಬ : ಏನೋ ! ಮೂರ್ಖಾ ನಮ್ಮ ಅರಬರೆಂಬ ಜರ್ಬ ನಿನಗೆ ಗೊತ್ತಿಲನು ಅಧಮಾ?

ಪ್ರಚಾರಿಕಾ : ಗೊ…. ಗೊ…. ಗೊತ್ತಿಲ್ಲರಿ. ನಾಯಲ್ಲಿ ಕೇಳತಿದ್ದ ಗೊತ್ತಿದರೆ.

ಸಣ್ಣ ಅರಬ :  ಕ್ಯಾಂವ ಬೆವಖೂಬ. ಡರ ನಹಿಸೆ ಪುಚ್ಚ ರಹೇ ಗುಲಾಮ ಕಹಿಯೇ ನಾಲಾಯಕ, ಬದಮಾಶ, ಚೋರ, ಚುಪ, ಚುಪ್ಪ ರಹೋ ನಹಿತೋ ದೇಖ.

ದೊಡ್ಡ ಅರಬ : ಏನೋ ! ದುಷ್ಟ, ನಮಗೆ ಮಡದಿ ಮಕ್ಕಳು ಅಷ್ಟ ಐಶ್ವರ್ಯ ಇಲ್ಲಂದ ತಿಳಿದಿರುವಿಯೇನು? ನೀಚಾ ನಾನು ಯಾರಂದು ತಿಳಿದಿರುವಿ. ನನ್ನ ಹೆಸರು ಖಾಸೀಮ್, ನನ್ನ ತಮ್ಮನ ಹೆಸರು ರಜವಿ. ಮತ್ತು ನಮ್ಮ ತಂದೆಯ ಹೆಸರು ಮಕ್ತೂಮ್ ಸಾಬ ಇರುವದು. ಏನು ಪ್ರಚಾರಿಕಾ, ಹಿಂದಕ್ಕೆ ನಮ್ಮ ತಂದೆ ಇದೆ ಊರಲ್ಲಿ ಬಡ್ಡಿ ವ್ಯವಹಾರ ಮಾಡುತ್ತಿರುವಾಗ, ನಮ್ಮ ತಂದೆ ಕೈಯಲ್ಲಿ ಇರುವ ಗುಮಾಸ್ತನನ್ನು ಬೇಗನೆ ಬರಮಾಡು.

ಪ್ರಚಾರಿಕಾ : ಎಲೋ ! ಹಳೆ ಗುಮಾಸ್ತ್ಯಾ.

ಗುಮಾಸ್ತ : ಯಾರವರು ?

ಪ್ರಚಾರಿಕಾ : ಏನು ! ಮಾಡತೋ ಖೋಲ್ಯಾಗೆ ಯಾರು ಎಂತ ಅಂತಿಯಲ್ಲಾ ಹೊರಗ ಬಾ ಹೊರಗ.

ಗುಮಾಸ್ತ : ಯಾಕರಿ ಯಾಕ ಕರದರಿ ?

ಪ್ರಚಾರಿಕಾ : ಅಲ್ಲೋ ! ಹಿಂದಕ ಮಕ್ತುಮಸಾಬ ಸಾಹುಕಾರನಲ್ಲಿ ಗುಮಾಸ್ತಿ ಕೆಲಸ ಮಾಡಿದಂತ. ಮತ್ತು ಇಲ್ಲಿ ಎಷ್ಟು ಬಡ್ಡಿ ಹಾಕಿದಿ ? ಮತ್ತು ಎಷ್ಟು ವಸೂಲ ಮಾಡಿದಿ ? ಬಾಳ ದಿವಸ ಆತು ಹೋಗಿಲಂತ. ಅವರ ಮಕ್ಕಳು ಬಂದಾರ. ಕರಿತಾರ ಖಾತಾವನಿ ತಗೊಂಡು ನಡಿ.

ಗುಮಾಸ್ತ : ಯಪ್ಪ, ಬಿರಿ ಬಂತಪ್ಪ ಮಾತಾ. ಹೆಂತಾ ಹೊತ್ತಿನಾಗ ಬಂದಾರಪ್ಪಾ ಸುಗ್ಗಿಯಿಲ್ಲ ಸುಕಾಲಯಿಲ್ಲ ಸೂಳೆಮಕ್ಕಳು.

[ಎದುರಿಗೆ ಹೋಗುವನು]

ನಮಸ್ಕಾರರಿ ಧಣ್ಯಾರೇ.

ಸಣ್ಣ ಅರಬ :  ಎಲೋ ! ಗುಮಾಸ್ತ ಇಷ್ಟು ಹೊತ್ತಿನತನಕ ಏನು ಮಾಡುತ್ತಿದ್ದಿ.

ಗುಮಾಸ್ತ : ಕರೆದ ಘಳಿಗಿಗೆ ಓಡಿ ಬಂದಿನಲ್ಲರಿ ಬಾಬಾ. ನೀವು ಬಂದಿದ್ದು ನನಗೇನು ಖೂನಾ?

ದೊಡ್ಡ ಅರಬ : ಗುಮಾಸ್ತ ಹಿಂದಕ್ಕೆ ನಮ್ಮ ತಂದಿ ಕೈಯಿಂದ ಕೊಟ್ಟಿದ್ದು ಬಡ್ಡಿ ಗಂಟು ಎಷ್ಟು ವಸೂಲ ಮಾಡಿದಿ? ಖಾತೆಯನ್ನು ತೆಗಿ.

ಗುಮಾಸ್ತ : ಖಾತಾ ಖಾತ ಎಲ್ಲಿಂದರಿ ? ನಮ್ಮ ಮನ್ಯಾಗ ಏನ ದನಾನ ಕರಾನ ? ಒಲ್ಯಾಗಿನ ಬೂದಿ ವರ್ಷಕ್ಕ ಒಂದ ಗಾಡಿ ಆಗತ್ತದೆ, ಹತ್ತು ವರ್ಷದ ಒಮ್ಮೆ ಕೊಟ್ಟಿನಿ ಸಾಹುಕಾರಗ.

ಸಣ್ಣ ಅರಬ :  ಎಲೋ ! ಮೂರ್ಖಾ, ಚೇಷ್ಟಿ ಮಾಡತೇನು ? ಬೇಗನೆ ಖಾತೆ ಕೀರ್ದಿಯನ್ನು ತೆಗೆದು ತೋರಿಸು.

ಗುಮಾಸ್ತ : ಹಾ…. ಹಾ…. ! ಖಾತೆ ಕೀರ್ದಿ ಹಿಂಗ ಅನಬಾರದೆನರಿ. ಮೊದಲೆ ನೋಡರಿಯಪ್ಪ ಭಾಳ ದಿನದ ಬುಕ್ಕಗಳಯಲ್ಲಾ. ಸಿಕ್ಕ ಸಿಕ್ಕಲೆ ಬಿದ್ದು ಹರಿದು ಹೋಗ್ಯಾವ. ಹೋಗಿದ್ದು ಹೋಯಿತ್ತು ಇದ್ದದು ಹೇಳತೇನಿ.

ದೊಡ್ಡ ಅರಬ : ಹಾಂಗಂದರೇನೋ ? ನಮ್ಮದು ಹರಾಮಿ ಗಂಟು ಏನು ? ಜಟ್ಟನೆ ಬಡ್ಡಿ ಗಂಟನ್ನು ವಸೂಲ ಮಾಡಿ ಕೊಡುವಂಥವನಾಗು.

ಗುಮಾಸ್ತ : ನೋಡರಪ್ಪ, ಲೆಕ್ಕೀಲೆ ನೆನಪಿದ್ದಷ್ಟು ಹೇಳಬೇಕಾದರೆ ನಮ್ಮ ಪಿಂಜಾರ ಗೂಡುಸಾಬನ ಮ್ಯಾಗ ಪಾವಲಿ ಕಡಿಮಿ ಚಾರ ನಿಂತಾವ. ಕೊಟ್ಟಾ ಅಂದ್ರ ತಂದು ಕೊಡತೇನಿ. ನಾನೇನು ಕೇಳಾಕ ಹೋಗುದಿಲ್ಲ.

ಸಣ್ಣ ಅರಬ :  ಎಲೋ ! ಮೂರ್ಖಾ ನಿನ್ನ ಕೈಲಿ ವಸೂಲ ಮಾಡದ ಆಗತದೋ ಇಲ್ಲೋ ?

ಗುಮಾಸ್ತ : ಅಲ್ಲಾ, ಅವರು ಕೊಡಲಾರದೆ ತಂದು ಕೊಡಲೇ ? ಅವರು ಕೊಡಲಾರದೆ ಅವರಿಗೆ ಬೇಡಲಾಕ ಅವರ ಅಪ್ಪನ ಗಂಟತಿಂದಿನಿ ?

ದೊಡ್ಡ ಅರಬ : ಹಾಂಗಲ್ಲೋ ! ಗುಮಾಸ್ತಾ, ಮತ್ಯಾರ ಮೇಲೆ ಎಷ್ಟು ಇರುವದು ಲೆಕ್ಕ ಮಾಡಿ ಹೇಳಿ.

ಗುಮಾಸ್ತ : ರಗಡ ಆದಾವರಿ ಬಾಬಾ…. ಖರೆ ಕೇಳವರ‌್ಯಾರು ?

ಸಣ್ಣ ಅರಬ :  ಹಾಂಗಂದರೇನು ! ಮೂರ್ಖಾ ? ನಮ್ಮ ಅರಬರ ಜರ್ಬ ಗುರುತಿಲ್ಲೇನು ನಿಮ್ಮಗ ?

ಗುಮಾಸ್ತ : ಅಲ್ಲಾ ಹೋಗರಪ್ಪ, ಹೋಗರೆಲ್ಲಾ. ಅರಬಅಂತ ಜರಬಅಂತ [ಮುಖ ಹೊರಳಿಸಿ] ಊರಿಗೆ ಗೌಡ ಇದ್ರ….. ಸಾಕು ನಿಮ್ಮ ನೌಕರಿ ಸಾಕು.

ದೊಡ್ಡ ಅರಬ : ಏನಂದಿ ಮೂರ್ಖಾ.

ಗುಮಾಸ್ತ : ಮತ್ತೇನು ಅಂದರಿ ? ಕದ್ದ ಅಲ್ಲಾ ಮುಚ್ಚಿ ಅಲ್ಲಾ ಸಾಕು ನಿಮ್ಮ ನೌಕರಿನ ಸಾಕು. ನಿಮ್ಮ ಗೊಡ್ಡು ನೌಕರಿ ಮಾಡಿ ಮಾಡಿ ನನ್ನ ಹೆಣ್ತಿ ಸಹಿತ ಗೊಡ್ಡ ಬಿದ್ದಾದ. ಗಬ್ಬ ಹಿಡಿವಲ್ಲದು ಭಾಡ್ಯಾಂದು. ಹೀಗಾಗಿನೇ ಬೆದಿ ತಪ್ಪಿಸಿಕೊಂಡು ಕೂಂಡ್ರದ . ಹದಾ ಹೋದಮ್ಯಾಗ ಬೆದಿ ಹ್ಯಾಂಗ ಸಿಕ್ಕಿತರೆಪ್ಪ ? ತಗೋರಿ ನಿಮ್ಮ…. (ಖಾತಾವಣಿ ಕೊಡುವನು]

ದೊಡ್ಡ ಅರಬ : ತಮ್ಮಾ ನಡಿ ಸ್ವಂತ ನಾವೇ ತಿರುಗಾಡಿ ನಮ್ಮ ಬಡ್ಡಿ ಗಂಟನು ವಸೂಲ ಮಾಡಿಕೊಂಡು ಹೋಗುನು ನಡಿ ತಮ್ಮಾ.

ಸಣ್ಣ ಅರಬ :  ಹೌದು ಅಣ್ಣಾ ! ಹೀಗೆ ಬಡ್ಡಿ ಗಂಟನು ವಸೂಲ ಮಾಡಿಕೊಂಡು ಬರುವಸ್ತನಕ ಬಹಳವೇಳೆ ಆಗುವದು. ಆದರೆ ಈಗ ಹಸಿವೆ ಆಗಿರುವದು ಅಣ್ಣಾ.

ದೊಡ್ಡ ಅರಬ : ಹೇ ! ತಮ್ಮಾ, ಹಾಂಗದರೆ ಎಲ್ಲಿಯಾದರೂ ಫರಾಳವನ್ನು ತೆಗೆದುಕೊಂಡು ಬಾವಿದಂಡಿಯ ಮೇಲೆ ಕುಳಿತು ತಿಂದು ಹೋಗೂಣ ನಡಿ ತಮ್ಮಾ.