ಅರಬರಾಟ ಒಂದು ಸಾಮಾಜಿಕ ಸಣ್ಣಾಟ. ಗುಲಬರ್ಗಾ : ಸೊಲ್ಲಾಪುರಗಳ ಮಧ್ಯದ ಗಡಿಭಾಗದಲ್ಲಿ ಇದು ಪ್ರಚಾರದಲ್ಲಿದೆ. ಈ ಕಥಾನಕದಲ್ಲಿ ಇಬ್ಬರು ಅಣ್ಣ ತಮ್ಮ ಅರಬರ ಪಾತ್ರಗಳಿರುವುದರಿಂದ ಇದಕ್ಕೆ ಈ ಹೆಸರು ಬಂದಿದೆ. ಅರಬಸ್ತಾನದದಿಂದ ಬಂದು ಇಲ್ಲಿ ನೆಲೆಯೂರಿರುವ ಒಂದು ಜನಾಂಗದವರೇ ಅರಬರು.

ಬಸವಲಿಂಗ ರತ್ನಾವತಿ ದಂಪತಿಗಳು ಬಡವರು, ಗೌರವಸ್ಥರು. ಊರಲ್ಲ ಮೂರು ವರ್ಷ ಸತತ ಬರಗಾಲ ಬಿದ್ದುದರಿಂದ ಉಪಜೀವನಕ್ಕಾಗಿ ಪರ ಊರಿಗೆ ಹೋಗುವರು. ಅಲ್ಲಿ ರಾಮಸೆಟ್ಟಿ ಎಂಬ ಸಾಹುಕಾರ. ಅವನಿಗೆ ಮಕ್ಕಳಿದ್ದಿಲ್ಲ. ತನ್ನ ಹೆಂಡತಿಯ ಇಚ್ಛಿಯಂತೆ ಅವನು ದಾಸೋಹ ನಡೆಸುತ್ತಿರುತ್ತಾನೆ. ಬಸವಲಿಂಗ ರತ್ನಾವತಿ ದಂಪತಿಗಳು ಅವನಲ್ಲಿ ಕೆಲಸಕ್ಕೆ ಸೇರಿಕೊಳ್ಳುತ್ತಾರೆ. ತಮ್ಮ ಸಾಲದ ವಸೂಲಿಗಾಗಿ ಆ ಊರಿಗೆ ಇಬ್ಬರು ಅರಬ ಸಹೋದರರು ಬರುತ್ತಾರೆ. ಬಾವಿಯ ದಂಡೆಯ ಮೇಲೆ ರತ್ನಾಬಾಯಿಯನ್ನು ಕಂಡು ಅಣ್ಣ ಅರಬ ಅವಳ ರೂಪ ಲಾವಣ್ಯಕ್ಕೆ ಮನಸೋಲುತ್ತಾನೆ. ಅವನಿಗೆ ಅವಳ ಹುಚ್ಚೇ ಹಿಡಿಯುತ್ತದೆ. ಹೇಗಾದರೂ ಮಾಡಿ ಅವಳನ್ನು ಒಲಿಸಿಕೊಳ್ಳಲು ನಿರ್ಧರಿಸುತ್ತಾನೆ. ಹೂಗಾರ ಮಾಳವ್ವನ ಮೂಲಕ ಪ್ರಯತ್ನಿಸಿ ವಿಫಲನಾಗುವನು. ಕೊನೆಗೆ ಗಂಡನನ್ನು ತಂದು ಒಪ್ಪಿಸುವಂತೆ ರತ್ನಾಬಾಯಿಯ ಮೇಲೆ ಒತ್ತಡ ತರಲಾಯಿತು. ನಿನ್ನ ಗಂಡನಿಗೆ ಏನೂ ಮಾಡುವುದಿಲ್ಲ ಎಂದು ಅರಬ್ ಸೋದರರು ದೇವರ ಮೇಲೆ ಆಣೆ ಮಾಡಿ ಭರವಸೆ ನೀಡುತ್ತಾರೆ. ಅವರ ಮಾತನ್ನು ನಂಬಿ ರತ್ನಾಬಾಯಿ ಗಂಡ ಬಸವಲಿಂಗನನ್ನು ಕರೆದು ತಂದಾಗ ಕೊಟ್ಟ ಮಾತಿಗೆ ವಿರುದ್ಧವಾಗಿ ನಡೆದುಕೊಂಡು ಬಸವಲಿಂಗನನ್ನು ಕೊಲ್ಲುವರು. ರತ್ನಾಬಾಯಿ ಪರಿಪರಿಯಾಗಿ ಹಂಬಲಿಸಿ ನ್ಯಾಯಕ್ಕಾಗಿ ದೇವರನ್ನು ಮೊರೆಹೋಗುತ್ತಾಳೆ. ದೇವರು ಪ್ರತ್ಯಕ್ಷನಾಗಿ ಬಸವಲಿಂಗನನ್ನು ಬದುಕಿಸಿ ಅವಳಿಗೆ ಮುತ್ತೈದೆ ಭಾಗ್ಯ ಕರುಣಿಸುತ್ತಾನೆ. ದುಷ್ಟ ಅರಬರ ಹೀನಕೃತ್ಯಕ್ಕಾಗಿ ದೇವರು ಅವರ ಪ್ರಾಣ ಕಳೆಯುತ್ತಾನೆ. ಆಗ ರತ್ನಾವತಿ ದೇವರಲ್ಲಿ ನನ್ನಿಂದಾಗಿ ಅರಬ ಸೋದರರ ಪ್ರಾಣಹೋಯಿತೆಂಬ ಅಪವಾದ ಬೇಡ ಅವರಿಗೆ ಪ್ರಾಣದಾನ ನೀಡು ಎಂದು ಬೇಡಿಕೊಂಡಾಗ ದೇವರು ಅರಬ ಸೋದರರನ್ನು ಬದುಕಿಸಿ ಅಂತರ್ಧಾನನಾಗುವನು. ಅರಬರು ರತ್ನಾಬಾಯಿಯ ಕಾಲಿಗೆ ಬಿದ್ದು ಕ್ಷಮೆ ಕೇಳಿಕೊಳ್ಳುತ್ತಾರೆ.

ಒಂದು ಕಾಲಕ್ಕೆ ಹೈದ್ರಾಬಾದ್ ಕರ್ನಾಟಕದಲ್ಲಿ ಪ್ರಚಲಿತವಾಗಿದ್ದ ಅರಬರ ಶೋಷಣೆಯ ಚಿತ್ರಣ ಈ ಸಣ್ಣಾಟದಲ್ಲಿದೆ. ಇದರಲ್ಲಿ ಅಂದಿನ ಸಮಾಜದಲ್ಲಿ ನಡೆಯುತ್ತ ಘಟನೆಗಳನ್ನು ಬಡವರ ದೈನ್ಯ ಸ್ಥಿತಿಯನ್ನು ಸಾಲಗಾರರ ಕ್ರೂರ ನಡತೆಯನ್ನು ಯಥಾವತ್ತಾಗಿ ವಿವರಿಸಲಾಗಿದೆ. ಕಥೆಗೆ ಅಲೌಕಿಕತೆಯ ಸ್ಪರ್ಶ ನೀಡಲು ಕೊನೆಯಲ್ಲಿ ದೇವರು ಪ್ರತ್ಯಕ್ಷನಾಗಿ ಪ್ರಾಣ ನೀಡುವುದನ್ನು ಸೇರಿಸಲಾಗಿದೆ.

ಅರಬರಾಟ ರಚಿಸಿದವರು ಸೊಲ್ಲಾಪುರ ಜಿಲ್ಲೆಯ ಅಕ್ಕಲಕೋಟ ತಾಲೂಕಿನ ಮೈಂದರಗಿ ಗ್ರಾಮದ ಕಟಬರ ರಾಚು ಮತ್ತು ಉಪ್ಪಾರ ಮಾರುತಿ ಎಂಬ ಗೆಳೆಯರು. 1900 ರ ಸುಮಾರಿಗೆ ಇದನ್ನು ರಚಿಸಿರಬಹುದಾಗಿದೆ. ಪ್ರಸ್ತುತ ಪಠ್ಯ ಅಕ್ಕಲಕೋಟ ತಾಲೂಕಿನ ಆಹೇರವಾಡಿ ಗ್ರಾಮದ ಪ್ರತಿ.

ಗಣಪತಿ ಸ್ತುತಿ

ಬಾ ಬಾ ಬಾ ಗಜವದನ ಬಾ
ಗಜವದನಾ ಬಾ ಗಜವದನ ಬಾ ॥1 ॥

ಸುರನುತ ಚರಣ ವರಗುಣ ಸದನಾ
ಪರಮ ಪಾವನ ಹರನ ನಂದನಾ ॥2 ॥

ಮೂಷಕ ವಾಹನ ಪೋಷಿಸು ತನಯನಾ
ಈಶಾನಂದನ ಮಾಡೊ ದಯಾ ಕರುಣಾ ॥3 ॥

ದೇಶಕ್ಕಧಿಕವಾದ ವಾಸುಳ್ಳ ಮೈಂದರ್ಗಿ
ಈಶ ಗೈಬಿ ಪೀರನ ಪಾದಕ್ಕೆ ಎರಗುವೆನೊ ॥4 ॥

ಆದಿಮಾಯಿ ಸ್ತೋತ್ರ

ನಮೋ ನಮೋ ನಮಿಸುವೆ ಆದಿಮಾಯಿ
ಆದಿಮಾಯಿ ಶಂಭುಲಿಂಗನ ತಾಯಿ ॥1 ॥

ಬ್ರಹ್ಮ ವಿಷ್ಣು ರುದ್ರಗ ತೂಗಿ ತೊಟ್ಟಿಲಾಗೆ ಹಾಕಿ
ತೊಟ್ಟಿಲಾಗ ಹಾಕಿ ತಾಯಿ ಮಾಡಿದಿ ಜೋಗಿ ॥2 ॥

ಸ್ವರ್ಗ ಮೃತ್ಯು ಪಾತಾಳಲೋಕ ಮುಚ್ಚಿದಾಕಿ
ಮುಚ್ಚಿದಾಕಿ ಸೆರಗ ಹೊಚ್ಚಿದಾಗಕಿ ॥3 ॥

ದೇಶದೊಳು ವಾಸುಳ್ಳ ಮೈಂದರ್ಗಿ ಊರೊಳ ಇರುವಾಕಿ
ಊರೊಳ ಇರುವಾಕಿ ಗರೀಬ ಬಾಪುಗ ದೊರಕಿದಾಕಿ ॥4 ॥

ಪ್ರಚಾರಿಕ : ಬಂದವರು ದಾರು ಸ್ವಾಮಿ ಕಂದನಾಗಿ
ಪೇಳುವೆ ಚಂದಾಗಿ ಹೇಳಿರಿ ನಿಮ್ಮ ನಾಮಕರಣ ॥1 ॥

ನಾಮಕರಣ ನಿಮ್ಮ ಗುರುತು ಖೂನಾ
ಮರತು ಕೂಡಲಿ ಬೇಡ ವ್ಯರ್ಥ ವ್ಯಾಳೆ
ಆಗದು ನಿರ್ಥ ನೀವು ಬಂದದ್ದು ಏನ ಕಾರಣಾ ॥2 ॥

ಹೆದರದೆ ಬೆದರದೆ ಸದರಿಗಿ ಶಿರಬಾಗಿ
ಮಧುರಾಸಿ ಸುಧರಾಸಿ ನುಡಿ ವಚನಾ
ನುಡಿ ವಚನಾ ಬಿಡು ಭಯವನಾ ಮರತು ॥3 ॥

ಬಂದವರು ದಾರೆಂದು ದ್ವಂದ್ವ ಕರಗಳನ್ನು ಮುಗಿದು ಕಂದ ನಾನು ಬಂದು, ನಿಮ್ಮ ಮುಂದೆ ನಿಂದು ಚಂದದಿಂದೆ ನಿಮ್ಮ ನಾಮಕರಣವನ್ನು ಕೇಳುವೆನು. ನೀವು ದಾರು ? ನಿಮ್ಮ ಗ್ರಾಮ ಯಾವದು? ಎಲ್ಲಿಂದ ಬಂದಿರುವಿರಿ ? ಮತ್ತು ಎಲ್ಲಿಗೆ ಹೋಗುವಿರಿ? ಬೇಗನೆ ಹೇಳಿ ಸ್ವಾಮಿ.

ಬಡವ : ಶಿವ…. ಶಿವ…. ಶಂಕರ, ಇವನಾರು ಇರಬಹುದು? ಶ್ರೀಮಂತನು ನಾನಲ್ಲ. ಪ್ರಿಯವಂತನು ನಾನಲ್ಲ. ಪ್ರೇಮದಿಂದೆ ಬಂದು ಎನ್ನ ನಾಮವನ್ನು ಕೇಳುವನು. ಇರಲಿ! ಅಪ್ಪ ನನ್ನ ಹೆಸರು ತಕ್ಕೊಂಡು ಏನು ಮಾಡುವಿ? ತಿರುಕನಂತೆ ತಿರುಗುತ್ತ, ಹರಕು ಬಟ್ಟಿಗೆ ಹೊರತಾಗಿ ತಿರುಕರು ಸಹ ಸೇರದಂತೆ, ಮುರಕ ಮನೆ ಸಹ ಎನಗಿಲ್ಲ. ಎನಗೆ ಕೇಳಿ ನಿಮಗೆ ಫಲವಿಲ್ಲ. ಸ್ವಾಮಿ! ಆಗಲಿ ನಾನು ಹೋಗಲಿ ಬಿಡು. ಅಪ್ಪಯ್ಯ! ಅಯ್ಯ ನೀ ನೀನಾರು?

ಪ್ರಚಾರಿಕ : ಒಂದು ದುಡ್ಡು ಪಗಾರವಿಲ್ಲದೆ ದೊಡ್ಡವರ ಮನೆ ಕಾಯುತ್ತ, ಅಡ್ಡ ಬಂದವರಿಗೆ ಅವರ ನಾಮ, ಅವರ ಖೂನ, ಅವರ ಗುರುತು. ಅಲ್ಲಪ್ಪ ಧಡಿ ಧಡೀತ ನಮ್ಮ ಸಾವಕಾರನ ಮನೆಮುಂದ ಹಾಯ್ದು ನಡೆದಿದ್ದಿ. ಹೆಸರು ಮತ್ತು ಕಥೆ ಹೇಳಿ ಹೋಗಲ್ಲಾ ?

ಬಡವ : ಏನರೀ ! ಸ್ವಾಮಿ ನನ್ನ ನಾಮ ಹೇಳಬೇಕೆ ?

ಪ್ರಚಾರಿಕ : ಹೌದು ! ಹೇಳಲಿಕ್ಕೆಬೇಕು.

ಬಡವ : ಆಗಲಿ ಸ್ವಾಮಿ ! ತಮ್ಮ ಇಚ್ಛೆಯಂತೆ ಆಗಲಿ. ಆದರೆ ನನ್ನ ಗುರುತು ನನ್ನ ನಾಮ ಎಲ್ಲವನ್ನು ಹೇಳುವೆನು. ಆದರೆ ನಿಮ್ಮ ನಾಮಕರಣವೇನು ಸ್ವಾಮಿ ?

ಪ್ರಚಾರಿಕ : ಅಬ್ಬಬ್ಬಾ ! ಏನಪ್ಪ ? ಇವ ನನಕೂ ಹೆಚ್ಚಿನ ಗಡಿ. ಮೈಯ ಮೇಲೆ ಬೊಟ್ಟಿನಷ್ಟು ಅರವಿ ಇಲ್ಲಾ. ಹರಕ ಕೋರಿ ಹಾಯಕೊಂಡು ನ್ಯಾರಿ ಅದು ಮಾಡಿದಿ ಇಲ್ಲಾ. ಹಾಗೆ ಹೇಳು. ಇಲ್ಲಂದ್ರ ನಮ್ಮ ಸಾವಕಾರ ಮನೆಯಾನ ಎರಡು ರೋಟಿ ತಂದು ಕೊಡತ್ತೇನೆ.

ಬಡವ : ಏನು ಬ್ಯಾಡರಿ ಸ್ವಾಮಿ.

ಪ್ರಚಾರಿಕ : ಹಾಗಂದರ ನನ್ ಹೆಸರೆಬೇಕೆನು ನಿನಗ. ಎಷ್ಟು ಹಂಬಲಪ್ಪ ನನ್ನ ಹೆಸರ ಮ್ಯಾಲ ನಿಂದು. ಬಂದ ಹೋಗವರಿಗೆ ಹೆಸರನ್ನು ಕೇಳಿ ಪ್ರಚಾರ ಮಾಡುವಂಥಾ ಪ್ರಚಾರಿಕಾ ಅಂತಾರ. ನಿಂದಿಷ್ಟು ಹೆಸರ ಹೇಳಿ ಬಿಡು. ತಕರಾರೆ ಬ್ಯಾಡ.

ಬಡವ :

ಬಡವ ಬಂದೆನು ನಾನು ಪೊಡವಿಗೆ ಶಿರಬಾಗಿ
ಅಡವಿ ಸೇರುವೆ ಬೇಗಾ ಮಂದಿ ಮಕ್ಕಳೆನಗೆ
ಬಂಧು ಬಳಗನಿಲ್ಲಾ ಒಂದೂರ ಗ್ರಾಮಕ್ಕೆ ॥1 ॥

ಜೋಡಿ ಸುಡಲಿ ಬಡತನ ಒಳ್ಳೆ ಹೀನ
ಸ್ವಾನ ಮಾನಗೇಡಿ ಅನ್ನದ ಸಲವಾಗಿ ॥2 ॥

ದರ ಮನೆಯಲ್ಲಿ ಹೋಗಿ ಸೇರುವೆ ಶಿರಬಾಗಿ
ಅನ್ನ ಹಾಕಿದರೆ ಎನಗೆ ಚನ್ನಾಗಿ ದುಡಿಯುವೆನು
ದುಡಿಸಿಕೊಂಬುವರೆನಗೆ ವೀರ ಶೂರ ಧೀರನಿಲ್ಲ ॥3 ॥

ಮೋಹದ ಸತಿಯಳನ್ನು ಕರಿಸಪ್ಪ ಇಲ್ಲಿತಾನ
ಸಾವರಿಸಿ ಮಾತಾಡುವೆನಾ ಉತ್ತಮ ರೀತಿ ಅವಳೊ
ಮತ್ತೇನು ಪೇಳಿಕೊ ರಾಚು ಮಾರುತಿ ದೇವರ ಹೇಳಿ ಕೇಳಿ ತಾಳ ನುಡಸಿ ॥4 ॥

ಅಣ್ಣಾ ! ಪ್ರಚಾರಿಕಾ, ಎನ್ನ ವಾರ್ತೆಯನ್ನು ಪ್ರೀತಿವಿಟ್ಟು ಕೇಳು. ನಾವು ಇರುವದು ಸುರಪುರ ಗ್ರಾಮ. ನಮ್ಮ ಗ್ರಾಮದ ಜನರು ಬಡವ ಬಸವಲಿಂಗಾ, ಬಡವ ಬಸವಲಿಂಗಾ ಎಂದು ಕರೆಯುವರು.

ಪ್ರಚಾರಿಕ : ಅಬ್ಬಾಬಾ ! ಎಷ್ಟು ದೂರಪ್ಪ ನಿನ್ನ ಊರು. ಅಲ್ಲೋ ಮಹಾರಾಯಾ ಇಷ್ಟು ದೂರ ಹ್ಯಾಂಗ ಬಂದರೊ ನೀವು? ಎಲ್ಲಿ ಸುರಪೂರ ? ಎಲ್ಲಿ ನೀವು ? ಅಲ್ಲೋ ಏನ ಗಾಡಿಗೆ ಬಂದಿರಿ ? ಏನು ಮೋಟಾರಕ ಬಂದಿರಿ ? ನಡಕೊಂತ ಬಂದಿರಿ? ಏನ ಆಡಕೊಂತ ಬಂದ್ರಿ ?

ಬಡವ : ಅಲ್ಲರಿ, ನಮ್ಮಂಥವರಿಗಿ ಚೇಷ್ಟಿ ಮಾಡಬಾರದು ? ಅಣ್ಣಾ ! ಗಾಡಿ ಮೋಟಾರಕ್ಕೆ ಬರುವ ತ್ರಾಣ ನಮ್ಮದು ಅಲ್ಲ. ನಮ್ಮ ಹತ್ತರ ಕಾಸ ಕವಸಿ ಸಹ ಇಲ್ಲ. ಇಂದಿಗೆ ಮೂರು ದಿವಸ ಆಯಿತು. ಹೊಟ್ಟಿಯಲ್ಲಿ ತುತ್ತು ಅನ್ನ ಸಹ ಇಲ್ಲ. ಎಲ್ಲಿಯಾದರೂ ದುಡಿದುಕೊಂಡು ತಿನ್ನುವ ಆಸೆಯಿಂದ ಬಂದೆವಪ್ಪ ಪ್ರಚಾರಿಕಾ.

ಪ್ರಚಾರಿಕ : ಥೂ….ಥೂ….ಥೂ….ಥೂ ಭಾಳ ಹೈರಾಣ ಆಗಿದಲ್ಲೋ. ಮತ್ಯಾರ‌್ಯಾರು ? ತಾಯಿ : ತಂದೆ, ಅಣ್ಣ : ತಮ್ಮ, ಬಂಧು ಬಳಗ, ಅಕ್ಕ : ತಂಗಿ, ಹೆಂಡರ : ಮಕ್ಕಳ ಯಾರು ಇಲ್ಲಾ?

ಬಡವ : ಯಾ….ಯಾರು ಇಲ್ಲ ತಂದಿಯೇ. ಅಡವಿಯಲ್ಲಿ ಇರುವ ಪಶು ಪಕ್ಷಿಯಂತೆ ಸತಿ ಪತಿ ಇಬ್ಬರ ಹೊರತು ಮತ್ಯಾರು ಇಲ್ಲ ತಂದಿಯೇ. ನಮ್ಮ ದೇಶಕ್ಕ ಮೂರು ವರ್ಷ ಬರ ಬಿದ್ದದ್ದಕ್ಕಾಗಿ ಎಷ್ಟೋ ಜನ ಅನ್ನ ನೀರಿನ ಅಡಚಣಿಗಾಗಿ ದೇಶ ಭ್ರಷ್ಟರಾಗಿದ್ದಾರೆ. ನಮ್ಮಂತಹ ಪಾಪಿಯ ಜನ್ಮ ಇರಬಾರದು ತಂದೆಯೇ ! ಇರಬಾರದು. ಆಹಾ ! ತಂದೆಯೇ, ಈ ಊರಲ್ಲಿ ಯಾರಾದರೂ ನಮ್ಮ ಇಬ್ಬರು ಸತಿ ಪತಿಗೆ ಅನ್ನ ಹಾಕಿ ದುಡಿಸಿಕೊಂಡರೆ ದುಡಿಬೇಕೆಂಬ ಆಸೆಯಿಂದ ಬಂದಿದೇವು. ಅಣ್ಣಾ ನಮ್ಮನ್ನು ದುಡಿಸಿಕೊಳ್ಳುವರಿದ್ದರೆ ಹೇಳು.

ಪ್ರಚಾರಿಕ : ಆಹಾ !…. ನಿನ್ನ ಹೆಂಡತಿನು ಆದಾಳೆನು ತಮ್ಮಾ ? ಎಲ್ಲಿ ಬಿಟ್ಟು ಬಂದಿದೋ? ನೀನು ಹರೆದವನೆ ಕಾಣುತ್ತೀ ಆಕೆನು ಹರೆದಕಿನೆ ಇರಬೇಕು.

ಬಡವ : ಹೌದು ! ತಂದಿಯೇ ನನ್ನ ಸತಿಯು ಇದೇ ನಿಮ್ಮ ಗ್ರಾಮದಲ್ಲಿ ಕಟ್ಟಿಗೆ ಹೊರೆಯನ್ನು ಮಾರುತಾ ಹೋಗಿದ್ದಾಳೆ. ಎಲ್ಲಿಯಾದರೂ ಭೆಟ್ಟಿಯಾದರೆ ಸ್ವಲ್ಪ ಬರಮಾಡಪ್ಪ ಪ್ರಚಾರಿಕಾ.

ಪ್ರಚಾರಿಕ : ಥೂ ! ಇವನೌನ ಛೊಲೊ ಹತ್ಯಪ್ಪ ಇದು. ಕೂಲಿ ಇಲ್ಲದೆ ಕುರಿ ಕಾಯುದು ? ಅಲ್ಲೋ, ಯಾ ಓನಿಗೆ ಹೋಗ್ಯಾಳೋ? ಆಕಿ ಖೂನರ ನಮ್ಮಗ ಹ್ಯಾಂಗ ? ಆಕಿ ಹೆಸರಾರ ಹೇಳು ಮಹಾರಾಯಾ.

ಬಡವ : ಅಣ್ಣಾ ! ಪ್ರಚಾರಿಕಾ ನನ್ನ ಹೆಂಡತಿಯ ಗುರುತು ಸಿಗಬೇಕಾದರೆ ಹದಿನಾರು ಗಂಟಿನ ಸೀರೆ ಉಟ್ಟಿದ್ದಾಳೆ. ಹೊಟ್ಟಿಗೆ ಹುರಿ ಹಾಕಿ ಕಟ್ಟಿಗೆ ಮಾರುವದನ್ನು ನೋಡಿ ಬೇಗನೆ ಕಳುಹಿಸಿ ಬಿಡಪ್ಪ ಪ್ರಚಾರಿಕಾ.

ಪ್ರಚಾರಿಕ : ಅಲ್ಲಪ್ಪ ! ನಾನು ಹುಡಕೊಂತ ಹೋದೆ. ಆಕಿ ಸಿಕ್ಕಳು ಎಲ್ಲಿ ? ಕಳಸಿ ಕೊಡು ಎಲ್ಲಿ ? ನೀ ಇರುತ್ತಿ ಎಲ್ಲಿ ಹೇಳು?

ಬಡವ : ಅಣ್ಣಾ ! ಇದೇ ನಿಮ್ಮ ಊರು ಹೊರಗೆ ಇರುವಾ ಧರ್ಮಚಾವಡಿಯಲ್ಲಿ ಇರುವೆನು. ಬೇಗನೆ ಕಳುಹಿಸಿ ಕೊಡು ಅಪ್ಪ.

ಪ್ರಚಾರಿಕ : ಎಲ್ಲಿ ಇದ್ದಾಳಪ್ಪ ? ಹ್ಞಾಂ ! ಹ್ಞಾಂ…. ಇಲ್ಲಿ ಒಬ್ಬಾಕಿ ಹೊಂಟಾಳ ಬಹುತೇಕ ಆಕೀನೆ ಇರಬೇಕು.

[ರತ್ನಾಬಾಯಿ ಬರುವಳು]
ಅಲ್ಲಾ…. ಯಾರವ್ವಾ ನೀ. ಗಂಡಸರು ಕಾಣಿಸುವಂಗಿಲ್ಲೇನು ನಿನಗ ಹಾದ್ಯಾಗ.

ರತ್ನಾಬಾಯಿ : ಹಾಂಗಲ್ಲಾ ಅಣ್ಣಾ ! ನೀ ಯಾರು ? ನಿನ್ನ ಹೆಸರು ಹೇಳಿದರೆ ನಾನಾದರೂ ಹೇಳುವೆ.

ಪ್ರಚಾರಿಕ : ಅಲ್ಲವ್ವ….. ಬಂದವರು ಹೋದವರು ಮೊದಲಿನಿಂದ ಹೇಳು, ಮೊದಲಿನಿಂದ ಹೇಳು ಅಂತರಾ. ಯಾಕ ನಿಂದ ಹೇಳಿದರೆ ಏನ ಆಗತಾದ ?

ರತ್ನಾಬಾಯಿ : ಹಾಂಗಲ್ಲಾ ಅಣ್ಣಾ ! ನೀನೇನು ಸಿಟ್ಟು ಹಚ್ಚಕೊಳ್ಳಬೇಡ. ನಾನೊಬ್ಬವಳು ನಿಮ್ಮ ತಂಗಿಯೆಂದು ತಿಳಿದು ನಿಮ್ಮ ಹೆಸರು ಹೇಳಿಬಿಡು ಅಪ್ಪ.

ಪ್ರಚಾರಿಕ : ನೋಡವ್ವ, ನನ್ನ ಹೆಸರು ಹೇಳಬೇಕೆ ? ಛ್ಯಾರಿ ಜೋಳದ ಕೂಲಿಗೆ ನ್ಯಾರಿಗೆ ರೊಟ್ಟಿ ಇಲ್ಲದೆ ಪ್ಯಾಟಿಯಲ್ಲಿ ತಿರುಗುವ ಸೊಟ್ಟ ಪ್ರಚಾರಿಕಾ ಅನ್ನುವರು. ಜಟ್ಟನೆ ನಿಮ್ಮ ಹೆಸರು ಹೇಳವ್ವ.

ರತ್ನಾಬಾಯಿ : ಅಪ್ಪ, ಪ್ರಚಾರಿಕಾ ನಮ್ಮ ಹೆಸರನ್ನು ಹೇಳುವೆನು ಕೇಳಪ್ಪ. ಭಾಗ್ಯವಂತರ ಮನೆಯಲ್ಲಿ ಹುಟ್ಟಿ, ಬಡವ ಬಸವಲಿಂಗೇಶ್ವರನ ಮಡದಿಯಾಗಿ, ಅಡಿ ಅಡಿಗೆ ಅವನ ನಾಮ ನುಡಿಯುತ್ತ ಕಟ್ಟಿಗೆ ಹೊರೆಯನ್ನು ಮಾರುತ್ತ ಹೊರಟಿರುವೆನು. ನನ್ನ ಹೆಸರು ರತ್ನಾಬಾಯಿ ಇರುವದು ಅಣ್ಣಾ.

ಪ್ರಚಾರಿಕ : ಹಾ ಹಾ ಹಾ ಹಾ…. ಮಾತು ಖರೆಬಂತು ನೆನಪಿಗೆ. ಮುಂಜಾನೆ ಮಾಲ ತಿಳಿತು ಬಿಡು. ಹೇಳಿನ ಮಾಲು ಈಕ್ಕಿನೆ ಇರಬೇಕು. ಏನವ್ವ…. ನಿನ್ನ ಗಂಡ ಹೆಗಲಮೇಲೊಂದು ಕೋರಿ ಹಾಕಿಕೊಂಡು ಕೈಯಾಗ ಒಂದು ಬಡಿಗೆ ಹಿಡಿದುಕೊಂಡು ಬರುತ್ತಿದ್ದನಾ. ದಾರಿಗೆ ಬಂದ ಬಿಟ್ಟನಾಯಿತ್ತು. ನನಗ ಮಾತಾಡಿಸಿ ನನ್ನ ಹೆಂಡತಿ ರತ್ನಾಬಾಯಿ ಎಲ್ಲೆರ ಸಿಕ್ಕರೆ ಧರ್ಮಶಾಲಾಗ ಇರುತ್ತೀನಿ ಕಳುಹಿಸಿಕೊಡು ಅಂತ ಹೇಳ್ಯಾನ. ಹೋಗಿಬಿಡು.

ರತ್ನಾಬಾಯಿ : ಆಗಲಿ ಅಣ್ಣಾ. ನೀವು ಹೇಳಿದ ಗುರುತಿದಂತೆ ಅದೇ ನಮ್ಮ ಧರ್ಮಶಾಲೆಯೇ ನಮ್ಮ ಅರಮನೆ. ಅಲ್ಲಿಗೆ ಹೋಗುವೆನು ಅಣ್ಣಾ.

[ಹೋಗುವಳು]

ರತ್ನಾಬಾಯಿ :

ಕರಸಿದ ಬಗಿಯೇನು ಹೀರಸನಿಲ್ಲದೆ ಪ್ರೀಯಾ
ಸರಸಿ ಮಾತಾಡೊ ಎನಗ ॥1 ॥

ಅರಸಿಣದಂತ ಬಣ್ಣ ಪುರುಷ ನಿನ್ನ ಮುಖ
ಚಿನ್ನ ಖಿನ್ನಆಗಿ ತೋರುವದೊ ॥2 ॥

ಅಂತರಂಗದ ಚಿಂತಿ ಕಾಂತ ನೀ ಪೇಳು ಎನಗೆ
ಚಿಂತಿ ಶರೀರ ನಿಮ್ಮದು ಸಣ್ಣ ಹಣ್ಣ ಮಣ್ಣ ಆಗಿ ॥3 ॥

ಗ್ರಾಮದೊಳಗಿನ ಜನರು ಶರ್ಮಿಸಿ ಆಡುವರೋ
ಕರ್ಮನಿಲ್ಲದೆ ಎನಗೆ, ಕರಸಿದ ॥4 ॥

ನಿಮ್ಮ ಪಾದಪೂಜೆ ಸೇವಾ ತಪ್ಪಿದೆನ ಹೇಳುದೇವಾ
ಸ್ವಚ್ಛ ಮನಸ್ಸು ಒಳ್ಳೆ ಅಳಿದು ತಿಳಿದು ತಿಳಿದು ಬೇಸಿ ॥5 ॥

ಒಡಿಯ ನಿಮ್ಮಯ ನುಡಿಯ ಆಡಿ ಆಡಿ ತಡಿಯದೆ
ನುಡಿ ಅಂತ ನುಡೀವೆನೊ ಬಂದ ಸಂಕಷ್ಟ ಎಲ್ಲಾ ॥6 ॥

ಮೈಂದರ್ಗಿ ಈಶಾ ಬಲ್ಲಾ ರಾಚು ಮಾರುತಿ
ದೈವಕ ಸರದ ಹಿರದ ಕರದಿ ಬಾಗಿ ॥7 ॥

ನಮ ನಮೋ ಕಾಂತಾ ನಿಮ್ಮ ಪಾದಕ್ಕೆ ವಂದಿಸುವೆನು.

ಬಡವ : ಸೌಭಾಗ್ಯವತಿಯಾಗು. ಕಾಂತೆ ಏಳು ಏಳು.

ರತ್ನಾಬಾಯಿ : ಆಹಾ ! ಪ್ರಾಣಕಾಂತ. ಎನಗೆ ಕರಸಿದ ಬಗಿ ಏನು ಇರುವದು.

ಬಡವ ಹೇ ! ಕಾಂತೆಯೇ ಕಟ್ಟಿಗೆಯನ್ನು ಮಾರುತ್ತ ಹೋದವಳು ಎಷ್ಟು ಹೊತ್ತಾಗಿ ಬಂದೆ. ಮನಸ್ಸಿನ ಕಳವಳ ತಾಳದೆ ಬರಹೇಳಿದೆ ಸತಿಯಳೇ.

ರತ್ನಾಬಾಯಿ: ಕಾಂತಾ ಇಂದು ನಿಮ್ಮ ಮುಖ ಚಿನ್ನ ಬೇರೆ ಬೇರೆ ಆಗಿರುವದಲ್ಲಾ. ಯಾವ ಮಾತಿನ ಚಿಂತಿ ಮಾಡತೊಡಗಿದ್ದೀರಿ ? ಎನ್ನ ಮೇಲೆ ಕೋಪ ಆಗಿರುವಿರೇನು ? ನಿಂಬಿ ಹಣ್ಣಿನಂತಹ ಮುಖ ಚಿನ್ನ ಖಿನ್ನ ಆಗಿರುವದಲ್ಲಾ. ನಿಮ್ಮ ಆಜ್ಞೆಯನ್ನು ಮೀರಿ ನಾನು ಹೋಗಿರಲಿಲ್ಲಾ. ಪಾಲಿಗೆ ಬಂದದ್ದು ಪಂಚಾಮೃತ ಎಂದು ತಿಳಿದು, ಬಡತನದ ಬಾಧೆಯನ್ನು ತಡಿಯುತ್ತಾ ನಿಮ್ಮ ಅಡಿಯಲ್ಲಿ ದುಡಿಯುವಳು ನಾನು. ನಿಮ್ಮನ್ನು ಬಿಟ್ಟು ಎನಗೆ ಬಳಗವೇ ಇಲ್ಲಾ ಕಾಂತಾ.

ಬಡವ ಹೇ ! ಕಾಂತೆಯೇ, ನೀನು ಎಷ್ಟು ಧರ್ಮಶಾಲಿಯು. ನಿನ್ನ ಗುಣವು ವರ್ಣಿಸುವುದು ಧರಣಿಯ ಮೇಲೆ ಬಿಡು. ಆ ಬ್ರಹ್ಮನಿಗೆ ಸಹ ಅಸಾಧ್ಯವಾಯಿತ್ತಲ್ಲ.

ರತ್ನಾಬಾಯಿ : ಹೇ ! ಪ್ರಾಣಕಾಂತಾ, ಪ್ರತಿ ನಿತ್ಯ ನಿಮ್ಮ ಪಾದೋದಕವೇ ಪ್ರಸಾದವೆಂದು ತಿಳಿದು, ಪರಮೇಶ್ವರ ನೀನೆಂದು ಪರಮ ಪೂಜೆಯಲ್ಲಿ ಮೈ ಮರೆತು, ನೀವೆ ಎನ್ನ ಪ್ರಾಣಲಿಂಗವೆಂದು ನಡಿಯುವೆನು ಕಾಂತಾ. ನಿಮಗೆ ಬಂದ ಸಂಕಷ್ಟವನ್ನು ಆ ಮೈಂದರ್ಗಿ ಈಶನೇ ಬೈಲ ಮಾಡುವನು. ಕಾಂತಾ ಸದ್ಗುಣವಂತಾ.

ಬಡವ :

ಸತಿಯಳೆ ಕೇಳ ಎನ್ನ ಮನಸ್ಸಿನೊಳಗಿನ ಚಿನ್ನ
ಜಗದೊಳ ಅಪಮಾನ ಉಟ್ಟೇನಂದರ ಬಟ್ಟಿ ಗಟ್ಟಿ
ಸಿಗಲಾರದೋ ಖೊಟ್ಟಿ ಪ್ರಾರಬ್ಧ ಹೀನ ॥1 ॥

ಹೊಟ್ಟಿ ಕಿಚ್ಚಿಗಾಗಿ ದುಡಿಬೇಕಂದರೆ ದುಡಿಸಿ
ಕೊಂಬುವರ ಎನಗ ವೀರ ಶೂರ ಧೀರ ಇಲ್ಲ
ಗ್ರಾಮದೊಳಗಿನ ದೈವಾ ದೈವಾನ ಇದ್ದರೆ ॥2 ॥

ತಡಿಯದೆ ಹೋಗುನು ನಡಿಯೇ ರಾಮಶೆಟ್ಟಿ
ಸಾಹುಕಾರ ಪುಣ್ಯದಲ್ಲಿ ಜಾಹೀರ ಆತನ
ಮಂದಿರಕ್ಕೆ ಸಾಗಿ ಬಾಗಿ ಬೇಗ ನಡಿಯೇ ಸಖಿಯೇ ॥3 ॥

ಅನ್ನ ಅರವಿ ಸಿಕ್ಕರೆ ಸಾಕೆ ಈ ಚಿಂತೆ ಯಾರಿಗೆ
ಬೇಕೇ ಸ್ವಚ್ಛ ಇರುವದು ಟಿಕಾವು ಗುದ್ದಲಿ ಕೂಡಲಾ
ಕೂಲಿ ಹಚ್ಚವರಿಲ್ಲಾ ಹಸು ಆಗಿ ಆತ್ಮ ಸುಟ್ಟು ಗೋಳ ಭಾಳ
ತಾಳಲಾರೆ ಸತಿಯಳೆ॥4 ॥

ಹೇ ! ಸತಿಯಳೆ ನಮ್ಮ ಪ್ರಾರಬ್ಧವೇ ಹೆಂಥಾ ಖೊಟ್ಟಿ. ಹೊಟ್ಟಿಗೆ ತುತ್ತು ಅನ್ನವಿಲ್ಲಾ.
ಮೈಗೆ ತುಂಬಾ ಬಟ್ಟೆ ಇಲ್ಲಾ. ಈ ಸೃಷ್ಟಿಯಲ್ಲಿ ನಾವು ಹುಟ್ಟಿ ಹುಟ್ಟಲಾರದಂತೆ ನೋಡು ಸತಿ.

ಈ ರೊಟ್ಟಿ ಬಟ್ಟಿಗಾಗಿ ಯರಾದರೂ ನಮ್ಮ ಇಬ್ಬರನ್ನು ದುಡಸಿಕೊಂಡರೆ, ಇರಬೇಕು ಎನ್ನುವ ನನ್ನ ಇಚ್ಛೆ ಇರುವದು ನೋಡು ಸತಿಯಳೇ. ಈ ಗ್ರಾಮದಲ್ಲಿ ರಾಮಶೆಟ್ಟಿ ಸಾವಕಾರನು ಶ್ರೀಮಂತನಿದ್ದಾನಂತೆ. ಅಲ್ಲಿಗೆ ನಾವು ಹೋಗಿ ಶರಣಾಗತರಾಗಿ, ನಮ್ಮ ಕಷ್ಟ ವೃತ್ತಾಂತ ಹೇಳಿ; ಅವರ ಮನಸ್ಸಿನಲ್ಲಿ ಕಳವಳ ಹುಟ್ಟುವಂತೆ ಹೇಳಿದರೆ, ರೊಟ್ಟಿ ಬಟ್ಟಿಗಳನ್ನು ಕೊಟ್ಟರೆ ಸಾಕು. ಬೇಗನೆ ಹೋಗೂನ ನಡೆವಂತವಳಾಗು ಸತಿಯಳೇ.

ರತ್ನಾಬಾಯಿ :

ಸುಂದರಾಂಗ ನಿಮ್ಮ ನುಡಿ ಕಂದವಾಗಿ ತೋರುವದೋ
ಚಂದ ಕಾಣುವದಿಲ್ಲ ಮತ್ತೊಬ್ಬರ ಮನೆಯಲ್ಲಿ
ಎತ್ತ ಮುಂದಕ್ಕೆ ಹೋಗಿ ತೊತ್ತಾಗಿ ದುಡಿಯಲಿ ಹ್ಯಾಂಗ ॥1 ॥

ಹೊತ್ತು ಏರಿದರೆ ಎನಗೆ ಎತ್ತರ ಆಡುವರು
ಕತ್ತಿಯಂತೆ ಎನ್ನ ಜನ್ಮ ಹೀನ ಸ್ವಾನ ಮಾನಗೇಡಿ
ಪತಿಯಾಜ್ಞೆ ಮೀರಿದರೆ ಅತಿ ಪಾಪ ಆಗುವದು ॥2 ॥

ಗತಿಗಾಣುವದಿಲ್ಲ ಮಿಕ್ಕಿ ಮಾತು ಏಕೆ
ಚಕ್ಕನೆ ನಡಿರಿ ಇಗೆ ಹೊಕ್ಕ ಒಬ್ಬರ ಮನೆ ಮುಸರಿ
ತೊಳಿದು ಬಳಿದು ಅಳಿದು ಬೇಸಿ ಸುಂದರಾಂಗ ॥3 ॥

ಧೈರ್ಯ ಬಿಟ್ಟರೆ ಘೋರ ಭೀತಿಯೆಂಬುದು ವೈರಿ
ತನ್ನೊಳು ತಾ ಸೇರಿ ಸಂಕಷ್ಟ ಸದ್ಗುರುನಾಥ ಯಾರಿಲ್ಲೋ
ಮೈಂದರ್ಗಿ ಗ್ರಾಮದಲ್ಲಿ ವೀರ ಶೂರ ವೀರಭದ್ರ ॥4 ॥

ಹೇ ! ಪುರುಷೋತ್ತಮನೇ, ಅನ್ನಕ್ಕಾಗಿ ಅನ್ಯರ ಮನೆಯಲ್ಲಿ ಹೀನರಾಗಿ ಇರುವ ನಮ್ಮ ಜನ್ಮ ವ್ಯರ್ಥ. ತುತ್ತುರೊಟ್ಟಿಗಾಗಿ ತೊತ್ತಾಗಿ ದುಡಿಯುವದು ಸರ್ವಥಾ ಆಗಲಾರದು. ಹೊತ್ತು ಏರಿದರೆ ಈ ಗತಿಗೇಡಿ ಜನರು ಯೆತ್ತಾರ ಮಾತಾಡಿ ಮನನೊಂದಿಸುವರು ಕಾಂತಾ. [ಸ್ವಗತ] ಅರೆರೇ ಶಿವ ಶಿವಾ ಶಂಕರಾ ಪರಮೇಶ್ವರಾ, ಪ್ರಭುಹರ ನಮ್ಮ ಮೇಲೆ ಕಣ್ಣು ಮುಚ್ಚಿರುವಿಯಾ? ಒಳ್ಳೇದು. ಇರಲಿ, ಪತಿ ಆಜ್ಞೆಯ ಮೀರಿದರೆ ಅತಿ ಪಾತಕಳಾಗಿ, ಯಾತಕ್ಕೆ ಬರಲಾರದಂತೆ ಎನ್ನ ಜನ್ಮವು ಆಗುವದು

ಹೇ ! ಪ್ರಾಣನಾಥ ನಿಮ್ಮ ಇಷ್ಟದಂತೆ ಜಟ್ಟನೆ ಹೋಗಿ ಶೆಟ್ಟಿ ಸಾಹುಕಾರನಿಗೆ ಭೆಟ್ಟಿಯಾಗಿರಿ, ಹೊಟ್ಟಿಯ ತಾಪವು ತಡಿಯದು ಕಾಂತಾ, ನಡಿಯಿರಿ ಬೇಗನೆ ನಡಿಯಿರಿ. ಧೈರ್ಯ ಬಿಟ್ಟರೆ ಭೀತಿಯು ವೈರಿಯಾಗುವದು. ಧೈರ್ಯವಂತಳಾಗಿ ರಾಮರ ಸೀತೆ ರಕ್ಕಸರ ಕೈಯಲ್ಲಿ ಸಿಕ್ಕು, ಅವರ ರೆಕ್ಕೆಯನ್ನು ಕಿತ್ತಿಸಲಿಲ್ಲ ಏನು ? ನಡೆಯಿರಿ ಬೇಗನೆ ನಡೆಯಿರಿ.

ಬಡವ : ಹೇ ! ಸತಿ ಉತ್ತಮಳೆ, ಹೆಂಥ ಸದ್ಗುಣವಂತಿ ನೀನು. ಸತ್ಯ ವಚನಕ್ಕೆ ಚಿತ್ತವು ಚಂಚಲ ಮನಸ್ಸಿಗೆ ಹಂಚಿ ಹರಿದೊಗದು, ಹರಿದಾಡುವ ಮನಸ್ಸಿಗೆ ಹಗ್ಗ ಹಚ್ಚಿ ನನ್ನಂತಹ ತೆಗ್ಗಿ ಮುಗ್ಗಿ ತಿರಗುವ ಕಮ್ಮನ ಮನಿಗೆ ಭಾಗ್ಯವತಿಯಾದ ನಿನ್ನ ಗುಣವನ್ನು ಎಷ್ಟೇ ವರ್ಣಿಸಲಿ. ನಡಿ ಬೇಗನೆ ಹೋಗಿ ದೊಡ್ಡ ಸಾವಕಾರನ ಮನೆ ಶೋಧಿಸಿ ನಮ್ಮ ಬಡತನವನ್ನು ಬೈಲ ಮಾಡೋಣ ನಡಿ ಸತಿಯಳೆ.

[ಹೋಗವರು]

ಪ್ರಚರಿಕಾ :

ಗಡಬಡದಿಂದ ಬಂದೆನಪ್ಪ ನಡ ನಡದು
ಖೋಡಿ ಜನರ ನಡತಿ ನೋಡಿ ತಡಿಲಾರದು
ನೋಡಲಾರೆ ನಾನು ಜೀ ॥1 ॥
ಕರ್ಮದ ಕಾಯ್ದ ಕಾಯಿಯುವರು
ಧರ್ಮದ ಕೆಲಸವು ಮರತಾರೆ
ನೋಡಲಾರೆ ನಾನು ಜೀ ಜೀ ಜೀ ॥2 ॥
ಮಾನಕ ಮರ್ಯಾದೆ ಕೊಡುದಿಲ್ಲ
ಸ್ವಾನಾಗಿ ಬೊಗಳುವದು ಜಗವೆಲ್ಲಾ
ನೋಡಲಾರೆ ನಾನು ಜೀ ಜೀ ಜೀ ॥3 ॥

ಚಂದ್ರರೇ, ಇಂದ್ರರೆ ಅಥವಾ ದೇವ ದಾನವರೊ ಈ ಸುಂದರ ಸಭೆಯಲ್ಲಿ ಬಂದು ಕುಳಿತಿರುವಾ ತಾವು ಯಾರು ತಮ್ಮ ನಾಮಾಂಕಿತ ಏನು ? ಸ್ವಾಮಿ.

ಸಾಹುಕಾರ : ಹೇ ! ತಮ್ಮಾ ಸುಮ್ಮನೆ ನಿಂದವರ ನಾಮಾಂಕಿತ ಕೇಳುವವನು ನೀನು ಯಾರು ? ನಿನ್ನ ನಾಮಾಂಕಿತವೇನು ? ಬೇಗನೆ ಹೇಳು.

ಪ್ರಚಾರಿಕಾ : ಹಳ್ಳಿ ಪಟ್ಟಣದಲ್ಲಿ ಒಳ್ಳೇ ಗುಣದವನಾಗಿ, ಕೊಳ್ಳಿ ಕುಳ್ಳರ ಸಂಗವಿಲ್ಲದೆ ನಿಸ್ಸಂಗ ಗುಣದವನಾಗಿ, ನಿಮ್ಮಂಥ ಶ್ರೀಮಂತರ ಹೆಸರು ಪ್ರಚಾರ ಮಾಡುವಂಥಾ ಪ್ರಚಾರಿಕಾ, ಪ್ರಚಾರಿಕಾ ಅನ್ನುವರು. ತಾವುದಾರು ? ತಮ್ಮ ಹೆಸರೇನು ? ಸ್ವಾಮಿ.

ಸಾಹುಕಾರ : ಹೇ ! ತಮ್ಮಾ ಪ್ರಚಾರಿಕಾ, ಈ ಪಟ್ಟಣದಲ್ಲಿ ಶ್ರೇಷ್ಠ ರಾಮಶೆಟ್ಟಿ ಸಾಹುಕಾರ ಎಂದು ಕರೆಯುವರು.

ಪ್ರಚಾರಿಕಾ : ಅಬಬಬಾ…. ಇವಾ ನಮ್ಮ ಊರವನೇ ಅಂತ ನಮಗ ಖೂನೆ ಇಲ್ಲಲ್ಲಾ ? ಒಳ್ಳೇದು ಇರಲಿ. ಇವರು ಯಾರು ಇರಬಹುದು ? ಬತ್ತಿಸ ಖಳೆ ಉಳ್ಳವರಾಗಿ ತೆತ್ತೀಸ ಕೋಟಿ ದೇವತರೊಳಗೆ ಮುತ್ತಿನಂತೆ ಹೊಳೆಯುವಾ ಕುಂತವರೂ ತಾಯಿ, ಪುಣ್ಯದೇವಿ.

ಚಂದ್ರುಣಿ : ಈ ಗ್ರಾಮದ ಒಡಿಯರಾದ ರಾಮಶೆಟ್ಟಿ ಸಾಹುಕಾರನ ಮಡದಿ ಚಂದ್ರುಣಿದೇವಿ ಎನ್ನುವರು ಬಾಲಾ.

ಕಾಂತಾ ಕೇಳೊ ಸದ್ಗುಣವಂತಾ
ಹೀನ ಜನ್ಮ ನಮ್ಮದೋ ಕಾಂತಾ
ಕಾಂತಾ ಕೇಳೋ ಸದ್ಗುಣವಂತಾ ಹಾ ॥1 ॥

ಮಕ್ಕಳ ಇಲ್ಲದೆ ಮಂದಿರ ನಮ್ಮದು
ಮಸೂಟಗಿ ಅಂತೆ ತೋರುವದೋ
ಕಾಂತಾ ಕೇಳೋ ಸದ್ಗುಣವಂತಾ ॥2 ॥

ಮಂದಿ ಮಕ್ಕಳಿಗೆ ನೋಡಿ ಸೊರಗಿ ಸಣ್ಣ
ಆಗುವದೋ ದೇಹ ಚಿನ್ನ ಭಾಗ್ಯ ಎಲ್ಲಾ
ಇದ್ದು ಏನು ನಿಷ್ಫಲ ಕಾಂತಾ ಕೇಳೊ ॥3 ॥

ಪರೋಪಕಾರ ಮಾಡರಿ ಧನಾ ಮಹಾದೇವಗ
ಮುಟ್ಟಲಿ ಖೂನ ಪ್ರಾಯ ನಮ್ಮದು ಸರ್ವ
ಹೋಗೈತಿ ಅಂತಕಾಲ ಸನಿ ಬಂದೈತಿ ॥4 ॥

ಹೇ ! ಕಾಂತಾ ಉತ್ತಮನೆ ಎಂತಹ ಹೀನ ಜನ್ಮ ನಮ್ಮದು ? ಮಕ್ಕಳಿಲ್ಲದವರ ಬಾಳು ಬೆಕ್ಕಿನ ಸರಿಯಂತೆ. ಎಷ್ಟು ಹೊನ್ನ ಚಿನ್ನ ಇದ್ದರೇನು ? ನನ್ನ ಮನಸ್ಸಿಗೆ ಸಮಾಧಾನವಿಲ್ಲ. ಮಕ್ಕಳಿಲ್ಲದೆ ಎಷ್ಟು ದಿವಸ ಕಷ್ಟ ಪಡಿಯಬೇಕು ? ಪತಿದೇವಾ, ನಮ್ಮಿಬ್ಬರ ಕರ್ಮ ದೂರಾಗುವಂತೆ ಬಗೆ ಹೇಳುವೆನು ಕೇಳುವಂತರಾಗಿರಿ ಪ್ರಿಯಾ.

ಸಾಹುಕಾರ : ಕಾಂತಿಮಣಿಯೇ ಆದಾವದು ಹಂಚಿಕೆ ಹೇಳು ನೋಡುವಾ.

ಚಂದ್ರುಣಿದೇವಿ : ಹೇ ! ಪ್ರಾಣಕಾಂತಾ ಕೆಲವು ದಿನಗಳ ಹಿಂದೆ ಒಬ್ಬ ಭವಿಷ್ಯಗಾರನು ಓಣಿಯಲ್ಲಿ ಬಂದು ಭಿಕ್ಷಕ್ಕೆ ಬೇಡಲಾಗಿ ನೀಡಲಿಕ್ಕೆ ಬಂದ ನನ್ನನ್ನು ನೋಡಿ ಅಮ್ಮ, ನಿಮಗೆ ಮಕ್ಕಳಾಗುವ ಬಗಿ ಹೇಳುವೆನು ಕೇಳೆಂದನು. ಆದರೆ ನಾನು ಆತನ ಚರಣಕ್ಕೆ ನಮಿಸಿ ನಂಬಿಕೆಯಿಂದ ಹೇಳಿ ಸ್ವಾಮಿ ಎನ್ನಲಾಗಿ, ಈ ನಿಮ್ಮ ಗ್ರಾಮಕ್ಕೆ ಏಳು ದಿವಸ ರಾತ್ರಿ ಹಗಲು ಅನ್ನಛತ್ರ ದಾನ ಧರ್ಮವನ್ನು ಮಾಡಿ ಪುಣ್ಯವನ್ನು ಗಳಿಸಿದರೆ ನಿಮ್ಮ ಬಂಜೆತನವು ಹಿಂಗುವದೆಂದನು. ಆದರೆ ಆತನ ನುಡಿಯಂತೆ ಅನ್ನಛತ್ರ ಮಾಡಲಿಕ್ಕೆ ಬೇಕು ನೋಡಿ ಕಾಂತಾ.

ಸಾಹುಕಾರ : ಹೇ ! ಕಾಂತೆ ನೀನು ಹೇಳುವ ಮಾತಿಗೆ ನಾನು ಯಾವದಕ್ಕು ಅಡ್ಡಿಯಿಲ್ಲಾ. ಆದರೆ ಆ ಭಗವಂತನು ಬೇಕಾದಷ್ಟು ಕೊಟ್ಟು ಮರತಿದ್ದಾನೆ. ನೀ ಹೇಳಿದಂತೆ ನಾಳೆ ಬೆಳಗಿಗೆ ಬೆಳ್ಳಿ ಬಂಗಾರ ದಾನ ಮಾಡಿ ಅನ್ನಛತ್ರವನ್ನಿಟ್ಟು ಪುಣ್ಯದ ಕಾರ್ಯಕ್ಕೆ ಪಾಲರಾಗುವ ನಡಿ ಸತಿಯಳೇ.

[ಗುಮಾಸ್ತನಿಗೆ] ಈಗಿಂದೀಗೆ ನಮ್ಮ ಪಟ್ಟಣದಲ್ಲಿ ಇರುವ ಹೂಗಾರನನ್ನು ಕರಸಿ ಡಂಗುರ ಹೊಡಿಯಲಿಕ್ಕೆ ಹೇಳುವಂತವನಾಗು ಗುಮಾಸ್ತ.

ಗುಮಾಸ್ತ : ಅಲ್ಲಾ ! ಸುಮ್ಮಸುಮ್ಮನೆ ಡಂಗರ ಹೊಡಿ ಅಂದರ ಎದರ ಸಲವಾಗಿ ಹೊಡಿಬೇಕು ಸಾಹುಕಾರ ಮಜಕೂರಾರ ಹೇಳಿರಿ.

ಸಾಹುಕಾರ : ಎಲೋ ! ಗುಮಾಸ್ತ, ನಮಗೆ ಪುತ್ರ ಸಂತಾನ ಇಲ್ಲದಕ್ಕಾಗಿ ಒಬ್ಬ ಶಾಸ್ತ್ರಿಯು ಬಂದು ಖಾಲಿ ಪಡಿಸಿದ್ದಾನೆ. ಆದರೆ ನಮ್ಮ ಊರಲ್ಲಿ ಇರುವ ಸಣ್ಣ ದೊಡ್ಡ ದೈವಕ್ಕೆಲ್ಲ ತಿಳಿಯುವಂತೆ ಹೇಳು. ಏಳು ದಿವಸ ಅನ್ನದಾನ, ಹೊನ್ನದಾನ, ವಸ್ತ್ರದಾನ ಕೊಡಲಿಕ್ಕೆ ಸಿದ್ಧನಾಗಿದ್ದೇನೆ. ಆದರೆ ಈ ಪ್ರಕಾರವಾಗಿ ಡಂಗುರ ಸಾರಲಿಕ್ಕೆ ಹೇಳು. ಬಡವರು, ಭಿಕ್ಷುಕರು, ಕುರುಡರು, ಕುಂಟರು, ಜೋಗಿ, ಜಂಗಮವರು, ಅಂಗಹೀನರು, ಯಾರಾದರೂ ಇದ್ದರೆ ಬಂದು ಪ್ರಸಾದ ತಕ್ಕೊಂಡು ಹೋಗಬೇಕೆಂದು ಡಂಗುರ ಹೊಡಿಸೋ ಗುಮಾಸ್ತ.

ಗುಮಾಸ್ತ : ಆಗಲಿ ನೀವು ಹೇಳಿದಂತೆ ಡಂಗುರ ಹೊಡಿಸುವೆನು. ಏನು ಕಾಳಜಿ ಮಾಡಬೇಡಿ ಸಾಹುಕಾರ.
ಎಲ್ಲೊ ಹೂಗಾರಾ……ಎ……ಹೂಗಾರ.

ಹೂಗಾರ : ಯಾಕರಿ ಯಪ್ಪ ಯಾಕ ಒದರುತ್ತೀರಿ ?

ಗುಮಾಸ್ತ : ಏನ ಮಾಡತೊ, ಎಷ್ಟು ಒದರಿದರೂ ಓ ಕೊಡವಲ್ಲಿ ಕೆಲಸ ಆದ ಬಾ ಇಲ್ಲಿ.

ಹೂಗಾರ : ಯಾವ ಕೆಲಸರೀಯಪ್ಪ, ಸಧ್ಯ ನನಗ ಪುರಸತ್ತಗಿ ಇಲ್ಲಾ. ಎಲ್ಲಿಯಾನ ಹೋಗರಿ.

ಗುಮಾಸ್ತ : ಅಲ್ಲೊ, ಪುರಸತ್ತಗಿ ಇಲ್ಲದ ಕೆಲಸ ಯಾವದೋ.

ಹೂಗಾರ : ಕೋಣಿನ ಗಿಣ್ಣ ಕಾಸತೇನರಿ.

ಗುಮಾಸ್ತ : ಅದನೇನ ಮಾಡತೋ.

ಹೂಗಾರ : ಮಕ್ಕಳಿಲ್ಲದವರಿಗೆ ಕೊಡುತ್ತೇನರಿ.

ಗುಮಾಸ್ತ : ಅದನ್ನೆಲ್ಲಾ ಬಿಡೋ, ಬಾ ಇಲ್ಲಿ.

ಹೂಗಾರ : ಯಾಕರಿ ಯಪ್ಪ ಯಾಕರಿ, ಬಲ ಉಪದ್ರ ನಿಮ್ಮದು. ಸಾಹುಕಾರ ಕೈಯಾನ ಗುಮಾಸ್ತಗಳದು. ಸಾಹುಕಾರ ನೌಕರಿ ಅಂದ್ರ ಅಮಲೆ ಬಂದಿರುತ್ತದೆ. ಸೂಳೆ ಮಕ್ಕಳಿಗೆ, ನಾಳೆ ನೌಕರಿ ಹೋದ ಮರುದಿನ ನಾಯಿ ಕೇಳುವದಿಲ್ಲಾ. ಯಾಕಪ್ಪ ಯಾಕ ಏನದು? ಹೇಳಿ ಬಿಡು.

ಗುಮಾಸ್ತ : ಎಲೋ ! ಹೂಗಾರ ನಮ್ಮ ಶೆಟ್ಟಿ ಸಾವಕಾರ ಇಲ್ಲಾ ? ಏಳು ದಿವಸ ಅನ್ನಛತ್ರ ಇಟ್ಟಾನಂತ. ಬೆಳ್ಳಿ, ಬಂಗಾರ, ಅನ್ನ ಅರವಿ ಎಲ್ಲಾ ದಾನ ಕೊಡುತಾನಂತಾ. ಊರಾಗ ದೌಡ ಡಂಗುರ ಹೊಡಿ ನಿನಗೂ ಏನಾರ ಸಿಕ್ಕೀತು.

ಹೂಗಾರ : ಯಾಕಾಗಲ್ಲದರಿ ಯಪ್ಪ ಯಾಕಾಗಲ್ಲದರಿ.

ಕೇಳಿರಿ ಡಂಗುರ ಗ್ರಾಮದೊಳಗಿನ ಜನರಾ
ಕೇಳಿರಿ ಕೇಳಿರಿ ಡಂಗುರವಾ ಕೇಳಿರಿ
ನಮ್ಮೂರ ರಾಮಶೆಟ್ಟಿ ಸಾಹುಕಾರನ ಮನೆಯಲ್ಲಿ
ಏಳು ದಿವಸ ಅನ್ನ ಛತ್ರವನ್ನು ಇಟ್ಟಿದ್ದಾರೆ. ॥1 ॥

ಬಡವರು ಬಗ್ಗರೂ ಕುರುಡರೂ ಕುಂಟರೂ ಅತಿಥಿ
ಅನಾಥ ಜನರು ಬಂದು ಪ್ರಸಾದತಕ್ಕೊಂಡು ಹೋಗಬೇಕರಪ್ಪ
ಬೇಡಿದವರಿಗೆ ಬೇಡಿದ್ದು ಕೊಡತಾರಂತ ಅನ್ನ ಅರವಿ ಹೊನ್ನ
ಬೆಳ್ಳಿ ಬಂಗಾರ ದಾನ ಕೊಡತಾರಂತ ಎಲ್ಲರು ತಕ್ಕೊಂಡ ಹೋಗಿರಿ ॥2 ॥