ದೊಡ್ಡ ಅರಬ : ಹೇ ! ಮೂರ್ಖಳೆ, ನಿನ್ನ ಗಂಡನಿಗೆ ಎಲ್ಲಿ ಬಿಟ್ಟು ಬಂದಿರುವಿ. ಆತನು ಬಂದು ನಮಗ ಶರಣಾಗತ ಆದರ ನನಗ ಕರುಣಬಂದು ನಿನಗೆಬಿಟ್ಟ ಬಿಡತೇವೆ. ಬೇಗನೆ ನಿನ್ನ ಗಂಡನನ್ನು ತೋರಿಸಿ ಕೊಡುವಂತವಳಾಗು.

ರತ್ನಾಬಾಯಿ : ಹೇ ! ಅಣ್ಣಯ್ಯಗಳಿರಯ್ಯ ಅವನನ್ನು ತೆಗೆದುಕೊಡುವೆನು ಏನುಮಾಡುವಿರಿ. ನಾನು ನಿಮ್ಮ ಅಕ್ಕ ತಂಗಿಯರ ಸರಿ. ನಿಮ್ಮ ಹೊಟ್ಟಿಯ ಮಗಳೆಂದು ಭಾವಿಸಿ ಬಿಟ್ಟ ಬಿಡರೆಪ್ಪ. ನಮಗೆ ಜೀವದಾನ ಮಾಡುವೆನು ಶರಣಾ.

ಸಣ್ಣ ಅರಬ :  ಹೇ ! ನಾರಿ ಮಣಿಯಳೆ ನಾವು ಆಡಿದ ಮಾತು ಹುಸಿ ಅಲ್ಲ. ರಾಮರ ಬಾಣೆಂದು ತಿಳಿ. ಬೇಗನೆ ನಿನ್ನ ಗಂಡನು ಬಂದ ನಮಗೆ ಶರಣಾಗತ ಆದರೆ ಬಿಟ್ಟ ಬಿಡುತ್ತೇನೆ. ಇಕಾ ಭಾಷೆಯನ್ನು ಹಿಡಿವಂತಕ್ಕಿಯಾಗು.

ರತ್ನಾಬಾಯಿ : ಹೇ ! ಅಣ್ಣಯ್ಯಗಳಿರಾ ವಿಶ್ವಾಸದ ಮಾತಿಗೆ ಈಶ್ವರನೆ ಸಾಕ್ಷಿ ಇದ್ದಂತೆ ನಿಮ್ಮ ಕುಲದಲ್ಲಿ ದೊಡ್ಡ ದೇವರಾರು ಹೇಳುವಂತರಾಗಿರಪ್ಪ ಅಣ್ಣಯ್ಯಗಳಿರಾ.

[ನಗುತ್ತ ಕುಲದೇವರ ಹೆಸರು ಹೇಳುವರು]

ದೊಡ್ಡ ಅರಬ : ಏನೇ ! ರತ್ನಿ, ನಮ್ಮ ಕುಲದೇವರು ಹೆಸರು ಬೇಕೇನು ? ನಿನಗೆ ಒಳ್ಳೇದು ಇರಲಿ. ನಮ್ಮ ಕುಲದೇವರು ಮೌಲಾಅಲ್ಲಿ ಸಾಹೇಬರೂ ಇರುವರು ನೋಡು. ಮತ್ತೇನಿರುವದು ಬೊಗಳುವಂತಾಕ್ಕಿಯಾಗು.

ರತ್ನಾಬಾಯಿ :

ಖರೆ ಹೇಳರಿ ಮೌಲಾಲಿ ಆಣಿಯ ಮಾಡಿ
ಮೌಲಾಲಿ ಸತ್ಯವಂತಾ ನಿಮ್ಮ ಕುಲದೇವತಾ
ತನ್ನ ಭಕ್ತರ ಝಾಡಿತಾ ತಕ್ಕೊಳಾವಾ ತನ್ನ
ಕಣ್ಣಲಿ ನೋಡಿ ಅಲ್ಲಿ ಇಲ್ಲಿ ಎಲ್ಲರ ಒಳಗ ಹರದಾಡಿ ॥1 ॥

ವಿಶ್ವಾಸದ ಮಾತಿಗೆ ಈಶ್ವರ ಸಾಕ್ಷಿಯಾಗಿ
ಬ್ರಹ್ಮಾ ತಾ ಸುಳ್ಳ ಹೇಳಿ ಶಿರಾ ಕಡಿದು
ಸಿಡಿದು ಬಿದ್ದಾನ ಉರಳ್ಯಾಡಿ
ಅವನಿಗೆ ಶಾಪ ಹತ್ತಿತೋ ಖೋಡಿ ॥2 ॥

ಆರುಗುಣ ಅಷ್ಟಮದ ನಷ್ಟ ಮಾಡಿದ
ಕತ್ತಲಿ ಚಾವಡಿ ಅಲ್ಲಿ ಹೋದರೆ ಕಾರಕೋನರ
ಎಲ್ಲರು ಕೂಡಿ ಸುಲಿವರೋ ಕೈಯಾಗ ಇರೋದಿಲ್ಲ
ಕವಡಿ ಖರೇ ಹೇಳರಿ ಮೌಲಾಲಿ ॥3 ॥

ಹೇ ! ಅಣ್ಣಯ್ಯಗಳಿರಾ ಮೌಲಾಲಿ ಸಾಹೇಬ ನಿಮ್ಮ ಮನೆ ದೇವರಿದ್ದರೆ, ಅವರ ಕಿರೆ ಮಾಡಿ ಹೇಳಿದರೆ ನನ್ನ ಗಂಡನಿಗೆ ತೋರಿಸುವೆನು. ಭಾಷೆಯನ್ನು ಕೊಡುವಂವರಾಗರೆಪ್ಪ ಅಣ್ಣಯ್ಯಗಳಿರಾ.

[ಇಬ್ಬರು ಭಾಷೆ ಕೊಡುವರು]

ರತ್ನಾಬಾಯಿ : ಹೇ ! ಸತ್ಯವಂತ ಮೌಲಾಲಿ ಶರಣನೇ ನನ್ನ ಮಾನ ಅಪಮಾನ ನಿನಗೆ ಹವಾಲಿ ಮಾಡಿರುತ್ತೇನೆ. ನನ್ನನ್ನು ಕಾಪಾಡು ತಂದೆ ಕಾಪಾಡು. ಹೇ ! ಅಣ್ಣಯ್ಯಗಳಿರಾ ಮೌಲಾಲಿ ಮೇಲೆ ಭಾರಿಟ್ಟ ಆತನ ಕಿರೆ ಮಾಡಿ ಮತ್ತೆ ನೀವು ಬದಲಾಡಿದರೆ ನಿಮಗೆ ಸೂತಕ ಬರುವದು. ಸುಳ್ಳೆ ಹೇಳಿ ಬ್ರಹ್ಮ ಪಂಚಶಿರದಲ್ಲಿ ಒಂದು ಶಿರವನ್ನು ಕಳೆದುಕೊಂಡನು. ಕಾಮವಾಸನೆಗಾಗಿ ಕಾಮನು ಸುಟ್ಟು ಭಸ್ಮವಾದನು. ಅಂಥವರು ಆ ಗತಿ ಆದ ಮೇಲೆ ನಿಮ್ಮಂಥವರ ಪಾಡೇನಪ್ಪ ಅಣ್ಣಯ್ಯಗಳಿರಾ.

ಸಣ್ಣ ಅರಬ :  ಹೆಣ್ಣೆ, ಪುರಾಣ ಹೇಳಬೇಡ. ಬೇಗನೆ ನಿನ್ನ ಗಂಡನನ್ನು ಕರೆದುಕೊಂಡು ಬರುವಂತವಳಾಗು.

[ಹೋಗುವಳು]

ರತ್ನಾಬಾಯಿ : ಹೇ ! ಪ್ರಾಣನಾಥ ಆದಷ್ಟು ಅರಬರು ನಿನ್ನ ಗಂಡಬಂದು ನಮಗೆ ಶರಣಾಗತ ಆದರೆ ಬಿಡತೀವಿಯೆಂದು ಭಾಷೆ ಕೊಟ್ಟಿದ್ದಾರೆ. ನಾವಿಬ್ಬರು ಕೂಡಿ ಅವರಿಗೆ ಶರಣ ಹೋಗುನ ನಡೆವಂತವರಾಗಿರಿ ಕಾಂತಾ.

ಬಡವ :

ಆಗಲಿ ನಡಿ ಕಾಂತಾಮಣಿಯೇ
ಬಂದೆನೋ ನಾ ನಿಮ್ಮ ಕಂದ ಶಿವ
ಶಿವ ಸಿದ್ಧನೆ ಸಂಕಷ್ಟ ತಂದಾ ಹಾಹಾ
ಪಿಡಿಹುವೆ ನಿಮ್ಮ ಚರಣ ಕಾಯರಿ
ಎನ್ನ ಮಾನ ಸುಡಲಿ ಬಡತನ ॥1 ॥

ಶಿವಾ ತಂದಾ ಜನ್ಮದ ಕುಂದಾ ಎಲ್ಲಿ
ಹೋದರೆ ತಪ್ಪದೆ ಕಾಳ ಕಾಡುವರಾ
ಸಾವಿರ ತರದಿಂದೆ ಸೇವೆ ಮಾಡುವೆ
ನಿಮ್ಮದೋ ಕರುಣಾ ಬರಲಿ ಮಹಾರಾಯಾ ॥2 ॥

ಬಿಡಿರಿ ಅಡವಿ ಸೇರುವೆ ಹಣ್ಣ ಹಂಪಲ
ತಿಂದು, ಬರಲಿ ನಿಮ್ಮಗ ದಯಾ ಮಹಾರಾಯಾ
ಗೈಬಿ ಫೀರಗೆ ಎರಗುವೆ ಗಂಧಾ ಎದಿನ ದುಂಧಾ
ರಾಚ ಮಾರುತಿ ಹೇಳ್ಯಾರ ಮನಸ್ಸಿಗೆ ತಂದಾ ॥3 ॥

ಆಹಾ ! ತಂದೆಯವರೇ, ಶರಣ ಬಂದವರಿಗೆ ಕೊಂದೊಗೆಯುವದು ನಿಮಗೆ ಯೋಗ್ಯ ಆಗಬಹುದೆ? ಭಾಗ್ಯವಂತರು ನೀವು. ಬಡವನ ಮ್ಯಾಲ ದಯವಿಟ್ಟು ಕಾಪಾಡುವಂತವರಾಗಿರಿ ತಂದಿಯವರೇ, ಜೀವದಾನ ಬಿಡಿರಿ.

ದೊಡ್ಡ ಅರಬ : ಎಲೋ ! ಮೂರ್ಖಾ ಬಲ್ಲಿದ ಸಿಂಹನೆದುರಿಗೆ ಖುಲ್ಲ ನರಿಯು ಹಲ್ಲು ತೆರಿದು ಬೊಗಳಿದಂತೆ ಯಾತಕ್ಕೆ ಬೊಗಳುತ್ತಿರುವಿ ? ಹಲವು ತರದಿಂದ ಹಲುಬಿದರು ನಮಗೆ ಕರುಣಾ ಬರುವದಿಲ್ಲ. ಬೇಗನೆ ನಿನ್ನ ಹೆಂಡತಿಯನ್ನು ಬಿಟ್ಟು ಹೋಗುವಂತವನಾಗು. ಇಲ್ಲವಾದರೆ ನಿನ್ನ ಶಿರಚ್ಛೇದನ ಮಾಡುವೆವು ಮೂಢಾ.

ಬಡವ : ಹೇ ! ತಂದೆ, ಧನವಂತರೇ ಹಾವು ಬಡಿದು ಹದ್ದಿಗೆ ಒಗೆದರೆ ನಿಮಗೇನು ದೊರೆಯುವದು? ನಾನು ಬಡ ಪ್ರಾಣಿಯು, ಭಿಕ್ಷೆಯನ್ನು ಬೇಡಿ ತಿಂದು ಬದುಕುತ್ತೇನೆ. ತಂದೆಯವರೆ ಜೀವದಾನ ಬಿಡುವಂತವರಾಗಿರಿ.

ಸಣ್ಣ ಅರಬ :  ಅಯ್ಯಯ್ಯೋ, ಶಿವ ಶಿವಾ ಶಂಕರಾ, ಹಿಂಥಾ ಕಠೋರವಾದ ಪ್ರಸಂಗ ತರುವದಕ್ಕಿಂತಲು ನಮ್ಮನ್ನು ಮರಣ ಕೊಡಬಾರದೆ.

ಹಿಡಿ ಹಿಡಿ ಮೂರ್ಖನ ಮುರಿದು
ಇವರ ಮುರಿದು ಅಣ್ಣಾ ಕಡಿದು
ಹಾಕುವೆ ಗೋಣಾ ಇವ ಏನು ದೈವಾನ ॥1 ॥

ವರ್ಜಿತ ಆಗಿ ಅರವಿ ಅನ್ನ
ಉಪವಾಸ ಸಾವುದದೊ ಸ್ವಾನೋ
ಅಣ್ಣಾ ಕಡಿದು ಹಾಕುವೆ ಗೋಣಾ ॥2 ॥

ಪ್ರಾಣವಿಲ್ಲದ ಕೋತಿ ಹಿಂತವಳಿಗೆ
ಆಳತೈತಿ ಹಿಂತವನಿಗೆ ಒಪ್ಪುವದೋ
ಇಲ್ಲೊ ಹೆಣ್ಣಾ ಕಡಿದು ಹಾಕುವೆ ಗೋಣಾ ॥3 ॥

ಹೇ ! ಅಣ್ಣಾ ಹಿಂಥ ಕೋತಿ ಮಾತಿಗೆ ಬೆರಗಾಗಿ ಮೋತಿ ನೊಡುತ್ತ ನಿಂತರೆ ಹೊತ್ತಾಗಗುವದು. ಬೇಗನೆ ಹಿಡಿವಂತವನಾಗು ಇವನ ರುಂಡ ಚಂಡಾಡಿ ಬಿಡುವೆನು. ಇವನೇನು ವೀರನಲ್ಲ, ಶೂರನಲ್ಲ, ಕುಬೇರನಲ್ಲ ಹಿಂಥ ಪದ್ಮಜಾತಿ ಹೆಣ್ಣು ಇವನಿಗೆ ದೊರೆಯಬೇಕಾದರೆ ಏನೋ ಇವನ ಸುದೈವ. ಎಲೋ ! ಮೂಢಾ ನಿನ್ನ ಹೆಂಡತಿಯು ನಿನಗೆ ದಕ್ಕುದಿಲ್ಲಾ ಬೇಗನೆ ಸ್ವಾಧೀನ ಮಾಡುವಂತವನಾಗು.

ರತ್ನಾಬಾಯಿ :

ಕೊಲ್ಲಬ್ಯಾಡರೊ ಕಾಂತನಾ
ಸೆರಗೊಡ್ಡಿ ಬೇಡಿ ಕೊಂಬುವೆನಾ
ವಾರಸ ಇಲ್ಲದೆ ಪರದೇಶಿ ನನ್ನ ಜನ್ಮ
ಸುಡಲಿ ಬಡತನ ಶಿವ ತಂದಾ
ಜನ್ಮದ ಕುಂದಾ ಬಿಡಿರಿ ಸೇರುವೆನಾ
ಅಣ್ಣಯ್ಯ ಹ್ಞಾ ಹ್ಞಾರೇನಾ ॥1 ॥

ಮೌಲಾಲಿ ಆಣಿಯ ನೆನಿರಪ್ಪ
ಮರತಿರೇನಯ್ಯ ಭೂಪಾ
ವ್ಯರ್ಥ ಮಾಡಲಿ ಬ್ಯಾಡರಿ ಪಾಪ
ತಂದೆ ಯಾಕ ಇಷ್ಟು ಕೋಪ
ದೇಶದೊಳಗೆ ಮೈಂದರ್ಗಿ ವಾಸ
ಗೈಬಿ ಫೀರ ಕಾಯೋ ಸೆರಗೊಡ್ಡಿ ಬೇಡಿಕೊಂಬೆನಾ ॥2 ॥

ಹೇ ! ಅಣ್ಣಯ್ಯಗಳಿರಾ ಆಶ್ರಯವಿಲ್ಲದವರು ನಾವು ಅಡವಿ ಪಾಲಾದರೆ ಬೆನ್ನ ಹತ್ತಿ ಬಂದು ನಮ್ಮ ಮೇಲೆ ಬಲತ್ಕಾರ ಮಾಡುವದು ತರವಲ್ಲೇನಪ್ಪ. ಕೇವಲ ಬಡವರು ನಾವು. ಅಡಿ ಅಡಿಗೆ ನಿಮಗೆ ಶರಣು ಮಾಡುವೆವು. ನನ್ನ ಗಂಡನಿಗೆ ಜೀವದಾನ ಬಿಡರೆಪ್ಪ ಅಣ್ಣಯ್ಯಗಳಿರಾ.

ಸಣ್ಣ ಅರಬ :  ಎಲೇ, ಮೂಢಳೇ ಎಷ್ಟು ಪರಿಯಿಂದ ಶೋಕ ಮಾಡಿದರು ನಾವು ಬಿಡುವವರಲ್ಲ. ಬಾಯಿಲೆ ನುಡಿದಂತೆ ಕೈಲೆ ಮಾಡುವದೆ ನಮ್ಮ ಅರಬರ ಧರ್ಮ. ಈ ಕ್ಷಣ ಮಾತ್ರದಲ್ಲಿ ಇವನನ್ನು ಕಡಿದು ಚಲ್ಲುವೆವು.

[ಹೊಡೆಯುವರು]

ರತ್ನಾಬಾಯಿ : ಏನರೆಪ್ಪ ಅಣ್ಣಯ್ಯಗಳಿರಾ ? ಮರೆಗಿದ್ದ ಗಂಡನ ಹೊರಗೆ ತಂದು ಶರಣ ಮಾಡಿಸಿದರೆ, ಬಿಡುವೆನೆಂದು ಮೌಲಾಲಿ ಆಣೆ ಮಾಡಿದ್ದಿಲ್ಲವೆ ? ಮರತರೇನಪ್ಪ ಅಣ್ಣಗಳಿರಾ ಇರಲಿ ನೀವು ಮಾಡುವ ಕಾರ್ಯಕ್ಕೆ ಆ ಮೌಲಾಲಿ ದೇವರೆ ಸಾಕ್ಷಿ.

ಬಡವ :

ಅಪ್ಪಯ್ಯಗಳಿರಾ ನಾ ಮಾಡಿದ ತಪ್ಪವೇನು
ತಿಪ್ಪಿ ಮ್ಯಾಲಿನ ಹಿಪ್ಪಿಹಂಗ ನನ್ನ ರಂಗ
ಕೊಂದರೆಯೇನು ಬಂತು ಭಿಕ್ಷ ಬೇಡಿ ॥1 ॥

ನನ್ನ ಸತಿ ಹಾಳೊ ಸೀತಾದೇವಿ ಹಂತಾಕಿ
ಬಹುಕಾಲ ಮಾಡ್ಯಾಳ ಜೋಕಿ ಅನ್ನ ಹಾಕಿ
ಕೂಡಿದ ಮಾಯಾ ಆಗಲಿ ಹೋಗದು ಬಂತೊ ॥2 ॥

ಅಡವಿ ಕೆಂಚ್ಯಾರ ರೂಪ ಬಡವಂತ ಹೇಸಲಿಲ್ಲ
ಪಾದ ತೊಳೆದು ತಿಕ್ಕಿ ತಿಕ್ಕಿ ನೀರು ಹಾಕಿ
ಕೂಡಿದ ಮಾಯಾ ಅಗಲಿ ಹೋಗದು ಬಂತೋ ॥3 ॥

ಹೇ ! ಅಪ್ಪಗಳಯ್ಯ ನಾ ಮಾಡಿರುವ ತಪ್ಪಾದರುಯೇನು ? ತಿಪ್ಪಿಯ ಮೇಲಿನ ಹಿಪ್ಪಿಯಂತೆ ನನ್ನ ಶರೀರ ಹಿಂಥವನಿಗೆ ಕೊಂದರೆ ನಿಮಗೇನು ಬರುವದು. ನನ್ನ ಸತಿಯಳು ಸೀತಾದೇವಿ ಅಂಥವಳು. ಅಂಥವಳಿಗೆ ಬಿಟ್ಟು ನಾನು ದುರ್ಮರಣಕ್ಕೀಡಾಗಬೇಕೆ ? ಅಹೋ ! ಸತಿಯಳೆ ಇಂದಿಗೆ ನನ್ನ ನಿನ್ನ ಋಣ ಕಡಿಯಿತು. ಅಳಬೇಡ ಕಾಂತೆ ಅಳಬೇಡ.

[ತೆಕ್ಕಿಗೆ ಬೀಳುವಳು]

ಸಣ್ಣ ಅರಬ :  ಎಲೋ ! ಮೂರ್ಖಾ ಸುಳ್ಳೆ ಅಳುವದರಿಂದ ಫಲವಿಲ್ಲ. ಬೇಗನೆ ಬಂದು ನಮ್ಮ ಖಡ್ಗಕ್ಕೆ ಈಡಾಗು. ಹಾ ! ಅಣ್ಣಾ ತಡಮಾಡಬೇಡ. [ರಟ್ಟಿ ಹಿಡಿದು ಜಗ್ಗುವರು]

ರತ್ನಾಬಾಯಿ : ತಡಿಯಿರಿ, ತಡಿಯಿರಿ. ಅಣ್ಯಯ್ಯಗಳಿರಾ ಕೂಡಿದ ಗಂಡನ ಅಗಲಿಸಬೇಡಿರಿ. ಅಣ್ಣಯ್ಯಗಳಿರಾ ನಿಮಗೆ ಸೆರಗೊಡ್ಡಿ ಬೇಡುವೆನು.

ಸಣ್ಣ ಅರಬ :  ಎಲೇ ! ಮೂರ್ಖಳೆ, ಇಷ್ಟು ಹೊತ್ತಿನತನಕ ಬೊಗಳಿದ್ದು ಬೊಗಳಿದಿ. ನಿನ್ನ ಗಂಡನ ಮೇಲಿನ ಆಸೆಯನ್ನು ಬಿಟ್ಟು ಬಿಡು. ನಮ್ಮ ಮೇಲ್ ಮಂದಿರದಲ್ಲಿ ಚಂದದಿಂದ ಇರುವಂತೆ, ನಡೆವಂತವಳಾಗು.

[ಕೊಲೆ ಮಾಡುವರು]

ರತ್ನಾಬಾಯಿ :

ಘಾತ ಮಾಡಿರಿ ಪ್ರಾಣಕಾಂತ ಆಗಿಹೋಯಿತೋ ನಷ್ಟ
ಎಷ್ಟು ಮುಚ್ಚಿ ಇಟ್ಟರು ದುಷ್ಟರು ಬಿಡಲಲ್ಲ ॥1 ॥

ತುಂಬಿದ ಹೊಳಿಯಾಗ ಮುಳಗಿ ಹೋಯಿತೊ ಹಡಗ
ಅಂಬಿಗಾರಗೆ ಮೌಲಾನಂಬೆ ದಾಟಿಸಲಿಲ್ಲ ॥2 ॥

ಅಯ್ಯೋ, ಶಿವ ಶಿವಾ ಘಾತವಾಯಿತು, ಘಾತವಾಯಿತು. ಹೇ ! ಪ್ರಾಣಕಾಂತಾ ಪಕ್ಕ ಕಿತ್ತಿದ ಪಕ್ಷಿಯಂತೆ ಅಡವಿಯ ಪಾಲ ಮಾಡಿ ಹೋದಿಯಾ ಕಾಂತಾ. ನಡು ಹೊಳಿಯಲ್ಲಿ ಹಡಗ ಮುಳಗಿ ಹೋಗುತ್ತಿರುವಾ ಅಂಬಿಗಾರ ಆಗಿ ಮೌಲಾಲಿ ಶರಣ ಬಂದು ಕಾಪಾಡಲಿಲ್ಲಾ. ಹೇ ತಂದೆ ಮೌಲಾಲಿಯೆ ನಮ್ಮ ಮೇಲೆ ಕಣ್ಣು ಮುಚ್ಚಿರುವಿಯಾ?

ಹಾ ಕಾಂತಾ….. ಹೇ ! ಕಾಂತಾ….. ಅಗಲಿ ಹೋಯಿತೊ ಅಗಲಿ ಹೋಯಿತೊ ಕಾಡಿನ ಬೆಳದಿಂಗಳದಂತೆ ನನ್ನ ಬಾಳು. ಎನ್ನ ಕುಂಕಮಕ್ಕೆ ಕುಂದು ಬಂದಿತೊ.

[ಹೋಗಿ ಜೋಗಿ ರಾಗಿನಲ್ಲಿ ಸ್ತೋತ್ರ ಮಾಡುವಳು]

ಅಯ್ಯ, ಇನ್ನೇನು ಗತಿ ಮಾಡಲಿ ? ಹೇ ! ಅಣ್ಣಯ್ಯಗಳಿರಾ ಕೂಡಿದ ಜೋಡಿಯನ್ನು ಅಗಲಿಸಿ ಕರ್ಮಕ್ಕೆ ಈಡಾದ ನಿಮ್ಮನ್ನು ಪರಮೇಶ್ವರ ಮೆಚ್ಚುವನೆ ? ಆಡಿದ ನುಡಿಯನ್ನು ಮರಿತು ಮೋಸದ ಕೆಲಸಕ್ಕೆ ಹೇಸದವರಾಗಿ ನಾಳೆ ಯಮ ಬಾಧೆ ತಪ್ಪಲಾರದು ತಪ್ಪಲಾರದು.

ಅರಬರು :

ಸಾಕು ಬಿಡು ಸುಂದರಿ ಎಷ್ಟು ದುಃಖ ಮಾಡತಿ
ದುಃಖ ಮಾಡತಿ ಮಾಡಿ ಏನ ತರುತಿ
ವ್ಯರ್ಥ ನೆಪಾಗಳೆ ಸುಳ್ಳೆ ಮಸ್ತಕ ಬ್ಯಾನಿ ॥1 ॥
ಬಣ್ಣ ಬಾಡಗೀಡಿತು ತಂಪ ನೆರಳಿಗೆ ನಡಿ
ನೆರಳಿಗೆ ನಡಿ ತಕೊ ಮುತ್ತಿನ ಕೊಡಿ
ನಾವೆ ಹೆಚ್ಚಿನವರು ನಿನ್ನ ಇಚ್ಛೆದಿಂದ ಬಾರೆ ॥2 ॥

ನೀನು ತಗಲು ಮಾಡಿದರೆ ಬೇಗನೆ ತೊಗಲು ಎಚ್ಚೆವೆ
ತೊಗಲ ಉಚ್ಚವೆ ಹಿಡಿದು ಬಗಲಾಗ ಮುಚ್ಚುವೆ
ಚದರಿ ನಿನ್ನ ಪದರಾ ಹಿಡಿದು ಕುದರಿ ಮ್ಯಾಲ ಕಟ್ಟುವೆ ॥3 ॥

ಹೇ ! ಕಾಂತಾಮಣಿಯೆ, ಸಾಕು ಬಿಡುವಂತಾಕಿಯಾಗು. ಎಷ್ಟು ದುಃಖ ಮಾಡುತಿ. ಹಗಲ ರಾತ್ರಿ ದುಃಖ ಮಾಡಿದರೆ ನಿನ್ನ ಗಂಡ ಸಿಗುವನೇನು ? ಬಿಡೆ ನಿನ್ನ ಗಂಡನ ಚಿಂತೆಯನ್ನು ಬಿಟ್ಟು ಬಿಡು. ಬೇಗದಿಂದ ನಮ್ಮ ಮಂದಿರಕ್ಕೆ ನಡಿವಂತವಳಾಗು. ತಗೋ ಬಂಗಾರದ ದಾಗಿಣ ನಡವಿನಲ್ಲಿ ಒಡ್ಡಾಣ ಶ್ರೀಮಂತ ಸತಿ ಆಗಿ ಸುಖದಿಂದ ಕಾಲಹರಣ ಮಾಡು ನಡೆವಂತವಳಾಗು.

[ಕೈ ಹಿಡಿಯುವರು]

ರತ್ನಾಬಾಯಿ : ಹೇ ! ತಂದಿ ಮೌಲಾಲಿಯೇ, ದುಷ್ಟ ಅರಬರು ನಿನ್ನ ಮಗಳಿಗೆ ಕಷ್ಟ ಕೊಟ್ಟದು ನೋಡಲಾರದೆ, ಎನ್ನ ಮೇಲೆ ಕಣ್ಣು ಮುಚ್ಚಿದಿಯಾ, ತಂದೆ ಬೇಗ ಬಾ…. ಬಾ…..

[ಮೌಲಾಲಿ ಬರುವನು]

ಮೌಲಾಲಿ :

ದೂರ ಸರಿ ಮೂರ್ಖಾ ಶಿರ ಕಡಿಹುವೆನು
ಶಿರ ಕಡಿಹುವೆನು ಇನ್ನು ತಡವೇನು ॥1 ॥

ಮೌಲಾಲಿ ಆಣಿ ಮಾಡಿ ಕಾಣ ಕಾಣ
ಬದಲಾಡಿ ಖೂನ ಹಿಡಿ ಹಿಡಿ ಬಂದನಾನೆ ॥2 ॥

ಬಂದ ನಾನೇ ಮೌಲ ನಾನೇ ಮೌಲ ಸ್ವರ್ಗ
ಮೃತ್ಯುಯಲ್ಲಾ ಗುರುತು ನಾಮ ದಿನ ದಿನ ॥3 ॥

ಹೇ ! ನೀಚಾತ್ಮರೇ, ಯಥಾರ್ಥ ಪ್ರಾಣಿಯ ಆತ್ಮಹತ್ಯ ಮಾಡಿ, ಮಗಳ ಮೇಲೆ ಬಲತ್ಕಾರ ಮಾಡಿದರೆ ನಿಮಗೆ ಯಮಬಾಧೆ ಬಿಡಲಾರದು. ದುಷ್ಟಾತ್ಮರೇ ದೂರ ಸರಿವಂತವಾಗಿರಿ. ಕ್ಷಣ ಮಾತ್ರದಲ್ಲಿ ನಿಮ್ಮ ನಿಮ್ಮ ರುಂಡ ಹಾರಿಸಿ ಹದ್ದು ಕಾಗೆಗೆ ಹಬ್ಬ ಮಾಡಿಸುವೆನು. ನಾನು ಯಾರೆಂದು ತಿಳಿದಿರುವಿರಿ? ನಿಮ್ಮ ಮನಿ ಕುಲದೇವ ಮೌಲಾಲಿಯ ಆಣೆ ಮಾಡಿ ಕಾಣಾ ಕಾಣಾ ಬದಲ ಆಡಿ ಮತ್ತ ನನ್ನ ಮಗಳ ಮ್ಯಾಲ ಕೈ ಮಾಡಿದರೆ, ನಿಮ್ಮ ಕೈಯನ್ನು ಕಡಿದು ಸಮುದ್ರದಲ್ಲಿ ಚಲ್ಲುವೆನು ನೀಚಾತ್ಮರೇ.

ದೊಡ್ಡ ಅರಬ : ಹೇ ! ನೀಚಾ ನೀನೆಲ್ಲಿ ಮೌಲಾಲಿ? ಮೌಲಾಲಿ ಭೂಲೋಕದಲ್ಲಿ ಇರುವನೆ ? ವೇಷಧಾರಿಯಾಗಿ ಅಂಜಿಸಿದರೆ ಅಂಜುವರು ಅಲ್ಲಾ. ನಾವು ಯಾರು ? ಶೂರ ಅರಬರೆಂದು ನೆನಪಿನಲ್ಲಿ ಇರಲಿ ನೀಚಾ.

ಮೌಲಾಲಿ : ಹೇ ! ದುರಾತ್ಮರೆ, ದುರ ನಡತಿಯನ್ನು ನಡಿದು ಪರನಾರಿಯರ ಮೇಲೆ ಮನಸ್ಸು ಮಾಡಿ, ನೆನಸಿದರೆ ಮೌಲಾಲಿ ಸಿಗುವನೆ ? ಇಕೊ ನೋಡು ನೋಡು ನಾನೇ.

[ಅರಬರ ಕೊಲೆ ಮಾಡುವನು ಮತ್ತು ರತ್ನಾಬಾಯಿಗೆ ನಿಜರೂಪ ತೋರುವನು]

ಏನಮ್ಮ ! ಮಗಳೆ ನಿನ್ನ ಭಕ್ತಿಗೆ ಮೆಚ್ಚಿ ಸ್ವರ್ಗಲೋಕ ಬಿಟ್ಟು ಭೂಲೋಕದಲ್ಲಿ ಇಳಿದು ನಿನ್ನ ಎದುರಿಗೆ ಬಂದಿರುವೆನು. ಏನು ಬೇಡುತ್ತಿ ಬೇಡಮ್ಮ ಮಗಳೆ.

[ರತ್ನಾಬಾಯಿ ಘಾಬರಿಯಾಗಿ ಪಾದಕ್ಕೆರಗುವಳು]

ರತ್ನಾಬಾಯಿ :

ನೋಡು ತಂದಿ ಮೌಲಾಲಿ ಎನ್ನ ಘೋರ
ಅರಬರು ಮಾಡಿಯಾರ ಎಷ್ಟ ಗೋರ
ಮುತೈತ್ತನ ಕುಂಕುಮ ಬಟ್ಟಾ ಆಗಿ
ಹೋಯಿತೊ ನಷ್ಟ ನೀವೆ ನೋಡಿರಿ ॥1 ॥

ಗಂಡವಿಲ್ಲದ ರಂಡೆಯೆಂದು ವ್ಯರ್ಥ
ಜನ್ಮವು ಇದು ಯಾತಕ ಖೊಟ್ಟಿ ಸಂಸಾರ
ನಿಮ್ಮ ಕೈಲಿ ಎನ್ನ ಪ್ರಾಣ ಕಡಿದು ಒಗಿರಿ
ಮೈಂದರ್ಗಿ ಗ್ರಾಮದಲ್ಲಿ ಸತ್ತ್ಯಳ್ಳಸ್ವಾಮಿ ವೀರಭದ್ರ ॥2 ॥

ಹೇ ! ತಂದೆ ಮೌಲಾಲಿಯೇ, ನೋಡು ನೋಡು ಅರಬರು ಮಾಡಿದ ಕಾರಸ್ಥಾನ. ನನ್ನ ಕುಂಕುಮದ ಬಟ್ಟು ನಷ್ಟ ಮಾಡಿ ನನ್ನ ಮೇಲೆ ಬಲಾತ್ಕಾರ ಮಾಡುವವರಿದ್ದರು. ನಿನ್ನ ಕೈಲಿಂದೆನ್ನ ಶಿರವನ್ನು ಕಡಿವಂತವನಾಗು. ಅವರ ಕೈಯಲ್ಲಿ ಕೊಡಬೇಡ ತಂದಿಯೇ ಕೊಡಬೇಡ.

ಮೌಲಾಲಿ : ಹೇ ! ಮಗಳೆ ನಿನ್ನ ನಡತೆಗೆ ಮೆಚ್ಚಿ ನಿನ್ನ ವಚನಕ್ಕೆ ಸರಿಯಾಗಿ ನಿನಗೆ ದರ್ಶನ ಕೊಟ್ಟಿರುವೆನು. ಏನು ಬೇಡತಿ ಬೇಡಮ್ಮ ಮಗಳೆ ?

ರತ್ನಾಬಾಯಿ : ಹೇ ! ತಂದೆಯವರೆ, ಮತ್ತೇನು ಬೇಡಲಿ ತಂದೆ? ನನ್ನ ಮುತ್ತೈತನಕ್ಕಿಂತಲೂ ಮೃತ್ಯು ಲೋಕದಲ್ಲಿ ಮತ್ತಾವ ದೊಡ್ಡ ಒಡವಿಗಳಿಲ್ಲಾ, ಅಷ್ಟೇ ನೀಡಿ ಬಿಡು ತಂದಿಯೇ ಸೆರಗೊಡ್ಡಿ ಬೇಡುವೆನು.

ಮೌಲಾಲಿ : ಹೇ ! ರತ್ನಮ್ಮ ಜನನಿ, ನೀನಾಡುವ ಮಾತು ನಿಜ. ಆದರೆ ಜನನ ಮರಣ ಮಾಡುವದು ನನ್ನ ಕೈಯಲ್ಲಿ ಇಲ್ಲ. ಅದೆಲ್ಲಾ ಶಿವನಾಟ. ಇದ್ದರು ಇರಲಿ ನಿನ್ನ ಸಲವಾಗಿ ನನ್ನ ತಪದ ಬಲದಿಂದ ಆ ಪರಮಾತ್ಮನಿಗೆ ಒಲಿಸಿಕೊಂಡು ನಿನ್ನ ಪತಿಯ ಪ್ರಾಣ ಪ್ರತಿಷ್ಠೆ ಮಾಡುವೆನು ಮಗಳೆ ತಾಳು.

[ಮಹಾದೇವನ ಸ್ತೋತ್ರ ಮಾಡುವನು]

ಓಂ ನಮೋ ನಮೋ ಶಂಕರನೆ ಪರಮ
ಪೂಜ್ಯ ಪರಮೇಶ್ವರನೆ ಪರಲೋಕದಲ್ಲಿ ಪಾವನ
ಕರ್ತಾ ನೀ ಬೇಗ ಬಾ ಭಕ್ತ ವತ್ಸಲ
ಬೇಗ ಬಾ ಜಟಧಾರಿ ಹಠಯೋಗದ ಪ್ರಿಯನೆ
ಪದ್ಮಾಸನದ ಪರಮ ಒಡಿಯನೇ ಬೇಗ ಬಾ ॥1 ॥

[ಪರಮೇಶ್ವರನು ಪ್ರತ್ಯಕ್ಷ ಬರುವನು]

[ಮೌಲಾಲಿ ಸ್ತೋತ್ರ ಮಹಾದೇವನ ಮುಂದೆ]

ಸ್ತೋತ್ರ ಮಾಡುವೆ ನಾನು ಸ್ತೋತ್ರ ಮಾಡುವೆ
ಕ್ಷೇತ್ರದೊಳಗೆ ಕಾಶಿ ಈಶನ ಸ್ತೋತ್ರ ಕ್ಷೇತ್ರ
ದೊಳಗೆ ಕಾಶಿ ಈಶನ ಸ್ತೋತ್ರ ಮಾಡುವೆ ನಾನು
ನಾದ ನುಡಿಸುವೆನು ತ್ರಿಪುರಾರಿ ನಾದ ನುಡಿಸುವೆ ॥2 ॥

ಮಹಾದೇವ :

ಹರ ಹರ ಹರ ನಾಮ ನುಡಿಬೇಕೊ
ನಾಮ ನುಡಿಬೇಕೊ ಶಿವನಾಮ ನುಡಿ
ನಿತ್ಯ ನುಡಿಯಬೇಕೋ ಗುರು ನಾಮವ ॥1 ॥

ಪಾಪ ಸುಟ್ಟು ಆಗುವದು ಭಸ್ಮ ಹರ
ಹರ ಮುನಿದರೆ ಗುರು ಕಾಯುವನೊ
ಭಾವ ಭಕ್ತಿಗೆ ಮೆಚ್ಚುವನೊ ಹರಾ ॥2 ॥

ಪ್ರಪಂಚದಲ್ಲಿ ಪಾರಮಾರ್ಥಗೆದ್ದು ಪರಮೇಶ್ವರನ ನಾಮ ಸ್ತೋತ್ರ ಮಾಡುವವರಿಗೆ ಪ್ರತ್ಯಕ್ಷ ಭೆಟ್ಟಿ ಕೊಡುವನು.

ಮೌಲಾಲಿ : ನಮೋ ನಮೋ ತಂದೆಯವರೇ ವಂದಿಸುವೆನು ಕ್ಷಮಿಸಬೇಕು.

ಮಹಾದೇವ : ಮಂಗಲಮಸ್ತು ಮೌಲಾಲಿಯೇ. ಹೇ ! ಭಕ್ತವರ್ಧನಾ ಕಠೋರವಾದ ಸ್ವರದಿಂದ ನಮ್ಮ ನಾಮವನ್ನು ಉಚ್ಚರಿಸಿ ಭಕ್ತಿ ಎಂಬು ಪತ್ರ ಬರೆದು ಬರ ಮಾಡಿಕೊಂಡ ಬಗಿಯೇನು ಪೀರಾ ಜಗದ ವೀರಾ.

ಮೌಲಾಲಿ : ಹೇ ! ಪರ್ವತನಂದನಾ ಇರವಿ ಎಂಬತ್ತುನಾಲ್ಕು ಲಕ್ಷ ಜನ್ಮಾದಿಗಳು ಕುಕ್ಷೆಯಲ್ಲಿಟ್ಟು ಕೊಂಡು ರಕ್ಷಾ, ಶಿಕ್ಷ ಮೋಕ್ಷ ಕೊಡುವಂತಾ, ಮೋಕ್ಷದಾಯಕನೆ ರಕ್ಷಿಸು ನಮ್ಮ ಮಗಳ ಮಾಂಗಲ್ಯವನ್ನು ದಯಮಾಡು.

ಮಹಾದೇವ : ಹೇ ! ಹರ ಸುರನಾದ ಶ್ರೇಷ್ಠ ಫೀರನೆ ಯಾರ ತಪ್ಪು, ಒಪ್ಪು ಅವರ ಪದರಲ್ಲಿ ಕಟ್ಟಿ, ದುಷ್ಟರನ್ನು ಸಂಹರಿಸುವ ಕರ್ತವ್ಯ ನನ್ನದಿದೆ. ನಿನ್ನ ಬಯಕೆ ಏನಿರುವದು ನೋಡು ನೋಡು.

ಮೌಲಾಲಿ : ಹೇ ! ಗೌರಿನಂದನ ಗರತಿಯಾದ ಈ ನನ್ನ ಮಗಳ ನಿರ್ತದಿಂದ ನಿನ್ನ ನಾಮ ನುಡಿಯಲಾಗಿ ಅವಳನ್ನು ಗುರುತಿಸುವ ಕರ್ತವ್ಯ ನಿಮ್ಮದಾಗಿದೆ. ತಂದೆ ಕಣ್ಣು ತೆಗೆದು ನೋಡು ಕಾಪಾಡು.

ಮಹಾದೇವ : ಹೇ ! ಎನ್ನ ಪರಮ ಭಕ್ತನಾದ ಮೌಲಾಲಿಯೇ ನೀನು ಆಡುವ ಮಾತಿಗೆ ಮೆಚ್ಚಿದೆ, ಇಕೋ ನೋಡ ತಕ್ಕೊ ಈ ಸಂಜೀವವನ್ನು ಅವರ ಮೈಮೇಲೆ ಎಳಿದು ಅವರ ಪ್ರಾಣವನ್ನು ಪಡಿದು ಅವರನ್ನು ಉದ್ಧಾರ ಮಾಡುವಂತವನಾಗು. ನಾನು ಪೋಗಿ ಬರುವೆನು.

ಮೌಲಾಲಿ : ಆಗಲಿ, ವೃಷಭಾರೂಢನೆ ನೀನು ಹೇಳಿದಂತೆ ಸಂಜೀವ ಎಳಿಯುವೆನು.

ಏಳು ಏಳು ನನ್ನ ಪರಮ ಭಕ್ತ.

[ಬಡವ ಎದ್ದು ನಮಸ್ಕರಿಸುವನು]

ಅಹೋ ! ಮಗಳೆ ನಾನಿನ್ನು ಪೋಗಿ ಬರುವೆನು. ಇಕೋ ನೋಡು ನಿನ್ನ ಗಂಡನ ಮುಖವನ್ನು. ನಮಗೆ ಅಪ್ಪಣೆ ಕೂಡುವಂತಾಕಿಯಾಗು ಮಗಳೆ. ಬಹಳ ವೇಳೆಯಾಗಿದೆ.

ರತ್ನಾಬಾಯಿ : ಧನ್ಯ. ಧನ್ಯ ! ತಂದಿಯೇ, ಧನ್ಯಳಾದೆ. ಸ್ವರ್ಗ ಮೃತ್ಯು ಪಾತಾಳ ಮೂರು ಲೋಕದಲ್ಲಿ ಶ್ರೇಷ್ಠರಿಗೆ ರಕ್ಷಿಸುವದು ಕನಿಷ್ಠರಿಗೆ ದುಷ್ಟರಿಗೆ ಶಿಕ್ಷಿಸುವದು ಕರ್ತವ್ಯ ನಿನ್ನದಾಗಿದೆ ತಂದೆ. ನನ್ನ ಪತಿ ದೇವರ ಪ್ರಾಣ ಪಡೆದಂತೆ, ಈ ದುಷ್ಟರನ್ನಿಷ್ಟು ಉದ್ಧಾರ ಮಾಡು ತಂದೆ. ವಿಷ ಎರಿದವರಿಗೆ ಹಾಲು ಎರಿಯುವದು ಕರ್ತವ್ಯ ನನ್ನದಾಗಿದೆ ತಂದೆ. ಇವರಿಗಿಷ್ಟು ಉದ್ದಾರ ಮಾಡುವಂತವರಾಗಿರಿ.

ಮೌಲಾಲಿ : ಹೇ ! ರತ್ನಾಮಾತೆಯೇ, ನಿನ್ನ ಹೃದಯ ಕಮಲ ಹೆಂಥದು ? ಈ ದುಷ್ಟ ರಕ್ಕಸರು ನಿನ್ನ ಪರಿ ಪರಿ ಕಾಡಿ ನಿನ್ನ ಗಂಡನನ್ನು ಕೊಲೆ ಮಾಡಿ ಹೀನ ಕಾರ್ಯಕ್ಕೆ ಈಡಾದಂಥವರು. ಇವರ ಪ್ರಾಣವನ್ನು ನಾನು ಎಂದಿಗೂ ಪಡಿಯಲಾರೆನು. ಮಗಳೆ ಹೇಳಬೇಡ ಈ ಮಾತನ್ನು.

ರತ್ನಾಬಾಯಿ : ಹೇ ! ತಂದೆಯವರೇ, ಆ ಮೂರ್ಖ ಅರಬರು ನಮ್ಮ ರೂಪಕ್ಕೆ ಮೆಚ್ಚಿ ಬಂದು, ಅಡವಿಯಲ್ಲಿ ಪ್ರಾಣಕೊಟ್ಟರೆಂದು ಈ ಅಪವಾದ ನನ್ನ ಮೇಲೆ ಬರುವದು. ಈ ಭಾರ ನಾನು ಹೊರಲಾರೆ, ತಂದೆಯೇ ಬೇಗನೆ ಉದ್ಧಾರ ಮಾಡು.

ಮೌಲಾಲಿ : ಆಗಲಮ್ಮಾ ಆಗಲಿ ನಿನ್ನ ಇಚ್ಛೆಯಂತೆ ಆಗಲಿ ಈ ದುಷ್ಟರು ಎದ್ದು ನಿಂತಿರುವರು.

[ಏಳುವರು]

ಅರಬರು : ನಮೋ, ನಮೋ, ತಾಯಿ ನಿನ್ನ ಪಾದಕ್ಕೆ ವಂದಿಸುವೆವು. ಉದ್ಧಾರ ಮಾಡು. ನಿನ್ನನ್ನು ಕಾಡಿದ್ದು ತಪ್ಪಾಯಿತು, ತಾಯಿ ತಪ್ಪಾಯಿತು. ರಕ್ಷಿಸು ರಕ್ಷಿಸು.

[ಪಾದಕ್ಕೆ ಬೀಳುವರು]

ರತ್ನಾಬಾಯಿ : ಆಶೀರ್ವಾದ, ಆಗಲಿ ಹೋಗುವಂತವರಾಗಿರಿ ಅಪ್ಪ ಅಣ್ಣಯ್ಯಗಳಿರಾ.

***