ಹೊಸಗನ್ನಡ ಸಾಹಿತ್ಯದ ನವೋದಯದ ಆರಂಭದ ಕಾಲಕ್ಕೆ ಸಣ್ಣಕಥೆ ಮತ್ತು ಸಾಮಾಜಿಕ ಕಾದಂಬರಿ ಬರೆದು, ಇವೆರಡೂ ಪ್ರಕಾರಗಳಿಗೆ ಸತ್ವ ತುಂಬಿದ ಆನಂದಕಂದರ ಪ್ರತಿಭೆ ಬಹುಮುಖವಾದುದು. ಬಡತನದಲ್ಲಿ ಹೆಚ್ಚಿನ ಅಧ್ಯಯನಕ್ಕೆ ಅನುಕೂಲವಾಗದೇ ತಮ್ಮ ಪ್ರಾಥಮಿಕ ಹಂತದ ಶಿಕ್ಷಣವನ್ನಷ್ಟೇ ಪೂರೈಸಿ, ಕೇವಲ ಮುಲ್ಕೀ ಪರೀಕ್ಷೆ ಪಾಸಾದ ಬೆಟಗೇರಿ ಕೃಷ್ಣಶರ್ಮರು ಕನ್ನಡ ಅಗ್ರಗಣ್ಯ ವಿದ್ವಾಂಸರಲ್ಲಿ ಒಬ್ಬರೆಂದರೆ, ಇದೇನು ಬ ಡಾಯಿ ಕೊಚ್ಚುವ ಮಾತಲ್ಲ. ಹೊಸಗನ್ನಡದಂತೆ ಹಳಗನ್ನಡದಲ್ಲಿಯೂ ಪ್ರಭುತ್ವ ಪಡೆದವರು. ಕಥೆ-ಕಾದಂಬರಿಗಳ ಕೂಡ ಕಾವ್ಯ, ಜನಪದ, ಸಂಶೋಧನೆ, ಸಂಪಾದನೆ, ರೂಪಕ, ಚರಿತ್ರೆ, ವಿಮರ್ಶೆ, ಮಕ್ಕಳ ಸಾಹಿತ್ಯ, ಅನುವಾದ ಇವೆಲ್ಲ ಕೃಷಿ ಸಾಧನೆಯ ಜತೆ.ಕನ್ನಡದ ಉತ್ತಮ ಸಾಹಿತ್ಯ ಮಾಸ ಪತ್ರಿಕೆ ‘ಜಯಂತಿ’ಯ ಸಂಪಾದಕರಾಗಿ ನಾಡಿನ ನೂರಾರು ಜನ ಹೊಸ ಲೇಖಕರನ್ನು ತಮ್ಮ ಪತ್ರಿಕೆಯಿಂದಲೇ ಸಾಹಿತ್ಯದ ಹೊಸಲು ದಾಟಿಸಿದ್ದು ಅತ್ಯಂತ ಮಹತ್ವದ ಸಂಗತಿ.

ಇಷ್ಟೆಲ್ಲ ಸಾಹಿತ್ಯ ಸಾಧನೆಯಲ್ಲಿ ತಮ್ಮ ಬದುಕನ್ನು ತೇಯಿಸಿ, ಕನ್ನಡಕ್ಕಾಗಿಯೇ ಉಸಿರಾಡಿಸಿ, ಆ ಕಲ್ಲಿಗೆ ಬಡಿದು, ಈ ಕಲ್ಲಿಗೆ ಬಡಿದು ಬಡತನದಲ್ಲಿಯೇ ತೀರಿಹೋದ ಬೆಟಗೇರಿಯವರಿಗೆ ಸಂದ ನಾಡಿನ ಪ್ರತಿಫಲ, ಪ್ರತ್ಯುಪಕಾರ ಅತ್ಯಲ್ಪವೆಂದೇ ವಿಷಾದದಿಂದ ಹೇಳಬೇಕಾಗಿದೆ.

ನಾನೂ ಕೂಡ ಪ್ರಾರಂಭದಲ್ಲಿ ಆನಂದ ಕಂದರ ‘ಜಯಂತಿ’ಯಲ್ಲಿ ಕಥೆ, ಏಕಾಂಕ, ಕವಿತೆ ಬರೆದು ಲೇಖಕ ಪಟ್ಟ ಕಟ್ಟಿಕೊಂಡವನೇ. ‘ಜಯಂತಿ’ಯಲ್ಲಿ ಲೇಖನ ಪ್ರಕಟವಾದರೆ, ಅದೊಂದು ‘ಸರ್ಟಿಫಿಕೇಟ್‌ ಆಫ್‌ ಮೆರಿಟ್‌’ ಎನ್ನುವ ಕಾಲವೊಂದಿತ್ತು. ಜಯಂತಿಯಲ್ಲಿ ಲೇಖನ ಪ್ರಕಟವಾದರೆ ಅದೊಂದು ಹೆಮ್ಮೆ. ನಾನು ಅವರಿಗಿಂತ ತುಂಬಾ ಚಿಕ್ಕವನಾಗಿದ್ದರೂ, ಅವರ ಸಂಪರ್ಕ ಬಂದಿದ್ದು, ಅವರ ಅಭಿಮಾನಿಯಾಗಿದ್ದೆ. ಧಾರವಾಡಕ್ಕೆ ಹೋದಾಗ, ಅವಶ್ಯವಾಗಿ ಕಾಣುವ ವ್ಯಕ್ತಿ ಬೆಟಗೇರಿಯವರು. ನಮ್ಮಲ್ಲಿಯ ಬೇರೆ ಬೇರೆ ಕಾರ್ಯಕ್ರಮಗಳಿಗೆ ಕರೆಯಿಸಿದ್ದೆ. ಅಲ್ಲಲ್ಲಿ ಭೇಟಿಯಾಗುತ್ತಿದ್ದೆ. ಜಯಂತಿ ಲೇಖಕನೆಂದು ಒಂದಿಷ್ಟು ಹೆಮ್ಮಯಿರಿಸಿಕೊಂಡಿದ್ದೆ.

ಆನಂದಕಂದರ ಬಗೆಗೆ ಕರ್ನಾಟಕ ವಿಶ್ವವಿದ್ಯಾಲಯದ ಪ್ರಸಾರಾಂಗದ ವತಿಯಿಂದ ಕಳೆದ ಸಲ ಉಪನ್ಯಾಸ ನೀಡಲು ಆಹ್ವಾನ ಬಂದಾಗ ಸಂತೋಷದಿಂದ ಒಪ್ಪಿಕೊಂಡಿದ್ದೆ. ನನ್ನ ಅತ್ಯಂತ ಪ್ರೀತಿಯ ಲೇಖಕರೊಬ್ಬರ ಬದುಕು-ಬರಹದ ಬಗ್ಗೆ ಮಾತನಾಡಲು ಮಹಾಲಿಂಗಪುರದಲ್ಲಿ ಅವಕಾಶ ಸಿಕ್ಕಂತಾಗಿತ್ತು. ಆದರೆ ಅದೇ ಪ್ರಸಂಗದಲ್ಲಿ ಮಹಾಲಿಂಗಪುರ ಪದವಿ ಕಾಲೇಜಿನಲ್ಲಿ ಇಂಗ್ಲೀಷ್‌ ಉಪನ್ಯಾಸಕನಾಗಿದ್ದ ನನ್ನ ಕಿರಿಯ ಮಗ ಚಿ. ಶಿವಪ್ರಸಾದನ ಆಕಸ್ಮಿಕ ಅಗಲಿಕೆಯಿಂದ ಆ ಸಮಯ ಉಪನ್ಯಾಸ ನಿಂತು ಹೋಗಿದ್ದು, ಈಗ ಅದನ್ನೇ ಬೆಳಗಾವಿ ಜಿಲ್ಲೆಯ ಹುಕ್ಕೇರಿಯಲ್ಲಿ ೧೯೯೯ ಜನವರಿ ೨೭, ೨೮ ರಂದು ನಡೆದ ೪೧೮ ನೆಯ ಉಪನ್ಯಾಸ ಶಿಬಿರದಲ್ಲಿ ಮಾತನಾಡುವ ಪ್ರಸಂಗ ಒದಗಿಬಂತು.

ಕರ್ನಾಟಕ ವಿಶ್ವವಿದ್ಯಾಲಯದ ಪ್ರಸಾರಾಂಗ ವಿವಿಧ ವಿಷಯಗಳ ಬಗೆಗೆ ಉಪನ್ಯಾಸ ಮಾಲಿಕೆ ಏರ್ಪಡಿಸುತ್ತಲಿದ್ದು ಅದರಲ್ಲಿ ಕನ್ನಡ ವಿದ್ವಾಂಸರನ್ನು ಸೇರಿಸಿಕೊಂಡಿದ್ದು ಸಂತೋಷದ ಸಂಗತಿ.

ಈ ಸದವಕಾಶ ಒದಗಿಸಿಕೊಟ್ಟ ಹಾಗೂ ಅಲ್ಲಲ್ಲಿ ಭೇಟಿಯಾದಾಗ ಈ ಬಾಕಿ ತೀರಿಸಲು ಆತ್ಮೀಯವಾಗಿ ಒತ್ತಾಯಿಸುತ್ತಲಿದ್ದ ಪ್ರಸಾರಾಂಗದ ನಿರ್ದೇಶಕರಾದ ಪ್ರೊ. ಹಾ. ವೆಂ. ನಾಗೇಶ್‌ ಅವರಿಗೂ, ಸಹಾಯಕ ನಿರ್ದೇಶಕರಾದ ಡಾ. ಹರಿಲಾಲ್‌ ಪವಾರ್ ಅವರಿಗೂ ನನ್ನ ಕೃತಜ್ಞತೆಗಳು. ನೆರವಿಗಾಗಿ ಕೆಲ ಗ್ರಂಥ ನೀಡಿ ಸಹಕರಿಸಿದ ಶ್ರೀ ಆನಂದಕುಮಾರ ಮಂಡಿ, ಪ್ರೊ. ಅಶೋಕ ನರೋಡೆ ಹಾಗೂ ಹುಕ್ಕೇರಿಗೆ ಹೋಗುವಾಗ, ದಾರಿಯಲ್ಲಿ ನಿಲ್ಲಿಸಿಕೊಂಡು ಆತಿಥ್ಯ ನೀಡಿದ (ಹುಕ್ಕೇರಿಯ) ಡಾ. ದಯಾನಂದ ನೂಲಿ, ಚಿಕ್ಕೋಡಿ ಅವರಿಗೂ ಹುಕ್ಕೇರಿ ಪದವಿ ಕಾಲೇಜಿನ ಪ್ರಾಂಶುಪಾಲ ಎ. ಎಂ. ನದಾಫ ಮತ್ತು ಸಿಬ್ಬಂದಿಯವರಿಗೂ ನಾನು ಋಣಿ.

ದು.ನಿಂ. ಬೆಳಗಲಿ
‘ಕಾದಂಬರಿ’ ಸೋಮವಾರ ಪೇಟೆ                     
ಬನಹಟ್ಟಿ (ಜಿ. ಬಿಜಾಪುರ)