ಈ ಗ್ರಂಥದಲ್ಲಿ ನಾವು ಚಿಕ್ಕಂದಿನಲ್ಲಿ ಹಲವಾರು ಆಟಗಳನ್ನು ಮೆಲುಕಾಡಿಸಿ ಬರೆಯುವುದರ ಜೊತೆಗೆ  ಜಿಲ್ಲೆಯ ಬೇರೆ ಬೇರೆ ಪ್ರದೇಶಗಳಲ್ಲಿ ಪ್ರಚಲಿತ ಇರುವ ಆಟಗಳನ್ನೂ ಸಂಗ್ರಹಿಸಿಕೊಡಲಾಗಿದೆ. ಇಮದು ಜಿಲ್ಲೆಯಲ್ಲಿ ಬಳಕೆಯಲ್ಲಿರುವ ಜನಪದ ಆಟಗಳೆಲ್ಲವೂ ಈ ಕೃತಿಯಲ್ಲಿ ಪಡಮೂಡಿವೆ ಎಂದು ಹೇಳಲಾರೆವು. ಜಿಲ್ಲಾಮಟ್ಟದ ಜನಪದ ಆಟಗಳನ್ನು ಸಂಗ್ರಹಿಸುವಲ್ಲಿ ನಮ್ಮದೊಂದು ಸಣ್ಣ ಪ್ರಯತ್ನ ಮಾತ್ರ. ಇಡೀಯ ಕರ್ನಾಟಕದ ಮಟ್ಟದಲ್ಲಿ ಇಂತಹ ಪ್ರಯತ್ನ ನಡೆಯಬೇಕೆಂಬ ಆಶಯದಿಂದ ಈ ಗ್ರಂಥ ಹೊರತರುತ್ತಿದ್ದೇವೆ. ಈ ಗ್ರಂಥದ ಹಸ್ತಪ್ರತಿ ೧೯೭೫ರ ವೇಳೇಗಾಗಲೇ ಸಿದ್ಧವಾಗಿದ್ದರೂ ಅಚ್ಚು ಹಾಕಿಸುವ ಧೈರ್ಯವಿಲ್ಲದೆ, ನಾವು ಮೀನಮೇಷ ಮಾಡುತ್ತಿರುವ ಸಂದರ್ಭದಲ್ಲಿ ಕರ್ನಾಟಕ ವಿಶ್ವವಿದ್ಯಾಲಯದ ಪ್ರಸಾರಾಂಗದವರು ಈ ಕೃತಿಯನ್ನು ಕೈಗೆತ್ತಿಕೊಂಡು ಪ್ರಕಟಿಸುತ್ತಿರುವುದು ಸಂತೋಷಕರ ಸಂಗತಿ. ಈ ಕಾರ್ಯಕ್ಕಾಗಿ ಕರ್ನಾಟಕ ವಿಶ್ವವಿದ್ಯಾಲಯದ ಕುಲಪತಿಗಳಾದ ಡಾ. ಎಸ್.ಎಸ್. ಒಡೆಯರ ಅವರಿಗೆ.  ಕನ್ನಡ ಅಧ್ಯಯನ ಪೀಠದ ಮುಖ್ಯಸ್ಥರಾದ ಎಮ್. ಎಸ್. ಸುಂಕಾಪುರ ಅವರಿಗೆ, ‘ಪ್ರಸಾರಾಂಗ’ದ ನಿರ್ದೇಶಕರಾದ ಶ್ರೀ ಚೆನ್ನವೀರ ಕಣವಿ,  ಉಪನಿರ್ದೇಶಕರಾದ ಶ್ರೀ ಎಸ್.ಬಿ. ನಾಯಕ ಇವರಿಗೆಲ್ಲರಿಗೆ ಕೃತಜ್ಞರಾಗಿದ್ದೇವೆ. ಆಟಗಳನ್ನು ಸಂಗ್ರಹಿಸುವ ಕಾಲಕ್ಕೆ ವಿವಿಧ ಬಗೆಯಲ್ಲಿ ನೆರವಿತ್ತ ಮಹನೀಯರಿಗೆ, ಮಹಿಳೆಯರಿಗೆ, ನಮ್ಮ ವಿದ್ಯಾರ್ಥಿ/ನಿಯರಿಗೆ, ಹಳ್ಳಿಯ ಬಾಲಕ ಬಾಲಕಿಯರಿಗೆ ನಮ್ಮ ಕೃತಜ್ಞತೆಗಳು

ಸಂಪಾದಕರು
ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಕಾಲೇಜು,
ಹೊನ್ನಾವರ, ಉತ್ತರಕನ್ನಡ
೨-೮-೧೯೭೯