ನಾನು ಈ ಹಿಂದೆ ನವಂಬರ್ ೨೦೦೨ರಲ್ಲಿ ಬ್ಯಾಡಗಿಯಲ್ಲಿ ನಡೆದ ೪೫೮ ನೆಯ ವ್ಯಾಸಂಗ ವಿಸ್ತರಣ ಉಪನ್ಯಾಸ ಶಿಬಿರದಲ್ಲಿ “ಕರ್ನಾಟಕ ಬುಡಕಟ್ಟುಗಳಲ್ಲಿ ನ್ಯಾಯ ತೀರ್ಮಾನ” ವಿಷಯದ ಮೇಲೆ ಉಪನ್ಯಾಸ ನೀಡಿದ್ದೆ. ಅದನ್ನು ಇಲ್ಲಿ ಬರಹರೂಪಕ್ಕೆ ಇಳಿಸಿದ್ದೇನೆ. ನ್ಯಾಯ ತೀರ್ಮಾನ ಅನೇಕ ವರ್ಷಗಳಿಂದ ನನ್ನ ಗಮನವನ್ನು ಸೆಳೆಯುತ್ತ ಬಂದಿದೆ. ಅದರಲ್ಲೂ ಸಾಂಪ್ರದಾಯಿಕ ಸಮಾಜದಲ್ಲಿ ಅಸ್ತಿತ್ವದಲ್ಲಿದ್ದ ಚಿತ್ರ ವಿಚಿತ್ರ ಪದ್ಧತಿಗಳು, ಅವುಗಳಲ್ಲಿಯ ಬದಲಾವಣೆ ಇವೆಲ್ಲ ಸಮಾಜವಿಜ್ಞಾನಿಗಳ ಕುತೂಹಲ ಕೆರಳಿಸುತ್ತ, ಅಧ್ಯಯನಗಳಿಗೆ ಪ್ರೇರೇಪಿಸುತ್ತ ಬಂದಿವೆ. ಇತ್ತೀಚಿಗೆ ಪ್ರಕಟವಾದ ನನ್ನ “ದೇವರ ನ್ಯಾಯ” ಗ್ರಂಥದಲ್ಲಿ ಈ ಬಗೆಯ ಹಲವು ಕಿರು ಅಧ್ಯಯನಗಳು ಇವೆ. ಆಸಕ್ತರು ಅವುಗಳನ್ನು ನೋಡಬಹುದು.

ಪ್ರಸ್ತುತ ಪುಸ್ತಿಕೆಯ ಸಂದರ್ಭದಲ್ಲಿ ನಾನು ಪ್ರಸಾರಾಂಗದ ನಿರ್ದೇಶಕರಾದ ಡಾ. ವೀರಣ್ಣ ರಾಜೂರ, ಕ.ವಿ. ಮುದ್ರಣಾಲಯದ ನಿರ್ದೇಶಕರಾದ ಡಾ.ಬಿ.ಆರ್. ಹಿರೇಮಠ ಇವರಿಗೆ ಕೃತಜ್ಞನಾಗಿದ್ದೇನೆ ಹಾಗೂ ವಿ.ವಿ. ಅಧಿಕಾರವರ್ಗದವರಿಗೆ ಕೃತಜ್ಞತೆ ಸಲ್ಲಿಸುತ್ತೇನೆ. ಬ್ಯಾಡಗಿಯಲ್ಲಿ ನನ್ನ ಹಾಗೂ ನನ್ನ ಸಹ ಉಪನ್ಯಾಸಕರ ಯೋಗಕ್ಷೇಮ ನೋಡಿಕೊಂಡ ಉಪನಿರ್ದೇಶಕ ಡಾ. ಹರಿಲಾಲ ಪವಾರ ಮತ್ತು ಬ್ರಹ್ಮಕುಮಾರಿ ಈಶ್ವರೀಯ ವಿಶ್ವವಿದ್ಯಾಲಯದ ಬ್ಯಾಡಗಿ ಶಾಖೆಯವರಿಗೆ ನಮ್ಮೆಲ್ಲರ ಪರವಾಗಿ ಕೃತಜ್ಞತೆಗಳು. ಈ ಪುಸ್ತಿಕೆಯಲ್ಲಿ ಸೇರಿಕೊಂಡ ವಿವಿಧ ಮಾಹಿತಿಗಳಿಗಾಗಿ ಸಂಬಂಧಪಟ್ಟ ಗ್ರಂಥಗಳ ಲೇಖಕರಿಗೆ ಕೃತಜ್ಞನಾಗಿದ್ದೇನೆ.

ಎಚ್‌.ವಿ. ನಾಗೇಶ್‌
ಡಿ ೪, ಕವಿವಿ ಆವರಣ
ಧಾರವಾಡ-೩