ಕರ್ನಾಟಕ ವಿಶ್ವವಿದ್ಯಾಲಯದ ವ್ಯಾಸಂಗ ವಿಸ್ತರಣ ಉಪನ್ಯಾಸ ಮಾಲೆಯ ಅಂಗವಾಗಿ, ಶ್ರೀ ಹುರಕಡ್ಲಿ ಅಜ್ಜ ಶಿಕ್ಷಣ ಸಮಿತಿಯ ಕೆ.ಸಿ. ಜಿಗಳೂರು ಕಲಾ ಹಾಗೂ ಸುಶೀಲಾ ಮುರಿಗೆಪ್ಪ ಶೇಷಗಿರಿ ವಾಣಿಜ್ಯ ಮಹಿಳಾ ಮಹಾವಿದ್ಯಾಲಯ, ಧಾರವಾಡ ಇವರ ಸಹಯೋಗದೊಂದಿಗೆ ದಿನಾಂಕ ೨೨.೧೧.೨೦೦೩ರಂದು ೪೬೦ನೆಯ ಶಿಬಿರವನ್ನು ಏರ್ಪಡಿಸಲಾಗಿತ್ತು. ಈ ಮಾಲೆಯಲ್ಲಿ ‘ಜನಪದ ಸಾಹಿತ್ಯದಲ್ಲಿ ಮಹಿಳಾ ಪ್ರತಿಭಟನೆ’ ಎಂಬ ವಿಷಯ ಕುರಿತು ನೀಡಿದ ಉಪನ್ಯಾಸದ ವಿಸ್ತೃತ ರೂಪವೇ ಈ ಚಿಕ್ಕ ಪುಸ್ತಿಕೆ.

ಪುರುಷ ಪ್ರಧಾನ ವ್ಯವಸ್ಥೆಯಲ್ಲಿ ನಲುಗಿದ ಹೆಣ್ಣು ವ್ಯವಸ್ಥೆಗೆ ತೋರಿದ ಪ್ರತಿಕ್ರಿಯೆ ಎಂತಹದು ಎಂಬುದು ಕುತೂಹಲಕಾರಿಯಾದುದು. ಮಹಿಳೆಯರಿಂದ ಹರಿದು ಬಂದ ಜನಪದ ಬಿಡಿಗೀತೆಗಳಲ್ಲಿ ಕಥನ, ಕಾವ್ಯಗಳಲ್ಲಿ ಹೆಣ್ಣಿನ ನೋವು-ನಲಿವುಗಳ ಜೊತೆಗೆ ಅವಳ ಮಾನವೀಯ ವಾದ ತುಡಿತ-ಮಿಡಿತಗಳ ಮನೋಲೋಕ ತೆರೆದುಕೊಂಡಿದೆ. ಅಸಹಾಯಕಳಾಗಿ ವ್ಯವಸ್ಥೆಗೆ ಬಲಿಯಾದರೂ, ಸಿಡಿದು ಹೊರಬರುವ ಪ್ರಯತ್ನವನ್ನು ಮಾಡಿರುವದನ್ನು ಮಹಿಳಾ ಜನಪದ ಸಾಹಿತ್ಯದ ಮೂಲಕ ಕಂಡುಕೊಳ್ಳಬಹುದು.

ಮಹಿಳಾ ಅಧ್ಯಯನದಲ್ಲಿ ನನಗಿರುವ ಆಸಕ್ತಿಯನ್ನು ಗುರುತಿಸಿ ಈ ಉಪನ್ಯಾಸಕ್ಕೆ ಅವಕಾಶ ಕಲ್ಪಿಸಿಕೊಟ್ಟು ಪುಸ್ತಕ ರೂಪದಲ್ಲಿ ಹೊರತರುತ್ತಿರುವ ಪ್ರಸಾರಾಂಗದ ಉಪನಿರ್ದೇಶಕ ಡಾ. ಹರಿಲಾಲ ಪವಾರ ಅವರಿಗೆ, ನಿರ್ದೇಶಕ ಡಾ. ವೀರಣ್ಣ ರಾಜೂರ ಅವರ ಸಹೃದಯಕ್ಕೆ ಕೃತಜ್ಞತೆಗಳು.

ಶ್ರೀ ಹುರಕಡ್ಲಿ ಅಜ್ಜ ಶಿಕ್ಷಣ ಸಂಸ್ಥೆ, ಧಾರವಾಡ ಇವರಿಗೂ ಆಸ್ಥೆಯಿಂದ ಉಪನ್ಯಾಸವನ್ನು ಆಲಿಸಿದ ವಿದ್ಯಾರ್ಥಿನಿಯರಿಗೂ ವಂದನೆಗಳು.

ಡಾ. ಮಂದಾಕಿನಿ ಪುರೋಹಿತ
ಧಾರವಾಡ