ವಚನವಾಙ್ಮಯ ಪಿತಾಮಹರೆನಿಸಿಕೊಂಡ ಡಾ. ಪಿ.ಜಿ. ಹಳಕಟ್ಟಿಯವರು ವಚನ ಸಾಹಿತ್ಯದ ಸಂಶೋಧನೆಗೆ ಪ್ರಕಟನೆಗೆ ತಮ್ಮ ತನುಮನಧನವನ್ನೆಲ್ಲ ಅರ್ಪಿಸಿದ ಮಹಾನುಭಾವರು. ಅವರು ಮಾಡಿದ ವಚನ ಪ್ರಕಾಶನಕಾರ್ಯ ಅದ್ವಿತೀಯವಾದುದು. ಅವರು ಬಾಲಸಂಗಯ್ಯನ ವಚನಗಳನ್ನು ಮೊದಲಬಾರಿಗೆ ಪ್ರಕಟಿಸಿ ಕನ್ನಡಿಗರಿಗೆ ಮಹದುಪಕಾರ ಮಾಡಿದರು. ಈಗ ಬಾಲಸಂಗಯ್ಯನ ವಚನ ಪ್ರತಿಗಳು ಉಪಲಬ್ಧವಿಲ್ಲ. ಇದನ್ನು ಮನದಂದು ಕನ್ನಡ ಅಧ್ಯಯನಪೀಠವು ಈ ವಚನಗಳ ಪ್ರಕಾಶನ ಕಾರ್ಯಕ್ಕೆ ಮನಸ್ಸು ಮಾಡಿದೆ. ಸಮಗ್ರವಚನ ವಾಙ್ಮಯವನ್ನು ಪ್ರಕಟಿಸಿದರೆ ಅದರ ಮೌಲ್ಯಮಾಪನಕ್ಕೆ ಅನುಕೂಲವಾಗಬಲ್ಲುದು.

ಒಂದು ಕಾಲಕ್ಕೆ ಬಾಲಸಂಗಯ್ಯನ ವಚನಗಳಿಗೆ ಬೇಡಿಕೆ ಹೆಚ್ಚಾಗಿರಬೇಕು. ಆದ್ದರಿಂದಲೇ ಈ ವಚನಗಳ ತಾಡವೋಲೆ ಪ್ರತಿಗಳು ಎಲ್ಲ ಮಠಮಾನ್ಯಗಳಲ್ಲಿಯೂ ಹಸ್ತಪ್ರತಿಭಂಡಾರಗಳಲ್ಲಿಯೂ ದೊರೆಯುತ್ತವೆ. ವಿಷಯವನ್ನು ಜನಸಾಮಾನ್ಯರಿಗೂ ತಿಳಿಯುವಂತೆ ಹೆಚ್ಚು ನಿಚ್ಚಳವಾಗಿ ಬರೆದ ಕೃತಿ ಇದೊಂದಾಗಿರುವದೇ ಅದಕ್ಕೆ ಮುಖ್ಯಕಾರಣ. ನಮ್ಮ ಕನ್ನಡ ಅಧ್ಯಯನಪೀಠದ ಹಸ್ತಪ್ರತಿಸಂಗ್ರಹದಲ್ಲಿರುವ  ಎರಡು ಹಡ್ತಪ್ರತಿಗಳ ಸಹಾಯದಿಂದ ಈ ಕೃತಿಯನ್ನು ಸಂಶೋಧಿಸಿ ಪ್ರಕಟಿಸಿದ್ದೇವೆ. ಇದು ವಚನಪ್ರೇಮಿಗಳಿಗೆ ಆನಂದವನ್ನುಂಟು ಮಾಡಿದರೆ ಸಾಕು; ನಮ್ಮ ಶ್ರಮ ಸಾರ್ಥಕವೆನಿಸುವದು.

ಬಾಲಸಂಗಯ್ಯನ ವಚನಗಳ ಪ್ರಕಾಶನ ಕಾರ್ಯಕ್ಕೆ ನೆರವನ್ನಿತ್ತು ಸೂಕ್ಷ್ಮ ವಿಚಾರದಲ್ಲಿ ಸಹಭಾಗಿಯಾದ ಸಂಗಣ್ಣ ಕುಪ್ಪಸ್ತ ಅವರನ್ನು ಇಲ್ಲಿ ನೆನೆಯಲೇಬೇಕು. ಹಸ್ತಪ್ರತಿಯನ್ನು ತಯಾರಿಸುವಲ್ಲಿ ಶ್ರಮವಹಿಸಿ ಶ್ರದ್ಧೆಯಿಂದ ಕಾರ್ಯಮಾಡಿದ ಡಾ. ವ್ಹಿ. ಎಸ್. ಕಂಬಿ, ಶ್ರೀ ವ್ಹಿ. ಬಿ. ರಾಜೂರ ಅವರು ಮುಖ್ಯರು. ಅವರಿಗೂ ಈ ಕೃತಿಪ್ರಕಟನೆಯ ಶ್ರೇಯಸ್ಸಿನಲ್ಲಿ ಪಾಲು ಇದೆ.

ನಮ್ಮ ನಚ್ಚಿನ ಕುಲಪತಿಗಳಾದ ಡಾ. ಆರ್. ಸಿ. ಹಿರೇಮಠ ಅವರು ಮೊಟ್ಟಮೊದಲು ಸಮಗ್ರ ವಚನ ವಾಙ್ಮಯ ಪ್ರಕಾಶನದ ಕನಸು ಕಂಡವರು. ಕನಸನ್ನು ನನಸಾಗಿ ಮಾಡಲು ಬಹುಪಾಲು ಕಾರ್ಯಮಾಡಿ ಮುಗಿಸಿದವರು. ಅವರ ಮಾರ್ಗದಲ್ಲಿಯೇ ನಾವಿಂದು ಮುಂದೆ ಸಾಗಿದ್ದೇವೆ; ಅವರಿಗೆ ನಾವು ಉಪಕೃತರು.

ಗ್ರಂಥಪ್ರಕಟನ ವಿಭಾಗದ ನಿರ್ದೇಶಕರಾದ ಶ್ರೀ ಚೆನ್ನವೀರ ಕಣವಿ ಹಾಗೂ ಉಪನಿರ್ದೇಶಕ ಶ್ರೀ ಎಸ್. ಬಿ. ನಾಯಕ ಅವರು ಈ ಕೃತಿಯನ್ನು ಅಂದವಾಗಿ ಪ್ರಕಟಿಸಿದ್ದಾರೆ. ಅವರನ್ನು ಈ ಸಂದರ್ಭದಲ್ಲಿ ಮರೆಯಲಾರೆವು.

ಕರ್ನಾಟಕ ವಿಶ್ವವಿದ್ಯಾಲಯ ಮುದ್ರಣಾಲಯ ಅಧಿಕಾರಿಗಳಾದ ಶ್ರೀ ಜಿ. ಬಿ. ಮನ್ವಾಚಾರ ಅವರು ಈ ಕೃತಿಯನ್ನು ಅಂದವಾಗಿ ಮುದ್ರಿಸಿದ್ದಾರೆ. ಅವರಿಗೂ ಕೃತಜ್ಞತೆಗಳು ಸಲ್ಲುತ್ತವೆ.

ಸಂಪಾದಕರು