ಈಗ ಒಂದು ವರ್ಷದ ಹಿಂದೆ ವಿಜಾಪುರ ಜಿಲ್ಲೆಯ ಸಿಂದಗಿ ತಾಲ್ಲೂಕಿನ ಕಡಣಿಯಲ್ಲಿ ಕರ್ನಾಟಕ ವಿಶ್ವವಿದ್ಯಾಲಯದ ವ್ಯಾಸಂಗ ವಿಸ್ತರಣ ವಿಭಾಗವು ಉಪನ್ಯಾಸ ಶಿಬಿರವನ್ನೇರ್ಪಡಿಸಿದಾಗ ಆ ಶಿಬಿರದಲ್ಲಿ ಭಾಗವಹಿಸಿ ಜೆ.ಕೃಷ್ಣಮೂರ್ತಿಯವರನ್ನು ಕುರಿತು ಉಪನ್ಯಾಸ ಮಾಡುವ ಸದವಕಾಶ ನನಗೆ ಲಭಿಸಿತು. ಆ ಉಪನ್ಯಾಸವೇ ಈಗ ವಿಸ್ತೃತವಾಗಿ ಪುಸ್ತಕ ರೂಪದಲ್ಲಿ ಪ್ರಕಟವಾಗುತ್ತಿದೆ. ಅಂದು ಉಪನ್ಯಾಸ ಮಾಡಲಿಕ್ಕೆ ವ್ಯಾಸಂಗ ವಿಸ್ತರಣ ವಿಭಾಗದ ನಿರ್ದೇಶಕರಾದ ಶ್ರೀ ಹಾ.ವೆಂ.ನಾಗೇಶ್‌, ಉಪನಿರ್ದೇಶಕರಾದ ಡಾ ಹರಿಲಾಲ ಪವಾರ ಅವರ ಪ್ರೇರಣೆ ಕಾರಣವಾಯಿತು. ಇವರಿಗೆ ನನ್ನ ಕೃತಜ್ಞತೆಗಳು. ಮಹಾನ್‌ ತತ್ವಜ್ಞಾನಿ ಜೆ. ಕೃಷ್ಣಮೂರ್ತಿ ಕುರಿತು ಆಸಕ್ತಿ ಮೂಡಿಸಿದ ಅವರ ಅನೇಕ ಉಪನ್ಯಾಸಗಳನ್ನು ಕೇಳುವ ಸುಯೋಗ ಹೊಂದಿದ್ದ ನನ್ನ ಹಿರಿಯಣ್ಣನವರಾದ ಶ್ರೀ ಚನ್ನಣ್ಣನವರಿಗೆ ನನ್ನ ಅನಂತ ಕೃತಜ್ಞತೆಗಳು.

ಜೆ. ಕೃಷ್ಣಮೂರ್ತಿ ಇಪ್ಪತ್ತನೇ ಶತಮಾನ ಕಂಡ ಶ್ರೇಷ್ಠ ತತ್ವಜ್ಞಾನಿ. ಅವರ ವಿಚಾರಗಳು, ಚಿಂತನೆಗಳು ಅವರ ಪ್ರವಚನಗಳಲ್ಲಿ ಅಭಿವ್ಯಕ್ತಿಗೊಂಡಿವೆ. ಆಂಗ್ಲ ಭಾಷೆಯಲ್ಲಿ ಇರುವ ಇರುವ ಅವರ ಪ್ರವಚನಗಳು ಕನ್ನಡದಲ್ಲಿ ವಿರಳವಾಗಿವೆ. ಇತ್ತೀಚೆಗೆ ಕೆಲ ಪುಸ್ತಕಗಳು ಪ್ರಕಟವಾಗಿವೆ. ಬುದ್ಧಿಜೀವಿಗಳ ತತ್ವಜ್ಞಾನಿಯೆಂದು ಖ್ಯಾತರಾಗಿರುವ ಜೆ.ಕೆ. ಅನೇಕ ಹಿರಿಯರಿಗೆ ಚೇತನಶಕ್ತಿಯಾಗಿದ್ದಾರೆ. ಅವರ ವಿಚಾರಗಳನ್ನು ಅವರ ಮೂಲ ಗ್ರಂಥಗಳಲ್ಲಿ ಓದಿ ಆನಂದಿಸಿದರೆ ಹೆಚ್ಚು ಸೂಕ್ತ. ಕನ್ನಡದಲ್ಲಿ ಪರಿಚಯಿಸಲು ನನ್ನದು ಪ್ರಾಮಾಣಿಕ ಪ್ರಯತ್ನ. ಅವರ ಕುರಿತ ಗ್ರಂಥಗಳ  ಪಟ್ಟಿ ಕೊಟ್ಟಿದ್ದೇನೆ. ಎಲ್ಲ ಲೇಖಕರಿಗೆ ನನ್ನ ಕೃತಜ್ಞತೆಗಳು.

ಪ್ರೊ. ಸುರೇಶ ಚೋಳಖೆ
ಶ್ರೀ ಸಂಗಮೇಶ್ವರ ಕಲಾ ಹಾಗೂ            
ವಾಣಿಜ್ಯ ಮಹಾವಿದ್ಯಾಲಯ
ಚಡಚಣ