ಕರ್ನಾಟಕ ವಿಶ್ವವಿದ್ಯಾಲಯದ ಪ್ರಸಾರಾಂಗದ ವ್ಯಾಸಂಗ ವಿಸ್ತರಣಾ ಉಪನ್ಯಾಸ ಮಾಲೆಯ ೪೦೬ನೆಯ ಉಪನ್ಯಾಸ ಶಿಬಿರವನ್ನು ಧಾರವಾಡ ಜಿಲ್ಲೆಯ ರೋಣ ತಾಲೂಕಿನ ಜಾಲಿಹಾಳ ಗ್ರಾಮದಲ್ಲಿ ಏರ್ಪಡಿಸಲಾಗಿತ್ತು ಇದರಲ್ಲಿ ಭಾಗವಹಿಸಿ ‘ಮುಸ್ಲೀಮರ ಹಬ್ಬ ಮತ್ತು ಉರುಸುಗಳು’ ಎಂಬ ವಿಷಯವಾಗಿ ೨೧-೨-೧೯೯೫ ರಂದು ಉಪನ್ಯಾಸ ನೀಡುವ ಸದವಕಾಶವನ್ನು ಒದಗಿಸಿ ಕೊಟ್ಟು ಈ ಉಪನ್ಯಾಸದಿಂದ ಈಗ ‘ಮುಸ್ಲೀಮರ ಹಬ್ಬ ಮತ್ತು ಉರುಸುಗಳು’ ಎಂಬ ಕಿರು ಹೊತ್ತಿಗೆಯನ್ನು ಬೆಳಕಿಗೆ ತರಲು ಅವಕಾಶ ಒದಗಿಸಿಕೊಟ್ಟು ಕ.ವಿ.ವಿದ ಅಧಿಕಾರಿಗಳಿಗೆ ನನ್ನ ಕೃತಜ್ಞತೆಗಳು. ಪ್ರಸಾರಾಂಗದ ನಿರ್ದೇಶಕರಾದ ಪ್ರೊ. ಎಚ್.ವಿ. ನಾಗೇಶ್ ಅವರಿಗೂ ಸಹಾಯಕ ನಿರ್ದೇಶಕರಾದ ಡಾ. ಹರಿಲಾಲ ಪವಾರ ಅವರಿಗೂ ನನ್ನ ಕೃತಜ್ಞತೆಗಳು.

‘ಮುಸ್ಲೀಮರ ಹಬ್ಬ ಮತ್ತು ಉರುಸುಗಳು’ ಕುರಿತು ಕಿರು ಹೊತ್ತಿಗೆ ಬರೆಯುವಲ್ಲಿ ಸಹಕರಿಸಿದ ಬಾಳ ಸಂಗಾತಿ ಸಲ್ಮಾಳಿಗೂ, ಭಾವೈಕ್ಯದ ಭಾವನೆಯನ್ನು ಬಿತ್ತಿ ಬೆಳೆಯುವ ನನ್ನ ತಂದೆತಾಯಿಗಳಿಗೂ ನನ್ನ ಕೃತಜ್ಞತೆಗಳು ಹಾಗೂ ಶಾಂತಿ ಚಿತ್ತದಿಂದ ಕೇಳಿದ ಜಾಲಿಹಾಳ ಗ್ರಾಮದ ಉತ್ಸಾಹಿಗಳಿಗೆಲ್ಲ ನನ್ನ ಅನಂತಾನಂತ ವಂದನೆಗಳು.

ಧರ್ಮದ ಕೆಟ್ಟ ಬಳಕೆಯಿಂದಾಗಿ ಕೋಮು ದಳ್ಳುರಿ ಹೊತ್ತಿ ನೂರಾರು ಅಮಾಯಕರನ್ನು ಬಲಿ ತೆಗೆದುಕೊಳ್ಳುವ ಹೃದಯ ವಿದ್ರಾವಕ ಬರ್ಬರ ಕೃತ್ಯಗಳು ದಿನ ನಿತ್ಯದ ಸುದ್ದಿಗಳಾಗುತ್ತಿರುವಾಗ ಹಿಂದೂ ಮುಸ್ಲೀಮರನ್ನು ಭಾವನಾತ್ಮಕವಾಗಿ ಬೆಸೆಯುವ, ಕೋಮು ಸೌಹಾರ್ದವನ್ನು ಗಟ್ಟಿಗೊಳಿಸುವ ಮಹತ್ಕಾರ್ಯ ಇಂದು ಆಗಬೇಕಾದಿದೆ. ಈ ದಿಶೆಯಲ್ಲಿ ಈ ಕಿರು ಹೊತ್ತಿಗೆ ಸಹಾಯಕಾರಿಯಾದಲ್ಲಿ ನನ್ನ ಶ್ರಮ ಸಾರ್ಥಕ.

ಡಾ. ದಸ್ತಗೀರ ಅಲ್ಲೀಭಾಯಿ
ಎಂ.ಎ., ಪಿಎಚ್.ಡಿ.
ನೆಹರು ಮಹಾವಿದ್ಯಾಲಯ
ಹುಬ್ಬಳ್ಳಿ – ೨೧