ಬೆಳಗಾಂವಿ ಜಿಲ್ಲೆಯ ಶೇಡಬಾಳದಲ್ಲಿ ಜರುಗಿದ ೩೨೪ನೆಯ ವ್ಯಾಸಂಗ ವಿಸ್ತರಣ ಶಿಬಿರದಲ್ಲಿ ನಾನು ಮಾಡಿದ ಉಪನ್ಯಾಸವೇ ಈ ಚಿಕ್ಕ ಕೃತಿಯಾಗಿದೆ.

ಜಾನಪದ ವಿಸ್ತಾರವಾದುದು. ಇದರ ಒಡಲೊಳಗೆ ಇಡೀ ಬ್ರಹ್ಮಾಂಡವೇ ಅಡಗಿದೆ. ಇದು ಪ್ರದೇಶ, ಜಾತಿ, ಕಾಲ ಮುಂತಾದವುಗಳಿಗನುಸಾರವಾಗಿ ವೈವಿಧ್ಯಮಯವಾಗಿದೆ. ಜಾನಪದದಲ್ಲಿಯೇ ಅತಿ ತಡವಾಗಿ ಹುಟ್ಟಿದ ಪ್ರಕಾರಗಳೆಂದರೆ ಒಗಟು ಮತ್ತು ಗಣಿತ ಎಂದು ಹೇಳಬಹುದು. ಒಗಟುಗಳು ಸಾಹಿತ್ಯದ ಲಕ್ಷಣಗಳನ್ನು ಹೊಂದಿರುವುದರಿಂದ ಇದು ಜನಪದ ಸಾಹಿತ್ಯದ ಒಂದು ಪ್ರಕಾರವಾದರೆ, ಹೆಚ್ಚಾಗಿ ಜನಪದ ಲೆಕ್ಕಗಳು ಸಾಹಿತ್ಯ ಲಕ್ಷಣಗಳನ್ನು ಒಳಗೊಳ್ಳದಿರುವುದರಿಂದ ಮತ್ತು ಶಾಸ್ತ್ರವಿಷಯವಾಗಿರುವುದರಿಂದ ಜಾನಪದದ ಒಂದು ಪ್ರಕಾರವಾಗಿ ನಿಂತಿದೆ.

ಜನಪದ ಗಣಿತದ ಕುರಿತಾಗಿ ಅಷ್ಟೊಂದು ಕೆಲಸ ನಡೆದಿಲ್ಲವೆಂದು ಹೇಳಬಹುದು. ಯಾಕೆಂದರೆ ಇಲ್ಲಿಯವರೆಗೆ ಕೇವಲ ‘ಆಯ್ದ ಜನಕಪದ ಲೆಕ್ಕಗಳು’ ‘ಜನಪದ ಚಮತ್ಕಾರ ಗಣಿತ’ ಮತ್ತು ‘ಜಾನಪದ ಜಾಣ್ಮೆ’ ಎಂಬ ಕೆಲವು ಕೃತಿಗಳು ಮಾತ್ರ ಬಂದಿವೆ. ಆದರೆ ಇವೆಲ್ಲ ಪರಿಪೂರ್ಣ ಸಂಗ್ರಹಗಳಾಗಿಲ್ಲ. ಇನ್ನು ವಿಶ್ಲೇಷಣೆಯ ಕಾರ್ಯವಂತೂ ಆಗಿಯೇ ಇಲ್ಲ.

ಬುದ್ಧಿಶಕ್ತಿಯನ್ನು ಹೆಚ್ಚಿಸುವ, ಮನರಂಜನೆಯನ್ನು ನೀಡುವ ಈ ಜನಪದ ಗಣಿತ ಇಂದಿನ ಗಣಿತ ಶಾಸ್ತ್ರಕ್ಕೆ ಅನೇಕ ಕೊಡುಗೆಗಳನ್ನು ನೀಡಬಲ್ಲುದಾಗಿದೆ. ಹೀಗಾಗಿ ಇಲ್ಲಿ ಜನಪದ ಗಣಿತದ ಸ್ವರೂಪ, ಪ್ರಕಾರ ಮತ್ತು ಮಹತ್ವವನ್ನು ವಿವರಿಸಲು ಪ್ರಯತ್ನಿಸಿರುವೆ. ಇದರ ಕುರಿತಾಗಿ ಇನ್ನು ಮುಂದೆ ಕೆಲಸ ಮಾಡುವವರಿಗೆ ಈ ಉಪನ್ಯಾಸ ಪ್ರೇರಣೆ, ಪ್ರಚೋದನೆ ನೀಡುತ್ತದೆಂದು ಆಶಿಸುವೆ.

ಈ ಉಪನ್ಯಾಸವನ್ನೀಯಲು ಅವಕಾಶ ಮಾಡಿಕೊಟ್ಟ ಪ್ರಸಾರಾಂಗದ ನಿರ್ದೇಶಕರಾದ ಪ್ರೊ.ಎಚ್‌.ವಿ. ನಾಗೇಶ ಅವರಿಗೆ ಹಾಗೂ ಉಪನಿರ್ದೇಶಕರಾದ ಡಾ. ಹರಿಲಾಲ ಪವಾರ ಅವರಿಗೆ ನನ್ನ ಅನಂತ ವಂದನೆಗಳು.

ಈ ಪುಸ್ತಕವನ್ನು ಬರೆಯುವಾಗ ಸೂಕ್ತ ಸಲಹೆ-ಸೂಚನೆಗಳನ್ನು ನೀಡಿದ ನನ್ನ ವಿದ್ಯಾ ಗುರುಗಳಾದ ಡಾ. ಎಂ.ಎಂ. ಕಲಬುರ್ಗಿ, ಡಾ. ಎಸ್‌.ಎಮ್.ಸಾರಂಗೆ ಹಾಗೂ ಡಾ. ವೀರಣ್ಣ ರಾಜೂರ ಅವರಿಗೆ ನಾನು ಸದಾ ಚಿರಋಣಿ.

ಬಿ.ಬಿ. ಬಿರಾದಾರ
ಕನ್ನಡ ಅಧ್ಯಯನಪೀಠ                       
ಕ.ವಿ.ವಿ. ಧಾರವಾಡ-೩