ಕರ್ನಾಟಕ ವಿಶ್ವವಿದ್ಯಾಲಯದ ಪ್ರಸಾರಾಂಗವು ಉತ್ತರಕನ್ನಡ ಜಿಲ್ಲೆಯ ಅಂಕೋಲಾ ತಾಲೂಕಿನ ಅವರ್ಸಾದಲ್ಲಿ ೪೧೩ ನೆಯ ಉಪನ್ಯಾಸ ಶಿಬಿರವನ್ನು ೧೯೯೫ನೇ ಇಸ್ವಿಯ ಡಿಸೆಂಬರ್ ೧೫ ಮತ್ತು ೧೬ ರಂದು ಏರ್ಪಡಿಸಿತ್ತು. ಆ ಸಂದರ್ಭದಲ್ಲಿ ನಾನು ‘ಸಂಸ’ರನ್ನು ಕುರಿತು ಮಾಡಿದ ಉಪನ್ಯಾಸವು ಇದೀಗ ಗ್ರಂಥರೂಪದಲ್ಲಿ ಹೊರಬರುತ್ತಲಿದೆ.

ಈ ಶತಮಾನದ ಆದಿಭಾಗದಲ್ಲಿದ್ದ ‘ಸಂಸರು’ ಅಪ್ರತಿಮ ನಾಟಕಕಾರರು. ಕನ್ನಡದಲ್ಲಿ ಐತಿಹಾಸಿಕ ವಸ್ತುವನ್ನು ನಾಟಕಕ್ಕೆ ಬಳಸಿಕೊಂಡವರಲ್ಲಿ ಅವರೇ ಮೊದಲಿಗರು. ‘ಸಂಸ’ರ ನಿಜನಾಮಧೇಯ ಸಾಮಿ ವೆಂಕಟಾದ್ರಿ ಅಯ್ಯರ್ ಎಂದು. ಆದರೆ ಕನ್ನಡ ನಾಟಕ ಕ್ಷೇತ್ರದಲ್ಲಿ ‘ಸಂಸ’ ರೆಂದೇ ಖ್ಯಾತನಾಮರಾಗಿದ್ದಾರೆ. ಅವರು ರಚಿಸಿರುವರೆಂದು ಹೇಳಲಾಗುತ್ತಿರುವ ೨೩ ನಾಟಕಗಳಲ್ಲಿ ಆರು ಮಾತ್ರ ಈಗ ಉಪಲಬ್ಧವಿವೆ. ಸಂಸರ ಕಾವ್ಯ ಹಾಗೂ ಬರಹ ತದ್ವಿರುದ್ಧವಾದವು. ಆದರೆ ಎರಡೂ ಅಷ್ಟೇ ಕುತೂಹಲವನ್ನು ಹುಟ್ಟಿಸುವಂಥವು. ಸಾಹಿತಿಯ ಬದುಕು ಹಾಗೂ ಬರಹಗಳಿಗಿರುವ ಸಂಬಂಧಗಳ ಬಗ್ಗೆ ನಮ್ಮನ್ನು ಪುನರಾಲೋಚನೆಗೆ ತೊಡಗಿಸುವಂಥವು. ಐತಿಹಾಸಿಕ ದಾಖಲೆಗಳನ್ನು ಆಳವಾಗಿ ಅಧ್ಯಯನ ಮಾಡಿ ಸಂಸರು ನಾಟಕಗಳನ್ನು ರಚಿಸಿರುವುದರಿಂದ ಮೈಸೂರು ಅರಸರ ಕಾಲದ ಸಾಂಸ್ಕೃತಿಕ ಜೀವನವನ್ನು ಅರಿಯಲು ಅವು ಬಹಳಷ್ಟು ಸಹಾಯಕಾರಿಯಾಗುತ್ತವೆ. ನಾಟಕಗಳು ತಮ್ಮ ವಸ್ತು, ಪಾತ್ರ, ಸನ್ನಿವೇಶ ರಚನೆ ಮತ್ತು ಅದ್ಭುತ ನಾಟಕೀಯ ಗುಣಗಳಿಂದ ಇಂದಿಗೂ ನಮ್ಮನ್ನು ಆಕರ್ಷಿಸುತ್ತಲಿವೆ.

ಹೀಗೆ ಕನ್ನಡ ನಾಟಕ ಕ್ಷೇತ್ರದ ಮಹತ್ವದ, ಆದರೆ ಅನೇಕರು ಅರಿಯದ-ನಾಟಕಕಾರನೊಬ್ಬನ ಜೀವನವನ್ನು ಹಾಗೂ ಆತನ ಕೃತಿಗಳನ್ನು ಪರಿಚಯಿಸುವ ಅವಕಾಶವನ್ನು ಪ್ರಸಾರಾಂಗದ ನಿರ್ದೇಶಕರಾದ ಪ್ರೊ.ಹಾ. ವೆಂ. ನಾಗೇಶ ಅವರು ನನಗೆ ನೀಡಿರುವುದಕ್ಕೆ ಹಾಗೂ ಅದನ್ನು ಸಂಸರ ಜನ್ಮಶತಮಾನೋತ್ಸವದ ವರ್ಷವೇ ಪುಸ್ತಕ ರೂಪದಲ್ಲಿ ಪ್ರಕಟಪಡಿಸಲು ಮುಂದೆ ಬಂದಿರುವುದಕ್ಕೆ ಅವರಿಗೂ ಹಾಗೂ ಈ ಪುಸ್ತಿಕೆಯನ್ನು ಅಂದವಾಗಿ ಮುದ್ರಿಸಿಕೊಟ್ಟ ಕ.ವಿ.ವಿ. ಮುದ್ರಣಾಲಯದ ನಿರ್ದೇಶಕರಿಗೂ ಹಾಗೂ ಸಿಬ್ಬಂದಿ ವರ್ಗದವರಿಗೂ ನನ್ನ ಕೃತಜ್ಞತೆಗಳು.

ಸಂಸರನ್ನು ಕುರಿತು ನಾನು ನೀಡಿದ ಉಪನ್ಯಾಸವನ್ನು ತುಂಬ ಕುತೂಹಲಭರಿತರಾಗಿ, ಆಸಕ್ತಿಯಿಂದ ಕೇಳಿದ ಅವರ್ಸಾದ ಜನತೆಯನ್ನು ಈ ಸಂದರ್ಭದಲ್ಲಿ ಕೃತಜ್ಞತೆಯಿಂದ ಸ್ಮರಿಸುತ್ತೇನೆ. ಅಲ್ಲಿ ಎಲ್ಲ ರೀತಿಯ ಅನುಕೂಲತೆಗಳನ್ನು ಒದಗಿಸಿಕೊಟ್ಟ ಡಾ. ಶ್ರೀಪಾದ ಶೆಟ್ಟಿಯವರಿಗೂ ಅವರ್ಸಾದ ಶ್ರೀ ಕಾತ್ಯಾಯನಿ ಹೈಸ್ಕೂಲಿನ ಮುಖ್ಯಾಧ್ಯಾಪಕರಾದ ಶ್ರೀ ಎಂ.ಎಸ್‌. ಪ್ರಭು ಅವರಿಗೂ ನನ್ನ ವಂದನೆಗಳು.

ಡಾ. ಶಾಲಿನಿ ರಘುನಾಥ
ಜಾನಪದ ಅಧ್ಯಯನ ವಿಭಾಗ
ಕನ್ನಡ ಅಧ್ಯಯನ ಪೀಠ                                
ಕರ್ನಾಟಕ ವಿಶ್ವವಿದ್ಯಾಲಯ, ಧಾರವಾಡ