ಕರ್ನಾಟಕ ವಿಶ್ವವಿದ್ಯಾಲಯವು ಸಲ್ಲಿಸುತ್ತಿರುವ ಸಾಮಾಜಿಕ ಸಾಂಸ್ಕೃತಿಕ ಸೇವೆಗಳ ವಿವಿಧ ಅಂಗಗಳಲ್ಲಿ ಪ್ರಸಾರಾಂಗವು ಪ್ರಮುಖವಾಗಿದೆ. ಹಳ್ಳಿಹಳ್ಳಿಗಳಲ್ಲಿ ಜನಸಾಮಾನ್ಯರಿಗಾಗಿ ವೈಜ್ಞಾನಿಕ, ಸಾಹಿತ್ಯಿಕ, ಸಾಮಾಜಿಕ ವಿಷಯಗಳ ಕುರಿತು ಉಪನ್ಯಾಸಗಳನ್ನು ಶಾಸ್ತ್ರಸಮ್ಮತವಾದ ಸರಣಿಯಲ್ಲಿ ಏರ್ಪಡಿಸಿ ನಂತರ ಆ ಉಪನ್ಯಾಸಗಳನ್ನು ಗ್ರಂಥರೂಪದಲ್ಲಿ ಪ್ರಕಟಿಸಿ ಸುಲಭ ಬೆಲೆಯಲ್ಲಿ ಕನ್ನಡಿಗರ ಮನೆಬಾಗಿಲಿಗೆ ತಲುಪಿಸುವ ಮಹಾಕಾರ್ಯವನ್ನು ಪ್ರಸಾರಾಂಗವು ಯಶಸ್ವಿಯಾಗಿ ನೆರವೇರಿಸುತ್ತಿರುವದು ಹೆಮ್ಮೆಯ ಹಾಗು ಸಂತೋಷದ ಸಂಗತಿಯಾಗಿದೆ. ಶ್ರೀಸಾಮಾನ್ಯನ ಬೌದ್ಧಿಕ ಮಟ್ಟವನ್ನು ಎತ್ತರಿಸುವಲ್ಲಿ ಈ ಯೋಜನೆ ಜಯವನ್ನು ಸಾಧಿಸಿದೆ. ಬುಧಜನರ ಮೆಚ್ಚುಗೆಗೆ ಪಾತ್ರವಾಗಿದೆ.

ಕರ್ನಾಟಕ ವಿಶ್ವವಿದ್ಯಾಲಯದ ಪ್ರಸಾರಾಂಗ ಯೋಜನೆಯ ೪೧೩ನೇ ಉಪನ್ಯಾಸ ಶಿಬಿರವು ಉತ್ತರ ಕನ್ನಡ ಜಿಲ್ಲೆಯ ಅಂಕೋಲೆ ತಾಲೂಕಿನ ಅವರ್ಸೆ ಗ್ರಾಮದಲ್ಲಿ ದಿನಾಂಕ ೧೫ ಹಾಗು ೧೬ ಡಿಸೆಂಬರ ೧೯೯೫ ಜರುಗಿದಾಗ ಉತ್ತರ ಕನ್ನಡದ ಪ್ರೇಕ್ಷಣೀಯ ಸ್ಥಳಗಳು ಎಂಬ ವಿಷಯದ ಮೇಲೆ ನಾನು ಮಾಡಿದ ಉಪನ್ಯಾಸದ ಫಲಶ್ರುತಿ ಈ ಕಿರುಹೊತ್ತಿಗೆಯಾಗಿದೆ.

ಕರಾವಳಿ, ಮಲೆನಾಡು, ಬೈಲುಸೀಮೆ ಈ ಮೂರೂ ಪ್ರಾಕೃತಿಕ ವಿನ್ಯಾಸಗಳನ್ನು ಒಂದೇ ಜಿಲ್ಲೆಯಲ್ಲಿ ಮೇಳೈಸಿಕೊಂಡ ವಿಶಿಷ್ಟ ಜಿಲ್ಲೆಯಾದ ಉತ್ತರ ಕನ್ನಡವನ್ನು ಹತ್ತಿರದಿಂದ ಕಂಡ ಕವಿಗಳು, ಪ್ರವಾಸಿಗರು ಇಲ್ಲಿಯ ನಿಸರ್ಗದ ನೋಟಕ್ಕೆ, ಕಲೆಯ ಕುಸುರಿಗೆ, ಧಾರ್ಮಿಕ ನೆಲೆಗಳ ಹಿರಿಮೆ ಗರಿಮೆಗಳಿಗೆ ಮನಸೋತು ಹಾಡಿ ಹೊಗಳಿದ್ದಾರೆ. ನನ್ನ ಪಾಲಿಗಂತು ಈ ಜಿಲ್ಲೆ ನಂದನವನ. ಅಂತೆಯೇ ನಾನು ಹಿಂದೊಮ್ಮೆ ಕವನಿಸಿದ್ದುಂಟು.

ಪ್ರಿಯತಮೆಯರಿಬ್ಬರು ಬಳಿಯಿದ್ದು ನನ್ನ
ಮನತಣಿಸಿ ಬೆಳಗಿದರು ಬಾಳನ್ನು ಚೆನ್ನ
ಒಬ್ಬಳೆಂದರೆ ನನ್ನ ಕೈಹಿಡಿದ ನಲ್ಲೆ
ಇನ್ನೊಬ್ಬ ಸುಂದರಿಯು ನನ್ನಿನಿಯ ಜಿಲ್ಲೆ.

ಇಂತಿರುವಾಗ ನನ್ನಿನಿಯ ಜಿಲ್ಲೆಯ ಪ್ರೇಕ್ಷಣೀಯ ಸ್ಥಳಗಳ ಕುರಿತು ಉಪನ್ಯಾಸ ಮಾಡಲು ಪ್ರಸಾರಾಂಗದವರು ಹೇಳಿದಾಗ ಆನಂದವಾಯಿತು. ಉತ್ತರ ಕನ್ನಡದ ಉದ್ದಗನಕ್ಕೂ ದೃಷ್ಟಿ ಹಾಯಿಸಿದಾಗ ಕಾಣುವ ಪ್ರೇಕ್ಷಣೀಯ ಸ್ಥಳಗಳು ನೂರಾರು, ಪಟ್ಟಿಮಾಡಲು ತೊಡಗಿದಾಗ ಎರಡುನೂರಕ್ಕೂ ಹೆಚ್ಚು ನೆಲೆಗಳು ಲಭಿಸಿದವು! ಪರದೇಶದಲ್ಲಿ ಒಂದು ಕೊಳ, ಒಂದು ದಂಡೆ, ಒಂದು ಕೋಟೆ ಇದ್ದರೆ ಅದಕ್ಕೆ ಪ್ರಚಾರ ನೀಡಿ ಪ್ರವಾಸಿಗರನ್ನು ಆಕರ್ಷಿಸುವರು. ಆದರೆ ನಮ್ಮಲ್ಲಿ ನೋಡತಕ್ಕ ನೆಲೆಗಳು ಎಷ್ಟಿಲ್ಲ? ಲೆಕ್ಕವೇ ಇಲ್ಲ! ಲೆಕ್ಕಿಸುವವರೂ ಇಲ್ಲ!

ಉತ್ತರ ಕನ್ನಡದ ಹಲವಾರು ಪ್ರೇಕ್ಷಣೀಯ ಸ್ಥಳಗಳಲ್ಲಿ ಪ್ರಮುಖವಾದ ಕೆಲವನ್ನು ಆಯ್ದು ಈ ಕಿರುಹೊತ್ತಿಗೆಯಲ್ಲಿ ಪರಿಚಯಿಸಲಾಗಿದೆ. ಈ ಸ್ಥಳಗಳನ್ನು ಜನ ನೋಡಿ ಆನಂದಿಸಲೆಂಬುದೇ ಈ ಬರಹದ ಆಶಯ. ಈ ಪುಸ್ತಕವನ್ನು ಪ್ರಕಟಿಸಿ ಪ್ರೋತ್ಸಾಹಿಸಿದ ಪ್ರಸಾರಾಂಗದ ನಿರ್ದೇಶಕರಾದ ಪ್ರೊ. ಎಚ್.ವಿ. ನಾಗೇಶ ಹಾಗೂ ಸಹಾಯಕ ನಿರ್ದೇಶಕರಾದ ಡಾ. ಹರಿಲಾಲ ಪವಾರ ಅವರಿಗೆ ನನ್ನ ಹೃತ್ಪೂರ್ವಕ ಕೃತಜ್ಞತೆಗಳು.

ಗೋಪಾಲಕೃಷ್ಣ ಪಿ. ನಾಯಕ