ಅರಿಯಕುಡಿ ರಾಮಾನುಜ ಅಯ್ಯಂಗಾರ್ದಕ್ಷಿಣ ಭಾರತದ ಪ್ರಸಿದ್ಧ ಸಂಗೀತ ವಿದ್ವಾಂಸರು. ಶ್ರದ್ಧೆ, ಶ್ರಮಗಳಿಂದ ಸಂಗೀತ ಕಲೆಯನ್ನು ಒಲಿಸಿಕೊಂಡವರು. ಪ್ರತಿಭೆ ಯೊಂದಿಗೆ ಸೌಜನ್ಯವನ್ನು ಮೆರೆದ ಅವರು ತಮ್ಮ ವ್ಯಕ್ತಿತ್ವದ ದೊಡ್ಡತನದಿಂದಲೂ ಗೌರವ ಗಳಿಸಿದರು.

 ಅರಿಯಕುಡಿ ರಾಮಾನುಜ ಅಯ್ಯಂಗಾರ್

 

ತಮಿಳುನಾಡಿನ ಪ್ರಮುಖ ನಗರ ಹಾಗೂ ರಾಜಧಾನಿಯಾದ ಮದರಾಸಿನಲ್ಲಿ ಡಿಸೆಂಬರ್ ತಿಂಗಳಿನ ಮಧ್ಯ ಭಾಗದಿಂದ ಜನವರಿ ತಿಂಗಳಿನ ಮೊದಲನೆಯ ವಾರದವರೆಗೆ, ಸುಮಾರು ಹದಿನೈದು-ಇಪ್ಪತ್ತು ದಿವಸಗಳ ಪರ‍್ಯಂತ ನಡೆಯುವ ಸಂಗೀತ ಮತ್ತು ನಾಟ್ಯೋತ್ಸವಗಳು ಕಲಾಭಿಮಾನಿಗಳಿಗೆ ರಸದೌತಣವನ್ನು ನೀಡುತ್ತವೆ.

ಈ ಸಂಗೀತದ ಹಬ್ಬದಲ್ಲಿ ಅರಿಯಕುಡಿ ರಾಮಾನುಜ ಅಯ್ಯಂಗಾರರ ಸಂಗೀತ ಎಂದರೆ ರಸಿಕರು ಕಿಕ್ಕಿರಿಯುತ್ತಿದ್ದರು.

ದಕ್ಷಿಣಾದಿ ಸಂಗೀತಗಾರರನ್ನು ಹೆಚ್ಚಾಗಿ ಗುರುತಿಸು ವುದು ಅವರ ಹೆಸರುಗಳ ಹಿಂದೆ ಬರುವ ಅವರುಗಳ ಊರಿನ ಹೆಸರಿನ ಮೂಲಕ. ಅದರಿಂದಾಗಿ ಭಾರತದ ದಕ್ಷಿಣ ಭಾಗದಲ್ಲಿ ಯಾವುದೋ ಒಂದು ಮೂಲೆಯಲ್ಲಿರುವ ಊರಿಗೆ ಮಹತ್ವ ದೊರೆಯುತ್ತದೆ. ರಾಮಾನುಜ ಅಯ್ಯಂಗಾರರಿಂದ ಅವರ ಜನ್ಮಸ್ಥಳವಾದ ಅರಿಯಕುಡಿ ಪ್ರಸಿದ್ಧವಾಯಿತು.

ಸುಮಾರು ಐದು ದಶಕಗಳಿಗೆ ಮೇಲ್ಪಟ್ಟು ಸಂಗೀತ ಪ್ರಪಂಚದ ವೇದಿಕೆಯಿಂದ ಅಸಂಖ್ಯಾತ ರಸಿಕರನ್ನು ತಣಿಸಿ, ತೃಪ್ತಿಪಡಿಸಿ, ತಮ್ಮ ಗಾಯನ ಸೌರಭದಿಂದ ಕರ್ನಾಟಕ ಸಂಗೀತವನ್ನು ಶ್ರೀಮಂತಗೊಳಿಸಿ, ಸಂಗೀತವೆಂಬುದು ಒಂದು ಮಹಾತಪಸ್ಸೆಂದು ಭಾವಿಸಿ ಭಯ ಭಕ್ತಿಗಳಿಂದ ಆರಾಧಿಸಿ ರಸಋಷಿಯೆನಿಸಿದ ಅರಿಯಕುಡಿ ರಾಮಾನುಜ ಅಯ್ಯಂಗಾರರ ನಾದೋಪಾಸನೆಯು ಆದರ್ಶವಾದದ್ದು. ಅವರ ಸಾಧನೆ ಅನುಕರಣೀಯವಾದದ್ದು.

ಜನನ ಮತ್ತು ಬಾಲ್ಯ

ಚೆಟ್ಟಿನಾಡಿನ ಅರಿಯಕುಡಿ ಎಂಬ ಗ್ರಾಮವು ಅಂತಹ ಕುಗ್ರಾಮವೇನಲ್ಲ. ಅಲ್ಲ್ಲಿ ತಿರುವೇಂಗಡ ತ್ತೈಯ್ಯಂಗಾರ್ ಎಂಬುವರು ಜ್ಯೋತಿಷದಲ್ಲಿ ಅದ್ವಿತೀಯರಾಗಿ, ಎಂಟು ತಲೆಮಾರುಗಳಿಂದ ಬಂದಿದ್ದ “ಅರಿಯಕುಡಿ ಜೋಸ್ಯರು’ ಎಂಬ ಹೆಸರನ್ನು ಚೆನ್ನಾಗಿ ಕಾಪಾಡಿಕೊಂಡು ಬಂದವರು. ಸದಾಚಾರ ಸಂಪನ್ನರು. ಅಲ್ಲದೆ ಸಂಗೀತ ಶಾಸ್ತ್ರದಲ್ಲಿ ಪ್ರಾಜ್ಞರು. ಅವರ ಹೆಂಡತಿ ನಾಣ್ಚಿಯಾರ್ ಅಮ್ಮಾಳ್ ತಮ್ಮ ಸದ್ಗುಣಗಳಿಂದ ಎಲ್ಲರಿಂದಲೂ ‘ಶೆಲ್ಲಮ್ಮಾಳ್’ ಎಂದು ಪ್ರೀತಿ, ಆದರ, ವಿಶ್ವಾಸಗಳಿಂದ ಕರೆಸಿಕೊಳ್ಳುತ್ತಿದ್ದರು. ಅಂತಹ ಅನುರೂಪರಾದ ದಂಪತಿಗಳಿಗೆ ನಾಲ್ಕು ಗಂಡು ಮಕ್ಕಳೂ ಮತ್ತು ಮೂರು ಹೆಣ್ಣು ಮಕ್ಕಳೂ ಜನಿಸಿದರು. ಮೂರನೆಯ ಮಗನೇ ರಾಮಾನುಜ.

ರಾಮಾನುಜನು ವಿಕೃತಿ ಸಂವತ್ಸರ, ವೈಶಾಖ ಮಾಸ ಶುಕ್ರವಾರ ಆರನೆಯ ತೇದಿ ಅಂದರೆ ೧೮೯೦ನೆಯ ಇಸವಿ ಮೇ ತಿಂಗಳು ೧೯ ರಂದು ಜನಿಸಿದನು. ರಾಮಾನುಜನು ಕಷ್ಟ ಕಾರ್ಪಣ್ಯಗಳ ಸೋಂಕು ತಗಲದೆ ಬೆಳೆದ. ತಂದೆ ತಿರುವೇಂಗಡತ್ತೈಯಂಗಾರ‍್ಯರು ಅರಿಯ ಕುಡಿಯನ್ನು ಬಿಟ್ಟು ಸಂಸಾರದೊಂದಿಗೆ ದೇವ ಕೋಟೆಗೆ ಹೋಗಿ, ಅಲ್ಲಿನ ಶ್ರೀಮಂತರಿಗೆ ಜ್ಯೋತಿಷ ಹೇಳಿ, ಅವರ ಆಶ್ರಯದಲ್ಲಿ ನಿಂತು, ಸ್ವಂತ ಮನೆಯೊಂದನ್ನು ಮಾಡಿ ನೆಮ್ಮದಿಯಾದ ಬಾಳ್ವೆಯನ್ನು ನಡೆಸುತ್ತಿದ್ದರು.

ಸಂಗೀತದ ಒಲವು

ಬಾಲ್ಯದಲ್ಲಿಯೇ ಅಸಾಧ್ಯ ಚೂಟಿಯವನು ಎಂದು ಹೆಸರು ಪಡೆದಿದ್ದ ರಾಮಾನುಜನ ಒಲವು ಸಂಗೀತದ ಕಡೆ ಇತ್ತು. ಭಜನಾ ಗೋಷ್ಠಿಗಳಲ್ಲಿ ತಪ್ಪದೇ ಭಾಗವಹಿಸುತ್ತಿದ್ದ. ಭಜನೆಗಳನ್ನು ಏಕಾಗ್ರತೆಯಿಂದ ಕೇಳಿ ಮನೆಗೆ ಬಂದ ಮೇಲೂ ಭಜನೆಯ ವಾಕ್ಯವನ್ನೋ ಅಥವಾ ಅದರ ರಾಗವನ್ನೋ ತನ್ನಷ್ಟಕ್ಕೆ ತಾನು ಹೇಳಿಕೊಳ್ಳುತ್ತಿದ್ದ. ಅವನ ಸಂಗೀತ ಪ್ರಿಯತೆಯನ್ನು ಕಂಡ ಅವನ ತಂದೆಯವರು ಜಾತಕವನ್ನು ಕೂಲಂಕಷವಾಗಿ ಪರಿಶೀಲಿಸಲು ಅವನು ಸಂಗೀತ ಪ್ರಪಂಚದಲ್ಲಿ ಮಹಾ ಕೀರ್ತಿಶಾಲಿಯಾಗುತ್ತಾನೆ ಎಂದು ಕಂಡಿತು. ಸೂಕ್ತ ಸಮಯ ಒದಗಿದಾಗ ಅವನಿಗೆ ಸಂಗೀತ ಶಿಕ್ಷಣವನ್ನು ಕೊಡಿಸೋಣವೆಂದು ನಿರ್ಧ ರಿಸಿದರು. ರಾಮಾನುಜನ ಹಿರಿಯ ಸಹೋದರ ಅಪ್ಪು ಸ್ವಾಮಿಗೆ ಮಕ್ಕಳಿರಲಿಲ್ಲ. ಅವರಿಗೆ ತಮ್ಮನ ಮೇಲೆ ಅಗಾಧವಾದ ಪ್ರೀತಿಯಿದ್ದುದರಿಂದ ಅವರು ರಾಮಾನು ಜನನ್ನು ದತ್ತು ತೆಗೆದುಕೊಂಡರು. ಅವನಿಗೂ ಅವರಲ್ಲಿ ಪಿತೃಭಕ್ತಿ, ಗೌರವಗಳು ಇದ್ದವು.

ರಾಮಾನುಜನಿಗೆ ತಮಿಳು ಮತ್ತು ಸಂಸ್ಕೃತ ಭಾಷೆಯ ಶಿಕ್ಷಣವು ಸಿಕ್ಕಿತು. ಹುಡುಗನೂ ಬುದ್ದಿವಂತ ನಾದ್ದರಿಂದ ಶೀಘ್ರದಲ್ಲಿಯೇ ಅಚ್ಚರಿಯ ಪ್ರಗತಿಯನ್ನು ತೋರಿಸಿದ. ಸುಖ ಸಂತೋಷಗಳ ನಡುವೆ ರಾಮಾ ನುಜನು ಬೆಳೆಯುತ್ತಿದ್ದ. ಆದರೆ ವಿಧಿಯು ಬೇರೆ ಎಣಿಸಿತ್ತು. ದೃಢಕಾಯರಾಗಿದ್ದ ಸಾಕುತಂದೆ ಹಠಾತ್ತಾಗಿ ಕಾಯಿಲೆ ಮಲಗಿ ತಮ್ಮ ಮೂವತ್ತನೆಯ ವರ್ಷದಲ್ಲಿ ವಿಧಿ ವಶರಾದರು. ಏಳು ವರ್ಷ ವಯಸ್ಸಿನ ರಾಮಾನುಜನಿಗೆ ಇದು ಭಾರೀ ಏಟು. ಅವನ ಸಂಕಟ ಹೇಳತೀರದು. ಸ್ವಂತ ತಂದೆ ಅವನ ದುಃಖಶಮನಾರ್ಥವಾಗಿ ಅವನನ್ನು ಕಾಶಿಕ್ಷೇತ್ರಕ್ಕೆ ಕರೆದುಕೊಂಡು ಹೋದರು. ದಾರಿಯಲ್ಲಿ ಅನೇಕ ಕ್ಷೇತ್ರ ಸಂದರ್ಶನ ಮಾಡಿಸಿದರು.  ಅದರೂ ಅವನ ದುಃಖವು ಕಡಿಮೆಯಾಗಲಿಲ್ಲ. ಕೊನೆಗೆ ಅವನ ಎಂಟನೆಯ ವಯಸ್ಸಿನಲ್ಲಿ ಉಪನಯನವನ್ನು ಮಾಡಿ, ವೇದಾಧ್ಯಯನಕ್ಕೆ ಏರ್ಪಾಡು ಮಾಡಿದರು. ಇದರಿಂದ ರಾಮಾನುಜನಿಗೆ ಸ್ವಲ್ಪ ಶಾಂತಿ ಸಿಕ್ಕಿತು.

ಬೆಳೆಯುವ ಪೈರು ಮೊಳಕೆಯಲ್ಲಿ

ತಮಿಳುನಾಡಿನ ಶ್ರೀವಿಲ್ಲಿಪುತ್ತೂರು ಶ್ರೀರಂಗದ ಶ್ರೀರಂಗನಾಥನನ್ನೇ ತನ್ನ ಪತಿ ಎಂದು ಭಾವಿಸಿ, ಅವನನ್ನೇ ವರಿಸಲು ನಿರ್ಧರಿಸಿ, ‘ಪಾಶುರ’ ಗಳೆಂಬ ೩೦ ದಿವ್ಯ, ಭಕ್ತಿ ಗೀತೆಗಳನ್ನು ರಚಿಸಿ, ಅರ್ಪಿಸಿ ಕೊನೆಗೆ ಅವನನ್ನೇ ಮದುವೆ ಯಾದ ಪೆರಿಯಾಳ್ವಾರ್ (ವಿಷ್ಣುಚಿತ್ತರ್)ರವರ ಸಾಕು ಮಗಳು ಗೋದಾದೇವಿ (ಆಂಡಾಳ್)ಯ ಜನ್ಮಭೂಮಿ. ದೇವಿಯ ಉತ್ಸವವೆಂದರೆ ಅದೊಂದು ದೊಡ್ಡ ಹಬ್ಬ. ತಿರುವೇಂಗಡತ್ತೈಯ್ಯಂಗಾರ‍್ಯರು ಪ್ರತಿವರ್ಷವೂ ತಪ್ಪದೆ ಆ ಉತ್ಸವಕ್ಕೆ ಹೋಗುತ್ತಿದ್ದರು. ರಾಮಾನುಜನಿಗೆ ಹನ್ನೊಂದು ವರ್ಷ ತುಂಬಿದ ಮೇಲೆ ಒಮ್ಮೆ ಅವನನ್ನೂ ಉತ್ಸವಕ್ಕೆ ಕರೆದುಕೊಂಡು ಹೋದರು. ಶ್ರೀವಿಲ್ಲಿ ಪುತ್ತೂರಿನ ಪಕ್ಕದಲ್ಲಿಯೇ ಸೇತ್ತೂರಂ ಎಂಬ ಹೆಸರುವಾಸಿಯಾದ ಗ್ರಾಮವಿದೆ. ಆ ಗ್ರಾಮದ ಜಮೀನುದಾರರು ಸಂಗೀತದಲ್ಲಿ ಅಭಿರುಚಿಯುಳ್ಳವರಾಗಿ ಕಲಾವಿದರ ಆಶ್ರಯದಾತ ರೆನಿಸಿಕೊಂಡು, ‘ಸೇತ್ತೂರು ಜಮೀನುದಾರರು’ಎಂದು ಪ್ರಸಿದ್ಧರಾಗಿದ್ದರು.

ಅವರ ಆಶ್ರಿತವರ್ಗದವರಲ್ಲಿ ಮಡವಾರ್ಕುಳಂ ಮುತ್ತೈಯ್ಯಭಾಗವತರೆಂಬುವರಿದ್ದರು. ಅಯ್ಯಂಗಾರ‍್ಯರು ಶ್ರೀವಿಲ್ಲಿಪುತ್ತೂರಿಗೆ ಹೋದಾಗ ಭಾಗವತರು ಸೇತ್ತೂರಿನಲ್ಲಿದ್ದರು. ರಾಮಾನುಜನನ್ನು ಕರೆದುಕೊಂಡು ಅಲ್ಲಿಗೇ ಹೋದರು.

ಪರಸ್ಪರ ಕುಶಲಪ್ರಶ್ನೆಗಳಾದ ನಂತರ ಭಾಗವತರು ರಾಮಾನುಜನನ್ನು ನೋಡಿ ‘ನಿಮ್ಮ ಮಗನೆ?’ ಎಂದು ಅಯ್ಯಂಗಾರರನ್ನು ಕೇಳಿದರು. ಹೌದೆಂದು ತಲೆಯಾಡಿಸಿ ತಿರುವೇಂಗಡತ್ತೈಯ್ಯಂಗಾರ‍್ಯರು ‘ಹೆಸರು ರಾಮಾನುಜ. ಸಂಗೀತವೆಂದರೆ ಪ್ರಾಣ. ಇವನಿಗೆ ಸಂಗೀತ ಶಿಕ್ಷಣವನ್ನು ಕೊಡಿಸೋಣವೆಂದಿದ್ದೇನೆ. ತಮ್ಮಂತಹ ಘನವಿದ್ವಾಂಸರ ಆಶೀರ್ವಾದವು ಅತ್ಯಗತ್ಯ’ ಎಂದರು. ಭಾಗವತರು ಮುಗುಳುನಗುತ್ತ ರಾಮಾನುಜನನ್ನು ಹಾಡುವಂತೆ ಹೇಳಿದರು. ಕೂಡಲೇ ಗಂಟಲು ಸರಿಮಾಡಿಕೊಂಡು ಸ್ವಲ್ಪವೂ ಹೆದರದೆ ತನಗೆ ಚೆನ್ನಾಗಿ ಬರುತ್ತಿದ್ದ ಕೃತಿಯೊಂದನ್ನು ಹಾಡಿದ. ಭಾಗವತರು ತಲೆದೂಗಿ ‘ಭೇಷ್’ ಎಂದು ಅವನ ಬೆನ್ನು ತಟ್ಟಿ, ಅವನ ತಂದೆಯವರಿಗೆ ‘ಸಂಗೀತದಲ್ಲಿ ಪ್ರಚಂಡನಾಗುತ್ತಾನೆ. ಸರಿಯಾದ ಶಿಕ್ಷಣವನ್ನು ಕೊಡಿಸಿ’ ಎಂದರು. ಸೇತ್ತೂರು ಜಮೀನುದಾರರೂ ರಾಮಾನುಜನಿಂದ ಐದಾರು ಹಾಡುಗಳನ್ನು ಹಾಡಿಸಿ, ತೃಪ್ತಿಪಟ್ಟು ಭಾಗವತರ ಅಭಿಪ್ರಾಯದಂತೆ ರಾಮಾನುಜನ ಕೈಯಲ್ಲಿ ಒಂದು ನೂರು ರೂಪಾಯಿಗಳನ್ನು ಕೊಟ್ಟು ‘ತುಂಬಾ ಚೆನ್ನಾಗಿ ಹಾಡುತ್ತಿ. ಈ ಹಣಕ್ಕೆ ಉಪಯೋಗವಾದ ಏನಾದರೂ ಪದಾರ್ಥವನ್ನು ಕೊಂಡುಕೊ. ಸಂಗೀತವನ್ನು ಚೆನ್ನಾಗಿ ಅಭ್ಯಾಸ ಮಾಡಿ ಕೀರ್ತಿಶಾಲಿಯಾಗು’ ಎಂದು ತುಂಬು ಮನಸ್ಸಿನಿಂದ ಹೇಳಿದರು.

ಮುಗ್ಧಬಾಲಕ ರಾಮಾನುಜನಿಗೆ ಸಂತೋಷವೋ ಸಂತೋಷ, ‘ಕೊಡುಗೈ ದೊರೆ’ ಎಂದು ಪ್ರಸಿದ್ಧರಾದ ಸೇತ್ತೂರು ಜಮೀನುದಾರರಿಂದ ಪುರಸ್ಕರಿಸಲ್ಪಟ್ಟಿದ್ದು ತನ್ನ ಭಾಗ್ಯವೆಂದು ತಿಳಿದು ಆನಂದದಿಂದ ಉಬ್ಬಿಹೋದ.

ಶಿಕ್ಷಣ

೧೯೦೧-೦೨ರ ಸಮಯ. ತಮಿಳುನಾಡಿನ ಅನೇಕ ಕಡೆಗಳಲ್ಲಿ ತಿರುಗಿ ದಿಗ್ವಿಜಯ ಮಾಡಿದ ಕೃಷ್ಣಶಾಸ್ತ್ರಿ ಎಂಬ ಸಕಲ ಶಾಸ್ತ್ರ ಪಾರಂಗತರಾದ ವಿದ್ವಾಂಸರೊಬ್ಬರು ದೇವಕೋಟೆಗೆ ಬಂದರು. ಅವರಿಗೂ, ತಿರುವೇಂಗಡ ತ್ತೈಯ್ಯಂಗಾರ‍್ಯರಿಗೂ ಪರಿಚಯವಾಗಿ, ರಾಮಾನುಜನಿಗೆ ಅವರಿಂದ ವಿದ್ಯಾಭ್ಯಾಸ ಮಾಡಿಸಲು ನಿಶ್ಚಯಿಸಿ, ಅವರನ್ನು ಒಪ್ಪಿಸಿದರು.  ಶಾಸ್ತ್ರಿಗಳು ಶುಭ ದಿವಸವೊಂದರಲ್ಲಿ ರಾಮಾನುಜನಿಗೆ ಪಾಠ ಹೇಳ ಲಾರಂಭಿಸಿದರು. ಅವರು ಅಯ್ಯಂಗಾರರ ಮನೆಯಲ್ಲಿ ನೆಲೆಸಿ ಒಂದೂ ವರೆ ವರ್ಷ ಪಾಠ ಹೇಳಿದರು.

ವೇದವನ್ನು ಹೇಳುವಾಗ ರಾಮಾನುಜನ ಸುಸ್ವರವು ಕೇಳಲು ಹಿತವಾಗಿತ್ತು. ದೊಡ್ಡವರು ಹೇಳಿದ ಕೆಲಸಗಳನ್ನು ಮಾಡುವಾಗಲೂ, ತನ್ನ ಒಡನಾಡಿಗಳೊಡನೆ ಆಡುವಾಗಲೂ ಮತ್ತು ಪಾಠಪ್ರವಚನಗಳನ್ನು ನಡೆಸು ವಾಗಲೂ ರಾಮಾನುಜನು ಹಾಡಿಕೊಳ್ಳುತ್ತಲೇ ಇದ್ದನು. ಇದು ಅವನ ತಂದೆಯವರು ಹಿಂದೆ ಅವನ ಸಂಗೀತದ ಬಗ್ಗೆ ಯೋಚಿಸಿ ಒಂದು ನಿರ್ಧಾರಕ್ಕೆ ಬಂದಿದ್ದನ್ನು ಕಾರ್ಯರೂಪಕ್ಕೆ ತರಲು ಅನುವು ಮಾಡಿಕೊಟ್ಟಿತು. ಪುದುಕೋಟೆಯಲ್ಲಿದ್ದ ಪ್ರಸಿದ್ಧ ಸಂಗೀತ ವಿದ್ವಾಂಸರಾದ ಮಲೈಯಪ್ಪ ಅಯ್ಯರ್‌ರವರನ್ನು ಕಂಡು, ಮಾತನಾಡಿ, ಅವರನ್ನು ಒಪ್ಪಿಸಿ ದೇವಕೋಟೆಗೆ ಕರೆತಂದು ತಮ್ಮ ಮನೆಯಲ್ಲಿಯೇ ಅವರಿಗೆ ವಸತಿ ಸೌಕರ್ಯಗಳನ್ನು ಕಲ್ಪಿಸಿ ಕೊಟ್ಟು ಒಂದು ಶುಭದಿವಸದಲ್ಲಿ ಅವರಿಂದ ರಾಮಾನುಜ ನಿಗೆ ಸಂಗೀತ ಶಿಕ್ಷಣವನ್ನು ಆರಂಭಿಸಿದರು. ಮೂರು ವರ್ಷಗಳು ಅವರಲ್ಲಿ ಕಲಿತು, ಅವರ ಸೇವೆ ಮಾಡಿ ಕರ್ನಾಟಕ ಸಂಗೀತದ ಮುಖ್ಯ ಅಂಶಗಳನ್ನು ರಾಮಾನುಜನು ಗ್ರಹಿಸಿದುದಲ್ಲದೆ ಗುರುಕುಲವಾಸದ ಮರ್ಮವನ್ನೂ ಅರಿತನು. ಮಲೈಯಪ್ಪ ಅಯ್ಯರ್‌ರವರು ನಿರ್ವಂಚನೆಯಿಂದ ಪಾಠ ಹೇಳಿ ಅವನ ಸಂಗೀತ ವಿದ್ಯೆಗೆ ಭದ್ರವಾದ ತಳಹದಿಯನ್ನು ಹಾಕಿದರು.

ಅದೇ ಕಾಲದಲ್ಲಿ ಪಲ್ಲವಿ ನಾಮಕ್ಕಲ್ ನರಸಿಂಹ ಅಯ್ಯಂಗಾರ್ ಎಂಬ ಮಹಾ ವಿದ್ವಾಂಸರು ಶ್ರೀರಂಗಕ್ಕೆ ಬಂದು ನೆಲೆಸಿದ್ದರು. ಅವರ ಸಂಗೀತವೆಂದರೆ ಅಮೃತ ವರ್ಷ. ಎಂಬತ್ತಾರು ವರ್ಷ ತುಂಬು ಜೀವನವನ್ನು ನಡೆಸಿದ ಮಹನೀಯರು. ನರಸಿಂಹ ಅಯ್ಯಂಗಾರರ ಹೆಸರನ್ನು ಕೇಳಿ ರಾಮಾನುಜನು ತಾನು ಅವರಲ್ಲಿ ಕಲಿಯುವ ಮನಸ್ಸು ಮಾಡಿದನು. ಶ್ರೀರಂಗಕ್ಕೆ ಹೋಗಿ ಅವರನ್ನು ಕಂಡು, ಕಾಲಿಗೆರಗಿ ತನ್ನ ಆಸೆಯನ್ನು ಅವರಿಗೆ ತಿಳಿಸಿ ತನ್ನನ್ನು ಶಿಷ್ಯನನ್ನಾಗಿ ಸ್ವೀಕರಿಸುವಂತೆ ಪ್ರಾರ್ಥಿಸಿದನು. ನರಸಿಂಹ ಅಯ್ಯಂಗಾರರು ಹದಿನಾರು ವರ್ಷ ವಯಸ್ಸಿನ ರಾಮಾನುಜನನ್ನು ಆಪಾದಮಸ್ತಕವಾಗಿ ನೋಡಿದರು. ಅವನ ಹೊಳೆಯುವ ಕಣ್ಣುಗಳು ಅವನಲ್ಲಿ ಅಪಾರವಾದ ಬುದ್ಧಿಶಕ್ತಿ ಇದೆ ಎಂಬುದನ್ನು ಸಾರಿದವು. ಅವನಿಂದ ಹಾಡಿಸಿ, ಪರೀಕ್ಷೆ ಮಾಡಿ ತೃಪ್ತಿ ಹೊಂದಿದ ನಂತರ ಶಿಷ್ಯನನ್ನಾಗಿ ಅಂಗೀಕರಿಸಿದರು. ರಾಮಾನುಜನಿಗೆ ಹೃದಯ ತುಂಬಿ ಬಂದಿತು.

ನರಸಿಂಹ ಅಯ್ಯಂಗಾರರ ಶಿಷ್ಯರುಗಳಲ್ಲಿ ರಾಘವಾ ಚಾರ್ಯರೂ ಮತ್ತು ಪಲ್ಲವಿ ಶೇಷ ಅಯ್ಯಂಗಾರ‍್ಯರೂ ರಾಮಾನುಜನ ಮೇಲೆ ವಿಶ್ವಾಸವನ್ನು ತಳೆದು ಅವನಿಗೆ ಮಾರ್ಗದರ್ಶಕರಾದರು. ಶೇಷ ಅಯ್ಯಂಗಾರ‍್ಯರು ರಾಮಾನುಜ ನನ್ನು ಶ್ರೀರಂಗದ ಶ್ರೀರಂಗನಾಥನ ದೇವಾಲಯದ ಸಾವಿರ ಕಂಬಗಳ ಮಂಟಪಕ್ಕೆ ಕರೆದುಕೊಂಡು ಹೋಗಿ, ತಾವೇ ಖುದ್ದಾಗಿ ನಿಂತು ಅವನು ಅಲ್ಲಿ ಅಭ್ಯಾಸ ಮಾಡುವುದನ್ನು ನೋಡಿ, ಓರೆಕೋರೆಗಳನ್ನು ತಿದ್ದಿ, ಅವನ ಹಾಡುಗಾರಿಕೆಗೆ ಸರಿ ಯಾದ ಸ್ವರೂಪವನ್ನು ಕೊಟ್ಟರು. ದೇವಸ್ಥಾನದ ಪ್ರಾಕಾರ ದಲ್ಲಿದ್ದ ಕೆಲವು ಭಕ್ತರ ಮನೆಗಳಲ್ಲಿ ಏಕಾದಶಿ, ಶನಿವಾರ ಮುಂತಾದ ವಿಶೇಷ ದಿನಗಳಲ್ಲಿ ನಡೆಯುತ್ತಿದ್ದ ಭಜನೆಗಳಲ್ಲಿ ಗುರುಗಳ ಅಪ್ಪಣೆ ಪಡೆದು ರಾಮಾನುಜನೂ ಹಾಡುವುದು ಒಂದು ಪದ್ಧತಿಯಾಯಿತು. ನಾಮಕ್ಕಲ್ ನರಸಿಂಹ ಅಯ್ಯಂಗಾರ‍್ಯರಲ್ಲಿ ಎರಡು ವರ್ಷಗಳ ಕಾಲ ಕ್ರಮ ವಾಗಿ ಶಿಷ್ಯವೃತ್ತಿ ಮಾಡಿದ ರಾಮಾನುಜನ ಕಂಠವು ಒಂದು ಹದಕ್ಕೆ ಬಂದು ರಾಗಜ್ಞಾನವೂ ಹೆಚ್ಚಿ, ಹಾಡಿಕೆಯಲ್ಲಿ ಪರಿಪಕ್ವತೆ ಉಂಟಾಯಿತು.

ಗುರುವಿನ ಮಾರ್ಗದರ್ಶನ

ತಮಿಳುನಾಡಿನ ರಾಮನಾಥಪುರದ ಆಳರಸರು ಕಲಾರಾಧಕರಾಗಿದ್ದು, ಕಲಾವಿದರ ಆಶ್ರಯದಾತರೆಂದು ಪ್ರಸಿದ್ಧರಾಗಿದ್ದರು. ಭಾಸ್ಕರ ಸೇತುಪತಿ ಇವರುಗಳ ಕಾಲದಲ್ಲಿ ಮತ್ತೊಬ್ಬ ಮಹಾನ್ ವ್ಯಕ್ತಿಯಿದ್ದರು. ಅವರೇ ರಾಮನಾಥಪುರ ಸಂಸ್ಥಾನ ವಿದ್ವಾಂಸರಾಗಿ, ಕರ್ಣಾಟಕ ಸಂಗೀತ ಪ್ರಪಂಚದಲ್ಲಿ ‘ಪೂಚಿ ಅಯ್ಯಂಗಾರ್’ ಎಂದು ಖ್ಯಾತನಾಮರಾಗಿದ್ದ ರಾಮನಾಥಪುರಂ (ರಾಮ್‌ನಾಡ್) ಶ್ರೀನಿವಾಸ ಅಯ್ಯಂಗಾರ‍್ಯ ರು. ರಾಮಾನುಜನು ಮುಂದೆ ದೊಡ್ಡ ವಿದ್ವಾಂಸನಾಗುವುದಕ್ಕೆ ಪೂಚಿ ಅಯ್ಯಂಗಾರ‍್ಯರೂ ಕಾರಣರು.

ಪೂಚಿ ಅಯ್ಯಂಗಾರ‍್ಯರು ಅನನ್ಯ ಗುರುಭಕ್ತಿ ಮತ್ತು ಅದ್ಭುತ ಸಾಧನೆಗಳಿಂದ ದೊಡ್ಡ ವಿದ್ವಾಂಸರಾದವರು. ಜೊತೆಯಲ್ಲಿ ಉತ್ತಮ ವಾಗ್ಗೇಯಕಾರರೂ ಆದವರು.

ಅಂತಹವರಲ್ಲಿ ಶಿಷ್ಯವೃತ್ತಿ ಮಾಡಲು ರಾಮಾ ನುಜನು ತವಕ ಪಡುತ್ತಿದ್ದ. ಕೊನೆಗೆ ಅವರನ್ನು ಹುಡುಕಿಕೊಂಡು ಹೋಗಿ ತನ್ನ ಆಸೆಯನ್ನು ಅವರಲ್ಲಿ ಹೇಳಿ ಕೊಂಡನು. ಅವರು ಸಮ್ಮತಿಸಿ ರಾಮಾನುಜನನ್ನು ಶಿಷ್ಯನನ್ನಾಗಿ ಅಂಗೀಕರಿಸಿದರು. ಆಗ ಅವನಿಗೆ ಹದಿನೆಂಟು ವರ್ಷ ವಯಸ್ಸು. ಗುರುವು ಶಿಷ್ಯನನ್ನು ಕುಳ್ಳಿರಿಸಿಕೊಂಡು ಕ್ರಮವಾಗಿ ಪಾಠ ಹೇಳುವ ವಾಡಿಕೆಯಿರಲಿಲ್ಲ. ಗುರುವು ಶಿಷ್ಯರನ್ನು ಹಾಡಲು ಹೇಳುತ್ತಿದ್ದರು. ಹಾಗೆ ಹಾಡುತ್ತಿದ್ದಾಗ ಶಿಷ್ಯರ ಲೋಪದೋಷಗಳನ್ನು ತಿದ್ದುವುದು. ಶಿಷ್ಯರು ಗುರುಗಳ ಕಛೇರಿಗಳನ್ನು ಕೇಳಬೇಕು; ಇದೇ ಕ್ರಮ. ಪೂಚಿ ಅಯ್ಯಂಗಾರ‍್ಯರು ರಾಮಾನುಜನ ಶ್ರದ್ಧೆ, ಭಕ್ತಿಗಳನ್ನು ಕಂಡು, ತಾವು ಕಛೇರಿಗಳಿಗೆ ಹೋಗುವಾಗಲೆಲ್ಲ ರಾಮಾನುಜನನ್ನು ಕರೆದುಕೊಂಡು ಹೋಗಿ, ತಂಬೂರಿ ಶುತಿಯನ್ನು ಅವನ ಕೈಯಿಂದ ಹಾಕಿಸಿ, ಅವನಿಂದ ಹಾಡಿಸುತ್ತಿದ್ದರು. ಹೀಗೆ ರಾಮಾನುಜನ ಗಾಯನವು ಪೂಚಿ ಅಯ್ಯಂಗಾರ್‌ರಿಂದ ಸರಿಯಾದ ಕ್ರಮವನ್ನು ಅನುಸರಿಸು ವಂತಾಗಿ,  ಅವನು ಕೀರ್ತಿ ಪಡೆಯುವಂತಾದನು.

ಗೃಹಸ್ಥನಾದರೂ ಬ್ರಹ್ಮಚಾರಿ

ರಾಮಾನುಜನಿಗೆ ಹತ್ತೊಂಬತ್ತು ವಯಸ್ಸು ತುಂಬುತ್ತಲೇ ಕಂಕಣಯೋಗ ಕೂಡಿಬಂದು ಗೃಹಸ್ಥಾಶ್ರಮ ವನ್ನು ಸ್ವೀಕರಿಸಿದ. ಮದುವೆ ಗೊತ್ತಾದುದೂ ಒಂದು ಸ್ವಾರಸ್ಯ ಕತೆಯೇ.  ಒಂದು ದಿನ ತಿರುವೇಂಗಡ ತ್ತೈಯ್ಯಂಗಾರ‍್ಯರು ಅವರ ಸ್ನೇಹಿತರೊಬ್ಬರ ಮನೆಯ ಹೊರ ಜಗಲಿಯ ಮೇಲೆ ಕುಳಿತು ಪುಸ್ತಕವೊಂದರ ಹಾಳೆ ತಿರುವಿ ಹಾಕುತ್ತಿದ್ದರು. ಆಗ ಅವರ ಕಣ್ಣುಗಳಿಗೆ ಒಬ್ಬಳು ಲಕ್ಷಣವಾದ ಕನ್ಯೆಯು ಆ ಮನೆಯ ಹೊರಗೂ ಒಳಗೂ ಓಡಾಡುತ್ತಿ ರುವುದು ಕಂಡುಬಂದಿತು. ಹುಡುಗಿಯು ಪರಿಚಯವಾದ ಕನ್ಯೆಯೇ. ಯಾರೆಂಬುದು ಗೊತ್ತಾಗದೆ ಆ ಮನೆಯ ಯಜಮಾನಿಯನ್ನೇ ಕೇಳಿದರು. ಆಕೆಯು ‘ಹುಡುಗಿ ಮತ್ತೆ ಯಾರೂ ಅಲ್ಲ. ಮಾನಮಧುರೆಯ ಬಳಿ ಇರುವ ಪಾರ್ತಿಬನೂರು ಸುಂದರರಾಜ ಅಯ್ಯಂಗಾರ‍್ಯರ ಹೆಂಡತಿ; ನಿಮ್ಮಿಂದ ಹಿಂದೆ ದೂರವಾದ ಸೋದರಿ. ಅವರ ಮಗಳೇ ಈ ಹುಡುಗಿ’ ಎಂದರು. ದೇವಕೋಟೆಯಲ್ಲಿಯೇ ಆ ಕನ್ಯೆ ಯೊಡನೆ ರಾಮಾನುಜನ ಮದುವೆ ನಡೆದುಹೋಯಿತು. ಒಡೆದು ಹೋಗಿದ್ದ ಎರಡು ಸಂಸಾರಗಳೂ ಮತ್ತೆ ಸೇರಿದವು.

ರಾಮಾನುಜನಿಗೆ ಮದುವೆ ಆಗಿ ಎಲ್ಲರ ದೃಷ್ಟಿಯಲ್ಲಿ ಅವನು ಗೃಹಸ್ಥನಾದರೂ, ಅವನ ಗಮನವೆಲ್ಲ ಸಂಗೀತದ ಮೇಲೆಯೇ. ಸದಾ ಸಾಧನೆ. ಹಗಲಿರುಳೂ ಅವಿಶ್ರಾಂತವಾಗಿ ದುಡಿದ. ಪೂಚಿ ಅಯ್ಯಂಗಾರ‍್ಯರಲ್ಲಿ ಗುರುಕುಲವನ್ನು ಮುಂದುವರಿಸಿ ಅವರ ಸೇವೆಯನ್ನು ಮಾಡುತ್ತಲೇ ಇದ್ದ.

ಜೀವನದ ಮಹತ್ತರವಾದ ದಿನ

ಅರಿಯಕುಡಿಯವರ ಭಾಗ್ಯ ರವಿ ಉದಯಿಸಿದ್ದು ಅವರ ಇಪ್ಪತ್ತೆರಡನೆಯ ವಯಸ್ಸಿನಲ್ಲಿ ಅಂದರೆ ೧೯೧೨ ರಲ್ಲಿ. ಅವರು ಪ್ರಪ್ರಥಮವಾಗಿ ವೇದಿಕೆಯನ್ನೇರಿ ಸಂಗೀತ ಕಛೇರಿ ಮಾಡಿ ಕೀರ್ತಿಗಳಿಸಲಾರಂಭಿಸಿದ ವರ್ಷವದು. ಅದಕ್ಕೊದಗಿದ ಸಂದರ್ಭ ಹೀಗಿತ್ತು.

ದೇವಕೋಟೆಯಲ್ಲಿ ಸೋಮಸುಂದರಂ ಚೆಟ್ಟಿ ಯಾರ್ ಎಂಬ ಪ್ರಸಿದ್ಧ ಶ್ರೀಮಂತರಿದ್ದರು. ೧೯೧೨ ರಲ್ಲಿ ಕಂಡನೂರಿನಲ್ಲಿ ಭಾರಿ ಮದುವೆಯೊಂದನ್ನು ಮಾಡಿ ಆಗಿನ ಕಾಲದ ಹೆಸರಾಂತ ಸಂಗೀತ ವಿದ್ವಾಂಸರನ್ನು ಆಹ್ವಾನಿಸಿದರು. ಚೆಟ್ಟಿಯಾರ್ ರವರಿಗೂ ಮತ್ತು ತಿರುವೇಂಗಡತ್ತೈಯ್ಯಂಗಾರ‍್ಯರಿಗೂ ತುಂಬಾ ಪರಿಚಯ ವಿದ್ದಿತು. ಅಲ್ಲದೆ ಚೆಟ್ಟಿಯಾರ್‌ರವರು ತಮ್ಮ ಮನೆಯಲ್ಲಿ ಯಾವ ಶುಭ ಕೆಲಸಕ್ಕಾದರೂ ಅಯ್ಯಂಗಾರ‍್ಯರ ನೆರವನ್ನು ಕೋರುತ್ತಿದ್ದರು. ಅಯ್ಯಂಗಾರ‍್ಯರು ರಾಮಾನುಜರನ್ನು ಕರೆದುಕೊಂಡು ಕಂಡನೂರಿಗೆ ಬಂದರು.

ಚೆಟ್ಟಿಯಾರ್‌ರವರು ಬಹಳ ವೈಭವದಿಂದ ಮದುವೆಯನ್ನು ಮಾಡಿದರು. ವರಪೂಜೆಯ ಸಂಜೆ ಪೂಚಿ ಅಯ್ಯಂಗಾರ‍್ಯರ ಕಛೇರಿ. ಅರಿಯಕುಡಿಯವರೂ ಪೂಚಿ ಅಯ್ಯಂಗಾರ‍್ಯರೊಡನೆ ಹಾಡಿದರು. ಮಾರನೆಯ ದಿನ ಬೆಳಗ್ಗೆ ಮುಹೂರ್ತಕ್ಕೆ ಕೊನೇರಿ ರಾಜಪುರಂ ವೈದ್ಯನಾಥ ಅಯ್ಯರ್‌ರವರ ಕಛೇರಿ. ಎಂಟು ಗಂಟೆಯಿಂದ ಹನ್ನೆರಡೂವರೆ ತನಕ ನಡೆಯಿತು. ಅದೇ ಪಕ್ಕವಾದ್ಯಗಳು. ಚೆಟ್ಟಿಯಾರ್‌ರವರಿಗೆ ಅರಿಯಕುಡಿಯವರನ್ನು ಹಾಡಿಸಬೇಕೆಂದು ಆಸೆ. ತಿರುವೇಂಗಡತ್ತೈಯ್ಯಂಗಾರ‍್ಯರಿಗೂ ಸಂತೋಷವೇ. ಆದರೂ ಗುರುಗಳ ಅಪ್ಪಣೆ ಅಗತ್ಯ ವೆಂದರು. ಚೆಟ್ಟಿಯಾರ್‌ರವರು ಪೂಚಿ ಅಯ್ಯಂಗಾರ‍್ಯರ ವರನ್ನು ಕೇಳಿದರು. ಅವರು ‘ಸಂತೋಷವಾಗಿ ಹಾಡಲಿ’ ಎಂದರು. ಪಕ್ಕವಾದ್ಯಗಳದೇ ಪ್ರಶ್ನೆ. ಅಷ್ಟರೊಳಗೆ ಪಕ್ಕವಾದ್ಯಗಾರರಿಗೆ ಸಮಾಚಾರವೂ ಗೊತ್ತಾಯಿತು. ಅವರೂ ಮತ್ತು ಕಛೇರಿಯನ್ನು ಮುಗಿಸಿ ಏಳುತ್ತಿದ್ದ ಕೊನೇರಿ ರಾಜಪುರಂ ವೈದ್ಯನಾಥ ಅಯ್ಯರ್‌ರವರೂ ವೇದಿಕೆಯ ಹತ್ತಿರ ಕುಳಿತಿದ್ದ ಅರಿಯಕುಡಿಯವರನ್ನು ವೇದಿಕೆಯ ಮೇಲೆ ಬರುವಂತೆ ಕರೆದರು. ಅರಿಯ ಕುಡಿಯವರು ಗುರುಗಳ ಮುಖವನ್ನು ನೋಡಿದರು. ಅವರು ‘ಹೋಗು, ಧೈರ್ಯವಾಗಿ ಹಾಡು’’ ಎಂದರು. ಅರಿಯಕುಡಿಯವರಿಗೆ ಸಂತೋಷವೊಂದು ಕಡೆ. ಘಟಾನು ಘಟಿ ಪಕ್ಕವಾದ್ಯಗಾರರ ಜೊತೆಯಲ್ಲಿ ಹೇಗೆ ನಿಭಾಯಿಸುವುದು ಎಂಬ ಸಂದೇಹ ಮತ್ತೊಂದು ಕಡೆ. ಮನಸ್ಸಿನಲ್ಲಿ ಗುರುವನ್ನು ವಂದಿಸಿ, ಧೈರ್ಯವಾಗಿ ವೇದಿಕೆ ಹತ್ತಿ ಕಛೇರಿಗೆ ಕುಳಿತರು. ಕೃಷ್ಣಯ್ಯರ್‌ರವರು ‘ಹೆದರದೇ ಹಾಡು’ ಎಂದರು. ದಕ್ಷಿಣಾಮೂರ್ತಿ ಪಿಳ್ಳೆಯವರು ‘ಆಂಡವನೇ’ ಎಂದು ಹೇಳಿ ಕಂಜಿರವನ್ನು ‘ಝಲ್’ ಎನಿಸಿದರು. ಕಛೇರಿಯು ಆರಂಭವಾಯಿತು.

ಹಾಡುತ್ತಾ, ಹಾಡುತ್ತಾ ರಾಮಾನುಜರು ತಮ್ಮನ್ನು ತಾವೇ ಮರೆತರು. ಮದುವೆ ಮನೆಯಾಗಿದ್ದರೂ, ಗಲಾಟೆ ನಿಂತು ಹೋಗಿ ಎಲ್ಲರೂ ಏಕಾಗ್ರಚಿತ್ತರಾಗಿ ಅವರ ಗಾಯನವನ್ನು ಕೇಳಿದರು. ಗುರುಗಳ ಮುಖದಲ್ಲಿ ತೃಪ್ತಿಯ ನಗೆ ಕಂಡು ಬಂದಿತು. ವಿದ್ವಾಂಸರು ತಲೆದೂಗಿದರು. ವೇಳೆ ಯಾದುದೇ ಗೊತ್ತಾಗಲಿಲ್ಲ. ಮಾಡಿದ್ದ ಅಡಿಗೆಯೆಲ್ಲ ಆರಿ ತಣ್ಣಗಾಯಿತು. ಕೊನೆಗೆ ಚೆಟ್ಟಿಯಾರ್‌ರವರೇ ಅರಿಯ ಕುಡಿಯವರಿಗೆ ಮುಗಿಸುವಂತೆ ಹೇಳಿ, ಒಂದು ತಟ್ಟೆಯಲ್ಲಿ ಹಣ್ಣುಗಳು, ಭಾರಿ ರೇಷ್ಮೆಯ ಹೊದೆಯುವ ವಸ್ತ್ರ, ತಾಂಬೂಲ ಮತ್ತು ಐದು ಹೊನ್ನುಗಳು ಇಷ್ಟನ್ನೂ ಇಟ್ಟು ಅರಿಯಕುಡಿಯವರಿಗೆ ಕೊಟ್ಟರು. ಅವರು ತಟ್ಟೆಯನ್ನು ಗುರುಗಳ ಪಾದಗಳ ಬಳಿ ಇಟ್ಟು ಸಾಷ್ಟಾಂಗ ನಮಸ್ಕಾರ ಮಾಡಿದರು. ಗುರುಗಳು ಆನಂದ ಬಾಷ್ಪವನ್ನು ಸುರಿಸುತ್ತ ‘ರಾಮಾನುಜ, ತುಂಬಾ ಚೆನ್ನಾಗಿ ಹಾಡಿದೆ. ಇನ್ನು ನೀನು ಕಲಿಯಬೇಕಾದ್ದು ಏನೂ ಇಲ್ಲ. ನಿನ್ನ ಪಾಡಿಗೆ ನೀನು ಸ್ವತಂತ್ರವಾಗಿ ಕಛೇರಿಗಳನ್ನು ಮಾಡಿ ಯಶೋವಂತನಾಗು, ಗರ್ವ ಪಡಬೇಡ. ವೃಥಾಹರಟೆಗಳಲ್ಲಿ ಕಾಲಕಳೆಯಬೇಡ. ಮಾತಿನಲ್ಲಿ ವಿನಯವಿರಲಿ. ದೊಡ್ಡ ವಿದ್ವಾಂಸರುಗಳ ಆದರ್ಶವನ್ನು ಪಾಲಿಸು. ಶ್ರದ್ಧೆಯಿಂದ ಅಭ್ಯಾಸ ಮಾಡುವುದನ್ನು ಬಿಡಬೇಡ. ದೇವರು ನಿನಗೆ ಒಳ್ಳೆಯದನ್ನು ಮಾಡಲಿ’ ಎಂದು ಹರಸಿದರು. ‘ಅಂದಿನ ಅವರ ಮಾತು ಗಳೇ ನನ್ನ ರಕ್ಷೆ. ಕೊನೆಯವರೆಗೂ ನನ್ನನ್ನು ಕಾಪಾಡಿದವು’ ಎಂದು ಅರಿಯಕುಡಿಯವರು ಕೊನೆಯುಸಿರು ಎಳೆಯುವವರೆಗೂ ಹೇಳುತ್ತಿದ್ದರು.

ಗುರುಕುಲವಾಸವು ಮುಗಿಯಿತು. ತಮ್ಮ ಸಮಕಾಲೀನರ ಮತ್ತು ಅವರಿಗಿಂತ ದೊಡ್ಡ ವಿದ್ವಾಂಸರು ಗಳ ಅಸಂಖ್ಯಾತ ಕಛೇರಿಗಳನ್ನು ಕೇಳಿ, ಪ್ರತಿಯೊಬ್ಬ ರಿಂದಲೂ ಒಂದೊಂದು ಮುಖ್ಯಾಂಶವನ್ನು ಗ್ರಹಿಸಿ, ತಮ್ಮ ಗಾಯನವನ್ನು ನಿರ್ದಿಷ್ಟ ಚೌಕಟ್ಟಿನಲ್ಲಿ ಸೇರಿಸಿ, ತಮ್ಮದೇ ಆದ ಶೈಲಿಯನ್ನು ಬಳಕೆಗೆ ತಂದರು. ಅದಕ್ಕೆ ‘ಅರಿಯಕುಡಿ ಬಾನಿ’ ಎಂದು ಹೆಸರು. ೧೯೪೦ ರಿಂದ ೧೯೬೫ರ ವರೆಗೆ ವಿಜೃಂಭಿಸಿದ ಜಿ.ಎನ್. ಬಾಲಸುಬ್ರಹ್ಮಣ್ಯಂ ರವರು “ಅರಿಯಕುಡಿಯವರ ಆದರ್ಶ ನನಗೆ ತುಂಬಾ ಹಿಡಿಸಿದೆ. ಅದನ್ನೇ ನಾನು ಪಾಲಿಸುತ್ತಿದ್ದೇನೆ. ಅವರ ಸತ್ವಪೂರ್ಣವಾದ ಹಾಡಿಕೆಯ ಮುಂದೆ ನಮ್ಮದೆಲ್ಲ ತೀರಾ ಸಪ್ಪೆ’ ಎಂದು ಹೇಳಿದರು. ಅರಿಯಕುಡಿಯವರ ಗಾಯನದಿಂದ ಪ್ರಭಾವಿತರಾಗಿ  ಅವರು ಪ್ರಸಿದ್ಧರಾದರು.

ತ್ಯಾಗರಾಜರ ಪವಿತ್ರ ಸನ್ನಿಧಿಯಲ್ಲಿ

ಕರ್ನಾಟಕ ಸಂಗೀತ ಪ್ರಪಂಚದಲ್ಲಿ ತಿರುವ ಯ್ಯಾರಿನ ಶ್ರೀ ತ್ಯಾಗರಾಜರ ಸಮಾಧಿಯ ಪವಿತ್ರತೆಯನ್ನು ಅರಿಯದವರಿಲ್ಲ. ಪ್ರತಿವರ್ಷವೂ ಪುಷ್ಯ ಬಹುಳ ಪಂಚಮಿಗೆ ಮೊದಲೇ ಆರಂಭವಾಗಿ, ಪಂಚಮಿಯನ್ನೂ ಸೇರಿಸಿ ಕೊಂಡು ಮೂರು ಅಥವಾ ಐದು ದಿವಸಗಳ ಪರ್ಯಂತ ನಡೆಯುತ್ತಿರುವ ಆ ಉತ್ಸವದಲ್ಲಿ ನಾದೋಪಾಸನೆ ಮಾಡುವ ವಿದ್ವಾಂಸ-ವಿದುಷಿಯರು ಮಾತ್ರವೇ ಅಲ್ಲ ಭಕ್ತಾದಿಗಳು ಕಲೆತು ಸೇವೆ ಸಲ್ಲಿಸುವ ದೃಶ್ಯವನ್ನು ನೋಡಿ ಆನಂದಿಸಬೇಕು. ವಿದ್ವಾಂಸರೆಲ್ಲರೂ-ಚಿಕ್ಕವರಾಗಲಿ, ಪ್ರಸಿದ್ಧ ರಾದವರಾಗಲಿ ಸಮಾಧಿಯ ಮಂದೆ ತಮ್ಮ ಸಂಗೀತ ಸೇವೆ ಸಲ್ಲಿಸಲು ಉತ್ಸುಕರಾಗಿರುವುದು ಸಹಜವೇ.

ರಾಮಾನುಜ ಅಯ್ಯಂಗಾರ‍್ಯರು ೧೯೧೨ರಲ್ಲಿ ವೇದಿಕೆ ಪ್ರವೇಶ ಮಾಡಿದ ನಂತರ ೧೯೧೮ರೊಳಗೆ ಬೇಕಾದಷ್ಟು ಕಛೇರಿಗಳನ್ನು ಮಾಡಿ ಪ್ರವರ್ಧಮಾನಕ್ಕೆ ಬರುತ್ತಿದ್ದರು. ೧೯೧೮ರ ತ್ಯಾಗರಾಜರ ಉತ್ಸವಕ್ಕೆ ತಿರುವಯ್ಯಾರಿಗೆ ಹೋದರು. ಖ್ಯಾತ ಪಿಟೀಲು ವಾದಕ ತಿರುಚಿ (ಮಲೆಕೋಟೆ) ಗೋವಿಂದಸ್ವಾಮಿ ಪಿಳ್ಳೆಯವರು ಶ್ರೀ ತ್ಯಾಗರಾಜ ಉತ್ಸವ ಸಮಿತಿಯ ಅಧ್ಯಕ್ಷರಾಗಿದ್ದರು. ಅವರ ಮೇಲ್ವಿಚಾರಣೆಯಲ್ಲಿ ಉತ್ಸವವು ಬಹಳ ವೈಭವದಿಂದ ನಡೆಯುತ್ತಿತ್ತು.

ತ್ಯಾಗರಾಜರ ಉತ್ಸವದಲ್ಲಿ ಹಾಡಬೇಕೆಂದು ಅರಿಯ ಕುಡಿಯವರಿಗೆ ಆಸೆ. ಗೋವಿಂದಸ್ವಾಮಿ ಪಿಳ್ಳೆಯವರನ್ನು ಹೇಗೆ ಕೇಳುವುದು? ಕೇಳಿ ಒಪ್ಪದಿದ್ದರೆ ಏನು ಮಾಡುವುದು?  ಎಂದೆಲ್ಲ ಚಿಂತೆ ಮೂಡಿತು. ಪಿಳ್ಳೆಯವರು ಅರಿಯ ಕುಡಿಯವರ ಬಗ್ಗೆ ಸಾಕಷ್ಟು ಕೇಳಿದ್ದರು. ಅವರಿಗೂ ರಾಮಾನುಜಯ್ಯಂಗಾರ‍್ಯರು ಹಾಡ ಬೇಕೆಂಬ ಇಷ್ಟ. ಮತ್ತೆ ಪಕ್ಕವಾದ್ಯಗಳ ಪ್ರಶ್ನೆ. ಅರಿಯಕುಡಿಯವರನ್ನು ಹಾಡಲು ವೇದಿಕೆ ಹತ್ತಿಸಿ ತಾವೇ ಪಿಟೀಲು ಹಿಡಿದು ಕುಳಿತರು. ಅಳಗುನಂಬಿ ಮತ್ತು ದಕ್ಷಿಣಾಮೂರ್ತಿಯವರು ಮೃದಂಗ ಮತ್ತು ಕಂಜಿರಗಳೊ ಡನೆ ವೇದಿಕೆ ಏರಿದರು. ಅರಿಯಕುಡಿಯವರು ತಮ್ಮ ಗುರುವನ್ನು ಸ್ಮರಿಸಿ ಹಾಡಿದರು. ಭಕ್ತಿ ಪರವಶತೆಯಿಂದ ಅವರ ಬಾಯಿಂದ ಹೊರಟ ತ್ಯಾಗರಾಜರ ಕೃತಿಗಳನ್ನು ಕೇಳಿ ಆನಂದಪಡದವರಿಲ್ಲ. ಹಿರಿಯ ವಿದ್ವಾಂಸರಿಗೆ ಆಶ್ಚರ್ಯ. ಕಿರಿಯರಿಗೆ ಹೆಮ್ಮೆ, ರಸಿಕರಿಗೆ ನಾದಸುಧೆಯ ರಸದೌತಣ. ಹೀಗೆ ಅರಿಯಕುಡಿಯವರು ಅದ್ಭುತ ಜಯವನ್ನು ಗಳಿಸಿದರು. ಅಂದು ತಿರುವಯ್ಯಾರಿನ ಉತ್ಸವದಲ್ಲಿ ಭಾಗವಹಿಸಲು ಆರಂಭಿಸಿದವರು ೧೯೬೫ರ ವರೆಗೂ (ಕಾರಣಾಂತರಗಳಿಂದ ಮಧ್ಯೆ ಒಂದೆರಡು ವರ್ಷಗಳು ಬಿಟ್ಟುಹೋದವು), ಪ್ರತಿ ವರ್ಷವೂ ತಪ್ಪದೆ ತಿರುವಯ್ಯಾರಿಗೆ ಹೋಗಿ ತಮ್ಮ ಸೇವೆಯನ್ನು ಸಲ್ಲಿಸಿದರು. ಕೊನೆಗೆ ‘ಅರಿಯಕುಡಿಯವರಿಲ್ಲದೆ ತ್ಯಾಗರಾಜರ ಉತ್ಸವವು ಶೋಭಿಸದು’ ಎನ್ನುವಷ್ಟರ ಮಟ್ಟಿಗೆ ಆ ಮಹಾ ವಾಗ್ಗೇಯಕಾರ ಹಾಗೂ ಸಂಗೀತ ಸಂತ, ಹಾಗೂ ರಾಮ ಭಕ್ತಾಗ್ರಣಿಯ ಉತ್ಸವದಲ್ಲಿ ಬೆರೆತುಹೋದರು.

ರಾಮಾನುಜ ವೈಭವ

ಅರಿಯಕುಡಿಯವರ ಹೆಸರು ಎಲ್ಲೆಲ್ಲೂ ಹರಡಲಾರಂಭಿಸಿತು. ೧೯೨೦ರಲ್ಲಿ ತಿರುವೆಲ್ಲಿಕ್ಕೆಣೆ ಸರಸ್ವತಿ ಸಂಗೀತ ಶಾಲೆಯಲ್ಲಿ ತಿರುಚಿ ಗೋವಿಂದಸ್ವಾಮಿ ಪಿಳ್ಳೆ ಮತ್ತು ಪುದುಕೋಟೆ ದಕ್ಷಿಣಾಮೂರ್ತಿ ಪಿಳ್ಳೆಯವರ ಪಿಟೀಲು ಮತ್ತು ಮೃದಂಗ ಪಕ್ಕವಾದ್ಯಗಳೊಡನೆ ಅವರ ಕಛೇರಿಯು ನಡೆದು ರಸಿಕರು ಸಂತೋಷಪಟ್ಟರು. ಆ ಭಾರೀ ಕಚೇರಿಯ ವಿಜಯವು ಅರಿಯಕುಡಿಯವರಿಗೆ ಮದರಾಸಿನ ಕಲಾಪರಿಸರದ ಹೆಬ್ಬಾಗಿಲು ತೆರೆಯುವಂತೆ ಮಾಡಿತು. ಆಗ ಅವರಿಗೆ ಮೂವತ್ತು ವರ್ಷ ವಯಸ್ಸು. ೧೯೨೬ರಲ್ಲಿ ಮೈಸೂರು ಟಿ. ಚೌಡಯ್ಯನವರು ಅರಿಯಕುಡಿಯವರೊಂದಿಗೆ ಪ್ರಪ್ರಥಮವಾಗಿ ಕಲೆತರು. ಅದು ನಡೆದದ್ದು ಹೀಗೆ: ಅವರಿಗೆ, ಮೊದಲೇ ಏರ್ಪಡಿಸಿದ್ದ ಮದರಾಸಿನ ಬಾಲಕೃಷ್ಣ ಅಯ್ಯರ್‌ರವರು ಬರಲಿಲ್ಲ. ಬದಲಾಗಿ ಮೈಸೂರು ಟಿ. ಚೌಡಯ್ಯನವರ ಪಿಟೀಲು ಪಕ್ಕವಾದ್ಯವನ್ನು ಏರ್ಪಡಿಸಲಾಗಿತ್ತು. ಅಲ್ಲಿಂದ ಮುಂದೆ ಅರಿಯಕುಡಿಯವರ ಕಛೇರಿಗೆ ಚೌಡಯ್ಯನವರ ಪಿಟೀಲು ಪಕ್ಕವಾದ್ಯದ ನೆರವು ಹೆಚ್ಚಾಗಿ ದೊರೆಯಲಾರಂಭಿಸಿತು.

ಅರಿಯಕುಡಿ ರಾಮಾನುಜ ಅಯ್ಯಂಗಾರ‍್ಯರು ೧೯೧೨ ರಿಂದ ೧೯೬೫ರ ವರೆಗೂ ಮೂರು ಸಾವಿರಕ್ಕೂ ಮೇಲೆ ಕಛೇರಿಗಳನ್ನು ಮಾಡಿ ಪ್ರಚಂಡವಾದ ಯಶಸ್ಸನ್ನು ಗಳಿಸಿದರು. ಅದನ್ನು ‘ರಾಮಾನುಜ ವೈಭವ’ ಎಂದು ಕರೆದರೆ ಉತ್ಪ್ರೇಕ್ಷೆ ಅಲ್ಲ.

ಆ ಐವತ್ತಮೂರು ವರುಷಗಳಲ್ಲಿ ಮೂರು ತಲೆಮಾರಿನವರು ಪಿಟೀಲು ಮತ್ತು ಮೃದಂಗಗಳನ್ನು ನುಡಿಸಿದರು.  ಅಂತಹ ವೈಭವ ಯಾರಿಗೂ ದೊರೆತಿರಲಾರದು.

ತಿರುಕೋಡಿಕಾವಲ್ ಕೃಷ್ಣ್ಣ ಅಯ್ಯರ್, ಮಲೆಕೋಟೆ ಗೋವಿಂದಸ್ವಾಮಿ ಪಿಳ್ಳೆ, ದಕ್ಷಿಣಾಮೂರ್ತಿ ಪಿಳ್ಳೆ, ತಂಜಾವೂರು ವೈದ್ಯನಾಥ ಅಯ್ಯರ್, ದ್ವಾರಂ ವೆಂಕಟಸ್ವಾಮಿ ನಾಯುಡು, ಟಿ. ಚೌಡಯ್ಯ, ಪಾಲ್‌ಘಾಟ್ ಮಣಿ ಅಯ್ಯರ್, ಎಂ.ಎಲ್. ವೀರಭದ್ರಯ್ಯ, ಲಾಲ್‌ಗುಡಿ ಜಯರಾಮನ್, ಎಂ.ಎಸ್. ಗೋಪಾಲಕೃಷ್ಣನ್, ಪಾಲ್‌ಘಾಟ್ ರಘು ಮೊದಲಾದ ಪ್ರಖ್ಯಾತ ಸಂಗೀತ ವಿದ್ವಾಂಸರು ಅರಿಯಕುಡಿಯವರ ಕಛೇರಿಗಳಲ್ಲಿ ಪಕ್ಕವಾದ್ಯಗಳನ್ನು ನುಡಿಸಿದರು. ಪ್ರಸಿದ್ಧ ಪಿಟೀಲು ಮತ್ತು ಮೃದಂಗ- ಕಂಜಿರ ವಾದಕರೊಡನೆ ಕಲೆತು ಕೀರ್ತಿ ಪತಾಕೆ ಯನ್ನು ಹಾರಿಸಿದವರು, ಮೈಸೂರು ಮಹಾರಾಜರಿಂದ ಕೊಡಲ್ಪಟ್ಟ ‘ಗಾಯಕ ಶಿಖಾಮಣಿ’ ಎಂಬ ಬಿರುದನ್ನು ಅನ್ವರ್ಥಗೊಳಿಸಿದಂಥವರು ಅರಿಯಕುಡಿ ರಾಮಾನುಜ ಅಯ್ಯಂಗಾರ‍್ಯರು.

ಕೀರ್ತಿ ಬೆಳೆಯಿತು

ಅರಿಯಕುಡಿಯವರ ಸ್ಥಾನವು ಕರ್ನಾಟಕ ಸಂಗೀತ ಪ್ರಪಂಚದಲ್ಲಿ ಭದ್ರವಾದ ಮೇಲೆ ಅವರಿಗೆ ಬಿರುದುಗಳು, ಪ್ರಶಸ್ತಿಗಳು, ಗೌರವಗಳು ಮೇಲಿಂದ ಮೇಲೆ ತಾವಾಗಿಯೇ ಬರಲಾರಂಭಿಸಿದವು. ಅವರ ಗಾಯನವನ್ನು ಮೆಚ್ಚಿಕೊಂಡು ವೆಲ್ಲೂರಿನ ರಸಿಕವೃಂದವು ೧೯೩೨ರಲ್ಲಿ ಅವರಿಗೆ ‘ಸಂಗೀತ ರತ್ನಾಕರ’ ಬಿರುದನ್ನು ಕೊಟ್ಟು ಗೌರವಿಸಿತು. ೧೯೩೮ರಲ್ಲಿ ಮದ್ರಾಸ್ ಮ್ಯೂಸಿಕ್ ಅಕಾಡೆಮಿಯ ೧೧ನೇ ಸಂಗೀತ ಸಮ್ಮೇಳನದ ಅಧ್ಯಕ್ಷತೆಯನ್ನು ವಹಿಸಿ ಕೊನೆಯ ದಿವಸದ ವಿದ್ವತ್ಸಭೆಯಲ್ಲಿ ‘ಸಂಗೀತ ಕಲಾನಿಧಿ’ ಬಿರುದನ್ನು ಪಡೆದರು. ಆಗ ರಾಮಾನುಜ ಅಯ್ಯಂಗಾರ‍್ಯರ ವಯಸ್ಸು ೪೮. ೧೯೪೬ರಲ್ಲಿ ಮೈಸೂರು ಮಹಾರಾಜರಾಗಿದ್ದ ಶ್ರೀ ಜಯಚಾಮರಾಜ ಒಡೆಯರ್‌ರವರು ಅರಿಯಕುಡಿಯವರನ್ನು ಕರೆಸಿಕೊಂಡು ‘ಗಾಯಕ ಶಿಖಾಮಣಿ’ ಬಿರುದನ್ನಿತ್ತರು. ಮದರಾಸಿನ ಇಂಡಿಯನ್ ಫೈನ್‌ಆರ್ಟ್ಸ್ ಸೊಸೈಟಿಯು ೧೯೪೭ರಲ್ಲಿ ಅದರ ಸಂಗೀತ ಸಮ್ಮೇಳನದ ಅಧ್ಯಕ್ಷ ಪದವಿಯನ್ನು ಕೊಟ್ಟು ‘ಸಂಗೀತ ಕಲಾ ಶಿಖಾಮಣಿ’ ಬಿರುದನ್ನೂ ಮತ್ತು ತಮಿಳು ಇಶೈ ಸಂಘವು ೧೯೬೦ರಲ್ಲಿ ತನ್ನ ಸಮ್ಮೇಳನದ ಅಧ್ಯಕ್ಷತೆಗೆ ಅರಿಯಕುಡಿಯವರನ್ನು ಆರಿಸಿ ‘ಇಶೈ ಪೇರರಿಗ್ನರ್’ ಬಿರುದನ್ನೂ ಕೊಟ್ಟವು. ಶೃಂಗೇರಿ ಜಗದ್ಗುರು ಗಳು ಅವರಿಗೆ ‘ಸಂಗೀತ ಶಾಸ್ತ್ರ ಅಲಂಕಾರ’ ಬಿರುದನ್ನು ಕೊಟ್ಟರು. ಇಷ್ಟೇ ಅಲ್ಲ. ಭಾರತ ಗಣರಾಜ್ಯದ ಪ್ರಪ್ರಥಮ ಅಧ್ಯಕ್ಷ ರಾಜೇಂದ್ರ ಪ್ರಸಾದ್‌ರವರು ರಾಷ್ಟ್ರಾಧ್ಯಕ್ಷರ ಪ್ರಶಸ್ತಿಯನ್ನು ಮೊದಲಬಾರಿಗೆ ಜಾರಿಗೆ ತಂದು ಅದನ್ನು ಅರಿಯುಕುಡಿಯವರಿಗೆ ಕೊಟ್ಟು ಗೌರವಿಸಿದರು. ಇದು ನಡೆದದ್ದು ೧೯೫೨ರಲ್ಲಿ. ವಿಶ್ವವಿಖ್ಯಾತ ಪಿಟೀಲು ವಾದ್ಯಗಾರ ರಾದ ಯಹೂದಿ ಮೆನುಹಿನ್‌ರವರು ಆ ಸಮಾರಂಭಕ್ಕೆ ಬಂದಿದ್ದು ಅರಿಯಕುಡಿಯವರನ್ನು ಅಭಿನಂದಿಸಿದರು. ಅದು ಬಹಳ ಮಹತ್ವಪೂರಿತ ಸಮಾರಂಭ. ದಿನಾಂಕ ೧೧ನೆಯ ಸೆಪ್ಟೆಂಬರ್ ೧೯೫೪ರಂದು ದೆಹಲಿ ಆಕಾಶವಾಣಿ ಕೇಂದ್ರದಿಂದ ಮೊದಲನೆಯ ರಾಷ್ಟ್ರೀಯ ಕಾರ್ಯಕ್ರಮವನ್ನಿತ್ತುದು ರಾಮಾನುಜ ಅಯ್ಯಂಗಾರ‍್ಯರು. ‘ಪದ್ಮಭೂಷಣ’ ಪ್ರಶಸ್ತಿ ಅನಂತರ ಬಂದಿತು. ಇವುಗಳಲ್ಲದೆ ಅರಿಯಕುಡಿಯವರ ಷಷ್ಠಿಪೂರ್ತಿ, ೭೦ನೆ ಹುಟ್ಟಿದ ಹಬ್ಬ ಮತ್ತು ೭೪ನೆಯ ಹುಟ್ಟಿದ ಹಬ್ಬಗಳು ಬಹಳ ವೈಭವದಿಂದ ಆಚರಿಸಲ್ಪಟ್ಟವು, ಹೀಗೆ ಅರಿಯಕುಡಿಯವರು ತಮ್ಮ ದೀರ್ಘಕಾಲದ ಸಂಗೀತ ಸೇವೆಯಲ್ಲಿ ಅನೇಕ ಮುಖ್ಯ ಮೈಲಿಗಲ್ಲುಗಳನ್ನು ತಲುಪಿದುದು ಅವರ ಅನನ್ಯ ಸಾಧನೆ, ಶ್ರದ್ಧೆ, ಭಕ್ತಿಗಳಿಂದ ಎಂಬುದು ನಿರ್ವಿವಾದ. ಜಯ ಚಾಮರಾಜ ಒಡೆಯರ್‌ರವರ ದಿವ್ಯ ರಚನೆಗಳನ್ನು ಮೊಟ್ಟಮೊದಲು ತಮಿಳುನಾಡಿನಲ್ಲಿ ಪ್ರಚಾರಕ್ಕೆ ತಂದವರೇ ಅರಿಯಕುಡಿಯವರು.

ಅವರ ಸಂಗೀತ

ಅರಿಯಕುಡಿಯವರ ಗಾಯನದ ಬಗ್ಗೆ ಕೆಲವು ಮಾತುಗಳು ಅತ್ಯಾವಶ್ಯಕ. ತಮ್ಮ ಸಂಗೀತವು ಯಾವ ರೀತಿ ಇರಬೇಕು ಎಂಬುದರ ಅರಿವು ಅವರಿಗೆ ಇದ್ದುದರಿಂದ ಅವರು ಅನುಪಯುಕ್ತ ಮತ್ತು ಅನವಶ್ಯಕ ಪ್ರಯೋಗಗಳಿಗೆ ಎಂದೂ ಎಡೆಗೊಡುತ್ತಿರಲಿಲ್ಲ. ಸಂಪ್ರದಾಯದ ಚೌಕಟ್ಟನ್ನು ಎಂದೂ ಸಡಿಲಿಸಿದವರಲ್ಲ. ‘ನವ್ಯಶೈಲಿ’ ಎಂಬ ಹೆಸರಿನಲ್ಲಿ ಕಲೆಗೆ ಅಪಚಾರ ಮಾಡಲು ಸಮ್ಮತಿಸುತ್ತಿರಲಿಲ್ಲ. ಗಮಕಶುದ್ಧತೆ, ಮಧ್ಯಮಕಾಲದ ವಿಶ್ಲೇಷಣೆಗೆ ಪ್ರಾಧಾನ್ಯ, ವಿಳಂಬ, ಮಧ್ಯ ಮತ್ತು ದುರಿತ ಕಾಲಗಳಿಗೆ ಸಲ್ಲಬೇಕಾದ ಮನ್ನಣೆಯ ಬಗ್ಗೆ ಪ್ರಾಜ್ಞತೆ, ಖಚಿತ ಕಾಲಪ್ರಮಾಣ, ಲಕ್ಷ್ಯ ಮತ್ತು ಲಕ್ಷಣ ಸಂಗೀತಗಳ ಸಾಮರಸ್ಯದ ಬಗ್ಗೆ ತಿಳುವಳಿಕೆ, ರಾಗಗಳ ಜೀವಸ್ವರಗಳನ್ನು ಬಳಸಬೇಕಾದಾಗ ಅವುಗಳ ಔಚಿತ್ಯ ಮತ್ತು ಪ್ರಮಾಣಗಳ ಸಮತೋಲನ, ತಮ್ಮ ಶಾರೀರಕ್ಕನುಗುಣವಾಗಿ ಕೃತಿಗಳನ್ನು ಆರಿಸುವಿಕೆಯಲ್ಲಿ ಅಪೂರ್ವ ನೈಪುಣ್ಯ, ಮನೋಧರ್ಮ, ಸಂಗೀತದ ಸ್ವರೂಪದ ಬಗ್ಗೆ ಖಚಿತ ನಿಲುವು ಮತ್ತು ಕಲ್ಪನಾಸ್ವರಗಳನ್ನು ಹೆಣೆಯುವಾಗ ಸರ್ವಲಘು ಸ್ವರಗಳ ವಿಶೇಷ ಸ್ಥಾನದ ಬಗ್ಗೆ ಕಲ್ಪನೆ – ಇವು ಅವರ ಗಾಯನದ ಮುಖ್ಯಾಂಶಗಳು.

ಅರಿಯಕುಡಿಯವರು ‘ಕಛೇರಿಯೆಂದರೆ ಕಲಾವಿದ ನಿಗೆ ಅಗ್ನಿಪರೀಕ್ಷೆ. ಅದರಲ್ಲಿ ಉತ್ತೀರ್ಣ ನಾಗಬೇಕಾದರೆ ಮೊದಲು ರಸಿಕರಿಗೆ ಏನು ಬೇಕು ಎಂಬುದನ್ನು ಕಂಡುಕೊಂಡು ಅದರಂತೆ ಕಾರ್ಯಕ್ರಮ ವನ್ನು ನಿರೂಪಿಸುವುದು ಅತ್ಯಗತ್ಯ’ ಎಂಬುದನ್ನು ಅರಿತುಕೊಂಡು ಅದನ್ನು ಅನುಷ್ಠಾನಕ್ಕೆ ತಂದು ಯಶಸ್ವಿಯಾದರು. ಅದಕ್ಕೇ ಅವರ ಕಚೇರಿಗಳೆಲ್ಲವೂ ರಸಿಕರನ್ನು ಮಂತ್ರಮುಗ್ಧರನ್ನಾಗಿ ಮಾಡಿದವು. ಪಕ್ಕವಾದ್ಯಗಾರರೊಂದಿಗೆ ಯಾವಾಗಲೂ ಸ್ನೇಹ, ಸೌಹಾರ್ದಗಳಿಂದಿರುತ್ತಿದ್ದರು. ಪಕ್ಕವಾದ್ಯಗಾರರು ಎಂದೂ ಅರಿಯಕುಡಿಯವರನ್ನು ಎದುರು ಹಾಕಿಕೊಳ್ಳುತ್ತಿರಲಿಲ್ಲ. ಅವರು ಪಕ್ಕವಾದ್ಯಗಾರರನ್ನು ತೇಜೋ ವಧೆ ಮಾಡುತ್ತಿರಲಿಲ್ಲ. ಕಿರಿಯರಾದರೆ ಪ್ರೋತ್ಸಾಹಿಸುವುದು, ಸಮ ವಯಸ್ಕರಾದರೆ ಸ್ನೇಹದ ಒತ್ತಾಸೆ, ಹಿರಿಯರಾದರೆ ಗೌರವ ಮತ್ತು ಆದರ – ಇವು ರಾಮಾನುಜ ಅಯ್ಯಂಗಾರ‍್ಯ ರಲ್ಲಿದ್ದ ಅಮೂಲ್ಯ ಗುಣಗಳು. ಯಾವಾಗಲೂ ಒಂದು ವಿಶಿಷ್ಟ ಕ್ರಮವನ್ನು ಅನುಸರಿಸಿಯೇ ಕಛೇರಿ ನಡೆಸುತ್ತಿದ್ದರು. ಅದು ಅನೇಕರಿಗೆ ಮಾದರಿಯಾಯಿತು.

ಸಾಧಾರಣವಾದ ಒಂದು ಮೇಳರಾಗದ ಕೆಲವು ಜನ್ಯಗಳನ್ನು ಅವುಗಳ ಸ್ವರೂಪ ಕೆಡದಂತೆ ಹಾಡುವುದರಲ್ಲಿ ಅರಿಯಕುಡಿಯವರು ಅಗ್ರಗಣ್ಯರಾಗಿದ್ದರು. ಆನಂದ ಭೈರವಿ-ರೀತಿಗೌಳ, ಭೈರವಿ-ಮುಖಾರಿ, ಶ್ರೀಮಣಿರಂಗ, ಕಾಮ ವರ್ಧಿನಿ, ಮಂದಾರಿ, ಹರಿಕಾಂಬೋದಿ, ಕಾಂಬೋದಿ, ಖಮಾಚ್ ಹೀಗೆ ಅವರು ಹಾಡುತ್ತಿದ್ದುದನ್ನು ಕೆಲವರು ಟೀಕಿಸಿದರು. ಕೆಲವು ಕೃತಿಗಳನ್ನು ತಪ್ಪದೇ ಎಲ್ಲ ಕಛೇರಿಗಳಲ್ಲಿ ಹಾಡುತ್ತಿದ್ದುದನ್ನು ಒಬ್ಬರು ಅಲ್ಲಗಳೆದುದಕ್ಕೆ ಚೌಡಯ್ಯನವರು ಅರಿಯಕುಡಿಯವರ ಸಾಮರ್ಥ್ಯ, ಮನೋಧರ್ಮಗಳನ್ನು ಅಂತಹ ಅಜ್ಞಾನಿಗಳಿಗೆ ತಿಳಿ ಯುವಂತೆ ಮಾಡಿದ ಒಂದು ಸಂದರ್ಭವನ್ನು ಇಲ್ಲಿ ಪ್ರಸ್ತಾಪಿಸಬಹುದು. ಆ ಸಂಜೆ ಕಛೇರಿಗೆ ಮೊದಲು ಅರಿಯಕುಡಿಯವರೊಂದಿಗೆ ಮಾತನಾಡುತ್ತಾ ‘ಬಿಡಿ ಅಯ್ಯಂಗಾರ‍್ಯರೆ, ನಿಮ್ಮ ಮೂರು-ನಾಲ್ಕು ಕಛೇರಿಗಳಿಗೆ ಪಕ್ಕವಾದ್ಯ ನುಡಿಸಿದರೆ ಐದನೆಯ ಕಛೇರಿಯಲ್ಲಿ ನೀವು ಏನೇನನ್ನು ಹಾಡುತ್ತೀರಿ ಎಂಬುದನ್ನು ನಾನೇ ಎತ್ತಿಕೊಟ್ಟು ನುಡಿಸುತ್ತೇನೆ’ ಎಂದರು.  ಅರಿಯಕುಡಿಯವರು ನಕ್ಕು ‘ಸರಿ’ ಎಂದರು. ಅಂದು ಕಛೇರಿಯಲ್ಲಿ ವರ್ಣದಿಂದ ಮೊದಲ್ಗೊಂಡು ಕೊನೆಯವರೆಗೆ ಎಲ್ಲಾ ಬೇರೆ ರಚನೆ ಗಳನ್ನೇ ಹಾಡಿದರು. ಚೌಡಯ್ಯನವರಿಗೆ ಅತ್ಯಂತ ಆನಂದ ವಾಯಿತು.  ರಸಿಕರ ಕಡೆ ತಿರುಗಿ ‘ಇಂದು ಅಯ್ಯಂಗಾರ‍್ಯರ ಮನೋಧರ್ಮದ ಅರಿವಾಯಿತೆ? ಅವರಿಗೆ ಎಷ್ಟು ಕೃತಿಗಳು ಗೊತ್ತಿದೆ ಎಂಬುದು ಗೊತ್ತಾಯಿತೆ? ಸುಮ್ಮನೆ ಟೀಕಿಸುವುದು ತಪ್ಪು. ಹೀಗೆ ಬೇರೆ ಯವರು ಹಾಡಲಿ ನೋಡೋಣ’ ಎಂದರು. ಅನಾವಶ್ಯಕ ಟೀಕೆ ಮಾಡಿದವರು ಉಸಿರೆತ್ತಲಿಲ್ಲ.

‘ರಸಿಕರನ್ನು ಸಂತೋಷಪಡಿಸುವುದೇ ತಮ್ಮ ಏಕೈಕ ಗುರಿ’ ಎಂಬುದನ್ನು ಅರಿಯಕುಡಿಯವರು ತಿಳಿದುಕೊಂಡು ಅದರಂತೆ ನಡೆಯುತ್ತಿದ್ದರು. ಕೆಲವು ವರ್ಷಗಳ ಹಿಂದೆ ಪ್ರಾಯಶಃ ೧೯೬೪ರಲ್ಲಿ ಇರಬಹುದು – ಬೆಂಗಳೂರಿನ ಶೇಷಾದ್ರಿಪುರದ ರಾಮೋತ್ಸವ ಸಮಿತಿಯ ರಾಮನವಮಿ ಉತ್ಸವದಲ್ಲಿ ಅರಿಯಕುಡಿಯವರ ಕಛೇರಿ ನಡೆಯಿತು. ಮೃದಂಗ ನುಡಿಸಿದವರು ಪಾಲ್‌ಘಾಟ್ ಮಣಿ ಅಯ್ಯರ್. ಮಾಮೂಲಿನಂತೆ ಶ್ರೀರಾಗದ ‘ಎಂದರೋ ಮಹಾನು ಭಾವುಲು’ ಪಂಚರತ್ನ ಕೃತಿಯನ್ನು ವರ್ಣವಾದ ನಂತರ ಹಾಡಿದರು. ರಾಗ, ತಾನ ಮತ್ತು ಪಲ್ಲವಿ ಹಾಡಿ ಕೆಲವು ‘ತುಕಡ’ಗಳನ್ನು ಹಾಡಲು ಹವಣಿಸುತ್ತಿರುವಾಗ ಕಿಕ್ಕಿರಿದ ರಸಿಕ ಸಮೂಹದಿಂದ ಒಬ್ಬರು ‘ಎಂದರೋ ಮಹಾನುಭಾವುಲು’ ಎಂದು ಕೂಗಿಕೊಂಡರು. ಎಲ್ಲರೂ ನಕ್ಕರು. ಅರಿಯ ಕುಡಿಯವರು ನಗಲಿಲ್ಲ ‘ಹಾಡುತ್ತೇನೆ’ ಎಂದರು. ಮಣಿ ಅಯ್ಯರ್‌ರವರು ‘ಛೇ, ಎಲ್ಲಾದರೂ ಉಂಟೆ?’ ಒಂದು , ಕಛೇರಿಯಲ್ಲಿ ಒಂದೇ ಕೃತಿಯನ್ನು ಎರಡು ಸಲ ಯಾರಾದರೂ ಹಾಡುತ್ತಾರೆಯೇ? ಕೇಳುವವರಿಗೂ ಬುದ್ಧಿ ಬೇಡವೇ?’ ಎಂದರು. ಅದಕ್ಕೆ ಅರಿಯಕುಡಿಯವರು ‘ಏನೋ ಆಸೆ, ಕೇಳುತ್ತಾರೆ ಬಿಡಿ. ಹಾಡಿದರಾಯ್ತು. ಮುಂದಿನ ವರ್ಷ ನನ್ನ ಕಚೇರಿ ನಡೆಯುತ್ತದೋ, ಇಲ್ಲವೋ, ಯಾರಿಗೆ ಗೊತ್ತು?’ ಎಂದು ಹೇಳಿ ‘ಎಂದರೋ ಮಹಾನುಭಾವುಲು’ ಕೃತಿಯನ್ನು ಮತ್ತೊಮ್ಮೆ ಹಾಡಿದರು. ರಸಿಕರಿಗೆ, ಅದರಲ್ಲೂ ಆ ಕೃತಿ ಬೇಕೆಂದು ಕೇಳಿದವರಿಗೆ ಪರಮ ತೃಪ್ತಿಯಾಯಿತು. ಇದು ಅರಿಯಕುಡಿಯವರ ದೊಡ್ಡ ಗುಣ.

ಸಾಹಿತ್ಯದ ಸ್ವರೂಪವು ಕೆಡದಂತೆ ಅದನ್ನು ತಾಳ ಬದ್ಧವಾಗಿ ವಿಸ್ತರಿಸುವ ‘ನೆರವಲ್’ ಪದ್ಧತಿಯನ್ನು ಅರಿಯಕುಡಿಯವರು ಎಂದೂ ಕೈಬಿಟ್ಟವರಲ್ಲ. ಅದಕ್ಕೇ ಒಂದು ಅಪೂರ್ವ ಮೆರಗನ್ನು ಕೊಡುತ್ತಿದ್ದರು. ಮೂವತ್ತು ಪಾಶುರಗಳೆಂಬ ಭಕ್ತಿಗೀತೆಗಳನ್ನು ರಚಿಸಿದ ಅಂಡಾಳ್‌ಗೆ ಮಹತ್ವದ ಸ್ಥಾನವನ್ನು ಕೊಟ್ಟಿದ್ದರು. ಅವನ್ನು ಮತ್ತೆ ಮತ್ತೆ ಹಾಡಿ ಜನಪ್ರಿಯಗೊಳಿಸಿದರು. ಪಲ್ಲವಿ ಹಾಡದೆ ಕಛೇರಿಯನ್ನು ಮಾಡುತ್ತಿರಲಿಲ್ಲ.

ಅರಿಯಕುಡಿಯವರು ತಮ್ಮ ೫೦ ವರ್ಷಗಳ ಸಂಗೀತ ಸೇವೆಯಲ್ಲಿ ಮಹಾವಾಗ್ಗೇಯಕಾರರುಗಳ ಅತ್ಯಮೂಲ್ಯವಾದ ರಚನೆಗಳನ್ನು ಪ್ರಚಾರಕ್ಕೆ ತಂದು ಮಹದುಪಕಾರ ಮಾಡಿದ್ದಾರೆ. ಅವುಗಳಲ್ಲಿ ಕೆಲವನ್ನು ಇಲ್ಲಿ ಕೊಡುವುದು ಸಾಧುವೆನಿಸುತ್ತದೆ. ತ್ಯಾಗರಾಜರ ರಚನೆಗಳಾದ ‘ಎವರಿ ಮಾಟ’ (ಕಾಂಬೋದಿ), ‘ದಿನಮಣಿವಂಶ’ (ಹರಿಕಾಂಬೋದಿ), ‘ದಾಶರಥೇ ನೀಋಣಮು’, ‘ರಾಜುವೆಡಲ’, ‘ಕೋಟಿನದುಲು’ ಮತ್ತು ‘ಎಂದುದಾನಾಡೋ’ (ತೋಡಿ), ‘ನಿಧಿಚಾಲಸುಖಮಾ’ (ಕಲ್ಯಾಣಿ), ‘ಎಂದುಕು ಪೆದ್ದಲ’ (ಶಂಕರಾಭರಣ), ‘ಏಲಾವತಾರ’ (ಮುಖಾರಿ), ‘ಚಕ್ಕನಿರಾಜ’ (ಖರಹರಪ್ರಿಯ), ‘ಅಲಕಲೆಲ್ಲ’ (ಮಧ್ಯಮಾವತಿ), ‘ಅನುಪಮಗುಣಾಂಬುಧಿ’ (ಅಠಾಣ) ಇವುಗಳು ಮುತ್ತು ಸ್ವಾಮಿ ದೀಕ್ಷಿತರ ‘ಶ್ರೀ ಸುಬ್ರಹ್ಮಣ್ಯಾಯ ನಮಸ್ತೇ’ (ಕಾಂಬೋದಿ), ‘ಕಮಲಾಂಬಾಂ ಭಜರೇ’ (ಕಲ್ಯಾಣಿ), ‘ಶೇಷಾಚಲ ನಾಯಕಂ’(ವರಾಳಿ), ‘ಮಾನಸಗುರುಗುಹ’ (ಆನಂದಭೈರವಿ)-ಇವುಗಳು ಶಾಮಾಶಾಸ್ತ್ರಿಯವರ ‘ಮರಿವೇರೆ ಗತಿ’ (ಆನಂದ ಭೈರವಿ) ಪಟ್ಟಣಂ ಸುಬ್ರಹ್ಮಣ್ಯ ಅಯ್ಯರ್‌ವರ ‘ಪರಿದಾನ ಮಿಚ್ಚಿತೆ’ (ಬಿಲಹರಿ), ಗುರುಪೂಚಿ ಅಯ್ಯಂಗಾರ‍್ಯರ ‘ಪರಮ ಪಾವನರಾಮ’ (ಪೂರ್ವ ಕಲ್ಯಾಣಿ), ‘ಸರಗುನ ಪಾಲಿಂಪ’ (ಕೇದಾರಗೌಳ), ‘ಶ್ರೀವೆಂಕಟೇಶಂ’ (ತೋಡಿ), ಸದ್ಗುರುಸ್ವಾಮಿಕಿ (ರೀತಿಗೌಳ) ಮತ್ತು ‘ಶ್ರೀರಘುಕುಲ ನಿಧಿಂ’ (ಹುಸೇನಿ) ಇವುಗಳನ್ನು ಉದಾಹರಿಸಬಹುದು.

ವ್ಯಕ್ತಿತ್ವ ಮತ್ತು ಕೆಲವು ರಸನಿಮಿಷಗಳು

ಅರಿಯಕುಡಿಯವರ ವ್ಯಕ್ತಿತ್ವವು ಅವರ ಸಂಗೀತ ದಷ್ಟೇ ಆಕರ್ಷಕವಾಗಿದ್ದಿತು. ಅಂದರೆ ಬಹು ಸ್ಫುರದ್ರೂಪಿಗಳು ಅಥವಾ ಆಜಾನುಬಾಹುಗಳು ಎಂದಲ್ಲ. ಸಾಧಾರಣ ಮಟ್ಟದ ನಿಲುವು, ಗಂಭೀರವಾದ ಸಿಂಹ ನಡಿಗೆ, ಪ್ರತಿಮೆಯಂತೆ ಕಡೆದ ಮುಖ, ಹೊಳೆಯುವ ಕಣ್ಣುಗಳು, ಬೆಳ್ಳಗೆ ಝಗಝಗಿಸುವ ತಲೆಕೂದಲು, ಅದಕ್ಕೊಪ್ಪುವ ಮುಡಿ, ಶ್ರೀ ವೈಷ್ಣವಲಾಂಛನವಾದ ತ್ರಿನಾಮವನ್ನು ಧರಿಸಿ ತೋಡಾವನ್ನು ತೊಟ್ಟು, ಸಾಧಾರಣ ಷರಟನ್ನು ಹಾಕಿಕೊಂಡು ಪಂಚೆ ಕಚ್ಚೆ ಉಟ್ಟು ಜರತಾರಿ ಶಲ್ಯವನ್ನು ಬೀಸಣಿಗೆಯಂತೆ ಮಡಿಸಿ ಎಡಭುಜದಿಂದ ಹಾದು, ಬಲ ಕಂಕುಳ ಮಧ್ಯೆ ಎದೆಯ ಮೇಲೆ ಬಂದು ಎಡ ಭುಜದ ಮಾರ್ಗವಾಗಿ ಬೆನ್ನಿನ ಹಿಂದೆ ಇಳಿಬಿಟ್ಟು, ಬಂದರೆಂದರೆ ವಿದ್ವಾಂಸರಾದಿಯಾಗಿ ಎಲ್ಲರೂ ಗೌರವ ತೋರಿಸುತ್ತಿದ್ದರು. ವೇದಿಕೆಯ ಮೇಲೆ ಮಂದಸ್ಮಿತರಾಗಿ ಕುಳಿತು, ಪಕ್ಕವಾದ್ಯ ಗಳಿಗೆ ಸ್ವಲ್ಪವೂ ವಿರಾಮಕೊಡದೆ, ಕಛೇರಿಯು ಅತಿವೇಗವೂ ಅಥವಾ ಅತಿ ವಿಳಂಬವೂ ಆಗದಂತೆ ಒಂದು ನಿರ್ದಿಷ್ಟವಾದ ಪ್ರಮಾಣದಲ್ಲಿ ಅವರ ಹಾಗೆ ಹಾಡುವವರು ಯಾರೂ ಇರಲಿಲ್ಲ. ಅವರ ಕಛೇರಿಗಳು ಎಂದಿಗೂ ನೀರಸವಾಗಿರುತ್ತಿರಲಿಲ್ಲ.

ಅರಿಯಕುಡಿಯವರು ಸರಳರು, ಸ್ನೇಹಪ್ರಿಯರು ಮತ್ತು ಸರಸಿಗಳು. ಸ್ನೇಹಿತರ ಮಧ್ಯೆ ಇರುವಾಗ ಆಗಲಿ ಕಛೇರಿಯಲ್ಲಾಗಲಿ ಸಮಯೋಚಿತವಾದ ಹಾಸ್ಯದ ಚಟಾಕಿ ಗಳನ್ನು ಹಾರಿಸುತ್ತಿದ್ದರು. ಅವುಗಳೆಲ್ಲವೂ ರಸ ನಿಮಿಷಗಳು.

ಒಮ್ಮೆ ಮದರಾಸ್ ಎಗ್ಮೋರಿನ ಜಗನ್ನಾಥ ಭಕ್ತ ಸಭೆಯಲ್ಲಿ ಡಿ. ಕೆ. ಪಟ್ಟಮ್ಮಾಳ್‌ರವರ ಕಛೇರಿ. ಕೊನೆಯಲ್ಲಿ ನಿರ್ವಾಹಿಗಳು ಅರಿಯಕುಡಿಯವರನ್ನು ನಾಲ್ಕು ಮಾತನಾಡುವಂತೆ ಪ್ರಾರ್ಥಿಸಿದರು. ಅರಿಯಕುಡಿಯವರು ಎದ್ದು ನಿಂತು ‘ಈಗ ಹಾಡಿದವರ ಹೆಸರು ಡಿ. ಕೆ. ಪಟ್ಟಮ್ಮಾಳ್ ಎಂಬುದು ನಿಮಗೆಲ್ಲರಿಗೂ ಗೊತ್ತಿದೆ. ಆದರೆ ಬಹಳ ಮುಖ್ಯವಾದ ವಿಷಯವೊಂದು ನಿಮಗೆ ಗೊತ್ತಿಲ್ಲ. ಅವರು ಬರಿಯ ಪಟ್ಟಮ್ಮಾಳ್ ಅಲ್ಲ ‘ಪಾಟ್ಟಮ್ಮಾಳ್, ಪಾಡುಕುಟ್ಟಮ್ಮಾಳ್. ಪಾಟ್‌ಕ್ಕಾಗ ಪಾಡ್ ಪಟ್ಟಮ್ಮಾಳ್ ’ ಎಂದರು (‘ಪಟ್ಟಮ್ಮಾಳ್ ಮಾತ್ರವಲ್ಲ ಹಾಡಮ್ಮಾಳ್, ಹಾಡಿಗಾಗಿ ಪಾಡು ಪಟ್ಟವರು’ ಎಂದು ಅರ್ಥ). ಪಾಲ್‌ಘಾಟಿನ ಶ್ರೀ ರಾಮಕೃಷ್ಣಾಶ್ರಮದಲ್ಲಿ ಅವರ ಕಛೇರಿ. ಕೊನೆಯಲ್ಲಿ ಕಾರ್ಯದರ್ಶಿಯವರು ‘ಅರಿಯಕುಡಿ ಯವರಿಗೆ ಇಂದು ಶ್ರಮವಾಯಿತು’ ಎಂದರು. ಒಡನೆಯೇ ಅರಿಯಕುಡಿಯವರು ‘ಶ್ರಮವಲ್ಲ ಇದು ಆಶ್ರಮ’ ಎಂದರು. ತಮ್ಮ ಹೆಸರಿನ ‘ಅರಿಯಕುಡಿ’ಯನ್ನು ಅರಿಯಕ್ಕುಡಿ ಯವನ್’ (ಅಂದರೆ ತಿಳಿದವನು) ಎಂದು ವಿಶ್ಲೇಷಣೆ ಮಾಡಿದ್ದು ಯಾರೂ ಮರೆಯುವಂತಿಲ್ಲ. ಇಂತಹವು ಎಷ್ಟೋ. ಅವರೊಂದಿಗೆ ಇರುವಾಗ ವೇಳೆ ಹೋಗುವುದೇ ಗೊತ್ತಾಗುತ್ತಿರಲಿಲ್ಲ.

ಸ್ವಭಾವತಃ ಮೆದುವಾಗಿದ್ದರೂ, ಸಂದರ್ಭ ಬಂದರೆ ವಜ್ಯಕಾಠಿಣ್ಯವನ್ನು ತಳೆದು ತಮ್ಮ ದೃಢ ನಿರ್ಧಾರವನ್ನು ಬಿಟ್ಟುಕೊಡುತ್ತಿರಲಿಲ್ಲ. ರಾಜಾ ಮುತ್ತೈಯ್ಯ ಚೆಟ್ಟಿಯಾರ್‌ರವರು ಅರಿಯಕುಡಿಯವರನ್ನು ತಮ್ಮ ತಮಿಳು ಇಶೈ ಸಂಘದಲ್ಲಿ ಹಾಡಬೇಕೆಂದು ಎಷ್ಟೋ ಸಲ ಪ್ರಾರ್ಥಿಸಿದರು. ಅರಿಯ ಕುಡಿಯವರು ‘ಆಕ್ಷೇಪಣೆಯಿಲ್ಲ ಹಾಡುತ್ತೇನೆ. ಆದರೆ ನಿಮ್ಮ ನಿಬಂಧನೆ ಮೇಲಲ್ಲ. ಮೊದಲು ತ್ಯಾಗರಾಜರ ಕೃತಿ, ಅನಂತರ ಕೆಲವು ಕೃತಿಗಳು, ಮಧ್ಯದಲ್ಲಿ ಮೂರು ನಾಲ್ಕು ತಮಿಳು ಕೃತಿಗಳು, ಮಂಗಳ ತ್ಯಾಗರಾಜರದ್ದು. ಇದಕ್ಕೆ ಒಪ್ಪಿದರೆ ಆಗಬಹುದು’ ಎಂದರು. ಮುತ್ತಯ್ಯಚೆಟ್ಟಿಯಾರರಿಗೆ ಒಪ್ಪಿಕೊಳ್ಳದೆ ವಿಧಿಯಿಲ್ಲ. ಅನಂತರವೇ ತಮಿಳು ಇಶೈ ಸಂಘದ ಸಂಗೀತ ಸಮ್ಮೇಳನದ ಅಧ್ಯಕ್ಷತೆ ವಹಿಸಿ ‘ಇಶೈಪೇರರಿಗ್ನರ್’ ಬಿರುದನ್ನು ಪಡೆದರು.

ಅರಿಯಕುಡಿಯವರಲ್ಲಿ ‘ಇಂತಹವರೇ ಪಕ್ಕವಾದ್ಯ ನುಡಿಸಬೇಕು’ ಎನ್ನುವ ಹಠವಿರಲಿಲ್ಲ. ಮೈಸೂರಿನಲ್ಲಿ  ಅರಿಯಕುಡಿಯವರ ಕಛೇರಿ. ಕಾರ್ಯದರ್ಶಿಯವರು ಅಂಜುತ್ತಾ ‘ಚೌಡಯ್ಯನವರು ಈ ದಿನ ಬಿಡುವಾಗಿಲ್ಲ. ಆರ್.ಆರ್. ಕೇಶವಮೂರ್ತಿಯವರು ಪಿಟೀಲು ನುಡಿಸುತ್ತಾರೆ ಆಗಬಹುದೇ?’ ಎಂದು ಕೇಳಿಕೊಂಡರು. ಅದಕ್ಕೆ ಅರಿಯಕುಡಿಯವರು ‘ಯಾಕಾಗಕೂಡದು?’ ಕೇಶವ ಮೂರ್ತಿಯವರು ಚೆನ್ನಾಗಿ ನುಡಿಸುತ್ತಾರೆಂದು ಕೇಳಿದ್ದೇನೆ. ಅವರೇ ನುಡಿಸಲಿ’ ಎಂದರು. ಪಾಲ್‌ಘಾಟ್ ಸುಬ್ಬಯ್ಯರ್‌ರವರು ಮೃದಂಗ, ಕಛೇರಿ ಬಹಳ ಚೆನ್ನಾಗಿ ಆಯಿತು. ಮುತ್ತೈಯ್ಯ ಭಾಗವತರ್, ವಾಸುದೇವಾ ಚಾರ್ಯರು, ಟೈಗರ್ ವರದಾಚಾರ್, ವೆಂಕಟಗಿರಿಯಪ್ಪ ಮುಂತಾದ ಮಹಾ ವಿದ್ವಾಂಸರುಗಳು ಬಂದಿದ್ದರು. ಅಂದು ಕೇಶವಮೂರ್ತಿ ಯವರು ನುಡಿಸಿದ ವೈಖರಿಯನ್ನು ಮರೆಯುವಂತಿಲ್ಲ. ಅರಿಯಕುಡಿಯವರು ‘ಭೇಷ್’ ಎಂದರು. ವಿದ್ವನ್ಮಣಿಗಳು ಅವರ ಸೌಜನ್ಯಕ್ಕೆ ಬೆರಗಾದರು.

ಉಪಸಂಹಾರ

ಅರಿಯಕುಡಿಯವರು ಕಾಂಬೋದೀ, ತೋಡಿ, ಕಲ್ಯಾಣಿ, ಶಂಕರಾಭರಣ ಮುಂತಾದ ರಾಗಗಳನ್ನೂ ಸೊಗಸಾಗಿ ಹಾಡುತ್ತಿದ್ದರು. ಅವುಗಳಲ್ಲಿ ಅವರು ಮಾಡುತ್ತಿದ್ದ ಕೃತಿಗಳ ಆಯ್ಕೆಯೂ ಸಂದರ್ಭಕ್ಕ ನುಸಾರ ವಾಗಿರುತ್ತಿತ್ತು. ಹಿಂದೂಸ್ತಾನಿ ಪದ್ಧತಿಯ ‘ಸಿಂಧು ಭೈರವಿ’ ರಾಗಕ್ಕೆ ಕರ್ಣಾಟಕ ಪದ್ಧತಿಯ ಕಂಪನ್ನು ಕೊಟ್ಟವರೇ ಅವರು. ಲೆಕ್ಕವಿಲ್ಲದಷ್ಟು ಶಿಷ್ಯರುಗಳನ್ನು ತಯಾರು ಮಾಡಿದರು. ಅವರುಗಳಲ್ಲಿ ಕೆ.ಎಸ್. ಧನಮ್ಮಾಳ್, ಬಿ. ರಾಜಂ ಅಯ್ಯರ್, ಪಾಲ್‌ಘಾಟ್ ಕೆ.ವಿ. ನಾರಾಯಣಸ್ವಾಮಿ ಮತ್ತು ಮಧುರೆ ಎಸ್. ಕೃಷ್ಣನ್ ಇವರುಗಳು ಪ್ರಮುಖರು.

ಅರಿಯಕುಡಿಯವರ ತಾಯಿ ಎಪ್ಪತ್ತನಾಲ್ಕು ವರ್ಷಗಳು ಬದುಕಿದ್ದು ೧೯೨೮ರಲ್ಲಿ ತೀರಿಕೊಂಡರು. ತಂದೆ ತಿರುವೇಂಗಡತ್ತೈಯ್ಯಂಗಾರ‍್ಯರು ಎಪ್ಪತ್ತೊಂಬತ್ತು ವರ್ಷಗಳು ತುಂಬಿದ ಬಾಳನ್ನು ನಡೆಸಿ ೧೯೩೨ರಲ್ಲಿ ಕಣ್ಮರೆ ಯಾದರು.  ಅರಿಯಕುಡಿಯವರು ೧೯೬೫ರಲ್ಲಿ ಹಾಸಿಗೆ ಹಿಡಿದು ಎರಡು ವರ್ಷಗಳ ಕಾಲ ಕಷ್ಟಪಟ್ಟು  ನರಳಿ ದಿನಾಂಕ ೨೩ರ ಜನವರಿ ೧೯೬೭ರಂದು ರಾತ್ರಿ ಎಂಟು ಘಂಟೆಗೆ ವೈಕುಂಠ ವಾಸಿಗಳಾದರು.

ಕಡೆಯವರೆಗೂ ಕಛೇರಿ ಮಾಡಬೇಕೆಂಬ ಆಸೆಯನ್ನು ಭಗವಂತನ್ನು ನಡೆಸಿಕೊಡಲಿಲ್ಲ. ‘ಅರಿಯ ಕುಡಿಯವರು ಕಛೇರಿ ಮಾಡುವಾಗ ವಿಧಿವಶರಾದರು’ ಎಂಬ ನನ್ನ ಇಷ್ಟ ನಡೆಯಲಿಲ್ಲ ಎಂಬುದೇ ಅವರ ಕಡೆಯುಸಿರು ಎಳೆಯುವವರೆಗಿನ ಕೊರಗು ಆಗಿದ್ದಿತು.