(ಕ್ರಿ. ಪೂ. ೩೮೪-೩೨೨)

ಅರಿಸ್ಟಾಟಲ್ ಕ್ರಿ.ಪೂ. ೩೮೪ರಲ್ಲಿ ಏಷಿಯನ್ ಸಮುದ್ರ ತೀರದ ಹಳ್ಳಿಯೊಂದರಲ್ಲಿ ಜನಿಸಿದರು. ತನ್ನ ಬಾಲ್ಯದಲ್ಲಿ ಆತ ಗ್ರೀಕ ಶಿಕ್ಷಣದ ಹಳೆಯ ಪದ್ಧತಿಗೆ ಅನುಸಾರವಾಗಿ ವ್ಯಾಸಂಗ ಮಾಡಿದರು. ಚಿಕ್ಕವನಿದ್ದಾಗ ಆತನಿಗೆ ಪ್ರಕೃತಿ ವಿಜ್ಞಾನದಲ್ಲಿ ವಿಶೇಷ ಆಸಕ್ತಿ ಇತ್ತು. ಮುಂದೆ ಆತ ಅಥೆನ್ಸ್ ಅಕಾಡೆಮಿಯಲ್ಲಿ ಪ್ರಾಣಿಶಾಸ್ತ್ರದ ಬಗ್ಗೆ ವಿಶೇಷ ಅಧ್ಯಯನ ಮಾಡಿದರು.

ಶಾರೀರಕ ರಚನೆ, ಪುನರುತ್ಪಾದನೆ ಮತ್ತು ರಕ್ತಗುಣಗಳಿಗೆ ಅನುಗುಣವಾಗಿ ಆತ ಪ್ರಾಣಿಗಳ ವರ್ಗೀಕರಣ ಮಾಡಿದರು. ಆ ಮೂಲಕ ಜೀವ ಶಾಸ್ತ್ರಕ್ಕೆ ಭದ್ರ ಬುನಾದಿಯನ್ನು ಹಾಕಿಕೊಟ್ಟರು. ಅರಿಸ್ಟಾಟಲ್ ಕೇವಲ ಜೀವಶಾಸ್ತ್ರಜ್ಞ ಮಾತ್ರವೇ ಆಗಿರಲಿಲ್ಲ. ಪದ್ಯ, ನಾಟಕ, ರಾಜನೀತಿ, ಧರ್ಮಶಾಸ್ತ್ರ, ಆಧ್ಯಾತ್ಮಿಕ ವಿಷಯಗಳು, ಖಗೋಲ ವಿಜ್ಞಾನ, ಗಣಿತ ಮೊದಲಾದ ಅನೇಕ ವಿಷಯಗಳಲ್ಲೂ ಆತ ತುಂಬ ಆಸಕ್ತಿಯುಳ್ಲವರಾಗಿದ್ದ ಅವರನ್ನು ಪ್ರಾಚೀನ ತತ್ವಜ್ಞಾನಿಗಳಲ್ಲಿ ಒಬ್ಬನೆಂದು ಕರೆಯಲಾಗುತ್ತದೆ.

ಜಗತ್ತು ಅಚಲವಾದದ್ದಲ್ಲ, ಚಲನಾತ್ಮಕವಾದದ್ದೆಂದು ಆತ ಮಾಡಿದ ಪ್ರತಿಪಾದನೆ ಆ ಕಾಲದಲ್ಲಿ ಕ್ರಾಂತಿಕಾರೀ ಪ್ರತಿಪಾದನೆಯಾಗಿತ್ತು.

ಆದರೆ ಅರಿಸ್ಟಾಟಲರ ಕೆಲವು ತತ್ವಗಳು ತಪ್ಪೆಂದು ತರುವಾಯ ಖಚಿತ ಪಟ್ಟಿವೆ. ಉದಾಹರಣೆಗೆ, ಹವೆಯ ಮೂಲ ಗುಣಧರ್ಮ ಗುರುತ್ವವಲ್ಲ ಎಂದು ಆತ ಪ್ರತಿಪಾದಿಸಿದ್ದರು. ಅಂದರೆ ಹವೆ ಇತರ ವಸ್ತುಗಳಂತೆ ಕೆಳಕ್ಕಿಳಿದು ನೆಲದ ಆಶ್ರಯ ಪಡೆಯುವ ಪ್ರವೃತ್ತಿಯುಳ್ಳದ್ದಲ್ಲ, ಅದರದು ಲಾಘವ ಗುಣ, ಅಂದರೆ ನೆಲದಿಂದ ಮೇಲೇರಿ ಹೋಗುವ ಪ್ರವೃತ್ತಿಯುಳ್ಳದ್ದು ಎಂದು ಆತ ತಿಳಿದಿದ್ದರು. ಹೆಚ್ಚು ಹವೆ ಕಡಿಮೆ ಹವೆಗಿಂತ ಹಗುರವಾಗಿತ್ತೆಂಬುದು ಅವರ ಕಲ್ಪನೆಯಾಗಿತ್ತು. ಒಂದೇ ಎತ್ತರದಿಂದ ಬಿಟ್ಟಾಗ, ಹೆಚ್ಚು ಭಾರವಾದ ವಸ್ತುವು ಕಡಿಮೆ ಭಾರದ ವಸ್ತುವಿಗಿಂತ ಬೇಗ (ಅಂದರೆ ಕಡಿಮೆ ಸಮಯದಲ್ಲಿ) ನೆಲವನ್ನು ಸೇರುತ್ತದೆ ಎಂದು ಪ್ರತಿಪಾದಿಸಿದ್ದರು. ಇದು ಸತ್ಯವಲ್ಲವೆಂದು ಗೆಲಿಲಿಯೋ ಪ್ರಯೋಗವು ಸಾಬೀತುಪಡಿಸಿತು. ನ್ಯೂಟನ್ ಚಲನಶಾಸ್ತ್ರವು ಅರಿಸ್ಟಾಟಲನ ಅನೇಕ ವೈಜ್ಞಾನಿಕ ಪ್ರತಿಪಾದನೆಗಳನ್ನು ಪರಿಷ್ಕರಿಸಿತು. ಅರಿಸ್ಟಾಟಲ್ ಕ್ರಿ. ಪೂ. ೩೨೨ರಲ್ಲಿ ಮೃತಪಟ್ಟರು.