ಸಂಗೀತ ಕ್ಷೇತ್ರದಲ್ಲಿ ಸುಮಾರು ಎಪ್ಪತ್ತೈದು ವರ್ಷಗಳಿಂದಲೂ ಸಂಗೀತಗಾರರಿಗೆ ಅಗತ್ಯವಾದ ಎಲ್ಲಾ ವಾದ್ಯಗಳನ್ನೂ ತಯಾರಿಸಿ ಪೂರೈಸುತ್ತಿರುವ ಹೆಮ್ಮೆಯ ಸಂಸ್ಥೆ ಅರುಣಾ ಮ್ಯೂಸಿಕಲ್ಸ್ ಇದರ ಇನ್ನೊಂದು ವಿಶೇಷವೆಂದರೆ ಹುಟ್ಟಿದಂದಿನಿಂದ ಇದುವರೆಗೂ ಇದನ್ನು ನಡೆಸುತ್ತಿರುವವರು ಕಲಾವಿದರೇ. ಮೂರು ತಲೆಮಾರುಗಳಿಂದ ಅವಿಚ್ಛಿನ್ನವಾಗಿ ಸಂಸ್ಥೆಯನ್ನು ಬೆಳೆಸುತ್ತಿರುವ ಈ ಮೂವರು ಕಲಾವಿದರಲ್ಲಿ ಮೊದಲನೆಯವರು ಶ್ರೀ ಅರುಣಾಚಲಪ್ಪ ಈ ಸಂಸ್ಥೆಯ ಜನ್ಮದಾತ. ವಯೊಲಿನ್ ವಾದನದಲ್ಲಿ ಪರಿಣತಿ ಇದ್ದರೂ ಹಾರ್ಮೋನಿಯಂ ವಾದ್ಯವನ್ನು ತಮ್ಮದಾಗಿಸಿಕೊಂಡು ಸಾಕಷ್ಟು ಸಂಶೋಧನೆಗಳನ್ನು ನಡೆಸಿ ಬೆರಳುಗಳ ಮೂಲಕ ಗಾಳಿಯ ಒತ್ತಡವನ್ನು ನಿಯಂತ್ರಿಸಿ ರಾಗ ಭಾವಕ್ಕನುಗುಣವಾಗಿ ನಾದ ಹೊಮ್ಮಿಸುವ ಕಲಾತಂತ್ರವನ್ನು ಅಳವಡಿಸಿ ಕಟ್ ಬೆಲ್ಲೋಸ್ ಹಾರ್ಮೋನಿಯಂ ಅನ್ನು ಮೊಟ್ಟ ಮೊದಲಬಾರಿಗೆ ತಯಾರಿಸಿದರು.

ಹಾಮೋರ್ನಿಯಂ ಜೊತೆಗೆ ವಯೊಲಿನ್, ತಂಬೂರಿ, ವೀಣೆ, ತಬಲ, ಕೊಳಲು, ಮೃದಂಗ, ಖಂಜರಿ, ಡೋಲು, ಸಿತಾರ್, ಬುಲ್‌ಬುಲ್ ತರಂಗ್, ಕೀಬೋರ್ಡ್‌, ಗಿಟಾರ್, ಮೋರ್ಚಿಂಗ್ ವಾದ್ಯಗಳನ್ನು ತಯಾರಿಸಿ ಬೇರೆ ಬೇರೆ ರಾಜ್ಯಗಳಿಂದ ತರಿಸಿ ಇಲ್ಲಿನ ಕಲಾವಿದರಿಗೆ ಸೂಕ್ತ ಬೆಲೆಯಲ್ಲಿ ಸಿಗುವಂತೆ ಮಾಡಿದರು. ಅರುಣಾಚಲಪ್ಪನವರೊಡನೆ ಈ ಉದ್ಯಮದಲ್ಲಿ ಅವರ ಜ್ಯೇಷ್ಠಪುತ್ರ ವೀರಭದ್ರಯ್ಯನವರು ಆಸಕ್ತಿವಹಿಸಿ ಸಂಸ್ಥೆಯು ಬೆಲೆಯಲು ಎಲ್ಲ ರೀತಿಯಲ್ಲೂ ಸಹಕರಿಸಿದರು. ತಂದೆಯವರ ನಿಧನಾನಂತರ ತಾವೇ ಮುಂದಾಗಿ ನಿಂತು ಉತ್ಕೃಷ್ಟ ಮಟ್ಟದ ವಾದ್ಯಗಳನ್ನು ದೇಶದ ನಾನಾ ಭಾಗಗಳಿಂದ ತರಿಸಿ ಇಲ್ಲಿನ ಕಲಾವಿದರಿಗೆ ದೊರಕಿಸಿದರು. ವಾದ್ಯಗಳಿಗೆ ಬೇಕಾಗುವ ತಂತಿಗಳನ್ನೂ ಸಹ ಒದಗಿಸತೊಡಗಿದರು. ಮೊಟ್ಟಮೊದಲಬಾರಿಗೆ ಶೃತಿಕೊಳವೆಯನ್ನು ತಯಾರಿಸಲು ಆರಂಭಿಸಿದರು. ಫೈಬರ್ ಗ್ಲಾಸ್ ಬಳಸಿ ವೀಣೆ ತಂಬೂರಿಗಳನ್ನು ತಯಾರಿಸತೊಡಗಿದರು. ಹೀಗೆ ಹೊಸತಾದುದನ್ನು ನೀಡುತ್ತ ಕ್ಷೇತ್ರಕ್ಕೆ ಈ ಸಂಸ್ಥೆಯು ಸಲ್ಲಿಸಿರುವ ಸೇವೆ ಅಪಾರ.

ಈಗ ವಿದ್ವಾನ್ ಕಾಶೀನಾಥ್ ತಾತ-ತಂದೆಯರ ಆಸ್ಥೆಯನ್ನು ಮುಂದುವರಿಸಿಕೊಂಡು ಸಂಸ್ಥೆಯನ್ನು ಸರ್ವತೋಮುಖವಾಗಿ ಬೆಳೆಸುತ್ತಿದ್ದಾರೆ. ನೆನಪಿನ ಕಾಣಿಕೆಗಳಿಗಾಗಿ ಚಿಕ್ಕ ಚಿಕ್ಕ ವಾದ್ಯಗಳನ್ನು ತಯಾರಿಸುವುದರಲ್ಲಿ ಅಸಾಧಾರಣ ಚಮತ್ಕಾರ ನೈಪುಣ್ಯವನ್ನು ತೋರಿಸುತ್ತಿರುವ ಈ ಸಂಸ್ಥೆ ಸರ್ವಜನ ಪ್ರಿಯವಾಗಿರುವುದು ಸಹಜವೇ. ರಾಜ್ಯ ಸಂಗೀತ ನೃತ್ಯ ಅಕಾಡೆಮಿ ಅರುಣಾ ಮ್ಯೂಸಿಕಲ್ಸ್ ಸಂಸ್ಥೆಗೆ ೨೦೦೩ನೇ ಸಾಲಿನ “ಕರ್ನಾಟಕ ಕಲಾಶ್ರೀ” ಪ್ರಶಸ್ತಿ ನೀಡಿ ಗೌರವಿಸಿದೆ.