ಎರಡು ಸಾವಿರ ವರ್ಷದ ಹಿಂದೆ ನಾಟ್ಯ ಜಗತ್ತಿನಲ್ಲಿ ಕೇಳಿಬಂದ ಹೊಸ ಪರಿಕಲ್ಪನೆ “ಅರೆಂಗೇಟ್ರಂ” ಮೂಲತಃ ಇದು ತಮಿಳು ಪದ “ಅರೆಂಗು” ಎಂದರೆ ರಂಗಭೂಮಿ “ಏಟ್ರಂ” ಎಂದರೆ ಪ್ರವೇಶ. ಹೀಗೆ ಒಬ್ಬ ಕಲಾವಿದೆ ತನ್ನ ಬದುಕಿನಲ್ಲಿ ರಂಗದ ಮೇಲೆ ತಾನು ಕಲಿತ ವಿದ್ಯೆಯನ್ನು ಪ್ರದರ್ಶನ ಮಾಡುವ ಮೊದಲ ದಿನವೂ ಅದಾಗಿದೆ. ಈ ಪದಕ್ಕೆ ಸಂಬಂಧಿಸಿದಂತೆ ತಮಿಳಿನ ಮೇರುಕೃತಿ “ಶಿಲಪ್ಪಧಿಕಾರಂ”ನಲ್ಲಿ “ಅರೆಂಗೇಟ್ರಕಾದೈ” ಎಂಬ ಒಂದು ಅಧ್ಯಾಯವೇವುಂಟು. ಅದರಲ್ಲಿ ಅರೆಂಗೇಟ್ರಂನ ವಿಷಯವನ್ನು ಬಹಳ ವಿಸ್ತಾರವಾಗಿ ಹೇಳಿದ್ದಾರೆ. ಅದರಲ್ಲಿರುವಂತೆ ಅರೆಂಗ್ರೇಟಂ ಮಾಡುವ ಕಲಾವಿದ ಬಳಗ್ಗಿನ ಬ್ರಾಹ್ಮೀ ಮೂಹೂರ್ತದಲ್ಲೆದ್ದು ಎಣ್ಣೆ ಸ್ನಾನಾದಿಗಳನ್ನು ಮಾಡಿ ವ್ರತದಲ್ಲಿದ್ದು ಅರೆಂಗೇಟ್ರಂನ ವಿಧಿವಿಧಾನಗಳನ್ನು ಪೂರೈಸಿ ನರ್ತಿಸಲು ಸನ್ನದ್ಧರಾರಬೇಕಿತ್ತು. ಅರೆಂಗೇಟ್ರಂ ಮಾಡುವ ಕಲಾವಿದೆ ನಾಟ್ಯಕ್ಕೆ ತೀರಾ ಅವಶ್ಯಕವಾದ ಸಾಹಿತ್ಯಜ್ಞಾನ, ಸಂಗೀತ, ಶಾಸ್ತ್ರ ಮತ್ತು ಪಾಂಡಿತ್ಯ ಜ್ಞಾನ ಪಡೆದಿರಬೇಕು. ಅರೆಂಗೇಟ್ರಂ ಮಾಡಬೇಕಾದರೆ ತನ್ನ ಐದನೇ ವಯಸ್ಸಿನಿಂದ ಇವೆಲ್ಲವನ್ನು ಕಲಿಯಲು ಪ್ರಾರಂಭಿಸಿ ಸುಮಾರು ಹತ್ತು ಹನ್ನೊಂದು ವರ್ಷಗಳ ಕಾಲ ಶಾಸ್ತ್ರೀಯವಾಗಿ ಅಭ್ಯಸಿಸಿ, ತನ್ನ ಪ್ರೌಢಾವಸ್ಥೆಯನ್ನು  ದಾಟಿ ಯೌವನಕ್ಕೆ ಬರುವ ಕಾಲದಲ್ಲಿ ಅಂದರೆ ತನ್ನ ೧೬ನೇ ವಯಸ್ಸಿಗಾಗುವಾಗ ಅರೆಂಗೇಟ್ರಂ ಮಾಡಲು ಸಿದ್ಧರಾಗುತ್ತಿದ್ದರು. ಅರೆಂಗೇಟ್ರಂನ ಸಮಯದಲ್ಲಿ ಕಲಾವಿದೆ ತನ್ನ ಬದುಕಿನ ಇಪ್ಪತ್ತನಾಲ್ಕು ಗಂಟೆಗಳನ್ನು ಸಹ ನೃತ್ಯಾಭ್ಯಾಸಕ್ಕೆ ವಿನಿಯೋಗಿಸಬೇಕಿತ್ತು.

ಆ ಕಾಲದಲ್ಲಿ ಕಲೆಯನ್ನು ಕಲಾವಿದರನ್ನು ಪೋಷಿಸುತ್ತಿದ್ದವರು ರಾಜರು ಹಾಗೂ ಚಕ್ರವರ್ತಿಗಳು. ಅರೆಂಗೇಟ್ರಂ (ರಂಗಪ್ರವೇಶ) ಮುಖ್ಯವಾಗಿ ರಾಜಸಭೆಯಲ್ಲಿ ಹಾಗೂ ದೇವಾಲಯಗಳ ಪ್ರಾಂಗಣದಲ್ಲಿ ನಡೆಯುತ್ತಿದ್ದವು. ಇದಕ್ಕೆ ನಮ್ಮ ಇತಿಹಾಸವನ್ನು ಅವಲೋಕಿಸಿದಾಗ ದಾಖಲೆಗಳಿರುವುದನ್ನು ಮನಗಾಣಬಹುದು. ವಿಜಯನಗರದ ರಾಜರುಗಳು ಅವರ ಪತನಾನಂತರ ನೃತ್ಯ ಸಂಗೀತಕ್ಕೆ ಆಶ್ರಯ ನೀಡಿದವರಲ್ಲಿ ತಂಜಾವೂರಿನ ಅರಸು ಅಲ್ಲದೆ ಮೈಸೂರಿನ ಹಾಗೂ ತಿರುವನಂತಪುರದ ರಾಜಗುಗಳು. ಇದೇ ರೀತಿ ತಂಜಾವೂರಿನ ಬೃಹದೇಶ್ವರ ದೇವಾಲಯ, ಚಿದಂಬರನ ನಟರಾಜ ದೇವಾಲಯ, ಕುಂಭ ಕೋಣಂ ಸಾರಂಗಪ್ರಾಣಿ ದೇವಾಲಯಗಳ ಜೊತೆಯಲ್ಲಿ ಹೊಯ್ಸಳರ ಕಾಲದಲ್ಲಿ ಹಳೇಬೀಡು, ಸೋಮನಾಥಪುರ ದೇವಾಲಯಗಳಲ್ಲಿ ನೃತ್ಯಕ್ಕೆ ದೊರೆತ ಪ್ರಾಶಸ್ತ್ಯದ ಕುರಿತು ದಾಖಲೆಗಳಿವೆ. ವಿಷ್ಣುವರ್ಧನನ ಹೆಂಡತಿ ಶಾಂತಲೆಯೇ ಸ್ವತಃ ನೃತ್ಯಗಾರ್ತಿಯಾಗಿದ್ದನ್ನು ಸ್ಮರಿಸಬಹುದು. ಹೀಗೆ ದೇವಾಲಯಗಳು ಹಾಗೂ ರಾಜಸಭೆಯಲ್ಲಿ ರಾಜರುಗಳು ಅರೆಂಗೇಟ್ರಂ ಮಾಡಲು ಎಲ್ಲಾ ರೀತಿಯ ವೇದಿಕೆಯನ್ನು ಸಿದ್ಧಗೊಳಿಸುತ್ತಿದ್ದರು. ಅರೆಂಗ್ರೇಟಂ ಮಾಡುವವರ ಜೊತೆಯಲ್ಲಿ ತಟ್‌ಕೋಲ್‌, ಗುರುಗಳನ್ನು ಆನೆಯ ಅಂಬಾರಿಯಲ್ಲಿ ಬರಮಾಡಿಕೊಳ್ಳುತ್ತಿದ್ದರು. ಕಲಾಕಾರರು, ವಿದ್ವಾಂಸರು, ನೇತಾರರು, ಕಲಾಭಿಮಾನಿಗಳು ನೆರೆದಿದ್ದ ರಾಜಸಭೆಯ ರಂಗದಲ್ಲಿ ತಾನು ಕಲಿತ ವಿದ್ಯೆಯನ್ನು ಗುರುವಿನ ಆಶೀರ್ವಾದದ ಜೊತೆಗೆ ಹಾಡಿ, ನರ್ತಿಸಿ, ತನ್ನ ಪಾಂಡಿತ್ಯ, ಪ್ರತಿಭೆಯನ್ನು ರಂಗದಲ್ಲಿ ಪ್ರದರ್ಶಿಸಬೇಕಿತ್ತು. ಅಲ್ಲದೆ ನೆರೆದಿದ್ದ ರಾಜಸಭೆಯಿಂದ ಆಶೀರ್ವಾದ ಪಡೆದುಕೊಳ್ಳಬೇಕಿತ್ತು. ಅರೆಂಗ್ರೇಟಂ ವಿದ್ಯಾರ್ಥಿಯ ಬದುಕಲ್ಲಿ ಮರೆಯಲಸಾಧ್ಯವಾದ ಮಹತ್ವದ ಕಾರ್ಯವಾಗಿರುತ್ತಿತ್ತು. ಹೆಚ್ಚಾಗಿ ಅ ಕಾಲದಲ್ಲಿ ದೇವದಾಸಿಯರು ಈ ನೃತ್ಯ ಕಲೆಗೋಸ್ಕರ ತಮ್ಮ ಜೀವನವನ್ನು ಮುಡಿಪಾಗಿಡುತ್ತಿದ್ದರು. ದೇವದಾಸಿಯರು ತಮ್ಮ ನರ್ತನವನ್ನು ದೇವಾಲಯಗಳಲ್ಲಿ ಸೇವಾರೂಪದಲ್ಲಿಯೂ ಅರ್ಪಿಸುತ್ತಿದ್ದರು. ಅವರಿಗೆ ತಮ್ಮ ಬದುಕಿನ ನಿರ್ವಹಣೆಗಾಗಿ ನರ್ತನ ಅನಿವಾರ್ಯವಾಗಿದುರಿಂದ ಅವರು ರಾಜಸಭೆಯಲ್ಲೂ ನರ್ತಿಸಿ ರಾಜರಿಂದ ಮನ್ನಣೆ, ಗೌರವ ಪಡೆಯುತ್ತಿದ್ದರು.

೧೯೩೦ರ ಹೊತ್ತಿಗೆ ಭಾರತ ಇನ್ನೂ ಸ್ವಾತಂತ್ರ್ಯ ಪಡೆದಿರಲಿಲ್ಲ. ಬ್ರಿಟೀಷರ ಆಡಳಿತದ ಸಂದರ್ಭದಲ್ಲಿ ಭರತನಾಟ್ಯಂ ನೃತ್ಯ ತನ್ನ ಪ್ರಾಮುಖ್ಯತೆಯನ್ನು ಕಳೆಯುತ್ತಲಿತ್ತು. ಆಗ ಭರತನಾಟ್ಯಂನಂತಹ ಶಾಸ್ತ್ರೀಯ ಕಲೆಯನ್ನು ಉಳಿಸಿ ಬೆಳೆಸಬೇಕೆಂದು ತಮಿಳುನಾಡಿನ ಇ.ಕೃಷ್ಣಅಯ್ಯರ್ ಹಾಗೂ ಅರುಂಡೆಲ್‌ರುಕ್ಮಿಣಿ ದೇವಿಯವರು ಬಹಳ ಶ್ರಮಿಸಿದ್ದರು. ಆ ಸಂದರ್ಭ ಅರೆಂಗೇಟ್ರಂ ಕೇವಲ ದೇವದಾಸಿಯರಿಗೆ ಮಾತ್ರ ಸೀಮಿತವಾಗಿತ್ತು. ಈ ಮಹಾನ್‌ವಿದ್ವಾಂಸರುಗಳು ಅವಿರತವಾಗಿ ಶ್ರಮಿಸಿ ತಮಿಳುನಾಡಿನಲ್ಲಿ ಉತ್ತಮಕುಲದ ಹೆಣ್ಣುಮಕ್ಕಳು ಸಹ ಈ ನೃತ್ಯವನ್ನು ಕಲಿತು ಅರೆಂಗ್ರೇಟಂನ್ನು ಮಾಡಬಹುದು ಎನ್ನುವುದನ್ನು ಸಮಾಜಕ್ಕೆ ತೋರಿಸಿಕೊಟ್ಟರು. ಇವರು ಹತ್ತರಿಂದ ಹದಿನೈದು ವರ್ಷಗಳ ಕಾಲ ಶಾಸ್ತ್ರೀಯವಾಗಿ ಪಾಂಡಿತ್ಯವನ್ನು ಪಡೆದ ವಿದ್ಯಾರ್ಥಿಗಳಿಗೆ ಮಾತ್ರ ಅರೆಂಗ್ರೇಟಂನ್ನು ಮಾಡುತ್ತಿದ್ದರು. ಆ ಕಾಲದಲ್ಲಿಯೂ ಅಪವಾದವೆಂಬಂತೆ ಆರು ತಿಂಗಳು ಕಲಿಸಿ ಕೆಲವೊಂದು ಗುರುಗಳು ತಮ್ಮ ವಿದ್ಯಾರ್ಥಿಗಳಿಗೆ ಅರೆಂಗ್ರೇಟಂ ಮಾಡಿದ ಘಟನೆಗಳು ಇದೆ. ಸುಮಾರು ೧೯೭೦ರ ದಶಕದಲ್ಲಿ ಮುಂಬಯಿ ಬದಿಯಲ್ಲಿ ಇಂದು ವಿಶೇಷತೆ ಕಂಡುಬಂತು. ಏನೆಂದರೆ ಯಾರು ಭರತನಾಟ್ಯಂನಲ್ಲಿ ಅರೆಂಗ್ರೇಟಂ ಮಾಡಿರುತ್ತಾರೆಯೋ, ಅಂತಹ ಹುಡುಗಿಯರಿಗೆ ಮದುವೆ ಸಂದರ್ಭದಲ್ಲಿ ಬಹಳ ಬೇಡಿಕೆಯಿತ್ತು. ಇವರಿಂದಾಗಿ ಕೆಲವರು ಈ ಅರೆಂಗ್ರೇಟಂನ್ನು ಬಹಳ ಆಡಂಬರವಾಗಿ ಮಾಡಲು ತೊಡಗಿದರು.

ಅರೆಂಗ್ರೇಟಂ ಮಾಡುವ ವ್ಯಕ್ತಿಗೆ ತಾನು ವೇದಿಕೆಯಲ್ಲಿ ಪ್ರದರ್ಶಿಸುವ ನೃತ್ಯದ ಕುರಿತು ಎಲ್ಲಾ ರೀತಿಯ ಸಾಹಿತ್ಯ ತಿಳಿದಿರಬೇಕಿತ್ತು. ತಾಳ, ಸಾಹಿತ್ಯ, ಹಾಡುಗಾರಿಕೆ ಮೊದಲಾದ ಎಲ್ಲಾ ಪ್ರಕಾರಗಳನ್ನು ತಿಳಿದಿರಬೇಕು. ಅಲ್ಲದೆ ನೃತ್ಯ ಮಾಡುವವಳು ನೃತ್ಯದ ಪದ-ಪದದ=ಪದಾರ್ಥ, ಭಾವಾರ್ಥ ತಿಳಿದಿರಬೇಕು. ನೃತ್ಯಕ್ಕೆ ಸಂಬಂಧಿಸಿದ ಸಾಹಿತ್ಯ ತೆಲಗು, ಕನ್ನಡ, ಸಂಸ್ಕೃತ, ತಮಿಳು ಭಾಷೆಯಲ್ಲಿ ಹೆಚ್ಚಾಗಿ ಇರುತ್ತದೆ. ಹಾಗಾಗಿ ಉಚ್ಚಾರ ಸ್ಪಷ್ಟವಾಗಿರಬೇಕು. ಸಾಹಿತ್ಯದ ಅರ್ಥಜ್ಞಾನ ಹಾಗೂ ಭಾವಜ್ಞಾನ ಕಲಿಸಿದ ಗುರುವಿಗೂ, ನರ್ತಿಸುವ ಶಿಷ್ಯನಿಗೂ ಹೀಗೆ ಇಬ್ಬರಿಗೂ ತಿಳಿದಿರಬೇಕು. ನಾನು ಮುಂಬಯಿಯಲ್ಲಿ ಕಂಡು ಒಂದು ಅರೆಂಗ್ರೇಟಂನ ಸಂದರ್ಭ ಅಲ್ಲಿ  ” ತಾಯಿಗೆ ಬಾಯಲ್ಲಿ” ಎಂಬ ಸಾಹಿತ್ಯ ಕಲಾವಿದೆ ” ತಾಯಿಗೆ ಬಾ ಇಲ್ಲ” ಎಂಬಂತೆ ನರ್ತಿಸಿ ತೋರಿಸಬೇಕು. ಅದೇ ಇನ್ನೊಂದು ಸಂದರ್ಭದಲ್ಲಿ “ನಟನ ಮಾಡಿರ” ಎಂಬ ತಮಿಳು ಸಾಹಿತ್ಯ ಕೃತಿಯಲ್ಲಿ ಪೊನ್ನಾಡರುಂ ಎಂಬ ಸಾಹಿತ್ಯವನ್ನು ಪೆಣ್ಣಾಡರುಂ ಎಂಬಂತೆ ಶಿಖಿರ ಹಾಗೂ ಮೃಗಶೀರ್ಷದಲ್ಲಿ ಕಲಾವಿದೆ ಅಭಿನಯಿಸಿದರು. ಪೊನ್ನಾಡರುಂ ಅಂದರೆ ದೇವರು ಎಂದರ್ಥ, ಪೆಣ್ಣಾಡರುಂ ಎಂದರೆ ಸ್ತ್ರೀ ಹಾಗೂ ಪುರುಷ, ಅಲ್ಲದೆ ಪೆಣ್ಣಾಡರುಂ ಸಾಹಿತ್ಯವನ್ನು ತಪ್ಪಾತಿ ಪೊನ್ನಾಡರುಂ ಎಂದು ತಪ್ಪಾಗಿಯೂ ಉಚ್ಚರಿಸಿದರು. ಹಾಗಾಗಿ ಸಾಹಿತ್ಯದ ಅರ್ಥ ಹಾಗೂ ಭಾವಜ್ಞಾನ ಬಹಳ ಅಗತ್ಯ, ಇಲ್ಲದೆ ಹೋದರೆ ರಸಾಭಾವಾಗುವ ಸಾಧ್ಯತೆಯೇ ಹೆಚ್ಚು. ಹೀಗೆ ಮೇಲಿನ ಎಲ್ಲಾ ಜ್ಞಾನಗಳನ್ನೂ ಅರೆಂಗ್ರೇಟಂಗೆ ಸಿದ್ಧಪಡಿಸುವುದು ಇಬ್ಬ ಗುರುವಿನ ಮುಖ್ಯವಾದ ಕರ್ತವ್ಯ.

ಪ್ರಸ್ತುತ ಅರೆಂಗೇಟ್ರಂನ್ನು ಪರಿಶೀಲಿಸಿದರೆ ಅದು ಆಹ್ವಾನ ಪತ್ರಿಕೆಯಿಂದ  ಹಿಡಿದು ಬರುವ ಅತಿಥಿಗಳವರೆಗೆ ಮಾರ್ಪಾಡುಗೊಂಡಿರುವುದು ಗಮನಾರ್ಹ ಹಾಗೂ ಕಲಾಜಗತ್ತಿನ ಒಂದು ದುರಂತ, ಅರೆಂಗೇಟ್ರಂಗೆ ಬರುವ ಅತಿಥಿಗಳು ರಾಜಕಾರಣಿಗಳಾಗಿರದೆ ಈ ಕಲೆಯಲ್ಲಿ ನೈಜವಾದ ಅಭಿಮಾನವಿರುವ ಅಥವಾ ಕಲಾವಿದ, ಕಲಾವಿಮರ್ಶಕರಾಗಿದ್ದರೆ ಉತ್ತಮ. ಈಗ ಅರೆಂಗೇಟ್ರಂನ ರಂಗ ಅಥವಾ ವೇದಿಕೆಯನ್ನು ಈಗಿನ ಆಧುನಿಕ ರೀತಿಯಲ್ಲಿ ಅಲಂಕಾರ ಮಾಡಿರುತ್ತಾರೆ. ಅಲ್ಲದೆ ಬಹಳ ಅದ್ಧೂರಿಯಾಗಿ ಅರೆಂಗೇಟ್ರಂನ್ನು ಮಾಡುವವನ ಕುಟುಂಬದ ಸಾಮರ್ಥ್ಯ ಪ್ರದರ್ಶನದ ನೆಲೆಯಲ್ಲಿ ನಿಂತಿರುತ್ತದೆ. ನಿಜವಾಗಿ ಹೇಳುವುದಾದರೆ ” ಕಲೆಯ ಸೌಂದರ್ಯವಿರುವುದು ಆತನ ನೃತ್ಯ ಕೌಶಲ್ಯದಲ್ಲಿ ಹೊರತು ಆತನ ಸಂಪತ್ತಿನಲ್ಲಿ ಅಲ್ಲ”. ಅರೆಂಗೇಟ್ರಂಗೆ ಆಗುವ ಖರ್ಚು ಮಿತಿಯಲ್ಲಿದ್ದರೆ ಒಳಿತು. ಅಂದರೆ ರಂಗದ ಒಳಗೆ ಹಾಗೂ ಹೊರಗಡೆಯಾಗುವ ಖರ್ಚನ್ನು ಕಡಿಮೆ ಮಾಡಿದರೆ ಉತ್ತಮ. ಅನಾವಶ್ಯಕ ಖರ್ಚುವೆಚ್ಚಗಳನ್ನು ಕಡಿಮೆ ಮಾಡಬೇಕು. ಯಾಕೆಂದರೆ ಅರೆಂಗೇಟ್ರಂ ಅಂದರೆ ಒಬ್ಬ ಕಲಾವಿದೆಯೂ ತನ್ನ ಬದುಕಿನಲ್ಲಿ ತಾನು ಕಲಿತ ವಿದ್ಯೆಯನ್ನು ಕಾರ್ಯರೂಪಲ್ಲೆ ತರಲು ತೆಗೆದುಕೊಳ್ಳುವ ದೀಕ್ಷೆ ಆಗಿರುತ್ತದೆ. ಹಾಗಾಗಿ ಅರೆಂಗೇಟ್ರಂ ಆದ ಮಾತ್ರಕ್ಕೆ ಆಕೆಯ ಕೌಶಲ್ಯ ಪ್ರದರ್ಶವಾಗುವುದಿಲ್ಲ. ಆಕೆ ಮುಂದೆ ತಾನು ಆ ವಿದ್ಯೆ ಮುಂದುವರಿಸುವ ನೆಲೆಯಲ್ಲಿ ನಿಂತಿರುತ್ತದೆ. ಭರತನಾಟ್ಯಂ ಎನ್ನುವ ಕಲೆ ಅದು ಕೇವಲ ಸಂಪತ್ತಿನವರಿಗೆ ಮಾತ್ರವಲ್ಲ ಅದು ಎಲ್ಲಾ ವರ್ಗದ ಪ್ರತಿಭಾಶೀಲ ವ್ಯಕ್ತಿಗೆ ಸಂದುದು ಎನ್ನುವುದು ನನ್ನ ಅಭಿಪ್ರಾಯ.