ಅರೆಮುಗಿದ ಕವನ ಇದು,
ಯಾರಿಗೂ ಓದದಿರು
ಕೇಳಿದರೆ ನಕ್ಕುಬಿಟ್ಟಾರು ಯಾರಾದರೂ,
ಹಾಗೆಯೇ ಮಡಿಸಿಟ್ಟುಬಿಡು ಜೋಬಿನಲಿ ಜೋಪಾನ,
ಎಷ್ಟಾದರೂ ಇದು ಅರೆಮುಗಿದ ಕವನ !

ಅರೆಮುಗಿದ ಕವನ ಇದು-
ಬ್ಯಾಂಕಿನೆಡೆ ಬಂದು ಕಂಡೆನು ನಾನು
ಕೈಯೊಳಿದೆ ರುಜುವಿರದ ಚೆಕ್ಕು,
ಹಣವಿದೆ ಅಲ್ಲಿ ; ಆದರಿದಕಿನ್ನಾರು ಹಣ ಕೊಟ್ಟಾರು
ಯಾರಿಗಿದೆ ಕೊಡುವ ಹಕ್ಕು ?
ಕೊಟ್ಟವನು ಇದಕೆ ರುಜು ಹಾಕಿದರೆ ತಾನೆ
ಕೈಗೆ ರೂಪಾಯಿ ಝಣಕು ಝಣಕು ?
ಅವನು ಎಲ್ಲಿದ್ದಾನೊ ಹುಡುಕಬೇಕು.

ಅರೆಮುಗಿದ ಕವನ ಇದು-
ಕಲ್ಲ ಸೆರೆಯಲಿ ಹೂತು ಹಾಗೆಯೇ ನಿಂತಿಹುದು ಈ ಪ್ರತಿಮೆ
ಅಹ, ಎಷ್ಟು ಚಂದ !
ಚಂದವಾದರೆ ಏನು, ಇನ್ನು ಹರಿದಿಲ್ಲವೋ
ಕಗ್ಗಲ್ಲ ಬಂಧ.
ಚಾಣ ಬಿದ್ದಿದೆ ಇಲ್ಲೆ, ಬರುವೆನೆಂದಾಡಿದವ
ಹೋಗಿ ಬಲು ಹೊತ್ತಾಯ್ತು ;
ಎಲ್ಲಿ ಹೋದನೋ ಏನೊ ಆ ಕಲೆಗಾರ
ಈಗಲೂ ಬಾರ !

ಅರೆಮುಗಿದ ಕವನ ಇದು-
ಇದ್ದಕಿದ್ದಂತೆಯೇ ತಂತಿ ಕತ್ತರಿಸಿ
ಆರಿಹೋಗಿದೆ ಬಲ್ಬು
ಹಾಲು ನಗೆ ಬೆಳಕೆಲ್ಲ ಸತ್ತು ಕರಿಮಸಿಯಾಗಿ
ಹರಡಿದೆ ಇಲ್ಲಿ
ಚೆಲ್ಲಾಪಿಲ್ಲಿ.
ಎಷ್ಟು ಕರೆದರಚಿದರು ಬರಲಿಲ್ಲ ಅವನು,
ಆಗಿಲ್ಲ ಇದರ ರೀಪೇರಿ.
ಯುಗ ಯುಗಾಂತರವಾಯ್ತು ನಾ ಕಾಯತೊಡಗಿ
ಆ ಅವನ ದಾರಿ !

ದೂರದಲಿ ಕಿರುಚುತಿವೆ ರೇಡಿಯೋ
ಜಗದೆಲ್ಲ ಗದ್ದಲದ ಬಾಗಿಲಿನ ಬೀಗವನು ತೆಗೆದು
ಕಿವಿಗಳನು ಕೊರೆದು !
ಮನೆಸುತ್ತ ಕೊಡೆನಿಂತ ಮರದ ಕೊಂಬೆಯ ತುಂಬ
ಚಿಲಿಪಿಲಿಯ ಸೊಲ್ಲು,
ಮರಮರದಲ್ಲು ನಡೆದಿದೆ ಪ್ರೈಮರೀ ಸ್ಕೂಲು !

ಸುತ್ತೆಲ್ಲ ತುಂಬಿ ತುಳುಕಿದರೂ, ನೋಡಿ
ತಲೆಗೆ ಜಿನುಗದು ನಾಲ್ಕು ಒಳ್ಳೆ ಸಾಲು.
ಇದಲ್ಲ ನಾಳೆ ಇಳಿದೀತು ಮೇಲಿನ ಮೋಡಿ,
ಆದೀತು ಇದರ ರಿಪೇರಿ,
ಹೀಗೆಯೇ ಕಾಯಬೇಕಲ್ಲ ಇದು ಅದರ ದಾರಿ