ಕರ್ನಾಟಕದ ಸಾಂಸ್ಕೃತಿಕ ಕ್ಷೇತ್ರದಲ್ಲಿ ಗದುಗಿಗೆ ತುಂಬ ಗೌರವದ ಸ್ಥಾನವಿದೆ. ಶ್ರೀ ವೀರನಾರಾಯಣನು ನೆಲೆನಿಂತ ಈ ನೆಲದಲ್ಲಿ ಸಾಹಿತ್ಯ, ಸಂಗೀತ, ಚಿತ್ರ, ಶಿಲ್ಪ, ರಂಗಭೂಮಿ ಮುಂತಾದ ಕಲೆಗಳು ಸಮೃದ್ಧವಾಗಿ ಬೆಳೆದದ್ದು ಇತಿಹಾಸಪ್ರಸಿದ್ಧ ವಿಷಯ. ಸಾಹಿತಿಗಳ, ಕಲಾವಿದರ, ಗವಾಯಿಗಳ ಸಾಧನೆಗೆ ಗರಡಿ-ಮನೆಯಾದ ಗದುಗಿಗೆ ನಾಡಿನ ಚರಿತ್ರೆಯಲ್ಲಿ “ಸ್ಥಳ ಮಹಿಮೆ”ಯ ಹಿರಿಮೆ ಪ್ರಾಪ್ತವಾಗಿದೆ.

ವೀರೇಶ್ವರ ಪುಣ್ಯಾಶ್ರಮ ಕರ್ನಾಟಕದ ಸಂಗೀತ ಸಂತರಿಗೊಂದು ತವರುಮನೆ. ಸಂಗೀಥ-ಸಾಹಿತ್ಯಪ್ರಿಯರಿಗೆ ಒಂದು ಯಾತ್ರಾಸ್ಥಳ. ಪುಣ್ಯಾಶ್ರಮ ಇಂದಿನವರೆಗೆ ನೀಡಿದ ಜ್ಞಾನ ದಾಸೋಹದಿಂದ ವಿವಿಧ ರಂಗಗಳಲ್ಲಿ ಅವರ ಶಿಷ್ಯ ಪ್ರಶಿಷ್ಯರನ್ನು ಕಾಣಬಹುದಾಗಿದೆ. ಹೀಗೆ ಸಂಗೀತದಲ್ಲಿ ಸಾಧನೆ ಮಾಡಿ ಸಿದ್ಧಿ ಪಡೆದು ಪ್ರಸಿದ್ಧರಾದವರಲ್ಲಿ ಪಂ. ಅರ್ಜುನಸಾ ನಾಕೋಡರವರೂ ಒಬ್ಬರು.

ಅರ್ಜುನ ಸಾ ನಾಕೋಡರು ಮೂಲತಃ ಗದಗ-ಬೆಟಗೇರಿಯ ನೇಕಾರ ಮನೆತನದವರು. ಗದಗ-ಬೆಟಗೇರಿಯಲ್ಲಿ ೧೯೨೮ರ ಜನವರಿ ೨ ರಂದು ಅರ್ಜುನಸಾ ಅವರ ಜನನವಾಯಿತು. ಸಾತ್ವಿಕ ದಂಪತಿಗಳಾದ ಶ್ರೀವೆಂಕೂಸಾ ಹಾಗೂ ಶ್ರೀಮತಿ ನಾಗೂಬಾಯಿಯವರೇ ಇವರ ತಂದೆತಾಯಿಗಳು. ವೆಂಇಕೂಸಾ ನಾಕೋಡರು ನೇಕಾರಿಕೆಯ ಉದ್ಯೋಗದ ಉಸ್ತುವಾರಿ ಮಾಡುತ್ತಾ ಗದುಗಿನ ಶೀವಣ್ಣ ಮಾನ್ವಿಯವರ ಅಂಗಡಿಯಲ್ಲಿ ಗುಮಾಸ್ತರಾಗಿ ಸೇವೆ ಸಲ್ಲಿಸುತ್ತಿದ್ದರು. ವೆಂಕೂಸಾ ಹಾಗೂ ನಾಗಮ್ಮ ದಂಪತಿಗಳ ಐವರು ಗಂಡು ಮಕ್ಕಳಲ್ಲಿ ಇಬ್ಬರು ಚಿಕ್ಕಂದಿನಲ್ಲೇ ಮೃತರಾದರು. ವಸಂತಸಾ, ಅರ್ಜುನಸಾ, ಸುರೇಂದ್ರಸಾ ಉಳಿದ ಗಂಡುಮಕ್ಕಳು. ದೊಡ್ಡ ಕುಟುಂಬ. ಆರ್ಥಿಕ ಸ್ಥಿತಿ ಚೆನ್ನಾಗಿರಲಿಲ್ಲ. ಬಡತನದಲ್ಲಿಯೇ ಕಾಲ ಸಾಗುತ್ತಿತ್ತು. ತಂದೆ ವೆಂಕೂಸಾ ಅವರಿಗೆ ಸಂಗೀತದಲ್ಲಿ ಆಸಕ್ತಿ ಇದ್ದರೂ ಮಕ್ಕಳೂ ಶಾಲೆ ಕಲಿತು ಒಳ್ಳೆಯ ಉದ್ಯೋಗ, ನೌಕರಿ ಮಾಡಬೇಕು. ಅಂದರೆ ಮನೆಯ ಬಡತನ ತಾಪತ್ರಯ ಕಳೆದೀತು ಎಂಬ ಅನಿಸಿಕೆಯಿಂಧ ಮಕ್ಕಳ ಸಂಗೀತಾಶಕ್ತಿಗೆ ಪ್ರೋತ್ಸಾಹಿಸುತ್ತಿರಲಿಲ್ಲ. ತಾನೊಂದು ಬಗೆದರೆ ದೈವ ಇನ್ನೊಂದು ಬಗೆಯುವುದೆಂಬುದು ಸತ್ಯ. ಮಕ್ಕಳೆಲ್ಲ ಸಂಗೀತದಲ್ಲಿಯೇ ಉಜ್ವಲ ಭವಿಷ್ಯವನ್ನು  ಕಂಡುಕೊಂಡರು.

ಮುಳಗುಂದದ ಚಿಂತಾಮಣಿಸಾ ಎನ್ನುವವರು ಮನೆಯ ನೇಯ್ಗೆ ಉದ್ಯೋಗಕ್ಕೆ ಬರುತ್ತಿದ್ದರು. ಅವರು ಜಾನಪದ ಗೀತೆಗಳನ್ನು ಹಾಡುತ್ತಿದ್ದರು. ಈ ಜಾನಪದ ಗೀತೆಗಳನ್ನು ಕೇಳಿ ಅರ್ಜುನಸಾ ಅವರು ಕಲಿತು ಹಾಡುತ್ತಿದ್ದರಲ್ಲದೆ ಭಕ್ತಿಗೀತೆಗಳನ್ನೂ ಹಾಡುತ್ತಿದ್ದರು. ಚಿಕ್ಕಂದಿನನಿಂದಲೇ ಸಂಗೀತದೆಡೆಗೆ ಒಲವಿದ್ದ ಅರ್ಜುನಸಾ ಅವರು ಚಿತ್ರ ಗೀತಗಳನ್ನೂ ಕೇಳಿ, ಕಲಿತು ಹಾಡಿ ಪ್ರಾಥಮಿಕ ಶಿಕ್ಷಣ ಪಡೆಯುತ್ತಿರುವಾಗಲೇ ಹೆಸರು ಗಳಿಸಿದರು. ಶಾಲಾ ವಾರ್ಷಿಕೋತ್ಸವದ ಸಂಧರ್ಭದಲ್ಲಿ ಪಂಚಾಕ್ಷರಿ ಗವಾಇಗಳು ಅತಿಥಿಗಳಾಗಿ ಬಂದಿದ್ದರು. ಅಲ್ಲಿ ಬಾಲಕ ಅರ್ಜುನಸಾನ ಹಾಡು ಕೇಳಿ ಸಂತೋಷಪಟ್ಟರು. ಹಾಗೂ ಸಂಗೀತ ಕಲಿಯಲು ತಮ್ಮ ಆಶ್ರಮಕ್ಕೆ ಬರುವಂತೆ ಹೇಳಿದರು. ಆಗ ಅರ್ಜುನಸಾ ಅವರಿಗೆ ಒಂಬತ್ತು ವರ್ಷ. ಶಾಲೆಗೆ ಹೋಗುತ್ತಿದ್ದರೂ ಸಂಗೀತದಲ್ಲಿಯೇ ಗಮನ ಹೆಚ್ಚು. ತಂದೆ ವೆಂಕೂಸಾ ಅವರು ಪಂಚಾಕ್ಷರಿ ಗವಾಯಿಗಳ ಆದೇಶದಂತೆ ಮಗನನ್ನು ವೀರೇಶ್ವರ ಪುಣ್ಯಾಶ್ರಮಕ್ಕೆ ಸಂಗೀತ ಕಲಿಯಲು ಕಳಿಸಿದರು. ಸಂಗೀತ ಕಲಿತು ಒಳ್ಳೆಯ ಗಾಯಕನಾಗಬೇಕೆಂಬ ಅರ್ಜುನ ಸಾ ಅವರಿಗೆ ಇದೊಂದು ವರದಾನವಾಯಿತು. ಹೀಗೆ ಪ್ರಾರಂಭವಾಯಿತು ಅವರ ಸಂಗೀತ ಶಿಕ್ಷಣ.

ಉಭಯ ಗಾಯನಾಚಾರ್ಯ ಪಂ. ಪಂಚಾಕ್ಷರಿ ಗವಾಯಿಗಳ ಉತ್ತರಾಧಿಕಾರಿಗಳಾದ ಪಂ. ಪುಟ್ಟರಾಜ ಗವಾಯಿಗಳ ಶಿಷ್ಯತ್ವ ಪಡೆದು ಗ್ವಾಲ್ಹೇರ ಘರಾಣೆಯ ಗಮಕಿಯೊಂದಿಗೆ ಅನೇಕ ರಾಗಗಳನ್ನು ಆತ್ಮಸಾತ್‌ ಮಾಡಿಕೊಂಡರು. ದಿನವಿಡೀ ಸಂಗೀತ ಕಲಿಯುತ್ತ ಗುರುಗಳ ಸೇವೆಯಲ್ಲಿಯೇ ಕಾಲ ಸಾಗುತ್ತಿತ್ತು. ಅದೊಂದು ಗಾಯನ ತಪಸ್ಸು. ಶ್ರದ್ಧೆಯಿಂದ ಮಾಡಿದ ಈ ತಪಸ್ಸಿಗೆ ಸಿದ್ಧಿ ದೊರೆಯಿತು. ಇವರ ಸಮಕಾಲೀನರಾಗಿ ಅನೇಕ ಪ್ರತಿಭಾವಂತ ವಿದ್ಯಾರ್ಥಿಗಳು ಅಲ್ಲಿ ಕಲಿಯುತ್ತಿದ್ದುದರಿಂದ ಸ್ಪರ್ಧಾತ್ಮಕ ಮನೋಭಾವದಿಂದ ವಿದ್ಯಾರ್ಥಿಗಳು ಅಲ್ಲಿ ಸಂಗೀತ ಸಾಧನೆ ಮಾಡುತ್ತಿದ್ದರು. ಅರ್ಜುನಸಾ ಅವರೊಡನೆ ಶಿವಮೂರ್ತಿಸ್ವಾಮಿ ದೇವಗಿರಿ, ಶೇಷಾದ್ರಿ ಗವಾಯಿಗಳು, ದೊಡ್ಡಬಸವಾರ್ಯ ಜಾಲಿಬೆಂಚಿ; ;ಪಂಚಯ್ಯಸ್ವಾಮಿ ಮತ್ತಿಗಟ್ಟಿ, ಮರಿಯಪ್ಪರೋಣ, ಮುರಡಯ್ಯ, ಸಿದ್ಧರಾಮ ಜಂಬಲದಿನ್ನಿ, ಬಸವರಾಜ ತಾಳಕೇರಿ ಮೊದಲಾದ ಪ್ರತಿಭಾವಂತ ವಿದ್ಯಾರ್ಥಿಗಳಿದ್ದು ಇವರೆಲ್ಲರ ಸಂಗೀತ ಸಾಧನೆ ಸತತವಾಗಿ ಸಾಗುತ್ತಿತ್ತು. ವೀರೇಶ್ವರ ಪುಣ್ಯಾಶ್ರಮ ನಾದ ತರಂಗದಿಂದ ಮಾರ್ದನಿಗೊಳ್ಳುತ್ತಿತ್ತು. ಇವರೆಲ್ಲರೂ ಆಗ ೧೮ರಿಂದ ೨೦ ವರ್ಷದವರಿದ್ದರು.

ಈ ಸಂಗೀತ ನಾಡಿನಲ್ಲೆ ಜನಸಾಮಾನ್ಯರ ಮನ ಮುಟ್ಟಲು ನಾಟಕ ಕ್ಷೇತ್ರದಿಂದಲೇ ಸಾಧ್ಯ ಎಂಬುದನ್ನು ಅರಿತ ಪೂಜ್ಯ ಪಂಚಾಕ್ಷರಿ ಗವಾಯಿಗಳು ತಮ್ಮದೇ ಆದ ನಾಟಕ ಕಂಪನಿಯನ್ನು ೧೯೩೯ರಲ್ಲಿ ಪ್ರಾರಂಭಿಸಿದರು. ಈ ಶ್ರೀ ಕುಮಾರೇಶ್ವರ ನಾಟ್ಯ ಸಂಘವು ಅಭಿನಯ ಹಾಗೂ ಹಾಡುಗಾರಿಕೆಯೊಂದಿಗೆ ಕಲಾ ಜಗತ್ತನ್ನು ಪ್ರವೇಶಿಸಿತು. ಆಗ ಹಾಡುಗಾರಿಕೆಗೆ ರಂಗ ಮಂಚವೇ ಮಾಧ್ಯಮವಾಗಿತ್ತು. ಹೀಗಾಗಿ ಆಶ್ರಮದಲ್ಲಿ ಸಂಗೀತ ಕಲಿಯುತ್ತಿದ್ದ ವಿದ್ಯಾರ್ಥಿಗಳು ನಾಟಕದ ಪಾತ್ರಧಾರಿಗಳಾದರು.

ಅಂದಿನ ನಾಟಕ ಮಂಡಳಿಗಳಲ್ಲಿ ಪುರುಷರೇ ಸ್ತ್ರೀ ಪಾತ್ರಗಳನ್ನು ಮಾಡುತ್ತಿದ್ದರು.

ಈ ಸಮಸ್ಯೆಯನ್ನು ಸವಾಲಾಗಿ ಸ್ವೀಕರಿಸಿದ ಅರ್ಜುನಸಾ ಅವರು ಸೀರೆಯುಟ್ಟು ಸ್ತ್ರೀ ಪಾತ್ರಗಳನ್ನು ನಿರ್ವಹಿಸಿದರು. ಅರ್ಜುನಸಾ ತಮ್ಮ ತೆಳುವಾದ ದೇಹ, ಸುಂದರ ಮುಖ ಹಾಗೂ ಬಳುಕುವ ಶರೀರ ಹಾಗೂ ಸುಶ್ರಾವ್ಯ ಹಾಡುಗಾರಿಕೆಯಿಂದ ಪ್ರಮುಖ ಸ್ತ್ರೀ ಪಾತ್ರಗಳಲ್ಲಿ ಮಿಂಚಿದರು. ಕೇವಲ ಸಂಗೀತವಲ್ಲದೆ ಅವರ ಪೂರ್ಣ ನಟನೆ ಜನಮನವನ್ನು ಸೂರೆಗೊಂಡಿತು. ಹೀಗೆ ಈ ನಾಟಕ ಮಂಡಳಿ ಯಶಸ್ವಿಯಾಗಿ ಅಂಧರಿಂದ ಕೂಡಿದ ಸಂಗೀತ ಶಾಲೆ, ಈ ಬೆಳಕಿನ ಹುಡುಗರ ಥಳುಕಿನಿಂಧ ನಾಟಗಳು ಪ್ರಸಿದ್ಧಿಗೊಂಡು ಆಶ್ರಮ ತನ್ನ ಕಾಲಮೇಲೆ ತಾನು ನಿಲ್ಲುವಂತಾಯಿತು.

ಅಲ್ಲಿ ಆರು ವರ್ಷ ಸತತ ಸಂಗೀತ ಅಭ್ಯಾಸ ಹಾಗೂ ಐದು ವರ್ಷ ನಾಟಕ ತರಬೇತಿಯಿಂದ ಖ್ಯಾತರಾದ ಅರ್ಜುನಸಾ ಮೇಲೇರುತ್ತಿದ್ದಾಗ ಹಿರಿಯ ಸಹೋದರ ವಸಂತಸಾ ನಾಕೋಡ ಅವರು ಮಿಲಿಟರಿ ಸೇರಿ ವಾಯುಪಡೆಯಲ್ಲಿದ್ದರು. ಅವರಿಗೂ ನಾಟ್ಯಕಲೆ ಹಾಗೂ ಸಂಗೀತದಲ್ಲಿ ಆಸಕ್ತಿಯಿತ್ತು. ರಜೆಯಲ್ಲಿ ಬಂದಾಗ ತಮ್ಮಂದಿರ ಖ್ಯಾತಿಯನ್ನು ನೋಡಿ ಸಂತಸಗೊಂಡರು. ಸುರೇಂದ್ರಸಾ ಅವರೂ ನಾಟಕ ಸಂಗೀತಗಳಲ್ಲಿ ಪರಿಣತರಾಗಿದ್ದರು. ಆಗ ತಾವೇ ಮೂರು ಜನ ಸಹೋದರರು ಸೇರಿ ನಾಟಕ ಕಂಪನಿಯನ್ನೇಕೆ ಮಾಡಬಾರದೆಂದು ಯೋಚಿಸಿ, ಯೋಜನೆಯನ್ನು ಕಾರ್ಯಗತಗೊಳಿಸಲು ತಂದೆ ವೆಂಕೂಸಾ ಅವರಲ್ಲಿ ಚರ್ಚಿಸಿದರು.

೧೯೪೬ರಲ್ಲಿ ಕಲಾವಿದ ಮಕ್ಕಳ ತೀವ್ರತರದ ಮಹತ್ವಾಕಾಂಕ್ಷೆಯನ್ನೂ ಉತ್ಕಟೇಚ್ಛೆಯನ್ನೂ ಗಮನಿಸಿ ತಂದೆ ವೆಂಇಕೂಸಾ ಅವರು ಬೆಟಗೇರಿಯಲ್ಲಿದ್ದ ಒಂದು ಮನೆಯನ್ನು ಮಾರಿ ಶ್ರೀ ಜಗದಂಬಾ ಸಂಗೀತ ನಾಟಕ ಮಂಡಳಿ ಯೆಂಬ ಸಂಸ್ಥೆಯನ್ನು ಆರಂಭಿಸಿದರು. ಮುಂದೆ ಅದು ಬದಲಾಗಿ ವಸಂತ-ನಾಟ್ಯ ಕಲಾ ಸಂಘ ಎಂದಾಯಿತು. ವೆಂಕೂಸಾ ಅವರು ಸಹಾ ತಕ್ಕಮಟ್ಟಿಗೆ ಪಿಯಾನೊ ನುಡಿಸುತ್ತಿದ್ದರು. ಹೀಗೆ ನಾಟಕ ಕಂಪನಿ ನಡೆಯುತ್ತಿರುವಾಗ ಅರ್ಜುನ ಸಾ ಅವರು ಎತ್ತರಕ್ಕೆ ಬೆಳೆದರು. ಸ್ತ್ರೀಪಾತ್ರದ ಘನತೆ ಗೌರವ ಬೇರೊಬ್ಬರಿಗೆ ಸಾಧಿಸದೆ ಇವರಿಗೇ ಮೀಸಲಾಯಿತು. ದ್ರೌಪದಿ, ಸಾವಿತ್ರಿ, ಚಿತ್ರಾಂಗದಾ, ಮಲ್ಲಮ್ಮ ಮೊದಲಾದ ಪಾತ್ರಗಳು ಶಾಸ್ತ್ರೀಯ ಸಂಗೀತ ಮಾಧುರ್ಯದಿಂಧ ಹೆಣ್ತನದ ನಯ ನಾಜೂಕಿನಿಂದ, ಒನಪು ವಯ್ಯಾರಗಳು ಜನಮನವನ್ನು  ರಂಜಿಸಿದವು. ಮುಂದೆ ಪುರುಷ ಪ್ರಧಾನ ನಾಟಕಗಳಲ್ಲಿ ಸಂಗೀತ ಪ್ರಧಾನವಾದಾಗ, ಮಲ್ಲಮ್ಮನ ನಾಟಕದಲ್ಲಿ ಮಲ್ಲಿಕಾರ್ಜುನನ ಪಾತ್ರ, ಟಿಪ್ಪು ಸುಲ್ತಾನದಲ್ಲಿ ಟಿಪ್ಪುವಿನ ಪಾತ್ರಗಳನ್ನೂ ಅಭಿನಯಿಸಿ ಎಲ್ಲರ ಮೆಚ್ಚುಗೆಗೆ ಪಾತ್ರರಾದರು.

ಹೀಗೆ ೧೯೬೫ರವರೆಗೆ ನಾಟಕಕ ಕಂಪನಿ ನಡೆಯಿತಾದರೂ ಹೆಚ್ಚಿನ ಸಂಪಾದನೆ ಇಲ್ಲದೆ ಹೋಯಿತು. ಆರ್ಥಿಕ ತೊಂದರೆ, ಕಂಪನಿಯ ತಾಪತ್ರಯ ಇದ್ದಾಗಲೂ ಸಹ ಅರ್ಜುನಸಾ ಅವರ ಸಂಗೀತ ಸಾಧನೆಗೆ ಯಾವ ಭಂಗವೂ ಬಾರದಂತೆ, ಯಾವುದೇ ವ್ಯವಹಾರಕ್ಕೆ ಅವರನ್ನು ಬಳಸಿಕೊಳ್ಳದೇ ಅವರ ಅಭ್ಯಾಸವು ಮುಂದುವರೆಯುವಂತೆ ಅಣ್ಣ ವಸಂತ ಸಾ ನೋಡಿಕೊಂಡರು. ಅರ್ಜುನಾ ಅವರು ತಮ್ಮ ಸಂಗೀತ ಸಾಧನೆ ಸಿದ್ದಿಗಳು ವ್ಯರ್ಥವಾಗದಿರಲೆಂದು ಈ ಸೇವೆಯಿಂದಲೇ ಬದುಕನ್ನು ಮುಂದುವರಿಸಲು ಸಂಗೀತ ಶಾಲೆಯನ್ನು ಸ್ಥಾಪಿಸಬೇಕೆಂದು ಆಲೋಚಿಸಿ ಅಣ್ಣನಲ್ಲಿ ಪ್ರಾಸ್ತಾಪಿಸಿದರು.

ಐವತ್ತು ವರ್ಷಗಳ ತಮ್ಮನ ಈ ಸಾಧನೆ ಕಲಾಕ್ಷೇತ್ರಕ್ಕೆ ಮುಡಿಪಾಗಿರಲೆಂದು ಅಣ್ಣ ವಸಂತಸಾ ನಾಟಕ ಕಂಪನಿಯಿಂದ ಸೋದರನನ್ನು ಬೀಳ್ಕೊಟ್ಟರು.

ಅರ್ಜುನಾ ಅವರು ಧಾರವಾಡ ಆಕಾಶವಾಣಿಯ ‘ಎ’ ಗ್ರೇಡ್‌ ಕಲಾವಿದರಾಗಿದ್ದರು. ಧಾರವಾಡ ಆಕಾಶವಾಣಿಯ ನಿಲಯದ ಕಲಾವಿದರಾಗಿ ಪೂರ್ಣಾವಧಿ ಕೆಲಸಕ್ಕೆ ನೇಮಕಗೊಂಡಾಗ ಅರ್ಜುನಾ ಅವರ ಜೀವನದಲ್ಲಿ ಮತ್ತೆ ನೆಮ್ಮದಿಯುಂಟಾಗಿ ಸಂಗೀತ ಸಾಧನೆಗೆ ಸ್ಪೂರ್ತಿ ನೀಡಿತು. ಕಲಾವಿದರಾಗಿ ಅನೇಕ ವರ್ಷ ನಾಡಿನ ಅನೇಕ ನಿಲಯ ಕೇಂದ್ರಗಳ ಮೂಲಕ ತಮ್ಮ ಅಮೋಘ ಗಾಯನದಿಂದ ಶ್ರೋತೃಗಳನ್ನು ರಂಜಿಸಿದ್ದಾರೆ.

ಅಪಾರ ಸಂಗೀತಾಭಿಮಾನಿಗಳನ್ನು ಹೊಂದಿದ್ದ ನಾಕೋಡರು ಕರ್ನಾಟಕದ ಪ್ರಮುಖ ಪಟ್ಟಣಗಳಲ್ಲದೆ ದೆಹಲಿ, ಕಲ್ಕತ್ತಾ, ಹೈದರಾಬಾದ, ಮುಂಬೈ, ನಾಗಪೂರ, ಲಖನೌ, ಇಂದೋರ್, ಮದ್ರಾಸ್‌, ಭೂಪಾಲ್‌ ಮುಂತಾದೆಡೆ ಸಂಗೀತ ಕಚೇರಿ ನೀಡಿ ಕನ್ನಡದ ಕೀರ್ತಿಯನ್ನು ಹೆಚ್ಚಿಸಿದ್ದಾರೆ. ಆಕಾಶವಾಣಿ ಸಂಗೀತ ಸಮ್ಮೇಳನಗಳಲ್ಲಿ ಪಾಲ್ಗೊಂಡಿದ್ದಾರೆ.

ಸಂಗೀತ ಕಲೆ ಬೆಳೆಯಲೆಂಬ ಉದ್ದೇಶದಿಂದ ಅವರು ೧೯೬೭ರಲ್ಲಿ ಶ್ರೀ ರೇಣುಕಾ ಸಂಗೀತ ವಿದ್ಯಾಲಯ ಸ್ಥಾಪಿಸಿದಾಗ ಅದರಲ್ಲಿ ಕೇವಲ ೧೦ ಬಾಲಕ ಬಾಲಕಿಯರಿದ್ದರು. ಅದು ಮುಂದೆ ಬೆಳದು ನೂರಾರು ವಿದ್ಯಾರ್ಥಿಗಳಾದರು. ಅವರಲ್ಲಿ ಅನೇಕರು ಹೆಸರುವಾಸಿಗಳಾಗಿದ್ದಾರೆ.

ಸ್ತ್ರೀ ಸಂಕುಲದ ಮಾತ್ಸರ್ಯ ಅಸೂಯೆಗಳನ್ನು ದಾಟಿ ಬೆಳೆದಿರುವ ಶ್ರೀಮತಿ ಅನಸೂಯಾಬಾಯಿಯವರನ್ನು ಮದುವೆಯಾದ ಅರ್ಜುನಾ ನಾಕೋಡರು ಸಂಸಾರದ ಸಾವಿರ ಸಂಕಟಗಳಿಂದ ಸುಲಭವಾಗಿ ಪಾರಾದರು. ಬದುಕಿನ ಯಾವ ನೋವನ್ನೂ ಯಜಮಾನರ ಅರಿವಿಗೆ ಬಾರದಂತೆ ಸರಿತೂಗಿಸಿದ ಆ ತಾಯಿಯು ಅರ್ಜುನಾ ನಾಕೋಡರ ಬೆನ್ನೆಹಿಂದಿರುವ ದೊಡ್ಡ ಶಕ್ತಿಯಾಗಿದ್ದಾರೆ. ಅರ್ಜುನಸಾ ಅವರಿಗೆ ನಾಲ್ಕು ಪುತ್ರರು ಹಾಗೂ ಇಬ್ಬರು ಪುತ್ರಿಯರು. ತಮ್ಮ ಮಕ್ಕಳಿಗೂ ಸತ್ಸಂಸ್ಕಾರ ನೀಡಿ ಕಲಾಸಂಪನ್ನರಾಗಿ ಬೆಳೆಯಿಸಿದರು. ಹಿರಿಯ ಮಗ ರಘುನಾಥ ನಾಕೋಡರವರು ಇಂದು ಹೆಸರಾಂತ ತಬಲಾವಾದಕರಾಗಿದ್ದಾರೆ. ಎರಡನೆಯ ಮಗ ಬಾಲಚಂದ್ರ ಗಾಯನದಲ್ಲಿ ಪ್ರವೀಣನಾಗಿದ್ದು ಇಬ್ಬರೂ ಧಾರವಾಡದ ಆಕಾಶವಾಣಿ ಕೇಂದ್ರದ ನಿಲಯ ಕಲಾವಿದರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಮೂರನೆಯ ಮತ್ತು ನಾಲ್ಕನೆಯ ಮಗ ವಿಶ್ವನಾಥ ಹಾಗೂ ರಾಜೇಂಧ್ರ ಇಬ್ಬರೂ ತಬವಾವಾದಕರಾಗಿದ್ದು ವಿಶ್ವನಾಥ ಬೆಂಗಳೂರು ಆಕಾಶವಾಣಿಯ ನಿಲಯ ಕಲಾವಿದನಾಗಿದ್ದಾನೆ. ಇಬ್ಬರು ಹೆಣ್ಣು ಮಕ್ಕಳಲ್ಲಿ ಹಿರಿಯವಳು ಶಾರದಾ ಮದುವೆಯಾಗಿ ಮುಂಬಯಿಯಲ್ಲಿದ್ದಾಳೆ. ಚಿಕ್ಕವಳು ವಿಜಯಲಕ್ಷ್ಮಿ ಸೊಲ್ಲಾಪುರದಲ್ಲಿರುವಳು. ಈಕೆಯೂ ಸಹ ಸುಗಮ ಸಂಗೀತ ಕಲಾವಿದೆಯಾಗಿ ಹೆಸರು ಮಾಡಿದ್ದಾಳೆ.

ಆಕಾಶವಾಣಿಯಿಂದ ನಿವೃತ್ತಿಯಾದ ನಂತರ ಅರ್ಜುನ ಸಾ ಅವರು ತಮ್ಮ ಸಂಪೂರ್ಣ ಸಮಯವನ್ನು ಸಂಗೀತ ಸೇವೆಗೆ ಮೀಸಲಾಗಿರಿಸಿಕ ಅನೇಕ ಶಿಷ್ಯರನ್ನು ತರಬೇತಿಗೊಳಿಸಿದುದು ಶ್ಲಾಘನೀಯವಾಗಿದೆ. ಅವರ ಶಿಷ್ಯರಲ್ಲಿ ಮಗ ಬಾಲಚಂದ್ರ ನಾಕೋಡ, ಜಯತೀರ್ಥ ಮೇವುಂಡಿ, ಕೃಷ್ಣೇಂದ್ರ ವಾಡೀಕರ, ವೀಣಾ ಪಾಛ್ಛಾಪೂರ, ಮಾಧವಿ ಕಲ್ಯಾಣಪೂರ, ಶಕ್ತಿ ಪಾಟೀಲ, ಪದ್ಮಾದೇವ ಶಿಖಾಮಣಿ, ಉಮಾ ವಾಡೀಕರ, ಸದಾನಂದ ಐಹೊಳೆ, ರೇಣುಕಾ ನಾಕೋಡ, ಮೌನಾ ರಾಮಚಂದ್ರ, ಸಂಜೀವ ಮುತ್ತಗೀಕರ, ಶಾಲಿನಿ ಶ್ರೀನಿವಾಸ, ಸ್ಮಿತಾ ಬೆಳ್ಳೂರ, ನಾರಾಯಣ ವನಕಿ, ರವೀಂದ್ರ ಸೋರಗಾವಿ, ಕಾಶಿನಾಥ (ಹೈದ್ರಾಬಾದ), ಡಿ.ಎಸ್‌. ಸಿದ್ಧರಾಮ (ಕ್ಲಾರಿಯೊನೇಟ್‌) ಮುಂತಾದವರು ಪ್ರಮುಖರು.

ಗ್ವಾಲ್ಹೇರ ಘರಾಣೆಯ ಗಾಯನವು ಮುಕ್ತಕಂಠದ್ದಾಗಿದ್ದು ಮನಮೋಹಕ ವಿನ್ಯಾಸದ ವಿನಿಕೆಗೆ ಪ್ರಿಸಿದ್ಧಿ ಪಡೆದಿದೆ. ಅರ್ಜುನಸಾ ಅವರ ಗಾಯನ ಈ ಗುಣಗಳಿಂದ ಕೂಡಿದೆ. ಅವರು ಪ್ರತಿಭೆ ಹಾಗೂ ಸಾಮರ್ಥ್ಯದಿಂದ ಅಪಾರ ಜನಪ್ರಿಯತೆಯನ್ನು ಹೊಂದಿದ್ದು ಬಿರುದು ಸನ್ಮಾನಗಳನ್ನು ಪಡೆದಿದ್ದಾರೆ. ಅವರಿಗೆ ದೊರೆತೆ ಪದವಿ ಪ್ರಶಸ್ತಿಗಳು ಅನೇಕ. ೧೯೮೨ರಲ್ಲಿ ಕರ್ನಾಟಕ ಸಂಗೀತ ನೃತ್ಯ ಅಕಾಡೆಮಯ ಕರ್ನಾಟಕ ಕಲಾ ತಿಲಕ, ೧೯೮೯ರಲ್ಲಿ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ. ರಂಭಾಪುರಿ ಜಗದ್ಗುರುಗಳ ಗಾನಭಾನು, ಇಳಕಲ್‌ ವಿಜಯ ಮಹಂತೇಶ ಸಂಸ್ಥಾನ ಮಠದ ಸಂಗೀತ ಸುಧಾಕರಕ ೧೯೯೨ರಲ್ಲಿ ಗದುಗಿನಲ್ಲಿ ಪಂಚಾಕ್ಷರ ಗವಾಯಿಗಳ ಶತಮಾನೋತ್ಸವ ಸಂದರ್ಭದ ಗಾನ ಶಾರ್ದೂಲ ಪ್ರಶಸ್ತಿ ಇತ್ಯಾದಿ.

ಸುಮಾರು ೧೯೯೯ರಲ್ಲಿ ಕರುಳು ಬೇನೆಯಿಂದಾಗಿ ಇಂಥ ಅಪರೂಪದ ಗಾಯಕನ ಧ್ವನಿ ಸಂಪೂರ್ಣ ಬಿದ್ದು ಹೋದದ್ದು ದುರ್ದೈವದ ಸಂಗತಿ. ಕಲಾಕ್ಷೇತ್ರಕ್ಕೆ ಇದೊಂದು ನಷ್ಟ ಎನ್ನಬೇಕು. ಧ್ವನಿ ಮಧುರವಿರುವಾಗ ಅರ್ಜುನಸಾ ಅವರ ಒಂದೇ ಒಂದು ಧ್ವನಿಸುರಳಿಯೂ ಹೊರಬಾರದಿದ್ದುದು ವಿಷಾದಕರ ಸಂಗತಿ. ಆದಾಗ್ಯೂ ಭೋಪಾಲ್‌ನ ಆಕಾಶವಾಣಿ ಇವರ ಒಂದು ಧ್ವನಿಸುರುಳಿಯನ್ನು ಮಾಡಿ ಇರಿಸಿಕೊಂಡಿರುವದು ಸಮಾಧಾನಕರ ಸಂಗತಿಯಾಗಿದೆ.

ಅರ್ಜುನಸಾ ಅವರ ಕೊನೆಯುಸುರಿನ ದಿನದಲ್ಲಾದ ಘಟನೆ ತುಂಬ ಚಮತ್ಕಾರಿಕವಾಗಿದೆ. ವೈದ್ಯರು ಹತಾಶರಾಗಿ ಮನೆಗೆ ಕರೆದುಕೊಂಡು ಹೋಗಲು ಹೇಳಿದಾಗ, ಮಕ್ಕಳು ಮನೆಗೆ ಕರೆತಂದು ಡಾ. ಪುಟ್ಟರಾಜ ಕವಿ ಗವಾಯಿಗಳಿಗೆ ತಿಳಿಸಿದರು. ಶ್ರೀಗುರುಗಳು ಧಾವಿಸಿ ಬಂದರು. ಆಗ ಅರ್ಜುನಸಾ ಅವರಿಗೆ ಸ್ಮೃತಿ ಬಂದು ಎದ್ದವರೇ ಗುರುಗಳಿಗೆ ಸಾಷ್ಟಾಂಗ ಪ್ರಣಾಮ ಮಾಡಿದರು. ಧರ್ಮಪತ್ನಿ ಅನಸೂಯಾ ಅವರೊಡಗೂಡಿ ಮನದಿಚ್ಛೆಯಂತೆ ಗುರುಗಳ ಪಾದಪೂಜೆ ಮಾಡಿದರು. ಕಣ್ಣಿನಿಂಧ ಆನಂಧ ಬಾಷ್ಪಗಳು ಮುತ್ತಿನಂತೆ ಗುರುಗಳ ಪಾದಕ್ಕೆ ಬೀಳುತ್ತಿದ್ದವು. ಇಡಿಯ ಕುಟುಂಬಕ್ಕೆ ಪೂರ್ಣಫಲದ ಆಶೀರ್ವಾದವನ್ನು ಗುರುಗಳು ನೀಡಿದರು. ಅಂದೇ ಅವರ ಕೊನೆಯುಸಿರಾಗಬೇಕೆಂಬ ಸಂಕಲ್ಪವಿತ್ತೊ ಏನೊ! ಎಪ್ಪತ್ತೈದು ವರ್ಷಗಳ ಸಂತೃಪ್ತಿಯ ತುಂಬು ಜೀವನ ನಡೆಸಿದ ಅರ್ಜುನಸಾ ಅವರ ಪ್ರಾಣಪಕ್ಷಿಯು ೪-೧-೨೦೦೧ರಂದು ನಾದಲೋಕದಲ್ಲಿ ಲೀನವಾಗಿ ಪರಮಾತ್ಮನ ಪಾದ ಸೇರಿತು.

ಪ್ರತಿವರ್ಷ ಇಂದಿಗೂ ಪುಣ್ಯದಿನದಂದು ಮಕ್ಕಳು, ಶಿಷ್ಯರು ಶ್ರದ್ಧೆ ಭಕ್ತಿಯಿಂಧ ಅರ್ಜುನಸಾ ನಾಕೋಡರಿಗೆಕ ಸ್ವರ ಶ್ರದ್ಧಾಂಜಲಿಯನ್ನರ್ಪಿಸುವರು.