ಸುಮಾರು ೫,೧೫೦ ವರ್ಷಗಳ ಹಿಂದಿನ ಮಾತು. ಒಂದು ಫಲ್ಗುನ ಮಾಸ. ಹೋಳಿ ಹುಣ್ಣಿಮೆಯ ದಿನ. ಬದರಿಯ ಸಮೀಪದ ತಪೋವನದಲ್ಲಿ ಗಂಡುಮಗುವೊಂದು ಹುಟ್ಟಿತು. ಫಲ್ಗುನೀ ನಕ್ಷತ್ರದಲ್ಲಿ ಹುಟ್ಟಿದ್ದರಿಂದ ಈ ಮಗುವನ್ನು ಫಲ್ಗುನ ಎಂದು ಕರೆದರು.

ಮುದ್ದುಮುದ್ದಾದ ಮಗು. ತಾಯಿಗೆ ಎಲ್ಲಿಲ್ಲದ ಸಂತಸ. ತಪೋವನದ ಮುನಿಗಳಿಗೂ ಸಂಭ್ರಮವೋ ಸಂಭ್ರಮ. ಹಿರಿಯ ಮಗ ಯುಧಿಷ್ಠಿರನಿಗೆ ಈಗ ಎರಡು ವರ್ಷ. ಎರಡನೆಯವ ಭೀಮಸೇನ. ಇನ್ನೂ ಒಂದು ವರ್ಷದ ಹಸುಳೆ. ಅಷ್ಟರಲ್ಲೆ ಕುಂತಿ ಮೂರನೆಯ ಮಗುವಿಗೆ ತಾಯಿಯಾಗಿದ್ದಳು. ಮುನಿಗಳೆಲ್ಲ ಬಂದು ಪಾಂಡುರಾಜುನನ್ನು ಅಭಿನಂದಿಸಿದರು. ಮಗುವಿನ ಮೈಬಣ್ಣಕ್ಕೆ ತಕ್ಕಂತೆ ‘ಅರ್ಜುನ’ ಎಂದು ಮುದ್ದಾದ ಹೆಸರಿಟ್ಟು ಹರಸಿದರು.

ತಂದೆ ಇನ್ನಿಲ್ಲ

ಅರ್ಜುನನಿಗೆ ವರ್ಷ ತುಂಬುವಷ್ಟರಲ್ಲೆ ಪಾಂಡುರಾಜನ ಎರಡನೆಯ ಹೆಂಡತಿ ಮಾದ್ರಿ ಅವಳಿ ಮಕ್ಕಳನ್ನು ಹೆತ್ತಳು. ಅವರೇ ನಕುಲ-ಸಹದೇವರು. ಐವರು ರಾಜಕುಮಾರರೂ ಪಂಚಾಗ್ನಿಗಳಂತೆ ತೇಜಸ್ವಿಗಳಾಗಿ ಬೆಳೆದರು. ಆಶ್ರಮದ ಮುನಿಗಳೇ ಮುಂದೆ ನಿಂತು ಅವರಿಗೆ ಉಪನಯನಾದಿಗಳನ್ನು ಮಾಡಿದರು. ಶಿಕ್ಷಣ ನೀಡಿದರು.

ಸಂತಸದಿಂದ ಕಾಲ ಕಳೆದದ್ದೇ ತಿಳಿಯಲಿಲ್ಲ. ವರ್ಷಗಳ ಮೇಲೆ ವರ್ಷಗಳುರುಳಿದವು. ಈಗ ಅರ್ಜುನನಿಗೆ ಹದಿನಾಲ್ಕರ ಹರೆಯ. ಅಂದು ಫಲ್ಗುನೀ ನಕ್ಷತ್ರ. ಮಗನ ಹುಟ್ಟುಹಬ್ಬದ ಆಚರಣೆಯ ಸಂಭ್ರಮದಲ್ಲಿ ಕುಂತಿ ಮೈಮರೆತಿದ್ದಳು.

ಪಾಂಡುರಾಜನ ಮನಸ್ಸು ಮುದಗೊಂಡಿತ್ತು. ಹಿಮಾಲಯದ ಪ್ರಕೃತಿಸೌಂದರ್ಯಕ್ಕೆ ಸುಗ್ಗಿಯ ತಿಂಗಳ ಸೊಬಗು ಮೆರಗು ಕೊಟ್ಟಿತ್ತು. ಫಲ್ಗುನದ ಚಳಿಗಾಳಿಗೆ ಮೈಯೊಡ್ಡುತ್ತ ಪಾಂಡುರಾಜ ಮಾದ್ರಿಯ ಜೊತೆ ಅಡ್ಡಾಡ ಹೊರಟನು.

ವಿಹಾರಕ್ಕೆಂದು ಹೋದ ರಾಜ ಮತ್ತೆ ಮರಳಲಿಲ್ಲ. ಅವನು ದಾರಿಯಲ್ಲೇ ಆಕಸ್ಮಿಕವಾಗಿ ಸಾವನ್ನಪ್ಪಿದನು. ಮಾದ್ರಿ ಗಂಡನೊಡನೆ ಚಿತೆಯೇರಿದಳು. ಇನ್ನು ಏಕಾಕಿನಿಯಾದ ಕುಂತಿ ಐವರು ಮಕ್ಕಳ ರಕ್ಷಣೆಯ ಹೊಣೆ ಹೊತ್ತು ಕಾಡಿನಲ್ಲಿರುವುದಕ್ಕೆ ಯಾವ ಅರ್ಥವೂ ಇಲ್ಲ. ರಾಜ್ಯದ ಉತ್ತರಾಧಿಕಾರಿಗಳಾಗಬೇಕಾದವರು ರಾಜಧಾನಿಯಲ್ಲಿರುವುದೇ ಸರಿ. ಅಲ್ಲಿಗೆ ಅವರ ತಪೋವನದ ಬಾಳು ಮುಗಿಯಿತು. ಐವರು ಮಕ್ಕಳ ಜೊತೆಗೆ ಕುಂತಿ ಹಸ್ತಿನಾಪುರಕ್ಕೆ ನಡೆದು ಬಂದಳು.

ತಮ್ಮನ ಮಕ್ಕಳನ್ನು ಧೃತರಾಷ್ಟ್ರ ಪ್ರೀತಿಯಿಂದ ಸ್ವಾಗತಿಸಿದ. ಭೀಷ್ಮ ವಿದುರರಿಗೂ ಪಾಂಡುರಾಜನ ಮಕ್ಕಳನ್ನು ಕಂಡು ತುಂಬ ಆನಂದವಾಯಿತು. ದುರ್ಯೋಧನ ಮುಂತಾದ ನೂರು ಮಂದಿ ಧೃತರಾಷ್ಟ್ರನ ಮಕ್ಕಳು ಮಾತ್ರ ತಮ್ಮ ದಾಯಾದಿಗಳನ್ನು ಕಂಡು ಕರುಬಿದರು.

ನಿನ್ನಂಥ ಬಿಲ್ಲಾಳು ಇನ್ನೊಬ್ಬನಿಲ್ಲ

ದ್ರೋಣಾಚಾರ್ಯರೆಂದರೆ ಆ ಕಾಲದ ಅಪ್ರತಿಮ ಬಿಲ್ಲಾಳು. ಅವರಿಗೆ ಎಣೆಯಾದ ಬಿಲ್ಲಾಳು ಕ್ಷತ್ರಿಯರಲ್ಲೂ ವಿರಳ. ಇಂಥ ಗುರವೇ ಪಾಂಡವರ ಶಸ್ತ್ರಾಭ್ಯಾಸಕ್ಕೆ ದೊರೆತರು. ಭೀಷ್ಮರ ಪ್ರಾರ್ಥನೆಗೆ ದ್ರೋಣರು ಒಪ್ಪಿಕೊಂಡರು. ಕೌರವರು ಪಾಂಡವರು ಗುರು ದ್ರೋಣರಲ್ಲಿ ಶಸ್ತ್ರಾಭ್ಯಾಸಕ್ಕೆ ತೊಡಗಿದರು.

ಒಂದು ದಿನ ದ್ರೋಣರು ಮಕ್ಕಳನ್ನೆಲ್ಲ ಕೂಡಿಸಿ ತಮ್ಮ ಮನದಿಂಗಿತವನ್ನು ಅವರ ಮುಂದಿಟ್ಟರು “ಮಕ್ಕಳೇ, ನನ್ನ ಮನದಲ್ಲಿ ಒಂದು ಬಯಕೆಯಿದೆ. ಶಸ್ತ್ರ ವಿದ್ಯೆಯಲ್ಲಿ ಪಾರಂಗತರಾದ ಮೇಲೆ ನಿಮ್ಮಲ್ಲಿ ಯಾರಾದರೂ ಅದನ್ನು ಪೂರೈಸಬಲ್ಲಿರಾ?”

ರಾಜಕುಮಾರರು ಒಬ್ಬರು ಮುಖವನ್ನೊಬ್ಬರು ನೋಡಿಕೊಂಡರು. ಎಲ್ಲರಿಗೂ ಎಂಥ ಬಯಕೆಯೋ ಎಂಬ ಅಳುಕು. ಯಾರೂ ತುಟಿ ಬಿಚ್ಚಲಿಲ್ಲ. ಆಗ ಅರ್ಜುನ ಎದ್ದು ನಿಂತ; “ಗುರುಗಳೇ ನಿಮ್ಮ ಆಶೀರ್ವಾದವೊಂದಿದ್ದರೆ ನಾನು ನಿಮ್ಮ ಬಯಕೆಯನ್ನು ಈಡೇರಸಬಲ್ಲೆ. ಕೃಪೆಯಾಗಬೇಕು ಎಂದು ಕೈ ಮುಗಿದ. ದ್ರೋಣರ ಆನಂದಕ್ಕೆ ಪಾರವೇ ಇರಲಿಲ್ಲ. ಅವರು ಅರ್ಜುನನನ್ನು ಅಪ್ಪಿಕೊಂಡು ಮುದ್ದಾಡಿದರು. ಅರ್ಜುನನನ್ನು ಜಗತ್ತಿನಲ್ಲೇ ಅದ್ವೀತೀಯ ಬಿಲ್ಲಾಳುವನ್ನಾಗಿ ಮಾಡಬೇಕು ಎಂದು ಅವರು ಆ ಕ್ಷಣದಲ್ಲೆ ನಿರ್ಧರಿಸಿದರು.

ಅರ್ಜುನ ದ್ರೋಣರ ಅಚ್ಚುಮೆಚ್ಚಿನ ಶಿಷ್ಯನಾದ. ದ್ರೋಣರು ತನ್ನೆಲ್ಲ ವಿದ್ಯೆಯನ್ನೂ ಅರ್ಜುನನಿಗೆ ಧಾರೆ ಎರೆದರು. ಗುರುವಿಗೆ ತಕ್ಕ ಶಿಷ್ಯ; ಶಿಷ್ಯನಿಗೆ ತಕ್ಕ ಗುರು. ಜಗತ್ತಿನಲ್ಲಿ ಆ ತನಕ ಬೆಳೆದು ಬಂದ ಶಸ್ತ್ರಾಸ್ತ್ರ ಕೌಶಲವೆಲ್ಲ ಅರ್ಜುನನಿಗೆ ಕರಗತವಾಯಿತು. ಗುರು ಪರಮಾನಂದದಿಂದ ಶಿಷ್ಯನನ್ನು ಕೊಂಡಾಡಿದರು. “ಅರ್ಜುನ, ನಿನ್ನಂಥ ಬಿಲ್ಲಾಳು ಜಗತ್ತಿನಲ್ಲಿ ಇನ್ನೊಬ್ಬನಿಲ್ಲ.”

ಇದೇ ಗುರುದಕ್ಷಿಣೆ

ಶಸ್ತ್ರಾಭ್ಯಾಸ ಮುಗಿಯಿತು. ದ್ರೋಣರು ಮತ್ತೆ ಕುಮಾರರನ್ನು ಕರೆದು ನುಡಿದರು. “ನೀವೀಗ ಪಡೆದ ವಿದ್ಯೆಗೆ ಗುರುದಕ್ಷಿಣೆ ನೀಡಬೇಕು. ನನ್ನ ಬಾಲ್ಯ ಸ್ನೇಹಿತನಾಗಿದ್ದು ಸಂಪತ್ತಿನ ಮದದಿಂದ ನನ್ನನ್ನು ತಿರಸ್ಕರಿಸಿದ ದ್ರುಪದನನ್ನು ಸೋಲಿಸಿ, ನೀವು ನನ್ನ ಕಾಲ ಬುಡಕ್ಕೆ ಕೆಡವಬೇಕು. ಇದೇ ನನ್ನ ಬಯಕೆ. ಇದೇ ನಿಮ್ಮ ಗುರುದಕ್ಷಿಣೆ.”

ಸರಿ, ಎಲ್ಲ ಕುರುಕುಮಾರರೂ ತೋಳು ತಟ್ಟಿ ಯುದ್ಧಕ್ಕೆ ಅಣಿಯಾದರು. ಕರ್ಣನೊಡನೆ ಮುನ್ನುಗ್ಗಿದ ಕೌರವರು ಹೋದಷ್ಟೇ ವೇಗದಲ್ಲಿ ಹಿಂತೆರಳಿದರು. ದ್ರುಪದನ ಯುದ್ಧಕೌಶಲದಿಂದ ಅವರಿಗೆ ದಿಕ್ಕೇ ತೋಚದಂತಾಗಿತ್ತು. ಆಗ ಅರ್ಜುನ ಭೀಮನ ಜೊತೆಗೆ ರಣಕಣಕ್ಕಿಳಿದ. ಇವರ ಪರಾಕ್ರಮಕ್ಕೆ ಇಡಿಯ ಪಾಂಚಾಲ ಸೇನೆ ದಂಗಾಯಿತು. ಮಹಾವೀರನಾದ ದ್ರುಪದ ರಾಜನೂ ಕಂಗೆಟ್ಟ. ಪ್ರಳಯ ಕಾಲದ ಬೆಂಕಿಯಂತೆ ಅರ್ಜುನ ಎಲ್ಲೆಡೆಯೂ ಓಡಾಡಿದ. ಅವನ ಬಿಲ್ಲು ಬಾಣಗಳ ಮಳೆಗರೆಯಿತು. ಅದರಿಂದ ಗಾಯಗೊಳ್ಳದವರು ಅಲ್ಲಿ ಒಬ್ಬರೂ ಇರಲಿಲ್ಲ.

ಅರ್ಜುನ ದ್ರುಪದನನ್ನು ಸೆರೆಹಿಡಿದು ದ್ರೋಣರ ಪಾದಮೂಲದಲ್ಲಿ ಕೆಡವಿದ. ದ್ರೋಣರ ಸೇಡು ತೀರಿತ್ತು. ದ್ರುಪದನ ಕಣ್ಣು ತೆರೆದಿತ್ತು. ಅರ್ಜುನನ ಗುರುದಕ್ಷಿಣೆ ಫಲಿಸಿತ್ತು. ದ್ರುಪದನಿಂದ ದ್ರೋಣರು ಪಡೆದ ರಾಜ್ಯದ ಭಾಗವೇ ಈಗ ಡೆಹ್ರಾಡೂನ್ ಎಂದು ಪ್ರಸಿದ್ಧವಾದ ಪ್ರದೇಶ ಎಂದು ಹೇಳುತ್ತಾರೆ.

ಶಿಕ್ಷಣ ಮುಗಿಯಿತು. ಹಿರಿಯನಾದ ಯುಧಿಷ್ಠಿರ ಯುವರಾಜನಾದ. ಆಗ ಕುರುರಾಜ್ಯ ಶಿಥಿಲವಾಗಿತ್ತು. ದಕ್ಷಿಣ ದೇಶವೆಲ್ಲ ಬಂಡಾಯವೇಳುವ ಸ್ಥಿತಿಯಲ್ಲಿತ್ತು. ಧೃತರಾಷ್ಟ್ರ ಕುರುಡ. ಕುರುಕುಮಾರರು ಇನ್ನೂ ಮಕ್ಕಳು. ಶತ್ರುಗಳಿಗೆ ಇದು ಸುವರ್ಣಾವಕಾಶ. ಇದನ್ನರಿತ ಅರ್ಜುನ ದಿಗ್ವಿಜಯಕ್ಕೆ ಹೊರಟ. ಪಾಂಡುವಿಗೆ ಕೂಡ ಸೋಲದಿದ್ದ ಸೌವೀರರಾಜ ಅವನ ಕೈಯಲ್ಲಿ ಸೋತು, ಕಪ್ಪವೊಪ್ಪಿಸಿದ. ದಕ್ಷಿಣದ ಎಲ್ಲ ರಾಜರೂ ಶರಣಾದರು. ಇಡಿಯ ಭಾರತದ ಕೇಂದ್ರಬಿಂದು ಹಸ್ತಿನಾಪುರವಾಯಿತು.

ಇದನ್ನು ಕಂಡು ಕೌರವರು ಕರುಬಿದರು. ಧೃತರಾಷ್ಟ್ರನಿಗೂ ಕಳವಳ. ತನ್ನ ಮಕ್ಕಳಿಗಿಂತ ಪಾಂಡವರೇ ಹೆಚ್ಚು ಜನಪ್ರಿಯವಾಗುತ್ತಿದ್ದಾರಲ್ಲ ಎನ್ನುವ ಅಸೂಯೆ. ಅವನು ಕಣ್ಣಿನಿಂದಷ್ಟೇ ಕುರುಡ ಅಲ್ಲ; ಪುತ್ರಮೋಹದಿಂದಲೂ ಕುರುಡನಾಗಿದ್ದ. ಪರಿಣಾಮವಾಗಿ, ಮಗನ ಮಾತಿಗೆ ಬಲಿಯಾದ ಅವನು ಪಾಂಡವರನ್ನು ದೂರದ ವಾರಣಾವತದಲ್ಲಿರಿಸಲು ನಿರ್ಧರಿಸಿದನು.

ಅರಗಿನ ಮನೆಯಿಂದ ಮಾವನ ಮನೆಗೆ

ಅಲ್ಲಿ ಪಾಂಡವರಿಗಾಗಿ ಅರಗು ಬೆರಸಿದ ಗಾರೆಯ ಮನೆ ಸಿದ್ಧವಾಗಿತ್ತು. ಅವರು ಅಲ್ಲಿ ನೆಲೆಸಿದ ಮೇಲೆ ಈ ಮನೆಗೆ ಬೆಂಕಿಕೊಟ್ಟು ಪಾಂಡವರನ್ನು ಕೊಲ್ಲುವುದು ದುರ್ಯೋಧನನ ಹಂಚಿಕೆಯಾಗಿತ್ತು. ಇದರ ಸುಳಿವನ್ನರಿತ ಪಾಂಡವರು ರಹಸ್ಯಮಾರ್ಗವಾಗಿ ಅಲ್ಲಿಂದ ತೆರಳಿ ವೇಷ ಮರೆಸಿಕೊಂಡು ಗಂಗೆಯನ್ನು ದಾಟಿ ಮುನ್ನಡೆದರು. ದ್ರುಪದನ ಮಗಳು ದ್ರೌಪದಿಯ ಸ್ವಯಂವರ ಸನ್ನಾಹ ನಡೆದಿತ್ತು. ಪಾಂಡವರು ಸ್ವಯಂವರದ ದಿನ ಬ್ರಾಹ್ಮಣರ ಜೊತೆಗೆ ರಾಜ ಸಭೆಯಲ್ಲಿ ಬಂದು ಕುಳಿತರು.

ದ್ರೌಪದಿಯ ಅಣ್ಣ ಧೃಷ್ಟದ್ಯುಮ್ನ ಸ್ವಯಂವರದ ಪಣವನ್ನು ಸಭೆಯ ಮುಂದೆ ವಿವರಿಸಿದ: “ಮರದ ಮೇಲೆ ಮೀನಿನ ಬೊಂಬೆಯಿದೆ. ಕೆಳಗೆ ತಟ್ಟೆಯಲ್ಲಿ ನೀರಿದೆ. ಇಲ್ಲಿ ಬಿಲ್ಲಿದೆ. ಐದು ಬಾಣಗಳಿವೆ. ಮೀನಿನ ನೆರಳನ್ನು ನೀರಲ್ಲಿ ಕಂಡು ಮರದ ಮೇಲೆ ಬಿಗಿದ ಮೀನನ್ನು ಬಾಣಗಳಿಂದ ಹೊಡೆಯಬಲ್ಲ ವೀರನಿಗೆ ಮೀನಲೋಚನೆ ದ್ರೌಪದಿ ಮಾಲೆ ಹಾಕುತ್ತಾಳೆ.”

ಜರಾಸಂಧ, ಶಲ್ಯ, ಕರ್ಣ ಇಂಥ ಘಟಾನುಘಟಿಗಳೇ ಈ ಪಣದಲ್ಲಿ ಸೋತು ತಲೆ ಅಡಿಗಿಟ್ಟರು. ಆಗ ಬ್ರಾಹ್ಮಣರ ಗುಂಪಿನಿಂದ ಇಪ್ಪತ್ತೈದರ ಹರಯದ ಒಬ್ಬ ಹುಡುಗ ಎದ್ದು ನಿಂತ. ಕ್ಷತ್ರಿಯರೆಲ್ಲ ಕಣ್ಕಣ್ಣು ಬಿಟ್ಟರು. ಈ ತರುಣ ನೆರಳಲ್ಲಿ ಮೀನನ್ನು ಕಂಡು ಗುರಿ ಹಿಡಿದು ಪಣವನ್ನು ಗೆದ್ದುಬಿಟ್ಟ. ದ್ರೌಪದಿ ತನ್ನ ಕೈಯ ಮಾಲೆಯನ್ನು ಈತನ ಕೊರಳಿಗೆ ತೊಡಿಸಿ ಪಕ್ಕದಲ್ಲಿ ನಿಂತುಕೊಂಡಳು. 

ದ್ರೌಪದಿ ತನ್ನ ಕೈಯ ಮಾಲೆಯನ್ನು ಅರ್ಜುನನ ಕೊರಳಿಗೆ ಹಾಕಿದಳು.

 ಈ ಬ್ರಾಹ್ಮಣಕುಮಾರ ಅರ್ಜುನನೇ ಎನ್ನುವುದು ಯಾರಿಗೂ ಹೊಳೆಯಲಿಲ್ಲ. ಒಬ್ಬ ಬಡ ಬ್ರಾಹ್ಮಣ ಕ್ಷತ್ರಿಯ ಕನ್ಯೆಯನ್ನು ಮದುವೆಯಾಗುವುದೆಂದರೇನು? ಮದುವೆಗೆ ಬಂದ ಕ್ಷತ್ರಿಯರು ಯುದ್ಧಕ್ಕೆ ಕತ್ತಿ ಮಸೆದರು. ಮದುವೆಯ ಮನೆ ರಣರಂಗವಾಯಿತು.

ದ್ರೋಣರ ಶಿಷ್ಯನಿಗೆ ಇದೊಂದು ಗಣ್ಯವೆ? ಅರ್ಜುನನ ಬಾಣ ಕೌಶಲದ ಮುಂದೆ ಇಡಿಯ ರಾಜವೃಂದ ಬೆನ್ನು ತೋರಿಸಬೇಕಾಯಿತು. ಅರ್ಜುನ ಭೀಮನ ಜೊತೆಗೆ ದ್ರೌಪದಿಯನ್ನು ತಾವು ತಂಗಿದ್ದ ಕುಂಬಾರನ ಮನೆಗೆ ಕರೆದುತಂದು. ಉತ್ಸಾಹದಿಂದ ತಾಯಿಯನ್ನು ಕರೆದು ಹೇಳಿದ: “ಅಮ್ಮಾ, ನಾವೊಂದು ಹೊಸ ಭಿಕ್ಷೆ ತಂದಿದ್ದೇವೆ.” ತಾಯಿ ಸಹಜವಾಗಿಯೇ ಉತ್ತರಿಸಿದಳು. “ಐವರೂ ಹಂಚಿಕೊಳ್ಳಿ.” ತಾಯಿಯ ಆ ಮಾತು ಸುಳ್ಳಾಗಲಿಲ್ಲ. ಮಹರ್ಷಿ ವೇದವ್ಯಾಸರ ಸಲಹೆಯಂತೆ ದ್ರೌಪದಿಯನ್ನು ಐವರು ಅಣ್ಣತಮ್ಮಂದಿರೂ ಮದುವೆಯಾದರು.

ಇಂದ್ರಪ್ರಸ್ಥದಲ್ಲಿ ಸುಖಸಂಸಾರ

ಕೌರವರಿಗೆ ಈ ಸುದ್ದಿ ತಿಳಿಯಿತು. ಅವರು ಕೈಕೈ ಹೊಸೆದುಕೊಂಡರು. ಧೃತರಾಷ್ಟ್ರ ಪಾಂಡವರನ್ನು ಕರೆಸಿಕೊಂಡ. ಯುಧಿಷ್ಠಿರನಿಗೆ ರಾಜ್ಯದಲ್ಲಿ ಅರ್ಧಪಾಲನ್ನಿತ್ತು ಇಂದ್ರಪ್ರಸ್ಥಕ್ಕೆ ಕಳಿಸಿದ. ಇಂದ್ರಪ್ರಸ್ಥದಲ್ಲಿ ಪಾಂಡವರ ರಾಜಧಾನಿ ನಿರ್ಮಾಣವಾಯಿತು. ಇದೇ ಈಗಣ ದಿಲ್ಲಿ.

ಹಲವು ವರ್ಷಗಳ ಸುಖವಾಗಿ ಕಳೆದವು. ಅರ್ಜುನನಿಗೆ ದ್ರೌಪದಿಯಲ್ಲಿ ಶ್ರುತಕೀರ್ತಿ ಎಂಬ ಮಗ ಹುಟ್ಟಿದ. ಈ ಸಂದರ್ಭದಲ್ಲಿ ಒಂದು ಘಟನೆ ನಡೆಯಿತು. ತಮ್ಮಲ್ಲಿ ಯಾರಾದರೂ ಒಬ್ಬರು ದ್ರೌಪದಿಯ ಜೊತೆಗೆ ಏಕಾಂತದಲ್ಲಿದ್ದಾಗ ಇನ್ನೊಬ್ಬರು ಅಲ್ಲಿಗೆ ಪ್ರವೇಶಿಸಿದರೆ ಹನ್ನೆರಡು ವರ್ಷಗಳ ಕಾಲ ತೀರ್ಥಯಾತ್ರೆ ಮಾಡಬೇಕೆಂದು ಅವರೊಳಗೆ ಒಂದು ಒಪ್ಪಂದ ಆಗಿತ್ತು. ಒಮ್ಮೆ ಅರ್ಜುನ ಆಯುಧಾಗಾರಕ್ಕೆ ಹೋಗುವಾಗ ಪಕ್ಕದ ಕೋಣೆಯಲ್ಲಿ ಯುಧಿಷ್ಠಿರ ದ್ರೌಪದಿಯರು ಏಕಾಂತದಲ್ಲಿರುವುದನ್ನು ಕಂಡನು. ಒಪ್ಪಂದದಂತೆ ಅರ್ಜುನ ತೀರ್ಥಯಾತ್ರೆಗೆ ಹೊರಟ. ಧರ್ಮರಾಜ ತಡೆದರು ಅವನು ತನ್ನ ನಿರ್ಧಾರದಿಂದ ವಿಚಲಿತನಾಗಲಿಲ್ಲ.

ಯಾತ್ರೆಯಲ್ಲಿ ಒಲಿದ ಹೆಣ್ಣು

ಇಂದ್ರಪ್ರಸ್ಧದಿಂದ ಹಿಮಾಲಯದ ಕಡೆಗೆ ಪ್ರಯಾಣ. ಹಿಮವತ್ ಪಾರ್ಶ್ವದ ಪುಣ್ಯಕ್ಷೇತ್ರಗಳ ಸಂದರ್ಶನ. ಅಲ್ಲಿಂದ ಪೂರ್ವಾಭಿಮುಖವಾಗಿ ಹೊರಟು ನೈಮಿಶ, ಗಯ, ಅಂಗ, ವಂಗ (ಬಂಗಾಳ) ಗಳನ್ನು ದಾಟಿದ ಅರ್ಜುನ ಕಳಿಂಗ (ಒರಿಸ್ಸಾ) ದೇಶಕ್ಕೆ ಬಂದ. ಕಳಿಂಗದಲ್ಲಿ ಮಣಿಪುರದ ರಾಜ ಚಿತ್ರವಾಹನ. ಅವನ ಮಗಳು ಚಿತ್ರಾಂಗದೆ ಬಲು ಚೆಲುವೆ. ಒಮ್ಮೆ ಅವಳು ಅರ್ಜುನನ ಕಣ್ಣಿಗೆ ಬಿದ್ದಳು. ನಲವತ್ತರ ಹರಯದ ಅರ್ಜುನನಿಗೆ ಅವಳ ಮೇಲೆ ಮನಸ್ಸು ಬಿತ್ತು. ಆತನೇ ಅರ್ಜುನ ಎಂದು ತಿಳಿದಾಗ ಚಿತ್ರವಾಹನ ಸಂತೋಷದಿಂದಲೇ ತನ್ನ ಮಗಳನ್ನು ಆತನಿಗೆ ಕೊಟ್ಟ. ಅರ್ಜುನ ಮೂರು ವರ್ಷಗಳ ಕಾಲ ಅಲ್ಲಿದ್ದ. ಚಿತ್ರಾಂಗದೆಗೆ ಒಂದು ಗಂಡು ಮಗುವಾಯಿತು. ಈ ಮಗುವೇ ಬಭ್ರುವಾಹನ. ಅಲ್ಲಿಂದ ಹೆಂಡತಿ ಹಾಗೂ ಮಗುವನ್ನು ಬೀಳ್ಕೊಟ್ಟು ಅರ್ಜುನ ಮುಂದೆ ತೆರಳಿದ. ಬಭ್ರುವಾಹನನೇ ಮುಂದೆ ರಾಜ್ಯದ ಉತ್ತರಾಧಿಕಾರಿಯಾದುದರಿಂದ ಚಿತ್ರಾಂಗದೆ ತಂದೆಯ ಬಳಿಯೇ ಉಳಿದಳು.

ಮೊಸಳೆ ಹೆಣ್ಣಾಯಿತು

ಅಲ್ಲಿಂದ ಅರ್ಜುನ ಕನ್ಯಾಕುಮಾರಿಗೆ ಬಂದ. ಅಲ್ಲೊಂದು ವಿಸ್ಮಯ ನಡೆಯಿತು. ಅಲ್ಲಿ ಒಂದು ತೀರ್ಥದಲ್ಲಿ ಐದು ಮೊಳೆಗಳಿದ್ದುವು. ಸ್ನಾನಕ್ಕಿಳಿದವರನ್ನು ಅವು ಎಳೆದು ತಿಂದುಬಿಡುತ್ತಿದ್ದುವು. ಅದಕ್ಕಾಗಿ ಅಲ್ಲಿ ಯಾರೂ ಮೀಯುತ್ತಿರಲಿಲ್ಲ. ಅರ್ಜುನ ಅಲ್ಲೇ ಸ್ನಾನಕ್ಕಿಳಿದ. ಮೊಸಳೆ ಅವನ ಕಾಲನ್ನು ಹಿಡಿದುಕೊಂಡಿತು. ಅವನು ಅದನ್ನೆಳೆದುಕೊಂಡೇ ಮೇಲಕ್ಕೆ ಬಂದ. ಆಶ್ಚರ್ಯ! ಆ ಮೊಸಳೆ ಸುಂದರಿಯಾದ ಅಪ್ಸರೆಯಾಗಿತ್ತು. ಅಪ್ಸರೆ ಕೈಮುಗಿದು ನುಡಿದಳು. ‘ಮಹಾವೀರ, ಋಷಿ ಶಾಪದಿಂದ ನಮಗೆ ಮೊಸಳೆಯ ಜನ್ಮ ಬಂತು. ನಮ್ಮನ್ನು ನೀರಿನಿಂದ ಮೇಲೆಳೆದು ಹಾಕಿದವನಿಂದ ನಮಗೆ ಶಾಪ ವಿಮೋಚನೆಯೆಂದು ಆ ಋಷಿ ಹೇಳಿದ್ದ. ಅಂಥ ವೀರನಿಗಾಗಿ ಕಾದಿದ್ದೆವು. ಇಂದು ನಮ್ಮ ಪುಣ್ಯ ಫಲಿಸಿತು. ನನ್ನ ಗೆಳತಿಯರನ್ನೂ ದಯವಿಟ್ಟು ಶಾಪದಿಂದ ಪಾರುಗಾಣಿಸು”.

ಅರ್ಜುನ ಉಳಿದ ಮೊಸಳೆಗಳನ್ನೂ ಮೇಲೆಳೆದು ಹಾಕಿದ. ಐವರು ಅಪ್ಸರೆಯರೂ ಅವನನ್ನು ಅಭಿನಂದಿಸಿ ಸ್ವರ್ಗದ ನಾಡಿಗೆ ತೆರಳಿದರು. ಅಂದಿನಿಂದ ಆ ತೀರ್ಥ ಎಲ್ಲರಿಗೂ ಸ್ನಾನಯೋಗ್ಯವಾಯಿತು.

ಅಲ್ಲಿಂದ ಸಮುದ್ರತೀರದಲ್ಲಿಯೇ ಉತ್ತರಕ್ಕೆ ಪ್ರಯಾಣ. ಗೋಕರ್ಣದಲ್ಲಿ ವಾಸ. ಪ್ರಭಾಸದಲ್ಲಿ ಶ್ರೀಕೃಷ್ಣನ ದರ್ಶನ. ಬಹಲ ಕಾಲದ ಅನಂತರ ಇಬ್ಬರು ಗೆಳೆಯರು ಜೊತೆಗೂಡಿದರೆ ಕೇಳಬೇಕೆ? ಹಲವು ದಿನ ದ್ವಾರಕೆಯಲ್ಲಿ ಸುಖವಾಗಿ ಕಳೆಯಿತು.

ಸುಭದ್ರೆ ಸಿಕ್ಕಿದಳು.

ರೈವತಕ ಪರ್ವತದಲ್ಲಿ ಅಂದು ಉತ್ಸವ. ಕೃಷ್ಣಾರ್ಜುನರು ಜೊತೆಯಾಗಿ ಅಲ್ಲಿಗೆ ತೆರಳಿದರು. ಕೃಷ್ಣನ ತಂಗಿ ಸುಭದ್ರೆಯೂ ಅಲ್ಲಿಗೆ ಬಂದಿದ್ದಲು. ಹರಯದ ಹುಡುಗಿ ಸುಭದ್ರೆಯನ್ನು ಕಂಡು ಅರ್ಜುನನಿಗೆ ತುಂಬ ಮೆಚ್ಚಿಕೆಯಾಯಿತು. ಗೆಳೆಯನ ಮನಸ್ಸನ್ನು ಶ್ರೀಕೃಷ್ಣ ಅರಿತ; ಅವನಿಗೆ ನೆರವಾದ. ಅವನಿಗೆ ರಥವನ್ನು ಕೊಟ್ಟ.

ಅರ್ಜುನ ಸುಭದ್ರೆಯನ್ನು ರಥದ ಮೇಲೇರಿಸಿ ಕುದುರೆಗಳನ್ನು ದೌಡಾಯಿಸಿದ. ಇದನ್ನು ಕಂಡ ಯಾದವರು ಸಿಟ್ಟಿಗೆದ್ದರು. ಯುದ್ಧಕ್ಕೆ ಅಣಿಯಾದರು. ಬಲರಾಮ ಕೃಷ್ಣನ ಮುಖ ನೋಡಿದ. ಕೃಷ್ಣ ಏನೂ ಅರಿಯದವನಂತೆಯೇ ಉತ್ತರಿಸಿದ. “ವೀರರಾದ ಕ್ಷತ್ರಿಯರು ಮಾಡಬೇಕಾದ್ದನ್ನೇ ಅರ್ಜುನ ಮಾಡಿದ. ದುಡ್ಡು ತೆಗೆದುಕೊಂಡು ಹೆಣ್ಣನ್ನು ಗಂಡಿಗೆ ಧಾರೆಯೆರೆಯುವ ಶುಲ್ಕ ಪದ್ಧತಿಗಿಂತ ಇದೇ ಮೇಲು. ಅಕಸ್ಮಾತ್ತಾಗಿಯಾದರು ನಮಗೆ ಒಳ್ಳೆಯ ಅಳಿಯನೇ ಸಿಕ್ಕಿದ್ದಾನೆ. ಅವನನ್ನು ಸತ್ಕರಿಸುವುದೇ ನ್ಯಾಯ.”

ಕೃಷ್ಣನ ಅಭಿಪ್ರಾಯ ಎಲ್ಲರಿಗೂ ಒಪ್ಪಿಗೆಯಾಯಿತು. ಯಾದವರು ಪ್ರೀತಿಯಿಂದ ಅರ್ಜುನನನ್ನು ದ್ವಾರಕೆಗೆ ಕರೆತಂದರು. ಒಂದು ವರ್ಷಕಾಲ ಅರ್ಜುನ ಅಲ್ಲೇ ಉಳಿದನು. ಅಷ್ಟರಲ್ಲಿ ತೀರ್ಥಯಾತ್ರೆಯ ಅವಧಿ ಮುಗಿಯುತ್ತ ಬಂದಿತು. ಅರ್ಜುನ ಸುಭದ್ರೆಯ ಜೊತೆಗೆ ಇಂದ್ರಪ್ರಸ್ಥಕ್ಕೆ ಮರಳಿದ. ಸುಭದ್ರೆ ಒಂದು ಗಂಡುಮಗುವನ್ನು ಹೆತ್ತಳು, ಆ ಮಗುವೇ ಅಭಿಮನ್ಯು.

ರಾಜಸೂಯ ನಡೆಯಿತು

ಅರ್ಜುನನಿಗೆ ಈಗ ಐವತ್ತೈದು ವರ್ಷ. ಯುಧಿಷ್ಠಿರನ ರಾಜ್ಯಭಾರ ನಿರಾತಂಕವಾಗಿತ್ತು. ರಾಜ್ಯ ಸಂಪತ್ತಿನ ಸೆಲೆಯಾಗಿತ್ತು. ಇಂಥ ಸಮಯದಲ್ಲಿ ರಾಜಸೂಯ ಯಾಗ ಮಾಡಬೇಕೆಂದು ಯುಧಿಷ್ಠಿರ ಬಯಸಿದ. ಭೂಮಂಡಲದ ಎಲ್ಲ ರಾಜರನ್ನು ಗೆದ್ದು ಕಪ್ಪ ಪಡೆದವ ಮಾತ್ರವೇ ರಾಜಸೂಯ ಮಾಡಬಲ್ಲ. ಅದರಿಂದ ಯುಧಿಷ್ಠಿರನ ನಾಲ್ವರು ತಮ್ಮಂದಿರು ನಾಲ್ಕು ದಿಕ್ಕುಗಳಿಗೆ ದಿಗ್ವಿಜಯಕ್ಕಾಗಿ ಹೊರಟರು. ಉತ್ತರದ ರಾಜ್ಯಗಳನ್ನು ಜಯಿಸಲು ಸ್ವತಃ ಅರ್ಜುನನೇ ತೆರಳಿದ.

ಉತ್ತರದ ದೊಡ್ಡ ರಾಜ್ಯ ಪ್ರಾಗ್‌ಜ್ಯೋತಿಷ (ಈಗಣ ಅಸ್ಸಾಂ ಮತ್ತು ಚೀನಾದ ಭಾಗ) ಅಲ್ಲಿಯ ರಾಜ ಭಗದತ್ತ ಸೋಲರಿಯದ ಮಾಹಾವೀರ. ಅಸ್ಸಾಮಿನ ಕಾಡಿನ ಬೇಡರ ಪಡೆ ಮತ್ತು ಚೀನಾದ ಸೈನಿಕರ ಜೊತೆಗೆ ಅರ್ಜುನ ಎಂಟು ದಿನಗಳ ಕಾಲ ಭೀಕರ ಯುದ್ಧಮಾಡಬೇಕಾಯಿತು. ಚೀನಾದ ಸೇನೆ ಹಿಂಜರಿಯಿತು. ಭಗದತ್ತನ ಬಲ ಕುಸಿಯಿತು. ಅವನು ಅರ್ಜುನನ ಸ್ನೇಹವನ್ನೊಪ್ಪಿಕೊಂಡು ಕಪ್ಪ ಒಪ್ಪಿಸಿದ.

ಹಿಮಾಲಯ ಪ್ರಾಂತದ ಎಲ್ಲ ರಾಜ್ಯಗಳೂ ಅರ್ಜುನನಿಗೆ ಶರಣಾದವು. ಕಾಶ್ಮೀರದ ರಾಜರೂ ಶರಣಾದರು. ಬಲಿಷ್ಠವಾದ ತ್ರಿಗರ್ತ (ಲುಧಿಯಾನಾ) ಕಪ್ಪವೊಪ್ಪಿಸಿತು. ಸುಹ್ಮ (ಪಶ್ಚಿಮ ಬಂಗಾಲ)ದ ಸೇನೆ ಮಣಿಯಿತು. ಈಶಾನ್ಯ ಭಾಗ (ನೇಫಾ) ದಲ್ಲಿ ವಾಸಿಸುತ್ತಿದ್ದ ದರೋಡೆಗಾರರೂ ಸೋತರು. ಅನಂತರ ಋಷಿಕ (ರಷ್ಯ) ದೇಶದಲ್ಲಿ ಅತ್ಯದ್ಭುತವಾದ ಯುದ್ಧ ನಡೆದು ಅವರೂ ಶರಣಾದರು.

ಅರ್ಜುನ ಗೆದ್ದುತಂದ ಸಂಪತ್ತಿಗೆ ಪಾರವೇ ಇರಲಿಲ್ಲ. ಬಗೆ ಬಗೆಯ ರತ್ನಗಳು; ಬಣ್ಣಬಣ್ಣದ ಜಾತ್ಯಶ್ವಗಳು; ಗಾಡಿಗಾಡಿ ಧನದ ರಾಶಿ. ಯುಧಿಷ್ಠಿರ ನಿಜವಾದ ಸಾಮ್ರಾಟ್ ಎನ್ನಿಸಿದ. ಇನ್ನಿಲ್ಲ ಎನ್ನುವಂತೆ ವೈಭವದಿಂದ ರಾಜಸೂಯ ನಡೆಯಿತು.

ರಾಜ್ಯದಿಂದ ಕಾಡಿಗೆ

ರಾಜ್ಯ ಕಟ್ಟಲಿಕ್ಕೆ ವರ್ಷಗಳೇ ಬೇಕು. ಕಳೆದುಕೊಳ್ಳಲಿಕ್ಕೆ ಒಂದು ಕ್ಷಣ ಸಾಕು. ಭೀಮಾರ್ಜುನರ ಸಾಹಸದಿಂದ, ಹತ್ತಿಪ್ಪತ್ತು ವರ್ಷಗಳ ಪರಿಶ್ರಮದಿಂದ ಕಟ್ಟಿದ ಸಾಮ್ರಾಜ್ಯವನ್ನು ಯುಧಿಷ್ಠಿರ ಕ್ಷಣಾರ್ಧದಲ್ಲಿ ಕಳೆದುಕೊಂಡ. ದುರ್ಯೋಧನನ ಕುತಂತ್ರಕ್ಕೆ ಬಲಿಯಾಗಿ ಶಕುನಿಯೊಡನೆ ಜೂಜಾಡಿದ ಯುಧಿಷ್ಠಿರ ಜೂಜಿನಲ್ಲಿ ರಾಜ್ಯವನ್ನು ಪಣವಿಟ್ಟು ಕಳೆದುಕೊಂಡ. ಪಾಂಡವರು ರಾಜ್ಯಭ್ರಷ್ಟರಾಗಿ ಕಾಡಿಗೆ ತೆರಳಿದರು.

ಅವರು ತಮ್ಮ ವಾಸಕ್ಕಾಗಿ ಫಲಪುಷ್ಪಗಳಿಂದ ಸಮೃದ್ಧವಾದ ದ್ವೈತವನವನ್ನು ಆರಿಸಿಕೊಂಡರು. ಒಮ್ಮೆ ವ್ಯಾಸ ಮಹರ್ಷಿಗಳು ಅತ್ತ ಬಂದರು. ಯುಧಿಷ್ಠಿರನನ್ನು ಸಂತೈಸಿದರು. “ವಿಶೇಷವಾದ ದೈವೀ ಅಸ್ತ್ರಗಳನ್ನು ಪಡೆಯುವುದಕ್ಕಾಗಿ ಅರ್ಜುನ ಶಿವನನ್ನು ಕುರಿತು ತಪಸ್ಸು ಮಾಡಲಿ. ಅದರಿಂದ ಅವನ ಶಕ್ತಿ ಇನ್ನಷ್ಟು ಹೆಚ್ಚುವುದು. ಎಲ್ಲ ವೀರರನ್ನೂ ಗೆಲ್ಲುವ ಶಕ್ತಿ ಅವನದಾಗುವುದು.

ಅರ್ಜುನ ತಪಸ್ಸಿಗಾಗಿ ಇಂದ್ರಶೀಲ ಪರ್ವತಕ್ಕೆ ಹೊರಟುನಿಂತ. ದ್ರೌಪದಿ ಹೃದಯ ತುಂಬಿ ನುಡಿದಳು. “ನಮ್ಮೆಲ್ಲರ ಅಳಿವು ಉಳಿವು ಸುಖ ದುಃಖ ನಿನ್ನ ಕೈಯಲ್ಲಿದೆ. ತಪಸ್ಸಿದ್ಧನಾಗಿ ಮರಳಿ ಬಾ. ಅಷ್ಟು ದಿನಗಳ ಕಾಲ ನಿನ್ನ ನಿರೀಕ್ಷೆಯೇ ನಮ್ಮ ತಪಸ್ಸು.”

ಅರವತ್ತರ ಅಂಚಿನಲ್ಲಿರುವ ಅರ್ಜುನ ಇಂದ್ರಕೀಲದಲ್ಲಿ ತಪಸ್ಸಿಗೆ ನಿಂತ. ಮುರು ದಿನಕ್ಕೊಮ್ಮೆ ಹಣ್ಣುಗಳ ಆಹಾರ. ಎರಡನೆಯ ತಿಂಗಳು ವಾರಕ್ಕೊಮ್ಮೆ. ಮೂರನೆಯ ತಿಂಗಳಲ್ಲಿ ಪಕ್ಷಕ್ಕೊಮ್ಮೆ. ನಾಲ್ಕನೆಯ ತಿಂಗಳು ಆಹಾರವನ್ನೇ ತೊರೆದುಬಿಟ್ಟ.

ಅರ್ಜುನನನ್ನು ಸೋಲಿಸಿದ ಕಿರಾತ

ಅರ್ಜುನನ ತಪಸ್ಸಿಗೆ ಶಿವನೂ ಮೆಚ್ಚಿದ. ಆಗ ಇಂದ್ರಕೀಲದಲ್ಲಿ ಒಬ್ಬ ಕಿರಾತ ಕಾಣಿಸಿಕೊಂಡ. ಆ ಸಮಯದಲ್ಲಿ ಮೂಕಾಸುರ ಅರ್ಜುನನನ್ನು ಮುಗಿಸಿಬಿಡಬೇಕೆಂದು ಹಂದಿಯ ರೂಪದಲ್ಲಿ ಅಲ್ಲಿಗೆ ಬಂದಿದ್ದ. ಅತ್ತ ಅರ್ಜುನ ಇತ್ತ ಕಿರಾತ ಇಬ್ಬರೂ ಏಕ ಕಾಲದಲ್ಲಿ ಆ ಹಂದಿಗೆ ಬಾಣ ಎಸೆದರು. “ಇದು ನಾನು ಹೊಡೆದ ಹಂದಿ ನೀನೇಕೆ ಹೊಡೆದೆ” ಎಂದು ಕಿರಾತ ಯುದ್ಧಕ್ಕೆ ಕಾಲುಕೆರೆದ. ಅರ್ಜುನ ಅದಕ್ಕೆಲ್ಲ ಹೆದರುವವನೆ? ಅವನು ಗಾಂಢೀವ ಧನಸ್ಸನ್ನು ಸಜ್ಜಗೊಳಿಸದ. ಆದರೆ ಅಚ್ಚರಿ! ಎಷ್ಟು ಬಾರಿ ಎಸೆದರೂ ಕಿರಾತನ ಮೈಯಲ್ಲಿ ಒಂದು ಗಾಯವು ಇಲ್ಲ! ಬಾಣಗಳೆಲ್ಲ ಬರಿದಾದವು. ಅರ್ಜುನ ದಂಗಾದ. ಜಗತ್ತಿನ ಸಾಮ್ರಾಜ್ಯವನ್ನೆಲ್ಲ ಗೆದ್ದ ವೀರನಿಗೆ ಒಬ್ಬ ಕಾಡು ಕಿರಾತನಿಂದ ಪರಾಭವ!

ಅರ್ಜುನ ಕತ್ತಿಯನ್ನೆಳೆದ. ಕಿರಾತನ ತಲೆಯ ಮೇಲೆ ಬೀಸಿ ಹೊಡೆದ. ಕತ್ತಿ ತುಂಡಾಗಿ ಕೆಳಗೆ ಬಿತ್ತು. ಮುಷ್ಠಿ ಬಿಗಿದು ಅವನ ಎದೆಗೆ ಗುದ್ದಿದ. ಕಿರಾತ ಮಿಸುಕಾಡಲಿಲ್ಲ. ಪ್ರತಿಯಾಗಿ ಅವನೂ ಅರ್ಜುನನ ಎದೆಗೆ ಗುದ್ದಿದ. ಓಹ್! ಅರ್ಜುನ ತಲೆ ತಿರುಗಿ ಕೆಳಕ್ಕೆ ಬಿದ್ದ!

ದಿಗ್‌ಭ್ರಾಂತನಾದ ಅರ್ಜುನ ಮಣ್ಣಿನಿಂದ ಶಿವನ ಮೂರ್ತಿಮಾಡಿ ಹೂವುಗಳಿಂದ ಅರ್ಚಿಸಿದ. ಅಚ್ಚರಿಯ ಮೇಲೆ ಅಚ್ಚರಿ. ಅವನು ಮಣ್ಣಿನ ಮೂರ್ತಿಗೆ ತೊಡಿಸಿದ ಹೂಮಾಲೆ ಕಿರಾತನ ಕೊರಳಲ್ಲಿ ಕಂಗೊಳಿಸುತ್ತಿತ್ತು. ಅರ್ಜುನನಿಗೆ ಜ್ಞಾನೋದಯವಾಯಿತು. ಕಿರಾತನ ಕಾಲಿಗೆರಗಿದ. “ತಪ್ಪಾಯಿತು, ಕ್ಷಮಿಸಬೇಕು ಭಗವಾನ್” ಎಂದ. ಯಾರಿಗಾಗಿ ಇಷ್ಟು ದಿನ ತಪಸ್ಸು ಮಾಡಿದನೋ ಆ ಶಿವನೇ ಪ್ರಸನ್ನನಾಗಿ ಎದುರು ನಿಂತಿದ್ದ.

ಶಿವ ಅರ್ಜುನನ್ನಪ್ಪಿಕೊಂಡ. ಆ ತನಕ ಮನುಷ್ಯ ಲೋಕದಲ್ಲಿ ಯಾರೂ ಅರಿಯದಿದ್ದ ಪಾಶುಪತಾಸ್ತ್ರವನ್ನು ಅವನಿಗೆ ನೀಡಿ ಅಂತರ್ಧಾನನಾದ. ಕೃತಾರ್ಥನಾದ ಅರ್ಜುನ ಮರಳಿ ಬಂದು ಗಂಧಮಾದನದಲ್ಲಿದ್ದ ತನ್ನ ಸೋದರರೊಡನೆ ಸೇರಿಕೊಂಡ.

ಧೂರ್ತರಿಗೆ ತಕ್ಕ ಶಿಕ್ಷೆ

ಪಾಂಡವರು ಪುನಃ ದ್ವೈತವನದಲ್ಲಿ ಬಂದು ನೆಲೆಸಿದರು. ಅವರ ಕಣ್ಣಮುಂದೆ ತನ್ನ ರಾಜವೈಭವವನ್ನು ಮೆರೆಸಿ ಹೊಟ್ಟೆಯುರಿಸಬೇಕು ಎಂದು ಬಯಸಿದ ದುರ್ಯೋಧನ ಸೇನಾಸಮೇತನಾಗಿ ಅಲ್ಲಿಗೆ ಬಂದ. ಗಂಧರ್ವರ ಕೈಯಲ್ಲಿ ಸಿಕ್ಕಿಹಾಕಿಕೊಂಡ. ಗಂಧರ್ವರು ಅವನನ್ನು ಸೆರೆಹಿಡಿದುಬಿಟ್ಟರು. ‘ಅವನು ಎಂಥವನೇ ಇರಲಿ ಆಪತ್ತಿನಲ್ಲಿದ್ದವರನ್ನು ರಕ್ಷಿಸುವುದು ನಮ್ಮ ಧರ್ಮ’ ಎಂದು ಯೋಚಿಸಿದ ಅರ್ಜುನ ತಾನು ಗಂಧರ್ವರೊಡನೆ ಹೋರಾಡಿ ದುರ್ಯೋಧನನನ್ನು ಬಿಡುಗಡೆಗೊಳಿಸಿದ. ಪಾಂಡವರ ಮುಂದೆ ಮೆರೆಯಬೇಕೆಂದು ಬಂದ ದುರ್ಯೋಧನ, ತಾನೇ ಮುಖಕ್ಕೆ ಮಂಗಳಾರತಿ ಮಾಡಿಸಿಕೊಂಡು ತೆಪ್ಪಗೆ ತೆರಳಿದ.

ಇನ್ನೊಮ್ಮೆ ಐವರು ಪಾಂಡವರು ಬೇಟೆಗೆಂದು ಹೋಗಿದ್ದಾಗ ಜಯದ್ರಥ ಅಲ್ಲಿಗೆ ಬಂದಿದ್ದ. ದ್ರೌಪದಿಯನ್ನು ಕಂಡು ಮೋಹಗೊಂಡು ಅವಳನ್ನು ಅಪಹರಿಸಿಕೊಂಡು ಹೋದ. ಆಗ ಮತ್ತೆ ಭೀಮಾರ್ಜುನರೇ ಅವನ ಬೆನ್ನುಹತ್ತಿ ದ್ರೌಪದಿಯನ್ನು ರಕ್ಷಿಸಿದರು. ಭೀಮ ಜಯದ್ರಥನನ್ನು ನೆಲಕ್ಕೆಳೆದು ಕೊಂದೇಬಿಡುತ್ತಿದ್ದನೇನೋ. ಆಗ ಅರ್ಜುನನೆ ತಡೆದ “ಅಣ್ಣ ಕೊಲ್ಲಬೇಡ. ಪಾಪ, ನಮ್ಮ ತಂಗಿ ದುಃಶಲೆಯ ಗಂಡನಲ್ಲವೆ? ಬದುಕಿರಲಿ.” ಜಯದ್ರಥ ತಲೆ ತಗ್ಗಿಸಿಕೊಂಡು, ಆದರೆ ಎದೆಯಲ್ಲಿ ಅರ್ಜುನನ ಬಗೆಗೆ ದ್ವೇಷ ತುಂಬಿಕೊಂಡು ಊರಿಗೆ ಮರಳಿದ. ಆದರೆ ಮತ್ತೆಂದೂ ಹೆಂಗಸರ ಮೇಲೆ ಕೈಮಾಡಲಿಲ್ಲ.

ಗಂಡೂ ಅಲ್ಲ ಹೆಣ್ಣೂ ಅಲ್ಲ

ಹನ್ನೆರಡು ವರ್ಷಗಳ ವನವಾಸ ಮುಗಿಯಿತು. ಇನ್ನೊಂದು ವರ್ಷ ಅಜ್ಞಾತವಾಸ. ಪಾಂಡವರೆಲ್ಲ ವೇಷ ಮರೆಸಿಕೊಂಡು ಮತ್ಸ್ಯದೇಶದ ಅರಸನಾದ ವಿರಾಟನಲ್ಲಿ ಕೆಲಸಕ್ಕೆ ಸೇರಿಕೊಂಡರು. ಅರ್ಜುನ ಅತ್ತ ಗಂಡೂ ಅಲ್ಲ, ಇತ್ತ ಹೆಣ್ಣೂ ಅಲ್ಲದ ನಪುಂಸಕ ವೇಷ ತೊಟ್ಟು ಬೃಹನ್ನಳೆ ಎಂಬ ಹೆಸರಿನಿಂದ ಅರಸನ ಅಂತಃಪುರ ಸೇರಿಕೊಂಡ. ಸೀರೆ ತೊಟ್ಟು ಕೈತುಂಬ ಶಂಖದ ಬಳೆ ತೊಟ್ಟು ವಿಚಿತ್ರವಾಗಿ ಹೆಣ್ಮಕ್ಕಳ ವಿನೋದಕ್ಕೆ ಪಾತ್ರನಾಗಿ ಓಡಾಡಿದ. ಎಂಥ ವೀರ ಹೇಗೆ ಬದುಕಬೇಕಾಯಿತು! ವಿಧಿಯ ಕೈವಾಡ ಅಗಮ್ಯವಾದದ್ದು.

ಅಜ್ಞಾತವಾಸದ ಅವಧಿ ಮುಗಿಯುತ್ತ ಬಂತು. ಪಾಂಡವರ ಸುಳಿವು ಸಿಕ್ಕದೆ ಕೌರವರಿಗೆ ಚಿಂತೆಗಿಟ್ಟುಕೊಂಡಿತು. ಅಷ್ಟರಲ್ಲಿ ಒಂದು ಸುದ್ಧಿ ಬಂತು. ವಿರಾಟನಗರದಲ್ಲಿ ಮಹಾ ವೀರನಾದ ಕೀಚಕನನ್ನು ಯಾರೋ ಗಂಧರ್ವ ಕೊಂದನಂತೆ. ಕೀಚಕನನ್ನು ಎದುರಿಸಬಲ್ಲ ವೀರ ಭೀಮನಲ್ಲದೆ ಇನ್ನೊಬ್ಬನಿಲ್ಲ ಎನ್ನುವುದು ಕೌರವರಿಗೆ ಚೆನ್ನಾಗಿ ಗೊತ್ತು. ಹಾಗಾಗಿ ಪಾಂಡವರು ವಿರಾಟನಗರದಲ್ಲೇ ಇರಬೇಕು ಎಂದು ಖಚಿತವಾಯಿತು. ಅವರು ವಿರಾಟರಾಜನ ಗೋವುಗಳನ್ನು ಹಿಡಿಯುವ ಯೋಜನೆ ಹಾಕಿ ಮತ್ಸ್ಯದೇಶದ ಮೇಲೆ ದಾಳಿ ಮಾಡಿದರು. ಪಾಂಡವರು ಅಲ್ಲಿದ್ದರೆ ವಿರಾಟನ ಕಡೆಯಿಂದ ಹೋರಾಟಕ್ಕೆ ಬಂದೇ ಬರುತ್ತಾರೆ. ಆಗ ಗುಟ್ಟು ಬಯಲಾಗುತ್ತದೆ ಎನ್ನುವ ಭರವಸೆ ಅವರಿಗೆ.

ಕುರುಸೇನೆ ಮತ್ಸ್ಯದೇಶಕ್ಕೆ ಮುತ್ತಿಗೆ ಹಾಕಿತು. ವಿರಾಟನ ಅರವತ್ತು ಸಾವಿರ ಗೋವುಗಳನ್ನು ಸುತ್ತುವರಿದು ಅಪಹರಿಸಿತು. ಸುದ್ದಿ ಕೇಳಿದ ರಾಜಕುಮಾರ ಉತ್ತರ ಹೆಂಗಸರ ಸಭೆಯಲ್ಲಿ ಕೊಚ್ಚಿಕೊಂಡ: “ನಾನು ಕೌರವರನ್ನು ಯುದ್ಧದಲ್ಲಿ ಸೋಲಿಸಬಲ್ಲೆ! ಆದರೆ ನನಗೆ ತಕ್ಕ ಸಾರಥಿ ಯಾರು?”

ಆಗ ಬೃಹನ್ನಳೆ ಮುಂದೆ ಬಂದು ರಥದ ಸಾರಥಿಯಾದಳು. ಉತ್ತರನನ್ನು ರಥದಲ್ಲಿ ಕುಳ್ಳಿರಿಸಿ ಯುದ್ಧರಂಗಕ್ಕೆ ನಡೆದೇಬಿಟ್ಟಳು. ಕಡಲಿನಂತೆ ಧುಮ್ಮಿಕ್ಕುವ ಕುರುಸೇನೆಯನ್ನು ಕಂಡ ಉತ್ತರ ತತ್ತರಿಸಿದ. “ದನಗಳು ಹೋದರೆ ಹೋಗಲಿ. ನಾನಂತೂ ಯುದ್ಧ ಮಾಡಲಾರೆ. ನಾನು ಬದುಕಬೇಕು” ಎಂದು ರಥದದಿಂದ ಹಾರಿ ಓಡತೊಡಗಿದ. ಬೃಹನ್ನಳೆ ಬಿಡಲಿಲ್ಲ. ಅವನ ಜಟ್ಟು ಹಿಡಿದು ರಥದಲ್ಲಿ ಕುಳ್ಳಿರಿಸಿದಳು. ಕುದುರೆ ಓಡಿಸುವ ಈ ಬೃಹನ್ನಳೆಯನ್ನು ಕಂಡು ಕುರುಸೇನೆಯ ವೀರರು ನಗೆಯಾಡಿದರು.

ಉತ್ತರನಿಗೆ ಧೈರ್ಯ ಹುಟ್ಟಿಸುವುದಕ್ಕಾಗಿ ಕಡೆಗೆ ಅರ್ಜುನ ಪರಿಚಯವನ್ನು ಹೇಳಬೇಕಾಯಿತು. ಈ ಬೃಹನ್ನಳೆ ಅರ್ಜುನನೇ ಎಂದು ತಿಳಿದಾಗ ಉತ್ತರನಿಗೆ ಧೈರ್ಯ ಬಂತು. ಉತ್ತರನ ರಥದಲ್ಲಿ ಕೂತು ಅರ್ಜುನ ಯುದ್ಧಕ್ಕೆ ಸಿದ್ಧನಾದ.

ಕರ್ಣ ಸೋತ, ಕೃಪಾಚಾರ್ಯರು ಸೋತರು. ದ್ರೋಣರು ಕೂಡ ತನ್ನ ಶಿಷ್ಯನ ಜೊತೆ ಹೋರಾಡಲಾರದೆ ಸೊತು ಮರಳಿದರು. ಅಶ್ವತ್ಥಾಮ ದುಃಶಾಸನ ಸೋತು ತೆರಳಿದರು. ಭೀಷ್ಮರು ಭೀಕರವಾಗಿ ಹೋರಾಡಿ ರಥದಲ್ಲಿ ಪ್ರಜ್ಞೆತಪ್ಪಿಬಿದ್ದರು. ದುರ್ಯೋಧನ ಎಲ್ಲ ತಮ್ಮಂದಿರೊಡನೆ ಬಂದು ಪೆಟ್ಟು ತಿಂದು ಮರಳಿದ. ಅಸಂಖ್ಯ ಸೇನೆಯೊಡನೆ ಬಂದಿದ್ದ ವೀರಾಧಿವೀರರನ್ನೆಲ್ಲ ಅರ್ಜುನನೊಬ್ಬನೇ ಸೋಲಿಸಿದ್ದ.

ಮಗನಿಂದ ವಿರಾಟರಾಜನಿಗೆ ಸಂಗತಿಯೆಲ್ಲ ತಿಳಿಯಿತು. ತನ್ನ ಮನೆಯಲ್ಲಿ ತೊತ್ತಿನಂತೆ ದುಡಿದವರು ಪಾಂಡವರು ಎಂದು ತಿಳಿದು ತುಂಬ ನೊಂದುಕೊಂಡ. ಅರ್ಜುನ ತಮ್ಮನ್ನು ಗೆಲ್ಲಿಸಿದ ಉಪಕಾರಕ್ಕೆ ಪ್ರತಿಯಾಗಿ ಮಗಳು ಉತ್ತರೆಯನ್ನು ಆತನಿಗೆ ಒಪ್ಪಿಸಿದ.

ಎಪ್ಪತ್ತು ತುಂಬಿದ ಅರ್ಜುನನಿಗೆ ಇನ್ನು ಮದುವೆಯೆ? ಅವನು ಆಕೆಯನ್ನು ತನ್ನ ಸೊಸೆಯಾಗಿ ಸ್ವೀಕರಿಸಿದ. ಹದಿನೆಂಟರ ಹರಯದ ಅಭಿಮನ್ಯುವಿಗೆ ಉತ್ತರೆ ಮಡದಿಯಾದಳು.

ಜಗತ್ತಿನ ಮೊದಲ ಮಹಾಯುದ್ಧ

ಅಜ್ಞಾತವಾಸವೂ ಮುಗಿಯಿತು. ಆದರೆ ದುರ್ಯೋಧನ ರಾಜ್ಯವನ್ನು ಮರಳಿಸಲು ಒಪ್ಪಲಿಲ್ಲ. ಕೃಷ್ಣನ ಸಂಧಾನವು ವ್ಯರ್ಥವಾಯಿತು. ಕುರುಕ್ಷೇತ್ರದಲ್ಲಿ ಕೌರವರ ಹನ್ನೊಂದು ಅಕ್ಷೋಹಿಣಿ ಸೇನೆ ಹಾಗೂ ಪಾಂಡವರು ಏಳು ಅಕ್ಷೋಹಿಣಿ ಸೇನೆ ಯುದ್ಧಕ್ಕೆಂದು ಎದುರಬದುರಾಗಿ ನಿಂತವು. ಕೃಷ್ಣನೇ ಅರ್ಜುನನ ರಥದ ಸಾರಥಿ. 

ಕೃಷ್ಣನೇ ಅರ್ಜುನನ ರಥದ ಸಾರಥಿ.

 ಭೀಷ್ಮರ ನಾಯಕತ್ವದಲ್ಲಿ ಹತ್ತು ದಿನಗಳ ಕಾಲ ಭೀಕರ ಯುದ್ಧ ನಡೆಯಿತು. ಮೊದಲ ದಿನ ಯುದ್ಧರಂಗದಲ್ಲಿ ನೆರೆದ ಬಂಧು ಬಾಂಧವರನ್ನು ಕಂಡು “ಬಂಧುಗಳನ್ನು ಕೊಂದು ರಾಜ್ಯ ಪಡೆಯಬೇಕೆ?” ಎಂದು ದುಃಖಿತನಾದ ಅರ್ಜುನನನ್ನು ಶ್ರೀಕೃಷ್ಣ ಸಂತೈಸಿದನು.

“ಅನ್ಯಾಯವಾಗಿ ಯುದ್ಧಕ್ಕೆ ಕಾಲುಕೆರೆದವರನ್ನು ಸದೆಬಡಿಯುವುದು ಕ್ಷತ್ರಿಯ ಧರ್ಮ. ನಿಶ್ಚಿಂತೆಯಿಂದ ಹೋರಾಡು. ನೀನು ಯಾರನ್ನೂ ಕೊಲ್ಲುವುದಿಲ್ಲ. ಏಕೆಂದರೆ ಆತ್ಮ ಸಾಯುವುದಿಲ್ಲ. ನೀನು ಯುದ್ಧಮಾಡಲೊಲ್ಲೆ ಎಂದರೂ ಇವರು ಬದುಕಲಾರರು. ಏಕೆಂದರೆ ಇವರ ಆಯಸ್ಸು ಮುಗಿದಿದೆ. ಇದು ವಿಧಿನಿಯತಿ. ನೀನು ಮಾಡಿದೆ ಎಂಬ ಹಮ್ಮು ಬೇಡ. ನಿಯತಿಯ ಸಂಕಲ್ಪಕ್ಕೆ ಅನುಗುಣವಾಗಿ, ಭಗವದರ್ಪಣ ಬುದ್ಧಿಯಿಂದ ನೀನು ನಿನ್ನ ಕರ್ತವ್ಯ ಮಾಡು.” ಶ್ರೀಕೃಷ್ಣನ ಈ ಸಂದೇಶವೇ ಭಗವದ್ಗೀತೆ ಎಂದು ಜಗತ್‌ಪ್ರಸಿದ್ಧ ಮಹಾಗ್ರಂಥವಾಯಿತು.

ಕೃಷ್ಣನ ವಾಣಿಯಿಂದ ಅರ್ಜುನನ ಮೋಹವಳಿಯಿತು. ಅವನು ಯುದ್ಧಕ್ಕೆ ಅಣಿಯಾದ. ಅಜ್ಜ ಭೀಷ್ಮರೊಡನೆಯೆ ಅರ್ಜುನ ಹೋರಾಡಬೇಕಾಯಿತು. ಈ ತನಕ ಎಲ್ಲೂ ಎಂದೂ ನಡೆಯದ ಘೋರ ಯುದ್ಧ. ಇಡಿಯ ದಿನ ಹೊರಾಡಿದರೂ ಭೀಷ್ಮರೂ ಸೋಲಲಿಲ್ಲ. ಅರ್ಜುನನೂ ಸೋಲಲಿಲ್ಲ.

ಇನ್ನೊಂದು ದಿನವೂ ಹೀಗೆಯೇ ಆಯಿತು. ಭೀಷ್ಮರು ಹಾರಿಸಿದ ರುಂಡಗಳಿಗೆ ಲೆಕ್ಕವಿಲ್ಲ. ನೆತ್ತರ ಹೊಳೆಯಲ್ಲಿ ಕುದುರೆಗಳ, ಆನೆಗಳ ರುಂಡ-ಮುಂಡಗಳು ತೇಲಾಡಿದವು. ರಥಗಳು ನೆತ್ತರ ಕೆಸರಲ್ಲಿ ಹೂತುಹೋದವು. ಅರ್ಜುನ ಅಜ್ಜನ ಮುಂದೆ ಮೃದುವಾಗಿ ನಡೆದುಕೊಳ್ಳುತ್ತಿದ್ದಾನೆ, ಹೋರಾಡಲು ಹಿಂಜರಿಯುತ್ತಿದ್ದಾನೆ ಎಂದು ಕೃಷ್ಣನಿಗೆ ಅರಿವಾಯಿತು. ಅವನು ರಥದಿಂದ ಜಿಗಿದು ಕೈಯಲ್ಲಿ ಚಕ್ರ ಹಿಡಿದು ಭೀಷ್ಮನಿದ್ದಲ್ಲಿಗೆ ನಡೆದೇಬಿಟ್ಟ. ನಡೆಗೆ ನೆಲ ನಡುಗಿತು. ಕೌರವಸೇನೆ ತತ್ತರಿಸಿತು. ಭೀಷ್ಮರು ಕೈಜೋಡಿಸಿದರು. ಅರ್ಜುನ ಓಡಿಬಂದು ಕೃಷ್ಣನ ಕಾಲನ್ನು ಬಿಗಿಹಿಡಿದು ಬೇಡಿಕೊಂಡ. “ದಯವಿಟ್ಟು ಶಾಂತನಾಗು. ನೀನು ಕೋಪಗೊಂಡರೆ ನಮ್ಮ ಗತಿಯೇನು? ಕೌರವರ ಸೇನೆಯನ್ನು ನಾನು ನೋಡಿಕೊಳ್ಳುತ್ತೇನೆ.”

ಕೃಷ್ಣನ ನಾಟಕ ಫಲಿಸಿತ್ತು. ಅವನು ಪ್ರಸನ್ನನಾಗಿ ರಥವೇರಿದ. ಅರ್ಜುನ ಆವೇಶಗೊಂಡವನಂತೆ ಹೋರಾಡಿದ. ಭೀಷ್ಮರೂ ಯೋಚಿಸುವಂತಾಯಿತು. ಕೌರವಸೇನೆ ತತ್ತರಿಸಿ ದಿಕ್ಕುದಿಕ್ಕಿಗೆ ಚದುರಿಹೋಯಿತು.

ಇನ್ನೊಂದು ದಿನ ಅಶ್ವತ್ಥಾಮನಿಗೂ ಅರ್ಜುನನಿಗೂ ಯುದ್ಧವಾಯಿತು. ಅಶ್ವತ್ಧಾಮನ ಆಯುದವೆಲ್ಲ ಬರಿದಾಯಿತು. ಮೈಯ ಕವಚ ಕಳಚಿಬಿತ್ತು. ಆದರೂ ಅವನು ಕಂಗೆಡಲಿಲ್ಲ. ಈ ದೃಶ್ಯವನ್ನು ಕಂಡು ಅರ್ಜುನನೂ ಮೆಚ್ಚಿಕೊಂಡ. ಮಹಾವೀರರನ್ನೆಲ್ಲ ಸೋಲಿಸಿದ ಅರ್ಜುನ ಅಂದು ೨೫ ಸಾವಿರ ಮಹಾರಥರನ್ನು ಕೊಂದ.

ಆರು ದಿನ ಕಳೆದರೂ ಯುದ್ಧ ನಿರ್ಣಾಕ ಘಟ್ಟವನ್ನು ಮುಟ್ಟಲಿಲ್ಲ. ಏಳನೆಯ ದಿನ ಭೀಷ್ಮರನ್ನು ಮುಂದೆ ಮಾಡಿಕೊಂಡ ಇಡಿಯ ಕೌರವಸೇನೆ ಅರ್ಜುನನ ರಥದೆಡೆಗೆ ನುಗ್ಗಿತು. ಗಾಂಡೀವ ಹಿಡಿದು ನಿರ್ಭಯವಾಗಿ ನಿಂತ ಅರ್ಜುನ ಕೈಯಲ್ಲಿ ಚಾಟಿ ಹಿಡಿದು ನಗುತ್ತ ನಿಂತ ಕಷ್ಣ. ಈ ದೃಶ್ಯವನ್ನು ಕಂಡೇ ಕೌರವಸೇನೆಯ ಎದೆ ನಡುಗಿತು. ಮತ್ತೆರಡು ದಿನ ಕಳೆಯಿತು. ಒಂಬತ್ತನೆಯ ದಿನ ಪುನಃ ಅರ್ಜುನ ಭೀಷ್ಮರೊಡನೆ ಹೊರಾಡಿದ. ಕೃಪಾಚಾರ್ಯರನ್ನು ಕಂಗೆಡಿಸಿದ. ತ್ರಿಗರ್ತದ ರಾಜ ಸುಶರ್ಮನ ಅಪಾರ ಸೇನೆಯನ್ನು ಸಂಹರಿಸಿದ. ಯಾರ ಪ್ರಯತ್ನವೂ ಅರ್ಜುನನ ಶಕ್ತಿಯ ಮುಂದೆ ನಡೆಯಲಿಲ್ಲ.

ಹತ್ತನೆಯ ದಿನವಂತೂ ಭೀಷ್ಮರ ಉತ್ಸಾಹ ಇಮ್ಮಡಿಸಿತ್ತು. ದಿನವು ಹತ್ತು ಸಾವಿರ ವೀರರನ್ನು ಕೊಂದು ಶಿಬಿರಕ್ಕೆ ಮರಳುತ್ತಿದ್ದ ಭೀಷ್ಮರು ಅಂದು ಹತ್ಯಾಕಾಂಡವನ್ನೇ ನಡೆಸಿದರು. ಸಾವಿರ ಸಾವಿರ ಆನೆ ಕುದುರೆಗಳನ್ನು ಕೆಡೆದುರುಳಿಸಿದರು. ಸಾವಿರಾರು ರಾಜ ಪುತ್ರರನ್ನು ಕೊಂದರು. ಎರಡು ಲಕ್ಷ ಸೈನಿಕರನ್ನು ತರಿದುಹಾಕಿದರು. ಆಗ ಅರ್ಜುನ ಶಿಖಂಡಿಯನ್ನು ಮುಂದೆ ಮಾಡಿ ಭೀಷ್ಮರನ್ನು ಅಡ್ಡಗಟ್ಟಿದ.

ಶಿಖಂಡಿ ಧೃಷ್ಟದ್ಯುಮ್ನನ ಸೋದರ. ಮೊದಲು ಹೆಣ್ಣಾಗಿದ್ದು ಆಮೇಲೆ ಗಂಡಾದವ. ಇಂಥವರ ಜೊತೆ ಯುದ್ಧ ಮಾಡುವುದಿಲ್ಲ ಎಂದು ಭೀಷ್ಮರು ಪ್ರತಿಜ್ಞೆ ಮಾಡಿದ್ದರು. ಹಾಗಾಗಿ ತನ್ನೆದುರು ಶಿಖಂಡಿಯನ್ನು ಕಂಡ ಭೀಷ್ಮರು ಬಾಣಪ್ರಯೋಗವನ್ನು ತಡೆದರು. ಈ ಸಂದರ್ಭದಲ್ಲಿ ಅರ್ಜುನಾದಿಗಳು ಅವರ ಮೇಲೆ ಶರವೃಷ್ಟಿ ಸುರಿಸಿದರು. ಭೀಷ್ಮರೂ ಅರ್ಜುನನ ಮೇಲೆ ಬಾಣವೃಷ್ಟಿ ಕರೆದರು. ಆದರೂ ಕೈಸಾಗಲಿಲ್ಲ. ಭೀಷ್ಮರ ಕೊನೆಯ ಕ್ಷಣ ಸಮೀಸಿತ್ತು. ಅವರ ಕೈಯ ಆಯುಧ ಕುಸಿಯಿತು. ಅವರು ರಥದಿಂದ ನೆಲಕ್ಕೆ ಉರುಳಿದರು. ಮೈಗೆ ಚುಚ್ಚಿದ ಬಾಣವೇ ಅವರ ಮಲಗು ಮಂಚವಾಯಿತು.

ಭೀಷ್ಮರು ಶರಶಯ್ಯೆಯಲ್ಲಿ ಉತ್ತರಾಯಣಕ್ಕಾಗಿ ಕಾದರು. ಭೀಷ್ಮರನ್ನು ಕಳೆದುಕೊಂಡ ಉಭಯ ಸೇನೆಗಳೂ ದುಃಖಾಕ್ರಾಂತವಾಗಿ ಶಿಬಿರಕ್ಕೆ ಮರಳಿದವು.

ಭೀಷ್ಮರ ಹಿಂದೆ ದ್ರೋಣರು

ದ್ರೋಣಾಚಾರ್ಯರ ನಾಯಕತ್ವದಲ್ಲಿ ಮತ್ತೆ ಐದು ದಿನಗಳು ಯುದ್ಧ. ಯುವಕರೂ ನಾಚುವಂತೆ ದ್ರೋಣರು ಹೋರಾಡಿದರು. ಎದುರು ಬಂದವರನ್ನೆಲ್ಲ ಸವರುತ್ತ ಯುಧಿಷ್ಠಿರನಿದ್ದಲ್ಲಿಗೇ ಬಂದರು. ಇನ್ನೇನು ಯುಧಿಷ್ಠಿರ ಸೆರೆಸಿಗಬೇಕು, ಅಷ್ಟರಲ್ಲಿ ಅರ್ಜುನ ಧಾವಿಸಿ ಬಂದು ಗುರುಗಳನ್ನು ತಡೆದ. ದ್ರೋಣರು ವಿಫಲ ಪ್ರಯತ್ನರಾಗಿ ಮರಳಿದರು.

ತ್ರಿಗರ್ತದ ಸುಶರ್ಮನ ಪಡೆ ಲಕ್ಷಲಕ್ಷ ಸಂಖ್ಯೆಯದು. ಸಂಶಪ್ತಕ ಗಣ ಎಂದು ಈ ಸೇನೆಗೆ ಹೆಸರು. ಇವರು ಅರ್ಜುನನನ್ನು ದೂರ ಕರೆದು ಯುದ್ಧ ಮಾಡುವುದೆಂದು ತೀರ್ಮಾನವಾಯಿತು. ಅರ್ಜುನನಿಲ್ಲದಿದ್ದಾಗ ಯುಧಿಷ್ಠಿರನನ್ನು ಸುಲಭವಾಗಿ ಸೆರೆಹಿಡಿಯಬಹುದು ಎಂದು ದ್ರೋಣರು ಹಂಚಿಕೆ. ಹಂಚಿಕೆಯಂತೆ ಸಂಶಪ್ತಕರು ಅರ್ಜುನನನ್ನು ಆಹ್ವಾನಿಸಿದರು. ಅವನು ಅವರ ಬೆನ್ನಟ್ಟಿಹೋದ.

ಸಂಶಪ್ತಕರು ಸಾವಿರಸಾವರ ಸಂಖ್ಯೆಯಲ್ಲಿ ಸತ್ತು ಬಿದ್ದರು. ಆದರೂ ಅವರ ಸಂಖ್ಯೆ ಅಪಾರ. ಆಗ ಅರ್ಜುನ ಒಂದು ಹೊಸ ಯುದ್ಧ ತಂತ್ರವನ್ನೇ ಹೂಡಿದ. ಅವನು ಸಂಶಪ್ತಕರ ಮೇಲೆ ಸಂಮೋಹನಾಸ್ತ್ರವನ್ನು ಹೂಡಿದ. ಅದರಿಂದ ಮೋಹಿತರಾದ ಅವರು ತಮ್ಮೊಳಗೇ ಪರಸ್ಪರ ಒಬ್ಬರನ್ನೊಬ್ಬರು ನೀನು ಕೃಷ್ಣ ನೀನು ಅರ್ಜುನ ಎಂದು ಹೊಡೆದಾಡಿಕೊಂಡು ಸತ್ತರು. ಉಳಿದವರನ್ನು ವಾಯುವ್ಯಾಸ್ತ್ರದಿಂದ ಚದುರಿಸಿಬಿಟ್ಟ. ಅವರು ತರಗಲೆಯಂತೆ ಎತ್ತೆತ್ತಲೋ ಚದುರಿಹೊದರು.

ಅರ್ಜುನ ಯುಧಿಷ್ಠಿರನ ರಕ್ಷಣೆಗಾಗಿ ಮರಳಿ ಬಂದ. ಭಗದತ್ತ ಅರ್ಜುನನ ರಥದ ಮೇಲೆ ತನ್ನ ಆನೆಯನ್ನು ಓಡಿಸಿದ. ಅರ್ಜುನ ಅಳುಕಲಿಲ್ಲ. ಅವನ ಬಾಣಗಳು ಆನೆಯ ಮರ್ಮವನ್ನು ಭೇದಿಸಿದವು; ಭಗದತ್ತನ ಬಿಲ್ಲುಬಾಣಗಳನ್ನು ಮುರಿದವು. ಅವನು ಅಂಕುಶದಲ್ಲಿ ವೈಷ್ಣವಾಸ್ತ್ರವನ್ನು ಅಭಿಮಂತ್ರಿಸಿ ಅರ್ಜುನನ ಮೇಲೆಸೆದ. ಅರ್ಜುನನನ್ನು ತಡೆದು ಕೃಷ್ಣ ಅದಕ್ಕೆ ಕೊರಳೊಡ್ಡಿದ. ಅದು ಅವನ ಕೊರಳಲ್ಲಿ ವನಮಾಲೆಯಾಗಿ ಶೋಭಿಸಿತು.

ಗಾಯಗೊಂಡ ಆನೆ ಹುಚ್ಚೆದ್ದು ಓಡತೊಡಗಿತು. ಅರ್ಜುನ ಅದರ ಹಣೆಗೆ ಬಾಣ ಎಸೆದ. ಆನೆ ನೆಲಕ್ಕುರುಳಿತು. ಇನ್ನೊಂದು ಬಾಣ ಆನೆಯ ಮೇಲಿದ್ದ ಭಗದತ್ತನನ್ನೂ ಮುಗಿಸಿತು.

ಹದಿಮೂರನೆಯ ದಿನ ಅರ್ಜುನ ಪುನಃ ಸಂಶಪ್ತಕರ ಜೊತೆ ಹೋರಾಡುತ್ತಿದ್ದ. ಇತ್ತ ಅವನ ಮಗ ಅಭಿಮನ್ಯು ಏಕಾಂಗಿಯಾಗಿ ಹೋರಾಡುತ್ತಿದ್ದಾಗ ಕೌರವ ಸೇನೆಯ ವಿರರೆಲ್ಲ ಸೇರಿ ವಂಚನೆಯಿಂದ ಕೊಂದರು. ಅವನನ್ನು ಕೋಟೆಯ ಒಳಗೆ ಸಿಲುಕಿಸಿ ಹಾಕುವ ತಂತ್ರ ಹೂಡಿದವ ಜಯದ್ರಥ.

ಸಂಜೆ ಮರಳಿದಾಗ ಅರ್ಜುನನಿಗೆ ಈ ಸುದ್ಧಿ ತಿಳಿಯಿತು. ಮರುದಿನ ಸಂಜೆಯ ಒಳಗೆ ಜಯದ್ರಥನನ್ನು ಕೊಲ್ಲುವುದಾಗಿ ಅರ್ಜುನ ಪ್ರತಿಜ್ಞೆ ಮಾಡಿದ.

ಮರುದಿನ ಮುಂಜಾನೆ ಶಕಟವ್ಯೂಹ, ಪದ್ಮವ್ಯೂಹ, ಚಕ್ರವ್ಯೂಹಗಳಾಚೆ ಜಯದ್ರಥನನ್ನು ನಿಲ್ಲಿಸಿ ದ್ರೋಣರು ಯುದ್ಧಕ್ಕೆ ಬಂದರು. ಅರ್ಜುನ ಸೇನೆಯ ಕೋಟೆ ಮುರಿಯುತ್ತ ಮುಂದೆ ನಡೆದ. ದುರ್ಯೋಧನನ ತಮ್ಮ ದುರ್ಮರ್ಷಣ – ದಃಶಾಸನ ಅಡ್ಡಗಟ್ಟಿದರು. ಅರ್ಜುನ ಅವರನ್ನು ಸುಲಭದಲ್ಲಿ ಸೋಲಿಸಿದ. ಆನೆಗಳ ಪಡೆಯನ್ನು ಅವನ ಮೇಲೆ ಕಳಿಸಿದರು. ಅವನು ಬಾಣಗಳಿಂದಲೆ ಅವುಗಳನ್ನು ಚದುರಿಸಿದ. ದ್ರೋಣರು ತಡೆದರು. ಅವರನ್ನೂ ಅಲಕ್ಷಿಸಿ ಅರ್ಜುನ ಮುಂದೆ ಹೋದ. ದಾರಿಯಲ್ಲಿ ಮತ್ತೆ ಅಡ್ಡಾದ ಕಾಂಬೋಜ (ಕಾಬುಲ್)ದ ರಾಜ ಸುದಕ್ಷಿಣ ಅರ್ಜುನನ ಬಾಣಕ್ಕೆ ಜೀವ ತೆತ್ತ. ಕೌರವರ ದೊಡ್ಡ ಪಡೆಯೇ ಅರ್ಜುನನನ್ನು ಸುತ್ತುವರಿಯಿತು. ಅರ್ಜುನನ ಬಾಣ ಎದುರು ಬಂದ ಯಾವ ಸೈನಿಕರನ್ನೂ ಬದುಕಗೊಡಲಿಲ್ಲ. ಕೊನೆಯದಾಗಿ ದ್ರೋಣರು ಅಭಿಮಂತ್ರಿಸಿದ ಕವಚ ತೊಟ್ಟು ದುರ್ಯೋಧನನೇ ಎದುರು ಬಂದ. ಆದರೆ ಅರ್ಜುನನ ಮುಂದೆ ಅವನಾಟವೂ ನಡೆಯಲಿಲ್ಲ. ಮಂತ್ರಿಸಿದ ಕವಚವೂ ಉಪಯೋಗಕ್ಕೆ ಬೀಳಲಿಲ್ಲ. ರಥ ಮುರಿಯಿತು. ಸಾರಥಿ ಸತ್ತ. ಕುದುರೆಗಳು ನೆಲಕಂಡವು. ಬಿಲ್ಲು ತುಂಡಾಯಿತು. ಆಗ ಇಡಿಯ ಕೌರವ ಸೇನೆ ಆನೆ – ಕುದುರೆಗಳೊಡನೆ ಅರ್ಜುನನಿಗೆ ಅಡ್ಡಾಯಿತು. ಯಾರಿಗೂ ಏನೂ ಕಾಣಿಸದಂಥ ತುಮುಲಯುದ್ಧ. ಎಲ್ಲೆಡೆಯೂ ಚೀತ್ಕಾರ, ಸಿಂಹನಾದ; ಎಲ್ಲೆಡೆಯೂ ಬಾನಗಳ ಸುರಿಮಳೆ.

ಸಂಜೆಯಾಗುತ್ತ ಬಂದಿದೆ. ಕತ್ತಲಾಗುವುದರೊಳಗೆ ಜಯದ್ರಥನನ್ನು ಕೊಲ್ಲಲೇಬೇಕು. ಆಗ ಕೃಷ್ಣ ತನ್ನ ಯೋಗಮಾಯೆಯಿಂದ ಕತ್ತಲು ಬರಿಸಿದ, ಸೂರ್ಯ ಕಂತಿದ ಎಂದು ತಿಳಿದ ಕೌರವಸೇನೆ ಸಂತಸದಲ್ಲಿ ಮೈಮರೆಯಿತು. ಜಯದ್ರಥ ಬದುಕಿದೆ ಎಂದು ನಿಟ್ಟುಸಿರಿಟ್ಟು ಹೊರಕ್ಕೆ ಬಂದ. ಅಷ್ಟರಲ್ಲಿ ಅರ್ಜುನನ ಬಾಣ ಅವನ ತಲೆಯನ್ನು ಕತ್ತರಿಸಿತ್ತು. ಮತ್ತೆ ಮುಗಿಲ ಬೆಳಗಿತ್ತು.

ಬೇಸ್ತುಬಿದ್ದು ಕೌರವರು ಮತ್ತೆ ಯುದ್ಧಕ್ಕೆ ಅಣಿಯಾದರು. ಅಂದು ಸಂಜೆ ಕೂಡ ಯುದ್ಧ ನಿಲ್ಲಲಾಗದು, ರಾತ್ರಿಯೂ ಯುದ್ಧ ನಡೆಯಬೇಕು ಎಂದು ದ್ರೋಣರು ಆಜ್ಞಾಪಿಸಿದರು. ಬಳಲಿದ ಸೇನೆ ದೊಂದಿಯ ಬೆಳಕಿನಲ್ಲಿ ಯುದ್ಧ ಮುಂದುವರಿಸಿತು.

ರಾತ್ರಿ ಯುದ್ಧದಲ್ಲಿ ಅರ್ಜುನನೊಡನೆ ಹೋರಾಡಿದ ಕರ್ಣ ಸೋತು ಹಿಮ್ಮೆಟ್ಟಿದ. ಎರಡೂ ಕಡೆಯ ಅನೇಕ ಮಹಾವೀರರು ಸತ್ತರು. ಬೆಳಗಾಯಿತು. ದ್ರೋಣರಿಗು ಅರ್ಜುನನಿಗೂ ಭೀಕರ ಯುದ್ಧವಾಯಿತು. ದ್ರೋಣರು ಮನದಲ್ಲೇ ಅರ್ಜುನನ ಸಾಹಸವನ್ನು ಮೆಚ್ಚಿಕೊಂಡರು. ಇಂಥ ಗುರು — ಇಂಥ ಶಿಷ್ಯ ಇತಿಹಾಸದಲ್ಲಿ ಇನ್ನೆಲ್ಲಿ ಕಾಣಬೇಕು? ಸುದೀರ್ಘವಾದ ಯುದ್ಧ ನಡೆದರು ಅರ್ಜುನ ಕಂಗೆಡದಿದ್ದನ್ನು ಕಂಡು ದ್ರೋಣರೇ ರಥವನ್ನು ಬೇರೆಡೆಗೆ ನಡೆಸಿದರು. ಅರ್ಜುನ ಕೌರವಸೇನೆಯನ್ನು ನಿರ್ನಾಮ ಮಾಡತೊಡಗಿದ. ಕೊನೆಗೂ ಅಶ್ವತ್ಥಾಮ ಸತ್ತ ಎಂಬ ತಪ್ಪು ತಿಳುವಳಿಕೆಯಿಂದ ದ್ರೋಣರು ಶಸ್ತ್ರಸಂನ್ಯಾಸ ಮಾಡಿ ದೇಹತ್ಯಾಗ ಮಾಡಿದರು.

ಸೂರ್ಯಪುತ್ರ ಕಂತಿದ

ಮತ್ತೆ ಎರಡು ದಿನಗಳ ಯುದ್ಧಕ್ಕೆ ಕರ್ಣನ ನಾಯಕತ್ವ. ಆದರೆ ಅರ್ಜುನನ ಬಾಣಗಳನ್ನು ಎದುರಿಸಲಾರದೆ ಕರ್ಣ ಹಿಂಜರಿದ. ಮಗಧ ದೇಶದ ರಾಜಸೋದರರಾದ ದಂಡ ದಂಡಧಾರರು ಪ್ರಾಣತೆತ್ತರು. ಅಳಿದುಳಿದ ಸಂಶಪ್ತಕ ಸೇನೆಯನ್ನು ಅರ್ಜುನ ಸದೆಬಡಿದ. ಕೌರವಸೇನೆ ಹೆದರಿ ಹಿಮ್ಮೆಟ್ಟಿತು.

ಹದಿನೇಳನೆಯ ದಿನ ಕರ್ಣನ ರಥಕ್ಕೆ ಶಲ್ಯನ ಸಾರಥ್ಯ. ಅಂದು ಕರ್ಣ ತೋರಿದ ಪರಾಕ್ರಮಕ್ಕೆ ಎಣೆಯೇ ಇಲ್ಲ. ಈ ದಿನವೇ ಅಶ್ವತ್ಥಾಮ ಪುನಃ ಅರ್ಜುನನೊಡನೆ ಹೋರಾಡಿದ. ಅರ್ಜುನ ಅವನ ಧನಸ್ಸನ್ನು ಮುರಿದ. ಛತ್ರ-ಪತಾಕೆಗಳನ್ನು ಮುರಿದ. ಖಡ್ಗ ತುಂಡಾಯಿತು. ಗದೆಯೂ ಮುರಿಯಿತು. ಕೊರಳ ಪಕ್ಕೆಲಬಿಗೆ ತಾಗಿದ ಬಾನದಿಂದ ಅಶ್ವತ್ಥಾಮ ಬವಳಿ ಬಂದು ಕುಸಿದ.

ಕರ್ಣಪುತ್ರ ವೃಷಸೇನ ಬಂದ. ಅರ್ಜುನನೊಡನೆ ಹೋರಾಡಿ ಸತ್ತ. ತಡೆಯಲಾರದೆ ಸ್ವತಃ ಕರ್ಣನೇ ಬಂದ. ಕರ್ಣಾರ್ಜುನರ ತುಮುಲವನ್ನು ಕಂಡೇ ಕೌರವ ಸೇನೆ ಕಂಗೆಟ್ಟಿ ಚದುರಿತು. ನೋಡಿದವರ ಎದೆ ನಡುಗಿಸುವಂಥ ಯುದ್ಧ. ಇತಿಹಾಸ ಕೇಳಿ ಕಂಡರಿಯದ ಯುದ್ಧ. ಆದರೇನು? ವಿಧಿಯೇ ಕರ್ಣನ ಮೇಲೆ ಮುನಿದಿತ್ತು. ಸಂಜೆಯ ಹೊತ್ತು. ಕರ್ಣನ ರಥದ ಗಾಲಿ ಕೆಸರಲ್ಲಿ ಹೂತುಹೋಯಿತು. ಅವನ ಅದೃಷ್ಟದ ಗಾಲಿಯೇ ಮುರಿದಿತ್ತು. ಗಾಲಿಯೆನ್ನೆತ್ತಲೆಂದು ಅವನು ರಥದಿಂದಿಳಿದು ಬಗ್ಗಿದಾಗ ಅರ್ಜುನ ಅವನ ತಲೆಯನ್ನು ಬಾಣದಿಂದ ತುಂಡರಿಸಿದ. ಸೂರ್ಯಪುತ್ರನೆಂದು ಪ್ರಸಿದ್ಧನಾದ ಕರ್ಣ ಉರುಳಿದ. ಅತ್ತ ಸೂರ್ಯ ಕೂಡ ಮುಳುಗಿದ. ಭಯಗ್ರಸ್ತವಾದ ಕೌರವಸೇನೆ ಶಿಬಿರಕ್ಕೆ ಧಾವಿಸಿತು. 

ಅರ್ಜುನ ಕರ್ಣನ ತಲೆಯನ್ನು ಬಾಣದಿಂದ ತುಂಡರಿಸಿದ.

ಯುದ್ಧ ಮುಗಿದರೂ ಚಿಂತೆ ಬಿಡಲಿಲ್ಲ

ಕೊನೆಯ ದಿನ. ಕೌರವರ ಸೇನೆಗೆ ಶಲ್ಯನೇ ನಾಯಕನಾದ. ಕೌರವರ ಎಲ್ಲ ಸನ್ನಾಹವೂ ವಿಫಲವಾಯಿತು. ಸಂಶಪ್ತಕರ ಮುಖಂಡ ಸುಶರ್ಮ ಮತ್ತು ಅವನ ೪೫ ಮಂದಿ ಮಕ್ಕಳನ್ನು ಅರ್ಜುನ ಕೊಂದ. ದುರ್ಯೋಧನನ ತಮ್ಮಂದಿರನ್ನೆಲ್ಲ ಭೀಮನೊಬ್ಬನೇ ಕೊಂದಿದ್ದ. ಹದಿನೆಂಟು ದಿನದಲ್ಲಿ ಹದಿನೆಂಟು ಅಕ್ಷೋಹಿಣಿ ಸೇನೆ ಬರಿದಾಗಿತ್ತು. ದುರ್ಯೋಧನನೂ ತೊಡೆ ಮುರಿದು ಬಿದ್ದ.

ಯುದ್ಧ ಮುಗಿಯಿತು. ಆದರೆ ಹತ್ಯೆ ಮುಗಿಯಲಿಲ್ಲ. ರಾತ್ರಿ ಹೊತ್ತು ಅಶ್ವತ್ಥಾಮ ಪಾಂಡವರ ಶಿಬಿರಕ್ಕೆ ಬೆಂಕಿಯಿಟ್ಟ. ಪಾಂಡವರ ಮಕ್ಕಳನ್ನೂ ಧೃಷ್ಟದ್ಯಮ್ನ ಮುಂತಾದವರನ್ನೂ ಕೊಂದುಹಾಕಿದ. ಪಾಂಡವರು ಬೆನ್ನಟ್ಟಿದಾಗ ಬ್ರಹ್ಮಾಸ್ತ್ರಬಿಟ್ಟ. ಪ್ರಜಾವರ್ಗನ್ನೇ ನಿರ್ಮೂಲ ಮಾಡಬಲ್ಲ ಅಪಾಯಕಾರಿಯಾದ ಈ ಅಸ್ತ್ರವನ್ನು ಅರ್ಜುನ ಉಪಸಂಹರಿಸಿ ಅಶ್ವತ್ಥಾಮನ ಅಜಾಗರೂಕತೆಯಿಂದ ಆಗಬಹುದಾಗಿದ್ದ ಮಹಾನ್‌ ಅನಿಷ್ಠವನ್ನು ತಪ್ಪಿಸಿದ.

ಯುದ್ಧ ಮುಗಿಯಿತು. ಶಾಂತಿ ನೆಲೆಸಿತು. ಯುಧಿಷ್ಠಿರನಿಗೆ ಪಟ್ಟಾಭಿಷೇಕವಾಯಿತು. ಭಿಮಸೇನ ಯುವರಾಜನಾದ. ಶತ್ರುನಿಗ್ರಹ, ರಾಜ್ಯರಕ್ಷೆ ಅರ್ಜುನನ ಹೊಣೆಯಾಯಿತು. ದುರ್ಯೋಧನನ ಅರಮನೆ ಭೀಮನಿಗಾದರೆ ದುಃಶಾಸನನ ಅರಮನೆಯಲ್ಲಿ ಅರ್ಜುನನ ವಾಸ.

ಸಿಂಹಾಸನವನ್ನೇರಿದರು ಬಂಧುನಾಶದಿಂದ ಪರಿತಪಿಸುತ್ತಿದ್ದ ಯುಧಿಷ್ಠಿರನಿಗೆ ಪರಿಹಾರ ರೂಪವಾಗಿ ಅಶ್ವಮೇಧ ಮಾಡುವಂತೆ ವ್ಯಾಸ ಮಹರ್ಷಿ ಸಲಹೆ ಮಾಡಿದರು. ಅಶ್ವ ದಿಗ್ವಿಜಯಕ್ಕೆ ಹೊರಟಿತು. ಅದರ ಹಿಂದೆ ರಕ್ಷೆಗಾಗಿ ಅರ್ಜುನ. ಅವನ ಇಡಿಯ ಜೀವನವೇ ಶತ್ರುಗಳ ವಿರುದ್ಧ ಹೋರಾಟಕ್ಕೆ ಮೀಸಲು. ೭೮ ರ ಮುಪ್ಪಿನ ಅರ್ಜುನ ಮತ್ತೆ ಸೇನಾಸಮೇತನಾಗಿ ದಿಗ್ವಿಜಯಕ್ಕೆ ಹೊರಟ.

ಎರಡನೆಯ ದಿಗ್ವಿಜಯ

ತ್ರಿಗರ್ತದ ರಾಜರು ಸೋತರು. ಪ್ರಾಗ್‌ಜ್ಯೋತಿಷದಲ್ಲಿ ಭಗದತ್ತನ ಮಗ ವಜ್ರದತ್ತ ಸೊತ ಕಪ್ಪ ಕೊಟ್ಟ. ಸಿಂಧುದೇಶ (ಈಗಣ ಪಾಕಿಸ್ತಾನ)ದ ಸೈನಿಕರು ಯುದ್ಧಕ್ಕೆ ಬಂದರು. ತಮ್ಮ ರಾಜ ಜಯದ್ರಥನನ್ನು ಕೊಂದವ ಎಂದು ಅವರಿಗೆ ಅರ್ಜುನನ ಮೇಲೆ ಆಕ್ರೋಶ. ಅವರು ಮಣಿಯದ್ದನ್ನು ಕಂಡು ಅರ್ಜುನ ಸೇನೆಯನ್ನು ಸಂಹರಿಸತೊಡಗಿದ. ಕಡೆಗೆ ತಂಗಿ ದುಃಶಲೆ ಬಂದು ಶಾಂತಿಗಾಗಿ ಬೇಡಿಕೊಂಡಾಗ ಯುದ್ಧನಿಲ್ಲಿಸಿ ಮುಂದೆ ತೆರಳಿದ. ಮಣಿಪುರದಲ್ಲಿ ಅರ್ಜುನನ ಬಯಕೆಯಂತೆಯೇ ಮಗ ಬಭ್ರುವಾಹನ ಯುದ್ಧಕ್ಕೆ ನಿಂತ. ತಂದೆ-ಮಕ್ಕಳು ಹೋರಾಡಿಕೊಂಡರು. ಮಗನ ಪರಾಕ್ರಮದ ಮುಂದೆ ಅರ್ಜುನ

ನೆಲಕ್ಕುರುಳಿದ. ನಾಗಕನ್ಯೆ ಉಲೂಪಿಯ ಸಂಜೀವನ ಮಣಿಯಿಂದ ಮತ್ತೆ ಚೇತರಿಸಿದ. ಅಲ್ಲಿಂದ ಮುಂದೆ ಮಗಧ ದೇಶದಲ್ಲಿ ಜರಾಸಂಧನ ಮೊಮ್ಮಗ ಮೇಘಸಂಧಿ ಸೋತು ಶರಣಾದ. ಉತ್ತರದಂತೆ ದಕ್ಷಿಣದ ದ್ರಾವಿಡ, ಆಂಧ್ರರಾಜರೂ ಕಪ್ಪ ಒಪ್ಪಿಸಿದರು. ಗಾಂಧಾರದೇಶ (ಆಫಘಾನಿಸ್ತಾನ) ದಲ್ಲಿ ಶಕುನಿಯ ಮಗ ಹೋರಾಡಿ ಸೋತ. ಭಾರತ ಪ್ರದಕ್ಷಿಣೆ ಮಾಡಿ ಕುದುರೆ ಮರಳಿತು. ಭಾರತದೇಶದ ಎಲ್ಲ ರಾಜರೂ ಹಸ್ತಿನಾಪುರದಲ್ಲಿ ನೆರೆದರು. ಅಪೂರ್ವವಾದ ಅಶ್ವಮೇಧ ನಡೆಯಿತು.

ಉಪಸಂಹಾರ

೩೬ ವರ್ಷಗಳ ಕಾಲ ನಿರಾಂತಕವಾಗಿ ಪಾಂಡವರು ರಾಜ್ಯವಾಳಿದರು. ಇತಿಹಾಸದ ಚಕ್ರ ಉರುಳಿತು. ಯಾದವರು ಹೊಡೆದಾಡಿಕೊಂಡು ಸತ್ತರು. ಕೃಷ್ಣ ದೇಹತ್ಯಾಗ ಮಾಡಿದ. ಯಾದವ ಸ್ತ್ರೀಯರನ್ನು ಕಳ್ಳಕಾಕರು ಕದ್ದೊಯ್ದರು. ಅರ್ಜುನ ಅವರ ರಕ್ಷಣೆಗೆ ನಿಂತರು ಉಪಯೋಗ ಬೀಳಲಿಲ್ಲ. ಮೈಯ ತ್ರಾಣ ಕುಸಿಯಿತು. ಅಸ್ತ್ರಗಳ ಮರವೆಯಾದವು. ಅರ್ಜುನ ಭುಮಿಗೆ ಬಂದಿದ್ದ ಉದ್ದೇಶ ಮುಗಿದಿತ್ತು.

ಒಂದು ಶುಭ ಮುಹೂರ್ತದಲ್ಲಿ ಅರ್ಜುನನ ಮೊಮ್ಮಗ, ಆಭಿಮನ್ಯು ಪುತ್ರ ಪರೀಕ್ಷಿತನಿಗೆ ಪಟ್ಟಾಭಿಷೇಕವಾಯಿತು. ಪಾಂಡವರು ರಾಜ್ಯತ್ಯಾಗ ಮಾಡಿ ತೆರಳಿದರು. ಉತ್ತರಕ್ಕೇರಿದರು. ಎತ್ತರಕ್ಕೇರಿದರು. ದೇವತೆಗಳಾಗಿ ಸ್ವರ್ಗ ಸೇರಿದರು.