ಪತ್ರಕರ್ತನು ಸ್ವತಃ ಅಂಕಣಕಾರನೂ ಆದರೆ ಅನುಕೂಲವೂ ಉಂಟು, ಅನನುಕೂಲವೂ ಉಂಟು. ಆಯ್ದ ಕ್ಷೇತ್ರದ ವಿದ್ಯಮಾನಗಳ ಜೊತೆ ನಿತ್ಯ ಸ್ಪಂದಿಸುತ್ತಲೇ ಇರುವುದರಿಂದ ಅಂಕಣಕ್ಕಾಗಿ ಪ್ರತಿ ಬಾರಿ ಘಟನಾವಳಿ ಅಥವಾ ವಿಷಯ ಆಯ್ಕೆ ಸುಲಭ. ಆದರೆ ನಿಯಮಿತವಾಗಿ ಹೊತ್ತಿಗೆ ಸರಿಯಾಗಿ ಬರೆದು ಮುಗಿಸುವುದು ಕಷ್ಟ.

ಆರ್ಥಿಕ ಲೋಕದ ಆಗುಹೋಗುಗಳನ್ನು ನನ್ನ ವೃತ್ತಿ ಜೀವನದಲ್ಲಿ ಹತ್ತಿರಲಿಂದ ಕಂಡವನಾದುದರಿಂದ, ಹುಟ್ಟಿನಿಂದ ವ್ಯಾಪಾರಸ್ಥನಾದುದರಿಂದ, ನನಗೆ ಒಂದು ಒಳನೋಟ ಕಷ್ಟವೆನಿಸುವುದಿಲ್ಲ. ವಾಸ್ತವವಾಗಿ ಆ ಒಳನೋಟವೆ ‘ಅರ್ಥನೋಟ’ದ ವೈಶಿಷ್ಟ್ಯ. ವಾರಕ್ಕೆ ಒಂದು ಬರೆವಣಿಗೆ ಆದಕಾರಣ ಮಥನಕ್ಕೆ ಸಾಕಷ್ಟು ಸಮಯಾವಕಾಶ ಇರುತ್ತಿತ್ತು. ಆದರೆ ಈ ಅಂಕಣವು ಪಂಡಿತರಿಗಿಂತ ಪಾಮರರನ್ನೇ ಹೆಚ್ಚು ಉದ್ದೇಶಿಸಿದ್ದರಿಂದ ಹಿನ್ನೆಲೆ ಮಾಹಿತಿ, ಅಂಕಿಸಂಖ್ಯೆ ಮುಂತಾದುವನ್ನು ಹಿತಮಿತವಾಗಿ, ತಲೆಭಾರವಾಗದಂತೆ ಅಳವಡಿಸುವ ಅಗತ್ಯ ಪ್ರತಿ ಬಾರಿ ಇರುತ್ತಿತ್ತು. ಅದು ದುಸ್ಸಾಧ್ಯವಾದಾಗ ಚಡಪಡಿಕೆ ತಪ್ಪುವುದಿಲ್ಲ. ಅನೇಕ ಬಾರಿ ಚಡಪಡಿಕೆ ಹೆಚ್ಚಾದಾಗ ವಿಷಯವನ್ನೇ ಬದಲಾಯಿಸಿಕೊಂಡಿದ್ದು ಉಂಟು. ಆದರೆ ಎಂದೂ ಪ್ರಕಟಣಾ ದಿನಾಂಕಕ್ಕೆ ಪುಸ್ತುತತೆ ತಪ್ಪಲು ಅವಕಾಶ ಕೊಡಲಿಲ್ಲ.

ಇದೇನೇ ಇದ್ದರೂ ಬರೆವಣಿಗೆ ಕೂಡ ಪ್ರತಿ ಬಾರಿಯೂ ತಪ್ಪದ ಪ್ರಸವಾನುಭವವೇ. ‌ಪ್ರತಿವಾರ ಬರೆದು ಮುಗಿಸಿ ಆದ ಮೇಲೆ ಸಿಗುವ ತೃಪ್ತಿಗೆ, ಸಂತೋಷಕ್ಕೆ ಎಣೆ ಇರುವುದಿಲ್ಲ. ಯಾವುದೇ ಬರೆವಣಿಗೆಯ ಫಲ ಇದೆ.

ಈ ಅಂಕಣ ಸಂಗ್ರಹದಲ್ಲಿ ಒಂದು ಬಾರಿಗಿಂತ ಇನ್ನೊಂದು ಬಾರಿಗೆ ಅಂಕಿಸಂಖ್ಯೆ ಬದಲಾಗಿರುವುದು ಕಾಣುತ್ತದೆ. ಆಯಾ ಕಾಲಕ್ಕೆ ಲಭ್ಯ ಆದುದನ್ನು ಹೆಕ್ಕಿಕೊಳ್ಳುತ್ತಿದ್ದೆನಾದ್ದರಿಂದ ಸಹಜವಾಗಿ ಹೀಗೆ ಆಗಿರುತ್ತದೆ. ಒಂದು ಬರೆವಣಿಗೆಗೂ, ಇನ್ನೊಂದು ಬರೆವಣಿಗೆಗೂ ಮಧ್ಯೆ ಕಾಲದ ಅಂತರ ಸಹಾ ಇರುವುದರಿಂದ ಅಭಿಪ್ರಾಯ ಸಹ ಕಾಲಾನುಗುಣ ಸ್ವಲ್ಪ ಬದಲಾಗಿರುತ್ತದೆ. ಆದರೆ ‘ಪ್ರಜಾವಾಣಿ’ ಓದುಗರನ್ನೇ ಸದಾ ದೃಷ್ಟಿಯಲ್ಲಿ ಇರಿಸಿಕೊಂಡಿದ್ದರಿಂದ ಕಾಳಜಿಯಲ್ಲಾಗಲೀ, ಅಭಿಪ್ರಾಯ ಕೊಡಲು ನಿಮತ ನಿಲುವಾಗಲೀ ಬದಲಾಗಿರುವುದು ಕಂಡಿಲ್ಲ. ವಾಣಿಜ್ಯೋದ್ಯಮ ವಿದ್ಯಮಾನಗಳು ಜನಸಾಮಾನ್ಯರಿಗೆ ಅರ್ಥವಾಗುವಂತೆ ಮಾಡಬೇಕೆನ್ನುವುದೇ ನನ್ನಲ್ಲಿ ಇದ್ದ ಮೂಲ ಪ್ರೇರಣೆ.

ಇಲ್ಲಿನ ವಿಚಾರಗಳು ಕಾಗದದ ಮೇಲೆ ಇಳಿದ ಕಾಲ ಮತ್ತು ಓದುಗರು ಓದುತ್ತಿರುವ ಕಾಲ ಇವೆರಡರ ನಡುವೆ ಕಾವೇರಿ ಕೃಷ್ಣೆಯರ ನೀರು ಸಾಕಷ್ಟು ಹರಿದಿದೆ. ಆದ್ದರಿಂದ ಬರೆಹದ ತಾರೀಕನ್ನು ತಪ್ಪದೇ ಪ್ರತಿಬಾರಿ ಓದಿಕೊಳ್ಳಬೇಕು. ಎರಡು ವರ್ಷ ಅವಧಿಯಲ್ಲಿ ಹರಡಿಕೊಂಡ ಘಟನೆಗಳ ವಿವರ ಇಲ್ಲಿ ಇದ್ದರೂ ಸಾವಕಾಲಿಕ ಎನಿಸುವ ವಿದ್ಯಮಾನ ಮರುಕಳಿಸುತ್ತಲೇ ಇರುತ್ತದೆ.

ಅರ್ಥನೋಟವು ಪ್ರಖ್ಯಾತ ಪ್ರಜಾವಾಣಿಯ ಅಂಕಣವಾದ್ದರಿಂದ ಸ್ಪಂದಿಸುತ್ತಲೇ ಬಂದ ವಾಚಕರ, ಮಿತ್ರರ, ಹಿತೈಷಿಗಳ ಬಳಹ ದೊಡ್ಡದು. ಅವರ ಸ್ಪಂದನವೇ ನನ್ನ ಪಾಲಿಗೆ ಸ್ಫೂರ್ತಿಯಾಗಿ ಜತನವಾಗಿ ನಿಂತಿತು. ಬರೆವಣಿಗೆಗೆ ಕೂರಲು ಎಷ್ಟೇ ಕಷ್ಟವಾದರೂ ಇವರ ವಿಶ್ವಾಸ ನನ್ನನ್ನು ಹಿಡಿದಿರುತ್ತಿತ್ತು. ಬೆಳಗಿನ ಜಾವ ಪತ್ರಿಕೆ ಕೈ ಸೇರಿದಂತೆ ಅರ್ಥನೋಟ ಓದಿ ನನ್ನನ್ನು ಎಬ್ಬಿಸಿ ಅಭಿಪ್ರಾಯ ವ್ಯಕ್ತಪಡಿಸಿದವರುಂಟು. ನನ್ನ ಅಂಕಣ ಪರಿಣಾಮಕಾರಿ ಅನಿಸಿದ ಪ್ರತಿ ಸಾರಿ ‘ನಾನು ಭಾಗ್ಯಶಾಲಿ’ ಎಂದು ನನಗೆ ಅನ್ನಿಸುತ್ತಿತ್ತು.

ನಮ್ಮ ಸಂಸ್ಥೆ ಯಜಮಾನರಾದ ಕೆ.ಎನ್. ಹರಿಕುಮಾರ್ ಮತ್ತು ಕೆ.ಎನ್. ಶಾಂತಕುಮಾರ್‌ಅವರು ನನಗೆ ಪ್ರೋತ್ಸಾಹ ನೀಡಿದ್ದಾರೆ. ಬರೆವಣಿಗೆಯನ್ನು ಮೆಚ್ಚಿಕೊಂಡಿದ್ದಾರೆ. ನನ್ನ ಕಿರಿಯ ಸಹೋದ್ಯೋಗಿಗಳಾದ ಬಿ.ಎಂ. ಹನೀಫ್, ಕೇಶವ ಝಿಂಗಾಡೆ, ಸಿ.ಆರ್. ನವೀನ್ ಅವರು ಅಂಕಣವನ್ನು ನಿಭಾಯಿಸಿ ಅಚ್ಚಿಗೆ ಒಯ್ದಿದ್ದಾರೆ. ಬಹುತೇಕ ಎಲ್ಲ ಸಹೋದ್ಯೋಗಿಗಳು ಆಗಾಗ ಕೆಲ ಅಂಶಗಳ ಬಗೆಗೆ ವಿಚಾರ ವಿನಿಮಯ ನಡೆಸುವ ಸೌಜನ್ಯ ತೋರಿದ್ದಾರೆ. ಅವರಿಗೆ ನಾನು ಆಭಾರಿ.

ಅರ್ಥನೋಟದ ನಿಮಿತ್ತದಿಂದಲೆ ಗೆಳೆತನ ಬೆಳೆಸಿಕೊಂಡ ಡಾ. ಚಂದ್ರಶೇಖರ ಕಂಬಾರ ಅವರು ಮತ್ತು ನಾನು ಸುಧೀರ್ಘವಾಗಿ ಮತ್ತೆ ಮತ್ತೆ ಹರಟಿದ್ದೇವೆ. ಇದು ಮಹತ್ವದ ಬರೆವಣಿಗೆ ಎಂದು ನನ್ನಲ್ಲಿ ಬಿಂಬಿಸಿದವರೇ ಕಂಬಾರರು. ಅಲ್ಲಿಯವರೆಗೆ ನಾನು ನನ್ನ ಪಾಟಿಗೆ ಬರೆದುಕೊಂಡು ಹೋಗುತ್ತಲಿದ್ದವನಾಗಿದ್ದೆ. ಅನಂತರ ಬರೆವಣಿಗೆಯ ವೇಳೆ ಭಯಪಟ್ಟುಕೊಳ್ಳುವವನಾದೆ!

ಅವರ ಆಸಕ್ತಿ ಹೊರತು ಈ ಅಂಕಣ ಸಂಗ್ರಹ ಹೊರಬರುತ್ತಿರಲಿಲ್ಲ. ನಾನು ಆಭಾರಿ ಎಂದರೆ ಅದು ಬಾಯಿ ಮಾತು ಮಾತ್ರ ಆಗುತ್ತದೆ. ನಿಜವಾಗಿ ನಾನು ಕೃತಜ್ಞ. ಪ್ರಕಟಣೆಗೆ ಮುಂದಾದ ಕನ್ನಡ ವಿಶ್ವವಿದ್ಯಾಲಯಕ್ಕೆ ನಾನು ಋಣಿ. ವಿಶ್ವವಿದ್ಯಾಲಯದ ಕುಲಪತಿ ವಿವೇಕ ರೈ ಅವರು ನನ್ನ ಬಗೆಗೆ ಅತೀವ ವಿಶ್ವಾಸ ತೋರಿದ್ದಾರೆ. ಪ್ರಸಾರಾಂಗದ ಡಾ. ಹಿ.ಚಿ. ಬೋರಲಿಂಗಯ್ಯ ಮತ್ತು ಸುಜ್ಞಾನಮೂರ್ತಿ ಅವರು ಗೌರವಾಭಿಮಾನಗಳನ್ನು ಪ್ರತಿ ಬಾರಿ ವ್ಯಕ್ತಪಡಿಸಿದ್ದಾರೆ. ನಾನ ಕೃತಜ್ಞ. ಅಕ್ಷರ ಸಂಯೋಜನೆಯನ್ನು ವಿಶೇಷವಾಗಿ ಮಾಡಿರುವ ವೈ.ಎಂ. ಶರಣಬಸವ ಅವರಿಗೆ ನನ್ನ ನೆನಕೆಗಳು. ಈ ಬರೆವಣಿಗೆಯಲ್ಲಿ ಅರೆಕೊರೆ ಇಲ್ಲವೆಂದಲ್ಲ. ಆದರೆ ಅವಸರದ, ಆಯಾ ಹೊತ್ತಿನ ಬರೆವಣಿಗೆಯಾದ್ದರಿಂದ ಅವನ್ನು ಮನ್ನಿಸಿ ಆಶಯ ಮತ್ತು ಮಂಡನೆ ಉದ್ದೇಶಗಳನ್ನು ಓದುಗರು ಮೆಚ್ಚಿಕೊಳ್ಳುವರೆಂದು ಭಾವಿಸುತ್ತೇನೆ.

ರಾಜಾ ಶೈಲೇಶಚಂದ್ರ ಗುಪ್ತ