ಕನ್ನಡ ವಿಶ್ವವಿದ್ಯಾಲಯ ಕನ್ನಡ ಸಂಸ್ಕೃತಿಯ ಬಹುತ್ವದ ನೆಲೆಯನ್ನು ಹುಡುಕುವ, ಗಟ್ಟಿಗೊಳಿಸುವ, ಹರಡುವ ಕಾಯಕವನ್ನು ನೋಂಪಿಯಂತೆ ನಡೆದಿಕೊಂಡು ಬಂದಿದೆ. ಕನ್ನಡ ಸಂಸ್ಕೃತಿಯನ್ನು ಮತ್ತೆ ಮತ್ತೆ ನಿರ್ವಚನ ಮಾಡಿಕೊಳ್ಳುವ ಪ್ರಕ್ರಿಯೆಯಲ್ಲಿ ಕನ್ನಡ ವಿಶ್ವವಿದ್ಯಾಲಯವು ಒಂದು ಆಡುಂಬೊಲವಾಗಿ ಕಾರ್ಯ ನಿರ್ವಹಿಸುತ್ತಿದೆ. ನಮಗೆ ಗೊತ್ತಿರುವ ಸಂಸ್ಕೃತಿಯ ಅರ್ಥಗಳ ಆಚೆಗೆ ಅನೂಹ್ಯ ಲೋಕಗಳ ಕಡೆಗೆ ತನ್ನನ್ನು ಮತ್ತು ಕನ್ನಡಿಗರನ್ನು ಒಯ್ಯುವ ಪಯಣದ ದಾರಿಗಳನ್ನು ರೂಪಿಸುವ ಮಹತ್ವದ ಸಾಹಸದ ಹೆಜ್ಜೆಗಳು ಮೂಡಿ ಬಂದಿವೆ. ಇದು ನಿರಂತರ ನಡೆಯಬೇಕಾದ ಬಹುದಾರಿಗಳ ಮಹಾಯಾನ.

ಇಪ್ಪತ್ತೊಂದನೆಯ ಶತಮಾನದ ಆರಂಭದಲ್ಲಿ ಜಾಗತೀಕರಣದ ಈ ಸಂಕ್ರಮಣ ಸ್ಥಿತಿಯಲ್ಲಿ ಕನ್ನಡ ವಿಶ್ವವಿದ್ಯಾಲಯದ ರಚನೆ ಮತ್ತು ಕಾರ್ಯಗಳು ಸವಾಲಿನವು ಮತ್ತು ಜವಾಬ್ದಾರಿಯವೂ ಆಗಿವೆ. ‘ಕನ್ನಡ’ ಎನ್ನುವ ಪರಿಕಲ್ಪನೆಯನ್ನು ಭಾಷೆ, ಸಾಹಿತ್ಯ, ಬದುಕು ಮತ್ತು ಅದರ ಆಧುನಿಕ ಸನ್ನಿವೇಶಗಳಲ್ಲಿ ಅರ್ಥೈಸುವ ಮತ್ತೆ ಕಟ್ಟುವ ಕೆಲಸವನ್ನು ಕನ್ನಡ ಎರಡು ಪರಿಕಲ್ಪನೆಗಳು ಎದುರು ಬದುರಾಗುವ ಆತಂಕ ಒಂದು ಕಡೆಯಾದರೆ, ಅವು ಒಂದನ್ನೊಂದು ಪ್ರಭಾವಿಸಿ ನೆರವಾಗುವ ಆವರಣವನ್ನು ನಿರ್ಮಾಣ ಮಾಡುವುದು ಇನ್ನೊಂದೆಡೆ ಇರುತ್ತದೆ. ಇಂತಹ ಸಂದರ್ಭದಲ್ಲಿ ಕನ್ನಡ ವಿಶ್ವವಿದ್ಯಾಲಯವು ಈ ಸಂಬಂಧಿಯಾದ ಹೊಸ ಆಲೋಚನೆಗಳ ಸಂವಾದ ಮತ್ತು ಅದರ ಅನ್ವಯಿಕ ಸಾಧನೆಗಳಲ್ಲಿ ತನ್ನನ್ನು ತೊಡಗಿಸಿಕೊಳ್ಳಲು ಬಯಸಿದೆ.

ಕನ್ನಡ ಕಾಗದ ರಹಿತ ಮಾಧ್ಯಮದಲ್ಲಿ ಕಾಣಿಸಿಕೊಳ್ಳುತ್ತಿರುವಾಗಲೂ ಪುಸ್ತಕ ರೂಪದಲ್ಲಿ ಕನ್ನಡ ಕೃತಿಗಳ ಪ್ರಕಟಣೆ ಸಮಾನಾಂತರವಾಗಿ ಕ್ರಿಯಾಶೀಲವಾಗಿ ನಡೆಯುವುದು ಬಹಳ ಮುಖ್ಯವಾದದ್ದು. ತಾಂತ್ರಿಕ-ಮೌಖಿಕ ಮಾಧ್ಯಮದಲ್ಲಿ ಕನ್ನಡವು ಬಳಕೆಯಾಗುತ್ತಿರುವಾಗಲೇ ಕಾಗದದಲ್ಲಿ ಕನ್ನಡ ಅಕ್ಷರಗಳು ಮುದ್ರಣಗೊಂಡು ಕಣ್ಣಿಗೆ, ಕಿವಿಗೆ ಮತ್ತು ಮನಸ್ಸಿಗೆ ಕನ್ನಡವನ್ನು ಸಂವಹನಗೊಳಿಸುವ ಪ್ರಕ್ರಿಯೆ ನಿರಂತರವಾಗಿ ನಡೆಯಬೇಕಿದೆ. ಇಲ್ಲಿ ಪ್ರಕಟಗೊಳ್ಳುವ ಮಾಧ್ಯಮದೊಂದಿಗೆ ಅಭಿವ್ಯಕ್ತಗೊಳ್ಳುವ ಚಿಂತನಾ ಶರೀರವೂ ಮುಖ್ಯವಾದದ್ದು. ಭಾಷೆ, ಸಾಹಿತ್ಯ, ಕಲೆಗಳು, ವಿಜ್ಞಾನ, ತಂತ್ರಜ್ಞಾನ, ಸಮಾಜವಿಜ್ಞಾನ ಎನ್ನುವ ಬೌದ್ಧಿಕ ಗಡಿ ರೇಖೆಗಳನ್ನು ಕಳಚಿಕೊಂಡು ಕನ್ನಡ ಜ್ಞಾನವು ಕನ್ನಡ ವಿಶ್ವವಿದ್ಯಾಲಯದಲ್ಲಿ ರೂಪುಗೊಳ್ಳುವ ಮತ್ತು ಪ್ರಕಟಗೊಳ್ಳುವ ಪ್ರಕ್ರಿಯೆ ನಡೆಯುತ್ತಿದೆ.

ಶ್ರೀ ಶೈಲಶಚಂದ್ರ ಅವರ ‘ಅರ್ಥನೋಟ’ ಎಂಬ ಕೃತಿಯು ನಮ್ಮ ದಿನಬಳಕೆಯ ಅರ್ಥಶಾಸ್ತ್ರಕ್ಕೆ ಸಂಬಂಧಪಟ್ಟ ೧೧೬ ಲೇಖನಗಳನ್ನೊಳಗೊಂಡಿದೆ. ಇಲ್ಲಿ ಇರುವ ಬಳಕೆದಾರ, ಮಾರುಕಟ್ಟೆಗಳ ಪ್ರಭು, ಮಳೆ ಜೀವನಾಧಾರ, ಕೃಷಿರಂಗ ಬದುಕಿನ ಬೆನ್ನೆಲುಬು, ರೇಷ್ಮೆ ವಿದ್ಯಮಾನ ಬಲುನವಿರು, ಜಾಗತೀಕರಣ ಪ್ರಸ್ತುತದಲ್ಲಿ ತುಮುಲ, ಐಟಿ ಹೊಸ ಸಂಪನ್ಮೂಲ, ಟೆಲಿಕಾಂ ಸಂಪರ್ಕ ಪ್ರವಾಹ, ಹಣ ನಿನ್ನಯ ಗುಣವೇ ಗುಣ, ಬಂಡವಾಳ ಪೇಟೆ ಪಣವಿಡುವ ವ್ಯವಹಾರ, ವಿದೇಶ ವ್ಯವಹಾರ ಸೀಮೆಯಾಚೆ ಇಣುಕು ನೋಟ, ಪ್ರವಾಸೋದ್ಯಮ ಆಕರ್ಷಣೀಯ, ವಿಮೆ ವ್ಯಾಪಾರದ ಆಸೆ, ಸಣ್ಣ ಕೈಗಾರಿಕೆ ಉದ್ಯೋಗ ಭಂಡಾರ, ವಿವಿಧೋದ್ದೇಶ ಬಿಡಿ ಬಿಡಿ ವಿಚಾರ- ಹೀಗೆ ಹತ್ತು ಹಲವು ಹರಿವಿನಲ್ಲಿ ನಮ್ಮ ದೈನಂದಿನ ಅರ್ಥಶಾಸ್ತ್ರವನ್ನು ಸಾಮಾನ್ಯರಿಗೆ ಅರ್ಥವಾಗುವ ಭಾಷೆ ಮತ್ತು ಪರಿಭಾಷೆಯಲ್ಲಿ ಮಾಹಿತಿ ಹಾಗೂ ನಿದರ್ಶನಗಳ ಮೂಲಕ ಶೈಲೇಶಚಂದ್ರ ತೆರೆದಿಟ್ಟಿದ್ದಾರೆ. ಪುಟ್ಟ ಪುಟ್ಟ ಬರಹದಲ್ಲಿ ತುಂಬ ಪರಿಣಾಮಕಾರಿಯಾಗಿ ಮಂಡಿಸಿರುವ ಸಂಗತಿಗಳು ಜಾಗತೀಕರಣದ ಸಂದರ್ಭದಲ್ಲಿ ನಮ್ಮನ್ನು ಆವರಿಸಿಕೊಳ್ಳುತ್ತಿರುವ ವ್ಯಾಪಾರದ ಸೋಗುಗಳನ್ನು ಮನಮುಟ್ಟುವಂತೆ ತಿಳಿಸಲಾಗಿದೆ. ‘ಅರ್ಥ’ದ ಅರ್ಥಗಳನ್ನು ಶೈಲೇಶಚಂದ್ರ ಅವರು ಬಹು ಬಗೆಗಳಲ್ಲಿ ಅನಾವರಣ ಮಾಡಿದ್ದಾರೆ. ಶ್ರೀ ಶೈಲೇಶಚಂದ್ರ ಅವರ ವಿಚಯಗಳ ಆಯ್ಕೆ, ಮಂಡಿಸುವ ಕ್ರಮ, ಬಳಸುವ ಭಾಷೆ, ತಾಳುವ ನಿಲುವು ಎಲ್ಲವು ತುಂಬಾ ಸ್ಪಷ್ಟ, ಸರಳ ಮತ್ತು ಆಕರ್ಷಕ ಹಾಗೂ ಮನಮೋಹಕವಾದವು. ಮಾರುಕಟ್ಟೆಯನ್ನು ಒಡೆದು ತೆರೆದು ತೋರಿಸುವಿಕೆಯಲ್ಲಿ ಅಷ್ಟೇ ಚೂಪಾದ ಭಾಷೆಯನ್ನು ಲೇಖಕರು ಬಳಸುತ್ತಾರೆ. ನೂರಾರು ಅರ್ಥಶಾಸ್ತ್ರದ ಪುಸ್ತಕಗಳು ಕೊಡಬಹುದಾದ ತಿಳುವಳಿಕೆಯನ್ನು ಸರಳವಾಗಿ ಕಟ್ಟುವಂತೆ ಇಲ್ಲಿ ಸಂಗ್ರಹಿಸಲಾಗಿದೆ. ಇಂತಹ ಜನಮುಖಿಯಾದ ಅರ್ಥಶಾಸ್ತ್ರದ ಲೇಖನಗಳ ಕಣಜವನ್ನು ತುಂಬಿಕೊಟ್ಟ ಶ್ರೀ ಶೈಲೇಶಚಂದ್ರ ಅವರಿಗೆ ಅಭಿನಂದನೆಗಳು. ಹಾಗೆಯೇ ಈ ಗ್ರಂಥವನ್ನು ಅಚ್ಚುಕಟ್ಟಾಗಿ ಹೊರತರಲು ಶ್ರಮಿಸಿದ ಪ್ರಸಾರಾಂಗದ ನಿರ್ದೇಶಕರಾದ ಪ್ರೊ. ಹಿ.ಚಿ. ಬೋರಲಿಂಗಯ್ಯ ಮತ್ತು ಸಹಾಯಕ ನಿರ್ದೇಶಕರಾದ ಶ್ರೀ ಸುಜ್ಞಾನನಮೂರ್ತಿ ಅವರನ್ನು ವಿಶೇಷವಾಗಿ ನೆನೆಯುತ್ತೇನೆ.

ಬಿ.ಎ. ವಿವೇಕ ರೈ
ಕುಲಪತಿ