ಒಂದೇ ಆಗಿದ್ದ ಭಾರತ ಪಾಕಿಸ್ತಾನಗಳು ಹೋಳಾಗಿ ಎರಡಾದ ಹೊಸತರಲ್ಲೇ ‘ಮುಂದೆ ಹೇಗಪ್ಪಾ’ ಎನ್ನುವ ಚಿಂತೆ ನಾಯಕನನ್ನು ಕಾಡದೆ ಇರಲಿಲ್ಲ. ವಿಷಾದ, ಸಿಟ್ಟು, ದ್ವೇಷ ಎಲ್ಲವೂ ಘನೀಭವಿಸಿದ್ದವು. ಎರಡೂ ದೇಶಗಳ ಮಧ್ಯೆ ಬಾಂಧವ್ಯ ಕುದುರಿಸುವುದು ಹೇಗೆಂಬ ಕಗ್ಗಂಟನ್ನು ಬಿಡಿಸಲು ರಾಜಕೀಯ ನಾಯಕರು ಹೆಣಗುತ್ತಿರುವಾಗ ಚಕ್ರವರ್ತಿ ರಾಜಗೋಪಾಲಚಾರಿ (ರಾಜಾಜಿ) ಅವರು ಪರಿಹಾರೋಪಾಯವನ್ನು ಸೂಚಿಸಿದ್ದರು. ಗಡಿಗಳು ಎಷ್ಟೇ ಬಿಗಿಯಾಗಿ ಸೆಳೆದುಕೊಂಡಿದ್ದರೂ ಉಭಯ ದೇಶಗಳ ನಡುವೆ ಮುಕ್ತ ಎನಿಸುವಂಥ ವ್ಯಾಪಾರಕ್ಕೆ ಅವಕಾಶ ಮಾಡಿಬಿಟ್ಟರೆ ಬಾಂಧವ್ಯ ಸುಧಾರಿಸುತ್ತದೆ ಎಂಬುದೇ ಅವರು ಸೂಚಿಸಿದ ಮಾರ್ಗೋಪಾಯ. ನಿಜ ಪರಸ್ಪರ ಹಿತ ಸಾಧನೆಗೆ ನೆರವಾಗುವಂಥ ವ್ಯಾಪಾರವೆಂಬುದು ಎರಡೂ ದಿಕ್ಕಿನಲ್ಲಿ ಸುಲಲಿತವಾಗಿ ನಡೆಯುವಂತೆ ಆದಾಗ ಮನಸ್ಸಿನೊಳಗಣ ಕಹಿ ತಾನೇ ತಾತಾಗಿ ಕ್ರಮೇಣ ಕರಗಿ ಹೋಗುತ್ತದೆ. ಆದರೆ ಅದು ಸಾಧ್ಯವಾಗುತ್ತಿಲ್ಲ.

ಭೂಭಾಗಗಳು ಬೇರೆಯಾದಾಗ ವಾಸ್ತವವಾಗಿ ಸಮಸ್ಯೆ ಆಯಿತು. ಫಲವತ್ತಾದ ಹತ್ತಿ ಬೆಳೆಯುವ ಪ್ರದೇಶ ಅತ್ತ ಕಡೆ ಉಳಿಯಿತು. ಜವಳಿ ಗಿರಣಿಗಳು ಈ ಕಡೆ ಬೆಳೆದು ನಿಂತಿದ್ದವು. ವಿಭಜನೆ ನಂತರ ಆ ಕಡೆ ಹೊಸ ಗಿರಣಿಗಳು ತಲೆಯೆತ್ತಿದವು. ಇತ್ತ ಕಡೆ ಪಂಜಾಬಿನಲ್ಲಿ ಮಾತ್ರವಲ್ಲದೆ ಬೇರೆ ಕಡೆ ಸಹಾ ಹತ್ತಿ ಬೆಳೆ ಹೆಚ್ಚಾಯಿತು.

ಇವತ್ತಿನವರೆಗೂ ವ್ಯಾಪಾರ ಬಾಂಧವ್ಯ ಸುಧಾರಿಸಲೇ ಇಲ್ಲ. ರಾಜಕೀಯ ಬಾಂಧವಯ ಸುಧಾರಿಸದ ಹೊರತು ಇದು ಸಧ್ಯವಾಗುವುದಿಲ್ಲ ಎನ್ನುವ ಭಾವನೆಯೇ ದಟ್ಟವಾಗಿದೆ. ಕಳೆದ ಅರ್ಧ ಶತಮಾನದಲ್ಲಿ ಆಗಿಷ್ಟು ಈಗಿಷ್ಟು ಪ್ರಯತ್ನ ಡೆದಿದೆಯಾದರೂ ಪ್ರಯೋಜನವೇನೂ ಆಗಿಲ್ಲ. ಅಂದ ಮಾತ್ರಕ್ಕೆ ಕಳಿಸುವುದು ತರಿಸುವುದು ಎರಡೂ ದೇಶಗಳ ನಡುವೆ ನಡೆಯುತ್ತಿಲ್ಲ ಎನ್ನುವಂತೇನೂ ಇಲ್ಲ. ಆದರದು ಹೇಳಿಕೊಳ್ಳುವ ಪ್ರಮಾಣದಲ್ಲಿ ನಡೆಯುತ್ತಿಲ್ಲ.

ಅಂಕಿಸಂಖ್ಯೆ ಮೂಲಕ ವಿವರಿಸುವುದಾದರೆ ಉಭಯ ದೇಶಗಳ ದ್ವಿಪಕ್ಷೀಯ ವ್ಯಾಪಾರ ಒಂದು ಸಹಸ್ರ ಕೋಟಿ ರೂಪಾಯಿನ ಗಾತ್ರದ್ದು. ಆ ಪೈಕಿ ಭಾರತ ಮಾಡುವ ರಫ್ತು ಮಾತ್ರವೇ ೭೫೦ ಕೋಟಿ ರೂಪಾಯಿನಷ್ಟಾಗುತ್ತದೆ. ಪಾಕಿಸ್ತಾನ ಭಾರತಕ್ಕೆ ಮಾಡುವ ರಫ್ತು ರೂ. ೨೮೪ ಕೋಟಿ ಆಗುತ್ತದೆ. ವಾಸ್ತವವಾಗಿ ಒಂದು ಸಹಸ್ರ ಕೋಟಿ ರೂಪಾಯಿ ಎನ್ನುವುದು ದೊಡ್ಡ ಮೊತ್ತವೇನಲ್ಲ. ಭಾರತದ ದೃಷ್ಟಿಯಲ್ಲೇ ಅಳೆಯಬಹುದಾದರೆ ಪಾಕಿಸ್ತಾನಕ್ಕೆ ಮಾಡುವ ರಫ್ತು ಒಟ್ಟು ರಫ್ತು ವಹಿವಾಟಿನ ಶೇ. ೦.೨೫ ಭಾಗ ಮಾತ್ರ. ಅಂದರೆ ಒಟ್ಟು ನೂರು ರೂಪಾಯಿನಷ್ಟು ರಫ್ತಿನಲ್ಲಿ ೨೫ ಪೈಸೆಯಷ್ಟು ಮಾತ್ರ! ಪಾಕಿಸ್ತಾನದಿಂದ ತರಿಸಿಕೊಳ್ಳುವ ಸರಕು ಸಹಾ ಭಾರತದ ಒಟ್ಟು ಆಮದಿನ ಶೇ. ೦.೧೪ ಭಾಗ ಮಾತ್ರ.

ಈಗಲೂ ರಿಯಾಯ್ತಿ ಆಮದು-ರಫ್ತು ಸುಂಕ ವಿಧಿಸುವ ಒಪ್ಪಂದದ ಮೇಲೆ ವರ್ಗೀಕರಿಸಿ ಇಟ್ಟ ಸರಕಿನ ಐಟಂಗಳ ಸಂಖ್ಯೆ ೬೦೦ ರಷ್ಟು ಇದೆ. ಈಚೆಗೆ ಇನ್ನು ೫೦ ಸೇರ್ಪಡೆ ಆಗಿದೆ. ಪ್ರಯೋಜನವೇನೂ? ಕೆಲಸಕ್ಕೆ ಬಾರದ, ನಿಜವಾಗಿ ವ್ಯವಹಾರ ಕುದುರದ, ಐಟಂಗಳೇ ಈ ಪಟ್ಟಿಯಲ್ಲಿವೆ. ಈಚೆಗೆ ಕಚ್ಚಾ ರೇಷ್ಮೆಯನ್ನು ಈ ಪಟ್ಟಿಗೆ ಸೇರಿಸಲು ಪಾಕಿಸ್ತಾನ ಒಪ್ಪಿತು. ಭಾರತಕ್ಕೆ ಹೇಗೋ ಹಾಗೆ ಪಾಕಿಸ್ತಾನಕ್ಕೂ ಚೀನಾ ಮೂಲದಿಂದ ಧಂಡಿಯಾಗಿ ಕಚ್ಚಾ ರೇಷ್ಮೆ ಸಿಗುತ್ತದೆ. ಇನ್ನು ವಹಿವಾಟು ಎಲ್ಲಿಂದ? ಆದರೆ ಆ ಪಟ್ಟಿಗೆ ರೇಷ್ಮೆ ಜವಳಿ ಸೇರ್ಪಡೆಯಾದರೆ ಭಾರತವು ಸರಕು ಪೂರೈಸಲು ಶಕ್ಯವಿದೆ. ಆದರೆ ಅದಕ್ಕೆ ಪಾಕಿಸ್ತಾನ ಸಮ್ಮತಿಸುವುದಿಲ್ಲ. ಪಾಕಿಸ್ತಾನವು ದಂತದ ಕರಕುಶಲ ವಸ್ತುವನ್ನು ಸೇರ್ಪಡೆ ಮಾಡುತ್ತದೆ. ಆದರೆ ವನ್ಯಜೀವಿ ಸಂರಕ್ಷಣೆ ದೃಷ್ಟಿಯಿಂದಾಗಿ ತಂದಿರುವ ನಿರ್ಬಂಧಗಳಿಂದಾಗಿ ಆ ಸರಕನ್ನು ಪೂರೈಸಲು ಭಾರತಕ್ಕೆ ಸಾಧ್ಯವಿಲ್ಲ. ಪ್ರಾಣಿ ತೊಗಲು-ಕೂದಲು ಮುಂತಾದ ಐಟಂಗಳೆಲ್ಲ ಪಟ್ಟಿಯಲ್ಲಿ ಬರುತ್ತವೆ. ಪ್ರಯೋಜನವೇನು?

ವಸ್ತುಸ್ಥಿತಿ ಹೀಗಿದ್ದರೂ ಒಂದಿಷ್ಟು ವ್ಯಾಪಾರ ನಡೆಯುತ್ತಿದೆ. ಪಾಕಿಸ್ತಾನ ಭಾರತಕ್ಕೆ ಒಣಹಣ್ಣು ಮುಂತಾದುವನ್ನು ಪೂರೈಸುತ್ತದೆ. ಹತ್ತಿ ನೂಲನ್ನು ಸಹಾ ಕಳುಹಿಸುವುದುಂಟು. ಭಾರತ ಸಹಾ ರಾಸಾಯನಿಕಗಳು ಮುಂತಾದವನ್ನು, ಕೆಲವೊಂದು ಕೈಗಾರಿಕಾ ಕಚ್ಚಾ ಸಾಮಗ್ರಿಯನ್ನು ಪೂರೈಸುತ್ತದೆ.

ಆಗ್ರಾ ಶೃಂಗದಂಥ ಸಂದರ್ಭಗಳಲ್ಲೆಲ್ಲ ವ್ಯಾಪಾರ ವೃದ್ಧಿಯ ಮಾತು ಬರುತ್ತವೆ. ಆದರೆ ಮುಂದುವರೆಯುವುದಿಲ್ಲ. ಕಾಶ್ಮೀರ ವಿವಾದವೇ ಮುಖ್ಯ ಎನಿಸುತ್ತದೆ. ಆದರೆ ಉಭಯ ರಾಷ್ಟ್ರಗಳ ನಡುವೆ ಎಷ್ಟೊಂದು ಒಳ್ಳೆಯ ವ್ಯಾಪಾರ ನಡೆಯಲು ಸಾಧ್ಯವಿದೆ ಎಂಬ ಅಂದಾಜು ಮಾತ್ರ ಪ್ರಸ್ತಾಪಕ್ಕೆ ಬರುತ್ತಿರುತ್ತದೆ.

ಜಾಗತಿಕ ಸನ್ನಿವೇಶದ ಹಿನ್ನೆಲೆಯಲ್ಲಿ ಭಾರತ ಪಾಕಿಸ್ತಾನಗಳ ನಡುವೆ ೫೦೦ ಕೋಟಿ ಡಾಲರ್‌ ವ್ಯಾಪಾರ ನಡೆಯಬಲ್ಲದು. ಎಲ್ಲವೂ ಸುಗಮವಾದರೆ. ಇದು ೨೨.೫ ಸಹಸ್ರ ಕೋಟಿ ರೂಪಾಯಿಗೆ ಸಮ!

ಇದೆಲ್ಲ ಅಂಕಿಸಂಖ್ಯೆ ಸಾಧ್ಯಸಾಧ್ಯತೆಗಳ ಪ್ರಶ್ನೆ. ವಾಸ್ತವವಾಗಿ ಅಧಿಕೃತವಾಗಿ ವ್ಯಾಪಾರವಾಗುತ್ತದೆ ಎಂಬಂತೆ ಅಲ್ಲವಾದರೂ ಕದ್ದು ಮುಚ್ಚಿ ಸರಕು ಸಾಗಾಣಿಕೆ ಆಗುವುದಕ್ಕೆ ಯಾವ ಅಡ್ಡಿಯೂ ಇಲ್ಲ ಎನ್ನುವುದು ಜನಜನಿತವಾದ ಅಂಶ. ಹೀಗೆ ಆಗುವ ವ್ಯಾಪಾರದ ಗಾತ್ರ ಎಷ್ಟಿರಬಹುದು ಎಂಬ ಅಂದಾಜು ಸಹ ಉಂಟು. ಒಂದು ಲೆಕ್ಕಾಚಾರದ ಪ್ರಕಾರ ೪೫೦೦ ಕೋಟಿ ರೂಪಾಯಿ ಬೆಲೆಯ ಸರಕು ಗಡಿಯ ಆಚೀಚೆಗೆ ಸಾಗಾಣಿಕೆ ಆಗುತ್ತದೆ! ಅಂದರೆ ಅಧಿಕೃತ ವಹಿವಾಟಿನ ನಾಲ್ಕೂವರೆಯಷ್ಟು. ಇದು ಯಾವ ನಮೂನೆಯ ನೆರೆಹೊರೆ?

ಕದ್ದು ಮುಚ್ಚಿ ಸಾಗಾಣಿಕೆ ಆಗುವ ಸರಕುಗಳಲ್ಲಿ ಕರ್ನಾಟಕದ ತಿಪಟೂರು ಮತ್ತು ಸುತ್ತಮುತ್ತಲ ಪ್ರದೇಶಗಳಿಂದ ಖರೀದಿಸಲಾಗುವ ಕೊಬ್ಬರಿ, ಮಲೆನಾಡು ಕೇಂದ್ರಗಳಿಂದ ಸಂಗ್ರಹಿಸುವ ಅಡಿಕೆಯೂ ಸೇರಿದೆ. ಇದೀಗ ಬಂದಿರುವ ಗುಮಾನಿಯೆಂದರೆ, ಗುಟ್ಕಾದಂತ ಉತ್ಪನ್ನಗಳಿಗೆ ಪೂರೈಕೆ ಆಗುವ ವಿದೇಶಿ ಅಡಿಕೆ ಪಾಕಿಸ್ತಾನ ಮೂಲಗಳಿಂದ ಬರುತ್ತಿದೆ. ಸೂರತ್‌ನಿಂದ ಜರಿ ರವಾನೆಯಾಗುವುದುಂಟು. ಈ ಐಟಂ ಅಧಿಕೃತ ರಿಯಾಯ್ತಿ ಕರ ವಹಿವಾಟಿನ ಪಟ್ಟಿಗೆ ಸೇರಲು ಈತನಕ ಸಾಧ್ಯವಾಗಿಲ್ಲ. ಅಷ್ಟೇಕೆ; ನಿತ್ಯ ಪೂರೈಕೆ ಆಧಾರದ ಮೇಲೆ ಒದಗಿಸಬೇಕಾಗುವ ವೀಳ್ಯದೆಲೆಯು ಬಾಂಗ್ಲಾದಿಂದ ಪಾಕಿಸ್ತಾನಕ್ಕೆ ಕಾನೂನುಬಾಹಿರ ಮಾರ್ಗದಲ್ಲಿ ಹೋಗುತ್ತದೆ ಎಂಬ ಅಂಶ ಈ ಹಿಂದೆ ವರದಿಯಾಗಿತ್ತು.

ಅಧಿಕೃತ ವ್ಯವಹಾರವನ್ನು ಪಾಕಿಸ್ತಾನ ಏನಿದ್ದರೂ ದುಬೈ, ಚೀನಾ, ಹಾಂಕಾಂಗ್‌, ಇಂಡೋನೇಷ್ಯಾ ಮತ್ತು ದಕ್ಷಿಣ ಕೊರಿಯಾ ಜೊತೆ ನಡೆಸುತ್ತದೆ. ಅಧಿಕೃತ ವ್ಯಾಪಾರ ನಡೆಸಲು ಬಯಸುವ ವರ್ತಕರಿಗೇನೂ ಪಾಕಿಸ್ತಾನದಲ್ಲಿ ಕೊರತೆಯಿಲ್ಲ. ಆದರೆ ಗಡಿಯಗುಂಟ ನಡೆಯುವ ಅನಧಿಕೃತ ಸಾಗಾಣಿಕೆಯ ಪ್ರತಾಪವೇ ಅಧಿಕ. ವಾಣಿಜ್ಯೋದ್ಯಮ ಸಂಘಗಳ ವೇದಿಕೆಯೊಂದರಲ್ಲಿ ವ್ಯಕ್ತವಾದ ಒಂದು ಅಭಿಪ್ರಾಯ ಕುತೂಹಲಕಾರಿ: ‘ಅಧಿಕೃತ ವ್ಯಾಪಾರಕ್ಕೆ ಪ್ರಶಸ್ತ ಸನ್ನಿವೇಶವೇ ಇಲ್ಲ’. ಪಾಕ್‌ ವಾಣಿಜ್ಯೋದ್ಯಮಿಗಳು ಹೇಳುತ್ತಾರೆ. ರಾಜಾರೋಷ ವ್ಯಾಪಾರಕ್ಕೆ ಅನುಕೂಲಕರವಾದ ಹೆದ್ದಾರಿ ಮಾರ್ಗ ಮತ್ತು ಬಂದರುಗಳೇ ಲಭ್ಯವಿಲ್ಲವೆಂದು. ಒಂದು ವರದಿಯ ಪ್ರಕಾರ ಎಷ್ಟೋ ವೇಳೆ ಅಧಿಕೃತ ವ್ಯಾಪಾರದ ಸರಕು ವಾಸ್ತವಾಗಿ ಇರಾಕ್‌, ಸಂಯುಕ್ತ ಅರಬ್‌ ಗಣರಾಜ್ಯ ಮತ್ತಿತರ ಮೂರನೇ ರಾಷ್ಟ್ರಗಳ ಮೂಲಕ ನಡೆಯುತ್ತದೆ.

ಈಗಾಗಲೇ ವ್ಯಕ್ತವಾಗಿರುವಂತೆ ಪಾಕಿಸ್ತಾನಗಳಿಗೆ ಒಂದು ಭಯವಿದೆ; ಭಾರತದ ಸರಕಿಗೆ ಹೆಬ್ಬಾಗಿಲನ್ನು ತೆರೆದರೆ ಭಾರತದ ಸರಕಿನ ಪ್ರವಾಹವೇ ಹರಿದುಬಿಡುತ್ತದೆ! ೦೫.೦೯.೨೦೦೧.