‘ಮೇಡ್‌ ಇನ್‌ ಚೈನ’ ಅರವತ್ತರ ದಶಕದಲ್ಲಿ, ಭಾರತ ಚೀನಾ ಯುದ್ಧದ ನಂತರ, ಇದರ ಮಾತನ್ನು ಎತ್ತುವಂತಿರಲಿಲ್ಲ. ಚೀನಾದಿಂದ ಕಳ್ಳಸಾಗಾಣಿಕೆ ಆಗಿ ಬರುತ್ತಿದ್ದ ಪೆನ್ನುಗಳನ್ನು ದೇಶಾಭಿಮಾನಿ ಲೇಖಕರು ಮುಟ್ಟುತ್ತಿರಲಿಲ್ಲ. ಆಗಿನ ಬೆಲೆ ಐದು ಅಥವಾ ಐದೂವರೆ ರೂಪಾಯಿ. ನಿಜವಾಗಿ ಅಗ್ಗ. ಒಳ್ಳೆಯ ಪೆನ್ನು. ಆದರೂ ಸೂಕ್ಷ್ಮ ಸಂವೇದಿ ಜನ ಮುಟ್ಟುತ್ತಿರಲಿಲ್ಲ.

ನಲವತ್ತು ವರ್ಷದ ನಂತರ ಪರಿಸ್ಥಿತಿ ತಿರುವು ಮುರುವು ಆಗಿದೆ. ಚೀನಾ ಮೂಲದ ಸಲಕರಣೆ, ಸಾಧನಗಳು ಭಾರತದ ಬಳಕೆದಾರರ ಪಾಲಿಗೆ ಅಪ್ಯಾಯಮಾನ.

ನವದೆಹಲಿಯ ಪ್ರಗತಿ ಮೈದಾನದಲ್ಲಿ ಸದ್ಯ ವಾರ್ಷಿಕ ವಾಣಿಜ್ಯ ಮೇಳ ನಡೆಯುತ್ತಿದೆ. ಚೀನಾ ಪ್ರಾಂಗಣಕ್ಕೆ ಜನರ ನೂಕು ನುಗ್ಗುಲು. ಪೆನ್ನು, ಮರದ ಆಟಿಕೆ, ಬೀಗ, ಗಾಜಿನೈಟಂಗಳು, ನೆಲಹಾಸು, ಚರಬಿಲ್ಲೆ, ಛತ್ರಿ ಇತ್ಯಾದಿ ಇತ್ಯಾದಿ ನಾನಾ ವಸ್ತುಗಳು ಸಿಗುತ್ತವೆ. ಜನಕ್ಕೆ ಭಾರೀ ಕುತೂಹಲ. ಚೀನಾದ್ದು ಎಂಬ ಕಾರಣಕ್ಕೆ ಮೂಗು ಮುರಿಯುವಂತೆ ಇಲ್ಲ. ಈಗೆಲ್ಲ ಭೋಗವಸ್ತುಗಳೆಂದರೆ ಪರಮಾಯಿಷಿ. ಕೊಟ್ಟ ಹಣಕ್ಕೆ ಸರಿಸಾಟಿಯಾಗಿ ಸರಕು ಸಿಕ್ಕಿದರೆ ಸಾಕು. ಅದೇ ಬಗೆಯ ಅಷ್ಟೇ ಗುಣಮಟ್ಟದ ಬೇರೆ ಮೂಲದ ಸರಕು ಬೇಕೆಂದು, ಅಗ್ಗವಾಗಿದ್ದರೆ ಹುಡುಕಿಕೊಂಡು ಹೋಗಿ ನೋಡಬೇಕೆಂದು ತಹತಹ!

ಬಹಳ ಹಿಂದಿನಿಂದ, ನೂರು ವರ್ಷಕ್ಕೂ ಹಿಂದಿನಿಂದ ಚೀನಾಂಬರ ಪ್ರಸಿದ್ಧ. ರೇಷ್ಮೆ ಎಂದರೆ ಚೀನಾದ್ದು ಅತ್ಯುತ್ತಮ ಎಂಬ ಭಾವನೆ ಹಳೆಯದು. ಚೀನಾದಲ್ಲಿ ಮಲ್ಬೆರಿ ರೇಷ್ಮೆ ಉಳಿದುಕೊಂಡಿದೆ. ಜಪಾನು ವಾಸ್ತವವಾಗಿ ರೇಷ್ಮೆ ಕೃಷಿ ಮತ್ತು ಉದ್ಯಮವನ್ನು ಕೈಬಿಟ್ಟಿದೆ. ಆದರೆ ಪರಿಣಿತಿಯನ್ನು ಭಾರತಕ್ಕೆ ಧಾರೆ ಎರೆಯುತ್ತಿದೆ. ಭಾರತವೇ ಅದನ್ನು ವೇಗವಾಗಿ ಗ್ರಹಿಸುತ್ತಿಲ್ಲ. ಚೀನಾದ್ದು ಜಪಾನಿನ ಧೋರಣೆಗಿಂತ ವಿಭಿನ್ನ. ಪರಿಣಿತ ಧಾರೆ ಎರೆಯುವ ಮಾತ್ರು ಹಾಗಿರಲಿ; ಭಾರತೀಯರ ರೇಷ್ಮೆ ಪರಿಣತಿಯನ್ನು ಧ್ವಂಸ ಮಾಡುವ ದಿಕ್ಕಿನಲ್ಲಿ ಚೀನಾ ಶ್ರಮಿಸುತ್ತಿದೆ. ಅದರ ಮಾರ್ಗೋಪಾಯ ಸರಳ. ಭಾರತದ ಮಟ್ಟಿಗೆ ಅತ್ಯುತ್ತಮ ಎನಿಸುವಂಥ ರೇಷ್ಮೆಯನ್ನು ಭಾರತಕ್ಕೆ ತಂದು ಸುರಿಯುವುದು. ಆ ಮೂಲಕ ಭಾರತದಲ್ಲಿ ತಯಾರಾಗುವ, ಚೀನಾದಷ್ಟು ಒಳ್ಳೆಯದಲ್ಲದ, ಉತ್ಪನ್ನಕ್ಕೆ ಬೆಲೆ ಇಲ್ಲದಂತೆ ಮಾಡುವುದು. ಇದರಿಂದಾಗಿ ರೇಷ್ಮೆ ಕೃಷಿ ಮತ್ತು ಉದ್ಯಮ ತತ್ತರಿಸುತ್ತಿವೆ. ನೇರ ಆಮದಾಗಿಯೂ ಚೀನಾ ರೇಷ್ಮೆ ಬರುತ್ತದೆ. ಕಳ್ಳ ಸಾಗಾಣಿಕೆಯೂ ಆಗುತ್ತದೆ.

ಇವತ್ತು ಗ್ರಾಹಕರ ಮನ ಗೆಲ್ಲುತ್ತಿರುವ ಚೀನಾ ಮೂಲದ ಸರಕು, ರೇಷ್ಮೆಯು ಬಂದು ಬಿದ್ದಂತೆ ರಾಶಿರಾಶಿಯಾಗಿ ನಾಳೆ ಸುರಿದು ಬೀಳಬಹುದು.

ಚೀನಾದಿಂದ ಆಮದಾಗುತ್ತಿರುವ ಕೆಲವು ಐಟಂಗಳ ಹಣ ಮೌಲ್ಯ ಸದ್ಯ ಕಡಿಮೆ ಕಾಣಿಸಬಹುದು. ಆದರೆ ಅವುಗಳ ಸಂಖ್ಯೆಯೂ, ಪೇಟೆ ಪೇಟೆಗಳಲ್ಲಿ ಅವು ಹರಡಿಕೊಳ್ಳುವ ರೀತಿಯೂ ಅಗಾಧ ಪರಿಣಾಮ ಬೀರಬಲ್ಲದು.

ಉದಾಹರಣೆಗೆ ೨೦೦೧ರ ಏಪ್ರಿಲ್‌-ಆಗಸ್ಟ್‌ ಅವಧಿಯಲ್ಲಿ ಚೀನಾ ಪೆನ್ನುಗಳ ಆಮದು ರೂ. ೪೦ ಲಕ್ಷ ಪ್ರಮಾಣದಲ್ಲಿತ್ತು. ಆ ಹಣಕ್ಕೆ ೩,೨೧,೦೦೦ ಪೆನ್ನುಗಳು ಭಾರತ ಪ್ರವೇಶಿಸಿದವು. ೨೦೦೨ರ ಏಪ್ರಿಲ್‌-ಆಗಸ್ಟ್‌ ಅವಧಿಯಲ್ಲಿ ಮೌಲ್ಯಾನುಸಾರ ಆಮದು ರೂ. ೧೮೪ ಲಕ್ಷಕ್ಕೆ ಏರಿತು. ಆಗ ಬಂದ ಪೆನ್ನುಗಳ ಸಂಖ್ಯೆ ೮,೪೮,೦೦೦ಕ್ಕೆ ಬೆಳೆಯಿತು. ಅಂದರೆ ವರ್ಷಕ್ಕೆ ಆರು ಲಕ್ಷ ಪೆನ್ನುಗಳು ಬರುತ್ತಿದ್ದ ಕಡೆ ಹದಿನೇಳು ಲಕ್ಷ ಪೆನ್ನುಗಳು ಬಂದು ಬೀಳುತ್ತಿವೆ.

ಚೀನಾ ತಯಾರಿಸುವ ಪ್ರತಿ ಐಟಂ ವಿಷಯದಲ್ಲೂ ಹೀಗೆ ಆಗುತ್ತಿದೆ. ಮುಖ್ಯವಾಗಿ ಕಡಿಮೆ ತಲಾ ಮೌಲ್ಯದ ಪ್ರತಿ ಸರಕೂ ಪೇಟೆಯ ಮೇಲೆ ದಾಳಿ ಮಾಡುತ್ತದೆ. ಎಲೆಕ್ಟ್ರಾನಿಕ್ಸ್‌ ಐಟಂಗಳು ಮಾತ್ರವಲ್ಲದೆ ಮೋಟರ್‌ ಸೈಕಲ್‌ನಂಥ ಸರಕು ಸಹಾ ಭಾರತದ ಗ್ರಾಹಕರ ಮನ ಸೆಳೆಯುತ್ತಿದೆ.

ಚೀನಾದ ಸುರಿ ನೀತಿಯ ಅಂಗವಾಗಿ ಕಳ್ಳಸಾಗಣೆ ಮೂಲಕ ಒಳಕ್ಕೆ ನುಗ್ಗುವ ಸರಕಿನ ಮಾತು ಹಾಗಿರಲಿ; ಅಧಿಕೃತವಾಗಿ ಆಗುವ ಆಮದೇ ಹೆಚ್ಚುತ್ತಿದೆ. ಆಮದು ಹೆಚ್ಚಳವನ್ನು ತಡೆಯಲು ಸಾಧ್ಯವಾಗುತ್ತಿಲ್ಲ.

ಜವಳಿ ಉತ್ಪನ್ನಗಳನ್ನು ೯೫-೯೬ರಲ್ಲಿ ೩೪೨ ಲಕ್ಷ ಡಾಲರ್‌ನಷ್ಟು ಭಾರತಕ್ಕೆ ರಫ್ತು ಮಾಡಿತ್ತು. ೨೦೦೧-೦೨ರಲ್ಲಿ ಇದು ೧೨೫೨ ಲಕ್ಷ ಡಾಲರ್‌ಗೆ ಏರಿತು. ಅಂದರೆ ನಾಲ್ಕುಪಟ್ಟು. ಎಲೆಕ್ಟ್ರಾನಿಕ್ಸ್‌ ಉತ್ಪನ್ನ, ಕಲ್ಲಿದ್ದಲು ಕಿಟ್ಟ, ಸಾವಯವ ರಾಸಾಯನಿಕ ಹೀಗೆ ಎಲ್ಲ ಮುಖ್ಯ ಬಾಬುಗಳ್ಲಲೂ ಇದೇ ಅವಧಿಯಲ್ಲಿ ಶೇ. ೪೦ ಏರಿಕೆ ಕಾಣಬಹುದು.

ಭಾರತಕ್ಕೆ ಮಾತ್ರವಲ್ಲ. ಅಮೆರಿಕಕ್ಕೆ ಸಹ ಕಡಿಮೆ ಮುಖಬೆಲೆಯ ಹಾಗೂ ರಾಶಿ ರಾಶಿ ಆಗುವಂಥ ಸಣ್ಣಪುಟ್ಟ ಉತ್ಪನ್ನಗಳನ್ನು ಚೀನಾ ರಫ್ತು ಮಾಡುತ್ತಿದೆ. ಅಮೆರಿಕದ ಯಾವುದೇ ಮಾಲ್‌ಗೆ (ನಮ್ಮ ಸೂಪರ್‌ ಬಜಾರ್‌ಗೆ ಸಮನಾದ ಮಳಿಗೆ ಸಂಕೀರ್ಣಗಳಿಗೆ) ಹೋದರೂ, ಯಾವ ಬಳಕೆದಾರ ವಸ್ತುವನ್ನು ಕೈಗೆತ್ತಿಕೊಂಡರೂ ಅದು ಮೇಡ್‌ ಇನ್‌ ಚೈನಾ ಆಗಿರುತ್ತದೆ. ನಮ್ಮ ನೆಂಟರಿಸ್ಟರು ಭಾರತಕ್ಕೆ ಅಪರೂಪ ಎಂದು ಭಾವಿಸಿ ಉಡುಗೊರೆಯಾಗಿ ತರಬಲ್ಲ ಐಟಂಗಳು ಚೀನಾದ್ದೇ ಆಗಿರುತ್ತದೆ.

ಏನಿದರ ಮರ್ಮ? ಇವನ್ನು ಯಾವುದೇ ರಾಷ್ಟ್ರ ತಯಾರಿಸಬಹುದಾದಕ್ಕಿಂತ ಅಗ್ಗವಾಗಿ ಚೀನಾ ತಯಾರಿಸುತ್ತದೆ. ಕಟ್ಟುನಿಟ್ಟಾಗಿ ಗುಣ ನಿಯಂತ್ರಣ ಪಾಲಿಸುತ್ತದೆ. ‘ಈ ಬೆಲೆಗೆ ಇದಕ್ಕಿಂತ ಒಳ್ಳೆಯ ಇಂಥ ಸರಕು ಇನ್ನೆಲ್ಲೂ ಸಿಗುವುದಿಲ್ಲ’ ಎಂಬ ಭಾವನೆ ಬಳಕೆದಾರನಿಗೆ ಬರುತ್ತದೆ. ಅದೇ ಗುಟ್ಟು. ಚೀನಾ ಈಗ ಯಾವ ವೇಗದಲ್ಲಿ ಮುಂದಡಿ ಇಡುತ್ತಿದೆ ಎಂದರೆ ೨೦೧೦ರ ವೇಳೆಗೆ ಅಮೆರಿಕಕ್ಕೆ ಸರಿಸಮನಾದ ಜಿಡಿಪಿ (ಒಟ್ಟಾರೆ ಆಂತರಿಕ ಉತ್ಪನ್ನ ಎಂದರೆ ಒಂದು ವರ್ಷದಲ್ಲಿ ರಾಷ್ಟ್ರವು ಉತ್ಪಾದಿಸುವ ಸರಕು ಮತ್ತು ಸೇವೆಗಳ ಒಟ್ಟು ಮೊತ್ತ) ಸಾಧಿಸಲು ಹೊರಟಿದೆ. ಅದು ದಾರ್ಷ್ಟ್ಯತೆ ಅಲ್ಲ, ಅದರ ದಾರ್ಢ್ಯತೆ. ಆರ್ಥಿಕಾಭಿವೃದ್ಧಿ ಸಾಧಿಸುವಲ್ಲಿ ಚೀನಾ ಸಾಧಿಸಿದ ವೇಗ ಅಮೋಘ.

ಭಾರತ ಮತ್ತು ಚೀನಾಗಳು ೫೦ರ ದಶಕವನ್ನು ಒಂದೇ ಬಗೆಯ ನೆಲೆಯಿಂದ ಆರಂಭಿಸಿದವು. ಚೀನಾ ಭಾರತದಂತೆಯೇ ಪಂಚವಾರ್ಷಿಕ ಕೇಂದ್ರೀಕೃತ ಯೋಜನೆಗಳನ್ನು ಹಾಕಿಕೊಂಡಿತು. ಭಾರತದಂತೆಯೇ ರಾಜಕೀಯ ತುಮುಲಗಳನ್ನು ಕಂಡಿತು. ಆದರೆ ಚೀನಾ ೧೯೫೦ ರಿಂದ ೨೦೦೦ದವರೆಗಿನ ಅವಧಿಯಲ್ಲಿ ಭಾರಿ ಮುಂದೆ ಸಾಗಿತು.

ಮಾವೋ ಕಾಲದಲ್ಲಿ ‘ಮಹಾನ್‌ ಮುನ್ನೆಗೆತ’ ಹೆಸರಿನಲ್ಲಿ ವಯಸ್ಸಾದವರನ್ನು ಕೆಲಸಕ್ಕೆ ಹಚ್ಚುವ ಕಾರ್ಯ ನಡೆಯಿತು. ಅನಂತರ ಬಂದಿದ್ದು ಸಾಂಸ್ಕೃತಿಕ ಕ್ರಾಂತಿ; ಕಿರಿಯರನ್ನು ಉತ್ತೇಜಿತರನ್ನಾಗಿ ಮಾಡುವ ಒಂದು ದೊಡ್ಡ ಯತ್ನ. ಆದರೆ ಆರ್ಥಿಕ ಹಿನ್ನಡೆಯೇ ಸಂಭವಿಸಿದ್ದು. ಕೇಂದ್ರೀಯ ಯೋಜನಾ ವ್ಯವಸ್ಥೆ ವಿಫಲ ಎನಿಸಿಕೊಂಡಿತು. ೧೯೩೭ರಲ್ಲಿ ಜಪಾನಿನ ಜೊತೆ ನಡೆಸಿದ ಯುದ್ಧದಿಂದ ಚೇತರಿಸಿಕೊಳ್ಳುವ ಯತ್ನ ನಡೆದಿರುವಾಗಲೇ ರಾಜಕೀಯವಾಗಿ ಅಸ್ಥಿರತೆಯನ್ನು ನಿವಾರಿಸಿಕೊಳ್ಳಲಾರದೆ ದೇಶ ಬಸವಳಿಯಿತು. ೧೯೬೨ರಲ್ಲಿ ಚರಿತ್ರೆಯಲ್ಲೇ ಕಾಣದಿದ್ದಂತ ಕ್ಷಾಮವು ಸಂಭವಿಸಿ ದೇಶ ಸೊರಗಿ ಹೋಯಿತು.

ಮಾವೋ ಉತ್ತರಾಧಿಕಾರಿ ಡೆಂಗ್‌ ಅವರು (ಈಗಷ್ಟೇ ಅಧಿಕಾರ ಬಿಟ್ಟುಕೊಡುವ ಪ್ರಕ್ರಿಯೆಯನ್ನು ಆರಂಭಿಸಿರುವವರು) ೧೯೭೮ರಲ್ಲಿ ಯೋಜನೆ ಆಧಾರದ ಅಭಿವೃದಧಿ ಶೈಲಿಯನ್ನು ಕೈಬಿಟ್ಟರು. ಮಾರುಕಟ್ಟೆ ಆಧಾರದ ಆರ್ಥಿಕತೆ ಅವಲಂಬಿಸತೊಡಗಿದರು. ಆರ್ಥಿಕ ಸುಧಾರಣಾ ಕ್ರಮಗಳನ್ನು ಆರಂಭಿಸಿದರು. (ಹನ್ನೆರಡು ವರ್ಷಗಳ ನಂತರ ಭಾರತ ಸುಧಾರಣಾ ಕ್ರಮಗಳಿಗೆ ಮೊದಲಿಟ್ಟಿತು).

ಡೆಂಗ್‌ ಚೀನಾ ಆಡಳಿತವನ್ನು ಕೈಗೆತ್ತಿಕೊಂಡಾಗ ನಿರ್ವಿಣ್ಣ ಸ್ಥಿತಿ ಬದಲಾವಣೆಗೆ ಯಾರೂ ಸಿದ್ಧರಿಲ್ಲದ ಸ್ಥಿತಿ. ಆದರೆ ಏಷ್ಯದ ‘ನಾಲ್ಕು ಟೈಗರ್‌ ರಾಷ್ಟ್ರಗಳು’ ಎಂದೇ ಪ್ರಖ್ಯಾತವಾಗಿದ್ದ ತೈವಾನ್‌. ಹಾಂಕಾಂಗ್‌, ಸಿಂಗಪುರ ಮತ್ತು ಕೊರಿಯಾಗಳು ಮಾರುಕಟ್ಟೆ ಪ್ರಧಾನ ಅರ್ಥವ್ಯವಸ್ಥೆಯನ್ನು ಆಲಂಗಿಸಿಕೊಂಡು ನಾಗಾಲೋಟದಲ್ಲಿ ಮುಂದುವರೆದಾಗ, ಆ ವಿದ್ಯಮಾನವನ್ನು ತೋರಿಸಿ ಚೀನಾ ಮುನ್ನಡೆಗೆ ನಾಯಕಗಣವನ್ನು ಡೆಂಗ್‌ ಹಚ್ಚಿದರು.

ಮೊದಲು ಕೃಷಿರಂಗದಲ್ಲಿ ಸುಧಾರಣಾ ಕ್ರಮಗಳನ್ನು ಜಾರಿ ಮಾಡಿದರು. ಉಳುವವನಿಗೆ ಹಿಂದಿನ ಕಮ್ಯೂನ್‌ಗಳ ಹಾಗೂ ಭಾರೀ ಹಿಡುವಳಿ ವ್ಯವಸ್ಥೆಯಿಂದ ಮುಕ್ತಿ ಸಿಕ್ಕಿ ಖಾಸಗಿ ಒಡೆತನದ ರುಚಿ ಸಿಕ್ಕಿದ ತಕ್ಷಣ ಆತ ಹಿಂದೆ ನೋಡಿದ್ದೆ ಇಲ್ಲ. ಕೃಷಿರಂಗದ ಬಗೆಗೆ ಇನ್ನು ಚಿಂತೆ ಇಲ್ಲ ಎನ್ನುವಂತೆ ಆದಾಗ ಉದ್ಯಮ ರಂಗಕ್ಕೆ ಡೆಂಗ್‌ ಕೈಹಾಕಿದರು. ಸರ್ಕಾರಿ ಒಡೆತನ ಉದ್ಯಮ ಸುಧಾರಣಾ ಕ್ರಮಗಳನ್ನು ಅಂಗೀಕರಿಸಿದ್ದು ನಿಧಾನವಾಯಿತು. ಆದರೆ ಖಾಸಗಿ ವಲಯ ವೇಗ ಸಾಧಿಸಿದಾಗ ಸರ್ಕಾರಿ ವಲಯ ಹಿಂದೆ ಬೀಳಲು ಒಪ್ಪಲಿಲ್ಲ.

ಅಭಿವೃದ್ಧಿ ಸಾಧಿಸಬೇಕೆಂದು ಸಾಮಾನ್ಯ ಜನ ಕಾತರಿಸಿದರು. ಹಳೇ ನಾಯಕರು ತಮ್ಮ ತತ್ವನಿಷ್ಠೆಯನ್ನು ಬದಿಗೆ ಸರಿಸಲು ಹಿಂಜರಿಯುತ್ತಲೇ ಒಪ್ಪಿದರು. ಡೆಂಗ್‌ಗೆ ಅನುಕೂಲವಾಯಿತು. ಚೀನಿಯರು ಕಾರ್ಯಸಾಧು ಆಗಿರಬೇಕು ಎನ್ನುವುದನ್ನು ಬಿಂಬಿಸಲು ಡೆಂಗ್‌ ಹೇಳಿದರು: ಬೆಕ್ಕು ಬಿಳುಪೇ ಅಥವಾ ಕಪ್ಪೇ ಎಂದು ಯಾರೂ ತಲೆಕೆಡಿಸಿಕೊಳ್ಳಬೇಕಿಲ್ಲ. ಅದು ಇಲಿ ಹಿಡಿಯುವತನಕ ಬೇರೆ ಚಿಂತೆ ಬೇಡ!

ಆರ್ಥಿಕಾಭಿವೃದ್ಧಿ ಸಾಂಸ್ಥಿಕ ವ್ಯವಸ್ಥೆಗೆ, ಅಂದರೆ ಬ್ಯಾಂಕೇ ಮುಂತಾದವುಗಳಿಗೆ ಯಾವುದೇ ನೀಲಿನಕ್ಷೆ ಕೊಡಲಿಲ್ಲ. ಒಂದೇ ನೀತಿ ಚೌಕಟ್ಟು; ಫಲಿತ ಸಾಧಿಸುವ ಪ್ರಯೋಗಗಳನ್ನು ಮಾಡುತ್ತಾ ಹೋಗಬೇಕು. ವಿಫಲವಾಗುವಂಥವನ್ನು ಕೈ ಚೆಲ್ಲುತ್ತಾ ಮುಂದೆ ಸಾಗಬೇಕು. ಡೆಂಗ್‌ ಹೇಳಿದರು: ನದಿ ದಾಟುವಾಗ ತಳದ ಬಂಡೆಗಳ ಸ್ಪರ್ಶ ಅನುಭವಿಸುತ್ತಲೇ ಸಾಗಬೇಕು.

ಇಂಥದು ಮಾಡಿರೆಂದು ಡೆಂಗ್‌ ಹೇಳುವುದು ಎರಡೇ ಬಗೆಯ ಪ್ರಯೋಗಗಳನ್ನು. ಒಂದು, ಫಲಿತ ಸಾಧಿಸುವುದು ಹೇಗೆ ಎಂಬುದನ್ನು ಕಂಡುಕೊಳ್ಳಿ. ಎರಡು, ಹಳೆ ತತ್ವಗಳಿಗೆ ಅಂಟಿಕೊಂಡವರ ಆಲೋಚನಾ ವಿಧಾನಗಳನ್ನು ಬದಲಿಸಿ, ‘ವಾಸ್ತವಾಂಶದ ಸತ್ಯ ಏನಿದೆ ಅಂತ ನೋಡಿ’ ಎಂದು ಅವರಿಗೆ ಹೇಳಿ!

ಮಾವೋ ಮಾಡಿದಂತೆ ‘ಷಾಕ್ ಚಿಕಿತ್ಸೆ’ ಕೊಡುವುದು ಬೇಡ. ಎಲ್ಲ ನಿಧಾನವಾಗಿ ಸತತವಾಗಿ ಜರುಗಬೇಕು.

ಶ್ರೀಮಂತಿಕೆಯ ರುಚಿಯನ್ನು ಜನ ನೋಡಲಿ ಎಂಬುದು ಡೆಂಗ್‌ ಆಸೆ. ಹಣ ಪೂರೈಕೆಯನ್ನು (ಅಂದರೆ ಆಧಾರವಿಲ್ಲದೆ ನೋಟು ಛಾಪಿಸಿ ಬಿಡುಗಡೆ ಮಾಡುವುದನ್ನು) ೮೪ರಲ್ಲಿ ಶೇ. ೫೦ ಹಾಗೂ ೮೬-೮೮ರಲ್ಲಿ ಶೇ. ೫೦ ರಷ್ಟು ಹೆಚ್ಚಿಸಿದರು. ಫಲಿತ, ಹಣದುಬ್ಬರ. ವಾರ್ಷಿಕ ಹಣದುಬ್ಬರವು ಶೇ. ೩೦.

ಅಧಿಕಾರಿಗಳು ಭ್ರಷ್ಟರಾದರು. ಜನಕ್ಕೆ ಹಿಂಸೆ ಜಾಸ್ತಿಯಾಯಿತು. ವಿದ್ಯಾರ್ಥಿಗಳು ತಿರುಗಿಬಿದ್ದರು. ಎಲ್ಲ ಕಡೆಯಿಂದ ಬಂದು ಟಿಯಾನೆನ್ಮನ್‌ ಚೌಕದಲ್ಲಿ ಸೇರುವ ಕಾರ್ಯ ಎರಡು ತಿಂಗಳು ನಡೆಯಿತು. ಈ ಚಳವಳಿಗೆ ಹಾಂಕಾಂಗ್‌, ತೈವಾನ್‌ಗಳು ಹಣ ಪೂರೈಸಿದವು. ಅಮೆರಿಕ ಕೂಡಾ ಹಾಗೆ ಮಾಡಿತೆಂಬ ಶಂಕೆ ಇದೆ.

ಟಿಯಾನೆನ್ಮನ್‌ ಪ್ರಕರಣದಿಂದ ಡೆಂಗ್‌ ಅಪ್ರತಿಭರಾದರು. ಅವರ ಕಾಲದ ರಾಜಕೀಯ ಸ್ಥಿರತೆಗೆ ಈ ಘಟನೆಯಿಂದ ಬರೆ ಇಟ್ಟಂತೆ ಆಯಿತು. ಡೆಂಗ್ ಬೀಳಲಿಲ್ಲ. ಅವರು ಜಾರಿಗೆ ತಂದ ಸುಧಾರಣಾ ಕ್ರಮಗಳು ಫಲ ಕೊಡುತ್ತಿವೆ, ವಿಶ್ವಾದ್ಯಂತ. ೨೭. ೧೧.೨೦೦೨.