ಚೀನಾ ಜಪಿಸಿದ ಮಾರ್ಕ್ಸ್‌ವಾದಿ ಮಂತ್ರ: ‘ವಿಶ್ವದ ಕಾರ್ಮಿಕರೇ ಒಂದಾಗಿ!’ ಬಹುಶಃ ಚೀನಾದ ಕಮ್ಯುನಿಸ್ಟ್‌ ಪಕ್ಷ ಈ ಘೋಷ ವಾಕ್ಯಕ್ಕೆ ಸದ್ಯ ಬದ್ಧವಾಗುವುದಿಲ್ಲ. ಏಕೆಂದರೆ ಚೀನಾದಲ್ಲಿ ಬಂಡವಾಳಶಾಹಿಗೆ ಕೆಂಪು ರತ್ನಗಂಬಳಿ ಸ್ವಾಗತ, ನಾಯಕರಿಗೆಲ್ಲ ಒಂದೇ ತುಡಿತ; ಗಳಿಸಬೇಕು; ಪ್ರಪಂಚದಲ್ಲೇ ಶ್ರೀಮಂತ ರಾಷ್ಟ್ರ ಎನಿಸಿಕೊಳ್ಳಬೇಕು. ಹೊರ ಪ್ರಪಂಚಕ್ಕೆ ಪೂರ್ತಿ ತೆರೆದುಕೊಳ್ಳಬೇಕು. ಒಂದೇ ಬಾರಿಗೆ ಅಲ್ಲವಾದರೂ ಸ್ವಲ್ಪ ಸ್ವಲ್ಪ ನಿಧಾನವಾಗಿ ಆದರೂ ಸರಿ.

ಚೀನಾ ಒದಗಿಸುವ ಅಧಿಕೃತ ಅಂಕಿಸಂಖ್ಯೆ ಪ್ರಕಾರ ಚೀನಿಯರೇ ಸ್ಥಾಪಿಸಿ ನಡೆಸುತ್ತಿರುವ ಖಾಸಗಿ ಕಂಪೆನಿಗಳ ಸಂಖ್ಯೆ ೧೭ಲಕ್ಷ. ಅವರು ತೊಡಗಿಸಿರುವ ಬಂಡವಾಳ ೧೩೨೮೫ ಕೋಟಿ ಡಾಲರ್‌ಗೆ ಸಮ. ಚೀನಾದ ೧೩೦ ಕೋಟಿ ಜನಸಂಖ್ಯೆಗೆ ಹೋಲಿಸಿದರೆ ಖಾಸಗಿ ಉದ್ಯಮಿಗಳ ಸಂಖ್ಯೆಯೇನೂ ದೊಡ್ಡದಲ್ಲ. ಆದರೆ ಅತಿದೊಡ್ಡ ಜನಸಂಖ್ಯೆಯ ಕಮ್ಯುನಿಸ್ಟ್‌ ರಾಷ್ಟ್ರವದು. ಚೀನಾ ಸಾಗುತ್ತಿರುವ ದಿಕ್ಕಿಗೆ ಇದು ಸೂಚಿ.

ಚೀನಾ ಸಂವಿಧಾನದ ಪ್ರಕಾರ, ಈಗಲೂ ತಿದ್ದುಪಡಿ ಆಗಿಲ್ಲವಾದ ರೀತಿಯಲ್ಲಿ, ಸರ್ಕಾರಿ ಒಡೆತನದ ಆಸ್ತಿಪಾಸ್ತಿ ಎಂದರೆ ಪವಿತ್ರ. ಯಾರೂ ಯಾವುದೇ ರೀತಿಯಲ್ಲೂ ಇದಕ್ಕೆ ಹಾನಿ ಎಸಗುವಂತಿಲ್ಲ.

ಇದೀಗ ತಲೆ ಎತ್ತಿರುವ ಹೊಸ ಉದ್ಯಮಶೀಲ ಮಂದಿ ತಾವು ಗಳಿಸಿ ಬೆಳೆಸಿದ ಆಸ್ತಿಪಾಸ್ತಿಗೂ ಇಂಥವೇ ರಕ್ಷಣೆಯ ಭರವಸೆ ಬೇಕೆಂದು ಕೇಳುತ್ತಿದ್ದಾರೆ.

ಇವರಿಗೆ ಚೀನಾ ಸರ್ಕಾರ ಕೊಡಬಹುದಾದ ರಿಯಾಯ್ತಿ ರಕ್ಷಣೆಗಳ ಮಾತು ಹಾಗಿರಲಿ; ಪರ ರಾಷ್ಟ್ರಗಳಿಂದ ಬರುವ ಉದ್ಯಮಿಗಳು ಇಲ್ಲಿ ಒದಗಿಸುವ ಸೌಕರ್ಯಗಳಿಂದ, ಇಲ್ಲಿ ಒದಗಿಬರುವ ಅನುಕೂಲಗಳಿಂದ ಮಾರುಹೋಗಿದ್ದಾರೆ. ಚೀನಿಯರಿಗೆ ಅರ್ಥವಾಗಿದೆ, ಯಾವ ವಾಣಿಜ್ಯೋದ್ಯಮಿಯೂ ಪರ ರಾಷ್ಟ್ರವೊಂದಕ್ಕೆ ಬಂದು ಹಣ ಹಾಕಿ ಉದ್ಯಮ ನಡೆಸಲು ಸುಮ್ಮ ಸುಮ್ಮನೆ ಬರುವುದಿಲ್ಲವೆಂದು.

‘ಏನೇ ಸರಕನ್ನು ಚೀನಾದಲ್ಲಿ ತಯಾರಿಸಿದರೂ ಭಾರತದಲ್ಲಿ ಸಿದ್ಧವಾಗಿ ಲಭಿಸುವಂಥ ಆಂತರಿಕ ಮಾರುಕಟ್ಟೆ ಸೌಕರ್ಯವಿದೆ. ಕಾರ್ಮಿಕರು ಕುಶಲಿಗಳಾಗಬಲ್ಲರು; ಕಷ್ಟಪಡುವುದರ ಜೊತೆಗೆ ಶಿಸ್ತಿನಿಂದ ದುಡಿಯುವವರು. ದಿನದ ೧೦-೧೨ ಗಂಟೆ ಕತ್ತೆ ದುಡಿತಕ್ಕೆ ಹೆಸರಾದವರು. ಉದ್ಯಮಕ್ಕೆ ನೆರವಾಗುವ ಸರ್ಕಾರದ ಪಾಲಿಸಿಯಲ್ಲಿ ಗೊಂದಲವೇನೂ ಇಲ್ಲ. ನಂಬಿಕೆಗೆ ಪಾತ್ರವಾದ ಅಂದರೆ ವಿಫಲಗೊಳ್ಳದ ಮೂಲ ಸೌಲಭ್ಯ. ಸ್ನೇಹಮಯಿ ಅಧಿಕಾರಶಾಹಿ. ಎಲ್ಲಕ್ಕಿಂತ ಹೆಚ್ಚಾಗಿ ಅತ್ಯಾಧುನಿಕ ಉದ್ಯಮ ತಂತ್ರಜ್ಞಾನವನ್ನು ಅರಗಿಸಿಕೊಳ್ಳಬೇಕೆಂಬ ಚೀನಾದ ಹಸಿವು!’

ದಶಕಗಳ ಪರ್ಯಂತ ಚೀನಾ ವಿದ್ಯಮಾನಗಳನ್ನು ಕಂಡವರು ಸಹಾ ಈ ಮಾತನ್ನು ನಂಬುವುದಿಲ್ಲ. ಮಾರ್ಚ್ ಅಂತ್ಯದಲ್ಲಿ ಖುದ್ದಾಗಿ ಚೀನಾಕ್ಕೆ ಹೋಗಿ ಕಣ್ಣಾರೆ ಕಂಡುಬಂದ ಹಿರಿಯ ಪತ್ರಕರ್ತರೊಬ್ಬರು ದಾಖಲು ಮಾಡಿರುವ ವೃತ್ತಾಂತವಿದು.

ಇಂಥ ಪ್ರಶಸ್ತ ವಾತಾವರಣಕ್ಕೆ ಮಾರುಹೋಗಿ ಚೀನಾಕ್ಕೆ ಗುಳೆ ಬಂದಿರುವ ಉದ್ಯಮಿಗಳ ಸಂಖ್ಯೆ ನಾಲ್ಕು ಲಕ್ಷ. ಚೀನಾಕ್ಕೆ ಬಂದು ನೋಡುವವರೆಗೆ ನೀವು ಇದನ್ನು ನಂಬಲಾರಿರಿ.

ಕಳೆದ ವರ್ಷ ಚೀನಾ ಆಕರ್ಷಿಸಿದ ವಿದೇಶಿ ನೇರ ಬಂಡವಾಳ ೪೬೮೦ ಕೋಟಿ ಡಾಲರ್‌. ಭಾರತ ಆಕರ್ಷಿಸಿದ್ದು ೨೩೦ ಕೋಟಿ ಡಾಲರ್‌.

ಮೂರು ವರ್ಷ ಅವಧಿಯಲ್ಲಿ ಚೀನಾ ಆಕರ್ಷಿಸಿದ ವಿದೇಶಿ ನೇರ ಬಂಡವಾಳ ೧೧,೪೦೦ ಕೋಟಿ ಡಾಲರ್‌. ಮುಂದಿನ ಎರಡು ವರ್ಷಗಳಲ್ಲಿ ಹರಿದು ಬರಲಿರುವ ವಿದೇಶಿ ನೇರ ಬಂಡವಾಳ ೯,೦೦೦ ಕೋಟಿ ಡಾಲರ್‌.

ವಿಶ್ವದ ಅತಿ ಹೆಚ್ಚು ಜನಸಂಖ್ಯೆಯ ರಾಷ್ಟ್ರಗಳೆಂದರೆ ಚೀನಾ ಮತ್ತು ಭಾರತ. ಹೋಲಿಕೆ ಏನಿದ್ದರೂ ಅಲ್ಲಿಗೆ ಕೊನೆಗೊಳ್ಳುತ್ತದೆ.

ಚೀನಾದ ಮತ್ತು (ಭಾರತದ) ಹೋಲಿಕೆ ಅಂಕಿ ಖ್ಯೆ ಎಂದರೆ, ಜಿ.ಡಿ.ಪಿ. ಅಂದರೆ ಒಟ್ಟಾರೆ ಆಂತರಿಕ ಉತ್ಪನ್ನ ಚೀನಾದ್ದು ೧,೧೨,೦೦೦ ಕೋಟಿ ಡಾಲರ್‌ (ಭಾರತದ್ದು ೫೦,೦೦೦ ಕೋಟಿ ಡಾಲರ್‌) ವೃದ್ಧಿ ದರ ಶೇ. ೪ (ವೃದ್ಧಿ ದರ ಶೇ. ೫) ವಿದೇಶಿ ವಿನಿಮಯ ಮೀಸಲು ನಿಧಿ ಚೀನಾ ೧೬,೫೦೦ ಕೋಟಿ ಡಾಲರ್‌ (ಭಾರತ ೫೦೦೦ ಕೋಟಿ ಡಾಲರ್‌)

ಹಣದುಬ್ಬರ ದರ ಶೇ. ೦.೪ ಎಲ್ಲಿ? (ಭಾರತದ ೪ ಎಲ್ಲಿ?)

ರಫ್ತು ೨೪,೫೦೦ ಕೋಟಿ ಡಾಲರ್‌ (೪೩೦೦ ಕೋಟಿ ಡಾಲರ್)

ಭಾರತದಲ್ಲಿ ಉಳಿತಾಯ ಮಾಡುವ ಜನಕ್ಕಿದ್ದ ಎಲ್ಲ ಸೌಕರ್ಯ ಮೊಟಕು ಮಾಡಿದ್ದಾರೆ. ಉಳಿತಾಯ ದರ ಶೇ. ೨೫ ಆಗಿ ಉಳಿದಿರುವುದು ಅನುಮಾನ. ಇನ್ನೂ ಕಡಿಮೆ ಆಗಿರಬಹುದು. ಚೀನಾದ ಉಳಿತಾಯ ದರ ಶೇ. ೪೦.

ಭಾರತ ಚೀನಾಗಳು ಒಟ್ಟಿಗೆ ಯೋಜನಾಬದ್ಧ ಬೆಳವಣಿಗೆ ಹಾದಿ ಹಿಡಿದವು. ಅನಂತರ ಕೈಬಿಟ್ಟವು. ಸ್ವತಃ ಹೊರ ಪ್ರಪಂಚಕ್ಕೆ ತೆರೆದುಕೊಂಡವು. ಎರಡೂ ರಾಷ್ಟ್ರಗಳಿಗೆ ಅನನ್ಯವಾದ ಆಂತರಿಕ ಶಕ್ತಿ ಇದೆ. ಅಗಾಧ ಮಾನವ ಸಂಪನ್ಮೂಲವಿದೆ. ಚೀನಾ ಸ್ವತಃ ತೀರಾ ಗಡುಸೆನಿಸಿದ್ದ ಕಮ್ಯುನಿಸಂ ಚಿಪ್ಪಿನಿಂದ ಹೊರಬರಲು ಶಕ್ತವಾಗಿದೆ. ಬಂಡವಾಳಶಾಹಿ ವ್ಯವಸ್ಥೆಯತ್ತ ದಾಪುಗಾಲು ಹಾಕಿದೆ. ಮಿಶ್ರ ಆರ್ಥಿಕ ವ್ಯವಸ್ಥೆ ಚಿಪ್ಪಿನಿಂದ ಅಂದರೆ ಅರೆಪಾಲು ಬಂಡವಾಳಶಾಹಿಯಿಂದ ಹೊರಬಂದು ಮಾರುಕಟ್ಟೆ ಅರ್ಥ ವ್ಯವಸ್ಥೆಯತ್ತ ಹೊರಡಲು ಭಾರತಕ್ಕೆ ಹಿಂಜರಿತ.

ಹೊರ ದೇಶದಿಂದ ಬಂದು ಉದ್ಯಮ ಆರಂಭಿಸುವವರಿಗೆ ಚೀನಿ ಉದ್ಯಮಿ ಹೇಳುತ್ತಾನೆ : ನೀವು ನಾಲ್ಕು ಕಾಸು ಸಂಪಾದಿಸಲೆಂದೇ ಬಂದವರು. ಅದಕ್ಕೆ ಆಕ್ಷೇಪಿಸಲು ಹೇಗೆ ಸಾಧ್ಯ?

ಆದರೆ ಭಾರತದಲ್ಲಿ ಇನ್ನೆಲ್ಲ ಬಂಡವಾಳ ಮೂಲಗಳು ಬತ್ತಿ ಹೋಗಿದ್ದರೂ ವಿದೇಶಿ ನೇರ ಬಂಡವಾಳವನ್ನು ಪಾಪಪೂರಿತ ಎನ್ನುತ್ತೇವೆ. ಆರ್ಥಿಕವಾಗಿ ಪರರ ದಾಸ್ಯಕ್ಕೆ ಒಳಗಾಗುತ್ತೇವೆ ಎಂದು ಹೇಳುತ್ತೇವೆ.

ಸಣ್ಣ ಮೌಲ್ಯದ ಭಾರೀ ಸಂಖ್ಯೆಯಲ್ಲಿ ನಿರ್ಮಿಸುವ ಬಳಕೆದಾರ ಐಟಂಗಳನ್ನು ತಯಾರಿಸುವುದಕ್ಕೆ ಈಗಾಗಲೇ ಹೆಸರಾದ ಚೀನಾ ಅತ್ಯಂತ ಜಟಿಲ ಎಲೆಕ್ಟ್ರಾನಿಕ್ಸ್‌ ವಸ್ತುಗಳನ್ನು ಅಗ್ಗವಾಗಿ ತಯಾರಿಸುವ ದಿಕ್ಕಿನಲ್ಲಿ ವೇಗವಾಗಿ ಹೊರಟಿದೆ. ಬೀಜಿಂಗ್‌ ಅಥವಾ ಶಾಂಘೈಗಳಂಥ ಬೃಹತ್‌ ನಗರಗಳು ಪಶ್ಚಿಮದ ಅತ್ಯಾಧುನಿಕ ಮಹಾನಗರಗಳನ್ನು ನಾಚಿಸುವಷ್ಟರ ಮಟ್ಟಿಗೆ ಬೆಳೆದಿವೆ. ವಿಶ್ವದ ಅತಿದೊಡ್ಡ ಉದ್ಯಮ ಸಂಸ್ಥೆಗಳಾದ ಇಂಟೆಲ್‌, ಸೀಮನ್ಸ್‌, ಅಲ್ಕಾಟೆಲ್‌, ನೋಕಿಯಾ, ಕೊಡಕ್‌, ರೀಕೋ ಮುಂತಾದವನ್ನು ಮಡಿಲಲ್ಲಿ ಸೇರಿಸಿಕೊಂಡಿವೆ.

ಚೀನಾ ಸಹಾ ಭಾರತದ ಐಟಿ ಕಂಪೆನಿಗಳಿಂದ ಇನ್ಫೋಸಿಸ್‌ ವಿಪ್ರೋಗಳಿಂದ ಮಾರುಹೋಗಿದೆ. ಆದರೆ ಇನ್ನು ಮೂರು ವರ್ಷಗಳಲ್ಲಿ ಚೀನಾ ಭಾರತವನ್ನು ಐಟಿ ಕ್ಷೇತ್ರದಲ್ಲಿ ಹಿಂದಿಕ್ಕಲು ಸಾಧ್ಯವಿದೆ ಎಂಬ ಅಂದಾಜಿದೆ. (ಐಟಿ ಕ್ಷೇತ್ರದಲ್ಲಿ ವೇಗದ ಅಭಿವೃದ್ಧಿ ಸಾಧಿಸಲು ಚೀನಾ ಜಪಾನ್‌ಗಳಿಗೆ ಇರುವ ತೊಂದರೆ ಎಂದರೆ ಇಂಗ್ಲಿಷ್‌ ಶಿಕ್ಷಣದ ಕೊರತೆ) ಆದರೆ ಚೀನಾ ಸಾಧಿಸಿರುವುದನ್ನು ಕೈಗೂಡಿಸಿಕೊಳ್ಳಲು ಭಾರತ ಬಹಳ ದೂರ ಹೋಗಬೇಕು. ಚೀನಾ ಆ ವೇಳೆಗೆ ಬಹಳ ಮುಂದೆ ಹೋಗಿರುತ್ತದೆ.

ಶಾಂಘೈ ಅನ್ನು ಚೀನಾ ತನ್ನ ಆರ್ಥಿಕ ರಾಜಧಾನಿಯಾಗಿ ಬೆಳೆಸುತ್ತಿದೆ. ಆರೇಳು ತಿಂಗಳ ಹಿಂದಕ್ಕೆ ಚೀನಾಕ್ಕೆ ಭೇಟಿ ಕೊಟ್ಟಿದ್ದ ಭಾರತದ ಅರ್ಥ ಸಚಿವ ಜಸ್ವಂತ್‌ ಸಿಂಗ್‌ ಅವರು, ಶಾಂಘೈ ಜನರ ಉದ್ಯಮಶೀಲವನ್ನು ಹುಚ್ಚಾಪಟ್ಟೆ ಹೊಗಳಿದ್ದರು. ಪೂರ್ವ ಏಷ್ಯಾದಲ್ಲೇ ಇಂಥದೊಂದು ಪ್ರಾಚೀನ ಇತಿಹಾಸ ಹಿನ್ನೆಲೆಯುಳ್ಳ ಹಾಗೂ ಆಧುನಿಕವಾಗಿ ರೂಪುಗೊಂಡ ಅದ್ಭುತ ನಗರ ಇನ್ನೊಂದಿಲ್ಲ ಎಂದರು.

ಶಾಂಘೈ ನಗರ ಸಭೆ ಪ್ರದೇಶದ ಜಿ.ಡಿ.ಪಿ. ಪಾಕಿಸ್ತಾನದ ಜಿಡಿಪಿಗೆ ಸಮ! ಶಾಂಘೈ ನಗರದ ವಿದೇಶ ವಾಣಿಜ್ಯ ಈಗಿನ ವೇಗದಲ್ಲೇ ಮುಂದುವರೆದರೆ ಇಷ್ಟರಲ್ಲೇ ಭಾರತಕ್ಕೆ ಸರಿಸಮ ಆಗುತ್ತದೆ.

ಕಳೆದ ಹತ್ತು ವರ್ಷದಲ್ಲಿ ಶಾಂಗೈ ಕಂಡ ಅಭಿವೃದ್ಧಿಯು ಚೀನಾ ಕಂಡ ಅಭಿವೃದ್ಧಿಗೆ ಸಂಕೇತ.

‘ಹುವಾಂಗ್‌ಪು ನದಿಯ ಮೇಲೆ ಸಂಚಾರ ಹೋದರೆ ಶಾಂಘೈ ಝಗಝಗಿಸುತ್ತದೆ. ಪಶ್ಚಿಮ ದಂಡೆಯ ಮೇಲೆ ವಸಾಹತುಶಾಹಿ ಕಾಲದ ಬೃಹತ್‌ ಕಟ್ಟಡಗಳು ಇದೀಗ ಪಶ್ಚಿಮ ಜಗತ್ತಿನ ಕಂಪೆನಿಗಳು ಕಟ್ಟಿದ ಕಟ್ಟಡಗಳಿಗೆ ಜೊತೆ ಜೊತೆಯಾಗಿ ಬೆಳಗುತ್ತವೆ.’

ಪೂರ್ವ ತೀರ ಹತ್ತು ವರ್ಷಗಳ ಹಿಂದೆ ಭತ್ತದ ಗದ್ದೆಗಳಿಂದ ತುಂಬಿಹೋಗಿತ್ತು. ಹತ್ತು ವರ್ಷಗಳಲ್ಲಿ ಅತ್ಯಾಧುನಿಕ ನಗರ ಪ್ರದೇಶವಾಗಿ ರೂಪುಗೊಂಡಿದೆ. ಹೊಸ ಬಂಡವಾಳವನ್ನು ಆಕರ್ಷಿಸುತ್ತಿರುವುದು ಈ ನಗರವೇ.

ವಾಸ್ತವವಾಗಿ ೧೯೭೦ರ ದಶಕದಲ್ಲಿ ಹೊಸ ಜಗತ್ತಿಗೆ ಚೀನಾ ತೆರೆದುಕೊಂಡಿದ್ದು ಗುವಾಂಗ್‌ಚೌ ಪ್ರಾಂತ್ಯದ ಮೂಲಕ. ಅದು ಹಾಂಕಾಂಗ್‌ನ ಈಚೆ ಬದಿಗೆ ಇದೆ ಎಂಬುದೇ ವಿಶೇಷವಾಗಿತ್ತು. ಆದರೆ ಕಳೆದ ಒಂದು ದಶಕದಿಂದ ಶಾಂಘೈ ನಗರ ಅಭಿವೃದ್ಧಿಗೆ ಒತ್ತು ಕೊಟ್ಟಿದ್ದಾರೆ. ಶಾಂಘೈನ ಜನ, ಶತಮಾನಗಳ ಕಾಲ ರೇವು ಪಟ್ಟಣದ ಜನರೆಂದು ಗುರುತಿಸಲಾದವರು. ಅವರಿಗೆ ಹಾಂಕಾಂಗ್‌ ಅನ್ನು ಮೀರಿಸಬೇಕೆಂಬ ಹಂಬಲ. ವಾಸ್ತವವಾಗಿ ವಸಾಹತು ತೊತ್ತಳದುಳಿತಕ್ಕೆ ಸಿಲುಕಿ ಮೇಲೆದ್ದಿದ್ದು ಹಾಂಕಾಂಗ್‌. ಅಂಥದೇ ಹಂಬಲ ಈಗ ಶಾಂಘೈಗೆ.

ಭಾರತದ ಎಷ್ಟೊಂದು ನಗರಗಳಿಗೆ ಇಂಥದೇ ಹಿನ್ನೆಲೆ ಇಲ್ಲ? ಆದರೆ ಚೀನಿ ನಾಯಕರಿಗೆ, ಜನಕ್ಕೆ ಮೇಲೆದ್ದು ನಿಲ್ಲಬೇಕೆಂಬ ಆದಮ್ಯ ಹಂಬಲ ಏನಿದೆಯೋ, ಅದೇ ಇಲ್ಲವಾಗಿವೆ ಎನಿಸದಿರದು.

ಇಷ್ಟೆಲ್ಲ ಆದರೂ ಭಾರತದ ಉದ್ಯಮ ರಂಗದ ಕಣ್ಣು-ಕಿವಿ ಎನಿಸಿಕೊಂಡಿರುವ ಸಿಐಐ (ಕಾನ್‌ಫೆಡರೇಷನ್‌ ಆಫ್‌ ಇಂಡಿಯನ್‌ ಇಂಡಸ್ಟ್ರಿ) ದೀರ್ಘ ಅಧ್ಯಯನಗಳನ್ನು ನಡೆಸಿ ಚೀನಾದಲ್ಲಿ ಉದ್ಯಮ ಸ್ಥಾಪಿಸಬೇಕಾದರೆ ಹುಷಾರಾಗಿಬೇಕು ಎಂದೇ ಹೇಳುತ್ತದೆ. ದೊಡ್ಡ ಕೊರತೆ ಎಂದರೆ ಬ್ಯಾಂಕಿಂಗ್‌ ವ್ಯವಸ್ಥೆ ಸರಿ ಇಲ್ಲ; ಸಾಲ ಸುಲಭವಾಗಿ ದೊರೆಯುವುದಿಲ್ಲ!

ಭಾರತ ಚೀನಾಗಳು ಪರಸ್ಪರ ಸಮ್ಮತಿಸಿ ಬೀಜಿಂಗ್‌ ಮತ್ತೆ ನವದೆಹಲಿ ನಡುವೆ ನೇರ ವಿಮಾನ ಹಾರಾಟವನ್ನು ಆರಂಭಿಸಿದವು. ಜನರು ಪ್ರವಾಸಿಗರಾಗಿ ಬಂದು ಹೋಗುವುದು ಹೆಚ್ಚಲಿ ಎಂಬುದು ಉದ್ದೇಶ. ಎಂಟು ತಿಂಗಳೇ ಕಳೆದರೂ ವಿಮಾನಗಳು ಬಹುಪಾಲು ಖಾಲಿ ಓಡುತ್ತಿವೆ!

ಏಪ್ರಿಲ್‌ ಸುಮಾರಿನಲ್ಲಿ ಜಸ್ವಂತ್‌ಸಿಂಗ್‌ ಹೋಗಿಬಂದರು. ಪ್ರಧಾನಿ ಅಟಲ ಬಿಹಾರಿ ವಾಜಪೇಯಿ ಭೇಟಿ ಇನ್ನೂ ಅಖೈರುಗೊಂಡಿಲ್ಲ.