‘ಅನುಕೂಲಕ್ಕೊಂದು ಮದುವೆ’ ಎನ್ನುವ ಗಾದೆ ಇದೆಯೋ ಇಲ್ಲವೋ ಗೊತ್ತಿಲ್ಲ. ಆದರೆ ಇಂಗ್ಲಿಷ್‌ನಲ್ಲಿ ‘ಮ್ಯಾರೇಜ್ ಆಫ್‌ ಕನ್‌ವೀನಿಯನ್ಸ್‌’ ಎಂಬ ನುಡಿಗಟ್ಟಂತೂ ಇದೆ.

ಹಿಂದಿನ ಕಾಲದಲ್ಲಿ ರಾಜರುಗಳು ಹತ್ತಾರು ಮದುವೆಗಳನ್ನು ಮಾಡಿಕೊಳ್ಳುತ್ತಿದ್ದರಂತೆ. ತನಗೆ ಸೋತ ರಾಜನ ಮನೆಯ ಹೆಣ್ಣು, ತನ್ನನ್ನು ಸೋಲಿಸಬಲ್ಲ ಅರಸನ ಮನೆಯ ಹಣ್ಣು, ಮಿತ್ರತ್ವ ಉಳಿಸಿಕೊಳ್ಳಲು ಒಂದು ಮದುವೆ…. ಹೀಗೆ! ಒಟ್ಟಿನಲ್ಲಿ ಆಡಳಿತದ ಹಿತಸಾಧನೆಯಾಗಬೇಕು. ಶತ್ರುತ್ವ ನಿವಾರಣೆಯಾಗಿ ಮಿತ್ರತ್ವದ ಲಾಭ ರಾಜ್ಯಕ್ಕೆ ಬರಬೇಕು.

ಭಾರತ ಚೀನಾ ವಾಣಿಜ್ಯ ಸಂಬಂಧ ಅಂಥದ್ದು. ಇಲ್ಲದಿದ್ದರೆ ೧೨೫೦೦ ಚದರ ಕಿ. ಮೀ. ಭೂಭಾಗದ ಒಡೆತನ ಇನ್ನೂ ಈ ಎರಡು ರಾಷ್ಟ್ರಗಳ ನಡುವೆ ಕಗ್ಗಂಟಾಗಿರುವಾಗ ವ್ಯಾಪಾರ ಸಂಬಂಧ ಕುದುರಿಸುವಲ್ಲಿ ಇಬ್ಬರದೂ ಭಾರೀ ಉಮೇದು.

ಸೋವಿಯತ್‌ ಒಕ್ಕೂಟ ಕರಗಿಹೋಗಿ ಅಮೆರಿಕ ಎಂಬುದು ಏಕದ್ರುವ ಶಕ್ತಿಯಾಗಿ ಪರಿಣಮಿಸಿ ಸಿಕ್ಕಸಿಕ್ಕ ಕಡೆ ಯಜಮಾನಿಕೆ ಪ್ರದರ್ಶಿಸುತ್ತಿರುವಾಗ ಕಮ್ಯುನಿಸ್ಟ್‌ ಚೀನಾಕ್ಕೆ ಭಾರತ ಸಖ್ಯ ಅನಿವಾರ್ಯ ಆಗುತ್ತಿದೆ. ಇತ್ಯರ್ಥ ಆಗದ ವಿಷಯಗಳು ಏನೇ ಇರಲಿ; ಅವೆಲಲ ಒತ್ತಟ್ಟಿಗೆ ಹಾಗೆ ಇರಲಿ ಸದ್ಯಕ್ಕೆ ಸಖ್ಯಬೇಕು ಎನ್ನುವ ಧೋರಣೆ ಚೀನದ್ದು.

ಕಳೆದ ಮೂರು ವರ್ಷಗಳಲ್ಲಿ ಏನಾಯಿತು? ೨೦೦೦ ಮೇ ನಲ್ಲಿ ರಾಷ್ಟ್ರಪತಿ ಕೆ. ಆರ್‌. ನಾರಾಯಣ್‌ ಚೀನಾಕ್ಕೆ ಭೇಟಿ ಕೊಟ್ಟಿದ್ದರು. ನಲವತ್ತು ವರ್ಷಕ್ಕೂ ಮುನ್ನ ಇದೇ ಕೆ. ಆರ್‌. ನಾರಾಯಣ್‌ ಚೀನಾ ರಾಯಭಾರ ಕಚೇರಿಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾಗ ಸಂಬಂಧ ಹಳಸಿಕೊಂಡಿತ್ತು. ಚೀನಾ ಬೀದಿಗಳಲ್ಲಿ ಭಾರತೀಯ ರಾಜತಾಂತ್ರಿಕರನ್ನು ಎಳೆದಾಡಿದ್ದರು. ಈಗ ಇವುಗಳ ನೆನಪೇ ಯಾರಿಗೂ ಇಲ್ಲ. ೨೦೦೧ರಲ್ಲಿ ಪ್ರಧಾನಿ ಲಿಪೆಂಗ್‌ ಭಾರತಕ್ಕೆ ಬಂದಿದ್ದರು. ೨೦೦೨ರಲ್ಲಿ ಪ್ರಧಾನಿ ಝ ರೋಂಗ್ಜಿ ಭಾರತ ಸಂದರ್ಶಿಸಿದರು. ೨೦೦೩ರಲ್ಲಿ ರಕ್ಷಣಾ ಸಚಿವ ಜಾರ್ಜ್‌ ಫರ್ನಾಂಡಿಸ್‌ ಚೀನಾಕ್ಕೆ ಹೋಗಿಬಂದರು. (ಈಚೆಗಷ್ಟೇ ಅವರು ಭಾರತದ ನಂಬರ್‌ ಒನ್‌ ಶತ್ರು ಚೀನಾ ಎಂದು ಬಹಿರಂಗವಾಗಿ ಸಾರಿದ್ದರು.) ಇದೀಗ ಪ್ರಧಾನಿ ಅಟಲ ಬಿಹಾರಿ ವಾಜಪೇಯಿ ಚೀನಾ ಭೇಟಿ. ಹಿಂದೊಮ್ಮೆ ಜನತಾ ಪಕ್ಷ ಅಧಿಕಾರದಲ್ಲಿದ್ದಾಗ ವಿದೇಶಾಂಗ ಸಚಿವರಾಗಿ ವಾಜಪೇಯಿ ಚೀನಾಕ್ಕೆ ಭೇಟಿ ಕೊಟ್ಟಿದ್ದರು.

ರಾಜತಾಂತ್ರಿಕ ವಲಯದಲ್ಲಿ ಒಂದು ಭಾವನೆ ಜನಜನಿತ; ಚೀನೀಯರಾಗಲಿ, ಜಪಾನಿಯರಾಗಲಿ, ದಿಢೀರನೇ ನಿರ್ಧಾರ ತೆಗೆದುಕೊಳ್ಳುವುದಿಲ್ಲವಂತೆ. ಎಲ್ಲವೂ ನಿಧಾನವಾಗಿ ಲೆಕ್ಕಾಚಾರದ ಪ್ರಕಾರವೇ ನಡೆಯುವುದು. ಈಗ ಚೀನಾದ ಕಾರ್ಯಭಾರವೂ ಅಷ್ಟೇ. ರಾಜಕೀಯ ವೈಷಮ್ಯವನ್ನು ತಪ್ಪಿಸಲು ವಾಣಿಜ್ಯೋದ್ಯಮ ಸಖ್ಯ.

೧೯೫೧ರ ನಂತರ ಚೀನಾ ಭಾರತದ ಜೊತೆ ಒಂದಿಲ್ಲ ಒಂದು ವಾಣಿಜ್ಯ ಒಪ್ಪಂದ ಮಾಡಿಕೊಳ್ಳುತ್ತಲೇ ಇದೆ. ೧೯೬೨ರ ಯುದ್ಧದ ನಂತರ ಕೆಲಕಾಲ ಬಿಟ್ಟರೆ ವಾಣಿಜ್ಯ ಸಂಬಂಧ ಕುದುರಿಸಿಕೊಳ್ಳುವ ತವಕ ಅವರ ಪಾಲಿಗೆ ತಪ್ಪಿದ್ದೇ ಇಲ್ಲ. ಈಗ ಕಳೆದ ಮೂರು ವರ್ಷಗಳಲ್ಲಿ ವಿಶ್ವ ವಾಣಿಜ್ಯ ಸಂಬಂಧ ಬಲಪಡಿಸಿಕೊಳ್ಳುವ ಹವಣಿಕೆಯೇ ಬಲಗೊಳ್ಳುತ್ತದೆ.

೧೯೯೧ರಲ್ಲಿ ಭಾರತ ಚೀನಾಗಳ ನಡುವೆ ಕೇವಲ ೨೬.೪ ಕೋಟಿ ಡಾಲರ್‌ನಷ್ಟು ವ್ಯಾಪಾರ ಇತ್ತು. ಅದು ೨೦೦೦ದ ವೇಳೆಗೆ ೨೦೬.೪ ಕೋಟಿ ಡಾಲರ್‌ನಷ್ಟು ಪ್ರಮಾಣಕ್ಕೆ ಏರಿದೆ.

ಇದಕ್ಕೆ ಕಾರಣಗಳು ಇಲ್ಲದಿಲ್ಲ. ಚೀನಾ ತನ್ನ ಆರ್ಥಿಕ ಸುಧಾರಣಾ ಕ್ರಮಗಳನ್ನು ಜಾರಿಗೆ ತಂದ ೧೦ ವರ್ಷದ ನಂತರ ೧೯೯೧ರಿಂದ ಮೊದಲುಗೊಂಡಂತೆ ಆರ್ಥಿಕ ಸುಧಾರಣೆ ಆರಂಭಿಸಿದೆ.

ಭಾರತ ವಿಶ್ವಬ್ಯಾಂಕ್‌ ಮತ್ತು ಅದರ ಪರಿವಾರದ ಹಣಕಾಸು ಸಂಸ್ಥೆಗಳ ಜೊತೆ ಸಂಬಂಧ ಬೆಳೆಸಿ ಸಾಲ ಎತ್ತಲು ಮೊದಲು ಮಾಡಿತು. ಜನಸಂಖ್ಯೆ ಆಧಾರದ ಮೇಲೆ ಬಡತನ ನಿವಾರಣೆಗೆಂದು ಚೀನಾ ಸಹಾ ಇದೇ ಮೂಲದಿಂದ ಸಾಲ ಎತ್ತಲು ಆರಂಭಿಸಿದರೆ ಭಾರತಕ್ಕೆ ಆಧ್ಯತೆ ಕಡಿಮೆ ಆಗುವುದೆಂದು ಭಾರತ ಸಾಲ ಬಾಚಿಕೊಳ್ಳುವ ಪ್ರವೃತ್ತಿ ತೋರಿದ್ದು ಉಂಟು. ಇಂದಿರಾಗಾಂಧಿ ಕಾಲದಲ್ಲಿ.

ವಿಶ್ವ ವಾಣಿಜ್ಯ ಸಂಸ್ಥೆ (ಡಬ್ಲ್ಯೂಟಿಓ) ಪ್ರವೇಶಕ್ಕೆ ಮೊದಲು ಮುಂದಾದುದು ಭಾರತ. ಅನಂತರ ಚೀನಾ ಅನುಸರಿಸಿತು.

ಅಣು ಸಾಧನಗಳ ಪರೀಕ್ಷಾರ್ಥಗಳ ಪೈಪೋಟಿಯ ಪರಿಣಾಮವಾಗಿ ಭಾರತ ಪಾಕಿಸ್ತಾನಗಳು ಅಮೆರಿಕ. ಜಪಾನು ಮತ್ತಿತರ ದೇಶಗಳ ಆರ್ಥಿಕ ಹಾಗೂ ತಾಂತ್ರಿಕ ದಿಗ್ಬಂಧನಕ್ಕೆ ಒಳಗಾಗಿದ್ದವು. ಅವು ತೆರವಾದ ನಂತರ ದ್ವಿಪಕ್ಷೀಯ ವ್ಯಾಪಾರ ಸಂಬಂಧಗಳನ್ನು ಚುರುಕುಗೊಳಿಸಿದ್ದು ಚೀನಾ.

ಪ್ರತಿ ಸಂದರ್ಭದಲ್ಲೂ ಹೊಂಚು ಹಾಕಿ ವ್ಯಾಪಾರ ವೃದ್ಧಿ ಮಾಡಿಕೊಳ್ಳುವ ನೀತಿಯನ್ನೇ ಚೀನಾ ಅನುಸರಿಸುತ್ತಾ ಬಂದಿದೆ.

೧೯೯೮ರಲ್ಲಿ ೧೦೮ ಕೋಟಿ ಡಾಲರ್‌ ಭಾರತ ಚೀನಾ ದ್ವಿಪಕ್ಷೀಯ ವ್ಯಾಪಾರವಿತ್ತು. ಕಳೆದ ವರ್ಷ ಅದು ೩೫೦ ಕೋಟಿ ಡಾಲರ್‌ಗೆ ಏರಿತು. ೨೦೦೫ರ ಹೊತ್ತಿಗೆ ಅದನ್ನು ೧೦೦೦ ರಿಂದ ೧೫೦೦೦ ಕೋಟಿ ಡಾಲರ್‌ಗೆ ಏರಿಸುವ ತವಕ ಚೀನಾಕ್ಕೆ ಇದೆ.

ಭಾರತ ಚೀನಾಕ್ಕೆ ರಫ್ತು ಮಾಡುವ ಐಟಂಗಳೆಂದರೆ ಕಬ್ಬಿಣ ಮತ್ತು ಕಬ್ಬಿಣದ ಸಂಯುಕ್ತಗಳಿರುವ ಅದಿರು, ಪೂರ್ತಿ ಮತ್ತು ಭಾಗಶಃ ಸಿದ್ಧಪಡಿಸಿದ ಜವಳಿ, ಹರಳೆಣ್ಣೆ, ಕ್ರೋಂ ಆಮದು, ಔಷಧ, ಕೃಷಿ ರಾಸಾಯನಿಕ, ಸಂಸ್ಕರಿಸಿದ ಖನಿಜ, ಕಚ್ಚಾ ಹೊಗೆಸೊಪ್ಪು, ಎಲೆಕ್ಟ್ರಿಕಲ್‌ ಉತ್ಪನ್ನ, ತೊಗಲು ಮತ್ತು ತೊಗಲು ಉತ್ಪನ್ನ, ಹತ್ತಿ ನೂಲು.

ಚೀನಾ ಭಾರತಕ್ಕೆ ಮಾಡುವ ರಫ್ತು: ರಾಸಾಯನಿಕಗಳು, ಕಿಟ್ಟಿಯುಕ್ತ ಕಲ್ಲಿದ್ದಲು, ಔಷಧ, ಕಚ್ಚಾ ಮತ್ತು ಹುರಿ ರೇಷ್ಮೆ, ಕಬ್ಬಿಣ ಮತ್ತು ಉಕ್ಕು, ಕಬ್ಬಿಣೇತರ ಲೋಹ ಮತ್ತು ಪ್ರಶಸ್ತಮಣಿ, ಯಂತ್ರ ಮತ್ತು ಯಂತ್ರೋಪಕರಣ.

ಆಮದು ರಫ್ತಿನ ಐಟಂಗಳ ಸ್ವರೂಪ ಗಮನಿಸಿದರೆ ವಿಶೇಷ ವ್ಯತ್ಯಾಸ ಕಾಣಿಸುವುದಿಲ್ಲ. ಆದರೆ ಚೀನಾ ರಫ್ತು ಮಾಡುವ ಸರಕು ಸ್ವಲ್ಪ ಮೌಲ್ಯವರ್ಧನೆ ಕಂಡಿರುತ್ತದೆ ಎನ್ನುವುದು ದಿಟ. ಒಟ್ಟಾರೆ ಹಣ ಮೌಲ್ಯದಲ್ಲಿ ಚೀನದ್ದೇ ಅಧಿಕ.

ಭಾರತ ಚೀನಾ ವ್ಯಾಪಾರದ ಧಾಟಿ ಯಾವುದೇ ಒಂದು ಸೂತ್ರದನ್ವಯ ನಡೆದಂತೆ ಎಂದೂ ಕಾಣುವುದಿಲ್ಲ. ಒಂದೊಂದು ಕಾಲಮಾನದಲ್ಲಿ ಒಂದೊಂದು ಬಗೆಯ ಉತ್ಪನ್ನಕ್ಕೆ ಸಂಬಂಧಿಸಿದಂತೆ ಬೇರೆ ಬೇರೆ ಸೂತ್ರ. ಚೀನಾಕ್ಕೆ ಭೇಟಿ ಕೊಡುವ ಭಾರತದ ವಾಣಿಜ್ಯ ನಿಯೋಗಗಳಿಗೆ ಅನೇಕ ವೇಳೆ ಗೊಂದಲವೇ ಆಗುತ್ತದೆ. ಚೀನಾದವರ ವ್ಯಾಪಾರ ನೀತಿ ಒಂದೇ ರೀತಿ ಇರುವುದಿಲ್ಲ.

ಆದರೆ ಚೀನಿಯರು ತಮ್ಮ ಮಟ್ಟಿಗೆ ಒಂದು ವ್ಯಾಪಾರ ಸೂತ್ರ ಇರಿಸಿಕೊಂಡಿದ್ದಾರೆ. ಅದು ಈ ಮಾತುಗಳಲ್ಲಿ ವ್ಯಕ್ತವಾಗಿವೆ:

‘ನಾವು ನದಿ ದಾಟುವಾಗ ಪ್ರತಿ ಹೆಜ್ಜೆಯನ್ನು ಊರಿ ಊರಿ ನಡೆಯುತ್ತೇವೆ. ಗಟ್ಟಿ ಕಲ್ಲಿನ ನೆಲ ಇದೆಯೇ ಎಂದು!’

ಹೆಜ್ಜೆಯೂರಿನ ನದಿ ತಳದ ಕಲ್ಲು ಗಟ್ಟಿ ಇದ್ದರೆ ಮೈ ಭಾರ ಅದರ ಮೇಲೆ ಬಿಡುವುದು. ಗಟ್ಟಿಯಾಗಿ ಕಲ್ಲು ನಿಂತಿದ್ದ ಎಂದಾದರೆ ಇನ್ನೊಂದು ಗಟ್ಟಿ ಹೆಜ್ಜೆ ಕಲ್ಲಿಗೆ ತಡಕಾಗುವುದು.

ಇದೇ ಅವರ ಕಾರ್ಯಸಾಧು ಧೋರಣೆ.

ಭಾರತದ್ದು ಹಾಗಲ್ಲ. ಹೆಚ್ಚು ಮುಕ್ತ ಹಾಗೂ ಪಾರದರ್ಶಕ. ಭಾರತ ಕಾಲಕ್ಕೆ ತಕ್ಕ ನೀತಿ ಅನುಸರಿಸುವುದಿಲ್ಲ. ವಿಶ್ವ ಆರ್ಥಿಕತೆ ಜೊತೆ ಹೊಂದಿಕೊಳ್ಳುವಂಥ ನೀತಿ ಅಳವಡಿಸಿಕೊಳ್ಳಲು ಸದಾ ಯತ್ನಿಸುತ್ತದೆ.

ಚೀನಾದ ವ್ಯಾಪಾರ ನೀತಿ ಸದಾ ಭೌಗೋಳಿಕ ರಾಜಕೀಯಕ್ಕೆ ಹೊರತಾದುದಲ್ಲ. ಏಷ್ಯಾ ರಾಜಕೀಯದಲ್ಲಿ ಸದಾ ಭಾರತದ ಪ್ರತಿಸ್ಪರ್ಧಿ ಪಾಕಿಸ್ತಾನಕ್ಕೆ ಚೀನಾದಿಂದ ಅಣು ಶಸ್ತ್ರಾಸ್ತ್ರ ಮತ್ತು ಕ್ಷಿಪಣಿ ತಂತ್ರಜ್ಞಾನ ಮಾರಾಟ. ಸೀಮೆಯಣ್ಣೆ ಉಪ್ಪಿಗೂ ಪರರನ್ನು ಆಶ್ರಯಿಸಬೇಕಾದ ನೇಪಾಳದ ಜೊತೆ ಭಾರತದ ಆಸಕ್ತಿಯನ್ನು ಮೀರಿಸಿದಂಥ ವ್ಯಾಪಾರ ತವಕ ಚೀನಾಕ್ಕೆ. ಭಾರತ ನೇಪಾಳ ಬಾಂಧವ್ಯ ಹಳಸಿಕೊಂಡಂತೆಲ್ಲ ಚೀನಾ ವ್ಯಾಪಾರ ಸಖ್ಯ ಹೆಚ್ಚಾಗಿದೆ. ಎರಡುಪಟ್ಟು ಆಗಿದೆ. ಬಾಂಗ್ಲಾ ಜೊತೆಗೂ ಒಳ್ಳೆಯ ಸಂಬಂಧ.

ಈಚೆಗಿನ ಅಸೋಸಿಯೇಷನ್‌ ಆಫ್‌ ಸೌತ್‌ ಈಸ್ಟ್‌ ಏಷ್ಯ ನೇಷನ್ಸ್‌ ವಿದ್ಯಮಾನ ಕುತೂಹಲಕಾರಿ. ೧೯೬೭ರಲ್ಲಿ ಇದು ರೂಪುಗೊಂಡಾಗ ಭಾರತ ಇದರ ಜೊತೆ ಸೇರಲಿಲ್ಲ. ಆಹ್ವಾನ ಇತ್ತಾದರೂ ಚೀನಾ ಇರುವ ಕಡೆ ತಾನೂ ಕೈಜೋಡಿಸಲು ಭಾರತಕ್ಕೆ ಸಾಧ್ಯವಾಗಲಿಲ್ಲ. ಆದರೆ ೧೯೯೦ರ ದಶಕ ಆರಂಭವಾದಂತೆ ಈ ‘ಆಸಿಯನ್‌’ ಕೂಟದ ಪ್ರಾಬಲ್ಯ ಮೆರೆಯತೊಡಗಿತು. ಜಾಗತಿಕ ವ್ಯಾಪಾರ ಮತ್ತು ಹಣ ಹೂಡಿಕೆ ಬಲಗೊಂಡಂತೆ ಇದರ ಶಕ್ತಿ ಬೆಳೆಯಿತು. ಭಾರತ ಸಹಾ ಪೂರ್ವದತ್ತ ದೃಷ್ಟಿ’ ಎಂಬ ನಿತಿ ಬೆಳೆಸಿಕೊಳ್ಳಬೇಕು ಎನ್ನುವಾಗ ೧೯೯೭ರಲ್ಲಿ ದಕ್ಷಿಣ ಏಷ್ಯಾ ಕರೆನ್ಸಿ ಬಿಕ್ಕಟ್ಟು ತಲೆದೋರಿತು. ಈ ಏಷ್ಯನ್‌ ರಾಷ್ಟ್ರಗಳಲ್ಲಿ ಹೊರಗಿನವರು ಹೂಡಿದ್ದ ಬಂಡವಾಳವನ್ನು ದಿಢೀರ್‌ ವಾಪಸ್‌ ಪಡೆದು ಕಾಲು ಕಿತ್ತಾಗ ಅವರ ಕರೆನ್ಸಿಗಳು ನೆಲಕಚ್ಚಿದವು. ಆರ್ಥಿಕತೆಗಳು ಕುಸಿದುವು. ಆದರೆ ಹೊರ ಬಂಡವಾಳ ಕುರಿತಂತೆ ಸಾಮಾನ್ಯವಾಗಿ ಎಚ್ಚರಿಕೆ ವಹಿಸುವ ತನ್ನ ಧೋರಣೆಯಿಂದಾಗಿ ಭಾರತ ಬಚಾವಾಯಿತು. ಇತರ ಏಷ್ಯಾ ದೇಶಗಳಿಗೆ ಆದ ಅಪಾಯಕ್ಕೆ ತುತ್ತಾಗಲಿಲ್ಲ.

ಇದೇನೇ ಇದ್ದರೂ ನೇರ ವಿದೇಶಿ ಬಂಡವಾಳ ಒಳ್ಳೆಯದೇ ಇಲ್ಲವೇ ಎನ್ನುವ ಚರ್ಚೆ ಭಾರತದಲ್ಲಿ ಇನ್ನೂ ನಡೆಯುತ್ತಲೇ ಇರುವಾಗ, ಅದೇ ನೇರ ವಿದೇಶಿ ಬಂಡವಾಳವನ್ನು ಬಾಚಿ ಬಾಚಿ ತನ್ನದಾಗಿಸಿಕೊಳ್ಳುವಲ್ಲಿ ಚೀನಾ ಯಶಶ್ವಿ ಆಗಿದೆ. ಭಾರತ ಆಕರ್ಷಿಸಿದ ಈ ಬಗೆಯ ಬಂಡವಾಳದ ಹತ್ತು ಪಟ್ಟು ಬಂಡವಾಳವನ್ನು (ಎಫ್‌ಡಿಐ ಅನ್ನು) ಚೀನಾ ತನ್ನದಾಗಿಸಿಕೊಂಡಿದೆ.

ಆಸಿಯಾನ್‌ ಕೂಟ ಸೇರಿ ಚೀನಾ ಬೃಹತ್ತಾಗಿ ವ್ಯಾಪಾರ ಅವಕಾಶಗಳನ್ನು ಸಾಧಿಸಿಕೊಂಡಿರುವುದೇನೋ ನಿಜ. ಈ ಕೂಟದ ರಾಷ್ಟ್ರಗಳ ಒಟ್ಟು ವ್ಯಾಪಾರದ ಬಹುಪಾಲು ಚೀನಾ ವಶದಲ್ಲಿದೆ. ಭಾರತ ಇನ್ನೂ ಈ ಕೂಟಕ್ಕೆ ಪ್ರವೇಶಿಸಿಯೇ ಇಲ್ಲ. ಹೀಗೆ ಭೌಗೋಳಿಕ ನೆಲೆಯಲ್ಲಿ ಆಕ್ರಮಣಕಾರಿ ರಭಸ ತೋರಿ ಚೀನಾ ಬಲಿಷ್ಟವೇ ಆಗಿ ಬೆಳೆದಿದೆ. ಅದರ ಮುಂದೆ ಭಾರತ ಕುಬ್ಜವಾಗಿಯೇ ಕಾಣುವುದು.

ಈ ಕಾರಣದಿಂದ ಭಾರತಕ್ಕೆ ಚೀನಾ ಎಂದರೆ ಸದಾ ಕುತೂಹಲ. ಜೊತೆಗೆ ತನ್ನನ್ನು ಮೀರಿಸಿ ಬೆಳೆಯುತ್ತಿದೆ ಎಂಬ ಭಯಮಿಶ್ರಿತ ಭಾವನೆ; ಸಾಧ್ಯವಾದಷ್ಟೂ ವ್ಯಾಪಾರ ಸಾಧಿಸಬೇಕೆಂಬ ತವಕ. ಆಸಿಯಾನ್‌ ಕೂಟಕ್ಕೆ ಸೇರಿದ ಪ್ರಭಾವಿ ರಾಷ್ಟ್ರಗಳಾದ ಮಲೇಷ್ಯಾ ಸಿಂಗಪುರಗಳ ಜೊತೆ ಒಂದು ಕಾರ್ಯತಂತ್ರವೋ ಎಂಬಂತೆ ಭಾರತವು ಬಹಳ ಒಳ್ಳೆಯ ವ್ಯಾಪಾರದ ಸಂಬಧ ಬೆಳೆಸಿಕೊಂಡಿದೆ. ಈ ಕೂಟದವರು ಭಾರತದಿಂದ ಆಮದು ಮಾಡಿಕೊಳ್ಳುವ ಸರಕಿನಲ್ಲಿ ಶೇ. ೫೫ ರಷ್ಟು ಭಾಗ ಈ ಎರಡು ರಾಷ್ಟ್ರಗಳಿಗೆ ಹೋಗುವುದು.

ಭಾರತವು ಐಟಿ (ಮಾಹಿತಿ ತಂತ್ರಜ್ಞಾನ) ಕುರಿತಂತೆ ಮೇಲುಗೈ ಸಾಧಿಸಿರುವ ಹಿನ್ನೆಲೆಯಲ್ಲಿ ಭಾರತ ಮತ್ತು ಚೀನಾಗಳ ನಡುವೆ ನಡೆದಿರುವ ಹೊಯ್‌ಕೈಯಾಟ ಕುತೂಹಲಕಾರಿ. ವಿಶ್ವ ವ್ಯಾಪಾರ ರಂಗದಲ್ಲೇ ಪ್ರಖ್ಯಾತಗೊಂಡ ಭಾರತವನ್ನು ಮುಖ್ಯವಾಗಿ ಬೆಂಗಳೂರನ್ನು, ಕೇಂದ್ರವಾಗುಳ್ಳ ಕಂಪೆನಿಗಳು ವಾಸ್ತವವಾಗಿ ಅಮೆರಿಕದ ವಿವಿಧ ಸಂಸ್ಥಾನಗಳನ್ನು ತಲ್ಲಣಗೊಳಿಸಿವೆ. ವಿವಿಧ ಸಂಸ್ಥಾನಗಳು ಭಾರತದ ಐಟಿ ಕಂಪೆನಿಗಳು ಲಪಟಾಯಿಸುವ ವ್ಯಾಪಾರ ಅವಕಾಶಗಳ ವಿರುದ್ಧ ಶಾಸನ ಕ್ರಮ ಕೈಗೊಳ್ಳಲೂ ಮುಂದಾಗಿವೆ.

ಈ ಐಟಿ ಪ್ರಾಬಲ್ಯದ ಮೇಲೆ ಚೀನಾ ಕಣ್ಣು ಹಾಕದೆ ಇಲ್ಲ. ವಾಸ್ತವವಾಗಿ ಚೀನಾ ಹಾರ್ಡ್‌ವೇರ್‌ನಲ್ಲಿ ಮುನ್ನಡೆದಿದೆ. ಭಾರತದ್ದು ಸಾಫ್ಟ್‌ವೇರ್‌ ಪ್ರತಿಭೆ. ತನ್ನ ಜೊತೆ ಐಟಿ ಸಂಬಂಧ ಅಧಿಕಾಧಿಕ ಸಹಯೋಗ ಸಾಧಿಸಬೇಕೆಂದು ಚೀನಾ ಬಯಸಿದೆ. ಆದರೆ ಚೀನಾ ಜೊತೆ ಕೈ ಜೋಡಿಸಿದರೆ ಅದು ಭಾರತದ ಹಿತವನ್ನು ನುಂಗಿ ಹಾಕುತ್ತದೆ ಎಂದೇ ಭಾರತ ತಜ್ಞರು ಭಯ ಪಡುತ್ತಾರೆ. ಏಕೆಂದರೆ ಚೀನಾ ತನ್ನೆಲ್ಲ ನಗರಗಳನ್ನು ಆಧುನೀಕರಿಸುವಲ್ಲಿ, ನಗರಗಳ ಚೀನಿಯರ ಜೀವನ ವೈಖರಿಯನ್ನು ಪೂರ್ತಿಯಾಗಿ ಪಾಶ್ಚಿಮಾತ್ಯಗೊಳಿಸುವಲ್ಲಿ ಅದ್ಭುತ ಯಶಸ್ಸು ಸಾಧಿಸಿದೆ. ಅದರ ಆಧುನೀಕರಣದ ವೇಗ ನಿಬ್ಬೆರಗಾಗಿಸುವಂಥದು. ಐಟಿ ಕ್ಷೇತ್ರದಲ್ಲಿ ಭಾರತ ಸಾಧಿಸಿದ ವೇಗವನ್ನು ಎಟುಕಿಸಿಕೊಳ್ಳಲು ಮಾತ್ರ ಚೀನಾ ವಿಫಲಗೊಂಡಿದೆ. ಅದಕ್ಕೆ ಕಾರಣ ಇಂಗ್ಲಿಷ್‌ನಲ್ಲಿ ಹಿಂದೆ ಬಿದ್ದಿರುವುದು.

ಈಗ ಐಟಿ ಕ್ಷೇತ್ರದ ಅಭಿವೃದ್ಧಿಗೆ ಚೀನಾಕ್ಕೆ ನೆರವಾಗಬಾರದು ಎಂದು ಭಾವಿಸುವ ಜನ ಭಾರತದಲ್ಲಿ ಬಹಳಷ್ಟು ಇದ್ದಾರೆ. ಚೀನಾ ಸಹಾ ಭಾರತದ ಕಂಪೆನಿಗಳ ಜೊತೆ ಸಹಯೋಗ ಸಾಧಿಸಿ ಆ ಕಂಪೆನಿಗಳ ಮೂಲಕ ತನಗೆ ಈತನಕ ದಕ್ಕದಿರುವ ತಂತ್ರಜ್ಞಾನ ಕೈವಶ ಮಾಡಿಕೊಳ್ಳುವುದಕ್ಕೂ ಯತ್ನಿಸಿರುವುದುಂಟು. ಭಾರತದ ಐಟಿ ಕುರಿತಂತೆ ಚೀನಾ ತವಕ ಅಷ್ಟೊಂದಿದೆ. ಭಾರತ ಸರ್ಕಾರ ಈತನಕ ಅದಕ್ಕೆ ಅಷ್ಟಾಗಿ ಇಂಬುಗೊಟ್ಟಿಲ್ಲ. ಆದರೆ ಒತ್ತಡ ಮಾತ್ರ ತಪ್ಪಿಲ್ಲ.

ಜಗತ್ತಿನ ಎಲ್ಲ ಭಾಗಗಳಲ್ಲೂ ಐಟಿ ಅವಕಾಶಗಳನ್ನು ಬಾಚುವ ಆತುರ ತೋರುವ ಭಾರತದ ಕಂಪೆನಿಗಳು ಚೀನಾದಲ್ಲಿ ಇಣುಕು ಹಾಕುವುದಕ್ಕೆ ಹಿಂಜರಿದಿಲ್ಲ.

ಇನ್‌ಫಾಸಿಸ್‌ ಮತ್ತು ಸತ್ಯಂ ಐಟಿ ಸಂಸ್ಥೆಗಳು ಅಲ್ಲಿ ತಮ್ಮ ಕಾರ್ಯಾಚರಣೆ ನಡೆಸಲು ಮುಂದೆ ಬಂದಿವೆ. ಇವುಗಳ ಆರಂಭಿಕ ಯತ್ನ ಭಾರತದ ಲಾಭಕ್ಕೋ ಚೀನಾದ ಲಾಭಕ್ಕೋ ಕಾದು ನೋಡಬೇಕು.

ಹೀಗೆಲ್ಲ ವ್ಯಾಪಾರ ಸಾಹಸ ಕೈಗೊಳ್ಳುವಾಗ ಭಾರತ ಸಹಾ ತನ್ನದೇ ಆದ ಕೆಲವು ಆಂತರಿಕ ಹಿತಗಳನ್ನು ಬಲಿ ಕೊಡಬೇಕಾಗುತ್ತದೆ. ಈ ಮಾತಿಗೆ ಅತ್ಯುತ್ತಮ ಉದಾಹರಣೆ ಅಧೋಗತಿ ಕಂಡ ರೇಷ್ಮೆ ಉದ್ಯಮ. ರೇಷ್ಮೆಯಿಂದಾಗಿ ಭಂಗಪಟ್ಟಿದ್ದು ದುರದೃಷ್ಟವಶಾತ್‌ ಕರ್ನಾಟಕ.

ಮಲೇಷ್ಯಾದ ಇಡೀ ಆರ್ಥಿಕತೆಯ ಪಾಲಿಗೆ ಬಹು ಮುಖ್ಯವೆನಿಸುವ ತಾಳೆ, ಕೃಷಿ ಮತ್ತು ಎಣ್ಣೆ ಉತ್ಪಾದನೆ ನಿಂತಿರುವುದು ಭಾರತದ ಆಮದಿನ ಮೇಲೆ. ಇದರ ಪರಿಣಾಮವಾಗಿ ಭಾರತದ ಖಾದ್ಯ ತೈಲ ಉತ್ಪಾದನೆಗೆ ಧಕ್ಕೆಯುಂಟಾಯಿತು. ಭಾರತದಾದ್ಯಂತ, ಮುಖ್ಯವಾಗಿ ಗುಜರಾತ್‌ ರಾಜ್ಯದ, ಎಣ್ಣೆ ಬೀಜ ಕೃಷಿಕರು ಬಸವಳಿದರು. ೨೫.೦೬.೨೦೦೩.