ನೆಹರೂ ಕಾಲದಲ್ಲಿ ಒಂದು ಮಾತು ಹೇಳಿತ್ತಿದ್ದರು: ಒಂದು ದೇಶದ ಪ್ರಗತಿಯನ್ನು ಅಳೆಯಬೇಕಾದರೆ ಅದು ಎಷ್ಟರಮಟ್ಟಿಗೆ ಕಬ್ಬಿಣ ಮತ್ತು ಉಕ್ಕನ್ನು ಬಳಸಿಕೊಳ್ಳುತ್ತದೆ ಎಂಬುದನ್ನು ನೋಡಬೇಕು.

ವಿಶ್ವಾದ್ಯಂತ ಪ್ರವಾಸಿಗರನ್ನು ಸೆಳೆಯುವ ಫ್ರಾನ್ಸ್‌ನ ಐಫೆಲ್‌ ಗೋಪುರವನ್ನು ಮೂರು ಹಂತಗಳಲ್ಲಿ ಹತ್ತುವ ವೇಳೆ ಮನಸ್ಸಿಗೆ ತಾಕುವ ಒಂದೇ ವಿಚಾರವೆಂದರೆ ‘ಎಷ್ಟೊಂದು ಉಕ್ಕನ್ನು ಕಲಾತ್ಮಕವಾಗಿ ಬಳಸಿ ಈ ವಿಶ್ವವಿಸ್ಮಯವನ್ನು ಸೃಷ್ಟಿಸಿದ್ದಾರೆ’ ಎಂಬುದೇ ಆಗಿರುತ್ತದೆ.

ನಮ್ಮ ದೇಶದಲ್ಲಿ ನಿರ್ಮಾಣ ಕಾರ್ಯವನ್ನು : ಕಟ್ಟಡಗಳು ಇರಬಹುದು, ಇಲ್ಲವೇ ವಿಶಾಲವಾಗಿ ಸುಂದರವಾಗಿ ರೂಪುಗೊಳ್ಳುವ ಹೆದ್ದಾರಿಗಳು ಇರಬಹುದು; ಪ್ರಗತಿಯ ಪ್ರತೀಕವಾಗಿ ಕೈಗೊಂಡಾಗ ಸಿಮೆಂಟಿನ ಜೊತೆ ಜೊತೆಗೆ ವಿಜೃಂಭಿಸುವುದು ಉಕ್ಕು. ಭಾರತದಲ್ಲಿ ಸಿಗುವ ಕಬ್ಬಿಣ ಅದಿರು ಅತ್ಯುತ್ಕೃಷ್ಟ ಮಟ್ಟದ್ದು. ಇಲ್ಲಿನ ಉತ್ಪಾದನಾ ವೆಚ್ಚ ವಿಶ್ವದಲ್ಲೇ ಅತ್ಯಂತ ಕಡಿಮೆ ಆದರೂ ಉಕ್ಕಿನ ತಲಾ ಬಳಕೆ ಬಹಳ ಕಡಿಮೆ.

ಭಾರತದ ತಲಾ ಬಳಕೆ ಇತ್ತೀಚಿನವರೆಗೂ ೧೧ ಕೆ.ಜಿ. ಇತ್ತು. ಒಂದೂವರೆ ದಶಕದಿಂದ ಈಚೆಗೆ ಅದು ೨೯ ಕೆ.ಜಿ. ಆಗಿದೆ. ಅನ್ಯ ರಾಷ್ಟ್ರಗಳಿಗೆ ಹೋಲಿಸಿದರೆ ಇದು ಬಹಳ ಕಡಿಮೆ.

ಅಮೆರಿಕದ ತಲಾ ಬಳಕೆ ೬೮೫ ಕೆ.ಜಿ. ರಷ್ಯಾದಲ್ಲಿ ಅದು ೪೨೮ ಕೆ.ಜಿ. ಸ್ವೀಡನ್‌ನಲ್ಲಿ ಪ್ರತಿ ಪ್ರಜೆಗೆಂದು ೬೨೩ ಕೆ.ಜಿ. ಉಕ್ಕು ಬಳಸುತ್ತಾರೆ. ಜಪಾನ್‌ನಲ್ಲಿ ೪೯೪ ಕೆ.ಜಿ.

ಆ ದೇಶಗಳಲ್ಲಿ ನಿರ್ಮಾಣ ಕಾರ್ಯ ಮತ್ತು ತಯಾರಿಕಾ ವಸ್ತುಗಳ ಉತ್ಪಾದನೆ ಯಾವ ವೇಗದಲ್ಲಿ ನಡೆಯುತ್ತದೆ ಎಂಬುದನ್ನು ಈ ಅಂಕಿ ಸಂಖ್ಯೆ ನಿರೂಪಿಸುತ್ತದೆ.

ವರ್ಷಕ್ಕೆ ನಾಲ್ಕೂವರೆ ಕೋಟಿ ಟನ್‌ ಕಚ್ಚಾ ಉಕ್ಕು ತಯಾರಿಸುವ ಭಾರತ ಅತಿ ಹೆಚ್ಚು ಉಕ್ಕು ಉತ್ಪಾದಿಸುವ ರಾಷ್ಟ್ರಗಳ ಸಾಲಿನಲ್ಲಿ ಎಂಟನೆಯದು. ಸ್ವಾತಂತ್ರ್ಯ ಪೂರ್ವದಿಂದಲೂ ಉಕ್ಕು ಉದ್ಯಮ ಬೆಳೆದುಬಂದ ದಾರಿ ಗುರುತಿಸಿದರೆ ಗಮನಾರ್ಹ ಚರಿತ್ರೆಯಾಗುತ್ತದೆ. ಖಾಸಗಿ ವಲಯಕ್ಕೆ ಮನ್ನಣೆ ನೀಡುವುದನ್ನು ಮೊದಲಿನಿಂದಲೂ ಆರಂಭಿಸಿದ್ದರೆ ಈ ಕ್ಷೇತ್ರ ಇನ್ನೂ ಜೋರಾಗಿ ಬೆಳೆಯುತ್ತಿತ್ತು. ಸರ್ಕಾರ ತನ್ನ ಅಂಕೆಯಲ್ಲಿ ಇರಿಸಿಕೊಂಡಿದ್ದೇ ಹೆಚ್ಚು. (ದರ ಪರಿಣಾಮವಾಗಿಯೇ ವಿಜಯನಗರ ಉಕ್ಕು ಕಾರ್ಖಾನೆ ೨೦ ವರ್ಷ ನೆನೆಗುದಿಗೆ ಬಿದ್ದಿತ್ತು. ಕೊನೆಗೂ ಖಾಸಗಿ ವಲಯಕ್ಕೆ ಅದು ಸೇರಿತು. ಭದ್ರಾವತಿ ಉಕ್ಕಿನ ಕಾರ್ಖಾನೆ ಬೆಳೆದು, ಸೊರಗಿ, ಬಸವಳಿದು ಉಕ್ಕು ಪ್ರಾಧಿಕಾರದಲ್ಲಿ ಲೀನವಾಗಿ ಹೋಯಿತು. (ಕಬ್ಬಿಣ ಅದಿರು ಕರ್ನಾಟಕದಲ್ಲಿ ಸಾಕಷ್ಟಿದ್ದರೂ ಇಲ್ಲಿ ಉಕ್ಕು ಉದ್ಯಮ ನೆಲೆ ಊರಲ್ಲಿಲ್ಲ.)

ವಿಶ್ವದ ಒಟ್ಟು ಉಕ್ಕು ಉತ್ಪಾದನೆಯಲ್ಲಿ ಭಾರತದ ಪಾಲು ಶೇ. ೩ ಮಾತ್ರ. ಅಂತಾರಾಷ್ಟ್ರೀಯ ಉಕ್ಕು ವ್ಯಾಪಾರದಲ್ಲಿ ದೇಶದ ಪಾಲು ಶೇ. ೧ ಮಾತ್ರವೇ.

ಇಷ್ಟೇ ಆದರೂ ಆಶ್ಚರ್ಯವೆಂಬಂತೆ ಭಾರತದ ಉಕ್ಕು ಅಂತಾರಾಷ್ಟ್ರೀಯ ವಾಣಿಜ್ಯ ರಂಗದಲ್ಲಿ ಸುದ್ದಿಗೆ ಗ್ರಾಸವಾಗಿದೆ. ಆದರೆ ಉಕ್ಕು ಬಳಕೆಯಲ್ಲಿ ದಾಪುಗಾಲು ಇಟ್ಟಿರುವ ಚೀನಾ ಭಾರತಕ್ಕಿಂತ ಬಹಳ ವೇಗವಾಗಿ ಮುಂದುವರೆದಿರುವ ಭಾವನೆಯನ್ನು ಉಂಟು ಮಾಡುತ್ತದೆ.

ಚೀನಾಕ್ಕೆ ಎಲ್ಲ ರಂಗದಲ್ಲೂ ಅಮೆರಿಕಕ್ಕೆ ಸರಿಸಾಟಿ ಎನಿಸುವಂಥ ಅಭಿವೃದ್ಧಿ ಸಾಧಿಸಬೇಕೆಂಬ ಹಂಬಲ. ಸಾಧಿಸುವುದು ಏನೇ ಇದ್ದರೂ ವೇಗವಾಗಿ ಸಾಧಿಸಬೇಕು ಎಂಬ ಆತುರ ಚೀನಾಕ್ಕೆ ಇದೆ. ಅದು ಸಾಧ್ಯವೂ ಆಗುತ್ತಿದೆ ಎನಿಸದಿರದು.

ಬೀಜಿಂಗ್‌ನಲ್ಲಿ ೨೦೦೮ಕ್ಕೆ ಒಲಿಂಪಿಕ್ಸ್‌ ನಡೆಯಲಿದೆ. ಅದಕ್ಕಾಗಿ ಭರದಿಂದ ಸಿದ್ಧತೆ ನಡೆಸಿದೆ. ಉಕ್ಕನ್ನು ಆಮದು ಮಾಡಿಕೊಳ್ಳುತ್ತಿದೆ. ಕಬ್ಬಿಣ ಅದಿರನ್ನೂ ಭಾರೀ ಪ್ರಮಾಣದಲ್ಲಿ ತರಿಸಿಕೊಳ್ಳುತ್ತಿದೆ. ಅದರ ಒಲಿಂಪಿಕ್ಸ್‌ನಿರ್ಮಾಣಕ್ಕೆ ಹೊರತಾಗಿಯೂ ಅದರ ತಲಾ ಉಕ್ಕು ಬಳಕೆ ಏರುತ್ತಿದೆ. ಚೀನಾದ ಅಗತ್ಯ ವರ್ಷಕ್ಕೆ ಸದ್ಯ ೨೦ ಕೋಟಿ ಟನ್‌. ಅದು ೨೨ ರಿಂದ ೨೫ ಕೋಟಿ ಟನ್‌ ಮಟ್ಟಕ್ಕೆ ಏರಲಿಕ್ಕೂ ಸಾಕು. ಸ್ವತಃ ಉತ್ಪಾದಿಸಿಕೊಳ್ಳುವ ಸಾಮರ್ಥ್ಯ ೧೬ ಕೋಟಿ ಟನ್‌ನಷ್ಟು ಮಾತ್ರ.

ಭಾರತದಲ್ಲಿ ೧೯೯೨ರಲ್ಲಿ ಉಕ್ಕು ಉತ್ಪಾದನೆ ಸಂಬಂಧ ಉದಾರ ನೀತಿ ಜಾರಿಗೊಳಿಸಿದ ನಂತರ ರಫ್ತು ಹೆಚ್ಚಾಗಿದೆ. ಚೀನಾ ತಾನು ಆಮದು ಮಾಡಿಕೊಳ್ಳುತ್ತಿರುವ ಉಕ್ಕಿನಲ್ಲಿ ೨ ಕೋಟಿ ಟನ್‌ ವಾಸ್ತವವಾಗಿ ಭಾರತದ ಉತ್ಪನ್ನ.

ಉಕ್ಕನ್ನು ಬಳಸುವಲ್ಲಿ ಭಾರತ ಚೀನಾಕ್ಕಿಂತ ಹಿಂದೆ ಬೀಳುತ್ತಿಲ್ಲವೆಂದು ಹೇಳುವವರೂ ಇದ್ದಾರೆ. ಇನ್ನು ಮುಂದಿನ ಏಳು ವರ್ಷದಲ್ಲಿ ಭಾರತದ ಬಳಕೆ ಪ್ರಮಾಣ ಶೇ. ೮ ವೇಗದಲ್ಲಿ ಬೆಳೆಯುತ್ತದೆ. ಅದೇ ಅವಧಿಯಲ್ಲಿ ಬಳಕೆಯ ವಾರ್ಷಿಕ ಏರಿಕೆ ಶೇ. ೬ ಮಾತ್ರ ಎಂದು ಅವರು ಅಂಕಿಸಂಖ್ಯೆ ನೀಡುತ್ತಾರೆ.

ಇದೇನೇ ಇದ್ದರೂ ನಾವು ಚೀನಾಕ್ಕೆ ಉಕ್ಕು ಪೂರೈಸುತ್ತಿದ್ದೇವೆ ಎನ್ನುವುದು ಮುಖ್ಯ. ಚೀನಾಕ್ಕೆ ಮಾತ್ರವಲ್ಲ ಅಮೆರಿಕಕ್ಕೂ ಉಕ್ಕು ಪೂರೈಸುತ್ತಿದ್ದೇವೆ. ಅದೇ ಅಮೆರಿಕ ಚೀನಾಕ್ಕೆ ತಿಂಗಳೊಂದಕ್ಕೆ ೧೦ ಲಕ್ಷ ಟನ್‌ ಪ್ರಮಾಣದಲ್ಲಿ ಕಳೆದ ಕೆಲವು ತಿಂಗಳಲ್ಲಿ ಉಕ್ಕನ್ನು ಪೂರೈಸಿದ್ದುಂಟು.

ಸ್ವಾರಸ್ಯವೆಂದರೆ ಅಮೆರಿಕ, ಚೀನಾಗಳಂತೆ ಇತರ ಕಡೆಗೂ ಉಕ್ಕನ್ನು ಪೂರೈಸಲು ಭಾರತ ಕಾತರವಾಗಿದೆ. ಕಳೆದ ೧೮ ತಿಂಗಳಲ್ಲಿ ವಿಶ್ವಾದ್ಯಂತ ಉಕ್ಕಿನ ಬೆಲೆಗಳು ಏರಿರುವುದೇ ಅದಕ್ಕೆ ಕಾರಣ. ವಿಶ್ವದ ಬೆಲೆಗಳು ಭಾರತದ ಪಾಲಿಗೆ ಬಹಳ ಆಕರ್ಷಕ ಎನಿಸಿದೆ. ಏಕೆಂದರೆ ಇಲ್ಲಿನ ಉತ್ಪಾದನಾ ವೆಚ್ಚ ಕಡಿಮೆ. ವಿಶ್ವದಾದ್ಯಂತ ಬೆಲೆ ಹೆಚ್ಚಿಸಿರುವುದರಿಂದ, ಪ್ರತಿಯೊಂದು ಉದ್ಯಮ ಕೂಟವೂ ತೆರಿಗೆ ಸುಂಕಗಳ ಕೋಟೆ ಕಟ್ಟಿಕೊಂಡು ಇತರ ರಾಷ್ಟ್ರಗಳು ಸುರಿ ಧೋರಣೆ ಅನುಸರಿಸುವುದಕ್ಕೆ ತಡೆ ಒಡ್ಡಿದೆ. (ಅಂತರರಾಷ್ಟ್ರೀಯ ಬೆಲೆಗಳನ್ನು ಅನುಸರಿಸಿ ಭಾರತದ ಆಂತರಿಕ ಪೇಟೆಯಲ್ಲೂ ಉಕ್ಕಿನ ಬೆಲೆಗಳು ಕಳೆದ ಒಂದು ವರ್ಷದಿಂದ ಈಚೆಗೆ ಶೆ. ೬೦ ರಿಂದ ೮೦ರಷ್ಟು ಪ್ರಮಾಣದಲ್ಲಿ ಏರಿವೆ). ಅಂತಾರಾಷ್ಟ್ರೀಯ ಪರಿಸ್ಥಿತಿ ಲಾಭ ಪಡೆದು ಅಧಿಕಾಧಿಕ ರಫ್ತು ಸಾಧಿಸುವ ತವಕ ಭಾರತದ್ದಾದರೂ ಅದಕ್ಕೆ ಅಮೆರಿಕ ಮತ್ತಿತರ ಮುಂದುವರೆದ ರಾಷ್ಟ್ರಗಳು ಅಡ್ಡಿಪಡಿಸುವ ಪರಿ ವಿಚತರ. ವಿಶ್ವಪೇಟೆಯೆಂಬ ವೇದಿಕೆಯಲ್ಲಿ ಭಾರತ ಮತ್ತು ಇತರ ಅಭಿವೃದ್ಧಿ ರಾಷ್ಟ್ರಗಳು ನಡೆಸಬೇಕಾಗಿ ಬಂದಿರುವ ರಿಂಗಣಗುಣಿತ ಅಸಾಧಾರಣ. ಭಾರತವು ಮುಖ್ಯವಾಗಿ ಚೀನಾವನ್ನು ಅಭಿವೃದ್ಧಿಶೀಲರ ಪರವಾಗಿ ನಿಲ್ಲಲು ಒತ್ತಾಯಿಸಿದೆ. ಪ್ರಧಾನಿ ವಾಜಪೇಯಿ ಅವರು ಈಚೆಗೆ ಚೀನಾಕ್ಕೆ ಭೇಟಿ ಕೊಟ್ಟಿದ್ದಾಗ ಈ ದಿಸೆಯ ಮಾತುಕತೆಗಳನ್ನು ನಡೆಸಿದ್ದಾರೆ.

ಉಕ್ಕಿನ ವ್ಯಾಪಾರದ ನಿದರ್ಶನವನ್ನೇ ತೆಗೆದುಕೊಂಡರೆ, ಸ್ವತಃ ತಮ್ಮ ಬೇಳೆ ಬೇಯಿಸಿಕೊಳ್ಳಲು ಅಮೆರಿಕ, ಬ್ರೆಜಿಲ್‌, ಜಪಾನ್‌ ಮತ್ತಿತರ ರಾಷ್ಟ್ರಗಳು ಸ್ವತಃ ಉಕ್ಕನ್ನು ಮಾರುವ ಯತ್ನ ನಡೆಸುವುದರ ಜೊತೆಗೆ ಬೇರೆ ರಾಷ್ಟ್ರಗಳ ಉಕ್ಕು ತಮ್ಮಲ್ಲಿಗೆ ಬಂದು ಬೀಳದಂತೆ ನೋಡಿಕೊಳ್ಳುತ್ತಿವೆ. ಅದರ ಸಲುವಾಗಿ ಅಮೆರಿಕವೂ ಸೇರಿದಂತೆ ಹಲವು ರಾಷ್ಟ್ರಗಳು ಅಧಿಕಾಧಿಕ ಆಮದು ತೆರಿಗೆ ಮತ್ತು ಸುಂಕಗಳನ್ನು ವಿಧಿಸುತ್ತಿವೆ.

ಅದರ ಜೊತೆಗೆ ವಿಶ್ವ ವಾಣಿಜ್ಯ ಸಂಸ್ಥೆ (ಡಬ್ಲಯೂಟಿಓ) ವೇದಿಕೆಯಲ್ಲಿ ಗದ್ದಲ ಎಬ್ಬಿಸಿವೆ. ಯಾವುದೇ ರಾಷ್ಟ್ರವು ತಾನು ಅಭಿವೃದ್ಧಿಶೀಲ ರಾಷ್ಟ್ರಗಳಿಂದ ತರಿಸಿಕೊಳ್ಳುವ ಉಕ್ಕು ತನ್ನ ಒಟ್ಟು ಆಮದಿನ ಶೇ. ೩ ಮಾತ್ರ ಆಗಿರಬೇಕು; ಅದಕ್ಕಿಂತ ಹೆಚ್ಚಾಗಬಾರದು ಎಂದು ನಿಯಮ ರೂಪಿಸಿವೆ. ಹಾಗೆ ನೋಡಿದರೆ ಡಬ್ಲ್ಯೂಟಿಓ ಕೋರ್ಟಿನಲ್ಲಿ ಯಾವುದೇ ರಾಷ್ಟ್ರ ಅಂಥ ತಪ್ಪಿತಸ್ಥ ರಾಷ್ಟ್ರದ ವಿರುದ್ಧ ದಾವೆ ಹೂಡಬಹುದು. ಭಾರತವು ಚೀನಾಕ್ಕೆ ಕಳುಹಿಸುವ ಉಕ್ಕು ವ್ಯಾಪಾರವನ್ನು ಇಂಥ ತಕರಾರಿಗೆ ಒಳಪಡಿಸುವ ಆತುರ ಅಮೆರಿಕ ಮತ್ತು ಅದರ ಸಂಗಡಿಗ ರಾಷ್ಟ್ರಗಳಿಗೆ. ಆದ್ದರಿಂದ ಕಳೆದ ತಿಂಗಳು ಭಾರತವು ತನ್ನ ಉಕ್ಕು ಕಂಪೆನಿಗಳಿಗೆ ಚೀನಾಕ್ಕೆ ಮಾಡುವ ರಫ್ತಿನ ಪ್ರಮಾಣ ಕುರಿತಂತೆ ಹುಷಾರಾಗಿರಬೇಕು ಎಂದು ಸೂಚಿಸಿತು. ಭಾರತದ ಪ್ರಮುಖ ಕಂಪೆನಿಗಳು ತಕ್ಷಣ ಚೀನಾ ಜೊತೆಗಿನ ರಫ್ತು ವ್ಯಾಪಾರವನ್ನು ಶೇ. ೫೦ ರಷ್ಟು ಕಡಿಮೆ ಮಾಡಲು ಕ್ರಮ ಕೈಗೊಂಡವು.

ಅದೇ ವೇಳೆ ಅಮೆರಿಕ, ಯೂರೋಪ್‌ ರಾಷ್ಟ್ರಗಳು, ಮತ್ತಿತರ ರಾಷ್ಟ್ರಗಳು ಭಾರತದ ಮೇಲೆ ಇನ್ನೊಂದು ದಿಕ್ಕಿನ ದಾಳಿಯನ್ನು ಆರಂಭಿಸಿವೆ. ಉಕ್ಕು ಉತ್ಪಾದಕರಿಗೆ ನಾನಾ ಪ್ರೋತ್ಸಾಹಕ ಕ್ರಮ ಮತ್ತಿರ ಮಾರ್ಗಗಳಲ್ಲಿ ಸಬ್ಸಿಡಿ ನೀಡುವ ಮೂಲಕ ಬೆಲೆ ಕಡಿಮೆ ಇರುವಂತೆ ನೋಡಿಕೊಳ್ಳುತ್ತಿವೆ ಎಂಬುದು ಭಾರತ ವಿರುದ್ಧ ಮಾಡಿರುವ ಆರೋಪ. ವಾಸ್ತವವಾಗಿ ಇದು ಮಿಥ್ಯಾರೋಪ.

ಫ್ಲ್ಯಾಟ್‌ಸ್ಟೀಲ್‌ ನಿದರ್ಶನವನ್ನೇ ತೆಗೆದುಕೊಂಡರೆ ಭಾರತವು ಪ್ರೋತ್ಸಾಹಕ ಕ್ರಮಗಳ ಮೂಲಕ ನೀಡುತ್ತಿರುವ ಬೆಂಬಲವು ಬೆಲೆಯು ಶೇ. ೦.೫೪ ಆಗಿರುತ್ತದೆ. ಅದೇ ವೇಳೆ ಫ್ರಾನ್ಸ್‌, ಜರ್ಮನಿ, ಕೆನಡಾ, ಜಪಾನ್‌ ಮತ್ತು ಅಮೆರಿಕಗಳು ಇದೇ ಉಕ್ಕಿನ ಮೇಲೆ ನೀಡುತ್ತಿರುವ ಬೆಂಬಲ ಮೊತ್ತವು ಕ್ರಮವಾಗಿ ಬೆಲೆಯು ಶೇ. ೨.೪೬, ಶೇ. ೩.೦೯, ಶೇ. ೭.೧೪, ಶೇ. ೯.೫೨ ಮತ್ತು ಶೇ. ೧೪.೫೭ ಆಗಿರುತ್ತದೆ.

ಅಂದರೆ ತನ್ನ ಊಟದ ಎಲೆಯಲ್ಲಿ ಆನೆ ಬಿದ್ದಿದ್ದರೂ ನೆರೆಯವನ ಊಟದ ಎಲೆಯಲ್ಲಿ ನೊಣ ಬಿದ್ದಿರುವುದನ್ನು ಎತ್ತಿ ತೋರಿಸುವ ಪರಿ ಇದು.

ಈ ರಾಷ್ಟ್ರಗಳು ಸ್ವತಃ ಆಮದು ಸುಂಕ ತೆರಿಗೆ ವಿಧಿಸುವ ಪರಿಪಾಠ ಇಟ್ಟುಕೊಂಡು ತಮ್ಮ ಸುತ್ತ ಕೋಟೆ ಕಟ್ಟಿಕೊಂಡ ಕ್ರಮ ಸಹಾ ವಿಚಾರಣೆಗೆ ಒಳಗಾಗಿದೆ. ಅಮೆರಿಕವು ವಿಶ್ವ ವಾಣಿಜ್ಯ ಸಂಸ್ಥೆಯ ತಕರಾರು ಇತ್ಯರ್ಥ ಸಮಿತಿ ಮುಂದೆ ಬಲವಾಗಿ ವಾದಿಸಿದರೂ ತಾನು ತಪ್ಪಿತಸ್ಥ ಅಲ್ಲವೆಂದು ನಿರೂಪಿಸಲು ಆಗಲಿಲ್ಲ. ಅದೇ ಡಬ್ಲ್ಯುಟಿಓದ ಅತ್ಯುಚ್ಚ ಕೋರ್ಟಿಗೆ ಅಮೆರಿಕ ಮೇಲು ಮನವಿ ಸಲ್ಲಿಸಿತು. ಆದರೆ ಕಳೆದ ವಾರ ತೀರ್ಪು ಹೊರಬಿತ್ತು. ಅಮೆರಿಕವು ಅಂಥ ಕ್ರಮಗಳನ್ನು  ವಾಪಸು ತೆಗೆದುಕೊಳ್ಳಬೇಕೆಂದು ಫರ್ಮಾನು ಆಯಿತು. ಅಮೆರಿಕದಂಥ ಬಲಿಷ್ಠ ರಾಷ್ಟ್ರಗಳ ಹುನ್ನಾರ ಎಷ್ಟಿರುತ್ತದೆ ಎಂದರೆ ತಮಗೆ ರಫ್ತು ಮಾಡುವ ರಾಷ್ಟ್ರಗಳ ಮೇಲೆ ದಂಡ ವಿಧಿಸುವ ಕ್ರಮವನ್ನು ಇಟ್ಟುಕೊಂಡಿರುತ್ತವೆ.

ವ್ಯಾಪಾರ ಮಾಡಿ ಲಾಭ ಮಾಡುವ ಆಸೆಯಿಂದ ಸಣ್ಣಪುಟ್ಟ ರಾಷ್ಟ್ರಗಳು ಅಂಥ ದಂಡವನ್ನು ಅಮೆರಿಕ್ಕೆ ಸಲ್ಲಿಸಲು ಮುಂದಾಗುತ್ತವೆ. ಹಾಗೆ ವಸೂಲು ಮಾಡುವ ದಂಡವನ್ನು ಸುರಿ ನೀತಿ (ಅಂದರೆ ಬೇರೆ ದೇಶಕ್ಕೆ ತನ್ನ ಸರಕನ್ನು ತಂದು ಸುರಿಯುವ ಮೂಲಕ ಆ ದೇಶದ ಆರ್ಥಿಕತೆಗೆ ಭಂಗ ತರುವ ನೀತಿ) ಎಂದು ಗುರುತಿಸುತ್ತಾರೆ. ಸುರಿ ನೀತಿ ವಿರುದ್ಧ ದಂಡ ವಿಧಿಸಿ ಕಲೆ ಹಾಕಿದ ಹಣವನ್ನು ಆಮದಾದ ಸರಕಿನಿಂದ ಭಂಗಪಟ್ಟ ಅದರ ದೇಶಿ ತಯಾರಕರಿಗೆ ಅಮೆರಿಕ ಹಂಚಿಬಿಡುತ್ತದೆ. ವಿದೇಶ ವ್ಯಾಪಾರಿಯಿಂದ ವಸೂಲು ಮಾಡಿದ ದಂಡದ ಹಣವು ವ್ಯಾಪಾರ ಲಾಭ ಕಳೆದುಕೊಂಡ ದೇಶಿ ತಯಾರಕನಿಗೆ!

ಅಮೆರಿಕದಲ್ಲಿ ಹೀಗಾದರೆ ಕೆಲವು ರಾಷ್ಟ್ರಗಳು ದಂಡ ವಸೂಲಿ ಹಣವನ್ನು ತಮ್ಮ ಬೊಕ್ಕಸಕ್ಕೆ ಸೇರಿಸಿಕೊಳ್ಳುತ್ತವೆ.

ಭಾರತದ ಉದಾರೀಕರಣದ ನೀತಿಯಿಂದಾಗಿ ರಫ್ತು ವಲಯ ಪ್ರವೇಶಿಸಿದ ಉಕ್ಕು ತಯಾರಕರು (ಖಾಸಗೀಯವರೇ ಪ್ರಮುಖ) ಇದೀಗ ಹೊಸ ಉಕ್ಕು ನೀತಿಯನ್ನು ಪ್ರತಿಭಟಿಸಿ ರಫ್ತು ಗಳಿಕೆಗೆ ಹೆಚ್ಚು ಅವಕಾಸ ಕಲ್ಪಿಸಿಕೊಡಬೇಕೆಂದು ಒತ್ತಾಯಿಸುತ್ತಿದ್ದಾರೆ. ಸದ್ಯದ ಕೇಂದ್ರ ಸರ್ಕಾರದ ಪ್ರಸ್ತುತ ಅವಧಿ ಮುಗಿಯುವ ಮುನ್ನ ಅದು ಹೊರಬೀಳುವುದೆಂಬ ಆಸೆ ಅವರದು.

ಇವರ ಆಸೆಯೇನೋ ಸರಿ. ಆದರೆ ಸರ್ಕಾರ ಉಕ್ಕಿನ ಆಂತರಿಕ ಮಾರಾಟದ ಬೆಲೆಗಳನ್ನು ನಿಯಂತ್ರಿಸುವ, ಅದನ್ನು ಇಳಿಯುವಂತೆ ಮಾಡುವ ಯಾವ ಗೋಜಿಗೂ ಹೋಗಿಲ್ಲ. ಇದು ಮಾತ್ರ ಸರಿಯಲ್ಲ.