ಕೋತಿ ವರ್ಷ

ಚೀನಾದಲ್ಲಿ ಪ್ರತಿವರ್ಷ ರಾಶಿ ಚಕ್ರದ ಒಂದೊಂದು ವರ್ಷದ ಸರದಿಯಂತೆ ಒಂದು ಪ್ರಾಣಿಯನ್ನು ‘ಅಧಿದೈವ’ವಾಗಿ ಗುರುತಿಸುತ್ತಾರೆ. ಕಳೆದ ಗುರುವಾಗ ಚೀನಾದ ಪಂಚಾಂಗದ ಪ್ರಕಾರ ಹೊಸ ವರ್ಷ ಆರಂಭವಾಯಿತು. ಈ ವರ್ಷ ಕೋತಿ ವರ್ಷ!

ಕೋಳಿ, ಟಗರು ಇತ್ಯಾದಿ ವರ್ಷಗಳು ಮುಗಿದಿವೆ. ಈಗಿನ ‘ಕೋತಿ’ ಎಂದರೆ ಚೀನಿಯರ ಪಾಲಿಗೆ ಪರಮಾಯಿಷಿ. ಕೋತಿ ಅತಿ ಬುದ್ಧಿವಂತ ಪ್ರಾಣಿ. ಅವರ ಪ್ರಕಾರ ಅದೃಷ್ಟ ತರುವಂಥದು. ಆದ್ದರಿಂದ ನಾನಾ ರೀತಿ ಕೋತಿ ವರ್ಷವನ್ನು ಅವರು ಆಚರಿಸುತ್ತಿದ್ದಾರೆ.

ಚೀನಾದ ಒಂದು ಸಫಾರಿ ಪಾರ್ಕಿನಲ್ಲಿ ಕೋತಿಗಳಿಗೆಲ್ಲ ಅರಿವಳಿಕೆ ಕೊಟ್ಟು ಜ್ಞಾನ ತಪ್ಪಿಸಿ ಅವುಗಳ ಮೈ ತುಪ್ಪುಳಕ್ಕೆಲ್ಲ ಕೆಂಪು ಹಳದಿ ಮುಂತಾದ ರೀತಿ ಡೈ ಮಾಡಿದ್ದಾರೆ. ಜ್ಞಾನ ಬಂದ ಮೇಲೆ ಕೋತಿಗಳು ತಮ್ಮ ಮೈ ಬಣ್ಣ ನೋಡಿ ಸೋಜಿಗಪಟ್ಟುವಂತೆ ನಂತರ ಬದಲಾವಣೆಗೆ ಒಗ್ಗಿಕೊಂಡು ನಲಿದಾಡುವಂತೆ ಸಫಾರಿಗೆ ಬಂದ ಜನ ನಾನಾ ಬಣ್ಣದ ಕೋತಿಗಳನ್ನು ನೋಡಿ ಸಂತೋಷಿಸಿದರು ಎಂಬುದು ವಾರ್ತಾ ಸಂಸ್ಥೆ ವರದಿ.

ಭಾರತ ಮತ್ತು ಚೀನಾ ಪೌರ್ವಾತ್ಯ ರಾಷ್ಟ್ರಗಳು. ನಂಬಿಕೆಗಳಲ್ಲಿ, ಧೋರಣೆಗಳಲ್ಲಿ ಸಾಮ್ಯ ಜಾಸ್ತಿ. ಸಫಾರಿ ಪಾರ್ಕಿನ ಈ ವಿದ್ಯಮಾನವು ಭಾರತದಂತೆ ಬದಲಾವಣೆ ಹೊಸ್ತಿಲಲ್ಲಿ ಇರುವ ಚೀನಾದ ವರ್ತಮಾನ ಸ್ಥಿತಿಗೆ ಒಂದು ಸಂಕೇತ.

ಚೀನಾದ ಆಡಳಿತ ವ್ಯವಸ್ಥೆ ಭಾರತಕ್ಕಿಂತ ತೀರಾ ವಿಭಿನ್ನ. ಕಟ್ಟಾ ಕಮ್ಯುನಿಸ್ಟ್‌ ರಾಜಕೀಯ ವ್ಯವಸ್ಥೆ ಚೀನಾದಲ್ಲಿ ಬಂದಿತಾದರೆ ಪಶ್ಚಿಮದ ಪದ್ಧತಿಯನ್ನೂ ಅಳವಡಿಸಿಕೊಳ್ಳಬಲ್ಲ ಸಮಾಜವಾದಿ ಪದ್ಧತಿಯ ಚಹರೇ ಭಾರತದ್ದಾಯಿತು. ಭಾರತ ಸಂವಿಧಾನದಲ್ಲೇ ಸಮಾಜವಾದಿ ಪ್ರಜಾಪ್ರಭುತ್ವ ಎಂದು ಹೆಸರಿಸಿಕೊಂಡವರು ನಾವು. ಅಂಥ ಭಾರತದಲ್ಲಿ ಮುಕ್ತ ಮಾರುಕಟ್ಟೆ ಆಧಾರಿತ ಆರ್ಥಿಕ ಸುಧಾರಣಾ ಕ್ರಮಗಳನ್ನು ಜಾರಿಗೆ ತರಲು ಹತ್ತು ವರ್ಷಕ್ಕೂ ಹಿಂದೆ ಆರಂಭಿಸಿದಾಗ ‘ಸಮಾಜವಾದಿ ರಾಷ್ಟ್ರಕ್ಕೆ ಈ ಪರಿವರ್ತನೆಯೇ?’ ಎಂದು ಸೋಜಿಗಪಡುವವರಿದ್ದರು. ಈ ಪ್ರಶ್ನೆಗೆ ಉತ್ತರ ಕೊಡಬಯಸುವ ಜನ ಚೀನಾದತ್ತ ಬೊಟ್ಟು ಮಾಡಿ ತೋರಿಸುತ್ತಿದ್ದರು. ಕಮ್ಯುನಿಸ್ಟರಾದ ಚೀನೀಯರೇ ಮಾರುಕಟ್ಟೆ ಆರ್ಥಿಕತೆಗೆ ತೆರೆದುಕೊಂಡಾಗ ಏನೆನ್ನಬೇಕು? ವಿಶ್ವ ವಾಣಿಜ್ಯ ಸಂಸ್ಥೆಗೆ ಭಾರತದ ನಂತರ ಚೀನಾ ಸೇರಿತಾದರೂ ಚೀನಾವು ಆರ್ಥಿಕ ಸುಧಾರಣಾ ಕ್ರಮಗಳನ್ನು ಭಾರತಕ್ಕಿಂತ ಮುಂಚೆಯೇ ಆರಂಭಿಸಿತು. ಮಾರುಟ್ಟೆಗಳನ್ನು ಪ್ರವೇಶಿಸಿ, ಸ್ವತಃ ಬೆಳೆಸಿ ಜಾಗತೀಕರಣದ ಲಾಭ ಪಡೆಯಬೇಕು ಎನ್ನುವ ಆತುರ ಚೀನಾಕ್ಕೆ ಭಾರತಕ್ಕಿರುವುದಕ್ಕಿಂತ ಹೆಚ್ಚು. ಅಭಿವೃದ್ಧಿಶೀಲರ ಪೈಕಿ ತಾನೇ ಮುಂದಿರಬೇಕು ಎನ್ನುವ ಅಭೀಪ್ಸೆ ಚೀನಾದ್ದು.

ಭಾರತವು ಮಾರುಕಟ್ಟೆ ವ್ಯವಸ್ಥೆ ಸುಧಾರಣೆಗೆ ಮೊದಲು ಕೈ ಹಾಕಿದೆ. ಚೀನಾ ತನ್ನ ಕೃಷಿಕಷೇತ್ರ ಸುಧಾರಣೆಗೆ ಮೊದಲು ಕೈ ಹಾಕಿತು. (ಭಾರತ ಕೃಷಿ ಪ್ರಧಾನ ರಾಷ್ಟ್ರ ಎಂಬುದು ಜನಜನಿತ ಭಾವನೆ. ಆದರೂ ಆರ್ಥಿಕ ವ್ಯವಹಾರ ಕೃಷಿಯೇತರ ಬಾಬುಗಳದೇ ಹೆಚ್ಚು ಎಂಬುದು ಈಚೆಗಿನ ಪ್ರಚಲಿತ ನಿಲುವು!) ಆದರೆ ಎರಡೂ ರಾಷ್ಟ್ರಗಳು ಮೂಲ ಸೌಕರ್ಯ ಅಭಿವೃದ್ಧಿಗೆ ಒಟ್ಟಿಗೆ ಕೈಹಾಕಿವೆ.

ಚೀನಾದಲ್ಲಿ ಕೃಷಿ ಭೂಮಿ, ಗೇಣಿ ಪದ್ಧತಿ ಮುಂತಾದ ಬಾಬುಗಳ ಸುಧಾರಣೆಗೆ ಈಗ ಯತ್ನಿಸಲಾಗಿದೆ. ಭಾರತದಲ್ಲಿ ಬಹಳ ಮುಂಚೆ ಭೂ ಸುಧಾರಣಾ ಕಾರ್ಯ ಆರಂಭವಾಗಿದೆ. ಚೀನಾದಲ್ಲಿ ನಾನಾ ಪ್ರಯೋಗಗಳನ್ನು ಮಾಡಿ ಫಲಕಾರಿ ಆಗದೆ, ಭೂಮಿಯ ಖಾಸಗೀಕರಣಕ್ಕೆ ಮೊದಲಿಟ್ಟಿದ್ದಾರೆ. ಸರ್ಕಾರವೇ, ಇಲ್ಲವೇ ಸ್ಥಳೀಯ ಸಮುದಾಯಗಳೇ, ಒಡೆತನ ಹೊಂದಿರಬೇಕೆಂಬುದು ಫಲಕಾರಿಯಾಗದ ಕಾರಣ ವಂಶಪರಾಂಪರ್ಯ ಭೂಮಿ ಹಸ್ತಾಂತರ ಮಾಡುವ ಹಾಗೂ ವ್ಯಾಪಾರಕ್ಕೆ ಒಳಪಡಿಸಬಹುದಾದ ಕ್ರಮ ಜಾರಿಗೆ ತರಲು ಇದೀಗ ಚೀನಾ ಒಪ್ಪುತ್ತಿದೆ.

ಕೃಷಿ ಉತ್ಪನ್ನ ಮಾರುಕಟ್ಟೆ ಪದ್ಧತಿ ಸುಧಾರಣಾ ಎರಡೂ ದೇಶಗಳಲ್ಲಿ ಇನ್ನೂ ಆರಂಭವಾಗಿಲ್ಲ. ಆ ಸಂಬಂಧ ಭಾರತ ಕಲಿಯಬೇಕಾದ ಪಾಠಗಳು ಚೀನಾ ಬಳಿ ಇವೆ. ಆದರೆ ಪಂಚಾಯ್ತಿರಾಜ್‌ ಸಂಸ್ಥೆಗಳಿಗೆ ಹಣಕಾಸು ನಿರ್ವಹಣೆ ಮತ್ತು ಆಡಳಿತ ನಡೆಸುವ ಅಧಿಕಾರ ನೀಡುವಲ್ಲಿ ಭಾರತ ಬಹಳ ಮುಂದೆ ಸಾಗಿದೆ.

ಕೃಷಿ ಮೂಲ ಸಾಮಗ್ರಿ ಬೆಲೆ ನಿರ್ಧಾರ ಮತ್ತು ಪೂರೈಕೆ ವಿಷಯದಲ್ಲಿ ತಲೆಹಾಕುವುದನ್ನು ಚೀನಾ ಪೂರ್ತಿ ನಿಲ್ಲಿಸಿದೆ. ಅದೇ ರೀತಿ ಕೃಷಿ ಉತ್ಪನ್ನಕ್ಕೆ ಬೆಲೆ ಬೆಂಬಲ ನೀಡುವುದನ್ನು, ಹಂಚಿಕೆಗಾಗಿ ಧಾನ್ಯ ಸಂಗ್ರಹಿಸುವುದನ್ನು ಚೀನಾ ಭಾಗಶಃ ಕೈಬಿಟ್ಟಿದೆ.

ಚೀನಾದಲ್ಲಿ ೨೦೦೩ರ ಮಾರ್ಚ್‌ನಲ್ಲಿ ರಾಜಕೀಯ ಸ್ಥಿತ್ಯಂತಗಳಾಗಿ ಯುವಕರಲ್ಲಿ ಹಲವರನ್ನು ಅಧಿಕಾರಕ್ಕೆ ತಂದರು. ಮುಂದಿನ ಗುರಿ ಏನೆಂದು ಆಗ ಗುರುತಿಸಿದ್ದು ಏನೆಂದರೆ, ‘ಆರ್ಥಿಕ ಪ್ರವರ್ಧಮಾನತೆ ಮತ್ತು ರಭಸದಿಂದ ತಂದ ಬದಲಾವಣೆಗಳ ಫಲ ಕೋಟ್ಯಾವಧಿ ಜನರಿಗೆ ಮುಟ್ಟುವಂತೆ ಮಾಡಬೇಕು’ ಎನ್ನುವುದು.

ಭಾರತ ಸಹಾ ಈಗಾಗಲೇ ‘ಮುಂದಿನ ಪೀಳಿಗೆಯ ಸುಧಾರಣಾ ಕ್ರಮಗಳು’ ಕುರಿತಂತೆ ಮಾತನಾಡುತ್ತಿದೆ. ಅದು ಸಹಾ ಸುಧಾರಣಾ ಕ್ರಮಗಳ ಫಲ ಜನ ಸಾಮಾನ್ಯರಿಗೆ ಮುಟ್ಟುವಂತೆ ಮಾಡುವುದು ಎಂಬ ವಿವರಣೆಯನ್ನೇ ಹೊಂದಿದೆ.

ಇಷ್ಟೆಲ್ಲ ವಿವರ ಸಮೀಕ್ಷಿಸಿದಾಗ ಭಾರತ ಮತ್ತು ಚೀನಾಗಳು ಒಂದೇ ನೆಲೆಗಟ್ಟಿನ ಮೇಲೆ ಇರುವಂತೆ ಭಾಸವಾಗುತ್ತದೆ. ಆದರೆ ಚೀನಾ ಕುರಿತ ಯಾವಾಗ ಯಾವ ಮಾತು ಬಂದರೂ ಚೀನಾವು ಭಾರತವನ್ನು ಹಿಂದೆ ಹಾಕಿ ಮುನ್ನಡೆಯುತ್ತಿದೆ ಹಾಗೂ ಭಾರತ ಅದರ ವೇಗವನ್ನು ಸಾಧಿಸಲು ಸಾಧ್ಯವಾಗುತ್ತಿಲ್ಲ ಎಂಬ ಭಾವನೆಯೇ ವ್ಯಕ್ತವಾಗುವುದು ಸಾಮಾನ್ಯ. ಹೀಗೇಕೆ?

ಆರ್ಥಿಕ ಮಾನದಂಡಗಳು, ಅಂಕಿಅಂಶಗಳು ಚೀನಾ ಮುಂದೆ ಸಾಗಿದೆ ಎಂಬ ಭಾವನೆಗೇ ಇಂಬುಗೊಡುತ್ತವೆ.

ಚೀನಾದ ವಾರ್ಷಿಕ ಆರ್ಥಿಕ ವೃದ್ಧಿದರ ಪ್ರಸಕ್ತ ಸಾಲಿನಲ್ಲಿ ಶೇ. ೮.೫ ದಾಟಬಹುದು ಎಂಬ ಅಂದಾಜಿತ್ತು. ಜ. ೨೧ ರಂದು ಚೀನಾದ ಅಂಕಿಸಂಖ್ಯೆ ಬ್ಯುರೋ ಮುಖ್ಯಸ್ಥ ಲಿದೆಷುಯಿ ಹೇಳಿದ ಪ್ರಕಾರ ಅಂತಿಮವಾಗಿ ವೃದ್ಧಿದರ ಶೇ. ೯ ದಾಟಲಿದೆ.

ಭಾರತದ ರಿಸರ್ವ್‌ ಬ್ಯಾಂಕ್ ಗವರ್ನರ್‌ ಅವರು ಜನವರಿ ೨೩ ರಂದು ಭಾರತದ ವಾರ್ಷಿಕ ವೃದ್ಧಿದರ ಶೇ. ೯ ಆಗಲಿದೆ ಎಂದಿದ್ದಾರೆ. ಮೊನ್ನೆ ಮೊನ್ನೆವರೆಗೆ, ಚುನಾವಣಾ ಸಾಧ್ಯತೆ ಪ್ರಕಟವಾಗುವ ಮುನ್ನ, ಅದು ಶೇ. ೬.೫ ರಿಂದ ೮ ಆಗಲಿಕ್ಕೆ ಸಾಕೆಂಬ ಅಂದಾಜು ಇತ್ತು.

ಭಾರತದ ಬಳಿ ಸಂಗ್ರಹವಾದ ವಿದೇಶಿ ವಿನಿಮಯ ಈಚೆಗೆ ೧೦೦ ಬಿಲಿಯನ್‌ ಡಾಲರ್‌ ಗೆರೆ ದಾಟಿದಾಗ ಸಂಭ್ರಮ ಕಂಡುಬಂತು. ಚೀನಾ ಬಳಿ ೪೦.೩ ಬಿಲಿಯನ್‌ ವಿನಿಮಯ ಹಣ ಸಂಗ್ರಹವಿದೆ.

ಚೀನಾ ಆಡಳಿತಗಾರರನ್ನು ಕಾಡಿರುವ ಸಂಗತಿ ಎಂದರೆ ಹಣದುಬ್ಬರ. ಅಲ್ಲಿ ಭಾರತಕ್ಕಿಂತ ಸ್ವಲ್ಪ ಭಿನ್ನವಾದ ರೀತಿ ಹಣದುಬ್ಬರ ದರವನ್ನು ಅಳೆಯುತ್ತಾರೆ. ಆದರೆ ಹಾಂಕಾಂಗ್‌ನ ಜರ್ಮನ್‌ ಬ್ಯಾಂಕ್‌ನ ಹಿರಿಯ ಅರ್ಥತಜ್ಞ ಜುನ್‌ ಮಾ ಹೇಳುವುದು ಹೀಗೆ: ಡಿಸೆಂಬರ್‌ನ ಹಣದುಬ್ಬರ ದರವು ಎಷ್ಟಿತ್ತೆಂದರೆ ಒಂದು ವರ್ಷ ಅವಧಿಯ ಬ್ಯಾಂಕ್ ಡಿಪಾಸಿಟ್‌ ಗಳಿಸುವಷ್ಟಿತ್ತು. ಹಣದುಬ್ಬರ ಇದೇ ರೀತಿ ಮುಂದುವರೆದರೆ ಜನರು ತಮ್ಮ ಉಳಿತಾಯ ಹಣವನ್ನು ಬ್ಯಾಂಕ್‌ನಿಂದ ಹೊರತೆಗೆದು ನಮಗೆ ಬೇಕಾದ್ದನ್ನು ಕೊಳ್ಳಲು ಆರಂಭಿಸುತ್ತಾರೆ. ಬೆಲೆಗಳು ಇನ್ನೂ ಏರುವಂತಾಗುತ್ತದೆ.

ಭಾರತದಲ್ಲಿ ಹಣದುಬ್ಬರ ದರವು ಶೇ. ೪ ಆಸುಪಾಸಿನಲ್ಲಿ ಇದ್ದುದು ಶೇ. ೬ರ ಮಟ್ಟಕ್ಕೆ ಬಂದಿದೆ. ಒಂದು ವರ್ಷ ಅವಧಿಯ ಠೇವಣಿ ಗಳಿಸುವುದು ಸಹಾ ಸುಮಾರು ಶೇ. ೬ ಆಗಿದೆ.

ಚೀನಾದಲ್ಲಿ ಬ್ಯಾಂಕುಗಳು ಬಹಳ ಕೆಟ್ಟ ಸ್ಥಿತಿಯಲ್ಲಿವೆ. ಈಚೆಗೆ ಎರಡು ಬ್ಯಾಂಕುಗಳು ಷೇರು ಬಿಡುಗಡೆ ಮಾಡುವಂತಾಗಲಿ ಎಂದು ಸರ್ಕಾರವೇ ಅದರ ನಷ್ಟದ ಮೊತ್ತವಷ್ಟನ್ನೂ ಬೊಕ್ಕಸದಿಂದ ತುಂಬಿಕೊಟ್ಟಿತು.

ಚೀನಾ ನಾಯಕರಿಗೆ ಭ್ರಷ್ಟಾಚಾರ ಹೆಚ್ಚುತ್ತಿರುವ ಬಗೆಗೆ ಆತಂಕ. ಇದರಲ್ಲಿ ಬಹುಶಃ ಭಾರತವನ್ನು ಚೀನಾ ಸರಿಗಟ್ಟಲಾರದು! ಇದೆಲ್ಲ ಏನೇ ಇರಲಿ; ವಾಸ್ತವವಾಗಿ ತುಲನೆ ಮಾಡುವುದು ಹೀಗೆ ಎಂಬುದು ಮುಖ್ಯ. ಅಮೆರಿಕದಲ್ಲಿ ಮ್ಯಾನೇಜ್ಮೆಂಟ್‌ ಗುರು ಎಂದೇ ಹೆಸರಾದ ೯೪ ವರ್ಷ ವಯಸ್ಸಿನ ಪೀಟರ್‌ ಡ್ರಕ್ಕರ್‌ ಅವರು ಅಪರೂಪಕ್ಕೆ ನೀಡಿದ ಸಂದರ್ಶನವೊಂದು ಅಲ್ಲಿನ ಪ್ರಖ್ಯಾತ ‘ಪಾರ್ಚೂನ್‌’ ನಿಯತಕಾಲಿಕದಲ್ಲಿ ಅಚ್ಚಾಗಿದೆ. ಅದರ ಕೆಲವು ಭಾಗಗಳು ಮನನೀಯ.

ಕಂಪ್ಯೂಟರ್‌ ತಂತ್ರಜ್ಞಾನವು ಒಂದು ದಿನ ಜಗತ್ತಿನ ಇಡೀ ವ್ಯವಹಾರ ಸ್ಥಿತಿಗತಿಯನ್ನು ಸಂಪೂರ್ಣ ಮಾರ್ಪಡಿಸುತ್ತದೆ ಎಂದು ೧೯೫೦ರಲ್ಲಿ ಡ್ರಕ್ಕರ್‌ ಭವಿಷ್ಯ ನುಡಿದಿದ್ದರು. ೧೯೬೧ರಲ್ಲಿ ಭವಿಷ್ಯ ನುಡಿದಿದ್ದರು ಜಪಾನು ಎಂಥ ಕೈಗಾರಿಕಾ ಶಕ್ತಿ ಆಗುವುದೆಂದು; ೨೦ ವರ್ಷಗಳ ನಂತರ ಅದರ ಆರ್ಥಿಕತೆ ಹೇಗೆ ಕುಂಠಿತಗೊಳ್ಳುತ್ತದೆ ಎಂದು ಎಚ್ಚರಿಸಿದ್ದರು. ‘ಖಾಸಗೀಕರಣ’, ‘ಮಾಹಿತಿ ಕಾರ್ಮಿಕರು’, ‘ಧ್ಯೇಯಾನುಸಾರ ಮ್ಯಾನೇಜ್‌ಮೆಂಟ್‌’ ಮುಂತಾದ ನುಡಿಗಟ್ಟುಗಳನ್ನು ಅವರು ಕೊಟ್ಟರು. ಈಗಲೂ ಅವರು ಉದ್ಯೋಗ, ಸಾಲ, ಜಾಗತೀಕರಣ ಮತ್ತು ಆರ್ಥಿಕ ಹಿಂಜರಿತ ಇವುಗಳ ಬಗೆಗೆ ಜನ ತಪ್ಪಾಗಿ ಯೋಚನೆ ಮಾಡುವುದೇ ಹೆಚ್ಚು ಎನ್ನುತ್ತಾರೆ.

ಅವರು ಭಾರತ ಚೀನಾಗಳ ಬಗೆಗೆ ಹೇಳಿರುವ ವಾಕ್ಯಗಳಿವು:

‘ಭಾರತವು ಬಹಳ ವೇಗವಾಗಿ ಒಂದು ಪವರ್‌ಹೌಸ್‌ ಆಗಿ ಮಾರ್ಪಡುತ್ತಿದೆ. ನವದೆಹಲಿಯ ಮೆಡಿಕಲ್ ಕಾಲೇಜು ಬಹುಶಃ ವಿಶ್ವದಲ್ಲೇ ಅತ್ಯುತ್ತಮ. ಬೆಂಗಳೂರಿನ ಇಂಡಿಯನ್‌ ಇನ್‌ಸ್ಟಿಟ್ಯೂಟ್‌ ಆಫ್‌ ಟೆಕ್ನಾಲಜಿಯಿಂದ ಹೊರಬೀಳುವ ಪದವೀಧರರು ಪ್ರಪಂಚದ ಯಾವುದೇ ಅತ್ಯುತ್ತಮ ಪದವೀಧರರಿಗೆ ಸರಿಸಮ.’

‘ಜೊತೆಗೆ ಇಂಗ್ಲಿಷನ್ನೇ ಮುಖ್ಯ ಭಾಷೆಯಾಗಿ ಓದಿದ ೧೫ ಕೋಟಿ ಜನ ಭಾರತದಲ್ಲಿದ್ದಾರೆ. ಹೀಗಾಗಿ ಭಾರತ ಒಂದು ಜ್ಞಾನಕೇಂದ್ರವಾಗಿ ಹೊರಹೊಮ್ಮುತ್ತಿದೆ.’

‘ಇದಕ್ಕೆ ವ್ಯತಿರಿಕ್ತ ಎಂಬಂತೆ ಚೀನಾದ ಪಾಲಿಗೆ ದೊಡ್ಡ ಕೊರತೆ ಎಂದರೆ ಶಿಕ್ಷಣ ಪಡೆದವರ ಸಂಖ್ಯೆ ದಯನೀಯ ಎನ್ನುವಷ್ಟು ಕಡಿಮೆ ಇರುವುದು. ಚೀನಾದ ೧೩೦ ಕೋಟಿ ಜನರ ಪೈಕಿ ಕಾಲೇಜು ವಿದ್ಯಾರ್ಥಿಗಳು ೧೫ ಲಕ್ಷ ಮಾತ್ರ. ಅಮೆರಿಕದಲ್ಲಿ ಇರುವಷ್ಟೇ ದಾಮಾಷಾ ಇದೆ ಎಂದು ಆಗಬೇಕಾದರೆ ಕಾಲೇಜುಗಳಲ್ಲಿ ಕನಿಷ್ಠ ೧೨೦ ಲಕ್ಷ ವಿದ್ಯಾರ್ಥಿಗಳು ಇರಬೇಕಿತ್ತು.’

‘ಶಿಕ್ಷಣ ಪಡೆದಿರುವ ಜನಕ್ಕೆ ಒಳ್ಳೆಯ ತರಬೇತಿ ಸಿಗುವುದೇನೋ ಉಂಟು. ಆದರೆ ಅಂಥವರ ಸಂಖ್ಯೆಯೇ ಕಡಿಮೆ. ಅವರ ಬೆನ್ನಿಗೆ ಅಭಿವೃದ್ಧಿಯೇ ಕಾರಣದ ಭೂಪ್ರದೇಶದಲ್ಲಿ ಅತಿ ಹೆಚ್ಚು ಗ್ರಾಮೀಣ ಜನಸಂಖ್ಯೆ ಇದೆ. ಹೌದು, ಹೀಗೆ ಇದ್ದರೆ ತಯಾರಿಕಾ ಶಕ್ತಿ ವಿಪುಲವಾಗಿದೆ’ ಎಂದರ್ಥ.

‘ಆದರೆ ಚೀನಾದಲ್ಲಿ ಯಾವುದೇ ರೀತಿಯ ತಳಮಳ ಆಗದಂತೆ ಗ್ರಾಮ ಕಾರ್ಮಿಕರನ್ನು ನಗರಗಳ ಒಳಕ್ಕೆ ಸೆಳೆಯುವುದು ಸಾಧ್ಯವೇ ಆಗುವುದಿಲ್ಲ. ಭಾರತದಲ್ಲಿ ಇದು ಸಮಸ್ಯೆಯಲ್ಲ. ಏಕೆಂದರೆ ಗ್ರಾಮಗಳಲ್ಲಿ ಹೆಚ್ಚುವರಿ ಇರುವ ಕೆಲಸಗಾರರನ್ನು ನಗರಗಳಿಗೆ ವರ್ಗಾಯಿಸುವ ಕೆಲಸವನ್ನು ಅಲ್ಲಿ ಅದ್ಭುತವಾಗಿ ಮಾಡಿದ್ದಾರೆ. ಭಾರತದಲ್ಲಿ ಗ್ರಾಮ ಜನರ ಸಂಖ್ಯೆ ಶೇ. ೯೦ ಇದ್ದುದು ಈಗ ಶೇ. ೫೪ಕ್ಕೆ ಇಳಿದಿದೆ. ಏನೂ ತಳಮಳ ಮೂಡದೆಯೇ!’

‘ಚೀನಾ ವೃದ್ಧಿದರ ಶೇ ೮ ಇದೆಯೆಂದೂ, ಭಾರತದ ವೃದ್ಧಿದರ ಶೇ. ೩ ಇದೆಯೆಂದೂ ಎಲ್ಲರೂ ಹೇಳುತ್ತಾರೆ. ಆದರೆ ಅದು ಸಂಪೂರ್ಣ ತಪ್ಪು ಕಲ್ಪನೆ. ನಮಗೆ ಸರಿಯಾಗಿ ಗೊತ್ತಿಲ್ಲ. ಭಾರತದ ಪ್ರಗತಿ ಚೀನಾಕ್ಕಿಂತ ಬಹಳ ಚೇತೋಹಾರಿ ಆಗಿದೆ!

ಡ್ರಕ್ಕರ್‌ ಅವರು ಅಮೆರಿಕದ ಸ್ಥಿತಿಗತಿಗಳ ಬಗೆಗೆ ಸಂದರ್ಶನದಲ್ಲಿ ಸುದೀರ್ಘವಾಗಿ ಮಾತನಾಡಿದ್ದಾರೆ. ಅವರು ಹೇಳುತ್ತಾರೆ.

ಅಮೆರಿಕದ ಸರ್ವವ್ಯಾಪಿತನ ಈಗಾಗಲೇ ಮುಗಿದು ಹೋಗಿದೆ. ಈಗ ಉದಯಿಸುತ್ತಿದೆ. ವಿಶ್ವ ಆರ್ಥಿಕತೆ, ಅದು ನ್ಯಾಫ್ಟಾ, ಐರೋಪ್ಯ ಒಕ್ಕೂಟ ಮತ್ತು ಆಸಿಯಾನ್‌ಗಳೆಂಬ ವಿಭಾಗಗಳ ರೂಪದಲ್ಲಿದೆ.’ ಹೀಗೆ ಹೇಳಿಯೇ ಭಾರತದ ಪವರ್‌ ಹೌಸ್‌ ವಿದ್ಯಮಾನದ ಬಗೆಗೆ ಅವರು ಪ್ರಸ್ತಾಪಿಸಿರುವುದು.

ಡ್ರಕ್ಕರ್‌ ಯಾವುದೇ ಸ್ಥಾಪಿತ ಹಿತ ಪ್ರತಿನಿಧಿಸುವುದಿಲ್ಲ. ಚಿಂತನೆ ಮತ್ತು ಅಮೆರಿಕದ ಅವರದೇ ಹೆಸರಿನ ವಿದ್ಯಾಸಂಸ್ಥೆಯಲ್ಲಿ ಬೋಧಿಸುವುದು ಇಷ್ಟೇ ಅವರ ಚಟುವಟಿಕೆ. ಅವರು ಬರೆದ ಪುಸ್ತಕಗಳು ಎಷ್ಟೋ. ಬರೆಯಬೇಕೆಂದಿದ್ದ ಆದರೆ ಬರೆಯಲಾಗದೆ ವಿಷಾದಿಸುತ್ತಿರುವ ಪುಸ್ತಕದ ಹೆಸರು ‘ಅಜ್ಞಾನದ ನಿರ್ವಹಣೆ’! ೨೮.೦೧. ೨೦೦೪