ಯುದ್ಧದ ಸೂಕ್ಷ್ಮಾತಿಸೂಕ್ಷ್ಮ ನವಿರುಗಳನ್ನು ಮಹಾಭಾರತದಲ್ಲಿ ಕಾಣಬಹುದು. ಯುದ್ಧ ಕುರಿತ ಅಸಂಖ್ಯ ಅಂಶಗಳು ರೋಚಕ. ಎಸ್‌. ಎಲ್. ಭೈರಪ್ಪನವರ ಆವೃತ್ತಿಯಾದ ‘ಪರ್ವ’ದಲ್ಲಿ ಒಂದು ಪ್ರಸಂಗವಿದೆ. ಯುದ್ಧಕ್ಕೆ ಸಿದ್ಧತೆಗಳು ಭರದಿಂದ ನಡೆದ ವೇಳೆ ಯುದ್ಧವನ್ನು ನಿಲ್ಲಿಸುವಂಥ ಸಂಧಾನ ಕೂಡ ಯಶಸ್ವಿಯಾಗುವ ಸೂಚನೆಗಳು ಲಭಿಸಿದಾಗ ಕರ್ಣನ ಬಳಿಗೆ ಆತನ ಕುಲ ಬಾಂಧವರು ಧಾವಿಸಿ ಬರುತ್ತಾರೆ. ಯುದ್ಧ ನಡೆಯದೆ ನಿಂತು ಹೋಗದಂತೆ ನೋಡಿಕೊಳ್ಳಬೇಕೆಂಬುದು ಬಡಗಿಗಳಾದ ಅವರ ಅಹವಾಲು. ಯುದ್ಧ ನಡೆಯುವುದು ನಿಂತು ಹೋದರೆ ಅವರು ತಯಾರಿಸುವ ರಥವೇ ಮುಂತಾದ ವಾಹನಗಳನ್ನು ಕೊಳ್ಳುವವರು ಯಾರು? ಹೀಗೆ ಯುದ್ಧಾತುರ ಜನರ ಪಾಲಿಗೆ ಅವರ ಪಾಲಿಗೆ ಜೀವನೋಪಾಯ, ಲಾಭ ಗಳಿಕೆ ಮುಖ್ಯವಾಗಿರುತ್ತದೆ.

ಈಗ ಅಮೆರಿಕವು ಅಪ್ಘಾನಿಸ್ತಾನದ ಮೇಲೆ ಬೀಳಲಿ ಎಂದು ಮನಸಾರೆ ಬಯಸುವ ಜನರೆಂದರೆ ತೈಲ ಮಾರುವ ಅರಬ್‌ ರಾಷ್ಟ್ರಗಳವರು. ಅಮೆರಿಕಕ್ಕೆ ತೈಲ ಪೂರೈಸುವ ಬಾಹ್ರೇನ್‌ ಮಾತ್ರವಲ್ಲದೆ ಒಪೆಕ್ ತೈಲ ರಫ್ತು ರಾಷ್ಟ್ರಗಳ ಸಮುದಾಯ ಏನಿದೆಯೋ ಅದರಲ್ಲಿರುವ ಎಲ್ಲ ರಾಷ್ಟ್ರಗಳ ವ್ಯಾಪಾರ ಆಶಯವು ಯುದ್ಧ ಆಗಲಿ ಎಂಬುದೇ ಆಗಿರುತ್ತದೆ.

ಈಗಿನ ಕಾಲದ ಯುದ್ಧವು ಕ್ಷಿಪಣಿ ಪ್ರಧಾನ. ನಿಖರವಾಗಿ ಶಿಬಿರಗಳು, ಸೇನಾ ಬೀಡುಗಳು, ಸಂಗ್ರಹಾಗಾರಗಳು ಮತ್ತು ಚಲಿಸುತ್ತಿರುವ ಪಡೆ ಮತ್ತು ವಾಹನಗಳ ಮೇಲೆ ಸರಿಯಾಗಿ ಗುರಿ ಇಟ್ಟು ಕ್ಷಿಪಣಿಗಳನ್ನು ಪ್ರಯೋಗಿಸುತ್ತಾರೆ. ಪಡೆಗಳು, ಟ್ಯಾಂಕುಗಳು ಮುಂತಾದುವನ್ನು ಮೈದಾನಕ್ಕೆ ನುಗ್ಗಿಸಿ ಕಾದಾಡುವುದು ದೂರದ ಮಾತು. ಆದರೆ ಕ್ಷಿಪಣಿಗಳನ್ನು ಸಾಗಿಸಲು ಯುದ್ಧ ವಿಮಾನಗಳು, ಅವನ್ನು ಹೊತ್ತ ವಿಮಾನ ವಾಹಕ ಯುದ್ಧ ನೌಕೆಗಳು ಮುಂತಾದವನ್ನು ನಾನಾ ತಾಣಗಳಿಗೆ ಸಾಗಿಸಲು ತೈಲ ಬೇಕೇ ಬೇಕು. ಯುದ್ಧದಲ್ಲಿ ಅತಿ ಹೆಚ್ಚು ಖರ್ಚಿನ ಬಾಬುಗಳಲ್ಲಿ ತೈಲವೂ ಒಂದು.

ಪ್ರಪಂಚದಲ್ಲಿ ಎಲ್ಲಿಯೇ ಯುದ್ಧವಾದರೂ, ಯುದ್ಧವಾಗುವ ಸಂಭವ ಕಿಂಚಿತ್ತು ಗೋಚರಿಸಿದರೂ ತೈಲ ಬೆಲೆ ದಿಢೀರನೇ ಏರುತ್ತದೆ. ವಾಸ್ತವವಾಗಿ ತೈಲ ಬೆಲೆಯು ಯುದ್ಧ ಸಾಧ್ಯತೆಯ ದಿಕ್ಸೂಚಿಯೇ ಸರಿ. ತೈಲ ಬೆಲೆ ಏರಿಳಿತಗಳನ್ನು ಗಮನಿಸುತ್ತಿದ್ದರೆ ಸಾಕು. ಸಿದ್ಧತೆ ಹೇಗೆ ನಡೆದಿದೆ ಎಂಬುದರ ಸುಳಿವು ಸಿಗುತ್ತದೆ. ತೈಲ ವಾಯಿದಾ ವ್ಯಾಪಾರ ಸಹಾ ನಡೆಯುವುದರಿಂದ, ಅಂದರೆ ಮುಂಬರುವ ದಿನಗಳಲ್ಲಿ ಇಂಥ ದಿನಾಂಕದ ಸರಬರಾಜಿಗೆ ಇಂಥ ಬೆಲೆ ಎಂಬುದಾಗಿ ನಿಗದಿಯಾಗುವುದರಿಂದ, ಯುದ್ಧ ಸಾಧ್ಯತೆಗಳನ್ನು ಗುರುತಿಸುವುದು ಸುಲಭ.

ಅಮೆರಿಕದ ಗಗನಚುಂಬಿ ಕಟ್ಟಡಗಳ ಮೇಲೆ ದಾಈ ನಡೆದದ್ದು ಸೆಪ್ಟೆಂಬರ್‌ ೧೧ ರಂದು. ಕಚ್ಚಾ ತೈಲ ವಿಶ್ವ ಬೆಲೆ ಹಿಂದಿನ ದಿನ ಬ್ಯಾರೆಲ್‌ಗೆ ೨೦-೨೨ ಡಾಲರ್‌ ಇದ್ದುದು ೧೨ ರಂದು ಏಕಾಏಕಿ ೩೦ ಡಾಲರ್‌ಗೆ ಏರಿತು. ಎಲ್ಲ ದೇಶಗಳಲ್ಲಿ ಆದಂತೆ ಭಾರತಕ್ಕೂ ಆತಂಕವಾಯಿತು. ತೈಲ ಆಮದು ಹೊಣೆ ಹೊತ್ತ ಹಿರಿಯ ಅಧಿಕಾರಿಯೊಬ್ಬರು ಚಿಂತೆ ಬೇಡ, ನವೆಂಬರ್‌ ಕೊನೆಯವರೆಗೆ ಅನ್ವಯಿಸುವಂಥ ಖರೀದಿ ಒಪ್ಪಂದಗಳನ್ನು ಮಾಡಿಕೊಂಡಿದ್ದೇವೆ ಎಂದರು.

ಈ ಬಗೆಯ ಆತಂಕಕ್ಕೆ ಕಾರಣವಿಲ್ಲದೆ ಇಲ್ಲ. ಒಂದು ವರ್ಷಕ್ಕೆ ೧೦ ಕೋಟಿ ೩೦ ಲಕ್ಷ ಟನ್‌ ಕಚ್ಚಾತೈಲ ಭಾರತಕ್ಕೆ ಬೇಕು. ಕಳೆದ ಹಣಕಾಸು ವರ್ಷದಲ್ಲಿ ಇದರ ಆಮದಿಗೆ ೧೫೬೫ ಕೋಟಿ ಡಾಲರ್‌ ಹಣವನ್ನು ಖರ್ಚುಮಾಡಿದ್ದೇವೆ. ನಮ್ಮಲ್ಲೇ ಉತ್ಪಾದಿಸುವುದು ನಮ್ಮ ಅಗತ್ಯದ ಶೇ. ೨೫ ಕ್ಕಿಂತ ಸ್ವಲ್ಪ ಹೆಚ್ಚಿಗೆ ಆಗುವಷ್ಟು ಮಾತ್ರ. ಮಿಕ್ಕ ಶೇ. ೭೦ಕ್ಕಿಂತ ಸ್ವಲ್ಪ ಹೆಚ್ಚು ಎನಿಸುವಷ್ಟು ತೈಲವನ್ನು ನಾವು ಆಮದು ಮಾಡಿಕೊಳ್ಳುತ್ತೇವೆ. ಹೀಗಾಗಿ ತೈಲ ಬೆಲೆ ಎರ್ರಾಬಿರ್ರಿ ಏರಿದರೆ ಹೊಡೆತ ಬೀಳುವುದು ಆರ್ಥಿಕತೆ ಮೇಲೆ ಸಾಮಾನ್ಯವಾಗಿ ಎರಡು ತಿಂಗಳಿಗೆ ಆಗುವಷ್ಟು ತೈಲ ಆಮದಿಗೆ ಸದಾ ವ್ಯವಸ್ಥೆ ಆಗಿರುತ್ತದೆ. ಭಯೋತ್ಪಾದಕ ದಾಳಿಗೆ ಒಂದು ವಾರ ಮುಂಚೆಯಷ್ಟೇ ‘ಫಾರ್ಚೂನ್‌ ೫೦೦’ ಎಂಬ ಹೆಸರಿನಲ್ಲಿ ಅಧ್ಯಯನ ಸಂಬಂಧ ವರ್ಗೀಕರಣಕ್ಕೆ ಒಳಗಾಗುವ ಕಂಪೆನಿಗಳ ೫೦ ಲಕ್ಷ ಬಾರೆಲ್ ತೈಲವು ಸೆಪ್ಟೆಂಬರ್‌ ಅಂತ್ಯದ ವೇಳೆಗೆ ರವಾನೆ ಆಗುವಂತೆ ಒಪ್ಪಂದ ಮಾಡಿಕೊಂಡಿದ್ದವು. ಸರ್ಕಾರದಿಂದ ಆಮದು, ಖಾಸಗಿಯವರು ತರಿಸಿಕೊಳ್ಳುವ ತೈಲ ಇವುಗಳ ಪರಿಸ್ಥಿತಿ ಭದ್ರವಾಗಿದೆ ಎಂದೇ ಅರ್ಥಸಚಿವ ಯಶವಂತ ಸಿನ್ಹಾ ವಿವರಿಸಿದರು.

ನಿಜವಾಗಿ ಯುದ್ಧ ಸಾಧ್ಯತೆ ತಕ್ಷಣ ಇದ್ದಿದ್ದರೆ ಬ್ಯಾರೆಲ್‌ನ ತೈಲದ ಬೆಲೆಯು ೩೦-೩೧ ಡಾಲರ್‌ಗಿಂತ ಮೇಲೆ ಹೋಗಬೇಕಿತ್ತು. ಆದರೆ ಇಳಿಯತೊಡಗಿತು. ಅಷ್ಟೇ ಅಲ್ಲ; ಅಕ್ಟೋಬರ್‌ ಕಳೆಯುತ್ತಿದ್ದಂತೆ ಬೆಲೆ ಮತ್ತೆ ೨೦ ಡಾಲರ್‌ ಮಟ್ಟಕ್ಕೆ ಬಂದುನಿಂತಿತು.

ಎಲ್ಲರೂ ನಿಟ್ಟುಸಿರು ಬಿಡುವಂತಾಯಿತು. ಕಚ್ಚಾತೈಲ ಸಂಸ್ಕರಣೆ ವೇಳೆ ಲಭಿಸುವ ಹಲವಾರು ಉಪ ಉತ್ಪನ್ನಗಳು ಹಾಗೂ ಸಂಸ್ಕೃಣೆಗೊಂಡು ಬಳಕೆಗೆ ಸಿದ್ಧವಾದ ಪೆಟ್ರೋಲಿಯಂ ಉತ್ಪನ್ನಗಳ ಮೇಲೆ ಅಸಂಖ್ಯಾತ ಉದ್ಯಮಗಳು ಆಧಾರಪಟ್ಟಿವೆ. ಬೆಲೆ ಏರುವಂತಾದರೆ, ಸರಕು ಸಿಗುವುದು ಕಷ್ಟವಾದರೆ, ಹಾಹಾಕಾರ ಏಳುತ್ತದೆ. ಪೆಟ್ರೋಲ್‌ನ ಪಡಿತರ ದಿನಗಳನ್ನು ನೆನೆಸಿಕೊಳ್ಳುವ ಯುದ್ಧ ಕಂಡ ಹಿರಿಯರು ಅಲ್ಲೊಬ್ಬರು ಇಲ್ಲೊಬ್ಬರು ಈಗಲೂ ಇದ್ದಾರೆ.

ಈಗಲೂ ಭಾರತದಲ್ಲಿ ಡೀಸೆಲ್‌, ಸೀಮೆಎಣ್ಣೆ ಮತ್ತು ಅಡಿಗೆ ಅನಿಲಗಳ ಮೇಲೆ ಬೊಕ್ಕಸಕ್ಕೆ ಹೊರೆಯಾಗುವಂತೆ ಸಬ್ಸಿಡಿ ನೀಡುವುದುಂಟು. ತೈಲ ಆಮದು ವ್ಯವಹಾರಕ್ಕೆಂದೇ ವ್ಯವಸ್ಥೆ ಮಾಡಿರುವ ತೈಲನಿಧಿ ಈಗಾಗಲೇ ೧೩೫೦೦ ಕೋಟಿ ರೂಪಾಯಿ ಕೊರತೆ ಎದುರಿಸುತ್ತಿದೆ. ಬ್ಯಾರೆಲ್‌ ಬೆಲೆ ಒಂದೇ ಒಂದು ರೂಪಾಯಿ ಏರಿದರೂ ಈ ಕೊರತೆಯು ೨೫೦ ಕೋಟಿ ರೂಪಾಯಿಯಾಗುವಷ್ಟು ಹೆಚ್ಚಾಗುತ್ತದೆ. ಆಮದು ಕುರಿತ ಒಟ್ಟಾರೆ ವೆಚ್ಚ ೫೦೦ ಕೋಟಿ ಡಾಲರ್‌ನಷ್ಟು ಅಧಿಕಗೊಳ್ಳುತ್ತದೆ. ಇದನ್ನು ತಡೆದುಕೊಳ್ಳುವ ಸ್ಥಿತಿಯಲ್ಲಿ ನಾವಿಲ್ಲ.

ವಿಶ್ವ ಬೆಲೆಯು ಕಡಿಮೆಯಾಗುತ್ತಾ ಹೋದರೆ ಅದನ್ನು ತಡೆಯಲು ತೈಲ ಉತ್ಪಾದಕ ರಾಷ್ಟ್ರಗಳು, ಅರಬರು ಮತ್ತಿತರರು ಕಚ್ಚಾತೈಲ ಉತ್ಪಾದನೆಯನ್ನು ಕಡಿಮೆ ಮಾಡಿ ಬಿಡುವುದುಂಟು. ಆದರೆ ತೈಲವನ್ನು ಬೃಹತ್ ಪ್ರಮಾಣದಲ್ಲಿ ಖರೀದಿಸುವ ಅಮೆರಿಕ, ಜಪಾನ್‌ ಮುಂತಾದ ರಾಷ್ಟ್ರಗಳು ಹಾಗೆ ಮಾಡದಂತೆ ತಡೆಯಬಲ್ಲವು. ಆಮದು ರಾಷ್ಟ್ರಗಳು ಬಲಾಢ್ಯ ರಾಷ್ಟ್ರಗಳಾದ್ದರಿಂದ ಒತ್ತಡ ತರಬಲ್ಲವು. ತೋಳು ತಿರುಚುಬಲ್ಲವು. ಬಹುತೇಕ ತೈಲ ರಾಷ್ಟ್ರಗಳು ನೈಸರ್ಗಿಕ ಕೊಡುಗೆಯಾದ ತೈಲ ನಿಕ್ಷೇಪಗಳಿಂದ ದ್ರವ ಬಂಗಾರವನ್ನು ತೋಡಿ ತೋಡಿ ಮಾರುವುದುಷ್ಟೇ ಮುಖ್ಯ ದಂಧೆಯಾಗಿ ಮಾಡಿಕೊಂಡಿರುವುದುಂಟು. ಬಹುತೇಕ ತೈಲ ರಾಷ್ಟ್ರಗಳಲ್ಲಿ ಬೇರೆ ಮುಖ್ಯ ಉದ್ಯಮವೇ ಇಲ್ಲ. ಖರೀದಿದಾರ ಉದ್ಯಮ ರಾಷ್ಟ್ರಗಳ ಜೀವನ ವೈಖರಿಯನ್ನು ಅಳವಡಿಸಿಕೊಂಡಿರುವ ತೈಲ ರಾಷ್ಟ್ರಗಳ ಹಣವನ್ನು ಖರ್ಚು ಮಾಡಿ ಸಕಲ ಸೌಲಭ್ಯಗಳನ್ನು ಅನುಭವಿಸುವಲ್ಲಿ ನಿರತವಾಗಿವೆ. ತೈಲ ಮಾರಾಟಕ್ಕೆ ಧಕ್ಕೆ ಆಗುವುದನ್ನು ಸಹಿಸಲಾರವು. ಅದೇ ವೇಳೆ ತೈಲ ವ್ಯವಹಾರಕ್ಕೆ ಹೊರತಾಗಿ ನಾನಾ ಬಾಬುಗಳಲ್ಲಿ ಮುಂದುವರೆದ ರಾಷ್ಟ್ರಗಳನ್ನೇ ಅವಲಂಬಿಸಿರುತ್ತವೆ. ತೈಲ ಬೆಲೆಯನ್ನು ವಿಪರೀತ ಹೆಚ್ಚಿಸಿದರೆ ತಮ್ಮ ಮೇಲೆ ದಾಳಿ ನಡೆಯುತ್ತದೆ ಎಂಬ ಅಂಜಿಕೆಯೂ ಇವಕ್ಕೆ ಉಂಟು. ಯುದ್ಧವಿರಲಿ, ಯುದ್ಧ ಇಲ್ಲದಿರಲಿ, ತೈಲ ಬೆಲೆಯ ವಿಚಾರದಲ್ಲಿ ತೈಲ ಮಾರುವ ರಾಷ್ಟ್ರಗಳವರು ಸರ್ವಸ್ವತಂತ್ರರೇನಲ್ಲ.

ಅಕ್ಟೋಬರ್‌ ಮೊದಲ ವಾರದಲ್ಲಿ ಕಚ್ಚಾತೈಲ ಬ್ಯಾರೆಲ್‌ ಬೆಲೆಯನ್ನು ಮತ್ತೆ ೨೦ ಡಾಲರ್‌ ಆಸುಪಾಸಿಗೆ ತಂದ ತೈಲ ರಾಷ್ಟ್ರಗಳು ಉತ್ಪಾದನೆಯನ್ನು ಕಡಿಮೆ ಮಾಡುವುದಿಲ್ಲ ಎಂಬ ಹೇಳಿಕೆಯನ್ನೂ ನೀಡಿದೆ.

ಸಾರಾಂಶವಿಷ್ಟೆ. ಸದ್ಯಕ್ಕೆ ತೈಲ ಬಳಕೆ ವಿಪರೀತ ಏರುವ ಸೂಚನೆಗಳಿಲ್ಲ!

ದೇಶದೊಳಗಿನ ಪೆಟ್ರೋಲಿಯಂ ಉತ್ಪನ್ನಗಳ ಬಳಕೆದಾರರಿಗೆ ಇರುವ ಚಿಂತೆ ಒಂದೇ: ಅವುಗಳ ಬೆಲೆ ಏರಬಾರದು. ಅವು ಸತತವಾಗಿ ಸಿಗುವಂತಿರಬೇಕು. ಕಳೆದ ವರ್ಷ ಕಚ್ಚಾತೈಲದ ವಿಶ್ವಬೆಲೆ ಬ್ಯಾರೆಲ್‌ಗೆ ೩೭ ಡಾಲರ್‌ಗೆ ಹೋಗಿತ್ತು. ಆಗ ಏನೂ ಯುದ್ಧ ಭೀತಿ ಇರಲಿಲ್ಲ. ಆಗಲೇ ಪೆಟ್ರೋಲಿಯಂ ಉತ್ಪನ್ನಗಳ ಬೆಲೆಯನ್ನು ಸರ್ಕಾರ ಏರಿಸಿದ್ದು. ಅನಂತರ ವಿಶ್ವಬೆಲೆ ಇಳಿದಾಗ ಅದನ್ನು ಇಳಿಸಲಿಲ್ಲ.

ಪೆಟ್ರೋಲಿಯಂ ಉತ್ಪನ್ನಗಳಿಗೆ ಸಬ್ಸಿಡಿ ನೀಡುವ ಪದ್ಧತಿ ೨೦೦೨ ಏಪ್ರಿಲ್‌ಗೆ ಕೊನೆಗೊಳ್ಳುತ್ತದೆ. ಆತನಕ ಯಥಾಸ್ಥಿತಿ ಮುಂದುವರೆದರೆ ಸಾಕು. ಅನಂತರ ಏರುಬೆಲೆಗೆ ತಲೆ ಕೊಡುವುದು ಇದ್ದೇ ಇದೆ. ಅದರ ಮಧ್ಯೆ ಯುದ್ಧವೆಂಬುದು ತಲೆ ಹಾಕದಿರಲಿ ಎಂಬುದೇ ಶ್ರೀಸಾಮಾನ್ಯನ ಪ್ರಾರ್ಥನೆ. ೧೦.೧೦.೨೦೦೧