ಭವಿಷ್ಯದಲ್ಲಿ ಒಳಿತಿಗೆಂದು ಕೂಡಿಟ್ಟ ನಿಧಿಯನ್ನು ನಾಗರಹಾವು ಕಾವಲು ಕಾಯುವುದಂತೆ. ಇದು ಜನಮನದಲ್ಲಿ ನೆಲೆ ನಿಂತ ಸಾಮಾನ್ಯ ನಂಬುಗೆ.

ಆದ್ದರಿಂದಲೇ ಘಟಸರ್ಪ ಅಥವಾ ಮುದಿಹಾವು ಕದಲದೆ ನೆಲೆಗಿಂತ ಜಾಗದಲ್ಲಿ ನಿಧಿ ಇದೆ ಎಂದೇ ಭಾವಿಸುತ್ತಾರೆ. ಹಾವನ್ನು ಕೊಲ್ಲದ ಹೊರತು ನಿಧಿಗೆ ಕೈಯಿಡಲು ತಮಗೆ ಸಾಧ್ಯವಾಗುವುದಿಲ್ಲ ಎಂದೇ ಆಶೆಬುರುಕರು ಮುಂದಾಗುತ್ತಾರೆ.

ಇರಾಕ್‌ ಮೇಲೆ ಬೀಳಲು ಅಮೆರಿಕಕ್ಕೆ ಇರುವ ಕಾರಣವೂ ಇದೇ. ಸೌದಿ ಅರೆಬಿಯಾ ಅತಿ ಹೆಚ್ಚು ತೈಲ ನಿಕ್ಷೇಪ ಹೊಂದಿರುವ ರಾಷ್ಟ್ರವಾದರೆ ಎರಡನೆಯ ಸ್ಥಾನ ಇರಾಕ್‌ಗೆ. ಎಲ್ಲ ತೈಲ ರಾಷ್ಟ್ರಗಳಿಗೂ ತಂತಮ್ಮ ನೆಲದಡಿ ಇರುವ ದ್ರವ ಬಂಗಾರವೆನಿಸಿದ ತೈಲ ನಿಕ್ಷೇಪ ತಂದುಕೊಡುವ ಬಲ ಎಷ್ಟು ದೊಡ್ಡದು ಎಂಬ ಅರಿವಿದೆ. ಆದ್ದರಿಂದ ಅಮೆರಿಕ ಆಗಲಿ; ಇನ್ನಾವುದೇ ರಾಷ್ಟ್ರ ಆಗಲಿ; ತೈಲ ತೆಗೆದು ಅದನ್ನು ಮಾರುವ ವ್ಯಾವಹಾರಿಕ ಸಂಬಂಧವನ್ನಷ್ಟೇ ಅದರ ಜೊತೆ ಬಲಪಡಿಸಿಕೊಳ್ಳಲು ಪ್ರತಿಯೊಂದು ತೈಲ ರಾಷ್ಟ್ರವೂ ಹಾತೊರೆಯುತ್ತದೆ.

ಸೆಡ್ಡು ಹೊಡೆದಿರುವ ರಾಷ್ಟ್ರವೆಂದರೆ ಇರಾಕ್‌ ಮಾತ್ರವೇ. ಇರಾಕ್‌ ಆಳರಸ ಸದ್ದಾಂ ಹುಸೇನ್‌ ಅಮೆರಿಕ ಪಾಲಿಗೆ ಖಳನಾಯಕ. ಬಹುಪಾಲು ವಿಶ್ವವೇ ಸಮ್ಮತಿಸದಿದ್ದರೂ ‘ಬುದ್ದಿ ಕಲಿಸಲು’ ಅಮೆರಿಕಕ್ಕೆ ತವಕ. ಸದ್ದಾಂ ಪದಚ್ಯುತಿ ಸಾಧ್ಯವಾದರೆ, ಆತನ ಜಾಗಕ್ಕೆ ಬರುವ ಇನ್ನಾರನ್ನೇ ಆದರೂ ಅಂಕೆಯಲ್ಲಿ ಇಟ್ಟುಕೊಳ್ಳಬಹುದು. ಆಗ ಇರಾಕ್‌ನ ತೈಲ ನಿಕ್ಷೇಪದ ಮೇಲೆಯೇ ಅಂಕೆ ಸಾಧಿಸಿದಂತೆ ಆಗುತ್ತದೆ. ಅದಕ್ಕಿಂತ ಹೆಚ್ಚಾಗಿ, ಇರಾಕ್‌ ಬಳಿ ಇದೆಯೆನ್ನಲಾದ, ಇಲ್ಲವೇ ಇತ್ತೆನ್ನಲಾದ ಜೈವಿಕ, ರಾಸಾಯನಿಕ ಅಸ್ತ್ರಗಳ, ನಿರ್ಮೂಲನೆ ಮಾಡಿದಂತೆ ಆಗುತ್ತದೆ. ಈ ಅಸ್ತ್ರಗಳು ಯುದ್ಧದಲ್ಲಿ ಈತನಕ ಬಳಸಿಕೊಂಡು ಬಂದಿರುವ ಸ್ಫೋಟಕ ಅಸ್ತ್ರಗಳಿಗಿಂತ ಭಿನ್ನವಾದವು. ಸ್ಫೋಟಕ ಅಸ್ತ್ರಗಳು ಆಸ್ತಿಪಾಸ್ತಿ, ಮುಖ್ಯವಾಗಿ ಕಟ್ಟಡಗಳನ್ನು ನಾಶ ಮಾಡುತ್ತವೆ. ಅಂದರೆ ಯುದ್ಧ ಮುಗಿದ ಮೇಲೆ ದೇಶದ ಪುನರ್‌ ನಿರ್ಮಾಣ ಯಾರ ಪಾಲಿಗೆ ಆದರೂ ದುಬಾರಿ. ಸದ್ದಾಂ ಪರಿಣಿತಿ ಸಾಧಿಸಿರುವರೆನ್ನಲಾದ ಜೈವಿಕ ಮತ್ತು ರಾಸಾಯನಿಕ ಅಸ್ತ್ರಗಳು ಜನರನ್ನು ಕೊಲ್ಲುತ್ತವೆ. ಆಸ್ತಿಪಾಸ್ತಿ ನಾಶ ಮಾಡುವುದಿಲ್ಲ. ಹೀಗಾಗಿ ಅವುಗಳ ಬಲ ಹಾಗೂ ಕಿಮ್ಮತ್ತು ಬಹಳ. ಅದು ಕುಡಾ ಅಮೆರಿಕ ಸೇರಿದಂತೆ ಬಹುತೇಕ ರಾಷ್ಟ್ರಗಳ ಕೈಲಿ ಇಲ್ಲ. ಜಗತ್ತಿನ ಏಕೈಕ ಶಕ್ತಿ ರಾಷ್ಟ್ರವಾದ ಅಮೆರಿಕ ಸದ್ದಾಂನ ಈ ರೂಪದ ಬಲವನ್ನು ಸೈರಿಸಲು ಸಾಧ್ಯವೇ?

ಪರ್ಷಿಯನ್‌ ಕೊಲ್ಲಿಯಿಂದ, ಇರಾಕ್‌ನ ಶತ್ರು ರಾಷ್ಟ್ರ ಕುವೈತ್‌ನ ಮೂಲಕ ಮಾತ್ರ ದಾಳಿಕೋರ ರಾಷ್ಟ್ರವೊಂದು ಇರಾಕ್‌ ಮೇಲೆ ಬೀಳಲು ಶಕ್ಯ. ಸೌದಿ ಅರೆಬಿಯಾ, ಜೋರ್ಡಾನ್‌, ಸಿರಿಯ, ಟರ್ಕಿ ಮತ್ತು ಇರಾನ್‌ಗಳು ಸುತ್ತುವರಿದಿವೆ. ಇದೆಲ್ಲ ತೈಲ ಹಿತಾಸಕ್ತಿಯ ರಾಷ್ಟ್ರಗಳೇ. ಅಮೆರಿಕವನ್ನು ಗ್ರಾಹಕ ರಾಷ್ಟ್ರವಾಗಿ ಕಂಡರೂ ತಮ್ಮ ನವುಡಿನ ತೈಲ ನಿಕ್ಷೇಪದ ಅಂಕೆ ಅಮೆರಿಕದ ಪಾಲಾದರೆ ತಮ್ಮ ಮಟ್ಟಿಗೆ ದೀರ್ಘಕಾಲಿಕ ಹಾನಿ ಕಟ್ಟಿಟ್ಟಿದ್ದು ಎಂದೇ ಆ ರಾಷ್ಟ್ರಗಳ ಭಾವನೆ. ಇರಾಕ್‌ ಅನ್ನು ತಾವು ಸಹಿಸಲಿ, ಸಹಿಸದಿರಲಿ; ಅದೊಂದು ತೈಲ ರಾಷ್ಟ್ರ. ಈ ಭಾವನೆಯೇ ರಾಜಕೀಯಕ್ಕಿಂತ ಪ್ರಧಾನವಾಗುತ್ತದೆ.

ಇರಾಕ್‌ನ ದಕ್ಷಿಣ ಭಾಗದ ದೊಡ್ಡ ನಗರ ಬಾಸ್ರಾದಲ್ಲಿ ಉತ್ಪಾದನಾ ಕೇಂದ್ರವನ್ನುಳ್ಳ ಪಶ್ಚಿಮ ಖುರ್ನಾ, ಮೈನೂನ್‌ ಮತ್ತು ಬಿನ್‌ ಉಮರ್‌ ತೈಲ ನಿಕ್ಷೇಪ ಕ್ಷೇತ್ರಗಳ ಅಡಿ ೪೦೦೦ ಕೋಟಿ ಬ್ಯಾರೆಲ್‌ನಷ್ಟು ಕಚ್ಚಾತೈಲ ಅಡಗಿದೆ. ಈ ಕ್ಷೇತ್ರದಿಂದ ತೈಲ ತೋಡುವ ಕಾರ್ಯ ಬಹಳವಾಗಿ ಆಗಿಲ್ಲ.

ಇದು ಇರಾಕ್‌ನ ಒಂದು ಬದಿಯ ನಿಕ್ಷೇಪ ಮಾತ್ರ. ನೆಲದಡಿ ಬಹಳ ವ್ಯಾಪಕವಾದ ನಿಕ್ಷೇಪವಿದೆ. ಎಲ್ಲ ಕಡೆಯಿಂದ ಇರಾಕ್‌ನಲ್ಲಿ ತೈಲ ತೆಗೆಯುವುದು ನಿತ್ಯ ೨೪ ಲಕ್ಷ ಬ್ಯಾರೆಲ್‌ ತೈಲವನ್ನು ಮಾತ್ರ. ಇರಾಕ್‌ನಲ್ಲಿ ಉತ್ತರದ ಕಿರುಕ್‌ ತೈಲ ಕ್ಷೇತ್ರ ಸಮೃದ್ಧ. ಅಲ್ಲಿಂದ ನಿತ್ಯ ಒಂದು ಕೋಟಿ ಬ್ಯಾರೆಲ್‌ ತೈಲ ತೋಡಬಹುದು. ಆದರೆ ಅದು ಈಗಾಗಲೇ ಉತ್ತರದಂಚಿನ ಶತ್ರುಗಳಾದ ಕುರ್ದ್‌ಗಳು ಮತ್ತು ಟರ್ಕಿ ಸಂಜಾತರ ಕೈವಶವಾಗಿದೆ. ಇರಾಕ್ ಮೇಲೆ ಸದ್ಯ ವಿಶ್ವಸಂಸ್ಥೆಯ ಆರ್ಥಿಕ ದಿಗ್ಬಂಧನವಿದೆ. ೧೯೯೦ರ ಯುದ್ಧದಲ್ಲಿ ಇರಾಕ್‌ ಕಳೆದುಕೊಂಡ ಸ್ವಾತಂತ್ರ್ಯದ ಫಲವಿದು. ಕುವೈತ್‌ ಅನ್ನು ವಶಕ್ಕೆ ತೆಗೆದುಕೊಳ್ಳಲು ಇರಾಕ್‌ ಯತ್ನಿಸಿದಾಗ ಇದೇ ಅಮೆರಿಕ ಮೂಗು ತೂರಿಸಿ ಅದನ್ನು ಮಣಿಸಿತು. ಈಗ ಇರಾಕ್‌ಗೆ ಜೀವನೋಪಾಯಕ್ಕೆ ತತ್ವಾರ. ವಿಶ್ವಸಂಸ್ಥೆ ಕೃಪಾಶ್ರಯವೆಂಬಂತೆ ಇರಾಕ್‌ನ ಜನರ ಆಹಾರಕ್ಕೆ ಎಷ್ಟು ಬೇಕೋ ಅಷ್ಟು ತೈಲವನ್ನು ಮಾರಲು ಮಾತ್ರ ಅವಕಾಶ ಮಾಡಲಾಗಿದೆ. ಆದರೆ ಇರಾಕ್ ಕದ್ದುಮುಚ್ಚಿ ನಿತ್ಯ ಎರಡು ಲಕ್ಷ ಬ್ಯಾರೆಲ್‌ಗಳಷ್ಟು ತೈಲವನ್ನು ಸಿರಿಯಾ ಮೂಲಕ ಕಳ್ಳ ಸಾಗಾಣಿಕೆ ಮೂಲಕ ಮಾರಿಕೊಳ್ಳುತ್ತಿದೆ.

ಇರಾಕ್‌ ಮತ್ತು ಸಿರಿಯಾ ನಡುವೆ ಬೇರೆ ಕಡೆಗಿಂತ ಮೊಟ್ಟಮೊದಲ ಬಾರಿಗೆ ಹಾಕಿದ ತೈಲ ಸಾಗಣೆ ಕೊಳವೆ ಮಾರ್ಗವಿದೆ. ಕಳೆದ ಇಪ್ಪತ್ತು ವರ್ಷಗಳಿಂದ ಇದರ ಬಳಕೆ ಇರಲಿಲ್ಲ. ಕದ್ದುಮುಚ್ಚಿ ಮಾರಲು ತೈಲ ಸಾಗಣೆ ಆಗುತ್ತಿರುವುದು ಈ ಕೊಳವೆ ಮಾರ್ಗದ ಮೂಲಕ. ಸಿರಿಯ ಮಾತ್ರವಲ್ಲದೆ ಟರ್ಕಿಗೆ, ಇರಾನ್‌ ಅಂಚಿಗೆ, ಪರ್ಷಿಯನ್‌ ಕೊಲ್ಲಿ ತಲುಪುವ ಬಂದರಿಗೆ ತೈಲವನ್ನು ಸಾಗಿಸುವ ಕೊಳವೆ ಮಾರ್ಗಗಳ ಜಾಲವೇ ಇರಾಕ್‌ನಲ್ಲಿ ಹರಡಿಕೊಂಡಿದೆ. ಸದ್ಯದ ಯುದ್ಧದಲ್ಲಿ ಕೊಳವೆ ಮಾರ್ಗಗಳು ಜಖಂಗೊಂಡರೆ, ಯಾರಿಗೆ ಆದರೂ ಅಪಾರ ನಷ್ಟವೇ. ದಕ್ಷಿಣ ಭಾಗದಲ್ಲಿರುವ ರಫ್ತು ಸಾಧ್ಯ ನೆಲೆಗಳಿಗೇನಾದರೂ ಹಾನಿಯಾದರೂ ಹೊರಚೆಲ್ಲಿಕೊಳ್ಳುವ ತೈಲವು ಪರ್ಷಿಯನ್‌ ಕೊಲ್ಲಿಯಲ್ಲೆಲ್ಲ ಸಮುದ್ರದ ಮೇಲೆ ತೇಲಾಡಿ ಹಿಂದೆ ಈ ರೀತಿ ಆಗಿದ್ದಕ್ಕಿಂತ ಹೆಚ್ಚಿನ ಹಾನಿಯನ್ನು ಮಾಡಬಲ್ಲದು. ಆದ್ದರಿಂದ ಅಮೆರಿಕವು ಇರಾಕ್‌ ಅನ್ನು ನೇರವಾಗಿ ಇಲ್ಲವೇ ಪರೋಕ್ಷವಾಗಿ ಹತೋಟಿಗೆ ತೆಗೆದುಕೊಂಡರೂ ಈ ರೀತಿ ಹಾನಿ ಆಗದೆಂತೆಯೂ ಮುನ್ನೆಚ್ಚರಿಕೆ ವಹಿಸಬೇಕು.

ಇರಾಕ್‌ನಲ್ಲಿರುವ ತೈಲಬಾವಿಗಳ ಸಂಖ್ಯೆ ೧೬೦೦. ಯುದ್ಧದ ವೇಳೆ ಇವಕ್ಕೆ ಬೆಂಕಿ ಹೊತ್ತಿಸಿದರೆ ತೈಲ ಹೊತ್ತು ಉರಿಯುತ್ತದೆ. ಅದರಿಂದ ಯಾರಿಗೂ ಲಾಭವಿಲ್ಲ. ಹಾಗೆ ಬೆಂಕಿ ಹೊತ್ತಿಸದೆ ತೈಲಬಾವಿ ರಂಧ್ರಗಳನ್ನು ಕಾಪಾಡಿಕೊಂಡರೂ ಯುದ್ಧಾನಂತರ ೨ ವರ್ಷ ಅವಧಿ ಆಧುನೀಕರಣಕ್ಕೆ ೪೪೦ ಕೋಟಿ ಡಾಲರ್‌ ಬೇಕಾಗುತ್ತದೆಂಬುದು ಒಂದು ಅಂದಾಜು. ದುರದೃಷ್ಟವಶಾತ್‌ ತನ್ನ ಶತ್ರು ಕೈಗೆ ತೈಲಬಾವಿ ಸಿಗಬಾರದೆಂದು ಬೆಂಕಿ ಹೊತ್ತಿಸಿದರೆ ಪುನರ್‌ ನಿರ್ಮಾಣ ಕಾರ್ಯಕ್ಕೆ ಅದರ ಎರಡುಪಟ್ಟು ಖರ್ಚಾಗುತ್ತದೆ.

ಯುದ್ಧಕ್ಕಿಳಿಸಿದ ಅಮೆರಿಕವು ತನಗೆ ಎಷ್ಟು ನಷ್ಟವಾಗುತ್ತದೆ ಎಂದು ಅಂದಾಜು ಮಾಡಿದೆ. ಯುದ್ಧ ಮತ್ತು ಅದರ ನಂತರದ ಮೊದಲ ವರ್ಷದ ಪುನರ್‌ ನಿರ್ಮಾಣ ಕಾರ್ಯಕ್ಕೆ ೧೩೯೦೦ ಕೋಟಿ ಡಾಲರ್‌ ಬೇಕಾಗುವುದೆಂಬುದು ಬುಷ್‌ ಸರ್ಕಾರದ ಖಚಿತ ಅಂದಾಜು. ವಿಮಾನಯಾನ ಮುಂತಾದ ಕ್ಷೇತ್ರಗಳಲ್ಲಿ ಆಗುವ ವ್ಯಾಪಾರ ನಷ್ಟವೇ ಮುಂತಾದವನ್ನು ಲೆಕ್ಕಕ್ಕೆ ತೆಗೆದುಕೊಂಡರೆ ಅಮೆರಿಕಕ್ಕೆ ಆಗುವ ನಷ್ಟ ಇನ್ನೂ ಹೆಚ್ಚು. ಆದರೆ ಇರಾಕ್‌ನಲ್ಲಿ ನಡೆಯುವ ಮಾನವ ಹಾಗೂ ಆಸ್ತಿಪಾಸ್ತಿ ನಷ್ಟವು ಲೆಕ್ಕವಿಲ್ಲದಷ್ಟು. ದುಷ್ಟಪುಷ್ಟವಾಗಿರುವ ಅಮೆರಿಕವು ಆರ್ಥಿಕ ನಷ್ಟದಿಂದಾಗಿ ಒಂದಿಷ್ಟು ಕ್ಷೀಣಗೊಳ್ಳಬಹುದು. ಆದರೆ ನಿತ್ರಾಣಗೊಂಡಿರುವ ಇರಾಕ್‌ನ ಅಂತಃಸತ್ವ ಸತ್ತೇ ಹೋಗುತ್ತದೆ.

ಇಲ್ಲಿ ಹೇಳಿದ್ದು ಇರಾಕ್‌ನಲ್ಲಿ ಆಗುವ ನಷ್ಟದ ಬಾಬು ಮಾತ್ರ. ಇದರ ಜೊತೆಗೆ ಕೊಲ್ಲಿ ಪ್ರದೇಶದಲ್ಲಿ ಸಾಕುತ್ತಾ ಕಾಪಾಡಬೇಕಾದ ಸೇನಾ ಪಡೆಗಳು, ಯುದ್ಧನೌಕೆಗಳು, ಯುದ್ಧ ವಿಮಾನಗಳು ಮುಂತಾದವುಗಳ ವೆಚ್ಚವನ್ನೂ ಗಣನೆಗೆ ತೆಗೆದುಕೊಂಡು ಅಮೆರಿಕ ಸರ್ಕಾರವು ೧೫ ಸಾವಿರ ಕೋಟಿ ಡಾಲರ್‌ ಆರ್ಥಿಕ ನಷ್ಟದ ಅಂದಾಜು ಮಾಡಿಕೊಂಡಿದೆ.

ಇಷ್ಟು ಹಣ ಮತ್ತು ಸೈನಿಕರ ಪ್ರಾಣ ಖರ್ಚು ಮಾಡಿ ತೈಲ ಕ್ಷೇತ್ರಗಳೇ ತುಂಬಿರುವ ಕೊಲ್ಲಿಯಲ್ಲಿ ತಾನು ಅತಿ ಬಲಿಷ್ಠ ಎಂದು ಬಿಂಬಿಸುವುದೇ ಅಧ್ಯಕ್ಷ ಬುಷ್‌ಗೆ ಬೇಕಿರುವುದು. ಆಗ ಪುನಃ ಅಮೆರಿಕದ ಅಧ್ಯಕ್ಷನಾಗಿ ತಾನು ಆಯ್ದು ಬರಬಹುದು. ಸದ್ಯ ಅಧ್ಯಕ್ಷ ಬುಷ್‌ ಅವರ ಪಾಲಿಗೆ ಶೇ. ೬೫ ಜನಪ್ರಿಯತೆ ಲಭ್ಯವಿದೆ. ಅದು ಇನ್ನೂ ಹೆಚ್ಚಬಹುದು ಎಂಬುದು ಅವರ ಲೆಕ್ಕಾಚಾರ.

ಯುದ್ಧದ ವೆಚ್ಚದ ಲೆಕ್ಕಾಚಾರಗಳು ಇಷ್ಟು ಸುಲಭವಾಗಲಿಕ್ಕಿಲ್ಲ. ಯುದ್ಧ ಎಷ್ಟು ದಿನ ನಡೆಯುತ್ತದೆ ಎಂಬುದು ಮುಖ್ಯ. ತಜ್ಞರು ಆ ಬಗೆಗೆ ಕೂಡಾ ಒಂದಿಷ್ಟು ತಲೆಕೆಡಿಸಿಕೊಂಡಿದ್ದಾರೆ. ಇರಾಕಿಗಳು ಆಕಾಶ ಯುದ್ಧ ಮತ್ತು ಭೂಸಮರಗಳಲ್ಲಿ ಹಿಂದೆ ಸರಿಯುತ್ತಾಹೋದರೆ ಆರು ವಾಗಗಳಲ್ಲಿ ಯುದ್ಧ ಮುಗಿಯಬಹುದು. ಇರಾಕ್‌ ಎರಡೂ ರೀತಿ ಧೀರೋದಾತ್ತ ಹೋರಾಟ ನೀಡುವುದೇ ಅಲ್ಲದೆ ಕೆಲವು ನಗರಗಳಲ್ಲಿ ಬೀದಿ ಕಾಳಗಕ್ಕೆ ಇಳಿದರೆ ೧೨ ವಾರ ಕಾಲದವರೆಗೆ ಯುದ್ಧ ವಿಸ್ತರಿಸಬಹುದು. ಯುದ್ಧ ಇನ್ನೂ ತೀವ್ರಗೊಂಡರೆ ಆರು ತಿಂಗಳು ಸಹಾ ನಡೆಯಬಹುದು.

ಆದರೆ ಬಹಳ ದೊಡ್ಡ ಭೀತಿ ಎಂದರೆ ಇರಾಕ್‌ ಜೈವಿಕ ಅಸ್ತ್ರ ಮತ್ತು ರಾಸಾಯನಿಕ ಅಸ್ತ್ರಗಳನ್ನು ಬಳಸುತ್ತದೆ ಎಂಬುದು. ಆಗ ಆಗುವ ಅನಾಹುತವನ್ನು ಊಹಿಸಲೂ ಶಕ್ಯವಾಗದು. ಸದ್ದಾಂ ಮತ್ತು ಆತನ ಮಕ್ಕಳು ಈ ಅಸ್ತ್ರಗಳ ಬಳಕೆಗೆ ನಿರ್ಧಾರ ಮಾಡಿದ್ದಾರೆ ಎಂಬ ವರದಿ ಬಂದಿದೆ.

ಇದೇನೇ ಇದ್ದರೂ ಯುದ್ಧ ಬಹಳ ಕಾಲ ದೀರ್ಘಗೊಳ್ಳುವುದಿಲ್ಲ ಎಂಬುದೇ ತಜ್ಞರ ಭಾವನೆ. ಅಂತಿಮ ಜಯ ಅಮೆರಿಕದ್ದೇ ಎಂಬುದು ಅಲ್ಲಿ ಜಜನತ ಎಂಬ ಭಾವನೆಯೇ ಯುದ್ಧಕ್ಕೆ ಮುನ್ನ, ಅಂದರೆ ಮಾರ್ಚ್‌ ೨೦ಕ್ಕೆ ಮುನ್ನ, ವಿಜೃಂಭಿಸಿತ್ತು. ಆದ್ದರಿಂದಲೇ ಅನಿಶ್ಚಿತತೆ ಅಧಿಕವಾದಾಗ ಕಚ್ಚಾತೈಲ ಬೆಲೆ ಇಳಿಯತೊಡಗಿತ್ತು.

ನವೆಂಬರ್‌ನಲ್ಲಿ ಬ್ಯಾರೆಲ್‌ ಕಚ್ಚಾತೈಲ ಬೆಲೆ ೨೫ ಡಾಲರ್‌ ಆಗಿತ್ತು. ಅದಕ್ಕೆ ಮುನ್ನ ಬಹಳ ಕಾಲ ೨೦ ಡಾಲರ್‌ ಮಟ್ಟದಲ್ಲೇ ಸ್ಥಿರಗೊಂಡಿತ್ತು. ಆದರೆ ಮಾರ್ಚ್‌ ಮೂರನೇ ವಾರದ ಕೊನೆಗೆ ಗರಿಷ್ಠ ೩೮ ಡಾಲರ್‌ಗೆ ಏರಿತ್ತು. ತೈಲ ರಾಷ್ಟ್ರಗಳು ಈ ಏರಿಕೆಯನ್ನು ಬಯಸುತ್ತವೆ. ಸೌದಿ ಅರೆಬಿಯ ಮತ್ತು ಕುವೈತ್‌ಗಳಲ್ಲಿರುವ ಭಾರತೀಯ ಸಂಜಾತ ವಾಣಿಜ್ಯೋದ್ಯಮಿಗಳು ಸಹಾ ಹೊಸ ವ್ಯಾಪಾರ ಅವಕಾಶಗಳಿಗಾಗಿ ಹಾತೊರೆಯುತ್ತಾರೆ. ಅಮೆರಿಕನ್ನರು ಯುದ್ಧ ವೇಳೆ ಖರ್ಚು ಮಾಡಲು ಹಿಂದೆಗೆಯುವುದಿಲ್ಲ.

ಭಾರತ ತನ್ನ ಅಗತ್ಯದ ಶೇ. ೭೦ ಕಚ್ಚಾ ತೈಲವನ್ನು ಯುದ್ದ ನಡೆಯುವ ಆಸುಪಾಸಿನ ಪ್ರದೇಶಗಳಿಂದಲೇ ಖರೀದಿಸುತ್ತದೆ. ಇರಾಕ್‌ನಿಂತ ತೈಲ ಖರೀದಿಸುವುದು ಬೆಲೆ ಮತ್ತು ಸಾಗಾಣಿಕೆ ದೃಷ್ಟಿಯಿಂದ ಭಾರತದ ಪಾಲಿಗೆ ಲಾಭಕಾರಿ. ಅಲ್ಲಿನ ತೈಲ ಪಾಶ್ಚಿಮಾತ್ಯರ ಅಂಕೆಯಲ್ಲಿದ್ದರೆ ಬೆಲೆ ಕಡಿಮೆ ಇರಲಿಕ್ಕೂ ಸಾಧ್ಯ ಎಂಬ ವಿಚಾರ ಭಾರತದಲ್ಲಿ ಇಲ್ಲದಿಲ್ಲ. ೦೨.೦೪.೨೦೦೩