ಪೂರ್ವ ಮತ್ತು ಪಶ್ಚಿಮ ಜರ್ಮನಿಗಳ ನಡುವಣ ಬರ್ಲಿನ್‌ ಗೋಡೆ ಪತ್ಯೇಕತೆಯ ಸಂಪೂರ್ಣ ಪ್ರತೀಕ ಆಗಿತ್ತು. ಕಡೆಗೆ ಕುಸಿದು ಬಿತ್ತು. ಭಾರತ ಪಾಕಿಸ್ತಾನಗಳ ನಡುವೆ ಗೋಡೆಯೇನಿಲ್ಲ. ಗಡಿಯು ಗೋಡೆಯಂತೆಯೇ ಇದೆ. ಆದರೆ ಅದರ ತುಂಬ ಬಿರುಕು. ಉದ್ದಕ್ಕೂ ಕನ್ನಗಳನ್ನು ಕೊರೆದಂತೆ ಇದೆ. ಇವುಗಳ ಮೂಲಕ ಜನ ನುಸುಳಿ ಬರಲಾರರು. ಆದರೆ ಸರಕು ಸಾಮಗ್ರಿ ಬಿಡುಬೀಸಾಗಿ ಆಚೀಚೆ ರವಾನೆ ಆಗುತ್ತದೆ.

ಭಾರತ ಪಾಕಿಸ್ತಾನಗಳ ನಡುವೆ ಅಧಿಕೃತ ವ್ಯಾಪಾರ ಬಹಳ ಕಡಿಮೆ. ಆದರೆ ಕಳ್ಳ ಸಾಗಾಣಿಕೆ ಅವ್ಯಾಹತ. ಸಾರ್ಕ್‌ ಚೇಂಬರ್ಸ್‌ ಆಫ್‌ ಕಾಮರ್ಸ್‌ ಅಧ್ಯಕ್ಷ ಇನಾಂ ಅವರು ಈ ವ್ಯವಹಾರವನ್ನು ಕಳ್ಳ ಸಾಗಾಣಿಕೆ ಎಂದು ಕರೆಯುವುದಕ್ಕೆ ಒಪ್ಪುವುದಿಲ್ಲ. ಅದನ್ನು ಅವರು ಧಾರಾಳವಾಗಿ ‘ಅನೌಪಚಾರಿಕ ವ್ಯಾಪಾರ’ ಎಂದು ಕರೆಯುತ್ತಾರೆ.

ಇಡೀ ವಿದ್ಯಮಾನವನ್ನು ಅವರು ಎಷ್ಟೊಂದು ಸರಳೀಕರಿಸುತ್ತಾರೆ ಎಂದರೆ, ‘ಗಡಿಯಲ್ಲಿ ನಾವು ತೆರಿಗೆ ಸಲ್ಲಿಸುತ್ತೇವೆ. ಅದು ಸರ್ಕಾರದ ಬೊಕ್ಕಸವನ್ನು ತಲುಪುತ್ತದೆಯೋ ಇಲ್ಲವೋ ಎಂಬುದು ನಮಗೆ ಸೇರಿದ ವಿಷಯವಲ್ಲ!’ ಎನ್ನುತ್ತಾರೆ.

ಗಡಿಯಲ್ಲಿ ನುಸುಳಿಕೊಂಡು ಪಾಕಿಸ್ತಾನಕ್ಕೆ ಹೋಗುವ ಸರಕಿನಲ್ಲಿ ಅಡಿಕೆ, ಕೊಬ್ಬರಿ ಮತ್ತು ಸ್ವಲ್ಪ ಮಟ್ಟಿಗೆ ರೇಷ್ಮೆ ಕೂಡಾ ಸೇರಿರುತ್ತದೆ. ಭಾರತೀಯರಂತೆ ಪಾಕಿಸ್ತಾನಿಗಳು ಸಹಾ ಬಳಸುವ ಅಗರಬತ್ತಿಯು ಅಲ್ಲಿಗೆ ಹೋಗುವುದಿಲ್ಲ. ಪಾಕಿಸ್ತಾನದಲ್ಲಿ ಭಾರತಕ್ಕಿಂತ ಅಗ್ಗದಲ್ಲಿ ಅಗರಬತ್ತಿ ತಯಾರಿಸಿಕೊಳ್ಳುತ್ತಾರೆ. ‘ನಾವೇಕೆ ನಿಮ್ಮ ಅಗರಬತ್ತಿ ಬಯಸಬೇಕು? ನಾವೆ ರಫ್ತು ಮಾಡುತ್ತಿದ್ದೇವೆ’ ಎನ್ನುತ್ತಾರೆ ಕರಾಚಿಯ ಉದ್ಯಮಿ ಅಸ್ಲಂ ಖಾಜಿ. ಪಾಕ್‌ ಕಡೆಯಿಂದ ಬೇರೆ ಬೇರೆ ಋತುಮಾನಗಳಲ್ಲಿ ಬೇರೆ ಬೇರೆ ಸರಕು ಬರುವುದಾದರೂ ಅಕ್ರೋಟ್‌, ಪಿಸ್ಟಾ, ಬಾದಾಮಿ ಮುಂತಾದ ಡ್ರೈಫ್ರೂಟ್ಸ್‌ ಬರುವುದು ಹೆಚ್ಚು. ಪಾಕ್‌ನಿಂದ ಬರುವ ಸರಕಿನಲ್ಲಿ ‘ಅಪ್ಘಾನಿಸ್ತಾನ್‌ ಮೂಲದ ಸರಕೂ ಸೇರಿರುವುದುಂಟು. ಗಾಂಜಾ ಹಶೀಷ್‌ ಮುಂತಾದವೂ ಇರಲಿಕ್ಕೆ ಸಾಕೆಂಬ ಗುಮಾನಿ ಇದೆ.’

ಸರಕು ಸಾಗಿಸಲು ಛಿದ್ರಗೊಂಡ ೬೨೫ ಕಿ. ಮೀ. ಉದ್ದದ ಗಡಿ ಸಾಲು ಮಾತ್ರವೇ ಸಾಕಾಗುವುದಿಲ್ಲ. ಇನ್ನೊಂದು ಅದ್ಭುತ ಮಾರ್ಗವೆಂದರೆ ಸಂಜೋತಾ ಎಕ್ಸಪ್ರೆಸ್‌ ರೈಲು. ಅದನ್ನು ಈಗ ನಿಲ್ಲಿಸಿರುವುದರಿಂದ ಭಾರೀ ಅನಾನುಕೂಲವಾಗಿದೆ ಎಂದು ಪಾಕಿಸ್ತಾನಿಗಳು ದೂರುತ್ತಾರೆ. ನಿಂತ ರೈಲು ಮತ್ತೆ ಯಾವಾಗ ಆರಂಭವಾಗುತ್ತದೆ ಎಂದು ಕೇಳುತ್ತಾರೆ. ಪಾಕಿಸ್ತಾನಕ್ಕೆ ಭೇಟಿ ಕೊಡುವ ಭಾರತೀಯರ ಬಳಿ ಇದಕ್ಕೆ ಉತ್ತರ ಇರುವುದಿಲ್ಲ. ಯಾವುದೇ ರೈಲಿನಲ್ಲಿ ಜನರಷ್ಟೇ ಸರಕು ಸಹಾ ಸಾಗಣೆಯಾಗುತ್ತದೆ. ಇನ್ನು ಸಂಜೋತಾ ಎಕ್ಸಪ್ರೆಸ್‌ ಅನ್ನು ಕೇಳುವ ಹಾಗೆಯೇ ಇಲ್ಲ.

‘ಅನೌಪಚಾರಿಕ ವ್ಯಾಪಾರದ ವಿಷಯ ಹಾಗಿರಲಿ; ಭಾರತದ ಹಲವು ಬಗೆಯ ಸರಕು ಅನ್ಯರಾಷ್ಟ್ರಗಳ ಮೂಲಕ ಅಧಿಕೃತ ಆಮದಿನ ರೂಪದಲ್ಲಿ ಪಾಕಿಸ್ತಾನವನನು ಸೇರುವುದೂ ಉಂಟು ವಾಸ್ತವವಾಗಿ ದುಬೈ ಒಂದು ಮಧ್ಯವರ್ತಿ ವ್ಯಾಪಾರ ಕೇಂದ್ರ. ಭಾರತದ ಯಾವುದೇ ಸರಕನ್ನಾದರೂ ದುಬೈನಿಂದ, ಅದರ ಮೂಲಕ, ಪಾಕಿಸ್ತಾನವು ತರಿಸಿಕೊಳ್ಳಬಹುದು’.

ದುಬೈ ಸೇರುವ ಸರಕು, ದುಬೈ ಮಾಡಿಕೊಂಡ ಆಮದಾಗಿ ಲೆಕ್ಕಕ್ಕೆ ಬರುವುದೇ ಹೊರತು ಪಾಕಿಸ್ತಾನಕ್ಕೆ ಹೋದ ಹಾಗೆ ಗಣನೆಗೆ ಬರುವುದೇ ಇಲ್ಲ.

ನಾನಾ ಬಗೆಯ ಸಿದ್ಧ ವಸ್ತುಗಳು, ಯಂತ್ರೋಪಕರಣ ಸೇರಿದಂತೆ ಹಲವು ಬಗೆಯ ಸರಕು, ಅಧಿಕೃತವಾಗಿ ಪಾಕಿಸ್ತಾನವನ್ನು ಸೇರುತ್ತವೆ. ಕಳೆದ ವರ್ಷ ೨೯೩೦ ಲಕ್ಷ ಡಾಲರ್‌ನಷ್ಟು ರಫ್ತು ನಡೆಯಿತು. ಅದೇ ವೇಳೆ ಆಗಿರುವ ಕಳ್ಳ ಸಾಗಣೆ ಅಥವಾ ಅನೌಪಚಾರಿಕ ರಫ್ತು ಒಂದು ಶತಕೋಟಿ ಡಾಲರ್‌ನಷ್ಟು ಎಂಬುದಾಗಿ ಅಂದಾಜಾಗಿದೆ. ಏಕೆಂದರೆ ಗಡಿಯನ್ನು ಹಾದು ಹೋಗುವ ಸರಕಿನಲ್ಲಿ ಬೆಳ್ಳಿ, ಬಂಗಾರ, ಮದ್ಯ ಮಾತ್ರವಲ್ಲದೆ ಕಸಾಯಿಖಾನೆ ಸೇರಬೇಕಾದ ಜಾನುವಾರು ಸಹಾ ಸೇರಿರುತ್ತದೆ. ಮಾಂಸಕ್ಕಾಗಿ ರವಾನೆ ಆಗುವ ಜಾನುವಾರು ಭಾರತದ ಭೂಭಾಗದಿಂದ ಅಲ್ಲದೆ ಇನ್ನು ಎಲ್ಲಿಂದ ತಾನೇ ಸುಲಭವಾಗಿ ರವಾನೆ ಆಗಲು ಶಕ್ಯ?

ಗಡಿಯ ಆಚೀಚೆ ಎರಡೂ ರಾಷ್ಟ್ರಗಳ ಜನ ಬಳಸುವ ಹಲವು ಬಗೆಯ ಸರಕು, ಚಲನಚಿತ್ರ ಮತ್ತು ಸಂಗೀತ ಕ್ಯಾಸೆಟ್‌ ಮತ್ತು ಸಿಡಿಗಳೂ ಸೇರಿದಂತೆ, ಎಲ್ಲವೂ ಲಭ್ಯ. ಸರಕಿನ ಮಟ್ಟಿಗೆ ಉಭಯ ರಾಷ್ಟ್ರಗಳ ಗಡಿಯು ಒಂದು ಗೋಡೆ ಅಲ್ಲವೇ ಅಲ್ಲ.

ಕರಾಚಿಯಲ್ಲಿ ವೃದ್ಧರೊಬ್ಬರು ಈ ಸಂಬಂಧ ಸ್ವಾರಸ್ಯಕರ ಘಟನೆಯೊಂದನ್ನು ಹೇಳಿದರು. ಅವರು ಬಂಧುಗಳನ್ನು ಕಾಣಲು ಗಡಿದಾಟಿ ಭಾರತದ ಕಡೆಗೆ ಬಂದು ಆಗಿತ್ತು. ಆದರೆ ತಮ್ಮ ನೆಂಟನಿಗಾಗಿ ಬೆಲೆ ಬಾಳುವಂಥದ್ದು ಏನನ್ನೂ ಪಾಕಿಸ್ತಾನದಿಂದ ತಂದಿರಲಿಲ್ಲ. ಒಂದು ರೇಷ್ಮೆ ಜವಳಿ ಅಂಗಡಿಗೆ ಹೋಗಿ ಈ ಬಗೆಗೆ ಪೇಚಾಡಿಕೊಂಡರು. ಆ ಅಂಗಡಿಯವರು ಚಿಂತಿಸಬಾರದೆಂದು ಹೇಳಿ, ಪಾಕಿಸ್ತಾನ ಮೂಲಕ ಜರತಾರಿ ಕುಸುರಿ ಕೆಲಸ ಜವಳಿ ತೋರಿಸಿದರು. ಇವರಿಗೆ ಅತ್ಯಾನಂದವಾಗಿ ಖರೀದಿಸಿದರು. ಭಾರತದ ಬಂಧುಗಳಿಗಾಗಿ ಭಾರತದಲ್ಲೇ ಪಾಕಿಸ್ತಾನದಿಂದ ತರಬಹುದಾಗಿದ್ದ ಜವಳಿ ಸಿಕ್ಕಿತ್ತು?

ಆ ವೃದ್ಧ ಖರೀದಿದಾರ ತಾನು ಪಾಕಿಸ್ತಾನಕ್ಕೆ ಒಯ್ಯಬೇಕೆನಿಸಿದ ಭಾರತದ ಬನಾರಸ್‌ ರೇಷ್ಮೆ ಜವಳಿಯನ್ನು ಅಲ್ಲಿಂದಲೇ ಖರೀದಿಸಿದರು! ಗಡಿ ಠಾಣ್ಯದ ಬಳಿಯ ವ್ಯಾಪಾರ ಕೇಂದ್ರದ ಮಾತಿರಲಿ; ಲಖನೌನಲ್ಲಾಗಲಿ, ದೆಹಲಿಯಲ್ಲಾಗಲಿ; ಅಷ್ಟೇಕೆ ಬೆಂಗಳೂರಿನಲ್ಲೇ ಆಗಲಿ; ಪಾಕಿ ಮೂಲದ ರೇಷ್ಮೆ ಜವಳಿ ಸಿಗಲಿಕ್ಕೆ ಸಾಕು!

ಪಾಕಿಸ್ತಾನದಲ್ಲಿ ಭಾರತ ಮೂಲದ ಯಾವುದೇ ಸರಕಿನ ಬಗೆಗೆ ಇರುವ ಮೋಹವನ್ನು ನೋಡಿದರೆ ಉಭಯ ರಾಷ್ಟ್ರಗಳ ನಡುವೆ ಗಡಿಯೊಂದು ಇರುವುದಕ್ಕೆ ಅರ್ಥವೇ ಇಲ್ಲ ಎನಿಸುತ್ತದೆ. ಬಹುಶಃ ದ್ವೇಷ ಭಾವನೆಯನ್ನು ಶಮನ ಮಾಡಬಲ್ಲ ಒಂದೇ ಒಂದು ಅಂಶವೆಂದರೆ ವ್ಯಾಪಾರ ಎಂದೇ ಹೇಳಬಹುದು.

೧೯೪೭ರ ನಂತರದ ಗಲಭೆ, ಹಿಂಸೆ ಮತ್ತು ನರಮೇಧದ ಹಿನ್ನೆಲೆಯಲ್ಲಿ ಕೂಡಾ ಸ್ವತಂತ್ರ ಭಾರತದ ಪ್ರಜ್ಞಾವಂತ ರಾಜಕೀಯ ನಾಯಕರು ವ್ಯಾಪಾರ ಸಂಬಂಧ ಬೆಳೆಯಬೇಕೆಂದೇ ಹೇಳುತ್ತಿದ್ದರು. ಪ್ರಥಮ ಭಾರತೀಯ ಗವರ್ನರ್‌ ಜನರಲ್‌ ಅವರು ತಾಕೀತು ಮಾಡಿದ್ದು ಇದನ್ನೇ. ಅತ್ಯಂತ ವಿಸ್ತೃತವಾದ ವ್ಯಾಪಾರ ಸಂಬಂಧಗಳನ್ನು ಬೆಳೆಸಿದರೆ ವೈಷಮ್ಯ ತಾನೇ ತಾನಾಗಿ ಕಡಿಮೆಯಾಗುತ್ತದೆ ಎಂದೇ ಅವರು ಹೇಳಿದರು.

ಸದ್ಯ ಭಾರತ ಪಾಕ್‌ ಸಂಬಂಧ ತೀವ್ರವಾಗಿ ಹಳಸಿಕೊಂಡಿದೆ. ಆದರೂ ಪಾಕಿಸ್ತಾನದ ಒಳಗೆ ಸಹಾ ಯಾವ ಸಚಿವನೂ ಭಾರತದ ಜೊತೆಗಿನ ವ್ಯಾಪಾರ ಸಂಬಂಧ ಕಡಿದು ಹಾಕಬೇಕೆಂದು ಹೇಳುವುದಿಲ್ಲ. ಭಾರತದ ಸರಕಿನ ವಿರುದ್ಧ ಯಾವುದೇ ಚಳವಳಿ ಏಳುವುದಿಲ್ಲ ಏಕೆಂದರೆ ನಾನಾ ರೂಪದಲ್ಲಿ ಭಾರತದ ಸರಕೇ ಪೇಟೆಗಳನ್ನು ತುಂಬಿಕೊಳ್ಳಬೇಕು.

ಪಾಕಿಸ್ತಾನದಲ್ಲಿ ಭಾರತದಲ್ಲಿರುವಂತೆ ಬಳಕೆ ವಸ್ತುಗಳನ್ನು ತಯಾರಿಸುವ ಬಹುರಾಷ್ಟ್ರೀಯ ಕಂಪೆನಿಗಳ ದಾಂಧಲೆ ಇರುವುದಿಲ್ಲ. ಪಾಕಿಸ್ತಾನವು ಇವುಗಳ ಪಾಲಿಗೆ ಒಳ್ಳೆಯ ತಯಾರಿಕಾ ನೆಲೆ ಅಲ್ಲವೇ ಅಲ್ಲ. ಬೇರೆ ಮೂಲಗಳಿಂದಲೇ ತಯಾರಿಕಾ ವಸ್ತುಗಳು ಬರಬೇಕು. ಬಹಳ ಒಳ್ಳೆಯ ನೆಲೆ ಎಂದರೆ ಭಾರತ. ಪಂಚತಾರಾ ಹೋಟೇಲಿನಲ್ಲಿ ಗ್ರಾಹಕನಿಗೆ ಒದಗಿಸುವ ಟೂತ್‌ಪೇಸ್ಟಿನ ಮೇಲೆ ಬ್ರ್ಯಾಂಡ್‌ ಮುದ್ರೆ ಇರುವುದೇ ಇಲ್ಲ. ಹಲವಾರು ಉತ್ಪನ್ನಗಳ ಗತಿ ಇದು. ಇವೆಲ್ಲವೂ ಭಾರತದ ಮತ್ತಿತರ ಕಡೆ ಪಾಕಿಸ್ತಾನಕ್ಕೆಂದೇ ತಯಾರಿಕೆಗೊಂಡು ಕದ್ದು ಮುಚ್ಚಿ ರವಾನೆ ಆಗುತ್ತದೆ.

ಬ್ರ್ಯಾಂಡ್‌ ಮುದ್ರೆ ಇರುವ ಬಳಕೆದಾರ ವಸ್ತುಗಳು ಸಹಾ ಲಭ್ಯವಿರುತ್ತದೆ. ಈ ವಿದೇಶಿ ಸರಕು ತುಂಬಾ ದುಬಾರಿ!

ಒಂದು ಅಂದಾಜಿನ ಪ್ರಕಾರ ಯುದ್ಧವೇನಾದರೂ ನಡೆದು ವಾಣಿಜ್ಯ ಪೂರ್ತಿ ನಿಂತುಹೋದರೆ ಭಾರತವು ವರ್ಷದಲ್ಲಿ ೨೫೦೦ ಲಕ್ಷ ಡಾಲರ್‌ ಮೌಲ್ಯದ ಅಧಿಕೃತ ರಫ್ತನ್ನು ಕಳೆದುಕೊಳ್ಳುತ್ತದೆ. ಪಾಕಿಸ್ತಾನ ೫೦೦ ಲಕ್ಷ ಡಾಲರ್‌ನಷ್ಟು ರಫ್ತುನ್ನು ಕೈಬಿಡಬೇಕಾಗುತ್ತದೆ.

ಕಳ್ಳ ಸಾಗಾಣಿಕೆ ಮತ್ತು ಇತರ ರಾಷ್ಟ್ರಗಳ ಮೂಲಕ ಎರಡೂ ದಿಕ್ಕಿನಲ್ಲಿ ಹಸ್ತಾಂತರವಾಗುವ ಸರಕಿನ ಮೌಲ್ಯ ಒಂದು ಶತಕೋಟಿ ಡಾಲರ್‌ನಷ್ಟು ಅಲ್ಲ; ಅದು ಒಂದೂವರೆ ಶತಕೋಟಿ ಡಾಲರ್‌ ಎಂದು ಒಂದು ಅಂದಾಜು.

ಸಾರ್ಕ್‌ ರಾಷ್ಟ್ರಗಳ ನಡುವಣ ಯಾವುದೇ ಸಭೆಯಲ್ಲಿ ಮುಖ್ಯವಾಗಿ ರಾರಾಜಿಸುವುದು ಭಾರತ-ಪಾಕ್‌ ಸಂಬಂಧ; ಅಥವಾ ಭಾರತ-ಪಾಕ್‌ ವೈಷಮ್ಯ. ಎಲ್ಲ ಸಾರ್ಕ್‌ ರಾಷ್ಟ್ರಗಳೂ ಇದರ ಬಗೆಗೆ ತಲೆಕೆಡಿಸಿಕೊಳ್ಳುತ್ತವೆ.

ಐರೋಪ್ಯ ಸಮುದಾಯವು ಒಂದೇ ವ್ಯಾಪಾರ ಒಕ್ಕೂಟ ಆಗಿರುವುದಲ್ಲದೆ ಸರ್ವಸಮ್ಮತ ಒಂದೇ ಬಗೆಯ ಹಣವನ್ನೂ ರೂಪಿಸಿಕೊಂಡಿದೆ. ಸಾರ್ಕ್ ರಾಷ್ಟ್ರಗಳ ನಡುವೆಯೂ ಇದು ಸಾಧ್ಯ ಆಗಬೇಕು ಎನ್ನುವ ಪ್ರಸ್ತಾವವಿದೆ. ಅದು ಗುರಿಯೇನೂ ಅಲ್ಲ. ಬರಿದೆ ಬಾಯಿ ಮಾತಿನಲ್ಲಿ ವ್ಯಕ್ತವಾಗಿರುವ ವಿಚಾರ.

ಅದು ಕೈಗೂಡುವಂಥದೇನೂ ಅಲ್ಲ, ಸದ್ಯದ ಭವಿಷ್ಯತ್ತಿನಲ್ಲಿ. ೨೪.೦೪.೨೦೦೨.