‘ಕೋಶ ಓದಿ ನೋಡು ದೇಶ ಸುತ್ತಿ ನೋಡು’. ಇದು ಪ್ರಸಿದ್ಧ ಗಾದೆ. ಈಗಿನ ಕಿರಿಯರು ಕೋಶ, ಅಂದರೆ ವಿಶ್ವಕೋಶ ತೆಗೆದು ಓದುವುದಿಲ್ಲ. ಡಿಸ್ಕವರಿ, ನ್ಯಾಷನಲ್ ಜಾಗ್ರಫಿಕ್ ಚಾನೆಲ್‌ಗಳನ್ನು ನೋಡುತ್ತಾರೆ. ಇಂಟರ್‌ನೆಟ್‌ನಲ್ಲಿ ಇಣುಕಿ ಸಿಕ್ಕ ಸಿಕ್ಕ ಮಾಹಿತಿ ಹೆಕ್ಕಿ ನೋಡುತ್ತಾರೆ. ಆದರೆ ದೇಶ ಸುತ್ತುವ ಗೀಳು ಇದ್ದೇ ಇದೆ. ಬೆಳೆಯದೆ ಇರಬಹುದು. ಆದರೆ ಪ್ರವಾಸ ಪ್ರವೃತ್ತಿ ಕಡಿಮೆಯೇನೂ ಆಗಿಲ್ಲ.

ಪ್ರವಾಸಪ್ರಿಯರಿಗೆ ದೇಶದೊಳಗೆ ಸುತ್ತುವುದರಿಂದಷ್ಟೇ ತೃಪ್ತಿಯಾಗುತ್ತದೆ ಎನ್ನುವಂತಿಲ್ಲ. ವಿದೇಶಕ್ಕೂ ಹೋಗಿ ಬರಬೇಕೆಂಬಾಸೆ ಅದಮ್ಯವಾಗಿರುತ್ತದೆ. ಉದ್ಯೋಗ ಸಿಕ್ಕ ತಕ್ಷಣ ಆ ಬಗೆಗೆ ಕನಸು ಕಾಣುವುದು ಯುವಜನರ ಲಕ್ಷಣ. ಮಾಹಿತಿ ತಂತ್ರಜ್ಞಾನ ಕ್ಷೇತ್ರಕ್ಕೆ ಅವನು ಸೇರಿದವನಾಗಿದ್ದರೆ ದೇಶ ಬಿಟ್ಟು ಹಾರಿ ಹೋಗಲು, ಒಮ್ಮೆಯಾದರೂ ಅವಕಾಶ ಸಿಗುವುದೋ ಎಂದು ತವಕದಿಂದ ಇರುತ್ತಾನೆ.

ಒಮ್ಮೆ ವಿದೇಶಕ್ಕೆ ಹೋಗಿ ಬಂದ ಮೇಲೆ ಆತನ ಪ್ರವಾಸದ ಗುಂಗು ಹೆಚ್ಚುವುದೋ ಕಡಿಮೆಯಾಗುವುದೋ ಹೇಳಲು ಬರುವುದಿಲ್ಲ. ಆದರೆ ದೂರದ ಬೆಟ್ಟ ಕಾಣುವುದು ನುಣ್ಣಗೆ ಎಂಬ ಅಂಶ ಮನದಟ್ಟಾದ ಮೇಲೂ ಯಾರಿಗೇ ಆದರೂ ಮತ್ತೊಮ್ಮೆ ಹೋಗಿ ಬರಲು ಬೇರೊಂದು ದೇಶಕ್ಕೆ ಹೋಗಿಬರಲು ಜೀವ ತುಡಿಯುತ್ತದೆ.

ವಿಶ್ವಾದ್ಯಂತ ಪ್ರವಾಸೋದ್ಯಮ ಅಭೂತಪೂರ್ವಕ ಬೆಳೆಯುವುದಕ್ಕೆ ಮನುಷ್ಯನಲ್ಲಿ ಮೂಲಭೂತವಾಗಿ ನೆಲೆಗೊಂಡ ಈ ಪ್ರವಾಸದ ಗೀಳೇ ಕಾರಣ. ಬಡವರು ಸಹಾ ಸನಿಹದಲ್ಲಿ ನಡೆಯುವ ಜಾತ್ರೆಗೋ, ಮೇಳಕ್ಕೋ, ಕುಂಭ ಮೇಳಕ್ಕೋ ಹೋಗಲು ತವಕಿಸುತ್ತಾರೆ. ಬದುಕಿನ ಏಕತಾನತೆಯಿಂದ ಆಗೊಮ್ಮೆ ಈಗೊಮ್ಮೆಯಾದರೂ ಮುಕ್ತಿ ದೊರೆತಂತೆ ಆಗುವುದೇ ಇಂಥ ಸಂದರ್ಭಗಳಲ್ಲಿ.

ಪ್ರವಾಸೋದ್ಯಮಕ್ಕೆ ಪ್ರಾಶಸ್ತ್ಯ ಬಹಳ. ಜನರು ಖರ್ಚು ಮಾಡುತ್ತಾರೆ ಎನ್ನುವುದೇ ಇದಕ್ಕೆ ಕಾರಣ. ಒಂದು ಆಟಕ್ಕಾಗಿ, ಒಂದು ನೋಟಕ್ಕಾಗಿ ತವಕಿಸಿ ಬಡವರಾಗಲಿ, ಶ್ರೀಮಂತರಾಗಲಿ ಕಾಸು ಖರ್ಚು ಮಾಡುತ್ತಾರೆಂದಾದಲ್ಲಿ ಅದು ಒಂದು ಆರ್ಥಿಕ ಚಟುವಟಿಕೆಯಾಗಿ ಪರಿಣಮಿಸುತ್ತದೆ. ಸರಕು ಸರಂಜಾಮು ಖರ್ಚಾಗುತ್ತದೆ. ಉಳಿದುಕೊಳ್ಳಲು ಕೋಣೆ ಹುಡುಕುವುದರಿಂದ ಹೋಟೆಲು ಉದ್ಯಮ ಬೆಳೆಯುತ್ತದೆ. ರಸ್ತೆ, ರೈಲು, ವಿಮಾನ ಸಂಚಾರ ಅಭಿವೃದ್ಧಿಗೊಳ್ಳುತ್ತದೆ. ಇದೆಲ್ಲವೂ ಉದ್ಯೋಗಾವಕಾಶವನ್ನು ಕಲ್ಪಿಸುತ್ತದೆ. ಇದೇ ಪ್ರವಾಸೋದ್ಯಮ ಜೀವಾಳ.

ರಾಷ್ಟ್ರಮಟ್ಟದಲ್ಲಿ ಪ್ರವಾಸೋದ್ಯಮ ಎಂದರೆ ವಿದೇಶಿ ಪ್ರವಾಸಿಗರನ್ನು ಆಕರ್ಷಿಸುವ ಒಂದು ದಂಧೆ ಎಂದೇ ಅರ್ಥ. ವಿದೇಶಗಳ ಕರೆನ್ಸಿ ಮೌಲ್ಯ ಅಧಿಕವಾಗಿದ್ದು, ರೂಪಾಯಿ ದುರ್ಬಲ ಆಗಿರುವುದರಿಂದ ಪ್ರವಾಸೋದ್ಯಮ ಎಂದರೆ ಗಳಿಸಬಹುದಾದ ಒಂದು ಡಾಲರ್ ವಾಸ್ತವವಾಗಿ ರೂಪಾಯಿಗೆ ಪರಿವರ್ತನೆಗೊಂಡಾಗ ೪೫ ರಿಂದ ೫೦ ರೂಪಾಯಿ ಸುಮಾರಿನ ಗಳಿಕೆಯಾಗುತ್ತದೆ.

ನಮ್ಮದು ಪೌರ್ವಾತ್ಯ ಸಂಸ್ಕೃತಿಯಾದುದರಿಂದ ಪಾಶ್ಚಿಮಾತ್ಯನಿಗೆ ಏನೋ ವಿಶಿಷ್ಟ ಆಕರ್ಷಣೆ. ನಮ್ಮ ಧರ್ಮಾಚರಣೆಯ ಐಲುಪೈಲುತನ ಸಹಾ ವಿದೇಶಿ ಪ್ರವಾಸಿಗನ ಪಾಲಿಗೆ ಮೈನವಿರೇಳಿಸುವ ವಿದ್ಯಮಾನವಾಗಿರುತ್ತದೆ. ಇಂಗ್ಲಿಷಿನ ನುಡಿಗಟ್ಟುಗಳನ್ನು ಬಳಸುವಾಗ ‘ಸೆಲ್’ ಅಂದರೆ ‘ಮಾರಾಟ ಮಾಡು’ ಎನ್ನುವುದುಂಟು. ನೋಡತಕ್ಕ ಸ್ಥಳಗಳನ್ನೆಲ್ಲ ತೆರೆದಿಡು ಎಂಬುದೇ ಇದರ ಇಂಗಿತವಾದರೂ ನಾವು ನಮ್ಮ ಸಂಸ್ಕೃತಿಯನ್ನು ದೃಶ್ಯ ಮಾರಾಟಕ್ಕೆ ಇಟ್ಟಿದ್ದೇವೆ ಎಂಬ ಅರ್ಥ ಸ್ಫುರಿಸುತ್ತದೆ. ಹೀಗಾಗಿ ಪ್ರವಾಸೋದ್ಯಮ ಎಂದರೆ ವಿದೇಶಿಯರಿಗಾಗಿ ತೆರೆದಿಟ್ಟ ವಿದ್ಯಮಾನ ಎನಿಸಿಕೊಂಡುಬಿಟ್ಟಿದೆ.

ಕಳೆದ ೨೦೦೨ನೇ ವರ್ಷ ವಿಶ್ವಾದ್ಯಂತ ಪ್ರವಾಸೋದ್ಯಮ ಚಟುವಟಿಕೆ ತಲ್ಲಣಗೊಳ್ಳುವಷ್ಟು ಕಡಿಮೆಯಾಗಿತ್ತು. ವಿದೇಶಗಳವರು ತಮ್ಮದೇನಿದೆಯೋ ಆ ದೃಶ್ಯ ವೈಭವವನ್ನು ಚೆನ್ನಾಗಿ ಮಾರಿಕೊಳ್ಳುತ್ತಾರೆ. ಅವರು ಮಾಡುವ ಏರ್ಪಾಟುಗಳು, ಪ್ರವಾಸ ಸುಖರಗೊಳಿಸಲು ಮಾಡಿಕೊಡುವ ಸೌಲಭ್ಯಗಳು ಅದ್ಭುತ. ಅವರನ್ನು ನಾವು ಸರಿಗಟ್ಟಲಾರೆವು. ಆದರೆ ಕಳೆದ ಸಾಲಿನಲ್ಲಿ ಅವರೂ ಸೇರಿದಂತೆ ಎಲ್ಲರೂ ಕೆಟ್ಟ ದಿನಗಳನ್ನು ಕಂಡರು.

ಭಾರತದಲ್ಲಿ ಪಾಕಿಸ್ತಾನ ಜೊತೆ ಇಬ್ಬಂದಿತನ, ಗಡಿಯಲ್ಲಿ ಇಕ್ಕಟ್ಟು, ಭಯೋತ್ಪಾದನೆ ಭೀತಿ ಇವುಗಳಿಂದಾಗಿ ವಿದೇಶಿ ಪ್ರವಾಸಿಗರು ಬರುವುದು ಕಡಿಮೆ ಆಯಿತು. ಪ್ರವಾಸೋದ್ಯಮ ವೃದ್ಧಿ ದರವೂ ಶೇ. ೧೯-೨೦ರಷ್ಟು ಕಡಿಮೆಯಾಯಿತು. ಆದರೆ ಸೆಪ್ಟಂಬರ್ ಅಕ್ಟೋಬರ್ ತಿಂಗಳ ನಂತರ ಅವರು ಬರುವುದು ಸ್ವಲ್ಪ ಹೆಚ್ಚಿದೆ. ಕಡಿಮೆಯಾದ ವೃದ್ಧಿ ದರ ಶೇ. ೬.೫ಕ್ಕೆ ಬಂದಿತು. ಜನವರಿಯಿಂದ ಅಕ್ಟೋಬರ್‌ವರೆಗಿನ ಅವಧಿಯಲ್ಲಿ ಗಳಿಸಿದ ವಿದೇಶಿ ವಿನಿಮಯ ೨೧೭೬೦ ಲಕ್ಷ ಡಾಲರ್. ಹಿಂದಿನ ಸಾಲಿನಲ್ಲಿ ಈ ಗಳಿಕೆ ೨೪೯೧೦ ಲಕ್ಷ ಡಾಲರ್ ಆಗಿತ್ತು. ಬಂದ ಜನರ ಸಂಖ್ಯೆ ಸಹ ಸೆಪ್ಟಂಬರ್‌ನಲ್ಲಿ ೧,೫೧,೭೨೧ ಇದ್ದುದು ಅಕ್ಟೋಬರ್‌ನಲ್ಲಿ ೨,೧೨, ೧೯೧ಕ್ಕೆ ಏರಿತು.

ಗುಜರಾಜ್ ಹಗರಣವು ಚುನಾವಣೆ ನಂತರ ಮುಗಿದಿದ್ದೇ ಅಲ್ಲದೆ ಪಾಕ್ ಗಡಿ ಶಾಂತವಾಗಿದ್ದು ಇದಕ್ಕೆ ಕಾರಣ ಎನ್ನುತ್ತಾರೆ. ಪ್ರವಾಸೋದ್ಯಮ ಚಟುವಟಿಕೆ ನಿಭಾಯಿಸುವ ಕೇಂದ್ರ ಸರ್ಕಾರದ ಹಾಗೂ ರಾಜ್ಯ ಸರ್ಕಾರಗಳ ಇಲಾಖೆಗಳವರು ಇದೀಗ ಪ್ರಸನ್ನಚಿತ್ತರಾಗಿರುವುದು ಸಹಜ. ಆದರೆ ಪ್ರವಾಸೋದ್ಯಮದ ಭಾಗೀದಾರರಾದ ಖಾಸಗಿಯವರು ಕೈಬೆರಳು ಮುರಿಯುತ್ತಾರೆ. ಸರ್ಕಾರ ಮನಸ್ಸು ಮಾಡಿದ್ದರೆ ಇನ್ನೂ ಒಳ್ಳೆಯ ಫಲಿತಾಂಶ ಬರುತ್ತಿತ್ತು ಎಂಬುದೇ ಅವರ ಭಾವನೆ.

ಪಂಚತಾರಾ ಹೋಟೆಲುಗಳನ್ನು ಸರ್ಕಾರ ಈಗಲೂ ವೈಭೋಗ ಎಂದೇ ಭಾವಿಸಿ ಭಾರೀ ಪ್ರಮಾಣದ ತೆರೆಗಿ ವಿಧಿಸುತ್ತಿದೆ ಎಂಬುದೇ ಅವರ ಆಕ್ಷೇಪಣೆ. ವಿದೇಶಿ ಪ್ರವಾಸಿಗನಿಗೇ ಆದರೂ ಅದೇ ಹೋಟೆಲಿನ ಹೊರಗೆ ಕಾಣಿಸುವ ಜೀವನ ಮಟ್ಟಕ್ಕೂ ತನಗೆ ವಿಧಿಸುತ್ತಿರುವ ದುಬಾರಿ ಬೆಲೆಗಳಿಗೂ ತಾಳೆ ಆಗುವುದಿಲ್ಲ. ತನಗೆ ಅನ್ಯಾಯವಾಗುತ್ತಿದೆ ಎನಿಸದಿರದು. ವಾಸ್ತವವಾಗಿ ಅವರಿಗಾಗುವ ಈ ಬಗೆಯ ಮನವರಿಕೆಯು ಭಾರತದ ಪ್ರವಾಸೋದ್ಯಮಕ್ಕೆ ಒಂದು ರೀತಿಯಲ್ಲಿ ಧಕ್ಕೆಯೇ ಸರಿ. ಪಂಚತಾರಾ ಹೋಟೆಲಿಗೆ ಬರುವ ಎಷ್ಟೋ ಪ್ರವಾಸಿಗರು ಡಾಲರುಗಳನ್ನು ರೂಪಾಯಿ ಲೆಕ್ಕದಲ್ಲಿ ಎಣಿಸಿ ‘ಎಷ್ಟೊಂದು ದುಬಾರಿ’ ಎಂದು ಉದ್ಗರಿಸುತ್ತಾರೆ. ಪಂಚತಾರಾ ಹೋಟೆಲ್ ಪ್ರವಾಸೋದ್ಯಮವು ವಿದೇಶಿ ಶ್ರೀಮಂತರಿಗೆ ಮಾತ್ರ ಎಟುಕುತ್ತದೆ. ದುಬಾರಿ ಆಗದಂತೆ ಪ್ರವಾಸ ಮಾಡಲು ಭಾರತಕ್ಕೆ ಬರುವ ವಿದೇಶಿಯರು ತಾರಾ ದರ್ಜೆ ಹೋಟೆಲುಗಳನ್ನು ಬಿಟ್ಟೇ ಬಿಡುತ್ತಾರೆ.

ಹೋಟೆಲ್‌ಗಳ ದರಗಳಲ್ಲಾಗಲಿ, ಪ್ರವಾಸಿ ಕೇಂದ್ರಗಳ ಪ್ರವೇಶ ಶುಲ್ಕವನ್ನಾಗಲಿ ನಿಗದಿಪಡಿವಾಗ ವಿದೇಶಿಯರಿಗೊಂದು ದೇಶೀಯರಿಗೊಂದು ಎಂಬಂತೆ ತಾರತಮ್ಯ ಮಾಡುವುದನ್ನು ನೋಡಿದಾಗ ದೇಶೀಯರಿಗೇ ಹೊಟ್ಟೆಯುರಿಯುತ್ತದೆ. ಅವರು ಡಾಲರ್‌ಗಳನ್ನು ತಂದಿದ್ದಾರೆ. ನಮ್ಮ ರೂಪಾಯಿಗೆ ಅವರ ಒಂದು ಡಾಲರ್ ಸಮ ಎಂದೆಲ್ಲ ಯೋಚಿಸಿ ಅವರಿಂದ ಹಣ ಕೀಳುವ ಪ್ರವೃತ್ತಿ ಪ್ರವಾಸೋದ್ಯಮದಲ್ಲಿ ಬಲವಾಗಿದೆ. ಅವರಿಗೆಂದೇ ವಿಶೇಷವಾಗಿ ಕಲ್ಪಿಸಿದ ಸವಲತ್ತುಗಳಿಗಾಗಿ ಅಧಿಕ ಹಣ ನಿಗದಿಪಡಿಸಲಿ. ಆದರೆ ಅವರು ವಿದೇಶಿ ಪ್ರವಾಸಿಗರಾಗಿದ್ದಾರೆ ಎಂಬ ಒಂದೇ ಕಾರಣದಿಂದ ದುಬಾರಿ ದರ ವಿಧಿಸಿ ದಂಡ ಹಾಕುವುದು ತಪ್ಪು. ಇಷ್ಟಾಗಿ ವಿದೇಶಿ ಪ್ರವಾಸಿಗರು ತಾರಾ ದರ್ಜೆ ಸೌಲಭ್ಯಗಳನ್ನೇ ಇಷ್ಟಪಡುತ್ತಾರೆಯೇ? ಬಹುಶಃ ಇಲ್ಲ. ಶುಚಿತ್ವ, ಆರೋಗ್ಯಕ್ಕೆ ಗಮನ ಕೊಟ್ಟ ಹಾಗೂ ನೀರು ವಿದ್ಯುತ್ತು ಮುಂತಾದವನ್ನು ಧಾರಾಳವಾಗಿ ಒದಗಿಸಿದ ವ್ಯವಸ್ಥೆಯಷ್ಟೇ ಅವರಿಗೆ ಸಾಕು. ತಾರಾ ಹೋಟೆಲ್‌ಗಳಲ್ಲಿ ವಿದೇಶಗಳಲ್ಲಿ ಸಿಗುವಂಥ ಆಹಾರದ ಕೆಟ್ಟ ಆವೃತ್ತಿಯ ಐಟಂಗಳನ್ನು ಒದಗಿಸುತ್ತಾರೆ. ಅದರ ಬದಲು ಅವರ ರುಚಿಗೆ ಸಮೀಪ ಬರುವಂಥ ಸ್ಥಳೀಯ ಆಹಾರ ಪರಿಕರಗಳನ್ನು ಒದಗಿಸಿದರೆ ಅವರು ಇಷ್ಟಪಡುತ್ತಾರೆ. ಇಂಥ ಅಂಶದತ್ತ ನಮ್ಮ ಪ್ರವಾಸೋದ್ಯಮ ಪ್ರಭೃತಿಗಳು ಗಮನ ಕೊಡುವುದೇ ಇಲ್ಲ. ಅವರು ಮಾತ್ರವಲ್ಲ; ಪ್ರವಾಸಿ ತಾಣಗಳ ಚೂರು ಪಾರು ಆಕರ್ಷಕ ವಸ್ತುಗಳ ಅಂಗಡಿಗಳವರೂ ವಿದೇಶಿ ಪ್ರವಾಸಿಗರು ಬಂದರೆಂದಾಕ್ಷಣ ಶೋಷಣೆಗೆ ಶುರು ಹಚ್ಚುತ್ತಾರೆ.

ನಮ್ಮ ದೇಶದ ಪ್ರವಾಸೋದ್ಯಮ ನೀತಿಯ ಒಂದು ದೊಡ್ಡ ವಿಕೃತಿ ಎಂದರೆ ದೇಶಿ ಪ್ರವಾಸಿಗರನ್ನು ನಿಕೃಷ್ಟವಾಗಿ ಕಾಣುವುದು. ದೇಶಿ ಪ್ರವಾಸಿಗರೆಂದರೆ ಯಾತ್ರಾರ್ಥಿಗಳು ಮಾತ್ರ ತಾನೇ ಎಂದು ನೀತಿ ನಿರೂಪಕರು ಅವಹೇಳನ ಮಾಡುತ್ತಾರೆ. ಅವರಿಗೊಂದಿಷ್ಟು ಶುಚಿಪೂರ್ಣ ತಂಗುದಾಣ ವ್ಯವಸ್ಥೆ ಮಾಡಬೇಕು ಎಂದು ಯಾವ ಯೋಜನಾಕರ್ತನೂ ಯೋಚಿಸುವುದಿಲ್ಲ. ದಕ್ಷಿಣ ಭಾರತ ಪ್ರವಾಸಿ ಕೇಂದ್ರಗಳಲ್ಲಿ ಮಾತ್ರವೇ ಮಧ್ಯಾಹ್ನ ಊಟದ ಹೊತ್ತಿಗೆ ಸ್ವಲ್ಪ ವ್ಯವಸ್ಥಿತವಾದ ರೀತಿಯಲ್ಲಿ ಆಹಾರ ಪದಾರ್ಥಗಳು ಸಿಗುವುದು. ದಕ್ಷಿಣವನ್ನು ಬಿಟ್ಟರೆ ಮಿಕ್ಕ ಯಾವ ಪ್ರದೇಶದಲ್ಲೂ ಸ್ವಾದಿಷ್ಟವಾಗಿದ್ದರೂ ‘ತೆತ್ತ ಹಣಕ್ಕೆ ಪರವಾಗಿಲ್ಲ’ ಎನ್ನುವಂಥ ಊಟ ಸಿಗುವುದೇ ಇಲ್ಲ.

ದೇಶಿ ಪ್ರವಾಸಿಗರಿಂದ ಡಾಲರ್ ಗಳಿಕೆ ಇಲ್ಲದಿರಬಹುದು. ಆದರೆ ತನ್ನದೇ ಆದ ಆಯಾಮದಲ್ಲಿ ದೇಶಿ ಪ್ರವಾಸೋದ್ಯಮ ಸಹಾ ಒಳ್ಳೆಯ ವರಮಾನವನ್ನೇ ತಂದುಕೊಡಬಲ್ಲದು.

ಈಚೆಗೆ ಮಾತ್ರವೇ ಉತ್ಸವಗಳ ಮೂಲಕ ವಿದೇಶಿ ಪ್ರವಾಸಿಗರನ್ನು ಸೆಳೆಯುವ ಯತ್ನಗಳಾಗಿವೆ. ಮೈಸೂರು ದಸರಾ, ಕೇರಳದ ದೋಣಿ ಓಟ, ದಕ್ಷಿಣ ಕನ್ನಡದ ಕಂಬಳ, ಕರಾವಳಿ ಉತ್ಸವ, ಹಂಪಿ ಉತ್ಸವ ಇವೆಲ್ಲ ವಿದೇಶಿಯರಿಗೆ ಮಾತ್ರ ಆಕರ್ಷಕವೆ? ದೇಶೀಯ ಪ್ರವಾಸಿಗರಿಗೆ ಆಕರ್ಷಣೆ ಆಗದೆ? ಸರ್ಕಾರಿ ಅಂಕೆಯ ಅಧಿಕಾರಿಗಳದೇ ದರ್ಬಾರು. ಅವರಲ್ಲಿ ವೃತ್ತಿಪರ ನೈಪುಣ್ಯ ಕಾಣಿಸುವುದು ಕಡಿಮೆ.

ಇಂಥ ಪ್ರತಿ ಉದತ್ಸವದಲ್ಲೂ ಸಾಮಾನ್ಯ ಜನರಿಗೆ ಬರುವ ಭಾವನೆ ಎಂದರೆ ದುಡ್ಡು ಹೊಡೆಯುವುದಕ್ಕೆ ಇದನ್ನೆಲ್ಲ ಮಾಡುತ್ತಾರೆ ಎಂಬುದೇ ಆಗಿರುತ್ತದೆ.

ಭಾರತದ ಶಿಲ್ಪ ಕೌಶಲದ ಮಟ್ಟಿಗೆ ಶಾಲೆ ಕಾಲೇಜು ಎನಿಸಿಕೊಂಡಿರುವ ಐಹಳೆ,. ಪಟ್ಟದಕಲ್ಲು ಮತ್ತು ಬದಾಮಿ ಗುಹೆಗಳ ನಡುವಣ ರಸ್ತೆಗಳನ್ನು ಕೆಟ್ಟದಾಗಿ ಇರಿಸಿಕೊಂಡ ಕೀರ್ತಿ ಪ್ರವಾಸೋದ್ಯಮ ಇಲಾಖೆಗೇ ಸಲ್ಲಬೇಕು.

ಯಾತ್ರಾ ಸ್ಥಳವೇ ಆಗಿದ್ದರೂ ತಿರುಪತಿಯನ್ನು ಪ್ರವಾಸಿ ಸ್ಥಳವಾಗಿ ಅಭಿವೃದ್ಧಿಪಡಿಸಿ ನಿಭಾಯಿಸಿಕೊಂಡ ಆಂಧ್ರವನ್ನು ಮೆಚ್ಚಬೇಕು. ವಾಸ್ತವವಾಗಿ ಪ್ರವಾಸಿಗರಿಂದ ವರಮಾನವಿದೆ ಎಂಬ ವಾಸನೆ ಹಿಡಿದು ಪ್ರವಾಸೋದ್ಯಮ ಸೌಲಭ್ಯ ಕಲ್ಪಿಸುವಲ್ಲಿ ಆಂಧ್ರ ಮತ್ತು ತಮಿಳುನಾಡಿನವರನ್ನು ಮೀರಿಸುವವರಿಲ್ಲ.

ಉತ್ತರ ಭಾರತದ ಯಾವ ಪ್ರವಾಸೀ ಕೇಂದ್ರಕ್ಕೆ ಹೋದರೂ ಪ್ರವಾಸಿಗರ ಗೋಳು ಹೇಳತೀರದು. ಆದರೂ ಭಾರತ ಪ್ರವೇಶಿಸುವ ಪ್ರವಾಸಿಗಳು ದಕ್ಷಿಣ ತನಕ ಇಳಿದುಬರುವುದು ಕಡಿಮೆ. ಇದಕ್ಕೆ ಸದ್ದು ಮಾಡಲಾಗದ ಈ ಭಾಗದ ಜನರದ್ದೇ ಹೊಣೆ.

೦೫.೦೨.೨೦೦೩