ಜೋಗ ಜಲಪಾತಕ್ಕೆ ಬರುವ ಪ್ರವಾಸಿಗರ, ಅದರಲ್ಲೂ ವಿದೇಶಿ ಪ್ರವಾಸಿಗರ, ಸಂಖ್ಯೆ ಅರ್ಧಕ್ಕರ್ಧ ಕಡಿಮೆ ಆಗಿದೆ. ಮುಂದಿನ ತಿಂಗಳುಗಳಲ್ಲೂ ಪರಿಸ್ಥಿತಿ ಸುಧಾರಿಸುವ ಸೂಚನೆಗಳಿಲ್ಲ. ಪ್ರವಾಸೋದ್ಯಮವನ್ನೇ ನಂಬಿಕೊಂಡಿರುವ ಕುಟುಂಬಗಳಿಗೆ ಇದೀಗ ಚಿಂತೆ ಮುಸುಕಿದೆ.

ಸೆಪ್ಟೆಂಬರ್ ೧೧ರಂದು ಅಮೆರಿಕದಲ್ಲಿ ಗಗನಚುಂಬಿ ಕಟ್ಟಡಗಳು ಭಯೋತ್ಪಾದನೆ ಅಗ್ನಿಗೆ ಆಹುತಿಯಾದ ಮೇಲೆ ವಿದೇಶಿ ಪ್ರವಾಸಿಗರು ಪ್ರವಾಸ ಹೊರಡುವ ಕಾರ್ಯಕ್ರಮಗಳನ್ನು ರದ್ದು ಮಾಡಿದ್ದಾರೆ. ವಿದೇಶಿ ಪ್ರವಾಸಿಗರು ಸಾಮಾನ್ಯವಾಗಿ ಆಗ್ರಾ, ಜೈಪುರ, ಖಜುರಾಹೊ ಮುಂತಾದ ಪ್ರಖ್ಯಾತ ತಾಣಗಳಿಗೆ ಭೇಟಿ ಕೊಡುತ್ತಾರೆ. ಅವರು ಬರುವುದು ತಪ್ಪಿದರೆ ಬೇರೆ ಸಣ್ಣ ತಾಣಗಳಿಗೆ ಧಕ್ಕೆ ಆಗಬಾರದು. ಆದರೆ ಜೋಗದ ಉದಾಹರಣೆಯನ್ನೇ ತೆಗೆದುಕೊಂಡರೂ ಹಾಗೆ ಆಗಿದೆ.

ಈ ನಿರ್ದಿಷ್ಟ ನಿದರ್ಶನದ ಬಗೆಗೆ ಹೇಳುವುದಾದರೆ, ಅಮೆರಿಕದಲ್ಲಿ ನಡೆದ ಘಟನೆ ಅನುಸರಿಸಿ ರಾಜ್ಯ ಸರ್ಕಾರ ಕೆಲವೊಂದು ಮುನ್ನೆಚ್ಚರಿಕೆ ಕ್ರಮಗಳನ್ನು ತೆಗದುಕೊಂಡಿದ್ದು ಪ್ರವಾಸೋದ್ಯಮಕ್ಕೆ ಮುಳುವಾಗಿದೆ. ಲಿಂಗನಮಕ್ಕಿ ಅಣೆಕಟ್ಟೆ, ಶರಾವತಿ ವಿದ್ಯುತ್ ಕೇಂದ್ರ ಮುಂತಾದ ಸೂಕ್ಷ್ಮ ಕೇಂದ್ರಗಳಿಗೆ ಪರವಾನಗಿ ಇಲ್ಲದೆ ಪ್ರವಾಸಿಗರನ್ನು ಬಿಡಬಾರದು ಎಂದು ರಾಜ್ಯ ಸರ್ಕಾರ ತಾಕೀತು ಮಾಡಿದೆ. ವಿದ್ಯಾರ್ಥಿಗಳನ್ನು ವೀಕ್ಷಣೆಗೆ ಬಿಡಬೇಕಾದರೂ ಪ್ರತಿಯೊಬ್ಬರ ಹೆಸರು ನಮೂದಿಸಿದ ಖಚಿತ ಪಟ್ಟಿ ಸಲ್ಲಿಸಿ ಪರವಾನಗಿ ಪಡೆಯಬೇಕು. ವರಿಷ್ಠರು, ಪ್ರತಿಷ್ಠಿತರು ಮತ್ತು ತಜ್ಞರು ಭೇಟಿಗೆ ಬರಬೇಕಾದರೂ ಬೆಂಗಳೂರಿನಿಂದ ಪರವಾನಗಿ ಪತ್ರ ಪಡೆಯಬೇಕಾದ್ದು ಕಡ್ಡಾಯವಾಗಿದೆ.

ದೆಹಲಿಯಲ್ಲಿ ಪ್ರವಾಸೋದ್ಯಮ ನಿರತರು ಹೇಳುವ ಪ್ರಕಾರ, ಅಮೆರಿಕದ ಘಟನೆಯು ಮುಂಬರುವ ಸಾಲಿನಲ್ಲಿ ಭಾರತಕ್ಕೆ ಬರುವ ಆದಾಯದಲ್ಲಿ ೧೦೦೦ ಕೋಟಿ ರೂಪಾಯಿ ಖೋತಾ ಮಾಡಲಿದೆ. ಪ್ರವಾಸಿಗರು ಯಾರೇ ಆಗಿರಲಿ; ತಾವು ಭೇಟಿ ಕೊಟ್ಟ ತಾಳದಲ್ಲಿ ತಮ್ಮ ಊಟ, ವಸತಿ, ಖರೀದಿ, ಪ್ರಯಾಣ ಮತ್ತು ನೋಟ ಇವುಗಳಿಗಾಗಿ ತಮ್ಮ ಜೇಬಿನ ಹಣವನ್ನು ಖರ್ಚು ಮಾಡುತ್ತಾರೆ. ಈ ಹಣವೇ ಸ್ಥಳೀಯ ಪ್ರವಾಸೋದ್ಯಮಕ್ಕೆ ಜೀವನಾಧಾರ.

ಭಾರತಕ್ಕೆ ಪ್ರವಾಸಿಗಳು ಬರುವುದು ಸಾಮಾನ್ಯವಾಗಿ ಅಕ್ಟೋಬರ್‌ನಿಂದ ಮಾರ್ಚ್‌ವರೆಗೆ ಮಾತ್ರ. ಆದರೆ ಈಗ ಉತ್ತರ  ಅಮೆರಿಕದ ಪ್ರವಾಸಿಗರು ತಮ್ಮ ಕಾರ್ಯಕ್ರಮಗಳ ಶೇ. ೮೦ರಷ್ಟನ್ನು ಹಾಗೂ ಯುರೋಪಿನವರು ಶೇ ೪೦ ರಷ್ಟನ್ನು ರದ್ದು ಮಾಡಿದ್ದಾರೆ. ಇನ್ನು ಹೋಟೆಲ್ ಕೋಣೆಗಳು ಖಾಲಿ ಬೀಳುತ್ತವೆ. ವಿಮಾನ ಮತ್ತು ಕಾರು ಬಸ್ಸು ಪ್ರಯಾಣಕ್ಕೆ ಅವಕಾಶ ಕಡಿಮೆಯಾಗುತ್ತದೆ.

ಅಮೆರಿಕದಲ್ಲಿ ನಡೆದ ಧ್ವಂಸ ಕೃತ್ಯವು ದೇಶೀಯ ಪ್ರವಾಸೋದ್ಯಮ ಮೇಲೆ ನೇರ ಪರಿಣಾಮ ಬೀರಿದ ಇತರ ಪ್ರಸಂಗಗಳೂ ಉಂಟು. ವಿಮಾನ ಯಾನ ಕುರಿತಂತೆ ವಿಮೆ ಇಳಿಸುವ ಕಂಪೆನಿಗಳು ಪ್ರೀಮಿಯಂ ಹಣ ಜಾಸ್ತಿ ಮಾಡಿದ್ದಾರೆ. ಅದನ್ನು ತೆರುವ ವಿಮಾನ ಯಾನ ಏರ್ಪಾಡು ಮಾಡುವ ಇಂಡಿಯನ್ ಏರ್‌ಲೈನ್ಸ್‌ನಂಥ ಕಂಪೆನಿಗಳು ಆ ಹೊರೆಯನ್ನು ತಮ್ಮ ಗ್ರಾಹಕರಾದ ಪ್ರಯಾಣಿಕರ ಮೇಲೆ ವರ್ಗಾಯಿಸಿದ್ದಾರೆ. ಈ ಉದ್ದೇಶದ ಸರ್‌ಚಾರ್ಜ್ ಕಾರಣ ವಿಮಾನ ಪ್ರಯಾಣದ ಪ್ರತಿ ಟಿಕೆಟ್ ಮೊತ್ತ ಜಾಸ್ತಿಯಾಗಿದೆ.

ವಿದೇಶಿ ಪ್ರವಾಸಿಗರು ಬುಕ್ಕಿಂಗ್ ರದ್ದು ಮಾಡಿರುವುದೇ ಅಲ್ಲದೆ ಹೆಸ ಬುಕ್ಕಿಂಗ್ ಬರುವ ಸಾಧ್ಯತೆಯೂ ಇಲ್ಲವಾದ ಕಾರಣ ದಿಢೀರನೆ ದೇಶೀಯರ ಪ್ರವಾಸೋದ್ಯಮವನ್ನು ಬಲಪಡಿಸಬಾರದೇಕೆ ಎಂಬ ವಿಚಾರ ಪ್ರಮುಖವಾಗುತ್ತಿದೆ. ಸಾರಿಗೆ ಮತ್ತು ಪ್ರವಾಸೋದ್ಯಮ ಕುರಿತ ಸಂಸದೀಯ ಸ್ಥಾಯಿ ಸಮಿತಿಯಲ್ಲಿರುವ ಸಂಸತ್ ಸದಸ್ಯರ ತಂಡವೊಂದು ಮೈಸೂರಿಗೆ ಬಂದಿತ್ತು. ದಕ್ಷಿಣ ಪ್ರವಾಸಿ ತಾಣಗಲನ್ನು ಅಭಿವೃದ್ಧಿಪಡಿಸುವ ಸಾಧ್ಯತೆಗಳನ್ನು ಪರಿಶೀಲಿಸುವ ಉದ್ದೇಶ ವ್ಯಕ್ತವಾಯಿತು. ಇಂಥ ಇನ್ನೊಂದು ತಂಡ ಕೊಚ್ಚಿಗೆ ಭೇಟಿ ಕೊಡುವುದಿತ್ತು.

ಈಗಾಗಲೇ ವಿಶ್ವಪರಂಪರೆ ತಾಣವೆಂದು ಯುನೆಸ್ಕೋದಿಂದ ಮಾನ್ಯತೆ ಪಡೆದಿರುವ ಹಂಪಿ ಮಾತ್ರವಲ್ಲದೆ ಮೈಸೂರು, ತಲಕಾಡುಗಳು ಪ್ರವಾಸಿ ತಾಣಗಳಾಗಿ ಜನಾಕರ್ಷಣೆ ಮಾಡಬಲ್ಲವು. ಕೇರಳದಂತೆ ತಮಿಳುನಾಡು ಸಹಾ ಬೃಹತ್ ದೇವಾಲಯಗಳ ಕಾರಣ ಪ್ರವಾಸಿಗರನ್ನು ಕೈಬೀಸಿ ಕರೆಯಬಲ್ಲವು. ಈ ತಾಣಗಳು ಈಗಾಗಲೇ ದೇಶೀಯ ಪ್ರವಾಸಿಗರ ಮನ್ನಣೆಗೆ ಪಾತ್ರವಾಗಿವೆ. ವಿದೇಶಿಯರು ಇಲ್ಲದೆಯೇ ಇವು ಅಭಿವೃದ್ಧಿಯನ್ನು ಕಾಣಬಲ್ಲವು. ಆದರೆ ದೇಶೀಯ ಪ್ರವಾಸೋದ್ಯಮವಾದರೋ ಅವಕೃಪೆಯನ್ನು ಎದುರಿಸಿದೆ.

ದೇಶೀಯ ಪ್ರವಾಸೋದ್ಯಮ ಎಂದರೆ ಪುಣ್ಯ ಕ್ಷೇತ್ರ ಸಂದರ್ಶನ ಮಾತ್ರವೇ ಎಂಬುದಾಗಿ ಗೇಲಿ ಮಾಡುತ್ತಾರೆ. ಪುಣ್ಯ ಕ್ಷೇತ್ರಗಳಲ್ಲಿ ಬೇರೆ ಬೇರೆ ವೆಚ್ಚ ಸಾಮರ್ಥ್ಯದ ಜನ ಬರುತ್ತಾರೆ. ತಂತಮ್ಮ ಶಕ್ತಿಗೆ ಅನುಗುಣವಾಗಿ ಹಣ ಖರ್ಚು ಮಾಡುತ್ತಾರೆ. ಈ ಅನುಕೂಲ ಪುಣ್ಯ ಕ್ಷೇತ್ರವಲ್ಲದ ಪ್ರವಾಸಿ ಕೇಂದ್ರಗಳಲ್ಲಿ ಇರುವುದಿಲ್ಲ. ಮೂಲ ಅಗತ್ಯಗಳಾದ ತಂಗುದಾಣ, ಊಟೋಪಚಾರ ಮತ್ತು ಸ್ಥಳೀಯ ಪ್ರಯಾಣ ಸೌಲಭ್ಯ ಇಷ್ಟಿದ್ದರೆ ಸಾಕು; ಬಡವರು ಸಹಾ ಪ್ರವಾಸ ಕಾರ್ಯಕ್ರಮ ಹಾಕಿಕೊಳ್ಳಬಲ್ಲರು. ಅವು ಕೈಗೆ ಎಟುಕುವಂತಿರಬೇಕು ಮಾತ್ರ. ಹೀಗೆ ಬರುವ ಕೆಳ ಮಧ್ಯಮ ವರ್ಗದ ಹಾಗೂ ಬಡವರೆನಿಸಿಕೊಳ್ಳುವ ಜನರು ಶುಚಿತ್ವ ಕಡಿಮೆ ಇದ್ದರೂ ಸಹಿಸಿಕೊಳ್ಳುತ್ತಾರೆ. ನಾನಾ ಕಾರಣಗಳನ್ನು ನೀಡಿ ಹಣ ಸುಲಿಯುವವರನ್ನೂ ತಾಳಿಕೊಳ್ಳುತ್ತಾರೆ. ಇವರ ಮೇಲೆ ಪ್ರವಾಸ ತಾಣಗಳಲ್ಲಿ ದೌರ್ಜನ್ಯ ನಡೆಯುವುದೂ ಉಂಟು. ಆದರೂ ಈ ತಾಣಗಳಲ್ಲಿ ಈ ಜನ ಹಣವನ್ನು ಖರ್ಚು ಮಾಡುತ್ತಾರೆ. ಸ್ಥಳೀಯರನ್ನು ಪೋಷಿಸುತ್ತಾರೆ.

ಇಂಥವರ ಅನುಕೂಲಕ್ಕೆ ಸರಳವಾದ ಕ್ರಮಗಳನ್ನು ಕೈಗೊಳ್ಳಬೇಕು. ಪ್ರವಾಸೋದ್ಯಮವೆಂದರೆ ಸ್ಟಾರ್ ಹೋಟೆಲ್‌ಗಳನ್ನು ನಿರ್ಮಿಸುವುದಷ್ಟೇ ಸರಿ ಎಂದೇಕೆ ಇವರು ಭಾವಿಸುತ್ತಾರೆ? ಏಕೆಂದರೆ ಸ್ಟಾರ್ ಹೋಟೆಲ್‌ಗಳನ್ನು ಹುಟ್ಟುಹಾಕಿ ಬಿಟ್ಟುಬಿಡುವುದು ಸುಲಭ. ಅದನ್ನು ಮೀರಿ ನಾಗರಿಕ ಸೌಲಭ್ಯಗಳನ್ನು ಕಲ್ಪಿಸುವುದು ಕಷ್ಟ. ಅಲ್ಲಿ ಮ್ಯಾನೇಜ್‌ಮೆಂಟ್ ಅಂಶ ಇರುತ್ತದೆ.ಈ ಹೊಣೆ ಹೊರಲು ಇಷ್ಟವಿಲ್ಲ.

ತಿರುಪತಿಯಲ್ಲಾಗಲೀ, ಧರ್ಮಸ್ಥಳದಲ್ಲಿ ಆಗಲೀ, ಆ ತಾಣಗಳು ಧಾರ್ಮಿಕ ಪ್ರಧಾನವಾಗಿದೆ ಎಂಬ ಅಂಶವನ್ನು ಹೊರತುಪಡಿಸಿ ನೋಡಿದರೆ ಮ್ಯಾನೇಜ್‌ಮೆಂಟ್ ಅಂಶದ ಗಮ್ಮತ್ತು ಮತ್ತು ಮಹತ್ವ ಅರ್ಥವಾಗುತ್ತದೆ. ಅದೇ ಎಲ್ಲ ಕಡೆ ಆಗಬೇಕಿರುವುದು.

ದೇಶೀಯ ಪ್ರವಾಸೋದ್ಯಮ ಹಿಂದೆ ಬೀಳುವುದಕ್ಕೆ ರಾಜ್ಯ ಸರ್ಕಾರ ಮತ್ತು ಸ್ಥಳೀಯ ಸಂಸ್ಥೆಗಳ ನಿರಾಸಕ್ತಿ ಕಾರಣ. ಶುಚಿತ್ವ ಪಾಲನೆ, ದುಬಾರಿಯಾಗದ ತಂಗುದಾಣ ವ್ಯವಸ್ಥೆ ಇವು ಸಾಧ್ಯವಾಗಬೇಕಾದರೆ ಸ್ಥಳೀಯ ಸಂಸ್ಥೆಗಳು, ಅಂದರೆ ಮುನಿಸಿಪಾಲಿಟಿ, ನಗರಸಭೆ ಮುಂತಾದವು ಪ್ರವಾಸೋದ್ಯಮ ತಮ್ಮ ಆದಾಯದ ಮೂಲ ಎಂಬುದನ್ನು ಮನಗಾಣಬೇಕು. ಅದುವೇ ಸಾಧ್ಯವಾಗದ ಮಾತಾಗಿದೆ.

೦೩.೧೧.೨೦೦೧