ಎಮೆ ರಂಗದಲ್ಲಿ ನೂಕುನುಗ್ಗುಲು ಉಂಟಾಗಿರುವುದರಿಂದ ತತ್ಕಾಲಕ್ಕೆ ಗ್ರಾಹಕನಿಗೆ ಗೊಂದಲ ಆಗುವುದು ಖಚಿತ. ಈ ತನಕ ಸರ್ಕಾರಿ ವಲಯದ ಎಲ್.ಐ.ಸಿ.ಯೇ ಮತ್ತಿತರ ನಿಗಮಗಳ ನಾನಾ ಉದ್ದೇಶದ ಪಾಲಿಸಿಗಳಲ್ಲಿ ಹಣ ತೊಡಗಿಸಿಯೇ ಗ್ರಾಹಕನಿಗೆ ರೂಢಿ.

ಹೊಸದಾಗಿ ತಲೆ ಎತ್ತುತ್ತಿರುವ ವಿಮಾ ಕಂಪೆನಿಗಳು ಪೂರ್ತಿಯಾಗಿ ಹಣಕಾಸು ಸಂಸ್ಥೆಗಳಾಗಿರುವ ಹಿನ್ನೆಲೆಯಲ್ಲಿ ಹುಟ್ಟಿಕೊಂಡಿದ್ದೇನಲ್ಲ. ಹಾಗೆ ನೋಡಿದರೆ ಹೊಸ ಕಂಪೆನಿಗಳು ಬೇರೆ ಬೇರೆ ಹಿನ್ನೆಲೆ ಮತ್ತು ಅನುಭವಗಳು ಉದ್ಯಮದ ಆಸರೆಯನ್ನೇ ಹೊಂದಿವೆ. ಆದುದರಿಂದ ಗ್ರಾಹಕನನ್ನು ಒಲಿಸಿಕೊಳ್ಳುವಲ್ಲಿ ವೈವಿಧ್ಯ ಇರುವುದು ಸಹಜ.

ಹೊಸ ಕಂಪೆನಿಗಳು ತಮ್ಮ ಕಾರ್ಯಶೈಲಿಯಲ್ಲಿ ಹೈಟೆಕ್ ಆಗಿರಲಿಕ್ಕೆ ಸಾಕು. ವಿವಿಧ ವಿದೇಶಿ ವಿಮಾ ಕಂಪೆನಿಗಳು ಸಹಯೋಗ ನೀಡುತ್ತಿರುವುದೇ ಅದಕ್ಕೆ ಕಾರಣ. ಭಾರತದಲ್ಲಿ ವಿಮೆ ಇಳಿಸುವವರ ಸಂಖ್ಯೆ ಸದ್ಯ ಕಡಿಮೆ ಇರುವುದರಿಂದ ಹೊಸ ಗ್ರಾಹಕನನ್ನು; ಅಂದರೆ ಈ ತನಕ ವಿಮೆಯ ಹೊರಗೇ ಇರುವವರನ್ನು; ಆಕರ್ಷಿಸುವಲ್ಲಿ ಆಸಕ್ತಿ ವಹಿಸುತ್ತವೆ. ಈ ಕಂಪೆನಿಗಳು, ವಾಸ್ತವವಾಗಿ ಪೈಪೋಟಿ ಎಲ್ಲಿಯೇ ಹುಟ್ಟಿಕೊಳ್ಳುವಾಗಲೂ ಹೊಸ ಗ್ರಾಹಕರನ್ನು ಪಳಗಿಸಿಕೊಳ್ಳಲು ಹೆಣಗುವುದು ಸಾಮಾನ್ಯ.

ಹೊಸ ಕಂಪೆನಿಗಳು ‘ಉತ್ಪನ್ನ’ಗಳ ಸಂಖ್ಯೆಯನ್ನು ಅಪಾರವಾಗಿ ರೂಪಿಸಿರುವುದು ಈಗಾಗಲೇ ಗ್ರಾಹಕರ ಗಮನಕ್ಕೆ ಬರುತ್ತಿದೆ. ಉದಾಹರಣೆಗೆ ಎಲ್.ಐ.ಸಿ. ಯೋಜನೆಗಳಿಗೆ ಎದುರಾಳಿಯಾಗಿ ಹೊಸ ಕಂಪೆನಿಗಳು ತಂತಮ್ಮ ವಿವಿಧ ಯೋಜನೆಗಳನ್ನು ರೂಪಿಸುತ್ತಿವೆ. ಮೊಟ್ಟ ಮೊದಲಿಗೆ ಬಹುತೇಕ ಕಂಪೆನಿಗಳು ಜೀವವಿಮೆಗೇ ಕೈಹಾಕುತ್ತವೆ. ಆ ವೇಳೆ ‘ಹೀಗಲ್ಲದಿದ್ದರೆ ಹಾಗೆ’ ಎನ್ನುವ ರೀತಿಯಲ್ಲಿ ಪೈಪೋಟಿಯಲ್ಲಿ ಎಲ್.ಐ.ಸಿ.ಯನ್ನು ಮೀರಿಸಿದ ಸಂಖ್ಯೆಯಲ್ಲಿ ಯೋಜನೆಯನ್ನು ರೂಪಿಸುತ್ತಿವೆ. ವಿದೇಶಿ ಸಹಯೋಗದ ಒಂದು ಕಂಪೆನಿಯಂತೂ ಜೀವವಿಮೆ ಕುರಿತ ೨೫೦ ಬಗೆಯ ಯೋಜನೆಗಳನ್ನು ರೂಪಿಸಿದೆ! ವಿಶೇಷವೆಂದರೆ ಒಂದಕ್ಕಿಂತ ಇನ್ನೊಂದು ಭಿನ್ನ. ಒಬ್ಬ ಗ್ರಾಹಕ ಜೀವವಿಮೆ ಇಳಿಸಲು ಮುಂದಾದರೆ ೨೫೦ ರೀತಿ ಯೋಚಿಸಿ ಯೋಜನೆಯನ್ನು ಆಯ್ಕೆ ಮಾಡಿಕೊಳ್ಳಬಹುದು.

ಈಗಾಗಲೇ ಕೇಂದ್ರ ಸರ್ಕಾರದ ಲೈಸನ್ಸ್ ಪಡೆದಿರುವ ಹೊಸ ಕಂಪೆನಿಗಳಲ್ಲಿ ಹಲವು ಮಾತ್ರವೇ ಜೀವವಿಮೆ ಮತ್ತು ಜೀವವಿಮೆಯೇತರ ವಹಿವಾಟು ನಡೆಸುವುದಕ್ಕೆ ಸಿದ್ಧವಾಗಿರುವುದು. ಇನ್ನು ಹಲವು ಕಂಪೆನಿಗಳು ಬರಿದ ಜೀವವಿಮೆಯೇತರ ಯೋಜನೆಗಳನ್ನು ಮಾತ್ರ ರೂಪಿಸುತ್ತವೆ. ವಹಿವಾಟು ಯಾವುದೇ ಬಗೆಯದಾದರೂ ಯೋಜನೆಗಳ ಸಂಖ್ಯೆ ಮಾತ್ರ ಅಸಂಖ್ಯ.

ಜೀವವಿಮೆಯ ನಂತರ ಹಳೆಯ ಮತ್ತು ಹೊಸ ಕಂಪೆನಿಗಳೆಡರ ನಡುವೆ ತೀವ್ರ ಪೈಪೋಟಿ ಏಳಿಸುವುದು ವೈದ್ಯಕೀಯ ವೆಚ್ಚ ಭರಿಸುವುದಕ್ಕೆ ನೆರವಾಗುವ ಪಾಲಿಸಿಗಳ ವ್ಯವಹಾರ. ಭಾರತದಲ್ಲಿ ಈಗಷ್ಟೇ ವೈದ್ಯಕೀಯ ಅರಿವು ಹೆಚ್ಚುತ್ತಿರುವುದರಿಂದ ಹೈಟೆಕ್ ಕಾಯಿಲೆಗಳು ಹಾಗೂ ಜೀವಮಾನವಿಡೀ ಕಾಡುವ ದೈಹಿಕ ಬಾಧೆಗಳು ಅಧಿಕವಾಗುತ್ತಿರುವುದರಿಂದ ಹಾಗೂ ವೈದ್ಯಕೀಯ ತಪಾಸಣೆ, ರೋಗ ನಿಧಾನ ಮತ್ತು ಚಿಕಿತ್ಸೆಯ ವೆಚ್ಚಗಳು ವಿಪರೀತವಾಗಿ ಬೆಳೆದಿರುವುದರಿಂದ ವಿಮೆ ಕಂಪೆನಿಗಳಿಗೆ ಹೊಸ ಅವಕಾಶಗಳು ವಿಪುಲವಾಗಿ ತೆರೆದುಕೊಂಡಿವೆ. ಲಕ್ಷಾಂತರ ರೂಪಾಯಿ ವೆಚ್ಚ ತಲೆ ಮೇಲೆ ಏರಿ ಬರುವ ಅಪಾಯ ಕಾಣಿಸುತ್ತಿರುವಾಗ, ಅಂಥ ಪರಿಸ್ಥಿಯನ್ನು ಎದುರಿಸುವ ಸಿದ್ಧತೆಗಾಗಿ ಪ್ರತಿ ತಿಂಗಳು ಕೆಲವು ಸಾವಿರ ರೂಪಾಯಿ ಪ್ರೀಮಿಯಂ ತೊಡಗಿಸಲು ಗ್ರಾಹಕ ಅದೇಕೆ ಮುಂದುವರೆಯುವುದಿಲ್ಲ?

ಹಳೆಯ ಕಂಪೆನಿಗಳು ಹೆಚ್ಚಾಗಿ ಜೀವವಿಮೆ ಮೇಲೆ ಗಮನ ಕೇಂದ್ರೀಕರಿಸಿದ ಕಾರಣ ಸಾಕಷ್ಟು ಅಭಿವೃದ್ಧಿಪಡಿಸದೆ ಇರುವ ಕ್ಷೇತ್ರ ಎಂದರೆ ನಿವೃತ್ತಿ ವೇತನಕ್ಕೆ ಸಂಬಂಧಿಸಿದ್ದು. ಎಲ್.ಐ.ಸಿ.ಯ ಜೀವನ ಸುರಕ್ಷಾ ಸರಣಿಯ ಯೋಜನೆಗಳು ಜನಪ್ರಿಯವಾಗಿರುವುದು ನಿಜ. ಆದರೆ ಹೊಸ ಕಂಪೆನಿಗಳು ಇನ್ನಷ್ಟು ಅವಕಾಶಗಳು ಲಭ್ಯವಿರುವುದನ್ನು ಕಂಡುಕೊಳ್ಳಬಹುದು. ಜೀವನ ದಿನೇ ದಿನೇ ದುಬಾರಿ ಆಗುತ್ತಿರುವಾಗ ಹಾಗೂ ಉದ್ಯೋಗ ಪ್ರಧಾನ ಕುಟುಂಬಗಳಲ್ಲಿ ವಿದ್ಯಾವಂತರು ದೇಶವನ್ನೇ ಬಿಟ್ಟು ಹೋಗುವುದು ಹೆಚ್ಚುತ್ತಿರುವಾಗ; ನಿವೃತ್ತರಾದ ಮೇಲೆ ಅಭದ್ರತೆ ಹೆಚ್ಚುತ್ತಿದೆ ಎನ್ನುವಾಗ; ಈ ಬಗೆಯ ಯೋಜನೆಗಳು ಹೆಚ್ಚು ಹೆಚ್ಚು ಜನಪ್ರಿಯ ಆಗುತ್ತವೆ. ನಿವೃತ್ತರಾದ ಮೇಲೆ ತಿಂಗಳು ತಿಂಗಳೂ ಅನುಕೂಲಕರವಾದ ಮೊತ್ತ ಕೈಸೇರುತ್ತದೆ ಎನ್ನುವುದು ಖಚಿತವಾದರೆ, ಇಳಿ ವಯಸ್ಸಿನ ಯಾವ ಸಂಬಳಗಾರ ತಾನೇ ಆಕರ್ಷಿತನಾಗುವುದಿಲ್ಲ?

ಹೀಗೆ ವಿಮೆಯ ಸಾಧ್ಯತೆಗಳನ್ನೆಲ್ಲ ಹೆಚ್ಚಿಸುವ ದಿಕ್ಕಿನಲ್ಲಿ ನವಜಾತ ಕಂಪೆನಿಗಳು ಶ್ರಮಿಸತೊಡಗಿದರೆ ಹಳೆಯ ವಿಮಾ ನಿಗಮಗಳು ಪೈಪೋಟಿಯನ್ನು ಹೇಗೆ ಎದುರಿಸಿಯಾವು? ಇವು ಕೂಡಾ ಹೊಸ ಯೋಜನೆಗಳನ್ನು ರೂಪಿಸಿಯಾವು. ಜೀವವಿಮಾ ನಿಗಮ ಮತ್ತು ಸಾಮಾನ್ಯ ವಿಮಾ ನಿಗಮದ ಕಂಪೆನಿಗಳು ಹಳೆಯ ಹುಲಿಗಳು. ಗಟ್ಟಿಯಾದ ನೆಲೆಯ ಮೇಲೆ ವ್ಯವಹಾರ ನಡೆಸುತ್ತಿವೆ. ವಿಮೆ ಇಳಿಸುವುದಕ್ಕೆ ಈಗಿಗಿಂತ ಹಲವು ಪಟ್ಟು ಅವಕಾಶಗಳು ಭವಿಷ್ಯದಲ್ಲಿ ಲಭ್ಯವಿವೆ; ಆದರೆ ಈವರೆಗೆ ಸಿಕ್ಕ ಅವಕಾಶವೇನೂ ಕಡಿಮೆ ಇಲ್ಲ. ಅಷ್ಟನ್ನೂ ಇವು ಬಾಚಿಕೊಂಡಿವೆ. ಗ್ರಾಹಕರ ಗುಡ್‌ವಿಲ್ ಅನ್ನು ಗಳಿಸಿಕೊಂಡಿದೆ. ಈಗಾಗಲೇ ಒಳ್ಳೆಯ ಮಾರಾಟ ಜಾಲವನ್ನು ಹರಡಿವೆ. ಹೊಸ ಕಂಪೆನಿಗಳು ಇಂಥ ಅನುಕೂಲ ಸ್ಥಿತಿಗೆ ಏರಲು ಸಾಕಷ್ಟು ಕಷ್ಟಪಡಬೇಕಾಗುವುದೇ ಅಲ್ಲದೆ ಹಲವು ವರ್ಷ ಕಾಲ ಹೆಣಗಬೇಕಾಗುತ್ತದೆ.

ಹೊಸ ಕಂಪೆನಿಗಳಿಗೆ ಸ್ವತಃ ಅನುಭವ ಇಲ್ಲದಿದ್ದರೂ, ಸಹಯೋಗ ನೀಡಿರುವ ವಿದೇಶಿ ಕಂಪೆನಿಗಳ ಅನುಭವ ಬೆನ್ನಿಗೆ ಇದೆ. ಹೊಸ ಉತ್ಪನ್ನ ಮಾತ್ರವಲ್ಲದೆ ಹೊಸ ವಿಧಾನಗಳು ಮೂಡಿ ಬರುತ್ತವೆ. ಎಲ್.ಐ.ಸಿ.ಯೇ ಮುಂತಾದ ಕಡೆ ಹೇಳಿ ಕೇಳಿ ಹಳೆಯ ಶೈಲಿಯ ಕಾರ್ಯವಿಧಾನಗಳು ಮಾತ್ರವೇ ವಿಜೃಂಭಿಸಿವೆ. ಸರ್ಕಾರಿ ವಲಯದ ಕಂಪೆನಿಗಳಂತೆ ಇವು ಕಾರ್ಯ ನಿರ್ವಹಿಸುವ ಕಾರಣ ಅಗತ್ಯವಿಲ್ಲದಿರಲಿ; ಇರಲಿ; ಅಸಂಖ್ಯ ಜನಸ್ತೋಮಕ್ಕೆ ಉದ್ಯೋಗ ಒದಗಿಸಿಕೊಟ್ಟಿವೆ. ಇಷ್ಟೊಂದು ಜನಕ್ಕೆ ಕೆಲಸವಿದೆಯೇ ಇಲ್ಲವೇ ಎಂಬುದಾಗಿ ಯಾವ ಕಾಲಘಟ್ಟದಲ್ಲೂ ಯೋಚನೆ ಮಾಡಿಲ್ಲ. ಸರ್ಕಾರಿ ವಲಯ ಬ್ಯಾಂಕುಗಳಲ್ಲಿ ಮಾಡಿದಂತೆ ಸ್ವಯಂ ನಿವೃತ್ತಿ ಯೋಜನೆಗಳನ್ನು ಜಾರಿ ಮಾಡಿಲ್ಲ. ಹೊಸ ಕಂಪೆನಿಗಳು ಈ ರೀತಿ ಅಸಂಖ್ಯ ಜನರನ್ನು ನೇಮಿಸಿಕೊಳ್ಳುವುದಿಲ್ಲ. ಆದ್ದರಿಂದ ಅವುಗಳ ಲಾಭಕ್ಷಮತೆ ಹೆಚ್ಚಿಗೆ ಇರುತ್ತದೆ. ಕಚೇರಿಗಳನ್ನೂ, ಕಾರ್ಯ ವಿಧಾನವನ್ನೂ ಆದುನಿಕವಾಗಿ ಸುಸಜ್ಜಿತಗೊಳಿಸುವುದರಿಂದ ಹಾಗೂ ವೇಗವಾಗಿ ಕಂಪ್ಯೂಟರೀಕರಣಕ್ಕೆ ವ್ಯವಸ್ಥೆ ಮಾಡುವುದರಿಂದ ಆರಂಭಕ್ಕೆ ಅಧಿಕ ಹಣ ಹೂಡಬೇಕಾಗಬಹುದು; ಆ ಮಾತು ಬೇರೆ. ಆದರೆ ಅಧಿಕ ಲಾಭಕಾರಿ ಆಗುವಂತೆ ವಿದೇಶಿ ಸಹಯೋಗ ಕಂಪೆನಿಯ ಅನುಭವವು ಪಾಠ ಹೇಳಿಕೊಡುತ್ತದೆ.

ವಿಮೆ ವಹಿವಾಟಿನ ಬೆನ್ನೆಲುಬು ಎಂದರೆ ಏಜೆಂಟರ ಸಮೂಹ. ಎಲ್.ಐ.ಸಿ.ಯೇ ಮುಂತಾದ ಕಡೆಯ ಏಜೆಂಟರು ಇಷ್ಟೂ ದಶಕಗಳಲ್ಲಿ ತಂತಮ್ಮ ಸಂಸ್ಥೆಯನ್ನು ಬೆಳೆಸಿದ್ದಾರೆ. ತಾವೂ ಶ್ರಮಕ್ಕೆ ತಕ್ಕಂತೆ ಹಾಗೂ ಶ್ರಮಕ್ಕೆ ಮೀರಿದಂತೆ ಲಾಭಮಾಡಿಕೊಂಡಿದ್ದಾರೆ. ಇವರಿಗೆ ವಾಸ್ತವ ತರಪೇತಿ ಸಿಕ್ಕಿರುವುದಕ್ಕಿಂತ ಕಾರ್ಯಾನುಭವವೇ ಅಧಿಕ. ಆದರೆ ಹೊಸ ಕಂಪೆನಿಗಳು ಏಜೆಂಟರಿಗೆ ಬಹಳ ಒಳ್ಳೆಯ ತರಪೇತಿಯನ್ನು ಕೊಡಲಿಕ್ಕೆ ಸಾಕು. (ಬ್ಯಾಂಕಿಂಗ್ ವಲಯದ ಆಧುನಿಕ ಕಂಪೆನಿಗಳು ಈ ದಿಕ್ಕಿನಲ್ಲಿ ಸಾಕಷ್ಟು ವಿಫಲವಾಗಿವೆ ಎನಿಸುತ್ತದೆ. ಹಳೆಯ ಬ್ಯಾಂಕುಗಳೇ ವಾಸಿ ಎಂದು ಗ್ರಾಹಕ ಭಾವಿಸಿರುವುದೂ ಉಂಟು. ಆ ಮಾತು ಬೇರೆ).

ವಿಮೆ ರಂಗದ ಹಳೆಯ ಕಂಪೆನಿಗಳಿಗೆ ಇರುವ ಅನುಕೂಲವೆಂದರೆ ಇವು ತಮ್ಮ ಗ್ರಾಹಕನ ಮನಸ್ಸು ಹಾಗೂ ವಿಚಾರ ಲಹರಿ ಹೇಗಿರುತ್ತವೆ ಎಂಬುದನ್ನು ಅರ್ಥಮಾಡಿಕೊಂಡಿವೆ. ಈ ಅನುಕೂಲ ತಕ್ಷಣಕ್ಕೆ ಹೊಸ ಕಂಪೆನಿಗಳಿಗೆ ಲಭ್ಯವಿರುವುದಿಲ್ಲ. ಹೊಸ ಕಂಪೆನಿಗಳ ಆಧುನಿಕ ವ್ಯವಹಾರ ಶೈಲಿಯನ್ನು ಹಳೆಯ ನಿಗಮಗಳು ಸ್ವತಃ ರೂಢಿಸಿಕೊಳ್ಳಲು ಮುಂದಾದರೆ ಅಡ್ಡಿ ಇಲ್ಲ.

ವಿಮಾ ಯೋಜನೆಗಳು ಈವರೆಗೆ ಸರ್ಕಾರದ ಕೃಪಾ ಪೋಷಣೆಯಿಂದ ಮಾತ್ರ ಬೆಳೆದು ಸುಪುಷ್ಟಗೊಂಡಿವೆ. ಆದಾಯಕರ ರಿಯಾಯ್ತಿ ಮತ್ತು ವಿನಾಯ್ತಿಗಳು ಲಭ್ಯವಾಗುತ್ತವೆ ಎಂಬ ಒಂದೇ ಕಾರಣಕ್ಕೆ ಸಂಬಳದಾರರು ಪಾಲಿಸಿಗಳನ್ನು ಕೊಳ್ಳುತ್ತಾರೆ. ಜೀವವಿಮೆಯಲ್ಲಿ ಮಾತ್ರವೇ ತಮ್ಮ ಭದ್ರತೆಯ ಬಗೆಗೆ ಕಾಳಜಿ ವಹಿಸುವುದು. ವಾಹನ ವಿಮೆಯನ್ನೇ ತೆಗೆದುಕೊಂಡರೆ ಶಾಸನಬದ್ಧವಾಗಿ ಕಡ್ಡಾಯ ಮಾಡದೇ ಇದ್ದಿದ್ದರೆ ಈಗ ಇರುವಷ್ಟು ಪಾಲಿಸಿದಾರರು ಇರುತ್ತಿದ್ದರೇನು?

ವಿಮೆ ವ್ಯವಹಾರಕ್ಕೆ ಹೊಸದಾಗಿ ಇಳಿದಿರುವವರು ಕೂಡಾ ಕರ ರಿಯಾಯ್ತಿ ಮತ್ತು ವಿನಾಯ್ತಿಗಳ ಮೇಲೆ ಆಧಾರಪಡುವವರೇ ಸರಿ. ಕರ ಸೌಲಭ್ಯಗಳು ಗ್ರಾಹಕರ ಪಾಲಿಗೆ ಇನ್ನಷ್ಟು ಲಭಿಸುವಂತೆ ಒತ್ತಡ ಹೇರಲಿಕ್ಕೂ ಸಾಕು. ಅದು ಗ್ರಾಹಕನ ಪಾಲಿಗೆ ಆಗುವ ಅನುಕೂಲವೇ ಸರಿ.

ಭಾರತದಲ್ಲಿ ವಿಮೆಯು, ಅದರಲ್ಲೂ ಜೀವವಿಮೆಯು, ಉಳಿತಾಯದ ಒಂದು ಬಾಬು. ಸಂಬಳಗಾರರು ಎಲ್.ಐ.ಸಿ.ಯ ಇಡುಗಂಟನ್ನು ತಮ್ಮ ಜೀವಿತ ಕಾಲದ ಉಳಿತಾಯ ಮೊತ್ತ ಎಂದೇ ಭಾವಿಸುತ್ತಾರೆ. ತಾವು ಹಣಕ್ಕೆ ಬೆಲೆ ಇದ್ದಾಗ ಕಂತುಗಳನ್ನು ಕಟ್ಟಿಕಾಲಾನುಕ್ರಮದಲ್ಲಿ ಮೌಲ್ಯ ಕಳೆದುಕೊಂಡ ಹಣವನ್ನು ಆಮೇಲೆ ಪಡೆಯುವುದರಿಂದ ಆಗುವ ನಷ್ಟ ಪಾಲಿಸಿದಾರನ ಗಮನಕ್ಕೆ ಬರುವುದೇ ಇಲ್ಲ.

ವಿಪರ್ಯಾಸವೆಂದರೆ, ಇಂಥ ವಸ್ತುಸ್ಥಿತಿ ನಡುವೆಯೂ ವಿಮೆ ಇಳಿಸುವ ವ್ಯವಹಾರವು ಹೆಚ್ಚು ಹೆಚ್ಚು ಉಳಿತಾಯ ಹಣವನ್ನು ಮುಂದೆ ಸಹಾ ಸಂಗ್ರಹಿಸಬಲ್ಲದು. ಏಕೆಂದರೆ ಇತರ ಉಳಿತಾಯ ಬಾಬುಗಳು ಸೊರಗಿವೆ. ಬಡ್ಡಿ ದರಗಳನ್ನು ಸರ್ಕಾರವು ಸತತವಾಗಿ ಇಳಿಸುತ್ತಾ ಇರುವುದರಿಂದ ವಿಮೆ ಯೋಜನೆಗಳು ಲಾಭಕಾರಿ ಎಂದು ಗ್ರಾಹಕ ಯೋಚಿಸಿದರೆ ಆಶ್ಚರ್ಯವಿಲ್ಲ.

೨೦.೦೩.೨೦೦೨