ಕಷ್ಟ ಕಾಲಕ್ಕೆ ಇರುವುದು ‘ಅಪದ್ಧನ’. ಆ ವೇಳೆ ಯಾವ ಕಡೆಯಿಂದ ನೆರವು ಬಂದರೂ ಸಂತೋಷವೇ. ಕಷ್ಟ ಎನ್ನುವುದು ಸದಾ ನಷ್ಟದ ಜೊತೆಗೂಡಿದ್ದೇ ಆಗಿರುತ್ತದೆ. ನಷ್ಟ ಆಗಬಹುದು ಎಂಬುದನ್ನು ತಳ್ಳಿಹಾಕದೇ ಮುಂಚೆಯೇ ಅಂಥ ಪ್ರಸಂಗವನ್ನು ಎದುರಿಸಲು ಮುಂಜಾಗ್ರತೆಯಿಂದ ವ್ಯವಸ್ಥೆ ಮಾಡಿಕೊಳ್ಳುವುದು ಜಾಣತನ. ವಿಮೆ ಅಂಥ ಒಂದು ಜಾಣತನದ ವ್ಯವಸ್ಥೆ. ಈ ವ್ಯವಸ್ಥೆಯಡಿಗೆ ಬರುವ ಪ್ರತಿಯೊಬ್ಬರೂ ನಷ್ಟ ಕಾಲಕ್ಕೆ ಸಿಗಬಹುದಾದ ನೆರವಿನ ಪ್ರತೀಕ್ಷೆ ಮೇಲೆ ಒಂದಿಷ್ಟು ವಂತಿಗೆ ಸಲ್ಲಿಸುತ್ತಾರೆ. ಹೀಗೆ ಪ್ರೀಮಿಯಂ ಸಲ್ಲಿಸುವ ಪ್ರತಿಯೊಬ್ಬರಿಗೂ ನಷ್ಟ ಸಂಭವಿಸದೇ ಇರಬಹುದು. ಆದರೆ ಯಾರೋ ಒಬ್ಬರಿಗೆ ನಷ್ಟ ಸಂಭವಿಸಿದರೆ ಕಲೆ ಹಾಕಿದ ಮಿಕ್ಕೆಲ್ಲರ ಪ್ರೀಮಿಯಂ ಹಣದಿಂದ ಅವರಿಗೆ ನೆರವು ಕೊಡಬಹುದು.

ಅತಿ ಪ್ರಚಲಿತ ವಿಮೆ ಪದ್ಧತಿಯೆಂದರೆ ಜೀವವಿಮೆ. ಅಕಾಲ ಮೃತ್ಯುವಿನ ವಿರುದ್ಧ ಈ ವಿಮೆ. ಸತ್ತರೆ ಕುಟುಂಬ ವರ್ಗಕ್ಕೆ ಪಾಲಿಸಿಯ ಹಣ ಬಂದು ಅನುಕೂಲವಾಗುತ್ತದೆ; ಕುಟುಂಬ ಬೀದಿಗೆ ಬೀಳುವುದಿಲ್ಲ ಎಂಬ ಒಂದೇ ವಿಚಾರಧಾರೆಯಿಂದ ಜೀವನವಿಡೀ ಪ್ರೀಮಿಯಂ ಕಟ್ಟುತ್ತಾರೆ. ಅಂತಿಮವಾಗಿ ಹಣ ಕೈಸೇರಿದಾಗ ಸತತವಾಗಿ ಆದ ಹಣದುಬ್ಬರದಿಂದಾಗಿ ಅದಕ್ಕೆ ಬೆಲೆಯೇ ಇರುವುದಿಲ್ಲ. ಪ್ರೀಮಿಯಂನ ಒಂದೊಂದು ರೂಪಾಯಿ ತೆರಲೂ ಸಾಕಷ್ಟು ತ್ಯಾಗ ಮಾಡಿರುವುದಾಗಿರುತ್ತದೆ. ಪಾಲಿಸಿಯ ಹಣ ಕೈಸೇರಿದಾಗ ಅದಕ್ಕೆ ಮುಂಚಿನಷ್ಟು ಖರೀದಿ ಸಾಮರ್ಥ್ಯವೇ ಇರುವುದಿಲ್ಲ. ಆದರೂ ಜನ ಜೀವವಿಮೆಗೆ ಮನಸೋಲುತ್ತಾರೆ. ಸತ್ತಾಗ ಅನುಕೂಲವಾಗುತ್ತದೆ ಎನ್ನುವ ಸೆಂಟಿಮೆಂಟೇ ಇಲ್ಲಿ ಕೆಲಸಮಾಡುವುದು. ಹೀಗಾಗಿ ಜೀವವಿಮೆ ವಾಸ್ತವವಾಗಿ ಭಾರತದಲ್ಲಿ ಜನರ ಮನೋವೃತ್ತಿಯೇ ಆಗಿಬಿಟ್ಟಿದೆ. ಅದರಲ್ಲೂ ಉದ್ಯೋಗಿಗಳಲ್ಲಿ ಯಾರಾದರೂ ತಾವು ಜೀವವಿಮೆ ಮಾಡಿಸಿಲ್ಲ ಎಂದರೆ ಆಶ್ಚರ್ಯಚಕಿತರಾಗುವ ಸರದಿ ಇತರರದು.

ಜೀವವಿಮೆ ಎನ್ನುವುದು ಭದ್ರತೆಯನ್ನು ಸಾಧಿಸಿಕೊಳ್ಳುವ ಒಂದು ಕ್ರಮ. ಅಂತಿಮವಾಗಿ ಲಾಭ ಆಗುವುದು ಜೀವವಿಮಾ ನಿಗಮಕ್ಕೇ ಎನ್ನುವ ಭಾವನೆಯೂ ಜನಜನಿತವೇ. ಏಕೆಂದರೆ ಅಕಾಲ ಮರಣ ಪ್ರಸಂಗಗಳು ಹೆಚ್ಚಿಗೆ ಇರುವುದಿಲ್ಲ. ಆದರೂ ಅದೊಂದು ಜೀವನ ಕ್ರಮ. ನಿಗಮದ ಪಾಲಿಗೆ ಜನರ ಉಳಿತಾಯ ಹಣಕ್ಕೆ ಆದಷ್ಟೂ ಹೆಚ್ಚಿನ ಪ್ರತಿಫಲ ಕೊಡಬೇಕೆಂಬ ತವಕ ಇಲ್ಲದಿಲ್ಲ. ನಿಗಮವೇನೂ ಪಕ್ಕಾ ವ್ಯಾಪಾರಿಯಂತೆ ವಹಿವಾಟು ನಡೆಸುತ್ತಿಲ್ಲ ಎಂಬ ಭಾವನೆಯೂ ಉಂಟು.

ಆದರೆ ಇನ್ನಿತರ ವಿಮಾ ಬಾಬುಗಳಲ್ಲಿ ವ್ಯಾಪಾರವೇ ಮುಖ್ಯ. ಉದಾಹರಣೆಗೆ ಯಾವುದೇ ಬಗೆಯ ಜೀವ ವಿಮೆಗೆ ಹೊರತಾದ ವಿಮೆ, ವಾಹನ ವಿಮೆಯನ್ನು ಮಾಡಿಸುವುದು ಕಡ್ಡಾಯವಾಗಿರುವುದರಿಂದ ಬಳಕೆದಾರನಿಗೆ ನಿರ್ವಾಹವಿಲ್ಲ. ಬೆಂಕಿ ವಿಮೆ, ಕಳ್ಳತನ ವಿರುದ್ಧ ವಿಮೆ ಹೀಗೆ ನಾನಾ ಬಗೆಯ ವಿಮೆಗಳಿವೆ. ವಿಮೆ ಇಳಿಸಲು ಅವಕಾಶಗಳು ಬಹಳ. ವಿಮೆ ಕಂಪೆನಿಯು ತನಗೆ ನಷ್ಟವಾಗದ ರೀತಿಯಲ್ಲಿ ವಿಮಾ ಯೋಜನೆಯನ್ನು ರೂಪಿಸುತ್ತದೆ. ಪಾಲಿಸಿದಾರರಿಗೆ ನಷ್ಟ ಸಂಭವಿಸುವ ಸಾಧ್ಯತೆಗಳು ಹೆಚ್ಚಿಗೆ ಇದ್ದಷ್ಟೂ ಪ್ರೀಮಿಯಂ ಮುಂತಾದವು ದುಬಾರಿಯಾಗಿರುತ್ತವೆ. ಉದಾಹರಣೆಗೆ ಭಾರತ ಸರ್ಕಾರದ ಯೋಜನೆಯಡಿ ನಿರ್ಮಿಸಲಾದ ಕೃತಕ ಉಪಗ್ರಹವನ್ನೇ ವಿಮೆ ಇಳಿಸಲಾಗಿತ್ತು ಉಪಗ್ರಹ ಗೋತಾ ಹೊಡೆದರೆ ವಿಮಾ ಕಂಪೆನಿ ನಷ್ಟ ಪರಿಹಾಸ ಕಟ್ಟಿಕೊಡಬೇಕಿತ್ತು. ಬೆಳೆ ವಿಮೆ ಬೇಕೆಂದು ರೈತ ಸಮುದಾಯ ಕೇಳುತ್ತಲೇ ಇದೆ.

ಭಾರತದಲ್ಲಿ ಬೇಸಾಯವು ಮಳೆ ಮಾರುತಗಳನ್ನು ಆಧರಿಸಿರುವುದರಿಂದ ಅನಿಶ್ಚಿತತೆಯೇ ಅಧಿಕ. ಯಾವ ಕಂಪೆನಿಯೂ ಈತನಕ ವ್ಯಾಪಕವಾಗಿ ಜಾರಿಗೆ ತರಬಲ್ಲ ಬೆಳೆವಿಮೆಯೋಜನೆಯನ್ನು ರೂಪಿಸಿಲ್ಲ. ಆದರೆ ಸಮುದ್ರ ಸಾಗಾಣಿಕೆ, ರಫ್ತು ವ್ಯಾಪಾರ ಮುಂತಾದ ಬಾಬುಗಳ ವಿಮಾ ಯೋಜನೆಗಳು ಯಶಸ್ವಿಯಾಗಿ ನಡೆಯುತ್ತಿವೆ.

ಜೀವವಿಮಾ ನಿಗಮ ಸ್ವಾಯತ್ತ ಸಂಸ್ಥೆ. ಜನರಲ್ ಇನ್ಷೂರೆನ್ಸ್ ನಿಗಮದಡಿ ಓರಿಯೆಂಟಲ್, ನ್ಯೂ ಇಂಡಿಯಾ ಅಶೂರೆನ್ಸ್ ಕಂಪೆನಿಗಳು ಜೀವವಿಮೆಗೆ ಹೊರತಾದ ವಿಮೆಯನ್ನು ನಡೆಸುತ್ತಿವೆ. ನಷ್ಟಸಾಧ್ಯತೆ ಇರುವ ಯಾವುದೇ ವ್ಯವಹಾರದ ಬಗೆಗೆ ತಮಗೆ ಲಾಭವಿರುವಂತೆ ವಿಮೆ ಇಳಿಸುವ ಬಗೆಗೆ ಇವು ಯೋಜನೆಗಳನ್ನು ರೂಪಿಸಿ ಕೊಡಬಲ್ಲವು. ಸದ್ಯ ಈ ಎಲ್ಲ ವಿಮಾ ಸಂಸ್ಥೆಗಳ ಜಂಘಾಬಲ ಉಡುಗಿಹೋಗುವಂಥ ಬೆಳವಣಿಗೆಗಳು ಇದೀಗ ನಡೆದಿವೆ. ಇತ್ತೀಚಿನವರೆಗೆ ಅಮೆರಿಕವೂ ಸೇರಿದಂತೆ ಹಲವು ರಾಷ್ಟ್ರಗಳು ವಿಮಾ ವ್ಯಾಪಾರವನ್ನು ವಿದೇಶಿ ವ್ಯಾಪಾರ ಹಿತಾಸಕ್ತಿ ಇರುವ ಕಂಪೆನಿಗಳಿಗೂ ತೆರೆದಿಡಬೇಕೆಂದು ಭಾರತ ಸರ್ಕಾರದ ಮೇಲೆ ಒತ್ತಾಯ ಹೇರುತ್ತಿದ್ದವು. ಅದಕ್ಕೆ ಸಾಕಷ್ಟು ವಿರೋಧವೂ ಬಂದಿತ್ತು. ಕಾರಣ ಸರಳ. ಈ ರಾಷ್ಟ್ರಗಳಲ್ಲಿ ವಿಮಾ ವ್ಯಾಪಾರವು ಚೆನ್ನಾಗಿ ಅಭಿವೃದ್ಧಿಗೊಂಡಿದೆ. ಭಾರತದಲ್ಲಿ ವಿಮಾ ವ್ಯಾಪಾರಕ್ಕೆ ಅವಕಾಶಗಳು ಅಧಿಕ. ಜಾಗತೀಕರಣವಂತೂ ಎಲ್ಲ ರಾಷ್ಟ್ರಗಳು ಭಾರತದತ್ತ ಕಣ್ಣು ಹಾಕುವಂತೆ ಮಾಡಿವೆ. ವಿದೇಶಗಳಿಗೆ ಕೂಡಾ ವಿಮಾ ವ್ಯಾಪರ ಇಲ್ಲಿ ಪೊಗದಸ್ತಾಗಿ ನಡೆಯುತ್ತದೆ ಎಂಬುದಷ್ಟೇ ಮುಖ್ಯ.

ಈ ಕಾರಣಕ್ಕಾಗಿಯೇ ವಿರೋಧ ಬಂದಿದ್ದು ಕೂಡಾ. ವಿದೇಶಿ ಸಹಭಾಗಿತ್ವದ  ಅಥವಾ ಪೂರ್ಣ ಒಡೆತನದ ಕಂಪೆನಿಗಳು ಲಾಭ ಬಾಚಿ ತಮ್ಮ ಮಾತೃ ಕಂಪೆನಿಗಳಿಗೆ ಸಂಪತ್ತನ್ನು ರವಾನಿಸುತ್ತವೆ ಎಂಬುದೇ ಮುಖ್ಯ ಆಕ್ಷೇಪಣೆ. ಕೊನೆಗೂ ಭಾರತ ಸರ್ಕಾರ ಈಚೆಗೆ ವಿಮಾ ವ್ಯಾಪಾರವನ್ನು ವಿದೇಶೀಯರಿಗೂ ಸೇರಿದಂತೆ ಯಾರಿಗಾದರೂ ಅನ್ವಯವಾಗುವಂತೆ ತೆರೆದಿಟ್ಟಿತು. ಒಂದು ನಿಯಂತ್ರಣ ಪ್ರಾಧಿಕಾರಕ್ಕೆ ವಿಮಾ ಚಟುವಟಿಕೆಯ ಉಸ್ತುವಾರಿಯನ್ನು ವಹಿಸಿತು. ದಂಧೆ ನಡೆಸಲು ನಿಯಮಗಳನ್ನ ನಿಗದಿ ಮಾಡಿತು. ಇಷ್ಟೆಲ್ಲ ಮಾಡಲು ಮುಂಚೆಯೇ ದೇಶದ ಪ್ರತಿಷ್ಠಿತ ಕಂಪೆನಿಗಳೆಲ್ಲ ಅಮೆರಿಕ ಮತ್ತು ಯುರೋಪ್‌ನ ವಿವಿಧ ವಿಮಾ ಕಂಪೆನಿಗಳ ಜೊತೆ ಸಹಭಾಗಿತ್ವಕ್ಕೆ ಒಪ್ಪಂದ ಮಾಡಿಕೊಂಡುಬಿಟ್ಟಿದ್ದವು. ಅಂಥ ೨೦ಕ್ಕೂ ಹೆಚ್ಚು ಕಂಪೆನಿಗಳು ಇದೀಗ ಪೂರ್ಣ ಪ್ರಮಾಣದ ವಿಮಾ ವ್ಯಾಪಾರವನ್ನು ತಂತಮ್ಮ ವಿದೇಶಿ ಪಾಲುದಾರ ಕಂಪೆನಿಯ ಅನುಭವದ ಆಧಾರದ ಮೇಲೆ ನಾಗಾಲೋಟದಲ್ಲಿ ನಡೆಸಲು ಸನ್ನದ್ಧವಾಗಿವೆ. ಆರಂಭದಲ್ಲೇ ಅಡೆತಡೆ. ನಿರೀಕ್ಷಿಸಿದ್ದಂತೆ ವಿದೇಶಿ ಬಂಡವಾಳವೇ ಹರಿದು ಬರುತ್ತಿಲ್ಲ. ನಾಮಮಾತ್ರಕ್ಕೆ ೫೦ ಕೋಟಿ ಡಾಲರ್‌ನಷ್ಟು ಮಾತ್ರ ಒಳಕ್ಕೆ ಹರಿದು ಬಂದಿವೆ. ವಿದೇಶಿ ಹಿತಗಳ ತಕರಾರೆಂದರೆ ಭಾರತದಲ್ಲಿ ರೂಪಿಸಿರುವ ನಿಯಮಾವಳಿಗಳು ಲಾಭಕಾರಿ ವ್ಯಾಪಾರಕ್ಕೆ ಅನುಕೂಲವಾಗಿಲ್ಲ ಎಂಬುದೇ ಆಗಿದೆ. ವಿದೇಶಿ ಮೂಲಗಳು ಭಾರತದೊಳಗೆ ಇಣುಕಿ ನೋಡಿದಾಗ ಚಿತ್ರ ಆಕರ್ಷಕವಾಗಿತ್ತು. ಅನಂತರ ಹಾಗೆ ಕಾಣಿಸುತ್ತಿಲ್ಲ!

ಭಾರತವು ಬಹಳ ಎಚರಿಕೆ ತೋರಿಸುವುದಕ್ಕೆ ಕಾರಣವಿಲ್ಲದಿಲ್ಲ. ಬೇರೆ ಕೆಲವು ರಾಷ್ಟ್ರಗಳನ್ನು ವಿದೇಶಿ ವಿಮಾ ಕಂಪೆನಿಗಳು ಪ್ರವೇಶ ಮಾಡಿದಾಗ ಲಾಭದ ಬದಲು ಪ್ರೀಮಿಯಂ ಹಣವನ್ನೇ ತಮ್ಮಲ್ಲಿಗೆ ಇವು ಸಾಗಿಸಿಕೊಂಡ ಉದಾಹರಣೆಗಳಿವೆ. ಒಂದೊಂದು ಕಂಪೆನಿಯೂ ವಿಮೆ ಇಳಿಸಿದ ಯೋಜನೆಗಳನ್ನು ಅನ್ಯರಿಗೆ ವಹಿಸಿ, ಅಂದರೆ ಮರು ವಿಮೆ ಇಳಿಸಿ, ಕೈತೊಳೆದುಕೊಂಡ ಪ್ರಸಂಗಗಳಿವೆ. ಗುಜರಾತ್ ಭೂಕಂಪದ ವೇಳೆ ಅನುಭವಕ್ಕೆ ಬಂದ ಒಂದು ಅಂಶವೇ ಸಾಕು; ಭಾರತ ಎಷ್ಟು ಎಚ್ಚರಿಕೆ ವಹಿಸಬೇಕೆಂಬುದನ್ನು  ಸೂಸುತ್ತದೆ. ವಿಮೆ ಇಳಿಸಿದ್ದವರಿಗೆ ಭೂಕಂಪನ ನಂತರ ಒಟ್ಟು ೧೨೦೦೦ ಕೋಟಿ ರೂಪಾಯಿ ಪರಿಹಾರದ ಹಣ ವಿದೇಶಿ ಮೂಲದ ವಿಮಾ ಕಂಪೆನಿಗಳವರಿಂದ ಪಾವತಿ ಆಗಬೇಕಿದೆ. ಆದರೆ ಸಂದ ಹಣ ಕೇವಲ ೨೯೦೦ ಕೋಟಿ ರೂಪಾಯಿ ಮಾತ್ರ!

ಸದ್ಯದ ವಿಮಾ ಏಜೆಂಟರು ಇರುವ ಪದ್ಧತಿಯ ಜೊತೆಗೆ ಬ್ರೋಕರುಗಳು ಇರುವ ಪದ್ಧತಿ ಸಹಾ ಇರಬೇಕೆಂದು ವಿಮಾ ಕಂಪೆನಿಗಳು ಕೇಳುತ್ತಿವೆ. ನಿಯಂತ್ರಣ ಪ್ರಾಧಿಕಾರವಾದರೋ ಬಳಕೆದಾರ ಹಿತರಕ್ಷಣೆಯ ಅಂಶಗಳನ್ನು ಅಳವಡಿಸಲು ಹೆಚ್ಚು ಹೆಣಗುತ್ತಿರುವಂತೆ ಭಾಸವಾಗುತ್ತಿದೆ. ಚಿತ್ರಣ ಇನ್ನೂ ಸ್ಪಷ್ಟವಿಲ್ಲ. ತೇಜಿಯಾದ ವ್ಯಾಪಾರಕ್ಕೆ ವಿಫುಲ ಅವಕಾಶವೇನೋ ಇದೆ; ಆದರೆ ಅದು ಯಾರ ಲಾಭಕ್ಕಾಗಿ ಎಂಬುದಷ್ಟು ನಿರ್ಣಯವಾಗಬೇಕಿದೆ.

೨೯.೦೮.೨೦೦೧